Posts

Showing posts from October, 2017

ನವರಸ

Image
ಬದುಕೆಂಬ ನಳಪಾಕ ಭಾವನೆಯೇ ಒಗ್ಗರಣೆ ಚಿಟಪಟನೆ ಸಿಡಿಯುವುದು ಘಮ್ಮೆಂದು ಹರಡುವುದು ಖಾರ ತುಸು ಮುಂದಾಗೆ ಕಣ್ಣಾಲಿ ತುಂಬುವುದು ಸಿಹಿ ಖಾದ್ಯ ಬಾಯ್ಗಿಡಲು ನಾಲಿಗೆ ನಾಚುವುದು ಉಪ್ಪು ಹದ ತಪ್ಪಿದರೆ ಭಯಂಕರ ಕೋಪ ಜಾಸ್ತಿ ಹುಳಿ ಹಿಂಡಿದರೆ ಬೀಭತ್ಸ ರೂಪ ಹೊಟ್ಟೆ ಬಿರಿ ತಿಂದರೆ ವಾಯು ಭಾರ ಕುಸಿತ ಬಿಗಿಹಿಡಿದು ತೇಗಿದರೆ ಮನವು ಶಾಂತ ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು ನವರಸಗಳ ಮೇಳ ಸಂಪನ್ನವಾಯ್ತು.. - ಅನಾಸ್ಕ

ಅವನು - ಅವಳು ಮತ್ತು ವಿಕ್ರಾಂತ್

Image
ಬಿಟ್ಟು ಹೋಗಿದ್ದ.. ಸೌಜನ್ಯಕ್ಕೆ ತಿರುಗಿಯೂ ನೋಡದೆ ಬೈಕ್ ಸ್ಟಾರ್ಟ್ ಮಾಡಿದವನು ಭರ್ರನೆ ಹೊಗೆಯೆಬ್ಬಿಸಿ ಹೊರಟುಹೋಗಿದ್ದ. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದವಳ ಕನಸು ಸುಡುತ್ತಿತ್ತು. ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಮೊನ್ನೆ ಕಾಲೇಜಿಗೆ ಹೋಗಲು ಬಸ್ ತಪ್ಪಿಸಿಕೊಂಡಾಗ ಅವಳದೇ ತರಗತಿಯ ವಿಕ್ರಾಂತ್ ಬೈಕಿನಲ್ಲಿ ಹೋಗೋಣ ಬಾ ಅಂತ ಕರೆದಿದ್ದ, ತರಗತಿಯ ಹುಡುಗನಾದ್ದರಿಂದ ಇವಳೂ ಕೂಡ ಹೆಚ್ಚು ಯೋಚಿಸದೆ ಬೈಕ್ ಹತ್ತಿದ್ದಳು. ಎಡವಟ್ಟಾಗಿದ್ದೇ ಅಲ್ಲಿ.. ವಿಕ್ರಾಂತ್ ಪಾಪದ ಹುಡುಗನಾದರೂ ಆತನಿಗೂ ಇವಳ ಪ್ರಿಯಕರ ಮನೋಹರನಿಗೂ ಸಣ್ಣ ಮನಸ್ತಾಪವಿತ್ತು. ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲವಾದರೂ ಒಳಗೊಳಗೇ ದ್ವೇಷಿಸುತ್ತಿದ್ದರು. ಇದಕ್ಕೆಲ್ಲಾ ಮೂಲ ಕಾರಣ ವಿಕ್ರಾಂತ್ ಪ್ರಿಯಾಳಿಗೆ ಸದ್ದಿಲ್ಲದೇ ಕಾಳು ಹಾಕುತ್ತಿದ್ದ. ಮನೋಹರ್ ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಅದಾಗಲೇ ಎರಡು ವರ್ಷ ಕಳೆದಿತ್ತು, ಅವರ ಪ್ರೇಮ ಪುರಾಣ ಇಡೀ ಕಾಲೇಜಿಗೇ ಗೊತ್ತಿದ್ದರಿಂದ ಯಾರೂ ಆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಹೀಗಿರುವಾಗಲೇ ವಿಕ್ರಾಂತನಿಗೆ ಪ್ರಿಯಾಳ ಮೇಲೆ ಆಕರ್ಷಣೆ ಹುಟ್ಟಿದ್ದು. ಹೇಳಿ ಕೇಳಿ ವಿಕ್ರಾಂತ್ ಶ್ರೀಮಂತರ ಮನೆಯ ಹುಡುಗ, ಇಡೀ ಕಾಲೇಜೇ ಅವನತ್ತ ತಿರುಗಿ ನೋಡುವಂತೆ ದಿನಕ್ಕೊಂದು ಬಗೆಯ ಬೈಕು, ಬಟ್ಟೆ, ಶೂಗಳೊಂದಿಗೆ ಬರುತ್ತಿದ್ದ. ಇವನಿಗೆ ಪ್ರಿಯಾ ಮತ್ತು ಮನೋಹರರ ಕಥೆ ಗೊತ್ತಿತ್ತಾದರೂ ಹಣದ ಮದ ಏರಿದ್ದರಿಂದ ಭಾವನೆಗಳ ವ

ಬರಗಾಲ

Image
ಕೆಂಡ ಕಾರುವ ಭಾನು ಸುಟ್ಟು ಬಿದ್ದ ಮೇಘ ಭುವಿಯೀಗ ಒಣಗಿದ ಗರಿಗರಿ ಬಟ್ಟೆ ಬಡವಿ ಭೂಮಾತೆ ಬಸವಳಿದು ಕುಳಿತಿಹಳು ಮೂರು ಮಾಸದಿಂದ ಉಪವಾಸವಂತೆ ಹೊಳೆದಂಡೆ ಗರಿಕೆಯ ಬದುಕು ಬಡವಾಗಿರಲು ಚಿಗರೆ ಮರಿಗೆಲ್ಲಿ ಹೊತ್ತು ಊಟ? ಎದೆ ಕವಚ ಹೊರಗಿಣುಕಿ, ಭುವಿ ಕದವ ಬಡಿದಿರಲು ರಕ್ತನಾಳಕ್ಕೀಗ ಸಾವಿನಾಟ ಬತ್ತಿದ ಹೊಲದಲ್ಲಿ ಬಿತ್ತಿದ ಬೀಜವು ನರಳಾಟದ ಹಾಡು ಹಾಡುತ್ತಿತ್ತು ಮೊಳಕೆಯ ಮೂಲವೇ ಮೌನವಾಗಿರಲು ಶ್ವಾಸಕೋಶದ ಒಳಗೆ ಶೋಕಗೀತೆ ಹತ್ತು ಎಕರೆಯ ಒಡೆಯ ಅತ್ತು ಸುಸ್ತಾಗಿರಲು ಮೂರು ಗುಂಟೆಯ ರೈತ ಸತ್ತು ಹೋದ ಹಟ್ಟಿಯಲಿ ಕಟ್ಟಿದ ಬಾಚು ಕೋಡಿನ ಎತ್ತು ಹಿಡಿ ಹುಲ್ಲಿಗಾಗಿ ಕೊರಗುತಿತ್ತು ಕೆರೆ ತಳದಿ ಕಪ್ಪೆಮರಿ ಅಂಗಾತ ಬಿದ್ದಿರಲು ಸರಸರನೆ ಓಡಿತ್ತು ಉರಗರಾಜ ಸರಿಸೃಪದ ಪರದಾಟ ಕಣ್ಣಿಗೆ ಗೋಚರಿಸೆ ಒಣಕು ಕೊಕ್ಕರೆಗೀಗ ಹಬ್ಬದೂಟ - ಅನಾಸ್ಕ