Tuesday, 21 May 2019

ಚುನಾವಣೆಯಲ್ಲಿ ದುಡ್ಡು ಹಂಚುವ ವಾಡಿಕೆ: ನಿಜವಾಗಿಯೂ ತಪ್ಪು ಯಾರದ್ದು?


ಕಳೆದ ನಾಲ್ಕೈದು ತಿಂಗಳಿನಿಂದ ದೇಶಾದ್ಯಂತ ಆವರಿಸಿದ್ದ ಲೋಕಸಭಾ ಚುನಾವಣೆಯ ಮೋಡ ಮಳೆಯಾಗುವ ಹಂತಕ್ಕೆ ಬಂದು ನಿಂತಿದೆ. ಮತಪೆಟ್ಟಿಗೆಯ ಒಳಗಿನ ಗುಟ್ಟು ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ವಿವಿಧ ಕಾರಣಗಳಿಗಾಗಿ ಸದ್ದು - ಸುದ್ದಿ ಮಾಡಿದೆ. ರಾಜಕಾರಣಿಗಳು ಪ್ರಚಲಿತ ಸಮಸ್ಯೆ, ಪರಿಹಾರ, ಪರ್ಯಾಯ ವ್ಯವಸ್ಥೆ, ಅಭಿವೃದ್ಧಿ ಕ್ರಮ ಇತ್ಯಾದಿ ಚಿಂತನೆಗಳ ಕುರಿತು ಮಾತನಾಡುವ ಬದಲು ಪರಸ್ಪರ ಜಗಳ, ಟೀಕೆ, ಕೆಸರೆರಚಾಟ ಸೇರಿದಂತೆ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಅಲಿಖಿತ ಪರಂಪರೆಯನ್ನು ಕಾಪಾಡಿಕೊಳ್ಳುವಲ್ಲಿಯೇ ಹೆಚ್ಚು ಆಸಕ್ತಿ ತೋರಿಸಿದರು.
ಅಷ್ಟೇ ಮಹತ್ವವನ್ನು ತಮ್ಮ ತೋಳ್ಬಲ, ಧನಬಲ ಪ್ರದರ್ಶನದಲ್ಲೂ ತೋರಿಸಿ ಸುದ್ದಿಯಾದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ ಸೇರಿದಂತೆ ವಿವಿಧ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವುದು ಇದೇ ಮೊದಲಲ್ಲ. ಬಹುಶಃ ಕೊನೆಯೂ ಅಲ್ಲ. ಆದರೆ, ಇಪ್ಪತ್ತೊಂದನೆಯ ಶತಮಾನದ ಈ ಸಂದರ್ಭದಲ್ಲೂ ಈ ಪದ್ಧತಿ ಚಾಲ್ತಿಯಲ್ಲಿರುವುದು ಮಾತ್ರ ಶೋಚನೀಯ. ಗೆದ್ದು ಪಾರದರ್ಶಕ ಆಡಳಿತಕ್ಕೆ ಕಾರಣರಾಗಬೇಕಾದವರೇ ಅಕ್ರಮಗಳಲ್ಲಿ ಸಕ್ರಿಯರಾಗಿ ಪ್ರಜಾಪ್ರಭುತ್ವ ರಾಷ್ಟ್ರದ ವ್ಯವಸ್ಥೆ ತಳಮಟ್ಟದಲ್ಲೇ ಹದಗೆಡಲು ಕಾರಣರಾಗುವುದು ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಜನಸಾಮಾನ್ಯರು ಮತದಾನದ ಮೂಲಕ ಅಭ್ಯರ್ಥಿಗಳನ್ನು ಆರಿಸುವಾಗ ಗಮನ ಹರಿಸುವ ವಿಷಯಗಳು, ಮತದಾನದ ಕುರಿತು ಹೊಂದಿರುವ ಗಾಂಭೀರ್ಯತೆ, ಚಿಂತನಾತ್ಮಕ ವಿಚಾರಗಳಿಗಿಂತ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಮಾರುಹೋಗುವ ರೀತಿ ಇವೆಲ್ಲವೂ ಉತ್ತಮ ಆಡಳಿತ ವ್ಯವಸ್ಥೆಯ ರಚನೆಗೆ ಉರುಳಾಗುವ ಕೆಲ ಅಂಶಗಳು.
ಇದರೊಂದಿಗೆ ಕೀಳುಮಟ್ಟದ ರಾಜಕಾರಣ, ಮತದಾರರಿಗೆ ನೇರವಾಗಿ ಒಡ್ಡಲಾಗುವ ಆಮಿಷ ಇವೆಲ್ಲವೂ ಪ್ರಜಾತಂತ್ರ ಹಬ್ಬದಲ್ಲಿ ಆಚರಣೆಗಳಂತೆ ಬೆರೆತು, ಭಾರತದಲ್ಲಾಗುವ ಚುನಾವಣೆಗಳ ಸ್ವರೂಪವೇ ಹೀಗೆ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಕಲುಷಿತಗೊಂಡಿದೆ. ಮತದಾರ ಪ್ರಭುಗಳೆಂದು ಕರೆಸಿಕೊಳ್ಳುವ ಜನರೇ ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳೆಡೆಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ‘ಅಕ್ರಮ ಪರಂಪರೆ’ಯನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಇದನ್ನು ಸರಿಪಡಿಸುವುದು ಅತಿ ದೊಡ್ಡ ಸವಾಲಿನಂತೆ ಕಾಣುತ್ತದೆ.

ದಶಕಗಳ ಹಿಂದೆ ಚುನಾವಣೆ ನಡೆಯುತ್ತಿದ್ದ ರೀತಿಗೂ, ಇಂದಿಗೂ ತಾಂತ್ರಿಕವಾಗಿ ಕೆಲ ಬದಲಾವಣೆಗಳಾಗಿವೆ. ಆದರೆ, ಬದಲಾಗದೆ ಮೊದಲಿಗಿಂತಲೂ ಹೆಚ್ಚು ಗಾಢವಾಗಿ ಆವರಿಸಿಕೊಂಡ ಅಂಶಗಳು ಹಲವಾರು ಇವೆ. ಚುನಾವಣಾ ಸಂದರ್ಭದಲ್ಲಿ ಹಂಚಲಾಗುವ ಹಣವನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಜನ ವರ್ತಿಸಲು ಆರಂಭಿಸಿರುವುದು ಸಮಸ್ಯೆ ಹೆಚ್ಚಿದೆ ಎಂಬುದಕ್ಕೆ ಸಣ್ಣ ನಿದರ್ಶನ. 

ಪ್ರಸ್ತುತ ಜನರು ಆಲೋಚಿಸುವ ಕ್ರಮ ಹೇಗಿದೆ ಎಂಬುದಕ್ಕೆ ನನ್ನ ಹತ್ತಿರದವರಿಂದ ಕೇಳಲ್ಪಟ್ಟ ಈ ನೈಜ ಘಟನೆಗಳೇ ಸಾಕ್ಷಿ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರು ತಮ್ಮ ಬೂತಿನ ಮತದಾರರಿಗೆ ಹಣ ಹಂಚದಿರಲು ಯೋಚಿಸಿ, ಅಕ್ರಮವಾಗಿ ಹಂಚಲು ತಮ್ಮದೇ ಪಕ್ಷ ನೀಡಿರುವ ಹಣವನ್ನು ತಮ್ಮೂರಿನ ಸರ್ಕಾರಿ ಶಾಲೆಗೆ ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳಿಗೆ ವಿನಿಯೋಗಿಸಲು ನಿರ್ಧರಿಸಿದರು. ಈ ಅಭಿಪ್ರಾಯವನ್ನು ಬಹುತೇಕರು ಶ್ಲಾಘಿಸಿದರು ಕೂಡ. ಆದರೆ, ಚುನಾವಣೆಗೆ ಎರಡು ದಿನವಿರುವಾಗ ಮುಖಂಡರ ನಿರ್ಧಾರವನ್ನು ತಿಳಿದ ಒಂದಿಷ್ಟು ಮಂದಿ, “ಜನರಿಗೆ ಹಂಚಬೇಕಾದ ಹಣದಲ್ಲಿ ಅಭಿವೃದ್ಧಿ ಮಾಡುವ ಅವಶ್ಯಕತೆ ಇಲ್ಲ ಹಾಗೂ ಹಂಚದಿದ್ದರೆ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವುದಿಲ್ಲ,” ಎಂದು ಮುಲಾಜಿಲ್ಲದೆ ಹೇಳಿದರು. ಅಂತಿಮವಾಗಿ ಹಣ ಮತದಾರರ ಜೇಬು ಸೇರಿತು. ಇಲ್ಲಿ ರಾಜಕೀಯದವರಿಗಿಂತ ಜನಸಾಮಾನ್ಯರೇ ಹಣ ಹಂಚುವುದರ ಪರವಾಗಿರುವುದನ್ನು ಗಮನಿಸಬಹುದು.
ಅದೇ ರೀತಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಬೂತ್‍ನಲ್ಲಿ ಹಂಚಲೆಂದು ಎರಡು ಪ್ರಮುಖ ಪಕ್ಷಗಳಿಗೆ ಕೆಲ ಲಕ್ಷಗಳಷ್ಟು ಹಣ ಸಂದಾಯವಾಗಿತ್ತು. ಅದೇ ಸಂದರ್ಭದಲ್ಲಿ ಬೂತ್ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ ಊರ ದೇವಾಲಯವೊಂದರ ಅಭಿವೃದ್ಧಿ ಕುರಿತು ಗ್ರಾಮಸ್ಥರಲ್ಲಿ ಚರ್ಚೆಯಾಗುತ್ತಿತ್ತು. ಇದರ ಕುರಿತು ಚಿಂತಿಸಿದ ಉಭಯ ಪಕ್ಷಗಳ ಮುಖಂಡರು, ತಮ್ಮ-ತಮ್ಮ ಪಕ್ಷಗಳಿಗೆ ನೀಡಲಾದ ಅಷ್ಟೂ ಅಕ್ರಮ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸುರಿದು ಪಾಪ ತೊಳೆದುಕೊಳ್ಳಲು ನಿರ್ಧರಿಸಿದರು. ಆದರೆ, ಇದನ್ನು ತಿಳಿದ ಕೂಡಲೇ ಪಕ್ಷದ ಕಾರ್ಯಕರ್ತರೇ ಜಾತಿ, ಧರ್ಮಗಳ ಲೆಕ್ಕಾಚಾರವನ್ನು ಎಳೆದುತಂದು ಮುಖಂಡರ ನಿರ್ಧಾರಕ್ಕೆ ಕಲ್ಲು ಹಾಕಿ, ತಮ್ಮ ಪಾಲಿನ ಹಣವನ್ನು ಬಾಚಿಕೊಂಡರು. ಚುನಾವಣೆ ಮುಗಿಯುವ ತನಕವೂ ಕಾರ್ಯಕರ್ತರ ಕಾರು, ಬೈಕು ಊರೂರು ಅಲೆದು ಹೋಟೆಲಿನ ಮುಂದೆ ನಿಲ್ಲುತ್ತಿತ್ತು. ಇದೊಂಥರಾ ಕೋಳಿ ಮೊದಲಾ, ಮೊಟ್ಟೆ ಮೊದಲಾ? ಎಂಬಂತಹ ಪರಿಸ್ಥಿತಿ. ರಾಜಕಾರಣ ಹೇಗೆ ತಳಮಟ್ಟದಲ್ಲೇ ಹದಗೆಟ್ಟಿದೆ ಹಾಗೂ ಇದನ್ನು ಸರಿದಾರಿಗೆ ತರುವುದು ಏಕೆ ಕಷ್ಟಸಾಧ್ಯ ಎಂಬುದನ್ನು ಈ ಸಣ್ಣ ಉದಾಹರಣೆಗಳ ಮೂಲಕವೇ ಅರ್ಥೈಸಿಕೊಳ್ಳಬಹುದು.
ವಿಪರ್ಯಾಸವೆಂದರೆ, ಇಂದಿಗೂ ಎಷ್ಟೋ ಜನ ಮತದಾರರು ತಮಗೆ ರಾಜಕೀಯ ಪಕ್ಷಗಳಿಂದ ಹಣ ಬಂದಿಲ್ಲ ಹಾಗೂ ಹಂಚಬೇಕಾದ ಹಣವನ್ನು ಕಾರ್ಯಕರ್ತರೇ ನುಂಗಿ ಮೋಸ ಮಾಡಿದ್ದಾರೆ ಎಂದು ದನಿಯೆತ್ತರಿಸಿ ಹೇಳುತ್ತಾರೆ. ಹಲವರು ಬಹುತೇಕ ಎಲ್ಲ ಪಕ್ಷಗಳಿಂದಲೂ ಹಣ ಸಿಗಲೆಂದು ಆಶಿಸುತ್ತಾರೆ. ಆದರೆ, ಇದೇ ಜನರು ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಅಭಿವೃದ್ಧಿಯೆಡೆಗೆ ತೋರುವ ಅಸಡ್ಡೆ ಕುರಿತು ಪುಂಖಾನುಪುಂಖವಾಗಿ ಮಾತನಾಡಿ ತಮ್ಮನ್ನು ಸುಬಗರಂತೆ ಬಿಂಬಿಸಿಕೊಳ್ಳುತ್ತಾರೆ.

ಮೇಲ್ನೋಟಕ್ಕೆ ಇವೆಲ್ಲವೂ ಅತ್ಯಂತ ಸಾಧಾರಣ ವಿಚಾರಗಳಂತೆ ಕಂಡರೂ, ಇಡೀ ದೇಶದ ಮತದಾರರ ಮನಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅವಲೋಕಿಸಿದರೆ ಪರಿಸ್ಥಿತಿಯ ಗಂಭೀರತೆ ಎದ್ದು ಕಾಣುತ್ತದೆ. ಚುನಾವಣಾ ಸಂದರ್ಭಗಳಲ್ಲಿ ವಿವಿಧ ಆಮಿಷಗಳನ್ನೊಡ್ಡಿ ಜನರಿಗೆ ಹಣದ ರುಚಿ ಹತ್ತಿಸಿರುವ ರಾಜಕೀಯ ಪಕ್ಷಗಳು ಹಾಗೂ ಅದು ಅನೈತಿಕವೆಂಬ ಅರಿವಿದ್ದರೂ ತಮ್ಮ ಹಕ್ಕು ಎಂಬಂತೆ ವರ್ತಿಸುವ ಜನರು ವ್ಯವಸ್ಥೆಯ ಬಹುದೊಡ್ಡ ವ್ಯಂಗ್ಯವಾಗಿ ಕಾಣುತ್ತಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯೂ ತಾನು ಹಣ ಪಡೆದ ಪಕ್ಷಕ್ಕೇ ಮತ ಹಾಕಬೇಕೆಂಬ ನಿಷ್ಠೆ ತೋರುವುದು ಅನುಮಾನ. ರಾಜಕೀಯ ಪಕ್ಷಗಳಿಗೂ ಈ ವಿಚಾರ ತಿಳಿಯದಿರುವುದೇನಲ್ಲ. ಆದರೆ, ಚುನಾವಣೆ ಎಂದಾಕ್ಷಣ ಒಂದಷ್ಟು ಹಣ ಚೆಲ್ಲುವುದು ರಾಜಕೀಯ ಪಕ್ಷಗಳ ಪಾಲಿಗೆ ಸಂಪ್ರದಾಯವಾಗಿದೆ. ಹೀಗೆ ಹರಿದು ಸಾಗುವ ಹಣ ಕಾನೂನಿನ ಪ್ರಕಾರ ಅಕ್ರಮವೆಂದು ಗುರುತಿಸಿಕೊಂಡರೂ ಕಾನೂನಿನ ನೆರಳಿನಲ್ಲೇ ನಿರ್ಭಯವಾಗಿ ಸಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಚುನಾವಣಾ ಸಂದರ್ಭದಲ್ಲಿ ಅಲ್ಲಲ್ಲಿ ಅಕ್ರಮ ಹಣ ಜಪ್ತಿ ಎಂಬ ಸುದ್ದಿ ಕಿವಿಗೆ ಬಿದ್ದರೂ ಅವು ನ್ಯಾಯದೇವತೆಗೆ ತೆರುವ ಕನಿಷ್ಠ ಮೊತ್ತದ ತಪ್ಪುಕಾಣಿಕೆಯಂತೆ ಎಂಬುದು ಒಂದು ಅಪ್ರಿಯ ಸತ್ಯ. ದುರದೃಷ್ಟವಶಾತ್ ಯಾವ ರಾಜಕೀಯ ಪಕ್ಷವೂ ಈ ಪರಂಪರೆಗೆ ಅಂತ್ಯ ಹಾಡುವ ಧೈರ್ಯ ಮಾತ್ರ ತೋರುತ್ತಿಲ್ಲ ಮತ್ತು ಇದಕ್ಕೆ ಕಾರಣ ಜನಸಾಮಾನ್ಯರು ಎಂಬುದು ಮಾತ್ರ ಕಟುವಾಸ್ತವ.

ಪ್ರತಿಯೊಂದು ಚುನಾವಣೆಗಾಗಿ ರಾಜಕೀಯ ಪಕ್ಷಗಳು ನಡೆಸುವ ದುಂದುವೆಚ್ಚ ಸಾವಿರ ಕೋಟಿಗಳನ್ನು ಮೀರಿಹೋಗುತ್ತದೆ ಹಾಗೂ ಇಷ್ಟು ದೊಡ್ಡ ಮಟ್ಟದ ಹಣ ಅಷ್ಟೇ ದೊಡ್ಡ ಮಟ್ಟದ ಜನಸಾಗರದಲ್ಲಿ ಹರಿದುಹೋಗುವುದರಿಂದ ಅತಿದೊಡ್ಡ ಅನುಕೂಲ ಯಾವೊಬ್ಬ ಜನಸಾಮಾನ್ಯನಿಗೂ ಆಗಲಾರದು. ಒಂದು ವೇಳೆ, ರಾಜಕೀಯ ಪಕ್ಷಗಳು ಹೀಗೆ ಪೋಲಾಗುವ ಹಣವನ್ನು ಕಟ್ಟುನಿಟ್ಟಾಗಿ ನಿಲ್ಲಿಸಿದರೆ ಪಕ್ಷಗಳ ವತಿಯಿಂದಲೇ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಆ ಮೂಲಕ ಜನರನ್ನು ತಲುಪಬಹುದು. ಆದರೆ, ಈ ಯಾವುದೇ ವಿಚಾರಗಳು ಸಾಧ್ಯವಾಗಬೇಕೆಂದರೆ ಜನರ ಮನಸ್ಥಿತಿ ಬದಲಾಗಬೇಕು, ಮತ ಚಲಾಯಿಸುವುದು ಮಾತ್ರವೇ ಹಕ್ಕು ಹೊರತು ಮತ ಚಲಾಯಿಸಲು ಹಣ ಪಡೆಯುವುದು ಹಕ್ಕಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕು. ಈ ಕೆಲಸಗಳು ಈಗಾಗಲೇ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಹಾಗೂ ಜನರ ಮನಸ್ಥಿತಿಯ ಪರಸ್ಪರ ಸಹಯೋಗದಲ್ಲಿ ನಡೆಯಬೇಕು.


(ಪ್ರಸ್ತುತ ಲೇಖನ "ಪ್ರತಿಧ್ವನಿ" ಜಾಲತಾಣದಲ್ಲಿ ಪ್ರಕಟವಾಗಿದೆ)

- ಸ್ಕಂದ ಆಗುಂಬೆ

Sunday, 5 May 2019

ನೈತಿಕತೆಯಿಂದ ದೂರ ಸಾಗುತ್ತಿರುವ ಮಾಧ್ಯಮಗಳನ್ನು ಸರಿದಾರಿಗೆ ತರುವುದು ಹೇಗೆ?



ಕಾಲ ನಿಂತ ನೀರಲ್ಲ. ಪ್ರತಿಯೊಂದು ಕ್ಷೇತ್ರವೂ ಸದಾ ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಮುಂದೆ ಸಾಗುತ್ತದೆ. ಇದು ಸಹಜ ಮತ್ತು ಅನಿವಾರ್ಯ. ಪತ್ರಿಕೋದ್ಯಮ / ಪತ್ರಿಕಾ ರಂಗ ಕೂಡ ಇದಕ್ಕೆ ಹೊರತಲ್ಲ. ದಶಕಗಳ ಹಿಂದಿನ ಪತ್ರಿಕೋದ್ಯಮಕ್ಕೂ ಈಗಿನದ್ದಕ್ಕೂ ತುಲನೆ ಮಾಡಿದರೆ ಅಗಾಧ ವ್ಯತ್ಯಾಸವನ್ನು ನಿರಾಯಾಸವಾಗಿ ಗುರುತಿಸಬಹುದು.
ಹಿಂದೆ ಪತ್ರಕರ್ತರನ್ನ ಸಮಾಜ ಕಾಣುವ ಬಗೆ ವಿಭಿನ್ನವಾಗಿತ್ತು. ಪತ್ರಕರ್ತರೆಂದರೆ ಕಡಿಮೆ ಹಣ ಸಂಪಾದಿಸುವವರು / ಕಡಿಮೆ ಆದಾಯ ಗಳಿಸುವವರು ಎಂಬ ಕಾರಣಕ್ಕೆ ಅವರಿಗೆ ಹೆಣ್ಣು ಕೊಡಲೂ ಹಿಂದೆ ಮುಂದೆ ನೋಡುತ್ತಿದ್ದರಂತೆ ಮತ್ತು ಹಲವು ಪತ್ರಕರ್ತರು ಇವನ್ನೆಲ್ಲಾ ಅನುಭವಿಸಿದ್ದೂ ಸತ್ಯ. ಆದರೆ, ಅದೆಲ್ಲವನ್ನೂ ಹೊರತುಪಡಿಸಿ ಅಂದಿನ ಪತ್ರಕರ್ತರನ್ನು ಸಮಾಜ ಗೌರವ ಪೂರ್ವಕವಾಗಿ, ನಂಬಿಕಸ್ಥರನ್ನಾಗಿ ಕಾಣುತ್ತಿದ್ದ ಬಗೆ ಗಮನಿಸಿದರೆ ಬಹುತೇಕ ಪತ್ರಕರ್ತರು ಹಣದ ವಿಚಾರದಲ್ಲಿ ಬಡವರಾಗಿದ್ದರೂ, ನೈತಿಕತೆ ಅಥವಾ ವ್ಯಕ್ತಿತ್ವದ ವಿಚಾರದಲ್ಲಿ ಶ್ರೀಮಂತರಾಗಿದ್ದರು ಮತ್ತು ಪತ್ರಿಕೋದ್ಯಮ ಕ್ಷೇತ್ರದ ಘನತೆ, ಗಾಂಭೀರ್ಯವನ್ನು ಪ್ರಜ್ಞಾವಂತಿಕೆಯಿಂದ ಉಳಿಸಿಕೊಂಡು ಬಂದಿದ್ದರು ಎನ್ನಬಹುದು. ಆದರೆ, ಕಾಲಚಕ್ರ ಪತ್ರಕರ್ತರಿಗೆ ವಿನಾಯಿತಿ ನೀಡಬೇಕಲ್ಲಾ? ಬದಲಾವಣೆಯ ಸುಳಿಗೆ ಸಿಕ್ಕ ಪತ್ರಿಕೋದ್ಯಮ ಬೇರೆ ಯಾವ ಕ್ಷೇತ್ರಗಳಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದಿದೆ. ನೋಡನೋಡುತ್ತಲೇ ಉದ್ಯಮವಾಗಿ ಬೆಳೆದು ನಿಂತು, ಪತ್ರಕರ್ತರೂ ಇತರೆ ಕ್ಷೇತ್ರದ ಉದ್ಯೋಗಿಗಳಂತೆ ಹೆಚ್ಚೆಚ್ಚು ಸಂಬಳ ಪಡೆಯುವ ಕಾಲ ಬಂದಿದೆ. ಆದರೆ, ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬಂತೆ ನೈತಿಕತೆಯ ವಿಚಾರದಲ್ಲಿ ಪತ್ರಿಕೋದ್ಯಮ, ಪತ್ರಕರ್ತ ಬಡವರಾಗುವಂತಹ ಸ್ಥಿತಿ ಕೂಡ ನಿರ್ಮಾಣವಾಗಿರುವುದು ಕಟು ಸತ್ಯ. ಇಂದಿನ ಬಹುತೇಕ ಮಾಧ್ಯಮಗಳಿಗೆ ಉದ್ಯಮಿಗಳು ಹಾಗೂ ರಾಜಕಾರಣಿಗಳೇ ಹೂಡಿಕೆದಾರರಾಗಿರುವುದರಿಂದ ಹೆಚ್ಚಿನ ಪತ್ರಕರ್ತರು ಅವರ ಕೈಗೊಂಬೆಯಾಗಿ ವರ್ತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೊತೆಗೆ ಪತ್ರಿಕೋದ್ಯಮ ಲಾಭದಾಯಕ ಉದ್ಯಮವಾಗಿ ಪರಿವರ್ತನೆ ಹೊಂದಿರುವುದರಿಂದ ಪತ್ರಕರ್ತರು ಅನೇಕ ಸಂದರ್ಭಗಳಲ್ಲಿ ಜಾಣ ಕುರುಡರಾಗಬೇಕಾದ ಸಂದಿಗ್ಧತೆ ಎದುರಾಗಿದೆ.

ಇವತ್ತಿನ ಕಾಲಘಟ್ಟದಲ್ಲಿ, ಕನ್ನಡ ಪತ್ರಿಕೋದ್ಯಮ ಕ್ಷೇತ್ರದತ್ತಲೇ ಕಣ್ಣು ಹಾಯಿಸುವುದಾದರೆ ಖುಷಿ ಹಾಗೂ ಸಿಕ್ಕ ಖುಷಿಯಷ್ಟನ್ನೂ ನುಂಗಬಲ್ಲ ಬೇಸರದ ವಿಚಾರ ಎರಡೂ ಒಂದರ ಹಿಂದೊಂದು ನಿಂತಿರುವುದು ಗೋಚರಿಸುತ್ತದೆ. ಕನ್ನಡ ಮಾಧ್ಯಮ ಕ್ಷೇತ್ರ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ಮನೋರಂಜನಾ ಕ್ಷೇತ್ರವನ್ನು ಪಕ್ಕಕ್ಕಿಟ್ಟು ಬರೀ ಸುದ್ದಿ ಮಾಧ್ಯಮಗಳನ್ನೇ ಕೇಂದ್ರೀಕರಿಸಿಕೊಂಡು ಲೆಕ್ಕ ಹಾಕಿದರೂ ಕನ್ನಡದಲ್ಲಿ ಸರಿಸುಮಾರು ಹದಿನೈದು ಸುದ್ದಿ ವಾಹಿನಿಗಳು ಮತ್ತು ಹತ್ತು ದಿನಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತೆಯೇ ಕೆಲವು ಮಾಧ್ಯಮಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜೀವ ತಳೆದು, ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಸ್ಥಗಿತಗೊಂಡ ಉದಾಹರಣೆಗಳೂ ಇವೆ.
ದಶಕಗಳ ಹಿಂದೆ ಬೆರಳೆಣಿಕೆಯಷ್ಟು ಮಾಧ್ಯಮಗಳಿದ್ದ ಕಾಲದಲ್ಲಿ ಜನರು ಪತ್ರಕರ್ತರನ್ನು ಕಾಣುತ್ತಿದ್ದ ರೀತಿಗೂ‌ ಮತ್ತು ಅಣಬೆಗಳಂತೆ ಮಾಧ್ಯಮಗಳ ಸಂಖ್ಯೆ ಏರಿದಂತೆ ಪತ್ರಕರ್ತರೆಡೆಗಿನ ದೃಷ್ಟಿಕೋನ ಬದಲಾದ ಬಗೆಗೂ ಅವಿನಾಭಾವ ಸಂಬಂಧವಿದೆ. ಹಾಗೆ ನೋಡಿದರೆ ಹಿಂದೆ ಕೆಲವೇ ಕೆಲವು ಮಾಧ್ಯಮಗಳಿದ್ದ ಕಾಲದಲ್ಲಿ ಸಮಾಜದ ಅಕ್ರಮಗಳನ್ನು ಅವುಗಳು ಹೊರಗೆಳೆಯುತ್ತಿದ್ದ ಪರಿ ಹಾಗೂ ಜನರ ಮನಸ್ಸಿನಲ್ಲಿ ಪತ್ರಕರ್ತರು ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂದು ಹುಟ್ಟಿದ ನಂಬಿಕೆ ಇಂದು ದುಪ್ಪಟ್ಟಾಗಬೇಕಿತ್ತು. ಮಾರುಕಟ್ಟೆಯ ಎಲ್ಲಾ ಪೈಪೋಟಿಗಳಾಚೆಗೂ ಮಾಧ್ಯಮಗಳು ಹೊಸ ಕ್ರಾಂತಿಯೊಂದನ್ನು ಮೂಡಿಸಬೇಕಿತ್ತು. ಆದರೆ, ಸಿದ್ಧ ಮಾದರಿಯ ಹಿಂದೆ ಬಿದ್ದ ಸುದ್ದಿ ವಾಹಿನಿಗಳು ಪತ್ರಕರ್ತರು ಹಾಗೂ ಜನರ ನಡುವೆ ಇದ್ದ ನಂಬಿಕೆಯ ಕೊಂಡಿಯನ್ನು ಕಿತ್ತು ಹಾಕಿದವೇ ವಿನಃ ಯಾವ ಹೊಸತನಕ್ಕೂ, ಯಾವ ಕ್ರಾಂತಿಗೂ ಸಾಕ್ಷಿಯಾಗಲಿಲ್ಲ ಎಂಬುದು ಬೇಸರದ ಸಂಗತಿ.

ಮಾಧ್ಯಮಗಳ ಅದರಲ್ಲೂ ಸುದ್ದಿ ವಾಹಿನಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದಂತೆ ಚಿತ್ರ ವಿಚಿತ್ರ ಪರಿಕಲ್ಪನೆಗಳು ಹುಟ್ಟಿಕೊಂಡು, ಸುದ್ದಿ ಸಂಸ್ಕೃತಿ ಸಂಪೂರ್ಣ ಬದಲಾಗಿದ್ದು ನಿಸ್ಸಂದೇಹ ಸಂಗತಿ. ಟಿಆರ್‌ಪಿ ಎಂಬ ಅಂಕಗಳಿಕೆ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ವಾಹಿನಿಗಳು ಪೈಪೋಟಿಗೆ ಬಿದ್ದ ಮೇಲೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳೆಲ್ಲವೂ ಜನರಿಗೆ ರೇಜಿಗೆ ಹುಟ್ಟಿಸುವಂತವೇ. ಸುದ್ದಿ ವಾಹಿನಿಗಳ ಕರಿನೆರಳು ಯಾವಮಟ್ಟಿಗೆ ಕನ್ನಡ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರಿತೆಂದರೆ ಜನರ ಅಭಿರುಚಿ ಬದಲಾಗುವುದರೊಂದಿಗೆ, ಮುದ್ರಣ ಮಾಧ್ಯಮಗಳ ಭಾಷಾ ಸಂಸ್ಕೃತಿಯೂ ಬದಲಾಗಿ ಗಂಭೀರ ಪದಬಳಕೆಯೊಂದಿಗೆ ಗುರುತಿಸಿಕೊಂಡಿದ್ದ ಪತ್ರಿಕಾ ಭಾಷೆ, ಕ್ರಿಯಾತ್ಮಕತೆ ಅಥವಾ ಜನರನ್ನು ಆಕರ್ಷಿಸುವ ನೆಪದಲ್ಲಿ ಪೀತ ಪತ್ರಿಕೋದ್ಯಮ ಭಾಷೆಯ ಆಸುಪಾಸಿಗೆ ಬಂದು ನಿಲ್ಲುವಂತಾಯಿತು. ಸುದ್ದಿ ವಾಹಿನಿಗಳ ಆಗಮನ ಪತ್ರಕರ್ತರ ಸಂಖ್ಯೆಯನ್ನು ವೃದ್ಧಿಸಿತೇ ವಿನಃ ಗುಣಮಟ್ಟದ ಅಭಿವೃದ್ಧಿಯಲ್ಲಿ ಅದರದ್ದು ಶೂನ್ಯ ಕೊಡುಗೆ ಎಂದು ಹೇಳಲು ಯಾವ ಅನುಮಾನವೂ ಇಲ್ಲ.

ಯಾವಾಗ ಮಾಧ್ಯಮಗಳು ಜನರ ಬಾಯಿಗೆ, ಬೈಗುಳಕ್ಕೆ ತುತ್ತಾಗಲು ಆರಂಭವಾದವೋ ಅಂದು ಪತ್ರಿಕೋದ್ಯಮದ ಘನತೆ ಹಾಗೂ ಗಾಂಭೀರ್ಯತೆಗೆ ಮೊದಲ ಕೊಡಲಿ ಏಟು ಬಿದ್ದಿತು. ಮಾಧ್ಯಮಗಳು, ಪತ್ರಕರ್ತರು ಪ್ರಶ್ನಾತೀತರಲ್ಲ ಎಂಬ ಮಾತು ಹುಟ್ಟಲು ಕಾರಣವೇ ಕ್ಷೇತ್ರದಲ್ಲಾದ ಕಲ್ಮಶ. ಪತ್ರಕರ್ತರು ತಮ್ಮ ವೈಯಕ್ತಿಕ, ರಾಜಕೀಯ ಹಾಗೂ ಸೈದ್ಧಾಂತಿಕ ಚಿಂತನೆಗಳನ್ನು ತಮ್ಮ ವೃತ್ತಿಯಲ್ಲಿ ಬೆರೆಸಲು ಆರಂಭಿಸಿದಾಗಿನಿಂದ ಮಾಧ್ಯಮಗಳಿಗೆ ಹಣೆಪಟ್ಟಿ ಕಟ್ಟುವ ಸಂಪ್ರದಾಯವೂ ಆರಂಭವಾಯಿತು. ಇವೆಲ್ಲವೂ ಪತ್ರಿಕಾ ರಂಗದ ವಿಶ್ವಾಸಾರ್ಹತೆಗೆ ಮಾರಕವಾಗಲು ಕಾರಣವಾದ ಆರಂಭಿಕ ಹೆಜ್ಜೆಗಳು.

ಇತ್ತೀಚಿನ ಕೆಲ ತಾಜಾ ಉದಾಹರಣೆಗಳನ್ನೇ ಗಮನಿಸುವುದಾದರೆ ಕನ್ನಡ ಪತ್ರಿಕೋದ್ಯಮ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಬಹುದು. ಈಗ ಕೆಲವು ದಿನಗಳ ಹಿಂದೆ ಕನ್ನಡದ ಹೆಸರಾಂತ ಮಾಧ್ಯಮಗಳ ಕೆಲ ಪತ್ರಕರ್ತರು ಹಣದ ಹಿಂದೆ ಬಿದ್ದು ಸಮಾಜದ ಮುಂದೆ ನೈತಿಕವಾಗಿ ಬೆತ್ತಲಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕನ್ನಡದ ಮತ್ತೊಂದು ಸುದ್ದಿ ವಾಹಿನಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವೃತ್ತಿಪರ ಪತ್ರಕರ್ತರೇ ಕಟ್ಟಿದ ವಾಹಿನಿ, ಭರವಸೆಯ ಬೆಳಕು ಎಂಬ ಅಡಿಬರಹದೊಂದಿಗೆ ಆರಂಭವಾದ ವಾಹಿನಿ ತನ್ನ ವೈಯಕ್ತಿಕ ದ್ವೇಷ ಸಾಧನೆಗಾಗಿ ವ್ಯಕ್ತಿಯೊಬ್ಬರ ವಿರುದ್ಧ ತಿರುಗಿ ಬಿದ್ದಿದೆ. ಪ್ರತಿ ಘಟನೆಗೂ ಬೇರೆ ಬೇರೆ ಆಯಾಮಗಳಿರುತ್ತವೆ ಎಂಬುದು ಸತ್ಯವಾದರೂ ಕಳೆದ ಮೂರ್ನಾಲ್ಕು ದಿನಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಧ್ಯಮವೊಂದು ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದವರ ಧ್ವನಿಯನ್ನು ತಗ್ಗಿಸಲು ಸತತ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ದುರಾದೃಷ್ಟವಶಾತ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದನ್ನು ಸಹಿಸಿಕೊಳ್ಳದ ವಾಹಿನಿ ಕಳೆದ ಕೆಲವು ತಿಂಗಳಿಂದಲೂ ಒಂದು ಪಕ್ಷದ ಪರ ಒಲವು ತೋರಿಸಿಕೊಂಡು, ಅನೇಕ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡಿದೆ ಎಂಬುದೂ ಗಮನಾರ್ಹ ಸಂಗತಿ. ವಾಸ್ತವ ಹೀಗಿರುವಾಗ ತನ್ನನ್ನು ಪ್ರಶ್ನಿಸಿದವರು ಸರಿಯಿಲ್ಲ ಎಂದು ದನಿಯೆತ್ತುವ ನೈತಿಕತೆ ಇರಲು ಹೇಗೆ ಸಾಧ್ಯ? ನಿಷ್ಠುರತೆಯೊಂದಿಗೆ ಗುರುತಿಸಿಕೊಳ್ಳಬೇಕಾದ ಮಾಧ್ಯಮ ವ್ಯಕ್ತಿ ಅಥವಾ ಪಕ್ಷ ನಿಷ್ಠೆಯೊಂದಿಗೆ ಗುರುತಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಹೂಡಿಕೆದಾರರ ಕೈಗೊಂಬೆಯಾಗಿ ಪತ್ರಕರ್ತ ಕುಣಿಯಲು ಆರಂಭಿಸಿದರೆ ಅದು ಕೇವಲ ಆ ಸಂಸ್ಥೆಯ ಸೋಲಲ್ಲ ಬದಲಾಗಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಸೋಲು. ಇಂತಹ ಸಂಸ್ಕೃತಿಗಳಿಗೆ ಪೂರ್ಣ ವಿರಾಮ ಬೀಳದ ಹೊರತು ಪತ್ರಿಕೋದ್ಯಮ ಮತ್ತು ಪತ್ರಕರ್ತರೆಡೆಗಿನ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವುದೂ ಕಷ್ಟ ಸಾಧ್ಯ. ಅಂತೆಯೇ, ಜನಸಾಮಾನ್ಯರೂ ಕೂಡ ಯಾವುದೇ ಒಂದು ವಿಚಾರವನ್ನು ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೇ ವೇದಿಕೆಯಲ್ಲಾಗಲಿ ಹಂಚಿಕೊಳ್ಳುವ ಮುನ್ನ ಅದತ ಸತ್ಯಾಸತ್ಯತೆಯನ್ನು ವಿಮರ್ಶಿಸುವಷ್ಟು ವ್ಯವಧಾನ ತೋರಿಸುವುದೂ ಅತ್ಯಗತ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಒಟ್ಟಿನಲ್ಲಿ ಮಾಧ್ಯಮಗಳು ಹಂತ ಹಂತವಾಗಿ ಸುದ್ದಿ ಸಂಸ್ಕೃತಿಯನ್ನು ಕಲುಷಿತಗೊಳಿಸಿದ ಫಲವಾಗಿ ಪ್ರಬುದ್ಧ ಮಾಧ್ಯಮ ಹಾಗೂ ಪ್ರಬುದ್ಧ ಓದುಗ ಇಬ್ಬರನ್ನೂ ಕಳೆದುಕೊಂಡಂತಾಗಿದೆ ಎಂಬುದು ವಿಷಾದನೀಯ. ಇದನ್ನು ಬದಲಾಯಿಸಬೇಕೆಂದರೆ ಪತ್ರಕರ್ತ ಅಥವಾ ಓದುಗ ಅಥವಾ ಇಬ್ಬರೂ ಒಂದಾಗಿ ಹೆಜ್ಜೆ ಇಡಲೇಬೇಕಿದೆ. ನಿರಂತರ ಬದಲಾವಣೆಯ ಹಾದಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಮುಂದಿನ ಬದಲಾವಣೆಗಳು ಸಕಾರಾತ್ಮಕ ಹಾದಿಯತ್ತಲೇ ಹೊರಳುವಂತೆ ನಿಗಾ ವಹಿಸಬೇಕಿದೆ.


ಕೇವಲ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಕೇಳಿದ ಅಥವಾ ನೋಡಿದ ಅಲ್ಪಸ್ವಲ್ಪ ಅನುಭವಗಳೊಂದಿಗೆ ಹೀಗೆಲ್ಲಾ ಬರೆಯುವಾಗ ನನ್ನಲ್ಲಿ ಮೂಡುತ್ತಿದ್ದ ಅನುಮಾನವೆಂದರೆ ಇದನ್ನು ಓದಿದ ಅನುಭವೀ ಪತ್ರಕರ್ತರ ಪ್ರತಿಕ್ರಿಯೆ ಹೇಗಿರಬಹುದೆಂದು.
ನನಗನ್ನಿಸುವ ಹಾಗೆ ಮುಖ್ಯ ಹಾಗೂ ಸಹಜ ಪ್ರತಿಕ್ರಿಯೆ ಎಂದರೆ ವಾಸ್ತವವೇ ಬೇರೆ ಕಲ್ಪನೆಯೇ ಬೇರೆ ಎಂಬುದು. ದುರಂತವೆಂದರೆ ಇಂದು ಯಾರೇ ನಿಷ್ಠುರವಾಗಿ ಯೋಚಿಸಲು ಪ್ರಯತ್ನಿಸಿದರೂ ಅದನ್ನು ಅಲ್ಲಗಳೆಯುವ ಹಾಗೂ ಅದು ಏಕೆ ಅಸಾಧ್ಯವೆಂಬ ಸಂಗತಿಗಳನ್ನು ವಿವರಿಸುವವರು ಸಿಗುತ್ತಾರೆಯೇ ವಿನಃ ಈಗಿರುವ ಅಡೆತಡೆಗಳನ್ನೆಲ್ಲಾ ದಾಟಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕುವ ಮಾತುಗಳನ್ನಾಡುವವರು ಸಿಗುವುದು ವಿರಳ. ಇವೆಲ್ಲದರ ಅರಿವಿದ್ದೂ ಕಲ್ಪನೆಗಳಿಲ್ಲದೇ ಹೊಸತನ್ನು ಸಾಧಿಸುವುದು ಅಸಾಧ್ಯ ಎಂಬ ಸಮಾಧಾನದೊಂದಿಗೆ ನನ್ನ ಯೋಚನೆಗಳನ್ನು ಇಲ್ಲಿ ಹರವಿಟ್ಟಿದ್ದೇನೆ.

(ಪ್ರಸ್ತುತ ಲೇಖನ 'ಪ್ರತಿಧ್ವನಿ' ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ)

- ಸ್ಕಂದ ಆಗುಂಬೆ.

Thursday, 14 February 2019

ಪುಡಿಯಾದ ಕನ್ನಡಿಯಲ್ಲಿ ಪ್ರತಿಬಿಂಬ ಹುಡುಕುವುದು ಕಷ್ಟ ಕಣೇ ಹುಡುಗಿ!



ಪಾರಿಜಾತ,
ಅರಳುವ ಮೊದಲೇ ಬಾಡಿದ ಹೂವಂತೆ, ಮಳೆಗಾಲ ಮುಗಿಯುವ ಮೊದಲೇ ಬತ್ತಿದ ನದಿಯಂತೆ, ಊರು ತಲುಪುವ ಮೊದಲೇ ಕೊನೆಯಾದ ರಸ್ತೆಯಂತೆ. ಅಗಾಧವಾಗಿ ಅನುಭವಿಸಿಕೊಳ್ಳಬೇಕಿದ್ದ ಭಾವವೊಂದು ಅಕಾಲಿಕವಾಗಿ ಸ್ತಬ್ಧಗೊಂಡು ಜೀವ ಹಿಂಡುತ್ತಿದೆ. ವಿನಾಕಾರಣ ನಿಂತು ಹೋದ ಪ್ರೇಮ ಶಕೆಯೊಂದಕ್ಕೆ ಮರುಚಾಲನೆ ನೀಡುವ ಮನಸ್ಸಾಗಿದೆ, ಹಳೇ ಹುರುಪಿನೊಂದಿಗೆ ಮತ್ತೆ ನಿನ್ನೆದುರು ಹಾಜರಾಗುತ್ತಿದ್ದೇನೆ, ಶರಣಾಗತ ವತ್ಸಲೆ..!
ಒಲವ ರಥಬೀದಿಯಲಿ ನಿನ್ನ ಗೆಜ್ಜೆ ಸದ್ದು ಕೇಳದೆ ಯುಗಗಳಾದಂತೆ ಭಾಸವಾಗುತ್ತಿದೆ. ಊರೂರು ಅಲೆವ ಅಲೆಮಾರಿಯೊಬ್ಬ ತನ್ನ ವಿಳಾಸವ ತಾನೇ ಮರೆತಂತೆ, ದಡವ ಮುಟ್ಟಿ ಹಿಂತಿರುಗುವಾಗ ಕಡಲ ಅಲೆಯೊಂದು ನಿಟ್ಟುಸಿರ ಬಿಗಿಹಿಡಿದು ಬಿಕ್ಕಿದಂತೆ, ನಿನ್ನಿಂದ ನೂರು ಮೈಲುಗಳಾಚೆ ದೂರದ ಊರಿನಲ್ಲಿ ಏಕಾಂಗಿಯಾಗಿ ನಿಂತು ಪರಿತಪಿಸುತ್ತಿರುವೆ. ನಿನ್ನ ಅನುಪಸ್ಥಿತಿ ಈ ಪರಿ ಕಾಡಬಹುದೆಂದು ನಾನೆಣಿಸಿರಲಿಲ್ಲ. ಪ್ರೀತಿಯ ಅಗಣಿತ ಹಂತಗಳಲ್ಲಿ ಒಂದಾದ ವಿರಹಕ್ಕೆ ಬೇಕು ಬೇಕಂತಲೇ ಬಿದ್ದ ನನ್ನಿಂದ ಇಂತಹದ್ದೊಂದು ಪತ್ರವನ್ನು ಈ ಹೊತ್ತಿನಲ್ಲಿ ನೀನೂ ನಿರೀಕ್ಷಿಸಿರಲಿಕ್ಕಿಲ್ಲ.
ಮಿತಿಯಿಲ್ಲದೇ ಸುಡುತ್ತಿರುವ ವಿರಹವನ್ನು ಮರೆಮಾಚಿ ನಾಟಕದ ನಗು ಬೀರುವುದು ನನಗಿನ್ನು ಅಸಾಧ್ಯ. ಮುಚ್ಚು ಮರೆಯಿಲ್ಲದೆಯೇ ಒಪ್ಪಿಕೊಳ್ಳುವೆ, ವಿರಹ ವೇದನೆಯನ್ನು ಎದುರಿಸುವಲ್ಲಿ ಸಂಪೂರ್ಣ ಸೋತಿದ್ದೇನೆ. ತಡರಾತ್ರಿಯ ಕನಸುಗಳೆಲ್ಲಾ ನಿನಗೆ ಕಂದಾಯ ಕಟ್ಟುವುದರಲ್ಲೇ ತಲ್ಲೀನವಾಗಿರುವಾಗ ಸುಳ್ಳು ಸಾಕ್ಷಿ ನುಡಿದು ಆತ್ಮದ ನಂಬಿಕೆ ಕಳೆದುಕೊಳ್ಳಲಾರೆ. ದೇಶದ ಪ್ರಚಲಿತ ವಿದ್ಯಮಾನಗಳೆಲ್ಲಾ ವಿರಹ ವೇದನೆಯ ಮುಂದೆ ಕ್ಷುಲ್ಲಕವಾಗಿ ಕಾಣುತ್ತಿರುವಾಗ `ಇಲ್ಲಿ ಎಲ್ಲವೂ ಸೌಖ್ಯ’ ಎಂದು ನಗೆಯಾಡಿ ನನಗೆ ನಾನೇ ಮೋಸ ಮಾಡಿಕೊಳ್ಳುವುದು ಅಹಿತವೆನಿಸುತ್ತಿದೆ. ನೆಲಕ್ಕೆ ಬಿದ್ದು ಪುಡಿಯಾದ ಕನ್ನಡಿಯ ಚೂರುಗಳಲ್ಲಿ ಪ್ರತಿಬಿಂಬ ಕಾಣುವುದು ಕಷ್ಟವೆಂಬ ಸತ್ಯ ಅರಿವಿಗೆ ಬಂದ ನಂತರವೂ ಅಲ್ಲೇ ನಿಂತು ಹಠ ಸಾಧಿಸಲಿಕ್ಕೆ ಏನೇನೂ ಉಳಿದಿಲ್ಲ.
ತಪ್ಪಿನ ಪ್ರಾಯಶ್ಚಿತ್ತವಾಗಿದೆ, ನಿನ್ನೆದೆಯ ಸಂತೆಗೆ ಸದ್ದಿಲ್ಲದೇ ಹಿಂತಿರುಗುತ್ತಿದ್ದೇನೆ, ಪರಕೀಯನಂತೆ ಪರಿಗಣಿಸದೆ ಮೊದಲಿನಷ್ಟೇ ಪ್ರಾಶಸ್ತ್ಯ ನೀಡು. ತೋಳ ಸೆಲೆಯಿಂದ ಬಿಡಿಸಿಕೊಂಡು ಹೊರಡಲು ಹಾತೊರೆದ ಈ ಹುಡುಗನ ಹುಡುಗಾಟವನ್ನು ಇದೊಮ್ಮೆ ಮನ್ನಿಸು. ಒಳಗಿರುವ ಅಹಂಕಾರವನ್ನೆಲ್ಲಾ ಕರಗಿಸಿಕೊಂಡು ಕೈ ಒಡ್ಡುತ್ತಿರುವೆ ಬೊಗಸೆ ತುಂಬ ಪ್ರೀತಿ ನೀಡು, ಭವತಿ ಭಿಕ್ಷಾಂದೇಹಿ.

ಸ್ಕಂದ ಆಗುಂಬೆ.

ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.

(ಮೂಲಪ್ರತಿ)

Wednesday, 30 May 2018

ಮಲೆನಾಡಿನ ಬಗೆಬಗೆಯ ಉಪ್ಪಿನಕಾಯಿ






ಬಾಳೆಲೆಯ ತುದಿಗೂ, ಬಾಟಲಿಯ ಪಕ್ಕಕ್ಕೂ, ಕಾಲಕಾಲಕ್ಕೂ ಸಲ್ಲುವ ಸರ್ವಶ್ರೇಷ್ಠ ಪದಾರ್ಥ ಉಪ್ಪಿನಕಾಯಿ. ಉಪ್ಪಿನಕಾಯಿ, ಬೆರಳು ಮತ್ತು ನಾಲಗೆಯ ನಡುವಿನ ತ್ರಿಕೋನ ಪ್ರೇಮಕಥೆ ಇಂದು ನಿನ್ನೆಯದಲ್ಲ. ದಿನನಿತ್ಯದ ಸಾಮಾನ್ಯ ಊಟದಿಂದ ಹಿಡಿದು ಭೂರಿ ಭೋಜನದ ನಡುವಲ್ಲೂ ಜಾಗಗಿಟ್ಟಿಸಿಕೊಂಡು ತನ್ನತನವನ್ನು ಕಾಯ್ದುಕೊಂಡಿರುವ ಈ ಉಪ್ಪಿನಕಾಯಿಯಲ್ಲೂ ತರಹೇವಾರಿ ವಿಧಗಳಿವೆ, ಅದರಲ್ಲೂ ಮಲೆನಾಡಿನ ಜನ ಉಪ್ಪಿನಕಾಯಿ ತಯಾರಿಕೆಯಲ್ಲಿ ಸಿದ್ದಹಸ್ತರು. ಬಿರುಬೇಸಿಗೆಯ ಹೊತ್ತಲ್ಲೂ ನಿಮ್ಮ ನಾಲಗೆಯ ಮತ್ತೇರಿಸುವ ಜಿಹ್ವಾಪ್ರಿಯ ಪದಾರ್ಥದ ಕುರಿತು ಒಂದು ಕಿರುಲೇಖನ.

1. ಮಾವಿನಮಿಡಿ ಉಪ್ಪಿನಕಾಯಿ - ಹಣ್ಣುಗಳ ರಾಜ ಎಂದೇ ಪ್ರಸಿದ್ದವಾದ ಮಾವು, ಉಪ್ಪಿನಕಾಯಿ ವಿಚಾರದಲ್ಲೂ ತನ್ನ ಪಾರುಪತ್ಯವನ್ನು ಬಿಟ್ಟುಕೊಟ್ಟಿಲ್ಲ. ಹದವಾಗಿ ಬೆಳೆದ ಘಮಘಮಿಸೋ ಮಾವಿನಮಿಡಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕುವುದೆಂದರೆ ಅಕ್ಷರಶಃ ಹಬ್ಬ. ಇದರ ವಿಶೇಷತೆಯೆಂದರೆ ಕೆಲವು ಬಗೆಯ ಮಾವಿನಮಿಡಿಗಳು ಮಾತ್ರ ಉಪ್ಪಿನಕಾಯಿಗೆ ಸೂಕ್ತ. ಆ ಕೆಲವೇ ಕೆಲವು ಬಗೆಗಳಲ್ಲಿ ಅಪ್ಪೆಮಿಡಿ ಬಹುಶ್ರೇಷ್ಠ.

ತಯಾರಿಸುವ ವಿಧಾನ : ಹದವಾಗಿ ಬೆಳೆದ ಮಾವಿನಮಿಡಿಗಳನ್ನು ಕೊಯ್ದು, ಸ್ವಚ್ಛಗೊಳಿಸಿ, ಚೆನ್ನಾಗಿ ಒರೆಸಿ ದೊಡ್ಡ ಪಾತ್ರೆಯ (ಡ್ರಮ್) ತಳಭಾಗಕ್ಕೆ ಮಾವಿನಸೊಪ್ಪನ್ನು ಹಾಕಿ ನಂತರ ಒಂದು ಪದರ ಮಾವಿನಮಿಡಿ ಹಾಗೂ ಒಂದು ಪದರ ಉಪ್ಪಿನಂತೆ ತುಂಬಿಸಿಟ್ಟು ಮುಚ್ಚಳ ಹಾಕದೆ ಗಾಳಿಯಾಡಲು ಅನುವಾಗುವಂತೆ ಮುಚ್ಚಬೇಕು. ಉಪ್ಪು ಕರಗಿ, ಮಿಡಿಗಳು ಚರಟುವ ತನಕ ಬಿಡಬೇಕು. (ಆಗಾಗ ಡ್ರಮ್ಮಿನೊಳಗೆ ಕೈಹಾಕಿ ಮಿಡಿಯನ್ನು ಮಗುಚಿಹಾಕುವ ಪದ್ಧತಿಯೂ ಕೆಲವೆಡೆ ಇದೆ, ಹಾಗೆ ಮಾಡುವುದಿದ್ದಲ್ಲಿ ಕೈಯನ್ನು ಒಣಗಿಸಿಕೊಳ್ಳುವುದು ಮುಖ್ಯ).
ಮಿಡಿ ಸಂಪೂರ್ಣ ಚರಟಿದ ನಂತರ ಪಾತ್ರೆಯಿಂದ ಹೊರತೆಗೆದು ನೆರಳಲ್ಲಿ ಆರಲು ಇಡಬೇಕು. ಹಾಳಾದ ಮಿಡಿಗಳನ್ನು ತೆಗೆದು, ಉತ್ತಮ ಮಿಡಿಗಳನ್ನು ಒಣಗಿದ ಬಟ್ಟೆಯಲ್ಲಿ ಒರೆಸಬೇಕು. ಇದಕ್ಕೂ ಮುನ್ನ ಮಿಡಿಯನ್ನು ಡ್ರಮ್ಮಿನಿಂದ ತೆಗೆದ ನಂತರ ಡ್ರಮ್ಮಿನಲ್ಲಿರುವ ಅಷ್ಟೂ ಉಪ್ಪಿನನೀರಿಗೆ ಅರಶಿನ ಮತ್ತು ಇಂಗು (ಸಾವಿರಮಿಡಿಗೆ ಎರಡು ಚಮಚ ಅರಶಿನ & ಎರಡು ಕಡಲೆಕಾಳಿನಷ್ಟು ಇಂಗಿನಂತೆ) ಸೇರಿಸಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕುದಿಸಿ, ತಣಿಯಲು ಇಡಬೇಕು.

ಮೆಣಸಿನಪುಡಿ (ಸಾವಿರಮಿಡಿಗೆ ಒಂದೂವರೆ ಕೆಜಿ ಅಂದಾಜಿನಲ್ಲಿ), ಜೀರಿಮೆಣಸಿನ ಪುಡಿ (ಎರಡು ಮುಷ್ಟಿ), ಕಾಳುಮೆಣಸಿನ ಪುಡಿ (ಒಂದು ಮುಷ್ಟಿ), ಸಾಸಿವೆ ಪುಡಿ (ಒಂದೂವರೆ ಪಾವು ಸಾಸಿವೆ) ಹಾಗೂ ಒಂದು ಮುಷ್ಟಿ ಜೀರಿಗೆ ಮತ್ತು ಸ್ವಲ್ಪ ಮೆಂತ್ಯವನ್ನು ಸೇರಿಸಿ ಪುಡಿ ಮಾಡಿ ಸಿದ್ದಪಡಿಸಬೇಕು.
ನಂತರ ಒರೆಸಿಟ್ಟ ಮಿಡಿ ಮತ್ತು ಮೇಲೆ ಸೂಚಿಸಿದ ಪುಡಿಗಳನ್ನು ಕಾಯಿಸಿ ತಣಿಸಿದ ಉಪ್ಪುನೀರಿಗೆ ಹಾಕಿ ಕದಡಿ, ಅರ್ಧ ಕಾಫಿ ಲೋಟದಷ್ಟು ಕೊಬ್ಬರಿ ಎಣ್ಣೆಯನ್ನು ಕಾಯಿಸಿ ಕೊಂಚ ಇಂಗು ಸೇರಿಸಿ, ತಣಿಸಿ ಮಿಡಿಗಳಿಗೆ ಸೇರಿಸಿ ಮಿಶ್ರಣ ಮಾಡಿ, ಚೆನ್ನಾಗಿ ಒಣಗಿಸಿಟ್ಟ ಜಾಲಿಗೆ (ಭರಣಿ) ಹಾಕಿ, ಅದರ ಮೇಲೆ ಪುನಃ ಸ್ವಲ್ಪ ಕಾಯಿಸಿ ತಣಿಸಿದ ಎಣ್ಣೆ ಮತ್ತು ಇಂಗು ಹಾಕಿ ಜಾಲಿಯ ಮುಚ್ಚಳವನ್ನು ಭದ್ರವಾಗಿ ಮುಚ್ಚಿಟ್ಟು ಐದಾರು ತಿಂಗಳ‌ ನಂತರ ತೆಗೆದರೆ ಮಿಡಿ ಉಪ್ಪಿನಕಾಯಿ ಸಿದ್ದ.

2. ಅಮಟೆ ಕಾಯಿ ಉಪ್ಪಿನಕಾಯಿ : ಹದವಾಗಿ ಬೆಳೆದ ಅಮಟೆ ಮಿಡಿಗಳನ್ನು ಕೊಯ್ದು ಮಾವಿನಮಿಡಿ ಉಪ್ಪಿನಕಾಯಿ ಹಾಕುವ ಕ್ರಮವನ್ನೇ ಅನುಸರಿಸಬೇಕು.

3. ಕಂಚಿಕಾಯಿ ಉಪ್ಪಿನಕಾಯಿ : ಕಂಚಿಕಾಯಿಯ ಸಿಪ್ಪೆ ಬಿಡಿಸಿ, ಸಿಪ್ಪೆಯನ್ನು ಚಿಕ್ಕದಾಗಿ ಹೆಚ್ಚಿ, ಉಪ್ಪು ಅರಶಿನ ಹಾಕಿ ಹದವಾಗಿ ಬೇಯಿಸಿ, ಚೆನ್ನಾಗಿ ತೊಳೆದು (ಕನಿಷ್ಟ ಎರಡು ಬಾರಿ) ಎಣ್ಣೆಬಾಣಲೆಗೆ ಹಾಕಿ ಹುರಿದು ತಣಿಸಿ. ಸಿಪ್ಪೆಬಿಡಿಸಿಟ್ಟ ಕಂಚಿ ಹಣ್ಣನ್ನು ತೆಗೆದುಕೊಂಡು ರಸವನ್ನು ತೆಗೆದು, ಸೋಸಿಡಿ.
ಒಂದು ಪಾತ್ರೆಗೆ ಸ್ವಲ್ಪ ನೀರು, ಉಪ್ಪು, ಸ್ವಲ್ಪ ಜೀರಿಗೆ ಮೆಣಸಿನ (ಸೂಜಿಮೆಣಸು) ಪುಡಿ ಹಾಕಿ (ಹಸಿ ಸೂಜಿಮೆಣಸಾದರೆ ಜಜ್ಜಿ ಹಾಕಬೇಕು) ಕುದಿಸಿ ಹಣ್ಣಿನ ರಸ ಹಾಕಿ ಪುನಃ ಕುದಿಸಿ ತಣಿಸಬೇಕು. ಸಂಪೂರ್ಣ ತಣಿದ ನಂತರ ಹುರಿದ ಸಿಪ್ಪೆಯನ್ನು ಸೇರಿಸಿ, ಜೀರಿಗೆ ಮೆಣಸನ್ನು (ಸೂಜಿಮೆಣಸು) ಪುಡಿಮಾಡಿ ಕೊಬ್ಬರಿಎಣ್ಣೆಯಲ್ಲಿ ಹುರಿದು ತಣಿಸಿ ಉಪ್ಪಿನಕಾಯಿಗೆ ಸೇರಿಸಿ ಜಾಲಿಗೆ ಹಾಕಿಡಿ.

4. ನಿಂಬೆಕಾಯಿ ಹುಡಿ ಉಪ್ಪಿನಕಾಯಿ : ನಿಂಬೆಕಾಯಿಗಳನ್ನು ಒರೆಸಿ ಹೋಳುಗಳಾಗಿ ಹೆಚ್ಚಿ ಒಣಪಾತ್ರೆಯಲ್ಲಿಡಿ, ಹರಳುಪ್ಪನ್ನು ಹುರಿದು ಪುಡಿಮಾಡಿ ಹೋಳುಗಳಿಗೆ ಹಾಕಿ. ನಂತರ ಒಣಮೆಣಸಿನ ಪುಡಿ, ಜೀರಿಗೆ, ಮೆಂತ್ಯ, ಕೊಂಚ ಸಾಸಿವೆಯನ್ನು ಪುಡಿಮಾಡಿ ಹೋಳುಗಳಿಗೆ ಸೇರಿಸಿ ಮಿಶ್ರಣ ಮಾಡಿ. ಕೊಬ್ಬರಿ ಎಣ್ಣೆ ಕಾಯಿಸಿ ಇಂಗು ಹಾಕಿ ತಣಿದ ನಂತರ ಉಪ್ಪಿನಕಾಯಿಗೆ ಸೇರಿಸಿ.

5. ದುಡ್ಲೆಕಾಯಿ - ನಿಂಬೆಕಾಯಿ ಉಪ್ಪಿನಕಾಯಿ ತಯಾರಿಸಿದ ವಿಧಾನದಲ್ಲೇ ಮಾಡಬೇಕು.

6. ನೆಲ್ಲಿಕಾಯಿ ಉಪ್ಪಿನಕಾಯಿ : ನೆಲ್ಲಿಕಾಯಿ ಒರೆಸಿ, ಬೇಯಿಸಿ, ಒಡೆದು ಬೀಜ ತೆಗೆದು, ನೆರಳಲ್ಲಿ ಆರಿಸಲು ಇಡಿ. ಹರಳುಪ್ಪನ್ನು ಹುರಿದು ಪುಡಿಮಾಡಿ, ಆರಿಸಿದ ಹೋಳುಗಳೊಂದಿಗೆ ಮಿಶ್ರಣ ಮಾಡಿ, ನಂತರ ನಿಂಬೆಕಾಯಿ ಉಪ್ಪಿನಕಾಯಿ ತಯಾರಿಸಿದ ವಿಧಾನವನ್ನೇ ಅನುಸರಿಸಿ.

7. ಇಡಿ ನಿಂಬೆಕಾಯಿ ಉಪ್ಪಿನಕಾಯಿ : ನಿಂಬೆಕಾಯಿಯನ್ನು ಕುದಿಯುವ ನೀರಿಗೆ ಹಾಕಿ ಎರಡು ನಿಮಿಷ ಬಿಟ್ಟು ಇಳಿಸಿ, ನಂತರ ನೀರಿನಿಂದ ತೆಗೆದು, ಚೆನ್ನಾಗಿ ಒರೆಸಿ. ನಿಂಬೆಹಣ್ಣಿನ ಸುತ್ತ ಮೂರರಿಂದ ನಾಲ್ಕು ಒಟ್ಟೆ (ತೂತು) ಮಾಡಿ. ಮೆಣಸಿನ ಪುಡಿ, ಜೀರಿಗೆ ಮತ್ತು ಮೆಂತ್ಯೆ ಪುಡಿ, ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿದ ಇಂಗು, ಹುರಿದು ಪುಡಿಮಾಡಿದ ಉಪ್ಪು ಹಾಕಿ ಮಿಶ್ರಣ ಮಾಡಿ ತೂತಿನೊಳಗೆ (ಒಟ್ಟೆಯೊಳಗೆ) ತುಂಬಬೇಕು. ನಂತರ ಅದೇ ಮಿಶ್ರಣವನ್ನು ನಿಂಬೆಹಣ್ಣಿನ ಮೇಲ್ಭಾಗಕ್ಕೆ ಸವರಿ ತೆಗೆದಿಟ್ಟರೆ ಒಂದೆರೆಡು ವಾರದ ನಂತರ ಉಪಯೋಗಿಸಬಹುದು.
(1 ಕೆಜಿ ನಿಂಬೆಹಣ್ಣಿಗೆ ಅರ್ಧ ಕೆಜಿ ಮೆಣಸಿನ ಪುಡಿ, ಒಂದು ಹಿಡಿ ಜೀರಿಗೆ ಮತ್ತು ಮೆಂತ್ಯೆಯ ಅಂದಾಜಿನಲ್ಲಿ ಮಿಶ್ರಣ ತಯಾರಿಸಿ)

8. ಕಡಗಾಯಿ ಉಪ್ಪಿನಕಾಯಿ : ಬೆಳೆದ ಮಾವಿನ ಕಾಯಿಯನ್ನು ಗೊರಟಿನ (ವಾಟೆ) ಸಮೇತ ಕತ್ತರಿಸಿ, ಆರರಿಂದ ಎಂಟು ಹೋಳುಗಳನ್ನು ಮಾಡಿ, ಉಪ್ಪನ್ನು ಹುರಿದು, ತಣಿಸಿ ಹೋಳುಗಳಿಗೆ ಹಾಕಿ. (ಇಪ್ಪತ್ತೈದು ಕಾಯಿಗಳಿಗೆ) ಅರ್ಧ ಕೆಜಿ ಮೆಣಸಿನ ಪುಡಿ, ತಲಾ ಒಂದು ಲೋಟ ಜೀರಿಗೆ, ಮೆಂತ್ಯೆ ಮತ್ತು ಸಾಸಿವೆ, ಅರ್ಧ ಲೋಟ ಜೀರಿಗೆ ಮೆಣಸಿನ (ಸೂಜಿಮೆಣಸು) ಪುಡಿ ಸೇರಿಸಿ ಮಿಶ್ರಣ ಮಾಡಿ. ಒಂದೂವರೆ ಲೋಟ ಕೊಬ್ಬರಿ ಎಣ್ಣೆಗೆ ಎರಡಿಂದ ಮೂರು ಕಡಲೆಗಾತ್ರದಷ್ಟು ಇಂಗು ಸೇರಿಸಿ ಕಾಯಿಸಿ ಪೂರ್ಣ ತಣಿದ ನಂತರ, ಮಿಶ್ರಣಕ್ಕೆ ಸೇರಿಸಿ, ಜಾಲಿಗೆ ಹಾಕಿಡಿ.

9. ಕೊಚ್ಚುಪ್ಪಿನಕಾಯಿ : ಮಾವಿನಕಾಯಿಯನ್ನು ಒರೆಸಿ, ಚಿಕ್ಕಹೋಳುಗಳನ್ನಾಗಿ ಹೆಚ್ಚಿ, ಉಪ್ಪು ಹುರಿದು ತಣಿಸಿ, ಹೋಳುಗಳಿಗೆ ಸೇರಿಸಬೇಕು, ಮೆಣಸಿನ ಪುಡಿ, ಜೀರಿಗೆ, ಮೆಂತ್ಯೆ, ಸಾಸಿವೆ ಪುಡಿಮಾಡಿ ಕಲೆಸಿ. ಕೊಬ್ಬರಿ ಎಣ್ಣೆ ಕಾಯಿಸಿ, ಇಂಗು ಬೆರೆಸಿ ನಂತರ ಹೋಳುಗಳೊಂದಿಗೆ ಸೇರಿಸಿ. ಕೊಚ್ಚುಪ್ಪಿನಕಾಯಿ ಜಾಸ್ತಿದಿನ ಬಾಳಿಕೆ ಬರುವುದಿಲ್ಲವಾದ್ದರಿಂದ ಜಾಸ್ತಿ‌ಪ್ರಮಾಣದಲ್ಲಿ ತಯಾರಿಸದೇ ಬೇಕಾದಷ್ಟು ಮಾತ್ರ ಮಾಡುವುದು ಉತ್ತಮ.

ಮಾಹಿತಿ : ಭಾರತಿ.ಕೆ ಮತ್ತು ಸುಮ.ಕೆ.ಎನ್

- ಸ್ಕಂದ ಆಗುಂಬೆ

(ಮೂಲಪ್ರತಿ)
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.


Sunday, 8 April 2018

ಹುಲಿಮಾರ


             "ದ್ಯಾವನಾಯ್ಕನ್ನ ಹುಲೀ ಹಿಡೀತಂತೆ, ನಿನ್ನೆ ರಾತ್ರಿ ಶಿಕಾರಿಗ್ ಹೋದೋನು ಬೆಳ್ಗಾದ್ರೂ ಬರ್ದೇ ಇರೋದನ್ ನೋಡಿ ಅವ್ನ್ ಮಗ ಮಾರ ಹುಡ್ಕಂಡ್ ಹೋದಾಗ ಆ ಹುಲಿಯಮ್ಮನ್ ದೇವಸ್ಥಾನದ್ ಎದ್ರಿರೋ ಹೆಬ್ಬಲಸಿನ ಮರದ್ ಕೆಳ್ಗೆ ಬಿದ್ದಿದ್ನಂತೆ, ಮಗ ಹುಟ್ಟಿದಾಗ ಹರಕೆ ತೀರ್ಸೋಕ್ ಹೋದೋನು, ಆಮೇಲ್ ಒಂದ್ ಕೋಳಿ ಬಲಿ ಕೂಡ ಕೊಟ್ಟಿಲ್ಲ, ದೇವ್ರ್ ಸುಮ್ನೆ ಬಿಡ್ತದಾ? ಅವ್ನನ್ನೇ ಬಲಿ ತಗಂಡಿದೆ ನೋಡಿ" ಏದುಸಿರು ಬಿಡುತ್ತಾ ಯಜಮಾನ ಸೀನಯ್ಯಂಗೆ ವರದಿ ಒಪ್ಪಿಸುತ್ತಿದ್ದ ಶಂಕ್ರ. ದ್ಯಾವನಾಯ್ಕ ಸೀನಯ್ಯನ ಮನೆಮಗನಂತೆ ಇದ್ದವನು, ಸುಮಾರು ಐವತ್ತರ ಆಸುಪಾಸಿನವನು. ಸಣ್ಣ ಹುಡುಗನಿರಬೇಕಾದರೆ ಮಂಗನ ಕಾಯಿಲೆ ಬಂದು ಅವನ ಅಪ್ಪ, ಅಮ್ಮ ಸತ್ತ ಲಾಗಾಯ್ತು ಇವನನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸುವ ತನಕವೂ ಮನೆಯಲ್ಲೇ ಇಟ್ಟುಕೊಂಡಿದ್ದರು ಸೀನಯ್ಯ. ಅವನದ್ದೂ ಒಂದು ಸಂಸಾರವೆಂದು ಶುರುವಾದ ಮೇಲೆ ತಮ್ಮ ಮನೆ ಬಳಿಯೇ ಒಂದು ಜಾಗ ಗೊತ್ತು ಮಾಡಿ ಚಿಕ್ಕ ಸೂರನ್ನೂ ಕಟ್ಟಿಕೊಟ್ಟಿದ್ದರು. ಹೀಗೆ ಮನೆ ಮಗನಂತೆ ಬೆಳೆದ ದ್ಯಾವನಾಯ್ಕ ಸತ್ತನೆಂದಾಗ ಸೀನಯ್ಯನಿಗೆ ಕಣ್ಣು ಕತ್ತಲೆಗಟ್ಟಿದಂತಾಗಿತ್ತು. ಅಮ್ಮೋರೇ.. ಸೀನಯ್ಯಂಗ್ ತಲೆ ಸುತ್ ಬಂದಿದೆ ನೀರ್ ತಗಂಬನ್ನಿ ಬೇಗ ಎಂದು ಶಂಕ್ರ ಕೂಗಿದ ತಕ್ಷಣ ಒಳಗಿನಿಂದ ಓಡಿಬಂದ ಮೂಕಮ್ಮ ಗಂಡನಿಗೆ ನೀರು ಕುಡಿಸಿ, ಎದೆಯುಜ್ಜುತ್ತಾ ಶಿವ್ನೇ ಏನಾಯ್ತಪ್ಪಾ ಎಂದು ಗಲಿಬಿಲಿಗೊಳ್ಳಲು, ಶಂಕ್ರ ಸಾವಧಾನವಾಗಿ ನಡೆದಿದ್ದನ್ನೆಲ್ಲಾ ವಿವರಿಸಿದ್ದ. ವಿಷಯ ಕೇಳಿ ದಿಗ್ಭ್ರಾಂತಳಾದ ಮೂಕಮ್ಮ "ದ್ಯಾವ ಹೋದ್ನಾ.." ಎಂಬ ಉದ್ಘಾರ ತೆಗೆದು, ನಿಧಾನಕ್ಕೆ ಕಣ್ಬಿಡುತ್ತಿದ್ದ ಸೀನಯ್ಯನೆಡೆಗೆ ದೈನ್ಯತೆಯಿಂದ ನೋಡುತ್ತಿದ್ದರು.

      "ನಮ್ ವಂಶದ ಹುಲಿ ಇವ್ನು, ದೇವ್ರ್ ಕೊಟ್ಟ ಹುಲಿ, ಇವ್ನಿಗ್ ಹುಲಿಮಾರ ಅಂತಾನೇ ಹೆಸ್ರಿಡ್ತೀನಿ.. ಹುಲಿಮಾರ.. ಹುಲಿಮಾರ.. ಹುಲಿಮಾರ.." ಮಗುವಿನ ಕಿವಿಯಲ್ಲಿ ಮೂರುಬಾರಿ ಹೆಸರು ಕೂಗಿದ ದ್ಯಾವನಾಯ್ಕನ ಮುಖ ಹೊಳೆಯುತ್ತಿತ್ತು, ಹೆಂಡತಿ ನಾಗಿ ಮಾತ್ರ "ಹುಲಿಮಾರ ಅಂತೆ ಹುಲಿಮಾರ ಅದೇನ್ ಹೆಸ್ರೋ? ಮಗೂಗೆ ಒಂದ್ ಒಳ್ಳೇ ಹೆಸ್ರಿಡ್ಬಾರ್ದಾ" ಎಂದು ಸಿಡುಕುತ್ತಿದ್ದರೆ, ಅದ್ಯಾವುದರ ಪರಿವೆಯೇ ಇಲ್ಲದ ದ್ಯಾವನಾಯ್ಕ "ಅಲೆಲೆಲೆ.. ಹುಲಿಮಾರ.. ಬಂಗಾರ.. ನನ್ನೂರ ಸರದಾರ.." ಅಂತ ಮಗುವನ್ನು ಎತ್ತಿಕೊಂಡು ಹಾಡುತ್ತಿದ್ದ. ಅವನ ಖುಷಿಯನ್ನು ನೋಡಿದ ಸೀನಯ್ಯ ಮತ್ತು ಮೂಕಮ್ಮ ಬಳಿ ಬಂದು ಮಗುವಿನ ಕೈಯಲ್ಲಿ ನೂರು ರುಪಾಯಿ ಇಟ್ಟು "ಊರಿಗ್ ಒಳ್ಳೇ ಹೆಸ್ರು ತಗೊಂಡ್ ಬಾ, ಹುಲಿಯಂತೆ ಧೈರ್ಯಶಾಲಿಯಾಗು" ಎಂದು ಮಗುವಿನ ತಲೆ ನೇವರಿಸಿ.. ನಾಗಿಯನ್ನು ಕರೆದು "ಹೆಸರು ಯಾವ್ದಾದ್ರೇನಂತೆ ಮಗುವಿಗೆ ಸಂಸ್ಕಾರ ಮುಖ್ಯ, ಒಳ್ಳೇ ರೀತಿಲಿ ಬೆಳ್ಸು ಮಗನ್ನ" ಅಂತ ಹೇಳಿ ಹಾರೈಸಿ ಹೋಗಿದ್ದರು.
   
         ಮದುವೆಯಾಗಿ ಹನ್ನೆರಡು ವರ್ಷಗಳಾದರೂ ದ್ಯಾವನಾಯ್ಕನ ಮನೆಯಲ್ಲಿ ಕೂಸು ಅಳುವ ಸದ್ದು ಕೇಳಿರದ ಕಾರಣ ಬುಡುಬುಡುಕೆಯವರಿಂದ ಹಿಡಿದು ಮಣಿಪಾಲ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಿಳಿಯುವ ತನಕ ಎಷ್ಟೇ ದುಡ್ಡು ಸುರಿದರೂ ಪರಿಹಾರ ಸಿಗದೆ, ಊರವರೆಲ್ಲಾ ನಾಗಿ ಬಂಜೆಯಂತೆ ಎಂದು ಮಾತನಾಡಿಕೊಳ್ಳಲು ಶುರುಮಾಡಿದಾಗ ದ್ಯಾವನಾಯ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇವನ ಅವಸ್ಥೆಯನ್ನು ನೋಡಲಾಗದ ಸೀನಯ್ಯ ಅವನನ್ನು ತಾವು ನಂಬಿದ ಘಟ್ಟದ ಕೆಳಗಿನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಕೇಳಿ ಮಾಡಿಸುವಷ್ಟರಲ್ಲಿ ದ್ಯಾವನಾಯ್ಕನ ತಂದೆ ತೀರಿದ ನಂತರ ಅವರ ಕುಲದೇವರಿಗೆ ಈತ ಸರಿಯಾಗಿ ನಡೆದುಕೊಳ್ಳುತ್ತಿಲ್ಲವೆಂದೂ, ಅದರ ಸಿಟ್ಟು ಕಳೆಯುವ ತನಕ ಸಂತಾನ ಭಾಗ್ಯ ಇಲ್ಲವೆಂದೂ ಹೇಳಿ ಕಳುಹಿಸಿದ್ದರು. ಊರಿಗೆ ಬಂದವನೇ ನಡೆದದ್ದನ್ನೆಲ್ಲಾ ನಾಗಿಗೆ ತಿಳಿಸಿ "ಇನ್ಯಾರೂ ನಿನ್ನ ಬಂಜೆ ಅಂತ ಕರ್ಯಂಗಿಲ್ಲ ನೋಡು" ಎಂದು ಹಣೆಗೆ ಮುತ್ತಿಟ್ಟು, ಶಾಸ್ತ್ರಿಗಳ ಅಣತಿಯಂತೆ ಹರಕೆ ತೀರಿಸಲು, ಕಾಕತಾಳೀಯವೆಂಬಂತೆ ಅದಾಗಿ ಎಂಟನೇ ಹುಣ್ಣಿಮೆಗೆ ಮುದ್ದಾದ ಗಂಡು ಮಗು ಜನಿಸಿತ್ತು. ಕುಲದೇವತೆ ಹುಲಿಯಮ್ಮನಿಗೆ ಅಡ್ಡಡ್ಡ ಬಿದ್ದು ನಮಸ್ಕರಿಸಿದ ಮಾರ, ದೇವರ ಸನ್ನಿಧಿಯಲ್ಲೇ ನಾಮಕಾರಣ ಶಾಸ್ತ್ರ ನಡೆಸಲು ನಿರ್ಧರಿಸಿ ಮಗುವಿಗೆ ಹುಲಿಮಾರ ಎಂದು ಹೆಸರಿಟ್ಟಿದ್ದ.
     
        ಅಂಬೆಗಾಲಿಡಲು ಶುರುಮಾಡಿದ ಮಗು ಹುಲಿಮಾರ ಎಂದು ರಾಗವಾಗಿ ಕರೆದೊಡನೆ ಕಿಲಕಿಲನೆ ನಗುತ್ತಿದ್ದರೆ ದ್ಯಾವನಿಗೆ ಪ್ರಪಂಚವನ್ನೇ ಗೆದ್ದಷ್ಟು ಖುಷಿ, ನಾಗಿಗೆ ಮಾತ್ರ ಸಂಕಟ. ಹುಲಿಯಮ್ಮನ ಆಶೀರ್ವಾದಿಂದ ಮಗು ಹುಟ್ಟಿತೆಂದು ದ್ಯಾವ ನಂಬಿದ್ದರೂ, ಆ ಜೀವವನ್ನು ಹೆತ್ತ ನಾಗಿಯ ನಂಬಿಕೆ ಬೇರೆಯೇ ಆಗಿತ್ತು. ಸೀನಯ್ಯ ಮತ್ತು ದ್ಯಾವ ಘಟ್ಟದ ಕೆಳಗೆ ಹೋದ ರಾತ್ರಿಯಂದು ದ್ಯಾವನನ್ನು ಹುಡುಕಿಕೊಂಡು ಬಂದಿದ್ದ ಶಂಕ್ರನ ಬಳಿ ನಾಗಿ ತನ್ನ ಸಂಕಟವನ್ನೆಲ್ಲಾ ಹೇಳಿಕೊಂಡು ಅತ್ತಿದ್ದಳು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡ ಶಂಕ್ರ ನಾಗಿಯ ಸಮ್ಮತಿಯೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದ. "ಬಂಜೆ ನೀನಲ್ಲ ಕಣೇ ನಾಗಿ, ನಿನ್ನ ಗಂಡ.. ಗಂಡು ಮಗು ಹುಟ್ಟಿದ್ರೆ ನನ್ ಹೆಸ್ರನ್ನೇ ಇಡು ಆಯ್ತಾ" ಎಂಬ ಶಂಕ್ರನ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿರುವಾಗ, ಮಗು ದೇವರು ಕೊಟ್ಟ ಫಲವೆಂದು ನಂಬುವುದಾದರೂ ಹೇಗೆ? ಅದೇ ಕಾರಣಕ್ಕೆ ಮಗನಿಗೆ ಹುಲಿಮಾರ ಎಂದು ಹೆಸರಿಟ್ಟಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದಳು.
ಮತ್ತೆ ಮತ್ತೆ ದ್ಯಾವ ಹುಲಿಮಾರ ಎಂದು ರಾಗ ಎಳೆಯುತ್ತಿರಲು, "ಅಪ್ಪಿಮರೀ.. ಬಾರಪ್ಪಿ, ಹುಲಿಮಾರ ಇಶ್ಶೀ.." ಎಂದು ಮಗುವನ್ನೆತ್ತಿಕೊಂಡು ಒಳ ನಡೆಯುತ್ತಿದ್ದರೆ, ಇವನು "ಅದ್ಯಾಕ್ ಹಂಗಾಡ್ತೀಯಾ? ಹುಲಿಯಮ್ಮ ಕಣ್ ಬಿಡ್ದೇ ಇದ್ರೆ ಊರವ್ರ್ ಬಾಯಲ್ಲಿ ಬಂಜೆ ಅಂತ ಕರ್ಸ್ಕೊಂಡೇ ಸಾಯ್ಬೇಕಿತ್ತು, ಹುಲಿಮಾರ ಇಶ್ಶೀ ಅಂತೆ, ತಲೆ ಕೆಟ್ಟವ್ಳೇ" ಎಂದು ನೆಲಕ್ಕುಗಿದು ಹೊರ ನಡೆಯುತ್ತಿದ್ದ. ದ್ಯಾವ ಆಚೆ ಹೋದೊಡನೆ "ಹುಲಿಯಮ್ಮ ಕಣ್ ಬಿಟ್ಟಿದ್ದಂತೆ..." ಎಂದು ನಕ್ಕು  ಶಂಕ್ರಾ.. ನನ್ ಕಂದಾ ಎಂದು ಕಿವಿಯಲ್ಲಿ ಉಸುರಿ ಮಗುವನ್ನು ಎದೆಗವುಚಿಕೊಂಡುಬಿಡುತ್ತಿದ್ದಳು.


     
         ದ್ಯಾವನಿಗೆ ಶಿಕಾರಿ ಚಟ, ಸಂಜೆಯಾಗುತ್ತಿದ್ದಂತೆ ತಲೆಗೆ ಬ್ಯಾಟರಿ ಸಿಕ್ಕಿಸಿಕೊಂಡು ಅಪ್ಪನಿಂದ ಬಳುವಳಿಯಾಗಿ ಬಂದಿದ್ದ ಕಳ್ಳಕೋವಿ ಹಿಡಿದು ಕಾಡಿಗೆ ನುಗ್ಗುತ್ತಿದ್ದ. ಮಲೆನಾಡಿನ ದಟ್ಟಡವಿಯಾದ್ದರಿಂದ ಪ್ರಾಣಿಗಳಿಗೇನು ಕೊರತೆ ಇರಲಿಲ್ಲ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಲ್ಲುತ್ತಿದ್ದ ಕಾನುಕುರಿ, ಹಂದಿಗಳನ್ನು ಲೆಕ್ಕವಿಲ್ಲದಷ್ಟು ಹೊಡೆದುರುಳಿಸಿದ್ದ. ಕೆಂಜಳಿಲು, ಬರ್ಕ, ಮೊಲ ಹೀಗೆ ಚಿಕ್ಕಪುಟ್ಟ ಪ್ರಾಣಿಗಳನ್ನೂ ಬಿಡುತ್ತಿರಲಿಲ್ಲ. ಅದೊಂದು ದಿನ ಕಾಡಿಗೆ ನುಗ್ಗಿದಾಗ ಅನಿರೀಕ್ಷಿತವಾಗಿ ಕಾಡುಕೋಣದ ಗುಂಪೊಂದು ಇವನಿಗೆ ಎದುರಾಗಿತ್ತು, ಬೇಕಾದಷ್ಟು ಸಲ ಕಾಡುಕೋಣಗಳನ್ನು ನೋಡಿದ್ದನಾದರೂ ಅಷ್ಟು ಸಮೀಪದಿಂದ ಯಾವತ್ತೂ ಮುಖಾಮುಖಿಯಾಗಿರಲಿಲ್ಲ. ದ್ಯಾವ ನಿಧಾನವಾಗಿ ಒಂದೆರೆಡು ಹೆಜ್ಜೆ ಹಿಂದಿಟ್ಟಿದ್ದನಷ್ಟೇ ಬ್ಯಾಟರಿಯ ಬೆಳಕು ಪುಟ್ಟ ಕರುವೊಂದರ ಮೇಲೆ ಬಿದ್ದು ಈತನ ಜಂಘಾಬಲವೇ ನಡುಗಿಹೋಯ್ತು. ಕರುವಿದ್ದಾಗ ರಕ್ಷಣೆಗೋಸ್ಕರ ಎಂತಹ ರಾಕ್ಷಸರೂಪವನ್ನೂ ತಾಳುವ ಪ್ರಾಣಿಗಳವು. ಈತ ಹಿಂದೆ ಮುಂದೆ ನೋಡುವಷ್ಟರಲ್ಲಿ ಕೋಣವೊಂದು ನುಗ್ಗಲು, ಆತ್ಮರಕ್ಷಣೆಗಾಗಿ ಬಂದೂಕಿನ ಟ್ರಿಗರ್ ಎಳೆದ. ಸಿಡಿದ ಗುಂಡು ಭಯಂಕರ ಶಬ್ಧದೊಂದಿಗೆ ಕೋಣದ ಬಲ ತೊಡೆಯ ಸೀಳಿ, ಗುಂಪು ದಿಕ್ಕಾಪಾಲಾಗಿತ್ತು. ಇತ್ತ ಗುಂಡು ಹೊಕ್ಕಿದ್ದರಿಂದ ಕೋಣವೂ ಅಡ್ಡಾದಿಡ್ಡಿ ಓಡಿ, ದ್ಯಾವ ಹಿಂತಿರುಗಿ ನೋಡದೆ ಮನೆ ತಲುಪಿದ್ದ. ಒಮ್ಮೆ ಪೆಟ್ಟಾದರೆ ಅಂತಹ ಕೋಣಗಳು ವ್ಯಾಘ್ರವಾಗುತ್ತವೆ, ಸುಖಾಸುಮ್ಮನೆ ಅಟ್ಟಾಡಿಸುತ್ತವೆ ಇಲ್ಲೂ ಹಾಗೇ ಆಯಿತು. ಅವತ್ತೊಂದು ದಿನ ಕಾಡು ಸುತ್ತಲು ಬಂದ ಫಾರೆಸ್ಟ್ ಡಿಪಾರ್ಟ್ಮೆಂಟಿನ ವಾಚರ್ ತಿಮ್ಮ ಅದೇ ಕಾಡುಕೋಣದ ಕಣ್ಣಿಗೆ ಬಿದ್ದಿದ್ದ, ಕಾಡಿನ ಮರ ಮಟ್ಟುಗಳ ಸಂದಿಯಲ್ಲೆಲ್ಲಾ ಓಡಿ ಮೈ ತರಚಿಸಿಕೊಂಡು ಕೊನೆಗೆ ಯಾವುದೋ ಮರ ಹತ್ತಿದರೂ ಅರ್ಧ ಮುಕ್ಕಾಲು ಗಂಟೆ ಕಾಲು ಕೆದರುತ್ತಾ ಅಲ್ಲೇ ನಿಂತಿದ್ದ ಕಾಡುಕೋಣ ಅವನ ಬೆವರಿಳಿಸಿತ್ತು. ಅದರ ತೊಡೆಯಲ್ಲಾದ ವ್ರಣ ತಿಮ್ಮನ ಕಣ್ಣಿಗೆ ಬಿದ್ದು ಇದು ದ್ಯಾವನ ಕೆಲಸವೇ ಸೈ ಎಂದರಿತು ಸೀದಾ ದ್ಯಾವನಾಯ್ಕನ ಮನೆಗೆ ಬಂದು ಬಾಯಿಗೆ ಬಂದಂತೆ ಬೈದು, ಡಿಪಾರ್ಟ್‍ಮೆಂಟಿಗೆ ಹೇಳಿ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಸಿ ಐನೂರು ರುಪಾಯಿ ಕಿತ್ತಿದ್ದ. ಇದಾಗಿ ಸುಮಾರು ದಿನಗಳ ತನಕ ದ್ಯಾವ ಕಾಡಿಗೆ ನುಗ್ಗಿರಲಿಲ್ಲ.
       
       ಕೋಗಳ್ಳಿಯ ಕಾಡಿನಲ್ಲಿ ಆಗಾಗ ಹುಲಿ ಕೂಗುವ ಸದ್ದು ಕೇಳುವುದು ಮಾಮೂಲಿಯಾಗಿತ್ತು, ರಾತ್ರಿ ಹೊತ್ತು ಊರ ಗಡಿಯಲ್ಲೇ ಕೂಗು ಕೇಳುತ್ತಿದ್ದರೂ ಯಾರಿಗೂ ಉಪಟಳ ಮಾಡುತ್ತಿರಲಿಲ್ಲವಾದ್ದರಿಂದ ಅದು ಹುಲಿಯಮ್ಮನ ಅವತಾರದಲ್ಲಿದ್ದ ದೇವರ ಹುಲಿಯೆಂದು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಿರಬೇಕಾದರೆ ಇದ್ದಕ್ಕಿದ್ದಂತೆ ಊರ ದನಗಳೆಲ್ಲಾ ಒಂದೊಂದೇ ನಾಪತ್ತೆಯಾಗಲು ಶುರುವಾಗಿ ಕೊನೆಗೆ ಕೊಟ್ಟಿಗೆಗೆ ನುಗ್ಗಿ ಕರುಗಳನ್ನು ಹೊರುವಷ್ಟರ ಮಟ್ಟಿಗೆ ಹುಲಿಕಾಟ ಶುರುವಾಯ್ತು. ಇದರ ನಡುವೆ ಎರಡು ದಿಕ್ಕಿನಲ್ಲಿ ಹುಲಿ ಕೂಗು ಕೇಳುತ್ತಿದ್ದರಿಂದ ದನಗಳನ್ನು ಹೊರುತ್ತಿರುವುದು ದೇವರ ಹುಲಿ ಕೆಲಸವಲ್ಲವೆಂದೂ ಇದು ಬೇರೆಡೆಯಿಂದ ಬಂದಿರುವ ರಕ್ಕಸನೆಂದೂ ಊರ ಜನರು ತೀರ್ಮಾನಕ್ಕೆ ಬಂದು, ದ್ಯಾವನಾಯ್ಕನ ಬಳಿ ಹೇಗಾದರೂ ಮಾಡಿ ಈ ಉಪಟಳವನ್ನು ನಿಲ್ಲಿಸಬೇಕೆಂದು ಕೋರಿದರು. ಈಗಾಗಲೇ ವಾಚರ್ ತಿಮ್ಮ ಎಚ್ಚರಿಕೆ ಕೊಟ್ಟಿದ್ದರಿಂದ ಹ್ಞೂಂಗುಟ್ಟಲು ಹಿಂಜರಿದನಾದರೂ ಊರವರ ಮಾತಿಗೆ ಇಲ್ಲವೆನ್ನಲಾಗದೆ ಮುಲಾಜಿಗೆ ಒಪ್ಪಿಕೊಂಡ. ಅದಾಗಿ ಮಾರನೇ ದಿನಕ್ಕೇ ಹುಲಿ ಕೂಗುವ ಸದ್ದು ಕೇಳಿ ಮಗನೊಡನೆ ಕಾಡು ಹೊಕ್ಕು ಹುಡುಕಾಡಿ, ಹತ್ತಿರದಲ್ಲೇ ಕೂಗು ಕೇಳಿದಾಗ ಎದೆಯಲ್ಲಿ ನಡುಕ ಹುಟ್ಟಿ ಮಗ ಜೊತೆಗಿದ್ದಾನೆಂಬ ಧೈರ್ಯದಲ್ಲೇ ಬ್ಯಾಟರಿ ಹಾಯಿಸಿದ್ದ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಂತ ಹುಲಿಯನ್ನು ಒಮ್ಮೆ ದಿಟ್ಟಿಸಲು, ಅಷ್ಟೇನು ಬಲಾಢ್ಯವಲ್ಲದ ಮುದಿ ಹುಲಿಯಾಗಿದ್ದು ಇದು ದೇವರ ಹುಲಿಯಲ್ಲವೆಂಬುದು ಖಚಿತವಾದ ತಕ್ಷಣ ಬಂದೂಕಿನ ಟ್ರಿಗರ್ ಎಳೆದಿದ್ದ, ಗುರಿ ತಪ್ಪಲಿಲ್ಲ.. ಸೀದಾ ಹಣೆಗೆ ಹೊಕ್ಕ ಗುಂಡಿನ ರಭಸಕ್ಕೆ ವ್ಯಾಘ್ರದ ಪ್ರಾಣಪಕ್ಷಿ ಹಾರಿಹೋಗಿತ್ತು. ಹತ್ತಿರ ಹೋಗಿ ಅದರ ಹಲ್ಲು, ಉಗುರುಗಳನ್ನು ಕಿತ್ತು ಮಗನೊಡನೆ ಸೇರಿ ಒಂದು ಗುಂಡಿ ತೋಡಿ ಮಣ್ಣುಮಾಡಿಯೇ ಬಿಟ್ಟ. ಮಾರನೇ ದಿನ ಊರವರೆಲ್ಲಾ "ರಾತ್ರಿ ಹುಲಿ ಕೂಗಿದ ಸ್ವಲ್ಪ ಹೊತ್ತಿಗೇ ಗುಂಡಿನ ಶಬ್ಧ ಕೇಳಿತಲ್ಲಾ.. ಹುಲಿ ಸಿಕ್ತಾ" ಎಂದರೂ, ಇಲ್ಲಪ್ಪಾ ಕಾನುಕುರಿ ಹೊಡ್ದಿದ್ದು ಅಂತ ಸುಳ್ಳೇ ಹೇಳಿ ವಿಷಯವನ್ನು ಮುಚ್ಚಿಟ್ಟ. ಇದಾಗಿ ಮೂರೇ ತಿಂಗಳಲ್ಲಿ ದ್ಯಾವ ಸತ್ತಿದ್ದು. ಅವತ್ತು ಮಗ ಬರುತ್ತೀನೆಂದರೂ ಬೇಡವೆಂದು ಹೇಳಿ ಒಬ್ಬನೇ ಶಿಕಾರಿಗೆ ಹೋಗಿದ್ದ, ಬೆಳಗ್ಗೆಯಾದರೂ ಅಪ್ಪ ಬರದಿದ್ದನ್ನು ನೋಡಿ ಹೊರಟ ಮಾರನಿಗೆ ಹುಲಿಯಮ್ಮನ ದೇವಸ್ಥಾನದ ಎದುರಿರುವ ಹೆಬ್ಬಲಿಸಿನ ಮರದ ಕೆಳಗೆ ದ್ಯಾವನ ಹರಿದ ದೇಹ ಕಣ್ಣಿಗೆ ಬಿದ್ದಿತ್ತು. ಅಪ್ಪನ ಅವಸ್ಥೆಯನ್ನು ನೋಡಿ ಕಂಗಾಲಾದ ಮಾರ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿ ಜೋರಾಗಿ ಕೂಗಿಕೊಂಡಾಗ ಸದ್ದು ಕೇಳಿದ ಊರವರು ಹೋಗಿ ನೋಡಲು ಮಾರ ಕೈಯಲ್ಲಿ ಬಂದೂಕು ಹಿಡಿದು ಹುಲಿಯಮ್ಮನ ಮುಂದೆ ವಿಕಾರವಾಗಿ ಕಿರುಚುತ್ತಾ ಕುಳಿತಿದ್ದ. ಇತ್ತ ಸುಧಾರಿಸಿಕೊಂಡ ಸೀನಯ್ಯನೂ ಸೀದಾ ಹುಲಿಯಮ್ಮನ ಗುಡಿ ಕಡೆಗೆ ಓಡಿದ್ದರು, ಹೋದವರೇ ಮಾರನನ್ನು ಸಂತೈಸಿ ಊರವರ ಬಳಿ ಶವ ಸಂಸ್ಕಾರಕ್ಕೆ ಬೇಕಾದ ಸಿದ್ಧತೆ ಮಾಡಲು ಹೇಳಿ, ಹೆಣವನ್ನು ಮನೆಗೆ ಸಾಗಿಸಿದ್ದರು. ಮನೆ ಮುಂದೆ ಊರ ಹೆಂಗಸರೆಲ್ಲಾ ಸೇರಿಯಾಗಿತ್ತು, ನಾಗಿ ಹಣೆ ಚಚ್ಚಿಕೊಂಡು ಅಳುತ್ತಾ ಅಂಗಳದಲ್ಲಿ ಹೊರಳಾಡುತ್ತಿದ್ದಳು, ಬಳೆ ಒಡೆದು ಕೈಯೆಲ್ಲಾ ರಕ್ತಮಯವಾಗಿತ್ತು. ಸೀನಯ್ಯ ಮುಂದೆ ನಿಂತು ಮಾರನಿಂದ ಶವ ಸಂಸ್ಕಾರ ಮಾಡಿಸಿ, ಶಾಸ್ತ್ರದ ಪ್ರಕಾರ ನಂತರದ ಕ್ರಿಯೆಗಳನ್ನೂ ಪೂರೈಸಿ "ಮಾರ.. ಇಷ್ಟ್ ದಿನ ನಿಮ್ಮಪ್ಪ ಬದುಕಿದಂತೆ ನೀನೂ ನ್ಯಾಯವಾಗಿ ಬದುಕಬೇಕು, ಏನೇ ತೊಂದ್ರೆ ಆದ್ರೂ ನಾನಿದ್ದೀನಿ.. ಹಿಂಜರಿಯದೇ ನಮ್ಮನೆಗೆ ಬಾ" ಎಂದು ಧೈರ್ಯ ತುಂಬಿದ್ದರು.
       
         ದ್ಯಾವ ಇಲ್ಲದ ಸಮಯದಲ್ಲಿ ಮನೆಗೆ ಬರುತ್ತಿದ್ದ ಶಂಕ್ರ ಒಂದೆರಡು ಬಾರಿ ಮಾರನ ಕಣ್ಣಿಗೆ ಬಿದ್ದಿದ್ದ, ಅದರ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಂಡಿರದಿದ್ದ ಮಾರನಿಗೆ ಅಪ್ಪ ಸತ್ತ ಮೇಲೆ ಶಂಕ್ರ ಪದೇ ಪದೇ ಬರುತ್ತಿದುದನ್ನು ನೋಡಿ ಅನುಮಾನ ಶುರುವಾಗಿತ್ತು. ದ್ಯಾವ ಸತ್ತ ಇಪ್ಪತ್ನಾಲ್ಕನೇ ದಿನಕ್ಕೆ ನಾಗಿ ಮತ್ತು ಮಾರನ ನಡುವೆ ದೊಡ್ಡ ವಾಗ್ವಾದವೇ ನಡೆದು ಮಾತಿಗೆ ಮಾತು ಬೆಳೆಯುತ್ತಿರಲು ಗಲಾಟೆಯ ಸದ್ದು ಕೇಳಿದ ಸೀನಯ್ಯ ಸೀದಾ ಅವರ ಮನೆ ಕಡೆ ಓಡಿದ್ದರು. ಕೈಯಲ್ಲಿ ಬಂದೂಕು ಹಿಡಿದಿದ್ದ ಮಾರ ಅಪ್ಪನನ್ನು ಕೊಂದ ದೇವರ ಹುಲಿಯನ್ನು ಸುಟ್ಟು ಹಾಕುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ನಾಗಿ ಮಾತ್ರ "ಹಂಗ್ ಮಾಡ್ಬೇಡ ಮಾರಾಯ, ನಂಗ್ ಮಕ್ಳಿಲ್ಲ ಅಂದಾಗ ನಿನ್ನನ್ನ ಕೊಟ್ಟ ದೇವ್ರದು, ಹುಲಿಯಮ್ಮನ ಹುಲಿ ಹಂಗೆಲ್ಲಾ ಯಾರನ್ನೂ ಹಿಡ್ಯಲ್ಲ, ಬೇರೆ ಯಾವ್ದೋ ಹುಲಿ ಇವ್ರನ್ ಕೊಂದಿರ್ಬೇಕು.. ನಿಂಗ್ ದಮ್ಮಯ್ಯ ಅಂತೀನಿ ದೇವ್ರ್ ಹುಲಿ ತಂಟೆಗೆ ಹೋಗ್ಬೇಡ" ಎಂದು ಗೋಗರೆಯುತ್ತಿರಲು, ಆಕೆಯ ನಾಟಕೀಯ ವರ್ತನೆ ಕಂಡ ಮಾರ, "ಹಾಗಾದ್ರೆ ಬೇರೆ ಹುಲಿಯನ್ನೇ ಕೊಂದು ಬರ್ತೀನಿ ಬಿಡು" ಎಂದು ವ್ಯಂಗ್ಯವಾಗಿ ನಕ್ಕಿದ್ದ. ಅಲ್ಲಿಗೆ ಹೋದ ಸೀನಯ್ಯ ಕೂಡ ದೇವ್ರ್ ಹುಲಿ ಯಾರಿಗೂ ತೊಂದ್ರೆ ಮಾಡಲ್ಲ ದುಡುಕಿ ಅನಾಹುತ ಮಾಡ್ಬೇಡ ಎನ್ನಲು, "ಅಯ್ಯಾ.. ನನ್ ಅಪ್ಪನ್ನ ಕೊಂದ ಪೀಡೆ ಸಾಯ್ಲೇಬೇಕು" ಎಂದು ಬಂದೂಕು ಹಿಡಿದು ಹೊರಟೇ ಬಿಟ್ಟ. ಗಾಬರಿಯಾದ ಸೀನಯ್ಯ "ಏನೇ ನಾಗಿ ಇವ್ನ್ ಹುಟ್ಟಿದಾಗ ಹರಕೆ ತೀರಿಸಿದ್ದು ಬಿಟ್ರೆ ಮತ್ತೆ ಆ ಕಡೆ ಪೂಜೆ ಮಾಡೋಕೂ ಹೋಗಿರ್ಲಿಲ್ವಂತೆ ನಿನ್ ಗಂಡ, ಹೌದಾ?" ಎನ್ನಲು. "ಅಯ್ಯಾ.. ಬಿಡ್ತು ಅನ್ನಿ, ಒಂದ್ ವರ್ಷನೂ ತಪ್ಪಿಸ್ದೇ ಹರಕೆ ತೀರ್ಸಿದಾರೆ, ಆದ್ರೂ ಹಿಂಗಾಯ್ತು ನೋಡಿ" ಎನ್ನುವಷ್ಟರಲ್ಲೇ ಬಂದೂಕಿನಿಂದ ಒಂದರ ಹಿಂದೊಂದರಂತೆ ಮೂರು ಗುಂಡುಗಳು ಸಿಡಿದ ಸದ್ದು ಕೇಳಿ, ಸೀನಯ್ಯ ಮತ್ತು ನಾಗಿ ಫಟ್ಟನೆ ಹುಲಿಯಮ್ಮನ ದೇವಸ್ಥಾನದ ಕಡೆಗೆ ಓಡಿದ್ದರು. ಹುಲಿಮಾರ ಸತ್ತ ಹುಲಿಯ ಹೆಣದ ಮೇಲೆ ಕಾಲಿಟ್ಟು ಗಹಗಹಿಸಿ ನಗುತ್ತಿದ್ದ. ಅವನ ರೌದ್ರಾವತಾರವನ್ನು ಕಂಡ ನಾಗಿ ಅಕ್ಷರಶಃ ನಡುಗಿ ಕುಸಿದು ಕೂತಿದ್ದಳು, "ಏನ್ ಕೆಲ್ಸ ಮಾಡ್ಬಿಟ್ಯೋ ಮಾರ.." ಎಂದು ಓಡಿ ಹೋದ ಸೀನಯ್ಯ ರಕ್ತಸಿಕ್ತವಾಗಿ ಬಿದ್ದಿದ್ದ ಹುಲಿಗೆ ಕೈ ಮುಗಿದು ಅದನ್ನು ದಿಟ್ಟಿಸಿ "ಅಬ್ಬಾ!! ಊರ್ ಉಳೀತು, ಸದ್ಯ ಇದು ದೇವರ ಹುಲಿಯಲ್ಲ" ಎಂದು ನಿಟ್ಟುಸಿರಿಟ್ಟಾಗ, "ಹ್ಞೂಂ.. ದೇವರ ಹುಲಿಯಲ್ಲವಾ? ಇಲ್ಲಿರೋ ಹುಲಿಗಳೆಲ್ಲವೂ ದೇವರ ಹುಲಿಗಳೇ, ನಾನು ಕೊಂದಿದ್ದೂ ದೇವರ ಹುಲಿಯನ್ನೇ, ನನ್ನನ್ನು ಹುಟ್ಟಿಸಿದ ದೇವರ ಹುಲಿಯನ್ನೇ" ಎಂದು ವ್ಯಂಗ್ಯವಾಗಿ ನಕ್ಕ ಹುಲಿಮಾರನ ಕಣ್ಣು ದೂರದ ಪೊದೆಯಲ್ಲಿ ಬಿದ್ದಿದ್ದ ಶಂಕ್ರನ ದೇಹವನ್ನೇ ದಿಟ್ಟಿಸುತ್ತಿತ್ತು. ಸೀನಯ್ಯನ ಅನುಮಾನದ ಕಣ್ಣು ನಾಗಿಯನ್ನೂ, ನಾಗಿಯ ಕಣ್ಣು ಮಾರನನ್ನೂ ಅವಕ್ಕಾಗಿ ನೋಡುತ್ತಿದ್ದವು.

- ಸ್ಕಂದ ಆಗುಂಬೆ


ಈ ಕಥೆ ಕನ್ನಡಪ್ರಭ ದಿನಪತ್ರಿಕೆಯ "ಭಾನುಪ್ರಭ" ಪುರವಣಿಯಲ್ಲಿ ಪ್ರಕಟವಾಗಿದೆ.

Thursday, 29 March 2018

ಇವನ ಪ್ರತಾಪಕ್ಕೆ ನಾನು ಹರಕೆ ಕುರಿ



ಬದುಕು ಕಟ್ಟುವ ಕೆಲಸ ಆರಂಭ ಆಗೋದೇ ಪಿಯುಸಿ ಮುಗಿದ ಮೇಲೆ, ಅಲ್ಲಿಯ ತನಕ ನಮ್ಮ ಗುರಿಯ ಬಗ್ಗೆ ಅರಿವಿದ್ದರೂ, ಸಾಗುವ ದಾರಿಯ ಕುರಿತು ಸ್ಪಷ್ಟತೆ ಇರುವುದಿಲ್ಲ. ಆ ಸಮಯದಲ್ಲಿ ನಮ್ಮ ತೊಳಲಾಟಗಳನ್ನ ಆಲಿಸೋಕೆ ಒಂದೊಳ್ಳೇ ಸ್ನೇಹಮಯಿ ಜೀವದ ಅವಶ್ಯಕತೆ ಖಂಡಿತಾ ಇರುತ್ತದೆ. ಅಂತೆಯೇ ನನಗಿರುವ ಕೆಲವೇ ಕೆಲವು ಬೆರಳೆಣಿಕೆಯಷ್ಟು ಬೆಸ್ಟ್ ಫ್ರೆಂಡ್ಸ್ ಎಂಬುವವರಲ್ಲಿ ಇವನೂ ಒಬ್ಬ, ಹೆಸರು ಶಿವಪ್ರಸಾದ. ನನ್ನೆಲ್ಲಾ ಯಡವಟ್ಟುಗಳಿಗೂ ಸಾಕ್ಷ್ಯ ಹೊಂದಿದವ. ನಮ್ಮ ನಡುವೆ ಅರಿಷಡ್ವರ್ಗಗಳಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ತನಕವೂ ಚರ್ಚೆಗಳಾಗುತ್ತವೆ, ವಯಸ್ಸು ಒಂದೇ ಆಗಿದ್ದರಿಂದ ಹದಿಹರೆಯದ ರಾಮಾಯಣಗಳ ಕುರಿತು ತುಸು ಜಾಸ್ತಿಯೇ ಮಾತನಾಡುತ್ತೇವೆ. ಬೆಳಿಗ್ಗೆ ಸೂರ್ಯ ಏಳುವುದಕ್ಕೆ ಮೊದಲೇ ನನ್ನನ್ನೆಬ್ಬಿಸಿ ನಿದ್ದೆಗಣ್ಣಿನಲ್ಲೇ ಮೊಂಬತ್ತಿಯ ಮುಂದೆ ಕೂರಿಸಿ ಅವನದೇ ಕಲ್ಪನೆಯನ್ನಿಟ್ಟುಕೊಂಡು ಫೋಟೋ‌ ತೆಗೆಯುವ ಇವನ ಹುಚ್ಚಿಗೆ ನಾನು ಹರಕೆಯ ಕುರಿ. ಇವನು ಪ್ರೇಮಪತ್ರ ಬರೆದಾಗ ಅವರಮ್ಮ ಅನುಮಾನಿಸಿದ್ದರಂತೆ, ಆ ಅನುಮಾನ ನಿವಾರಿಸೋಕೆ ನನ್ನ ಅಷ್ಟೂ ಪ್ರೇಮಪತ್ರಗಳನ್ನ ಅವರ ಮುಂದಿಟ್ಟು ತನ್ನನ್ನು ತಾನು ಬಚಾವ್ ಮಾಡಿಕೊಂಡ ಕಿಡಿಗೇಡಿ. ಅತೀ ಮುಗ್ಧನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳೋ ಇವನೊಳಗಿರುವ ಮಹಾನ್ ಕಿಲಾಡಿಯ ಪರಿಚಯ ನನಗಿರುವುದರಿಂದ ಹೆಚ್ಚಿಗೆ ಹೊಗಳಿ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳೋಕೆ ತಯಾರಿಲ್ಲ. ಆದರೆ ಒಂದಂತೂ ಸತ್ಯ ನನಗರಿವಿಲ್ಲದಂತೇ ನನ್ನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ತರುವಲ್ಲಿ ಇವನದೂ ಕೊಂಚ ಪಾಲಿದೆ.

- ಸ್ಕಂದ ಆಗುಂಬೆ



(ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ)

Monday, 5 March 2018

ದಾರಿ ಯಾವುದಯ್ಯಾ.. ಲೈಫಿನ ದಾರಿ ಯಾವುದಯ್ಯಾ??



           

                   ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ಪ್ರೈಮ್ ಟೈಮ್ ಡಿಬೇಟ್ ನಡೆಸಿಕೊಡ್ಬೇಕು.. ನಮಸ್ಕಾರ ನೀವು ನೋಡ್ತಾ ಇದೀರಾ ಸುವರ್ಣ ನ್ಯೂಸ್ ನಾನು ಸ್ಕಂದ ಆಗುಂಬೆ ಅಂತ ಮಾತು ಶುರು ಮಾಡ್ಲಾ..? ಅಯ್ಯೋ ತುಂಬಾ ಹಳೇ ಸ್ಟೈಲ್ ಆಗೋಗಿರುತ್ತೆ ಅಷ್ಟ್ರಲ್ಲಿ.. ಸೋ‌ ಬೇರೆ ಥರ ಏನಾರ್ ಹುಡ್ಕ್ಬೇಕು. ಊಹ್ಞೂಂ ಬೇಡ.. ಆ ವಿಜಯಲಕ್ಷ್ಮಿ ಶಿಬರೂರು ಮೇಡಂಗೆ ಏನ್ ಧೈರ್ಯ ನೋಡು, ಅವ್ರ್ ಥರಾನೇ ಇನ್ವೆಸ್ಟಿಗೇಟಿವ್ ಜರ್ನಲಿಸಂ ಮಾಡ್ಬೇಕು. ಅದೂ ಬೇಡ ಪೇಪರ್ರೇ ಬೆಟರ್ರು ಸ್ವಲ್ಪ ಆದ್ರೂ ಎಥಿಕ್ಸ್ ಉಳ್ಕೊಂಡಿದೆ ಇಲ್ಲೇ ಇದ್ದು ಒಳ್ಳೇ ಹೆಸ್ರು ಮಾಡಣ. ಏಯ್ ರೆಡಿಯೋ ಟ್ರೈ ಮಾಡ್ಬೋದು.‌. ಆರ್ ಜೆ ಆದ್ರೆ ಹೆಂಗೆ..? ಅಥ್ವಾ ಎಂಟ್ರಟೈನ್ಮೆಂಟ್ ಚಾನೆಲ್ ಸೇರ್ಕೊಂಡ್ಬಿಡ್ಲಾ? ಧಾರಾವಾಹಿಗೆ ಸಂಭಾಷಣೆ ಬರ್ದ್ರೆ ಒಳ್ಳೇ ದುಡ್ ಬರುತ್ತಂತೆ ಅದ್ ಕೂಡ ಮಾಡ್ಬೇಕು..‌ ಜಯಂತ್ ಕಾಯ್ಕಿಣಿ ಥರ ಪದ್ಯ ಬರ್ಯೋದ್ ಕಲೀಬೇಕು.. ಒಳ್ಳೇ ಲೈಫು ಅಂದ್ರೆ ಈ ಲೆಕ್ಚರರ್ಸ್ಗಳದ್ದು ಒಳ್ಳೇ ಸ್ಯಾಲ್ರಿನೂ ಇರುತ್ತೆ, ಟೈಮೂ ಇರುತ್ತೆ.. ಅತ್ತೆ ಮಾವನತ್ರ ಹೋಗಿ ಹೆಣ್ ಕೇಳೋಕೆ ಒಂದ್ ಧೈರ್ಯನೂ ಇರತ್ತೆ.. ಉಸ್ತಾದ್ ಹೊಟೇಲ್ ಫಿಲಂ ನೋಡಿ ಮೆಡುಲಾ ಅಬ್ಲಾಂಗೇಟಾದಲ್ಲಿ ವೇರಿಯೇಷನ್ ಆಗಿದೆ ಒಂದ್ ಹೋಟ್ಲು ಇಟ್ ಬಿಡ್ಲಾ..? ಹೇಗೂ ಆಗುಂಬೆ ಪಕ್ದಲ್ಲೇ ಊರಿದೆ ಒಂದ್ ಹೋಂ ಸ್ಟೇ ಮಾಡಿದ್ರೆ ಹೆಂಗೆ..? ಒಂದ್ ಸ್ಕೂಲ್ ಮಾಡ್ಬೇಕು.. ಟ್ರಾವೆಲ್ ಏಜೆನ್ಸಿ ಮಾಡಿದ್ರೆ ಒಳ್ಳೇದು.. ಅದ್ರಲ್ ಲಾಭ ಬಂದ್ರೆ ವಿಜಯ್ ಸಂಕೇಶ್ವರ್ ಥರ ಒಂದ್ ಪೇಪರ್ರು, ಚಾನೆಲ್ಲು ಶುರು ಮಾಡ್ಬೋದು ನೋಡು.. ಅದೆಲ್ಲಕ್ಕಿಂತ ಮೊದ್ಲು ಒಂದ್ ಡಿಎಸ್ಎಲ್ಆರ್ ತಗೋಬೇಕು, ಒಂದ್ ಬೈಕ್ ತಗೊಂಡ್ ಆರಾಮಾಗ್ ಸುತ್ತಾಡ್ಬೇಕು.. ಫಿಲ್ಮಿಗ್ ಹೋಗೋಕ್ ಜೊತೆಗ್ ಒಂದ್ ಜನ ಇಲ್ಲಾ ಅಂತೀನಿ ಒಂದ್ ಹುಡ್ಗಿನ್ ಪಟಾಯಿಸ್ಕೋಬೇಕು.. ಅಬ್ಬಬ್ಬಬ್ಬಾ ಇದೇನ್ ಲೈಫಾ ತರ್ಕಾರಿ ಮಾರ್ಕೆಟ್ಟಾ?? ಇಷ್ಟೊಂದ್ ಆಪ್ಷನ್ ಇದ್ಯಲ್ಲಾ.. ಏನ್ ಮಾಡೋದು ಗುರೂ….?


ಹದಿನೇಳು - ಹದಿನೆಂಟು - ಹತ್ತೊಂಬತ್ತು - ಇಪ್ಪತ್ತು - ಇಪ್ಪತ್ತೊಂದು
ಭಯಂಕರ ಗೊಂದಲದ ವಯಸ್ಸು!! ನನ್ನ ಗುರಿ ಯಾವುದು ಅಂಥ ಸ್ಪಷ್ಟಪಡಿಸಿಕೊಂಡು ಹೋಗೋ ಟೈಮಲ್ಲೇ ಒಂದಷ್ಟು ಕವಲು ದಾರಿಗಳು ಧಿಡೀರನೆ ಪ್ರತ್ಯಕ್ಷವಾಗ್ತಾವೆ..! ಊಹ್ಞೂಂ ಅದು ನನ್ನ ದಾರಿಯಲ್ಲ ಅಂತ ಪದೇ ಪದೇ ನನಗೆ ನಾನೇ ಹೇಳಿಕೊಂಡು ಮತ್ತೊಂದು ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಮತ್ತಷ್ಟು ದಾರಿ! ರಾತ್ರಿ ಮಲಗಿದಾಗ ಅದರಲ್ಲಿ ಹೋದ್ರೆ ಹೇಗಿರುತ್ತೆ? ಇದ್ರಲ್ಲಿ ಹೋದ್ರೆ ಹೇಗಿರುತ್ತೆ? ಅಂತ ಒಂದಷ್ಟು ಕನಸು ಕಾಣೋಕೆ ಶುರುಮಾಡಿದ್ರೆ ಒಂದೊಳ್ಳೇ ಕನಸಿನ ಲೋಕವೇ ಹುಟ್ಕೊಂಡ್ಬಿಡುತ್ತೆ ನೋಡಿ..!

ನನಗೆ ಹತ್ತನೇ ತರಗತಿಯಿಂದಲೇ ಪತ್ರಿಕೋದ್ಯಮದೆಡೆಗೆ ಸೆಳೆತವಿತ್ತು.. ಬಟ್‌ ಟೆಂಥಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ ನೆಕ್ಸ್ಟ್ ಸೈನ್ಸ್ ತಗೊಂಡ್ರೆ ವೆಟರ್ನರಿಗೆ ಒಳ್ಳೇ ಸ್ಕೋಪಿದೆ ನೋಡು ಅಂತ ಒಬ್ರು ಹೇಳಿದ್ ಮಾತು ಕಿವಿಗ್ ಬಿದ್ದಿದ್ದೇ ತಡ, ಹೇಗೂ ನಂಗೆ ದನ, ಕರು, ನಾಯಿ, ಬೆಕ್ಕು ಅಂದ್ರೆ ಲವ್ವು ಸೋ ಈ ಫೀಲ್ಡಲ್ಲಿ ಸಕ್ಸಸ್ ಆಗ್ಬೋದು ಅಂತ ಪಿಸಿಎಂಬಿ ಅಂತ ಫಾರ್ಮ್ ಫಿಲ್ ಮಾಡೇ ಬಿಟ್ಟೆ.. ಎರಡೇ ತಿಂಗ್ಳಲ್ಲಿ ಜೀವನ ಅಲ್ಲೋಲ - ಕಲ್ಲೋಲ. ಸೈನು, ಕಾಸು, ಟ್ಯಾನು, ತೀಟಾ ಅಂತ ಮ್ಯಾಥ್ಸ್ ಕ್ವಾಟ್ಲೆ ಕೊಡ್ತಿದ್ರೆ, ಕೆಮಿಕಲ್ಲು, ಗ್ರಾವಿಟೇಷನ್ನು ಅಂತ ಕೆಮಿಸ್ಟ್ರಿ - ಫಿಸಿಕ್ಸ್ ಎರಡರ ಸಹಭಾಗಿತ್ವದಲ್ಲಿ ಕೀಟ್ಲೆ ಶುರುವಾಗಿತ್ತು, ಇದ್ದಿದ್ರಲ್ಲಿ ಬಯೋಲಜಿಯೇ ಕ್ವೈಟ್ ಇಂಟ್ರೆಸ್ಟಿಂಗ್ ಅನ್ಸಿದ್ದು..!! ಫಸ್ಟ್ ಪಿಯು & ಸೆಕೆಂಡ್ ಪಿಯು ಫೈನಲ್ ಎಕ್ಸಾಂ ಬಿಟ್ರೆ ಮತ್ತೆಲ್ಲಾ ಟೆಸ್ಟು, ಪ್ರಿಪರೇಟರಿಗಳಲ್ಲೂ ಪಿಸಿಎಂಬಿ ಸಬ್ಜೆಕ್ಟ್ಗಳಲ್ಲಿ ಢುಮ್ಕಿ ಹೊಡೆದ ಕೀರ್ತಿ ನನ್ ಮೇಲಿದೆ, ನಮ್ ದೂರದ ನೆಂಟ್ರು ಕಮ್ ಅಜ್ಜ ನಮ್ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ರಿಂದ ಅವ್ರಿಂದಾನೇ ನಾನ್ ಫಸ್ಟ್ ಪಿಯುಸಿ ಪಾಸಾಗಿದ್ದು ಅನ್ನೋ ಡೌಟ್ ಇವತ್ತಿಗೂ ಹಂಗೇ ಇದೆ. ಇಡೀ ಪಿಯುಸಿ ಲೈಫಲ್ಲಿ ಕ್ಲಾಸಿಗಿಂತ ಜಾಸ್ತಿ ಡಿಬೇಟು - ಡ್ರಾಮಾ ಅಂತ ಹೋಗಿ ಅದ್ರಲ್ಲೊಂದಿಷ್ಟು ಪ್ರೈಜ್ ತಗೊಂಡು ಒಂದ್ ರೇಂಜಿಗೆ ಮರ್ಯಾದೆ ಉಳ್ಸ್ಕೊಂಡಿದ್ದೆ, ಜೊತೆಗೆ ನಮ್ ಕನ್ನಡ ಮಾಷ್ಟ್ರು ಶ್ರೀವತ್ಸ ಸರ್ ಕೂಡ ಕ್ಲೋಸ್ ಆಗಿದ್ರಿಂದ ಕಲ್ಚರಲ್ ಆ್ಯಕ್ಟಿವಿಟೀಸಲ್ಲಿ ಈ ಹುಡ್ಗ ಇದಾನೆ ಅಂತ ನನ್ನನ್ನ ಸ್ವಲ್ಪ ಬೆಳಕಿಗೆ ತಂದು ಉಳಿದ ಲೆಕ್ಚರರ್ಸ್ಗಳ ಕೆಂಗಣ್ಣಿಗೆ ಗುರಿಯಾಗೋದ್ ತಪ್ಪಿಸ್ತಿದ್ರು.. ಅದೇನೇ ಆದ್ರೂ ಮುಗ್ಧತೆ ಮಾತ್ರ ಕಳೆದುಕೊಂಡಿರ್ಲಿಲ್ಲ, ಎಲ್ಲವಕ್ಕೂ ಒಂದು ಮುಕ್ತಾಯ ಅನ್ನೋದ್ ಇರುತ್ತೆ ನೋಡಿ, ಅವತ್ತೊಂದಿನ ಡ್ರಾಮಾ ಪ್ರಾಕ್ಟಿಸ್ಸಿಗೆ ಅಂತ ಭಾನುವಾರ ಕಾಲೇಜಿಗೆ ಹೋದೋನಿಗೆ ಮಟಮಟ ಮಧ್ಯಾಹ್ನ ಆಗೋಷ್ಟ್ರಲ್ಲಿ ಜ್ಯೂನಿಯರ್ ಒಬ್ಬಳ ಮೇಲೆ ಸಿಕ್ಕಾಪಟ್ಟೆ ಕ್ರಷ್ ಆಗ್ಬಿಟ್ಟಿತ್ತು.. ಅದು ಒನ್ ವೇ ಲವ್ವಾಗಿ ನಾ ಲವ್ ಲೆಟ್ರು ಬರ್ಯೋ ಮಟ್ಟಕ್ಕೆ ಹಾಳಾಗಿ, ಅದು ಪೇಪರ್ರಲ್ಲಿ ಪಬ್ಲಿಶ್ ಆಗಿ, ಆ ಮ್ಯಾಟ್ರು ಇಡೀ ಕಾಲೇಜಿಗೆಲ್ಲಾ ಗೊತ್ತಾಗಿ, ನಮ್ ಕ್ಲಾಸ್ಮೇಟ್ಸ್ ಎಲ್ಲಾ ರೇಗಿಸೋಕೆ ಶುರು ಮಾಡಿ, ಅವ್ಳೊಂದು ಸಲ ತಿರುಗಿ ಲುಕ್ ಕೊಟ್ಟು ನಗುವಷ್ಟರಲ್ಲಿ ಮುಗ್ಧತೆಗೆ ಕೊನೇ ಮೊಳೆ ಹೊಡೆದಾಗಿತ್ತು.. ಶ್ರೀ ಹರಿ ಕೃಷ್ಣಾರ್ಪಣಮಸ್ತು. ಪಿಯುಸಿ ಮುಗೀತು, ಪಿಸಿಎಂಬಿ ಪಾಸಾಯ್ತು..
ವಾಟ್ ನೆಕ್ಸ್ಟ್? ಅಂತ ಯೋಚಿಸುವಾಗ ಸಂಯುಕ್ತ ಕರ್ನಾಟಕದ ಸ್ಟೇಟ್ ಲೆವೆಲ್ ಕಾಂಪಿಟೇಷನ್ ಒಂದರ ಆ್ಯಡ್ ಕಣ್ಣಿಗೆ ಬಿದ್ದು, ಅಪ್ಪನ ಜೊತೆಗೆ ಹುಬ್ಬಳ್ಳಿಗೆ ಹೋಗಿಯಾಗಿತ್ತು. ಆಕಸ್ಮಿಕ, ಅನಿರೀಕ್ಷಿತ, ಲಕ್ಕು ಏನೆನ್ನಬಹುದೋ ಗೊತ್ತಿಲ್ಲ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಹಲ್ ಕಿರೀತಾ ವೇದಿಕೆ ಮೇಲೆ ನಿಂತಿದ್ದೆ.. ಇಪ್ಪತ್ತೈದ್ ಸಾವ್ರ ದುಡ್ಡು, ಒಂದ್ ದೊಡ್ ಟ್ರೋಫಿ.. ಮಾರನೇ ದಿನ ಪೇಪರ್ ನೋಡಿದ್ರೆ ಫ್ರಂಟ್ ಪೇಜಲ್ಲೇ ಫೋಟೋ ಸಮೇತ "ಚಾಣಾಕ್ಷತನ ಮೆರೆದು ಚಾಣಕ್ಯನಾದ ಆಗುಂಬೆಯ ಸ್ಕಂದ" ಅನ್ನೋ ಹೆಡ್ಲೈನು.. ಹೀಗೇ ಪಿಯುಸಿ ಮುಗ್ದು ಡಿಗ್ರಿ ಸೇರೋಷ್ಟ್ರಲ್ಲಿ ನನ್ನ ಮೂಲ ಆಸಕ್ತಿಯಾದ ಪತ್ರಿಕೋದ್ಯಮ ನನಗೇ ಗೊತ್ತಿಲ್ಲದಂತೆ ನನ್ನ ಸೆಳೆದುಕೊಂಡ್ಬಿಡ್ತು.



ಸೆಕೆಂಡ್ ಇನ್ನಿಂಗ್ಸ್… ಡಿಗ್ರಿ ಲೈಫು..

ಸೈನ್ಸ್ ಟು ಆರ್ಟ್ಸ್.. ಖುಷ್ ಖುಷಿಯಾಗಿ ಡಿಗ್ರಿಗ್ ಸೇರಿದೆ.. ಸ್ಟೇಟ್ ಲೆವೆಲ್ಲಲ್ಲಿ ಫಸ್ಟು.. ಪೇಪರ್ ಫ್ರಂಟ್ ಪೇಜಲ್ಲಿ ಫೋಟೋ.. ಆಲ್ರೆಡಿ ಪಬ್ಲಿಶ್ ಆಗಿರೋ ಒಂದ್ನಾಲ್ಕು ಲವ್ ಲೆಟ್ರು ಇದನ್ನೆಲ್ಲಾ ಗಮನಿಸಿದ ನಮ್ ಲೆಕ್ಚರರ್ ಲೋಹಿತ್ ಸರ್ "ನಿಂಗ್ ಜರ್ನಲಿಸಂನಲ್ಲೇ ಇಂಟ್ರೆಸ್ಟ್ ಇದೆ ಅನ್ನೋದಾದ್ರೆ ಯಾವ್ದಾರ್ ಒಂದ್ ಪೇಪರ್ ಆಫೀಸಿಗೆ ಕಳ್ಸ್ತೀನಿ… ಹೋಗ್ತೀಯಾ" ಅಂತ ಕೇಳಿ ಕನ್ನಡಪ್ರಭ ಆಫೀಸ್ ದಾರಿ ತೋರ್ಸಿದ್ರು. ಅಲ್ಲಿಗೆ ನನ್ನಿಷ್ಟದ ಕ್ಷೇತ್ರದ ಗಂಧಗಾಳಿ ಅಧಿಕೃತವಾಗಿ ಮೈ ಸೋಕಿತ್ತು. ಅಂಶಿ ಪ್ರಸನ್ನಕುಮಾರ್ ಸರ್ ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿದ ದಿನವಿನ್ನೂ ನೆನಪಿದೆ, ಆಮೇಲೆ ದಿನಾ ಸಂಜೆ ಕಾಲೇಜ್ ಮುಗಿಸಿ ಕನ್ನಡಪ್ರಭಕ್ಕೆ ಹೋಗೋದು ರೂಢಿಯಾಯ್ತು.. ಪತ್ರಿಕೋದ್ಯಮದ ಅಆಇಈ ಕಲಿಯೋಕೆ ಶುರುಮಾಡಿದೆ, ಸರಿಯಾಗಿ ಹೋಗಿದ್ರೆ ಇಷ್ಟೊತ್ತಿಗೆ ವರ್ಗೀಯ ವ್ಯಂಜನಗಳ ತನಕ ಆದ್ರೂ ಕಲೀತಿದ್ನೋ? ಏನೋ? ವಾರದಲ್ ಒಂದ್ ದಿನ ಅದೂ ಇದೂ ಕೆಲ್ಸ, ತಿಂಗ್ಳಲ್ ಒಂದ್ ವಾರ ಊರು, ಹಾಗೇ ಹೀಗೇ ಅಂತ ರೆಗ್ಯುಲರ್ಲಿ ಇರ್ರೆಗ್ಯುಲ್ಲರ್ ಆಗಿ ಹೋಗ್ತಾ ಇರೋದ್ರಿಂದ ಔ.. ಅಂ.. ಅಃ ತನಕ ಬಂದು ನಿಂತಿದೆ ವಿದ್ಯಾಭ್ಯಾಸ.
ಇನ್ನೊಂದೆರಡು ತಿಂಗ್ಳಲ್ಲಿ ಡಿಗ್ರಿ ಮುಗ್ಯುತ್ತೆ… ಈಗ ಮತ್ತದೇ ವಾಟ್ ನೆಕ್ಸ್ಟ್? ಅನ್ನೋ ಪ್ರಶ್ನೆ ಹಗಲೂ ರಾತ್ರಿ ಕಾಡೋಕೆ ಶುರು ಮಾಡಿದೆ..
ಕೆಲ್ಸಕ್ ಹೋಗು, ಎಂಎ ಮಾಡು, ಕಾಂಪಿಟೇಟಿವ್ ಎಕ್ಸಾಂ ಬರಿ ಹೀಗೆ ಹತ್ತಾರು ಸಜೆಷನ್ಗಳು ಕಿವಿಗೆ ಬೀಳ್ತಿದೆ. ಈಗ್ಲೇ ಕೆಲ್ಸಕ್ ಸೇರೋವಷ್ಟ್ ಅನಿವಾರ್ಯತೆ ಇಲ್ಲ, ಆಗಿದ್ದಾಗ್ಲಿ ಎಂಎ ಮಾಡಣ ಅಂತ ನಂಗ್ ನಾನೇ ಉತ್ತರ ಹುಡುಕೋಷ್ಟ್ರಲ್ಲಿ ಎಲ್ಲಿ ಎಂಎ ಮಾಡೋದು? ಯಾವ್ ಯುನಿವರ್ಸಿಟಿ ಬೆಟರ್ರು? ಎಂಬೆಲ್ಲಾ ಅಡಿಷನಲ್ ಪ್ರಶ್ನೆಗಳು ಕೈಕಟ್ಕೊಂಡ್ ಎದುರಿಗೆ ನಿಂತ್ಬಿಡ್ತಾವೆ..

ಇರೋ ಭಾರವೇ ಜಾಸ್ತಿಯಾಗಿದೆ ಶಿವಾ ಅನ್ಕೊಳ್ಳೋ ಹೊತ್ತಲ್ಲಿ ಮೊಬೈಲಲ್ಲಿ ನೋಟಿಫಿಕೇಷನ್ ಸೌಂಡ್.. ಅವ್ಳೇ ಮೆಸೇಜ್ ಮಾಡಿರ್ಬೇಕು ಅಂತ ಖುಷಿಯಿಂದ ನೋಡಿದ್ರೆ ಯಾವ್ದೋ ಗ್ರೂಪಲ್ಲಿ ಮಲ್ಕೊಂಡಿರೋ ಮಗು ಚಿತ್ರದ್ ಕೆಳ್ಗೆ ಶುಭರಾತ್ರಿ ಅಂತ ಗೀಚಿರೋ ಮೆಸೇಜು, ದೇಹದಲ್ಲಿ ಹಡ್ರೆಂಡ್ ಡಿಗ್ರಿ ಸೆಲ್ಸಿಯಸ್ ತಾಪಮಾನ.. ಇರೋಬರೋ ಗ್ರೂಪ್ಗಳನ್ನೆಲ್ಲಾ ಮ್ಯೂಟ್ ಮಾಡಿ.. ಅವಳ ನಂಬರ್ರಿಗೆ ಮಾತ್ರ ಲಾಂಗ್ ವೈಬ್ರೇಷನ್ ಆಪ್ಷನ್ ಸೆಲೆಕ್ಟ್ ಮಾಡಿ, ಹಾಯ್..‌ ಅಂತ ಮೆಸೇಜ್ ಕಳ್ಸಿ ಎರ್ಡೆರ್ಡ್ ನಿಮ್ಷಕ್ಕೂ ಅವ್ಳ್ ಆನ್ಲೈನಿಗ್ ಬಂದ್ಲಾ ಅಂತಾ ಕಾಯೋದು ಒಂಥರಾ ಖುಷಿ ಕೊಡುತ್ತೆ, ಆನ್ಲೈನಲ್ಲಿದ್ದೂ ಮೆಸೇಜ್ ನೋಡಿಲ್ಲ ಅಂದ್ರೆ ಬೇಜಾರು.. ಮೆಸೇಜ್ ನೋಡಿಯೂ ರಿಪ್ಲೈ ಮಾಡಿಲ್ಲ ಅಂದ್ರೆ ವಿಪರೀತ ಸಂಕಟ.. ಲಾಂಗ್ ವೈಬ್ರೇಷನ್.. ಪಕ್ಕಾ ಅವ್ಳದ್ದೇ ಮೆಸೇಜು ಅಂತ ಓಪನ್ ಮಾಡಿದ್ರೆ ಮಲ್ಕೋ ಸುಮ್ನೆ.. ಬೈ ಅನ್ನೋ ರೆಡಿಮೇಡ್ ಮೆಸೇಜು, ಮೊದಮೊದಲೆಲ್ಲಾ ಬೇಜಾರ್ ಮಾಡ್ಕೊತ್ತಿದ್ದ ಮನ್ಸು ಬರ್ತಾ ಬರ್ತಾ ರೂಢಿ ಮಾಡ್ಕೊಂಡ್ ಬಿಡ್ತು.. ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ಅವಳಾಗೇ ಖುಷಿಯಿಂದ ಮಾತಾಡಿದಾಗ ದೀಪಾವಳಿ.. ಉಳಿದ ಸಮಯವೆಲ್ಲಾ ಸೂತಕದಲ್ಲಿ ಬರೋ ಹಬ್ಬಗಳಿದ್ದಂತೆ.. ಇವತ್ತಿಗೂ ಅವಳು ಎದುರಿಗೆ ಸಿಕ್ಕಾಗ ಮಾತು ಹೊರಡಲ್ಲ.. ಒನ್ ವೇ ಲವ್ ಹಣೆಬರಹವೇ ಇಷ್ಟು ಅವ್ರಿಗ್ ಲವ್ವಾಗಲ್ಲ, ನಮ್ಗ್ ಬ್ರೇಕಪ್ ಆಗಲ್ಲ ಅಂತ ಬಯ್ಕೊಂಡು.. ಬರೀ ಐದರ ಸ್ಪೀಡಲ್ಲೇ ತಿರುಗೋ ಟೇಬಲ್ ಫ್ಯಾನನ್ನ ಮುಖಕ್ಕೆ ಗಾಳಿ ಬರೋ ಥರ ಇಟ್ಕೊಂಡ್ ಮಲಗ್ತೀನಿ… ಮತ್ತೆ ಕನ್ಸು ಬೀಳುತ್ತೆ - ಜರ್ನಲಿಸ್ಟ್? ಆರ್ ಜೆ? ಸ್ಕೂಲು? ಲೆಕ್ಚರರ್? ಟ್ರಾವೆಲ್ ಏಜೆನ್ಸಿ? ಹೋಟೆಲ್ಲು? ಹೋಂ ಸ್ಟೇ? ಏನ್ ಮಾಡಣ.. ಯಾವ್ದ್ ಮಾಡಣ..? ಆಪ್ಷನ್ಸ್ ಸಿಕ್ಕಾಪಟ್ಟೆ ಇದಾವೆ.. ಗೊಂದಲ ಮುಂದುವರಿಯುತ್ತದೆ.




- ಸ್ಕಂದ ಆಗುಂಬೆ

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...