Posts

Showing posts from February, 2018

ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!!

Image
ಭವ್ಯ ಕನಸೊಂದಕ್ಕೆ ಬುನಾದಿ ಹಾಕಿದ ಘಳಿಗೆ, ಅದೆಷ್ಟೋ ಜನ್ಮಗಳಿಂದ ಬರಡಾಗಿ ಹೋಗಿದ್ದ ಆತ್ಮದಲ್ಲಿ ಪ್ರೀತಿಯ ಒರೆತ. ತೀರಾ ಸನಿಹದಿಂದ ಗುರಾಯಿಸಿದವಳ ವಯಸ್ಸು ನನಗಿಂತ ಕಡಿಮೆ ಎಂದು ತಿಳಿದಾಗ ವರ್ಷದ ಅಷ್ಟೂ ಹಬ್ಬಗಳ ಸಾಮೂಹಿಕ ಆಚರಣೆ!! ಅವಳನ್ನು ಕಂಡ ಮೊದಲ ಕ್ಷಣವಿನ್ನೂ ಹಸಿರಾಗಿದೆ, ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!! ತೀರಾ ಮೊದಲ ನೋಟದಲ್ಲೇ ಕಣ್ಣಿಗೆ ಬಿದ್ದ ಸಂಗತಿಗಳೆಲ್ಲಾ ಮನದಲ್ಲಿ ಅಚ್ಚಾಗಿ, ಜೀವನದ ಅಷ್ಟೂ ರಾತ್ರಿಗಳಿಗೆ ಸಾಕಾಗುವಷ್ಟು ಕನಸು ಬಿಡುಗಡೆಯಾಗಲು.. ಮೊದಲ ಪ್ರೇಮ ಮೊಳಕೆಯೊಡೆದಿತ್ತು!! ಒಮ್ಮುಖದ ಪ್ರೀತಿ ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ, ಹುಡುಗಿಯನ್ನು ಪರಿಚಯಿಸಿಕೊಳ್ಳುವುದರಿಂದ ಹಿಡಿದು ಪ್ರೇಮ ನಿವೇದನೆ ಮಾಡಿಕೊಳ್ಳುವ ತನಕ ಅಕ್ಷರಶಃ ತ್ರಿಶಂಕು ಸ್ಥಿತಿ!! ಈ ವಿಚಾರದಲ್ಲಿ ನಾನಂತೂ ಹೈರಾಣಾಗಿದ್ದೆ, ಆಕೆಯ ಪೂರ್ವಾಪರಗಳನ್ನೆಲ್ಲಾ ತಿಳಿಯಲು ರಹಸ್ಯ ಕಾರ್ಯಾಚರಣೆಯನ್ನೇ ನಡೆಸಿ, ಅವಳ ದೋಸ್ತಿಯ ಮೂಲಕ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆಯುವಷ್ಟರಲ್ಲಿ ಒಂದು ಶತಮಾನವೇ ಉರುಳಿದಂಥಾ ಅನುಭವ! ಕುಂಟುನೆಪವಿಟ್ಟುಕೊಂಡು ಮೊದಲ ಬಾರಿಗೆ ಕರೆ ಮಾಡಿದಾಗ ಅವಳೇ ಕರೆ ಸ್ವೀಕರಿಸಿದ್ದು ನನ್ನ ಪೂರ್ವಜರ ಪುಣ್ಯ! ಆಗಿನ್ನೂ ಸ್ಮಾರ್ಟ್ಫೋನ್ ಕೈಗೆ ಸಿಕ್ಕಿರದ ಕಾರಣ ನೋಕಿಯಾ ಕೀಪ್ಯಾಡ್ ಮೊಬೈಲಿನ ಅಷ್ಟೂ ಬಟನ್ನುಗಳನ್ನು ಪಟಪಟನೆ ಒತ್ತಿ ಮೆಸೇಜು ವಿನಿಮಯ ಮಾಡ

ಒಂಚೂರು ಪಥ್ಯ ಕಲಿಸು, ಅವ್ಯಾಹತವಾಗಿ ಪ್ರೀತಿಸುವೆ

Image
ಜೀವದಾಳದಲ್ಲೆದ್ದ ಅಲೆಯೊಂದು ಒಂದೇ ಸಮನೆ ಭೋರ್ಗರೆಯುತ್ತಿದೆ. ತುರ್ತಾಗಿ ತೀರದಲ್ಲೊಮ್ಮೆ ಸುಳಿದಾಡು, ಹೆಜ್ಜೆಗಳಚ್ಚಿಗೆ ಮುತ್ತಿಕ್ಕಿ ತಣ್ಣಗಾಗಲಿ ಉನ್ಮಾದ. ಬಯಕೆಗಳ ಬತ್ತಳಿಕೆ ಹೊತ್ತು ಕೂತಿರುವ ನಿನ್ನ ಹುಡುಗನುಸಿರಲ್ಲಿ ಬೆರೆತಿರುವುದು ಬರೀ ಇಂತಹುದೇ ಗುಟ್ಟುಗಳು, ಅವುಗಳಲ್ಲೊಂದು ಪಾಲನ್ನು ಬಿಟ್ಟುಕೊಡುವೆ, ಹಿಡಿದಿಟ್ಟುಕೋ. ಜೀವನ ಪೂರಾ ಭ್ರಾಂತಿಯಲ್ಲಿದೆ, ಪ್ರೀತಿಯಲ್ಲಿ ಬರೀ ಸಿಹಿಯನ್ನೇ ಸವಿದು ಮಧುಮೇಹಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ, ಒಂಚೂರು ಪಥ್ಯ ಕಲಿಸು. ಬದುಕೆಂಬ ಭೂರಿಭೋಜನಕ್ಕೆ ಕೊಂಚ ಮಸಾಲೆ ಬೀಳಲಿ, ಒಗ್ಗರಣೆಯಲ್ಲೊಂದಷ್ಟು ಸಿಡುಕು, ಕೋಪ, ಗುದ್ದಾಟ, ಮುದ್ದಾಟ, ತಮಾಷೆಯಿರಲಿ, ಹದವಾಗಿ ಬೆರೆತ ಪ್ರೀತಿಯ ತುತ್ತು ಹೊಟ್ಟೆ ತುಂಬಿಸಲಿ, ಸಂಕಷ್ಟ ಚತುರ್ಥಿಯಂತೆ ಆಗಾಗ ಉಪವಾಸಕ್ಕೊಂದು ನೆಪ ಸಿಗಲಿ. ನಿನ್ನ ಕೆಂದುಟಿಯ ಮೇಲೆ ಬೆರಳಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ಪಿಸುಗುಡುವ ನಡುವೆ ಅರಿವಿಲ್ಲದಂತೆ ಮುದ್ದಾಗಿ ತುಟಿಯೊತ್ತಿಬಿಡು, ಸುಖಾಸುಮ್ಮನೆ ಹಠಹಿಡಿದು ಗೋಳಾಡಿಸು, ನನ್ನ ಹುಸಿಮುನಿಸಿಗೊಂದು ನಯವಾದ ಕಾರಣವಿರಲಿ. ಬಯಸಿ ಬಂದಾಗೊಮ್ಮೆ ದೂರತಳ್ಳು, ವಿರಹದ ತಾಪ ಒಂಚೂರು ಸುಡಲಿ. ಚುಂಬಿಸುವ ನೆಪದಲ್ಲಿ ಗಲ್ಲ ಕಚ್ಚುವುದನ್ನು ಮಾತ್ರ ಮರೆಯದಿರು, ನಿನ್ನ ದಾಳಿಂಬೆಯಂಥಾ ಹಲ್ಲುಗಳ ಸಿಹಿ ನನ್ನ ಒರಟು ಕೆನ್ನೆಗೂ ಸೋಕಲಿ. ನನ್ನಷ್ಟೂ ಹಗಲುಗಳಿಗೆ ನೀನೇ ಇಬ್ಬನಿ ಆಗಬೇಕು, ಎಲ್ಲಾ ರಾತ್ರಿಗಳಿಗೂ ನಿನ್ನ ಮಾತೇ ಲಾಲಿಯಾಗಬೇಕು. ಮುದ

ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ

Image
ರೂಪಸಿ…                 ಅಕಾಲಿಕ ಮಳೆಗೆ ನೆಂದ ಬೀದಿದೀಪದಲ್ಲಿ ಹರಳುಗಟ್ಟಿರುವ ಹನಿಗಳೊಳಗೆ ನಿನ್ನ ಛಾಯೆಯಿದೆ, ತೇವಗೊಂಡಿರುವ ಕುಸುಮದ ಎಸಳು ನಿನ್ನ ಅಧರದಂತೆ ಕೆಂಪುಗೊಂಡಿದೆ, ಇಳಿಸಂಜೆಯ ಬಾನಿನಲ್ಲಿ ನಿನ್ನದೇ ಕೆನ್ನೆಯ ರಂಗಿದೆ, ಪ್ರಕೃತಿಯೊಡನೆ ನಿನ್ನದೇನಾದರೂ ಒಪ್ಪಂದ ಏರ್ಪಟ್ಟಿರಬಹುದೆಂಬ ಗುಮಾನಿ ನನಗೆ. ನೂಪುರದ ಮಣಿಗಳು ನಿನ್ನ ಕಾಲಿಗೆ ಮುತ್ತಿಡುವಾಗಲೆಲ್ಲಾ ಅತೀವ ಹೊಟ್ಟೆಕಿಚ್ಚಾಗುತ್ತದೆ, ಮೂಗುತಿಗೆ ತಾಗುವ ಉಸಿರ ತಾಪ ನನಗೂ ಸೋಕಲಿ ಎಂದು ಹರಕೆ ಹೊತ್ತಿರುವೆ, ನಿಶಾಚರಿ ಕನಸುಗಳನ್ನೆಲ್ಲಾ ಸಂಪೂರ್ಣ ನಿನಗೇ ಮೀಸಲಿಟ್ಟಿರುವೆ ತಡಮಾಡದೇ ಆಕ್ರಮಿಸಿಕೋ. ಎದೆತಳದ ಅಕ್ಷಾಂಶ ರೇಖಾಂಶಗಳೆಲ್ಲಾ ನಿನ್ನ ಪಾದಸ್ಪರ್ಶದಿಂದ ಪಾವನಗೊಂಡು, ಮನದ ಭೂಪಟದಲ್ಲಿ ನಿನ್ನದೊಂದು ಸಾಮ್ರಾಜ್ಯ ಸ್ಥಾಪನೆಯಾಗಲಿ. ಬೈಗಿನಲ್ಲಿ ದರ್ಬಾರು ನಡೆಸು ಬದುಕು ಸಾರ್ಥಕವಾಗಲಿ. ಪೋರಿಯೊಬ್ಬಳು ಈ ಪರಿ ಕಾಡುವ ಕಥೆ ಯಾವ ರಾಜನ ಇತಿಹಾಸದ ಪುಟದಲ್ಲೂ ನಮೂದಾಗಿರಲಿಕ್ಕಿಲ್ಲ ಅಥವಾ ಮೊದಲ ಪ್ರೇಮವನ್ನೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಯುವ ಹುಡುಗನೂ ಸಿಗಲಿಕ್ಕಿಲ್ಲ. ಇನ್ನೂ ಎಷ್ಟು ವರ್ಷಗಳ ತನಕ ಮೀರಾ ಮಾಧವರ ಕಥೆಯನ್ನೇ ಎಳೆದಾಡುವುದು? ಸತಾಯಿಸದೆ ಸಮ್ಮತಿಸು ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ. ಇಂತಿ,          ಕನಸು ಕಂಗಳ ಹುಡುಗ          ಸ್ಕಂದ ಆಗುಂಬೆ. (ಮೂಲಪ್ರತಿ) ಈ ಲೇಖನ ಪ್ರಜಾವಾಣಿ ದಿನಪತ್ರಿಕೆಯ ಮೆಟ್ರೋ (ಮೈಸೂರು ಆವೃತ್ತಿ) ಪ