ಸೋಶಿಯಲ್ ಮೀಡಿಯಾ ಮತ್ತು ನಾವು!




ನಿನ್ನೆ (04/02/2020) ಕನ್ನಡ ದಿನಪತ್ರಿಕೆಯೊಂದು "ಬೆನ್ನತ್ತಿ ಬಂದು ಬಸ್ ಮೇಲೆ ಗುಂಪಿನ ದಾಳಿ" ಎಂಬ ತಲೆಬರಹದಡಿ ಪ್ರಕಟಿಸಿದ ವರದಿಯಲ್ಲಿ ಗಲಾಟೆ ಎಬ್ಬಿಸಿದವರು ಯಾವ ಧರ್ಮದವರು ಎಂದು ಹೆಸರಿಸುವ ಬದಲು "ಒಂದು ಕೋಮಿನವರು" ಎಂದು ಪ್ರಕಟಿಸಿತ್ತು. ಅದಕ್ಕೆ ಆಕ್ಷೇಪಣೆ ಎತ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರು - "ದಿನ ಪತ್ರಿಕೆಗಳು ಇಷ್ಟೊಂದು ಪುಕ್ಕಲು ಅಂತ ಗೊತ್ತಿರ್ಲಿಲ್ಲ.. ಮಾತೆತ್ತಿದರೆ ಪತ್ರಿಕಾ ಧರ್ಮ, ಹಾಗೆ ಹೀಗೆ ಬದನೆಕಾಯಿ ಅಂತೆಲ್ಲ ಹೇಳೋದ್ ಕೇಳಿದಿವಿ.. ಇಲ್ಲಿ 'ಬಸ್ ಮೇಲೆ ಮುಗಿಬಿದ್ದ ಒಂದು ಕೋಮಿನ ಗುಂಪು ಅಂತ ಬರೆಯಲಾಗಿದೆ..' ಆದರೆ ಯಾಕೆ ಆ ಒಂದು ಕೋಮು ಯಾವುದು ಅಂತ ಹೇಳಿಲ್ಲ..? ಯಾಕೆ ಹೇಳೋಕ್ ಧಮ್ ಇಲ್ವಾ..? ಹಾಗಾದರೆ ಯಾವುದು ನಿಮ್ಮ ಪತ್ರಿಕಾ ಧರ್ಮ..?" ಎಂದು ಪ್ರಶ್ನಿಸಿದ್ದಾರೆ.
ಇದು ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಥಿತಿಗೆ ಒಂದು ಉದಾಹರಣೆಯಷ್ಟೇ. ವಾಸ್ತವವಾಗಿ ಯಾವುದೇ ಮಾಧ್ಯಮಗಳು ಜಾತಿ, ಧರ್ಮ ಇವುಗಳಿಗೆ ಮಹತ್ವ ನೀಡದೆ ಕೇವಲ ನಡೆದ ಘಟನೆಯ ಕುರಿತು ಬೆಳಕು ಚೆಲ್ಲುವುದು ಸರಿಯಾದ ಮಾರ್ಗ. ಆದರೆ, ದುರಂತವೆಂಬಂತೆ ಇಂದಿನ ಓದುಗರೇ ಪತ್ರಿಕೆಗಳು ಜಾತಿ, ಧರ್ಮಗಳ ಕುರಿತು ಉಲ್ಲೇಖಿಸಬೇಕೆಂದು ಅಪೇಕ್ಷಿಸಿ, ಉಲ್ಲೇಖಿಸದೇ ಇರುವುದು ಪತ್ರಿಕಾ ಧರ್ಮವಲ್ಲ ಎಂದು ತೀರ್ಪು ನೀಡುವ ಮಟ್ಟಿಗೆ ಬದಲಾಗಿದ್ದಾರೆ. ಈ ಮನಸ್ಥಿತಿ ಯಾವುದೇ ಒಂದು ಸಿದ್ಧಾಂತಕ್ಕೆ ಸೀಮಿತವೇನಲ್ಲ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ನಂತರ ಜನರು ಮಾಧ್ಯಮಗಳನ್ನು ಟೀಕಿಸುವುದು ಹೇಗೆ ಹೆಚ್ಚಾಗಿದೆಯೋ. ಹಾಗೆಯೇ ಮಾಧ್ಯಮಗಳು ತಮಗೆ ಬೇಕಾದ ಸುದ್ದಿಗಳನ್ನು, ತಾವು ಬಯಸುವ ರೀತಿಯಲ್ಲೇ ನೀಡಬೇಕೆಂಬ ಮನಸ್ಥಿತಿಯೂ ಹೆಚ್ಚುತ್ತಿದೆ. ಇದಕ್ಕೆ ತಕ್ಕುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಯಾ ಸಿದ್ಧಾಂತ, ಪಕ್ಷ, ಜಾತಿ, ಧರ್ಮಗಳನ್ನು ಬೆಂಬಲಿಸಿಕೊಂಡು, ಮುಖಸ್ತುತಿ ಮಾಡಲೆಂದೇ ಪ್ರತ್ಯೇಕವಾಗಿ ವೇದಿಕೆಗಳು ಸೃಷ್ಟಿಯಾಗಿರುವುದರಿಂದ ಅವುಗಳಲ್ಲಿ ಪ್ರಕಟವಾಗುವುದೇ ಪರಮ ಸತ್ಯವೆಂದು ನೆಚ್ಚಿಕೊಳ್ಳುತ್ತಿದ್ದಾರೆ.

"ಸೋಶಿಯಲ್ ಮೀಡಿಯಾ" ಇಂದು ನಮ್ಮ ಕೈಗಳಲ್ಲಿರುವ ಅತಿದೊಡ್ಡ ಅಸ್ತ್ರ. ಯಾವ ಕ್ಷಣದಲ್ಲೂ, ಎಲ್ಲಿ ಬೇಕಿದ್ದರೂ ಕೂತು, ಯಾರ ಹಂಗಿಲ್ಲದೇ ನಮ್ಮ ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಲು ಅವಕಾಶವಿರುವ ಕಾರಣ ಸದಾ ಸೋಶಿಯಲ್ ಮೀಡಿಯಾಗಳತ್ತ ಮುಖಮಾಡಿ ಕುಳಿತು ಬಿಡುತ್ತೇವೆ.
ಕೆಲವೇ ಕೆಲವು ವರ್ಷ ಹಿಂದಿನವರೆಗೂ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳ ಮೊರೆ ಹೋಗಬೇಕಿತ್ತು, ನಾಲ್ಕು ಸಾಲುಗಳ ಅಭಿಪ್ರಾಯ ಪ್ರಕಟವಾಗಲು ನಾಲ್ಕು ದಿನ ಕಾಯಬೇಕಿತ್ತು. ಆದರೆ ಈಗ ಮಾಧ್ಯಮಗಳೇ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಹುಡುಕಿ ಹೆಕ್ಕಿ ತೆಗೆದು ಪ್ರಕಟಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಂತರ್ಜಾಲ ವ್ಯವಸ್ಥೆ ಸುಲಭವಾಗಿ ಕೈಗೆಟುಕಲು ಆರಂಭವಾದ ನಂತರ ಜನರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಂದಿಂಚೂ ಬಿಡದೆ ಬಳಸಿಕೊಳ್ಳುವುದನ್ನೂ ಕಲಿತಿದ್ದಾರೆ.
ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹೀಗೆ ಯಾವುದೇ ವಲಯದ ಸುದ್ದಿಗಳಾದರೂ ಸಾಮಾಜಿಕ ಜಾಲತಾಣಗಳ ಕಣ್ತಪ್ಪಿಸಿ ಉಳಿಯುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಹಬ್ಬಿಕೊಂಡಿದೆ. ಈ ಮೂಲಕ ಸಾಮಾನ್ಯ ಜನರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆ‌ ಕಲ್ಪಿಸಿರುವುದು ಸಾಮಾಜಿಕ ಜಾಲತಾಣಗಳ ಹೆಗ್ಗಳಿಕೆ ಎಂದು ಹೇಳಬಹುದಾದರೂ ಅದರಿಂದಾಗುತ್ತಿರುವ ಅಪಸವ್ಯಗಳನ್ನು ಗಮನಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯ ಹಲವು ಸಾಧ್ಯತೆಗಳು ಸಾಕ್ಷಿ ಸಮೇತ ಎದುರಾಗುತ್ತವೆ. ಕೆಲ ವರ್ಷಗಳ ಹಿಂದೆ ಜನರ ಅಭಿಪ್ರಾಯಕ್ಕೆ ಮುಖ್ಯ ಮಾಧ್ಯಮವಾಗಿದ್ದ ಮುದ್ರಣ ಮಾಧ್ಯಮ ಕ್ಷೇತ್ರವೇ ಇಂದು ತನ್ನ ಮೂಲ ಉದ್ದೇಶದಿಂದ ಮಾರುದೂರ ಸರಿದು ನಿಂತಿದೆಯಾದರೂ ಅದಕ್ಕಿರುವ ಕೆಲವು ನೀತಿ, ನಿರ್ಬಂಧನೆಗಳ ಕಾರಣದಿಂದ ತೋರ್ಪಡಿಕೆಗಾದರೂ ಸೂಕ್ಷ್ಮತೆಯನ್ನು ಉಳಿಸಿಕೊಂಡಿದೆ. ಆದರೆ, ಇಂದು ಬಹುತೇಕ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯಾಗಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮತೆಯನ್ನು ಹುಡುಕುವುದೇ ಅಸಾಧ್ಯ!

ಬೀದಿಯಲ್ಲಾಗುವ ಪ್ರೇಮಿಗಳ ಜಗಳದಿಂದ ಹಿಡಿದು ಸಿಎಎ - ಎನ್‌ಆರ್‌ಸಿ ಗಲಭೆಯ ತನಕ ಪ್ರಮುಖ - ಅಪ್ರಮುಖವೆಂಬ ಬೇಧ ಭಾವಗಳಿಲ್ಲದೆ ಎಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಗಗಿಟ್ಟಿಸಿಕೊಳ್ಳುತ್ತವೆ. ಇದನ್ನೇ ಆಹಾರವನ್ನಾಗಿಸಿಕೊಂಡು ಅದೆಷ್ಟೋ ಟ್ರೋಲ್‌ಪೇಜ್‌ಗಳು ಬದುಕುತ್ತಿವೆ ಕೂಡ. ಆದರೆ, ಇವುಗಳೆಲ್ಲಾ ಕಾರ್ಯ ನಿರ್ವಹಿಸುವ ರೀತಿ, ಅವುಗಳು ಬಳಸುವ ಭಾಷೆ, ಅದಕ್ಕಿರುವ ಪ್ರತಿಕ್ರಿಯೆ ಇವುಗಳನ್ನೆಲ್ಲಾ ನೋಡಿದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ.
ಮುಖ್ಯವಾಹಿನಿ ಮಾಧ್ಯಮಗಳ ಭಾಷೆಯ ಗಂಭೀರತೆಗೆ ಸಂಪೂರ್ಣ ತದ್ವಿರುದ್ಧವಾಗಿರುವ "ಆನ್‌ಲೈನ್ ಭಾಷೆ" ಇಂದಿನ ಸಮಾಜದ ಹದಗೆಟ್ಟ ಮನಸ್ಥಿತಿಯ ಪ್ರತಿಬಿಂಬದಂತೆ ಕಾಣುವುದಂತೂ ಸುಳ್ಳಲ್ಲ. ಸಿದ್ಧಾಂತ, ಪಕ್ಷ, ಜಾತಿ, ಧರ್ಮ ಹೀಗೆ ಯಾವುದೋ ಒಂದು ವಿಷಯದ ಕುರಿತು ಅಭಿಮಾನ ವ್ಯಕ್ತಪಡಿಸುವಲ್ಲಿ, ಅದನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ನಾವು ಬಳಸುವ ಭಾಷೆ, ವಿಚಾರ, ಅದು ಸೃಷ್ಟಿಸಬಹುದಾದ ತೊಂದರೆಯ ಕುರಿತು ಯೋಚಿಸುವ ವ್ಯವಧಾನ ನಮಗಿಲ್ಲವಾದ್ದರಿಂದ ಸೋಶಿಯಲ್ ಮೀಡಿಯಾದ ಎಷ್ಟೋ ಚರ್ಚೆಗಳು ಕೆಸರೆರಚಾಟದಲ್ಲಿ ಮುಕ್ತಾಯಗೊಳ್ಳುತ್ತಿವೆ. ಒಂದು ವಿಚಾರದ ಬಗ್ಗೆ ನಿಖರ ಮಾಹಿತಿ ಇಲ್ಲವೆಂದರೂ ಗುಂಪಿನಲ್ಲಿ ಗೋವಿಂದ ಎನ್ನುವ ಪರಿಪಾಠ ನಮ್ಮನ್ನು ಆವರಿಸಿಕೊಂಡಿರುವುದರಿಂದ ಎಷ್ಟೋ ತಪ್ಪುಗಳು ನಮ್ಮ ಅರಿವಿಗೆ ಬಾರದೆ ನಿರಂತರವಾಗಿ ನಮ್ಮಿಂದಲೇ ಆಗುತ್ತಿರುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಥವಾ ಧಾರ್ಮಿಕತೆಯ ಮೇಲೆ ನಡೆಯುವ ಬಹುತೇಕ ಚರ್ಚೆಗಳಲ್ಲಿ ಬಳಕೆಯಾಗುವ ಅವಾಚ್ಯ, ಅಶ್ಲೀಲ ಶಬ್ಧಗಳ ಹಾವಳಿಯನ್ನು ನೋಡಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಪದೇಪದೇ ಕಾಡುತ್ತದೆ. ವೈಯಕ್ತಿಕ ದ್ವೇಷ, ಆಕ್ರೋಶಗಳನ್ನೆಲ್ಲಾ ಅತೀ ಕೀಳುಮಟ್ಟದಲ್ಲಿ ವ್ಯಕ್ತಪಡಿಸುವುದೇ ಹಿರಿಮೆ, ಇನ್ನೊಬ್ಬರ ವೈಯುಕ್ತಿಕ ವಿಷಯವನ್ನು ಇಟ್ಟುಕೊಂಡು ಕಾಲೆಳೆಯುವುದೇ ಸೃಜನಶೀಲತೆ ಎಂಬ ಭ್ರಮೆ ಆವರಿಸಿಕೊಂಡಿರುವ ಈ ಹೊತ್ತಿನಲ್ಲಿ ಇದನ್ನೆಲ್ಲಾ ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿಕೊಂಡರೆ ಉತ್ತರವೂ ಸಿಗದಂತಹ ಪರಿಸ್ಥಿತಿ ಇದೆ.

ಇತ್ತೀಚೆಗೆ ಪೇಜಾವಾರ ಶ್ರೀಗಳು ನಿಧನರಾದಾಗ ಫೇಸ್‌ಬುಕ್‌ನಲ್ಲಿ - "ಎಂದೋ ಅಳಿದಿರುತ್ತಾರೆ,ಇಂದು ಅನೌನ್ಸ್ ಮಾಡಿರುತ್ತಾರೆ. ವಿಶ್ವಮಾನವ ದಿನಾಚರಣೆಯ ತೀವ್ರತೆಯ ತಗ್ಗಿಸಲು.
ಪ್ರತಿಯೊಬ್ಬರು ವಿಶ್ವಮಾನವರಾಗಲು ಬಿಡದ ಕುತಂತ್ರಿಗಳು ಇವರು...." ಎಂಬ ಪೋಸ್ಟ್ ಒಂದು ಹರಿದಾಡಿತು.
ಅದೇ ರೀತಿ ಕಳೆದ ಜನವರಿ 30 ರಂದು ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆಯನ್ನು ವಿರೋಧಿಸುವ ನೆಪದಲ್ಲಿ ಕೆಲವರು ಗೋಡ್ಸೆಯ ಫೋಟೋವನ್ನು ಪೋಸ್ಟ್ ಮಾಡಿದರು. ವಿಪರ್ಯಾಸವೆಂದರೆ ಅದೇ ಸಂದರ್ಭದಲ್ಲಿ ಜಾಮಿಯಾ ವಿವಿ ಬಳಿ ಪ್ರತಿಭಟನೆ ನಡೆಯುವಾಗ ಜಾಮಿಯಾ ವಿವಿ ಬಳಿ ಯುವಕನೋರ್ವ ಗುಂಡು ಹಾರಿಸಿದ ಘಟನೆಯ ವರದಿಯೂ ಹರಿದಾಡಿತು. ಇವೆಲ್ಲವೂ ನಮ್ಮ ಸಮಾಜ ಹದಗೆಡುತ್ತಿರುವುದಕ್ಕೆ ಉದಾಹರಣೆಗಳು. ಯಾವುದೇ ವಿಚಾರವನ್ನು ವಿರೋಧಿಸಲು ಅಥವಾ ಕಣ್ಮುಚ್ಚಿಕೊಂಡು ಸಮರ್ಥಿಸಲು ನಮಗೆ ಯಾವ ಸಾಕ್ಷಿ, ದಾಖಲೆಗಳೂ ಬೇಕಾಗಿಲ್ಲ. ಮನಸ್ಸಿನಲ್ಲಿ ಯಾವುದೇ ಒಂದು ಸಿದ್ಧಾಂತ, ಪಕ್ಷ ಅಥವಾ ಧರ್ಮದ ಬಗ್ಗೆ ಅಂಧಾಭಿಮಾನ ಹಾಗೂ  ಸೋಶಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್, ಮೊಬೈಲಲ್ಲಿ ಇಂಟರ್ನೆಟ್ ಇಷ್ಟು ಇದ್ದುಬಿಟ್ಟರೆ ಸಾಕೆಂಬಂತಾಗಿದೆ.

ಇವುಗಳನ್ನು ನಿರ್ಲಕ್ಷಿಸಿ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕೊಳಕು ಆಲೋಚನೆ, ಮೂಟೆಗಟ್ಟಲೆ ದ್ವೇಷವನ್ನು ಬಿಟ್ಟು ಬೇರೇನನ್ನೂ ನಾವು ಉಳಿಸಲಾರೆವು. ಇದೇ ಮನಸ್ಥಿತಿ ಮುಂದುವರೆದರೆ ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳುಮಾಡಿದ ಅಪಕೀರ್ತಿ ನಮಗೆ ಮೆತ್ತಿಕೊಳ್ಳುವುದಂತೂ ನಿಶ್ಚಿತ.



- ಸ್ಕಂದ ಆಗುಂಬೆ

ಈ ಬರಹ ಪ್ರತಿಧ್ವನಿ.ಕಾಂ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

Comments

Popular posts from this blog

"ಕಂದ" ಪದ್ಯ

ಆಗುಂಬೆ ಎಂಬ ಹಸಿರುಲೋಕ!

ಬರಗಾಲ