ಓದು 2019 : ಬಸವರಾಜ ವಿಳಾಸ


ಯಥಾಪ್ರಕಾರ ವರ್ಷವೊಂದರ ಅಂಚಿಗೆ ಬಂದು ನಿಂತಿದ್ದೇವೆ. ಈಗೊಮ್ಮೆ ನಿಂತು 2019ರಲ್ಲಿ ನಾನು ಓದಿದ ಪುಸ್ತಕಗಳನ್ನು ಮೆಲುಕು ಹಾಕಿದರೆ, ಮೊದಲು ಕಾಣಿಸುವುದು ಇತ್ತೀಚೆಗೆ ಬಿಡುಗಡೆಯಾದ, ವಿಕಾಸ್ ನೇಗಿಲೋಣಿಯವರ  "ಬಸವರಾಜ ವಿಳಾಸ" ಕಥಾ ಸಂಕಲನ.

"ಬಸವರಾಜ ವಿಳಾಸ" ಓದುಗರ ಎದೆಯೊಳಗೆ ಸಲೀಸಾಗಿ ಇಳಿಯುವ ಒಂದು ಕಥಾ ಸಂಕಲನ. ಅದರಲ್ಲಿನ ಕತೆಗಳು ಕಾಲ್ಪನಿಕ ಕಾಲ, ದೇಶಗಳಿಂದ ಇಳಿದು ಬಂದವುಗಳಲ್ಲ ಅಥವಾ ಒತ್ತಾಯಪೂರ್ವಕವಾಗಿ ಕಟ್ಟಿದವುಗಳಲ್ಲ.

ಆ ಕತೆಗಳನ್ನು ಓದುವಾಗ ನಮ್ಮ ಊರು, ನಾವು ಕಂಡ ಪಾತ್ರ, ನಾವೇ ಮರೆತ ಹಳೆಯ ಘಟನೆ ಸೇರಿದಂತೆ ನಮ್ಮೊಳಗಿನ ತವಕ - ತಲ್ಲಣಗಳೆಲ್ಲ ಒಂದರ ಹಿಂದೊಂದು ಎದುರಾಗಿ ನಮ್ಮನ್ನು ಎಚ್ಚರಿಸುತ್ತವೆ. ಜೊತೆಗೆ, ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತವೆ.

ಈ ಕಥಾಸಂಕಲನದ - ಅವರವರ ಭಾಗ, ಅಂಥವೇ ಎರಡು ಗಿಣಿ ಕಾಣೋ ಬಳೆಗಾರ, ಚಿದಂಬರ ರಹಸ್ಯ, ಕಾರಣ ಇನ್ನೂ ತಿಳಿದು ಬಂದಿಲ್ಲ ಸೇರಿದಂತೆ ಬಹುತೇಕ ಎಲ್ಲಾ ಕತೆಗಳು ನಮಗೆ ನಮ್ಮ ಜಗತ್ತನ್ನು ಹೊಸ ಕಿಟಕಿಯೊಂದರ ಮೂಲಕ ತೋರಿಸುತ್ತವೆ. ಆ ಕತೆಗಳಲ್ಲಿ ಬರುವ ಪಾತ್ರಗಳು ಕೂಡ ಓದಿ ಮುಗಿಸಿದ ನಂತರವೂ ಎದೆಯಲ್ಲಿ ಕೂತು ಕಾಡುತ್ತವೆ.

ತುಂಬಾ ಸರಳವಾಗಿ ಹೇಳುವುದಾದರೆ "ಬಸವರಾಜ ವಿಳಾಸ" ಸಂಕಲನ ವಿಭಿನ್ನ ಕತೆಗಳ ಒಂದು ಮಳಿಗೆ.
ಇಂತಹದ್ದೊಂದು ಅಪರೂಪದ ಮಳಿಗೆಯನ್ನು ಈ ವರ್ಷ ಪರಿಚಯಿಸಿದ್ದಕ್ಕಾಗಿ ವಿಕಾಸ್ ನೇಗಿಲೋಣಿಯವರಿಗೆ ಧನ್ಯವಾದಗಳನ್ನು ತಿಳಿಸಲೇಬೇಕು.



- ಸ್ಕಂದ ಆಗುಂಬೆ.

ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಭಾನುಪ್ರಭ ಪುರವಣಿಯಲ್ಲಿ ಪ್ರಕಟವಾಗಿದೆ.


ಅಪ್ರಕಟಿತ ಅಭಿಪ್ರಾಯ :

ನನ್ನ ಅತ್ತೆ ಮನೆಗೆ ಹೋಗುವ ದಾರಿಯ ಒಂದು ತಿರುವಿನಲ್ಲಿ ಸಿಗುವ ಊರೊಂದರ ಹೆಸರು ನೇಗಿಲೋಣಿ. ಚಿಕ್ಕವನಾಗಿದ್ದಾಗಿಂದಲೂ ಆ ದಾರಿಯಲ್ಲಿ ಸಾಕಷ್ಟು ಬಾರಿ ತಿರುಗಾಡಿರುವೆನಾದರೂ "ನೇಗಿಲೋಣಿ" ಎಂಬ ಬೋರ್ಡನ್ನು ತಪ್ಪದೇ ಗಮನಿಸುವ ಅಭ್ಯಾಸ ಬೆಳೆದಿದ್ದು ಮಾತ್ರ ವಿಕಾಸ್ ನೇಗಿಲೋಣಿಯವರ ಪರಿಚಯವಾದ ಮೇಲೆ.

ನಮ್ಮೂರಿಗೂ, ನೇಗಿಲೋಣಿಗೂ ನಡುವೆ ತೀರಾ ಅಂತರವೇನಿಲ್ಲ. ಅಬ್ಬಬ್ಬಾ ಎಂದರೆ ಒಂದು ಗಂಟೆಯ ಹಾದಿ. ಆದರೆ, ನಾನು, ವಿಕಾಸ್ ಸರ್ ಅವರನ್ನು ಮೊದಲು ಭೇಟಿಯಾಗಿದ್ದು ಮಾತ್ರ ಈ ಎರಡೂ ಊರುಗಳಿಂದ ದೂರದಲ್ಲಿರುವ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ. ಪರಿಚಯ ಮಾಡಿಸಿಕೊಟ್ಟಿದ್ದು ಅದೇ ನೇಗಿಲೋಣಿಯನ್ನು ದಾಟಿ ಮುಂದೆ ಹೋದರೆ ಸಿಗುವ ನನ್ನ ಅತ್ತೆಯ ಮನೆಗೇ ಸೇರಿದ, ಆದರೆ ಬೆಂಗಳೂರಿನಲ್ಲಿರುವ ಇನ್ನೊಬ್ಬರು ಅತ್ತೆ, ಮಾಲಿನಿ ಅತ್ತೆ.



ಹೀಗೆ ಈ ಸಂಬಂಧ, ಸಂಪರ್ಕಗಳೆಲ್ಲಾ ಹೇಗೆ ಬೇಕಾದರೂ ಬೆಳೆಯಬಹುದು ಥೇಟ್ ಕತೆಗಳಂತೆಯೇ ಅಂತ ಒಮ್ಮೊಮ್ಮೆ ಅನ್ನಿಸಿಬಿಡುತ್ತೆ.
ನನಗೆ ಕತೆ ಓದುವುದೆಂದರೆ ಖುಷಿ. ಅದರಲ್ಲೂ ಕತೆಯಲ್ಲಿ ಬರುವ ಪಾತ್ರಗಳು ನಮಗೆ ಆಪ್ತವಾಗುತ್ತಾ ಹೋದಾಗ, ಕತೆಯ ಯಾವುದೋ ಒಂದು ಘಟನೆ ನಮ್ಮ ನೆನಪುಗಳನ್ನು ಕೆದಕಿದಾಗ, ಕತೆಯಲ್ಲಿ ಬರುವ ಜಾಗ, ಊರು ನಮ್ಮವೇ ಎನ್ನಿಸಿಬಿಟ್ಟಾಗ ನನಗೇ ಗೊತ್ತಿಲ್ಲದಂತೆ ಕತೆ ತನ್ನನ್ನು ಓದಿಸಿಕೊಂಡು ಬಿಡುತ್ತದೆ.
ವಿಕಾಸ್ ಸರ್ ಕತೆಗಳನ್ನು ಓದುವಾಗ ಹಲವೆಡೆ ನನಗೆ ಈ ಅನುಭವ ಆಗಿದೆ. ಹತ್ತಿರದ ಊರಿನವರಾಗಿರುವುದಕ್ಕೋ, ಯಾವಾಗಲೋ ಮಾತನಾಡುವಾಗ ಮಿಂಚಿನಂತೆ ಬಂದು ಹೋಗುವ ಘಟನೆಯ ಎಳೆಗಳು ಕತೆಯ ನಡುವೆಲ್ಲೋ ಸಿಕ್ಕಿ ಮುದ ನೀಡುವುದಕ್ಕೋ ಅಥವಾ ಕತೆಯಲ್ಲಿ ಬರುವ ಭಾಷೆ, ಪದಗಳ ಕಾರಣಕ್ಕೋ… ಅವರ ಕತೆಗಳು ಹೆಚ್ಚೆಚ್ಚು ಹತ್ತಿರವಾಗುತ್ತವೆ.

ವಿಕಾಸ್ ಸರ್ ಅವರ "ಮಳೆಗಾಲ ಬಂದು ಬಾಗಿಲು ತಟ್ಟಿತು" ಕಥಾ ಸಂಕಲನ ಓದಿದಾಗ ಹೀಗೆ ಅನ್ನಿಸಿತ್ತು. ಈಗ ಬಂದಿರುವ ಹೊಸ ಕಥಾ ಸಂಕಲನ "ಬಸವರಾಜ ವಿಳಾಸ"ವನ್ನು ಓದಿದಾಗಲೂ ಮತ್ತೆ ಅದೇ ಅನುಭವವಾಗಿದೆ.
ಬಸವರಾಜ ವಿಳಾಸದಲ್ಲಿರುವ ಕೆಲ ಕತೆಗಳನ್ನು ಈ ಮೊದಲೇ ಓದಿಯಾಗಿತ್ತಾದ್ದರಿಂದ ಮೊದಲ ಬಾರಿಗೆ ಕಥಾ ಸಂಕಲನವೊಂದು ಪ್ರಕಟವಾಗುವ ಮುನ್ನವೇ ಅದರ ಕತೆಗಳನ್ನು ಓದಿರುವೆನಲ್ಲಾ ಎಂಬ ಖುಷಿ ಆಗಾಗ ಕಾಣಿಸಿಕೊಳ್ಳುತ್ತಲೇ ಇತ್ತು. ಬಸವರಾಜ ವಿಳಾಸದ ಕುರಿತು ಹೆಚ್ಚು ಹೇಳಲಿಕ್ಕೆ ಹೋಗುವುದಿಲ್ಲ, ಅಲ್ಲಿನ ಕತೆಗಳನ್ನು ನೀವು ಓದಿದಾಗಲೇ ಆ ಖುಷಿ ದಕ್ಕುವುದಕ್ಕೆ ಸಾಧ್ಯ.

ನನ್ನ ಪಾಲಿಗೆ "ಬಸವರಾಜ ವಿಳಾಸ" ಕತೆಗಳಾಚೆಗೂ ಹೊಸ ಖುಷಿಯನ್ನು ನೀಡಿದೆ. ಅದನ್ನು ಒಂಚೂರಾದರೂ ವ್ಯಕ್ತಪಡಿಸಲೇಬೇಕು.
ಪುಸ್ತಕದ ಹಿಂಬದಿಯ ಪುಟಕ್ಕೆ ಒಂದೊಳ್ಳೇ ಫೋಟೋ ಬೇಕು. ನಿಮ್ಮೂರಿಗೆ ಬಂದಾಗ ತೆಗೆದ ಫೋಟೋ ಯಾವುದಾದರೂ ಇದ್ದರೆ ಕಳುಹಿಸಿ ಎಂದು ವಿಕಾಸ್ ಸರ್ ಹೇಳಿದಾಗಲೇ ನನಗೆ ವಿಪರೀತ ಖುಷಿಯಾಗಿತ್ತು. ಆದರೆ, ಆ ಫೋಟೋವನ್ನು ಬಳಸಿಕೊಳ್ಳುವ ಜೊತೆಗೆ ನನ್ನ ಹೆಸರನ್ನು ಪ್ರಕಟಿಸಿದ್ದು, ಹಾಗೆಯೇ ಕತೆಯ ಮೊದಲ ಓದುಗರ ಸಾಲಿನಲ್ಲೂ ನನ್ನನ್ನು ಸೇರಿಸಿ ನೆನೆಸಿಕೊಂಡಿದ್ದು ನನಗೆ ಅನಿರೀಕ್ಷಿತ ಅಚ್ಚರಿ ಮತ್ತು ಪುಳಕ.
ಪುಸ್ತಕದ ಜೊತೆಗೆ ಇಷ್ಟೆಲ್ಲಾ ಖುಷಿಗಳನ್ನು ಕೊಟ್ಟಿರುವ ವಿಕಾಸ್ ಸರ್‌ಗೆ ನನ್ನ ಪ್ರೀತಿಪೂರ್ವಕ ನಮಸ್ಕಾರಗಳು.

ಹಾಗೆಯೇ,
ಬಸವರಾಜ ವಿಳಾಸ ಓದಿ ಆಯ್ತು, ಮುಂದಿನ ಪುಸ್ತಕ ಯಾವಾಗ ವಿಕಾಸ್ ಸರ್ ಎಂದು ಈ ಮೂಲಕವೇ ಕೇಳ ಬಯಸುತ್ತೇನೆ…

Comments

Popular posts from this blog

"ಕಂದ" ಪದ್ಯ

ಆಗುಂಬೆ ಎಂಬ ಹಸಿರುಲೋಕ!

ಬರಗಾಲ