Posts

Showing posts from February, 2019

ಪುಡಿಯಾದ ಕನ್ನಡಿಯಲ್ಲಿ ಪ್ರತಿಬಿಂಬ ಹುಡುಕುವುದು ಕಷ್ಟ ಕಣೇ ಹುಡುಗಿ!

Image
ಪಾರಿಜಾತ, ಅರಳುವ ಮೊದಲೇ ಬಾಡಿದ ಹೂವಂತೆ, ಮಳೆಗಾಲ ಮುಗಿಯುವ ಮೊದಲೇ ಬತ್ತಿದ ನದಿಯಂತೆ, ಊರು ತಲುಪುವ ಮೊದಲೇ ಕೊನೆಯಾದ ರಸ್ತೆಯಂತೆ. ಅಗಾಧವಾಗಿ ಅನುಭವಿಸಿಕೊಳ್ಳಬೇಕಿದ್ದ ಭಾವವೊಂದು ಅಕಾಲಿಕವಾಗಿ ಸ್ತಬ್ಧಗೊಂಡು ಜೀವ ಹಿಂಡುತ್ತಿದೆ. ವಿನಾಕಾರಣ ನಿಂತು ಹೋದ ಪ್ರೇಮ ಶಕೆಯೊಂದಕ್ಕೆ ಮರುಚಾಲನೆ ನೀಡುವ ಮನಸ್ಸಾಗಿದೆ, ಹಳೇ ಹುರುಪಿನೊಂದಿಗೆ ಮತ್ತೆ ನಿನ್ನೆದುರು ಹಾಜರಾಗುತ್ತಿದ್ದೇನೆ, ಶರಣಾಗತ ವತ್ಸಲೆ..! ಒಲವ ರಥಬೀದಿಯಲಿ ನಿನ್ನ ಗೆಜ್ಜೆ ಸದ್ದು ಕೇಳದೆ ಯುಗಗಳಾದಂತೆ ಭಾಸವಾಗುತ್ತಿದೆ. ಊರೂರು ಅಲೆವ ಅಲೆಮಾರಿಯೊಬ್ಬ ತನ್ನ ವಿಳಾಸವ ತಾನೇ ಮರೆತಂತೆ, ದಡವ ಮುಟ್ಟಿ ಹಿಂತಿರುಗುವಾಗ ಕಡಲ ಅಲೆಯೊಂದು ನಿಟ್ಟುಸಿರ ಬಿಗಿಹಿಡಿದು ಬಿಕ್ಕಿದಂತೆ, ನಿನ್ನಿಂದ ನೂರು ಮೈಲುಗಳಾಚೆ ದೂರದ ಊರಿನಲ್ಲಿ ಏಕಾಂಗಿಯಾಗಿ ನಿಂತು ಪರಿತಪಿಸುತ್ತಿರುವೆ. ನಿನ್ನ ಅನುಪಸ್ಥಿತಿ ಈ ಪರಿ ಕಾಡಬಹುದೆಂದು ನಾನೆಣಿಸಿರಲಿಲ್ಲ. ಪ್ರೀತಿಯ ಅಗಣಿತ ಹಂತಗಳಲ್ಲಿ ಒಂದಾದ ವಿರಹಕ್ಕೆ ಬೇಕು ಬೇಕಂತಲೇ ಬಿದ್ದ ನನ್ನಿಂದ ಇಂತಹದ್ದೊಂದು ಪತ್ರವನ್ನು ಈ ಹೊತ್ತಿನಲ್ಲಿ ನೀನೂ ನಿರೀಕ್ಷಿಸಿರಲಿಕ್ಕಿಲ್ಲ. ಮಿತಿಯಿಲ್ಲದೇ ಸುಡುತ್ತಿರುವ ವಿರಹವನ್ನು ಮರೆಮಾಚಿ ನಾಟಕದ ನಗು ಬೀರುವುದು ನನಗಿನ್ನು ಅಸಾಧ್ಯ. ಮುಚ್ಚು ಮರೆಯಿಲ್ಲದೆಯೇ ಒಪ್ಪಿಕೊಳ್ಳುವೆ, ವಿರಹ ವೇದನೆಯನ್ನು ಎದುರಿಸುವಲ್ಲಿ ಸಂಪೂರ್ಣ ಸೋತಿದ್ದೇನೆ. ತಡರಾತ್ರಿಯ ಕನಸುಗಳೆಲ್ಲಾ ನಿನಗೆ ಕಂದಾಯ ಕಟ್ಟುವುದರಲ್ಲೇ ತಲ್ಲೀನವಾಗಿರುವಾಗ ಸುಳ್ಳು