Posts

"ಕಂದ" ಪದ್ಯ

Image
ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು, ಜೋರು ಕೂಗು ಬಾಯಿ ಜೊಲ್ಲು ಇಳಿದರೆ ನಮ್ಮ ಕಂದ ಬಹಳ ಅಂದ ಗುಮ್ಮನಂತೆ ಕೂತರೆ ಕೆನ್ನೆ ದಪ್ಪ ಮಾಡಿಕೊಂಡು ತುಟಿಯ ಮುಚ್ಚಿಕೊಂಡರೆ ಸಾಕು ಕಂದ‌ ಇಷ್ಟು ಚಂದ ಇನ್ನು ಹೊಗಳಲಾರೆನು ಸಿಟ್ಟು, ಸಿಡುಕು ಬಿಟ್ಟರೀಗ ಮುದ್ದು ಮಾಡಿ ಬಿಡುವೆನು...! - ಸ್ಕಂದ ಆಗುಂಬೆ ಈ ಪದ್ಯ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ

ವಿವಿಧತೆಯಿಲ್ಲದ ಏಕತೆ ಏತಕೆ?

Image
ವಿವಾದಗಳೆಲ್ಲಾ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಸಹಜ ಎನ್ನಿಸಿದರೂ, ಅದೊರಳಗಿನ ಸೂಕ್ಷ್ಮತೆಯನ್ನು ಅರಿತು ನಿಭಾಯಿಸದಿದ್ದಲ್ಲಿ ಇವುಗಳೇ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಭಾರತದಲ್ಲಿ ಸುಲಲಿತ ಆಡಳಿತ ಹಾಗೂ ಜನಸಾಮಾನ್ಯರ ಅನುಕೂಲವನ್ನು ದೃಷ್ಟಿಯಲ್ಲಿರಿಸಿಕೊಂಡು ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಅವರದೇ ಆದ ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಬಳಸಲಾಗುತ್ತಿದೆ. ಆಯಾ ರಾಜ್ಯಗಳ ಜನರಿಗೆ ಬೇರೆಲ್ಲಾ ಭಾಷೆಗಳಿಗಿಂತ ನಮ್ಮ ಭಾಷೆಯೇ ಹೆಚ್ಚು ಎಂಬ ಶ್ರೇಷ್ಠತೆಯ ವ್ಯಸನ ಕೂಡ ಸಹಜವಾಗಿಯೇ ಇದೆ. ಅದೇ ಕಾರಣಕ್ಕಾಗಿ ನಮ್ಮಲ್ಲಿ ಭಾಷೆಯ ವಿಚಾರಕ್ಕಾಗಿಯೇ ಹಲವು ಆಂದೋಲನಗಳಾಗಿವೆ ಕೂಡ. ಇತ್ತೀಚಿನ ವರ್ಷಗಳಲ್ಲಿ ಭಾಷೆಯ ಕುರಿತಾಗಿ ಅತಿ ಹೆಚ್ಚು ಚಾಲ್ತಿಯಲ್ಲಿರುವುದು “ಹಿಂದಿ ಹೇರಿಕೆ” ಕೂಗು. ನಾವುಗಳು ಶಾಲೆಯಲ್ಲಿರುವಾಗ ಕಲಿತಿದ್ದ “ಹಿಂದಿ ನಮ್ಮ ರಾಷ್ಟ್ರಭಾಷೆ” ಎಂಬ ವಿಚಾರವೇ ಈಗ ಅತಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಪ್ರಧಾನ ಭಾಷೆಯಾಗಿ ಕಂಡುಬರುವುದರಿAದ ಅಲ್ಲಿಯ ಬಹುತೇಕ ಭಾಗದಲ್ಲಿ ಬಳಕೆಯಲ್ಲಿದೆ. ಆದರೆ, ದಕ್ಷಿಣ ಭಾಗದಲ್ಲಿ ಹಿಂದಿ ಇಂದಿಗೂ ಪರಭಾಷೆಯಂತೆಯೇ ಇದೆ. ಅದೇ ಕಾರಣಕ್ಕಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳುವುದಕ್ಕೆ ಹಾಗೂ ಹಿಂದಿ ಭಾಷೆಯನ್ನು ನಾಮಫಲಕಗಳಲ್ಲಿ, ವ್ಯವಹಾರದ ಸಂದರ್ಭಗಳಲ್ಲಿ ತೂರಿಸುವುದಕ್ಕೆ ಬಲವಾದ ವಿರೋಧ ವ್ಯಕ್ತವಾಗುತ್ತಿರುವುದು. ಅಂದಹ

ಆಗುಂಬೆ ಎಂಬ ಹಸಿರುಲೋಕ!

Image
ಆಗುಂಬೆ, ಮಲೆನಾಡಿನ ಮಡಿಲಿನಲ್ಲಿರುವ ಒಂದು ಪುಟ್ಟ ಊರು. ಮಳೆಗಾಲದಲ್ಲಿ ಸೂರ್ಯನ ಅಸ್ತಿತ್ವವನ್ನೂ ಮರೆಯಿಸುವಂತೆ ಗಾಢವಾದ ಮೋಡಗಳಿಂದ ಆವೃತವಾಗಿ ಭೋರ್ಗರೆವ ಮಳೆಯಲ್ಲಿ ತೊಯ್ಯುವ ಊರು ಮಳೆಗಾಲ ಮುಗಿಯುತ್ತಿದ್ದಂತೆಯೇ ಸೂರ್ಯಾಸ್ತಮಾನದ ಭವ್ಯ ನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಹೊರಜಗತ್ತಿಗೆ ದಕ್ಷಿಣ ಭಾರತದ ಚಿರಾಪುಂಚಿ ಎಂದು ಪರಿಚಿತವಾಗಿರುವುದರಿಂದ ಆಗುಂಬೆಯ ಹೆಸರನ್ನು ಕೇಳದೇ ಇರುವವರ ಸಂಖ್ಯೆ ವಿರಳಾತಿವಿರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕಂತೆ ಭೂ ವಿಸ್ತೀರ್ಣದಲ್ಲಿ ಚಿಕ್ಕ ಊರಾದರೂ ತನ್ನ ವಿಶಿಷ್ಟತೆಗಳ ಕಾರಣದಿಂದ ಪ್ರಸಿದ್ಧಿಯಾಗಿದೆ. ಆಗುಂಬೆಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಘಾಟಿಯ ತಿರುವುಗಳಂತೆಯೇ ಹಲವು ಕತೆಗಳು ಒಂದರ ಹಿಂದೊಂದು ತೆರೆದುಕೊಳ್ಳುತ್ತವೆ. ಶ್ರೀ ಮದಗಂಬಾಪುರ ಎಂಬುದು ಆಗುಂಬಾಪುರವಾಗಿ ನಂತರ ಆಗುಂಬೆ ಎಂಬ ಹೆಸರನ್ನು ಅಂಟಿಸಿಕೊಂಡ ಈ ಊರು ಪ್ರವಾಸಿತಾಣವೆಂಬ ಪಟ್ಟವನ್ನು ಹೊತ್ತಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ. ಅಲ್ಲಿಯ ಜನರೇ ಹೇಳುವಂತೆ ಹಲವು ವರ್ಷಗಳ ಹಿಂದೆ ವ್ಯಾಪಾರ, ವಹಿವಾಟು ಚಟುವಟಿಕೆಗಳ ಕೇಂದ್ರವಾಗಿದ್ದ ಆಗುಂಬೆ ಘಟ್ಟ ಪ್ರದೇಶ ಹಾಗೂ ಕರಾವಳಿಯನ್ನು ಬೆಸೆಯುವ ಬಹುಮುಖ್ಯ ಕೊಂಡಿ ಎಂದು ಗುರುತಿಸಿಕೊಂಡಿದ್ದರಿAದ ಘಾಟಿಯ ಮೂಲಕ ಹಾದು ಹೋಗಲು ಉಗಿಯಿಂದ ಓಡುವ ಬಸ್ ಸೌಲಭ್ಯವಿತ್ತಂತೆ. ಆದರೆ, ಇದ್ದಿದ್ದು ಒಂದೇ ಬಸ್ ಆಗಿದ್ದರಿಂ

ಸೋಶಿಯಲ್ ಮೀಡಿಯಾ ಮತ್ತು ನಾವು!

Image
ನಿನ್ನೆ (04/02/2020) ಕನ್ನಡ ದಿನಪತ್ರಿಕೆಯೊಂದು "ಬೆನ್ನತ್ತಿ ಬಂದು ಬಸ್ ಮೇಲೆ ಗುಂಪಿನ ದಾಳಿ" ಎಂಬ ತಲೆಬರಹದಡಿ ಪ್ರಕಟಿಸಿದ ವರದಿಯಲ್ಲಿ ಗಲಾಟೆ ಎಬ್ಬಿಸಿದವರು ಯಾವ ಧರ್ಮದವರು ಎಂದು ಹೆಸರಿಸುವ ಬದಲು "ಒಂದು ಕೋಮಿನವರು" ಎಂದು ಪ್ರಕಟಿಸಿತ್ತು. ಅದಕ್ಕೆ ಆಕ್ಷೇಪಣೆ ಎತ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರು - "ದಿನ ಪತ್ರಿಕೆಗಳು ಇಷ್ಟೊಂದು ಪುಕ್ಕಲು ಅಂತ ಗೊತ್ತಿರ್ಲಿಲ್ಲ.. ಮಾತೆತ್ತಿದರೆ ಪತ್ರಿಕಾ ಧರ್ಮ, ಹಾಗೆ ಹೀಗೆ ಬದನೆಕಾಯಿ ಅಂತೆಲ್ಲ ಹೇಳೋದ್ ಕೇಳಿದಿವಿ.. ಇಲ್ಲಿ 'ಬಸ್ ಮೇಲೆ ಮುಗಿಬಿದ್ದ ಒಂದು ಕೋಮಿನ ಗುಂಪು ಅಂತ ಬರೆಯಲಾಗಿದೆ..' ಆದರೆ ಯಾಕೆ ಆ ಒಂದು ಕೋಮು ಯಾವುದು ಅಂತ ಹೇಳಿಲ್ಲ..? ಯಾಕೆ ಹೇಳೋಕ್ ಧಮ್ ಇಲ್ವಾ..? ಹಾಗಾದರೆ ಯಾವುದು ನಿಮ್ಮ ಪತ್ರಿಕಾ ಧರ್ಮ..?" ಎಂದು ಪ್ರಶ್ನಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಥಿತಿಗೆ ಒಂದು ಉದಾಹರಣೆಯಷ್ಟೇ. ವಾಸ್ತವವಾಗಿ ಯಾವುದೇ ಮಾಧ್ಯಮಗಳು ಜಾತಿ, ಧರ್ಮ ಇವುಗಳಿಗೆ ಮಹತ್ವ ನೀಡದೆ ಕೇವಲ ನಡೆದ ಘಟನೆಯ ಕುರಿತು ಬೆಳಕು ಚೆಲ್ಲುವುದು ಸರಿಯಾದ ಮಾರ್ಗ. ಆದರೆ, ದುರಂತವೆಂಬಂತೆ ಇಂದಿನ ಓದುಗರೇ ಪತ್ರಿಕೆಗಳು ಜಾತಿ, ಧರ್ಮಗಳ ಕುರಿತು ಉಲ್ಲೇಖಿಸಬೇಕೆಂದು ಅಪೇಕ್ಷಿಸಿ, ಉಲ್ಲೇಖಿಸದೇ ಇರುವುದು ಪತ್ರಿಕಾ ಧರ್ಮವಲ್ಲ ಎಂದು ತೀರ್ಪು ನೀಡುವ ಮಟ್ಟಿಗೆ ಬದಲಾಗಿದ್ದಾರೆ. ಈ ಮನಸ್ಥಿತಿ ಯಾವುದೇ ಒಂದು ಸಿದ್ಧಾಂತಕ್ಕೆ

ಸ್ಟೈಲಿಂಗ್ ಅಟ್ ದಿ ಟಾಪ್

Image
ಶಿವರಾಮ ಭಂಡಾರಿಯವರು ಕಳೆದ ಬಾರಿ ಉಜಿರೆಗೆ ಬಂದಾಗ ತಮ್ಮ ಕತೆಯನ್ನು ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದರು. ಅದನ್ನು ಕೇಳುವಾಗಲೇ ನಮಗೆ "ಅಬ್ಬಬ್ಬಾ" ಎನ್ನಿಸಿತ್ತು. ಬದುಕು ನಡೆಸಲೆಂದು ಕ್ಷೌರಿಕ ವೃತ್ತಿಯನ್ನು ಅವಲಂಬಿಸಿಕೊಂಡು ಕೊನೆಗೆ ಅದೇ ಕ್ಷೇತ್ರದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡ ಶಿವರಾಮ ಭಂಡಾರಿಯವರ ಜೀವನಗಾಥೆ ಎಂಥವರಲ್ಲೂ ಅಚ್ಚರಿ ಮೂಡಿಸಲೇಬೇಕು! ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಸಹೋದರಿಯ ಅಕಾಲಿಕ ಸಾವನ್ನು ಅರಗಿಸಿಕೊಂಡು, ಬಂಧುಗಳೆನಿಸಿಕೊಂಡವರಿಂದಲೇ ಅವಮಾನಕ್ಕೊಳಗಾಗಿ, ಬದುಕು ತಂದೊಡ್ಡಿದ್ದ ಸಕಲ ರೀತಿಯ ಕಷ್ಟಗಳಿಗೂ ಸಾಕ್ಷಿಯಾಗಿ.. ಕೊನೆಗೆ "ಶಿವಾಸ್" ಎಂಬ ಸಾಮ್ರಾಜ್ಯವನ್ನು ಕಟ್ಟಿದ ಶಿವರಾಮ ಭಂಡಾರಿಯವರ ಜೀವನ ಪಯಣವನ್ನು ಓದುವಾಗ ಮನಸ್ಸು ಭಾರವಾಗುತ್ತಲೇ ಹೋಗುತ್ತದೆ. ದಕ್ಷಿಣ ಕನ್ನಡದ ಕುಗ್ರಾಮವೊಂದರಲ್ಲಿ ಹುಟ್ಟಿ, ಬೆಳೆದ ಶಿವರಾಮ ಭಂಡಾರಿ ಇವತ್ತು ಮುಂಬೈನಂಥ ಮಾಯಾನಗರಿಯಲ್ಲಿ "ಶಿವಾಸ್" ಸಮೂಹದ ಒಡೆಯ. ಇವರ ಕೈಚಳಕಕ್ಕೆ ಮಾರುಹೋದ ಬಾಲಿವುಡ್, ಕ್ರಿಕೆಟ್, ಪಾಲಿಟಿಕ್ಸ್ ಹೀಗೆ ಅನೇಕ ಕ್ಷೇತ್ರಗಳ ಸೆಲೆಬ್ರಿಟಿಗಳು ಇವರನ್ನರಸಿಕೊಂಡು ಬರುತ್ತಾರೆ. ವಿಪರ್ಯಾಸವೆಂದರೆ ಇಂದು ಪ್ರಸಿದ್ಧ ಕೇಶವಿನ್ಯಾಸಕರೆನಿಸಿಕೊಂಡಿರುವ ಇವರ ವೃತ್ತಿ ಜೀವನ ಆರಂಭವಾಗಿದ್ದು ವಿಧವೆಯೊಬ್ಬರ ಕೇಶಮುಂಡನ ಮಾಡುವುದರೊಂದಿಗೆ. ಶಿವರಾಮ ಭಂಡಾರಿಯವರೇ ಹೇಳಿಕೊಳ್ಳುವಂತೆ ಅವರು ತಮ್ಮ ಮೊದಲ ಗಿರಾಕಿಯನ್

ಓದು 2019 : ಬಸವರಾಜ ವಿಳಾಸ

Image
ಯಥಾಪ್ರಕಾರ ವರ್ಷವೊಂದರ ಅಂಚಿಗೆ ಬಂದು ನಿಂತಿದ್ದೇವೆ. ಈಗೊಮ್ಮೆ ನಿಂತು 2019ರಲ್ಲಿ ನಾನು ಓದಿದ ಪುಸ್ತಕಗಳನ್ನು ಮೆಲುಕು ಹಾಕಿದರೆ, ಮೊದಲು ಕಾಣಿಸುವುದು ಇತ್ತೀಚೆಗೆ ಬಿಡುಗಡೆಯಾದ, ವಿಕಾಸ್ ನೇಗಿಲೋಣಿಯವರ  "ಬಸವರಾಜ ವಿಳಾಸ" ಕಥಾ ಸಂಕಲನ. "ಬಸವರಾಜ ವಿಳಾಸ" ಓದುಗರ ಎದೆಯೊಳಗೆ ಸಲೀಸಾಗಿ ಇಳಿಯುವ ಒಂದು ಕಥಾ ಸಂಕಲನ. ಅದರಲ್ಲಿನ ಕತೆಗಳು ಕಾಲ್ಪನಿಕ ಕಾಲ, ದೇಶಗಳಿಂದ ಇಳಿದು ಬಂದವುಗಳಲ್ಲ ಅಥವಾ ಒತ್ತಾಯಪೂರ್ವಕವಾಗಿ ಕಟ್ಟಿದವುಗಳಲ್ಲ. ಆ ಕತೆಗಳನ್ನು ಓದುವಾಗ ನಮ್ಮ ಊರು, ನಾವು ಕಂಡ ಪಾತ್ರ, ನಾವೇ ಮರೆತ ಹಳೆಯ ಘಟನೆ ಸೇರಿದಂತೆ ನಮ್ಮೊಳಗಿನ ತವಕ - ತಲ್ಲಣಗಳೆಲ್ಲ ಒಂದರ ಹಿಂದೊಂದು ಎದುರಾಗಿ ನಮ್ಮನ್ನು ಎಚ್ಚರಿಸುತ್ತವೆ. ಜೊತೆಗೆ, ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತವೆ. ಈ ಕಥಾಸಂಕಲನದ - ಅವರವರ ಭಾಗ, ಅಂಥವೇ ಎರಡು ಗಿಣಿ ಕಾಣೋ ಬಳೆಗಾರ, ಚಿದಂಬರ ರಹಸ್ಯ, ಕಾರಣ ಇನ್ನೂ ತಿಳಿದು ಬಂದಿಲ್ಲ ಸೇರಿದಂತೆ ಬಹುತೇಕ ಎಲ್ಲಾ ಕತೆಗಳು ನಮಗೆ ನಮ್ಮ ಜಗತ್ತನ್ನು ಹೊಸ ಕಿಟಕಿಯೊಂದರ ಮೂಲಕ ತೋರಿಸುತ್ತವೆ. ಆ ಕತೆಗಳಲ್ಲಿ ಬರುವ ಪಾತ್ರಗಳು ಕೂಡ ಓದಿ ಮುಗಿಸಿದ ನಂತರವೂ ಎದೆಯಲ್ಲಿ ಕೂತು ಕಾಡುತ್ತವೆ. ತುಂಬಾ ಸರಳವಾಗಿ ಹೇಳುವುದಾದರೆ "ಬಸವರಾಜ ವಿಳಾಸ" ಸಂಕಲನ ವಿಭಿನ್ನ ಕತೆಗಳ ಒಂದು ಮಳಿಗೆ. ಇಂತಹದ್ದೊಂದು ಅಪರೂಪದ ಮಳಿಗೆಯನ್ನು ಈ ವರ್ಷ ಪರಿಚಯಿಸಿದ್ದಕ್ಕಾಗಿ ವಿಕಾಸ್ ನೇಗಿಲೋಣಿಯವರಿಗೆ ಧನ್ಯವಾದಗಳನ್ನು

ಕ್ಯಾಂಪಸ್‌ಗಳಲ್ಲಿ 2019

Image
ವರ್ಷಗಳು ಉರುಳುವುದು ಭಾರೀ ಮಹತ್ವದ ಸಂಗತಿಯೇನಲ್ಲ. 365 ಹಗಲು, ರಾತ್ರಿಗಳ ಬದಲಾವಣೆ ಆಟದಲ್ಲಿ ಒಂದಿಡೀ ವರ್ಷವೇ ನುಸುಳಿ ತಪ್ಪಿಸಿಕೊಳ್ಳುತ್ತದೆ. ಆದರೆ, ಈ ಅವಧಿಯಲ್ಲಿ ನಾವು ಅದೆಷ್ಟು ವಿಚಾರಗಳೆಡೆಗೆ ಗಮನ ಹರಿಸುತ್ತೇವೆ, ಏನೇನೆಲ್ಲಾ ಚರ್ಚಿಸುತ್ತೇವೆ, ಯಾವುದಕ್ಕೆಲ್ಲಾ ತಲೆ ಕೆಡಿಸಿಕೊಂಡಿರುತ್ತೇವೆ ಎಂದು ಪಟ್ಟಿ ಮಾಡಿದರೆ ಒಂದಷ್ಟು ವಿಷಯಗಳು ಸರತಿಯಲ್ಲಿ ನಿಲ್ಲುತ್ತವೆ. ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳು ವರ್ಷದ ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುವುದರಿಂದ ಅಲ್ಲಿ ಮಾತನಾಡುವ ಸಂಗತಿಗಳೇ ನಮಗೆ ಮುಖ್ಯವೆನಿಸುತ್ತವೆ. ಈ ವರ್ಷ ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆದ ಅಂತಹ ಕೆಲವು ವಿಷಯಗಳೆಂದರೆ : 1. ಕೆ.ಜಿ.ಎಫ್ : ಕೆ.ಜಿ.ಎಫ್ 2018ರಲ್ಲಿ ಹುಟ್ಟಿ, 2019ರಲ್ಲಿ ಹರಿದ ನದಿಯಂತಹ ಸಿನಿಮಾ. ಬಹುಭಾಷೆಗಳಲ್ಲಿ ತೆರೆ ಕಂಡಿದ್ದ ಕನ್ನಡ ನೆಲದ ಸಿನಿಮಾ ಸಹಜವಾಗಿಯೇ ಕಾಲೇಜು ಕ್ಯಾಂಪಸ್ಸುಗಳಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿತ್ತು. ಕೆ.ಜಿ.ಎಫ್ ಸಿನಿಮಾದ ಹಾಡು, ಡೈಲಾಗುಗಳು ವಿದ್ಯಾರ್ಥಿಗಳ ಬಾಯಲ್ಲಿ ಓಡಾಡುವ ಮೂಲಕ ಕ್ಯಾಂಪಸ್‌ಗಳಲ್ಲೂ ಹವಾ ಸೃಷ್ಟಿಸಿತ್ತು. 2. ಎಲೆಕ್ಷನ್, ಅರ್ಹ – ಅನರ್ಹ : ಸರ್ಕಾರ, ಲೀಡರ್ಸ್, ರಾಜಕಾರಣ ಎಂದೆಲ್ಲಾ ಮಾತನಾಡುವವರಿಗೆ ಈ ಬಾರಿ ರಾಜಕೀಯ ಸುದ್ದಿಗಳಿಗಂತೂ ಕೊರತೆಯೇ ಇರಲಿಲ್ಲ. ಮೇ ತಿಂಗಳ ತನಕ ಲೋಕಸಭಾ ಚುನಾವಣೆಯ ಗುಂಗು, ನಂತರ ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಪರ್ವ, ಅದಾದ ಮೇಲೆ ಅನರ್ಹರ