Posts

Showing posts from May, 2018

ಮಲೆನಾಡಿನ ಬಗೆಬಗೆಯ ಉಪ್ಪಿನಕಾಯಿ

Image
ಬಾಳೆಲೆಯ ತುದಿಗೂ, ಬಾಟಲಿಯ ಪಕ್ಕಕ್ಕೂ, ಕಾಲಕಾಲಕ್ಕೂ ಸಲ್ಲುವ ಸರ್ವಶ್ರೇಷ್ಠ ಪದಾರ್ಥ ಉಪ್ಪಿನಕಾಯಿ. ಉಪ್ಪಿನಕಾಯಿ, ಬೆರಳು ಮತ್ತು ನಾಲಗೆಯ ನಡುವಿನ ತ್ರಿಕೋನ ಪ್ರೇಮಕಥೆ ಇಂದು ನಿನ್ನೆಯದಲ್ಲ. ದಿನನಿತ್ಯದ ಸಾಮಾನ್ಯ ಊಟದಿಂದ ಹಿಡಿದು ಭೂರಿ ಭೋಜನದ ನಡುವಲ್ಲೂ ಜಾಗಗಿಟ್ಟಿಸಿಕೊಂಡು ತನ್ನತನವನ್ನು ಕಾಯ್ದುಕೊಂಡಿರುವ ಈ ಉಪ್ಪಿನಕಾಯಿಯಲ್ಲೂ ತರಹೇವಾರಿ ವಿಧಗಳಿವೆ, ಅದರಲ್ಲೂ ಮಲೆನಾಡಿನ ಜನ ಉಪ್ಪಿನಕಾಯಿ ತಯಾರಿಕೆಯಲ್ಲಿ ಸಿದ್ದಹಸ್ತರು. ಬಿರುಬೇಸಿಗೆಯ ಹೊತ್ತಲ್ಲೂ ನಿಮ್ಮ ನಾಲಗೆಯ ಮತ್ತೇರಿಸುವ ಜಿಹ್ವಾಪ್ರಿಯ ಪದಾರ್ಥದ ಕುರಿತು ಒಂದು ಕಿರುಲೇಖನ. 1. ಮಾವಿನಮಿಡಿ ಉಪ್ಪಿನಕಾಯಿ - ಹಣ್ಣುಗಳ ರಾಜ ಎಂದೇ ಪ್ರಸಿದ್ದವಾದ ಮಾವು, ಉಪ್ಪಿನಕಾಯಿ ವಿಚಾರದಲ್ಲೂ ತನ್ನ ಪಾರುಪತ್ಯವನ್ನು ಬಿಟ್ಟುಕೊಟ್ಟಿಲ್ಲ. ಹದವಾಗಿ ಬೆಳೆದ ಘಮಘಮಿಸೋ ಮಾವಿನಮಿಡಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕುವುದೆಂದರೆ ಅಕ್ಷರಶಃ ಹಬ್ಬ. ಇದರ ವಿಶೇಷತೆಯೆಂದರೆ ಕೆಲವು ಬಗೆಯ ಮಾವಿನಮಿಡಿಗಳು ಮಾತ್ರ ಉಪ್ಪಿನಕಾಯಿಗೆ ಸೂಕ್ತ. ಆ ಕೆಲವೇ ಕೆಲವು ಬಗೆಗಳಲ್ಲಿ ಅಪ್ಪೆಮಿಡಿ ಬಹುಶ್ರೇಷ್ಠ. ತಯಾರಿಸುವ ವಿಧಾನ : ಹದವಾಗಿ ಬೆಳೆದ ಮಾವಿನಮಿಡಿಗಳನ್ನು ಕೊಯ್ದು, ಸ್ವಚ್ಛಗೊಳಿಸಿ, ಚೆನ್ನಾಗಿ ಒರೆಸಿ ದೊಡ್ಡ ಪಾತ್ರೆಯ (ಡ್ರಮ್) ತಳಭಾಗಕ್ಕೆ ಮಾವಿನಸೊಪ್ಪನ್ನು ಹಾಕಿ ನಂತರ ಒಂದು ಪದರ ಮಾವಿನಮಿಡಿ ಹಾಗೂ ಒಂದು ಪದರ ಉಪ್ಪಿನಂತೆ ತುಂಬಿಸಿಟ್ಟು ಮುಚ್ಚಳ ಹಾಕದೆ ಗಾಳಿಯಾಡಲು ಅನುವಾಗುವಂತೆ ಮುಚ್ಚಬೇಕು.