Posts

Showing posts from December, 2017

ನನ್ನದೆಂತದೋ‌ ಗೋಳು..

Image
ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ? ಊಹ್ಞೂಂ... ಇದನ್ನೆಲ್ಲಾ ನಾ ಹೇಗೆ ಹೇಳಲಿ? ಹುಟ್ಟಿ ಇಪ್ಪತ್ತು ಚಳಿಗಾಲ ಕಳೆದಿಲ್ಲ, ಇನ್ನೂ ಎಳೆಬಿಸಿಲು ಕಂಡರೆ ಮುದುರಿ ಕುಳಿತುಕೊಳ್ಳುವ ನನಗೆ ಇದನ್ನು ವಿವರಿಸಬಲ್ಲ ಅನುಭವ ದಕ್ಕುವುದೆಂತು? ಅನುಭವದ ಬದಲಾಗಿ ಒಂದಷ್ಟು ಅನುಮಾನಗಳು ಬಲಿತಿವೆ, ಪದೇ ಪದೇ ಕಾಡುತ್ತವೆ, ಕೊರೆಯುತ್ತವೆ.. ನಂಗೇನು ಗೊತ್ತಿಲ್ಲ ಬಿಟ್ಟುಬಿಡು ಎಂದಾಗ ತಲೆ ಮೊಟಕಿ ಹೋಗಿ ಉತ್ತರ ಹುಡುಕೋ ಸೋಂಭೇರಿ ಎಂದು ಗದರುತ್ತವೆ. ಅಯ್ಯೋ!! ಹಾಳು ಚಳಿ.. ಮುರುಟಿ ಕೂತಷ್ಟು ದೇಹದ ಸಂದುಗಳಲ್ಲೆಲ್ಲಾ ಓಡಾಡುತ್ತದೆ, ಬೆಚ್ಚಗೆ ಮಲಗೋಣ ಎಂದರೆ ಇದೊಂದು ಪೀಕಲಾಟ, ಆಗಲ್ಲಪ್ಪಾ!! ಇದ್ದ ವಿಷಯವನ್ನು ಇದ್ದಷ್ಟೇ ಹೇಳಿದರೆ ಚೋಟುದ್ದ, ಅಷ್ಟರಲ್ಲೇ ಹೇಳಿ ಮುಗಿಸಬಾರದಾ ಮಾರಾಯ ಎಂದು ಒಳಗೊಬ್ಬ ಕೂಗುತ್ತಿದ್ದಾರೆ.. ಕಿವುಡು ಬೆರಳುಗಳೆರೆಡು ದಿಕ್ಕಿಗೊಂದರಂತೆ ಬಿದ್ದಿರುವ ಅಕ್ಷರವನ್ನು ಕುಟ್ಟಿಕುಟ್ಟಿ ಕಥೆ ಕಟ್ಟುತ್ತಿವೆ, ಸಾಕ್ಷಿಗೆ ನಿದ್ದೆಗೆಟ್ಟಿರುವ ಕಣ್ಣಿವೆ! ಎಲ್ಲಿಂದ ಶುರು ಮಾಡಿದೆ?? ಹ್ಞಾಂ.. ವಿಷಯಕ್ಕೆ ಬರ್ತೇನೆ. ಎಲ್ಲಾ ಸರಿ!! ಒಂದು ದಿನದಲ್ಲಿ ಅದೆಷ್ಟು ಭಾವನೆಗಳನ್ನು ನಿಜವಾಗಿ ಅನುಭವಿಸೋಕೆ ಸಾಧ್ಯ? ಒಂದು, ಎರಡು, ಮೂರು.....ನೂರು?? ನೂರಾ!! ನೂರೆಲ್ಲಾ ಗಂಟೆಯಲ್ಲೇ ಆಗಿಹೋಗ್ಬೋದು ಕಣಾ.. ಅಂತ ರಾಗ ತೆಗೆಯುತ್ತಾನೆ ಒಳಗಿನವನು.

ಹಸಿರು ಲಂಗದ ಹುಡುಗಿ

Image
ಹಸಿರು ಲಂಗದ ಹುಡುಗಿ ಓರೆ ಬೈತಲೆ ತೆಗೆದು ಮುಂಗುರುಳ ಸುತ್ತಿಟ್ಟು ನಗೆ ಚೆಲ್ಲುತಾಳೆ.. ಸುರಗಿ ಸಂಪಿಗೆ ಜಾಜಿ ಮಲ್ಲಿಗೆ ಮಂದಾರ ಸುರಿದು ಮಾಲೆಯ ಕಟ್ಟಿ ಘಮ್ಮೆನ್ನುತಾಳೆ.. ಅಗಲ ಹಣೆ ನಡುವೆ ಚುಕ್ಕಿ ಬೊಟ್ಟನು ಇಟ್ಟು ಆಗಾಗ ತಿರುಗಿ ಹುಬ್ಬೆತ್ತುತಾಳೆ.. ಕಪ್ಪು ಕಾಡಿಗೆ ಹಚ್ಚಿ ಬೆರಗು ನೋಟ ಚೆಲ್ಲಿ ಕಣ್ಣ ಬಾಣ ನೆಟ್ಟು ಗುರಿ ಹೂಡುತಾಳೆ.. ಹೊಳೆವ ಬಳೆ ಕಾಲ್ಗೆಜ್ಜೆ ಚೋಟುದ್ದ ಕಿವಿಯೋಲೆ ಎಳೆ ಸರವ ತೊಟ್ಟು ಘಲ್ಲೆನ್ನುತಾಳೆ.. ತುಂಬು ಹರೆಯದ ಬಾಲೆ ಎಳಿತಾಳೆ ಸೆಳಿತಾಳೆ ಆಗಾಗ ಬಂದು ಎದೆ ತುಳಿಯುತಾಳೆ.. ಇಂತಿಷ್ಟು ಕಾರಣವೋ ಇನ್ನೆಷ್ಟು ಕಾರಣವೋ ಹಸಿರು ಲಂಗದ ಹುಡುಗಿ ಮನ ಕದಿಯುತಾಳೆ ಮಾತೇ ಮರೆಯುತಿದೆ ಎದೆ ಜೋರು ಬಡಿಯುತಿದೆ ಹೋಗಿ ಹೇಳಿದರೀಗ ಏನೆನ್ನುತಾಳೆ..? - ಅನಾಸ್ಕ

ಸಂದರ್ಶನ : ಅಂಶಿ ಪ್ರಸನ್ನಕುಮಾರ್

Image
"ಕನ್ನಡಪ್ರಭ" - ನಾನು ಅತ್ಯಂತ ಇಷ್ಟಪಡುವ ದಿನಪತ್ರಿಕೆ. ಪತ್ರಿಕೋದ್ಯಮದೆಡೆಗೆ ಬಾಲ್ಯದಿಂದಲೂ ಆಸಕ್ತಿಯಿದ್ದರೂ ಅದರೆಡೆಗೆ ಕುತೂಹಲ ಮೂಡಿಸಿದ್ದು ಕನ್ನಡಪ್ರಭ. ಪಿಯುಸಿ ಮುಗಿಸಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಮಗೆ ಉಪನ್ಯಾಸಕರಾಗಿದ್ದ ಲೋಹಿತ್ ಸರ್ ನನ್ನನ್ನು ಕರೆದು ಯಾವುದಾದರು ಪತ್ರಿಕೆಯಲ್ಲಿ Internship ಮಾಡ್ತೀಯಾ? ಎಂದಾಗ ಖುಷಿಯಿಂದ ಹ್ಞೂಂ ಎಂದಿದ್ದೆ. ಹಾಗಾದರೆ ಕನ್ನಡಪ್ರಭ ಕಚೇರಿಗೆ ಹೋಗು ನಾನು ಅಂಶಿ ಸರ್ ಹತ್ತಿರ ಮಾತನಾಡಿದ್ದೇನೆ ಎಂದಾಗಲಂತೂ ಹಿರಿಹಿರಿ ಹಿಗ್ಗಿದ್ದೆ. ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ಈ ಮೂರು ವರ್ಷಗಳ ಅವಧಿಯಲ್ಲಿ ದಿನದಿನವೂ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ, ಮೈಸೂರಿನ ಕನ್ನಡಪ್ರಭ ಕಚೇರಿ ನನಗೆ ಕಾಲೇಜಿಗಿಂತಲೂ ಹೆಚ್ಚಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಪ್ರತಿಯೊಬ್ಬರೂ ನನಗೆ ಅಣ್ಣಂದಿರ ಹಾಗೆ ಸಿಡುಕದೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲೂ ಮೈಸೂರು ಆವೃತ್ತಿಯ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಸರ್ ಅವರಂತೂ ಮಾರ್ಗದರ್ಶನದ ಜೊತೆಜೊತೆಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಆಗಾಗ ನಾನು ಕಚೇರಿಗೆ ಗೈರಾಗುತ್ತಲೇ ಇರುವುದರಿಂದ "Regularly Irregular fellow" ಎಂಬ ಪಟ್ಟವನ್ನು ಕಟ್ಟಿ ರೇಗಿಸುತ್ತಿರುತ್ತಾರೆ. ಕನ್ನಡಪ್ರಭದಲ್ಲಿ ನನ್ನ ಬೈಲೈನ್ ಬಂದಾಗಲೆಲ್ಲಾ ಹಲವರು ಅರೆ!! ಕೆಲಸಕ್ಕೆ ಸೇರಿಕೊಂಡಾಯ್ತಾ