Friday, 29 December 2017

ನನ್ನದೆಂತದೋ‌ ಗೋಳು..


ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ?
ಊಹ್ಞೂಂ... ಇದನ್ನೆಲ್ಲಾ ನಾ ಹೇಗೆ ಹೇಳಲಿ? ಹುಟ್ಟಿ ಇಪ್ಪತ್ತು ಚಳಿಗಾಲ ಕಳೆದಿಲ್ಲ, ಇನ್ನೂ ಎಳೆಬಿಸಿಲು ಕಂಡರೆ ಮುದುರಿ ಕುಳಿತುಕೊಳ್ಳುವ ನನಗೆ ಇದನ್ನು ವಿವರಿಸಬಲ್ಲ ಅನುಭವ ದಕ್ಕುವುದೆಂತು? ಅನುಭವದ ಬದಲಾಗಿ ಒಂದಷ್ಟು ಅನುಮಾನಗಳು ಬಲಿತಿವೆ, ಪದೇ ಪದೇ ಕಾಡುತ್ತವೆ, ಕೊರೆಯುತ್ತವೆ.. ನಂಗೇನು ಗೊತ್ತಿಲ್ಲ ಬಿಟ್ಟುಬಿಡು ಎಂದಾಗ ತಲೆ ಮೊಟಕಿ ಹೋಗಿ ಉತ್ತರ ಹುಡುಕೋ ಸೋಂಭೇರಿ ಎಂದು ಗದರುತ್ತವೆ. ಅಯ್ಯೋ!! ಹಾಳು ಚಳಿ.. ಮುರುಟಿ ಕೂತಷ್ಟು ದೇಹದ ಸಂದುಗಳಲ್ಲೆಲ್ಲಾ ಓಡಾಡುತ್ತದೆ, ಬೆಚ್ಚಗೆ ಮಲಗೋಣ ಎಂದರೆ ಇದೊಂದು ಪೀಕಲಾಟ, ಆಗಲ್ಲಪ್ಪಾ!!
ಇದ್ದ ವಿಷಯವನ್ನು ಇದ್ದಷ್ಟೇ ಹೇಳಿದರೆ ಚೋಟುದ್ದ, ಅಷ್ಟರಲ್ಲೇ ಹೇಳಿ ಮುಗಿಸಬಾರದಾ ಮಾರಾಯ ಎಂದು ಒಳಗೊಬ್ಬ ಕೂಗುತ್ತಿದ್ದಾರೆ.. ಕಿವುಡು ಬೆರಳುಗಳೆರೆಡು ದಿಕ್ಕಿಗೊಂದರಂತೆ ಬಿದ್ದಿರುವ ಅಕ್ಷರವನ್ನು ಕುಟ್ಟಿಕುಟ್ಟಿ ಕಥೆ ಕಟ್ಟುತ್ತಿವೆ, ಸಾಕ್ಷಿಗೆ ನಿದ್ದೆಗೆಟ್ಟಿರುವ ಕಣ್ಣಿವೆ!
ಎಲ್ಲಿಂದ ಶುರು ಮಾಡಿದೆ?? ಹ್ಞಾಂ.. ವಿಷಯಕ್ಕೆ ಬರ್ತೇನೆ. ಎಲ್ಲಾ ಸರಿ!! ಒಂದು ದಿನದಲ್ಲಿ ಅದೆಷ್ಟು ಭಾವನೆಗಳನ್ನು ನಿಜವಾಗಿ ಅನುಭವಿಸೋಕೆ ಸಾಧ್ಯ? ಒಂದು, ಎರಡು, ಮೂರು.....ನೂರು?? ನೂರಾ!! ನೂರೆಲ್ಲಾ ಗಂಟೆಯಲ್ಲೇ ಆಗಿಹೋಗ್ಬೋದು ಕಣಾ.. ಅಂತ ರಾಗ ತೆಗೆಯುತ್ತಾನೆ ಒಳಗಿನವನು.. ಹ್ಞೂಂ ಮತ್ತೆ... ಈ ಫೇಸ್ಬುಕ್ಕಲ್ಲಿ ಕ್ಯೂ ನಿಲ್ಲುವ ಸಾಲುಸಾಲು ಪೋಸ್ಟ್ಗಳು ಒಂದಕ್ಕೊಂದು ಸಂಬಂಧವೇ ಇರೋದಿಲ್ಲ.. ಆದರೂ ಅದನ್ನೆಲ್ಲಾ ಅನುಭವಿಸೋದಿಲ್ವಾ? ಊಹ್ಞೂಂ ಅನ್ನೋದಾದ್ರೆ, ಹಾರ್ಟು, ವಾವ್, ಹಹ್ಹಹ್ಹ, ಛೇ, ಗುರ್ರ್ ಅಂತೆಲ್ಲಾ ಹತ್ತಾರು ಭಾವಗಳನ್ನು ಒಂದೇ ನಿಮಿಷದಲ್ಲಿ ರಿಯಾಕ್ಟ್ ಮಾಡೋದ್ ಹೇಗೆ? ಒಂದು ಪೋಸ್ಟ್ ಓದಿ, ಅದರ ಬಗ್ಗೆ ಕಡೇಪಕ್ಷ ಎರಡು.. ಹೋಗಲಿ ಒಂದು ನಿಮಿಷವಾದರೂ ಯೋಚಿಸ್ತೀವಾ?? ಊಹ್ಞೂಂ ಅಷ್ಟೆಲ್ಲಾ ಟೈಮೆಲ್ಲಿದೆ? ಹಾಗಾದ್ರೆ ಬಿಟ್ಟಿ ಒತ್ಬೋದು ಅಂತ ಸುಖಾಸುಮ್ಮನೇ ಒತ್ತಿಬಿಡೋದಾ ಅಂತ ಮರುಪ್ರಶ್ನೆ!! ಕೇಳಿದ್ಯಾರು? ನಾನೇ...
ಇಂಥಾ ದ್ವಂದ್ವವೊಂದು ನನ್ನಲ್ಲಿ ಹುಟ್ಟೇ ಇರಲಿಲ್ವಾ? ಹುಟ್ಟಿತ್ತು... ಬರೆದಿರಲಿಲ್ಲ..!! ಇವತ್ತು, ಈ ರಣ ಚಳಿಯಲ್ಲೇ ತಗಲಾಕ್ಕೊಂಡಿದೀನಿ ಅಷ್ಟೇ.. ಓದುವವರ ತಲೆ ಕೆಡಿಸೋಕೆ... ಸರಿ..ಸರಿ... ಉತ್ತರ ಸಿಕ್ತಾ? ಮಲಗ್ಬೇಕು. ಇಲ್ಲಾ ತಡ್ಯೋ... ಇನ್ನೂ ಬರ್ದಾಗಿಲ್ಲ.. ಕೂಗು ಜೋರಾಯಿತು ಅವನದ್ದು.
ಹೇಳ್ಬೇಕಾಗಿದ್ದನ್ನ ಸ್ಪಷ್ಟವಾಗಿ ಹೇಳಿದ್ದೀನಾ?? ಹೇಗೂ ಇಲ್ಲಿಯ ತನಕ ತಾಳ್ಮೆಯಿಂದ ಓದಿದ್ದೀರಲ್ಲ.. ಈ ಅನುಮಾನಕ್ಕೂ ಹಾಗೇ ಉತ್ತರಿಸಿ ಹೋಗಿ.. ಒಳಗಿನವನ ಆತ್ಮಕ್ಕಾದರೂ ಶಾಂತಿ ದಕ್ಕಲಿ..
ಅಂದಹಾಗೆ ಪ್ರಶ್ನೆ ತುಂಬಾ ಸಿಂಪಲ್ - ನಿರ್ಭಾವುಕತೆಯಾ? ಕಪಟತನವಾ? ಭಾವನೆಗಳನ್ನು ಅನುಭವಿಸಲಾರದಷ್ಟು ಸಮಯದ ಅಭಾವವಾ? ವಿವಿಧ ಭಾವಗಳನ್ನು ಕ್ಷಣಾರ್ಧದಲ್ಲಿ ಅನುಭವಿಸಿ ಮರೆಯುವ ತಾಕತ್ತಾ?

Tuesday, 26 December 2017

ಹಸಿರು ಲಂಗದ ಹುಡುಗಿ



ಹಸಿರು ಲಂಗದ ಹುಡುಗಿ
ಓರೆ ಬೈತಲೆ ತೆಗೆದು
ಮುಂಗುರುಳ ಸುತ್ತಿಟ್ಟು
ನಗೆ ಚೆಲ್ಲುತಾಳೆ..
ಸುರಗಿ ಸಂಪಿಗೆ ಜಾಜಿ
ಮಲ್ಲಿಗೆ ಮಂದಾರ
ಸುರಿದು ಮಾಲೆಯ ಕಟ್ಟಿ
ಘಮ್ಮೆನ್ನುತಾಳೆ..
ಅಗಲ ಹಣೆ ನಡುವೆ
ಚುಕ್ಕಿ ಬೊಟ್ಟನು ಇಟ್ಟು
ಆಗಾಗ ತಿರುಗಿ
ಹುಬ್ಬೆತ್ತುತಾಳೆ..
ಕಪ್ಪು ಕಾಡಿಗೆ ಹಚ್ಚಿ
ಬೆರಗು ನೋಟ ಚೆಲ್ಲಿ
ಕಣ್ಣ ಬಾಣ ನೆಟ್ಟು
ಗುರಿ ಹೂಡುತಾಳೆ..
ಹೊಳೆವ ಬಳೆ ಕಾಲ್ಗೆಜ್ಜೆ
ಚೋಟುದ್ದ ಕಿವಿಯೋಲೆ
ಎಳೆ ಸರವ ತೊಟ್ಟು
ಘಲ್ಲೆನ್ನುತಾಳೆ..
ತುಂಬು ಹರೆಯದ ಬಾಲೆ
ಎಳಿತಾಳೆ ಸೆಳಿತಾಳೆ
ಆಗಾಗ ಬಂದು
ಎದೆ ತುಳಿಯುತಾಳೆ..

ಇಂತಿಷ್ಟು ಕಾರಣವೋ
ಇನ್ನೆಷ್ಟು ಕಾರಣವೋ
ಹಸಿರು ಲಂಗದ ಹುಡುಗಿ
ಮನ ಕದಿಯುತಾಳೆ
ಮಾತೇ ಮರೆಯುತಿದೆ
ಎದೆ ಜೋರು ಬಡಿಯುತಿದೆ
ಹೋಗಿ ಹೇಳಿದರೀಗ
ಏನೆನ್ನುತಾಳೆ..?

- ಅನಾಸ್ಕ

Thursday, 7 December 2017

ಸಂದರ್ಶನ : ಅಂಶಿ ಪ್ರಸನ್ನಕುಮಾರ್


"ಕನ್ನಡಪ್ರಭ" - ನಾನು ಅತ್ಯಂತ ಇಷ್ಟಪಡುವ ದಿನಪತ್ರಿಕೆ. ಪತ್ರಿಕೋದ್ಯಮದೆಡೆಗೆ ಬಾಲ್ಯದಿಂದಲೂ ಆಸಕ್ತಿಯಿದ್ದರೂ ಅದರೆಡೆಗೆ ಕುತೂಹಲ ಮೂಡಿಸಿದ್ದು ಕನ್ನಡಪ್ರಭ. ಪಿಯುಸಿ ಮುಗಿಸಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಮಗೆ ಉಪನ್ಯಾಸಕರಾಗಿದ್ದ ಲೋಹಿತ್ ಸರ್ ನನ್ನನ್ನು ಕರೆದು ಯಾವುದಾದರು ಪತ್ರಿಕೆಯಲ್ಲಿ Internship ಮಾಡ್ತೀಯಾ? ಎಂದಾಗ ಖುಷಿಯಿಂದ ಹ್ಞೂಂ ಎಂದಿದ್ದೆ. ಹಾಗಾದರೆ ಕನ್ನಡಪ್ರಭ ಕಚೇರಿಗೆ ಹೋಗು ನಾನು ಅಂಶಿ ಸರ್ ಹತ್ತಿರ ಮಾತನಾಡಿದ್ದೇನೆ ಎಂದಾಗಲಂತೂ ಹಿರಿಹಿರಿ ಹಿಗ್ಗಿದ್ದೆ.
ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ಈ ಮೂರು ವರ್ಷಗಳ ಅವಧಿಯಲ್ಲಿ ದಿನದಿನವೂ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ, ಮೈಸೂರಿನ ಕನ್ನಡಪ್ರಭ ಕಚೇರಿ ನನಗೆ ಕಾಲೇಜಿಗಿಂತಲೂ ಹೆಚ್ಚಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಪ್ರತಿಯೊಬ್ಬರೂ ನನಗೆ ಅಣ್ಣಂದಿರ ಹಾಗೆ ಸಿಡುಕದೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲೂ ಮೈಸೂರು ಆವೃತ್ತಿಯ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಸರ್ ಅವರಂತೂ ಮಾರ್ಗದರ್ಶನದ ಜೊತೆಜೊತೆಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಆಗಾಗ ನಾನು ಕಚೇರಿಗೆ ಗೈರಾಗುತ್ತಲೇ ಇರುವುದರಿಂದ "Regularly Irregular fellow" ಎಂಬ ಪಟ್ಟವನ್ನು ಕಟ್ಟಿ ರೇಗಿಸುತ್ತಿರುತ್ತಾರೆ.
ಕನ್ನಡಪ್ರಭದಲ್ಲಿ ನನ್ನ ಬೈಲೈನ್ ಬಂದಾಗಲೆಲ್ಲಾ ಹಲವರು ಅರೆ!! ಕೆಲಸಕ್ಕೆ ಸೇರಿಕೊಂಡಾಯ್ತಾ ಎಂದು ಕೇಳುವುದುಂಟು, ಹೀಗೆ ಬೈಲೈನ್ ಕೊಡುತ್ತಾ, ವರದಿ ಮಾಡುವುದನ್ನು ಕಲಿಸುತ್ತಾ ದಿನೇ ದಿನೇ ಪತ್ರಿಕಾ ಪ್ರಪಂಚದ ಆಳ ಅಗಲಗಳನ್ನು ಪರಿಚಯಿಸುತ್ತಿರುವ ಅಂಶಿ ಸರ್ ಅವರು ಬರೆದಿರುವ "ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ" ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ.
ಈ ಸುಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತಾ - ಕೆಲ ದಿನಗಳ ಹಿಂದೆ ಅವರೊಂದಿಗೆ ನಡೆಸಿದ್ದ ಚಿಕ್ಕ ಸಂದರ್ಶನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ…


ಕನ್ನಡ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದವರ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ದಕ್ಕಿದ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಅತ್ಯಂತ ಜವಾಬ್ದಾರಿಯುತವಾಗಿ ಕಾಯ್ದುಕೊಂಡು, ಹಮ್ಮುಬಿಮ್ಮುಗಳಿಲ್ಲದೇ ಸರಳವಾಗಿ ಬದುಕುತ್ತಿರುವವರು ವಿರಳ. ಸುದೀರ್ಘ ಮೂವತ್ತು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಜೀವಿಸಿ, ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ, ಬದಲಾಗುತ್ತಿರುವ ಪತ್ರಿಕೋದ್ಯಮ ಲೋಕದಲ್ಲಿ ಅದರ ಮೂಲ ತತ್ವಗಳಿಗೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವವರು ಶ್ರೀಯುತ ಅಂಶಿ ಪ್ರಸನ್ನಕುಮಾರ್. ಕರ್ನಾಟಕ ರಾಜ್ಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಯುತರು ಹತ್ತಕ್ಕೂ ಹೆಚ್ಚು ಪುಸ್ತಕಗಳ ಲೇಖಕರೂ ಹೌದು. ಪ್ರಸ್ತುತ ಕನ್ನಡಪ್ರಭ ದೈನಿಕದ ಮೈಸೂರು ಆವೃತ್ತಿ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ.


ಸ್ಕಂದ : ನಮಸ್ತೇ, ಪತ್ರಿಕೋದ್ಯಮದಲ್ಲಿನ ನಿಮ್ಮ ಸುದೀರ್ಘ ಪಯಣ ಹೇಗಿದೆ?

ಅಂಶಿ ಪ್ರಸನ್ನಕುಮಾರ್ : ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಮೂವತ್ತು ವರ್ಷಗಳಾಯಿತು, ಪ್ರಾರಂಭದ ದಿನಗಳಲ್ಲಿ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ಕನ್ನಡಪ್ರಭ ಸೇರಿದೆ. ಹಿರಿಯರು ಮತ್ತು ಸಹೋದ್ಯೋಗಿಗಳೆಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.


ಸ್ಕಂದ : ಪತ್ರಿಕೋದ್ಯಮದೆಡೆಗೆ ಸೆಳೆತ ಮೂಡಲು ಕಾರಣವೇನು?

ಅಂಶಿ : ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ ಕ್ಷೇತ್ರದೆಡೆಗೆ ಒಲವಿತ್ತು, ಕಥೆ, ಕವನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಒಂದೆರೆಡು ಕವನಗಳಿಗೆ ಬಹುಮಾನವೂ ಲಭಿಸಿತ್ತು. ಸಾಹಿತ್ಯಾಸಕ್ತಿಯೇ ನನ್ನನ್ನು ಪತ್ರಿಕಾ ರಂಗದೆಡೆಗೆ ಕರೆದು ತಂದಿತು.


ಸ್ಕಂದ : ಪತ್ರಕರ್ತನಾಗಿ ನಿಮ್ಮ ಆರಂಭದ ದಿನಗಳಿಗೂ, ಇಂದಿಗೂ ಏನು ವ್ಯತ್ಯಾಸ ಕಾಣುತ್ತದೆ?

ಅಂಶಿ : ತುಂಬಾ ಬದಲಾವಣೆ ಆಗಿದೆ, ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಅಂದಿನ ದಿನಗಳಲ್ಲಿ ಇದ್ದ ಗುಣಾತ್ಮಕತೆ, ನೈತಿಕತೆ ಈಗಿನ ಪತ್ರಕರ್ತರಲ್ಲಿ ಕಾಣುತ್ತಿಲ್ಲ. ಸ್ಪರ್ಧೆಯ ಜಂಜಾಟದಲ್ಲಿ ಪತ್ರಿಕೋದ್ಯಮದ ಮೂಲ ಆಶಯ ಮರೆಯಾಗುತ್ತಿದೆ.


ಸ್ಕಂದ : ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ಇವೆರಡರಲ್ಲಿ ಯಾವುದು ಉತ್ತಮ?

ಅಂಶಿ : ಪತ್ರಿಕೋದ್ಯಮದ ಅರ್ಥವೇ ಇಂದು ಬದಲಾಗಿದೆ. ಅಂತಹದ್ದರಲ್ಲಿ ದೃಶ್ಯ ಮಾಧ್ಯಮಕ್ಕೆ ಹೋಲಿಸಿದರೆ ಪತ್ರಿಕಾರಂಗ ಜವಾಬ್ದಾರಿಯುತವಾಗಿದ್ದು, ತನ್ನ ಘನತೆ ಉಳಿಸಿಕೊಂಡಿದೆ. ಪತ್ರಿಕೆಯಲ್ಲಿ ಕೆಲಸದ ಜೊತೆಜೊತೆಗೆ ಜ್ಞಾನಾಭಿವೃದ್ಧಿ ಮಾಡಿಕೊಳ್ಳಲೂ ಅವಕಾಶವಿದೆ. ಓದು, ಬರಹವೇ ಪತ್ರಕರ್ತನನ್ನು ಕ್ರಿಯಾಶೀಲರನ್ನಾಗಿಸುವುದು. ಆದರೆ ದೃಶ್ಯ ಮಾಧ್ಯಮ ಸಮಯದೊಟ್ಟಿಗೆ ಮಾಡುವ ಹೋರಾಟ. ಪ್ರತಿ ಕ್ಷಣವೂ ಒತ್ತಡವಿರುತ್ತದೆ, ಟಿಆರ್‌ಪಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮೌಲ್ಯವನ್ನೇ ಬದಿಗಿಡುವ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ಧಾವಂತದ ಬದುಕಿನಲ್ಲಿ ರಣರಂಗೋತ್ಸಾಹದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ದೃಶ್ಯ ಮಾಧ್ಯಮಕ್ಕೆ ಹೋಗುವ ಮೊದಲು ಕೆಲ ವರ್ಷಗಳ ಮಟ್ಟಿಗಾದರೂ ಪತ್ರಿಕೆಯಲ್ಲಿ ದುಡಿದು ಅನುಭವ ಪಡೆದುಕೊಳ್ಳುವುದು ಉತ್ತಮ.


ಸ್ಕಂದ : ಪತ್ರಿಕೋದ್ಯಮ ಓದಿದವರು ಯಾವ ಯಾವ ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು?

ಅಂಶಿ : ಪತ್ರಿಕೋದ್ಯಮ ಓದಿದವರಿಗೆ ಅವಕಾಶ ತುಂಬಾ ವಿಫುಲವಾಗಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನು ಹೊರತುಪಡಿಸಿ ರೇಡಿಯೋ, ಸರ್ಕಾರಿ ನೌಕರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಪಡೆಯಬಹುದು. ಉತ್ತಮ ಭಾಷಾ ಜ್ಞಾನ ಮತ್ತು ಬರವಣಿಗೆಯ ಹಿಡಿತ ಉಳ್ಳವರನ್ನು ಪ್ರತಿಷ್ಠಿತ ಕಂಪೆನಿಗಳು ಕೈ ಬೀಸಿ ಕರೆಯುತ್ತವೆ. ಆದ್ದರಿಂದ ಪತ್ರಿಕೋದ್ಯಮವೆಂದರೆ ಕೇವಲ ಪತ್ರಿಕೆ, ಟಿವಿ ಎಂದು ಭಾವಿಸಬೇಕಿಲ್ಲ.


ಸ್ಕಂದ : ಮೈಸೂರಿನ ಎಲ್ಲಾ ಪತ್ರಿಕಾ ಕಚೇರಿಗಳಿಗಿಂತ ಕನ್ನಡಪ್ರಭ ತುಂಬಾ ವಿಭಿನ್ನ. ನೀವು ಹಲವು ವಿದ್ಯಾರ್ಥಿಗಳಿಗೆ ಕೆಲಸ ಕಲಿಯಲು ಅವಕಾಶ ಕಲ್ಪಿಸಿದ್ದೀರಿ, ಯಾವುದೇ ಅಹಂಕಾರವಿಲ್ಲದೇ ಕಚೇರಿಯಲ್ಲಿ ಉತ್ತಮ ವಾತಾವರಣ ಕಟ್ಟಿಕೊಡುವ ಮೂಲಕ ಪತ್ರಿಕೋದ್ಯಮದ ಪರಿಚಯ ಮಾಡಿಕೊಡುವ ನಿಮ್ಮ ಕುರಿತು ಹಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಅಂಶಿ : ಪತ್ರಿಕೋದ್ಯಮ ನಿಂತ ನೀರಲ್ಲ, ಅದು ನಿರಂತರ ಹೊಸತನವನ್ನು ಬಯಸುತ್ತದೆ. ಇಂತಹ ಕ್ಷೇತ್ರಕ್ಕೆ ಬರಲು ಆಸಕ್ತಿ ಹೊಂದಿದವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಉತ್ತಮ ಪತ್ರಕರ್ತರನ್ನು ರೂಪಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕುರಿತು ಇಲ್ಲಸಲ್ಲದ ಕಲ್ಪನೆಗಳನ್ನು ಕಟ್ಟಿಕೊಂಡು, ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಪತ್ರಕರ್ತ ಎಲ್ಲವನ್ನೂ ಮೀರಿದವ, ತನ್ನಿಚ್ಛೆಯಂತೆ ಬದುಕಬಹುದು ಎಂದು ಭಾವಿಸುತ್ತಾರೆ. ಆದರೆ ಪತ್ರಿಕೋದ್ಯಮದ ಮೂಲ ರೂಪವೇ ಬೇರೆ, ಇದರ ನೈಜತೆಯ ಕುರಿತು ಅವರಲ್ಲಿ ಅರಿವು ಮೂಡಿಸಿ, ವಿದ್ಯಾರ್ಥಿಗಳಾಗಿದ್ದಾಗಲೇ ಉತ್ತಮ ಮೌಲ್ಯಗಳನ್ನು ಬಿತ್ತಿದರೆ ಮಾತ್ರ ಮುಂದೆ ಅವರಿಂದ ಉತ್ತಮ ಪತ್ರಕರ್ತನನ್ನು ನಿರೀಕ್ಷಿಸಲು ಸಾಧ್ಯ. ಅದರ ಹೊರತಾಗಿ ಅಹಂಕಾರದಿಂದ ನಡೆದುಕೊಂಡರೆ ಅವರ ಆಸಕ್ತಿಯನ್ನು ನಾವೇ ಚಿವುಟಿದಂತಾಗುತ್ತದೆ.


ಸ್ಕಂದ : ಪತ್ರಿಕೋದ್ಯಮಕ್ಕೆ ಬರಲಿಚ್ಛಿಸುವ ಯುವ ಪತ್ರಕರ್ತರಿಗೆ ನಿಮ್ಮ ಸಂದೇಶವೇನು?

ಅಂಶಿ : ಪತ್ರಕರ್ತನಾಗಲು ಬಯಸುವವನಿಗೆ ಅತಿ ಮುಖ್ಯವಾಗಿ ನೈತಿಕತೆ ಇರಬೇಕು. ನೈತಿಕತೆ ಇಲ್ಲದವರು ಪತ್ರಕರ್ತರಾಗಲು ಯೋಗ್ಯರಲ್ಲ. ಹಣ ಸಂಪಾದನೆ, ಪ್ರಚಾರ ಪ್ರಿಯತೆಯನ್ನೇ ಗುರಿಯಾಗಿಸಿಕೊಂಡು ಈ ಕ್ಷೇತ್ರಕ್ಕೆ ಬಂದರೆ ಹೆಚ್ಚು ದಿನ ಇಲ್ಲಿ ಉಳಿಯುವುದಿಲ್ಲ. ಸಮಾಜಮುಖಿ ಕೆಲಸ ಮಾಡುವ ಮನೋಭಾವ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದರೆ ಮಾತ್ರ ಯಶಸ್ಸು ಸಾಧ್ಯ.

-----------------


- ಸ್ಕಂದ ಆಗುಂಬೆ 

Wednesday, 29 November 2017

ಹರೆಯದ ನದಿ ಸುಗಮವಾಗಿ ಹರಿಯಲಿ..



ಹೊರಗೆಲ್ಲೋ ಸುತ್ತಾಡಿ ಮನೆಗೆ ಬಂದು ಕೂತಿರುತ್ತಾನಷ್ಟೇ. "ಎಲ್ ಹೋಗಿದ್ದಿ? ಹೋಗೋಕ್ ಮುಂಚೆ ಒಂದ್ ಮಾತ್ ಹೇಳಿ ಹೋಗೋಕಾಗಲ್ವಾ? ಸುಸ್ತಾಗಿದೆ ಅನ್ಸುತ್ತೆ.. ಫ್ರೆಶ್ ಆಗು, ತಿನ್ನೋಕ್ ಏನಾರ್ ಕೊಡ್ತೀನಿ.." ಅಂತ ತುಸು ಸಿಡುಕುತ್ತಲೇ ಪ್ರೀತಿ ತೋರುತ್ತಾಳೆ ಅಮ್ಮ. ಆಕೆ ಒಳಗೆ ಹೋಗಿ ಹತ್ತು ನಿಮಿಷವಾದರೂ ಈತ ಕುಳಿತಲ್ಲಿಂದ ಎದ್ದಿರುವುದಿಲ್ಲ, ಮತ್ತೆ ಕರೆಯುತ್ತಾಳೆ. ಉತ್ತರ ಬಾರದಿದ್ದನ್ನು ನೋಡಿ ಬೈಯುತ್ತಲೇ ಧಾವಿಸಿದವಳಿಗೆ, ಅಷ್ಟೊತ್ತು ಮೊಬೈಲ್ ನೋಡುತ್ತಾ ಮುಗುಳ್ನಗುತ್ತಿದ್ದ ಮಗ ತಾನು ಬಂದ ಕೂಡಲೇ ಸ್ಕ್ರೀನ್ ಆಫ್ ಮಾಡಿದ್ದನ್ನು ಕಂಡು ಸಣ್ಣಗೆ ಅನುಮಾನ! ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ. ಸಾಲದ್ದಕ್ಕೆ ಅನುಮಾನಗಳಿಗೆ ಪುಷ್ಟಿ ಕೊಡುವಂತೆ ಮಗನ ನಡವಳಿಕೆಯಲ್ಲಿ ಸಣ್ಣಪುಟ್ಟ ಬದಲಾವಣೆ ಕಾಣುತ್ತಲೇ ಇರುತ್ತದೆ.

ಮೊನ್ನೆ ಮೊನ್ನೆ ತಾನೇ ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಟ್ಟ ಮಗ ದೊಡ್ಡವನಂತೆ ವರ್ತಿಸಲು ಆರಂಭಿಸುತ್ತಾನೆ, ಸ್ಕೂಲಿಗೆ ಹೋಗುತ್ತಿದ್ದಾಗ ಟಿವಿ ನೋಡೋಕೂ ಪರ್ಮಿಶನ್ ಕೇಳುತ್ತಿದ್ದವನು ಈಗ ಅದೆಲ್ಲಿಗೆ ಹೋಗುವುದಾದರೂ ಹೇಳುವುದಿಲ್ಲ. ರಾತ್ರಿ ಹನ್ನೆರಡಾದರೂ ಮೊಬೈಲ್‍ನಲ್ಲೇ ಮುಳುಗಿರುತ್ತಾನೆ. ಕಾರಣವೇ ಇಲ್ಲದೆ ಸಿಡುಕುತ್ತಾನೆ, ಕಾರಣ ಕೇಳಿದರೆ ಸ್ವಲ್ಪ ಸುಮ್ನಿರು ಮಾರಾಯ್ತಿ ಅಂತ ಮುಖ ತಿರುಗಿಸುತ್ತಾನೆ. ಅರೆ!! ಇವನಿಗೇನಾಯಿತು, ಲವ್ವು? ಫ್ರೆಂಡ್ಸ್ ಸಹವಾಸ? ಸಿಗರೇಟು? ಡ್ರಗ್ಸ್? ಅಯ್ಯೋ.. ನ್ಯೂಸ್ ಚಾನೆಲ್‍ಗಳಲ್ಲಿ ದಿನಾ ಅಂಥದ್ದೇ ಕಥೆಗಳ ರಿಪೀಟೆಡ್ ಟೆಲಿಕ್ಯಾಸ್ಟ್‍ಗಳನ್ನು ನೋಡಿದ ಅಮ್ಮನಿಗೀಗ ತಲೆಬಿಸಿ!

ತರಕಾರಿ ತರೋಕೆ ಅಂತ ಮಾರ್ಕೆಟ್‍ಗೆ ಹೋದವಳಿಗೆ ಅಚಾನಕ್ ಆಗಿ ತನ್ನ ಕಾಲೇಜು ಗೆಳತಿ ಸಿಗುತ್ತಾಳೆ, ಕ್ಷೇಮ - ಕುಶಲವನ್ನೆಲ್ಲಾ ವಿಚಾರಿಸುವಷ್ಟರಲ್ಲಿ ತನ್ನ ಮಗ ಓದುತ್ತಿರುವ ಕಾಲೇಜಿನಲ್ಲೇ ಗೆಳತಿಯ ಮಗಳೂ ಓದುತ್ತಿರುವ ವಿಷಯ ತಿಳಿಯುತ್ತದೆ, ಸಾಲದ್ದಕ್ಕೆ ಇಬ್ಬರೂ ಒಂದೇ ತರಗತಿ!! ತಾವಿಬ್ಬರೇ ಮತ್ತೆ ಕಾಲೇಜಿಗೆ ಹೋದಷ್ಟು ಖುಷಿಪಡುತ್ತಾರೆ. ಆದರೆ, ತನ್ನ ಮಗಳೂ ರಾತ್ರಿಯೆಲ್ಲಾ ಮೊಬೈಲಲ್ಲಿ ಮುಳುಗಿರುತ್ತಾಳೆ ಎಂಬ ಸ್ನೇಹಿತೆಯ ಮಾತು ಕೇಳಿದವಳಿಗೆ ಒಳಗೊಳಗೇ ಏನೋ ತಳಮಳ, ಅತ್ತ ಸ್ನೇಹಿತೆಗೂ! ಕಾಲೇಜಿನಿಂದ ಬಂದ ಮಗನ ಬಳಿ ಸ್ನೇಹಿತೆಯ ಮಗಳ ಕುರಿತು ಹೇಳಿದಾಗ, "ಓಹ್, ಶೀ ಈಸ್ ಮೈ ಬೆಸ್ಟೀ.. ತುಂಬಾ ಒಳ್ಳೆಯವ್ಳು" ಎಂದು ಕಣ್ಣರಳಿಸುತ್ತಾನೆ. ಅಮ್ಮನ ಎದೆಯಾಳದಲ್ಲಿದ್ದ ಭಯಂಕರ ಅನುಮಾನವೊಂದು ಸ್ಫೋಟಗೊಳ್ಳುತ್ತದೆ. "ಆ ಹುಡುಗಿಗೂ ಇವನಿಗೂ ಲವ್ವೇನಾದರೂ ಇರಬಹುದಾ..?" ಬಾಯ್ಬಿಟ್ಟು ಕೇಳುವುದಿಲ್ಲ, ಸುಮ್ಮನೇ ಗಮನಿಸುತ್ತಾಳೆ.

ಇದು ಕಾಲೇಜಿಗೆ ಹೋಗುವ ಮಕ್ಕಳಿರುವ ಹೆಚ್ಚಿನ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ದೃಶ್ಯ. ಸ್ವಲ್ಪ ಅರ್ಥ ಮಾಡಿಕೊಳ್ಳುವ ಅಪ್ಪ - ಅಮ್ಮನಾದರೆ ಓಕೆ. ಆದರೆ ಕಟ್ಟುನಿಟ್ಟಾಗಿದ್ದರೆ ಮಾತ್ರ ಮಕ್ಕಳ ಗೋಳು ಇಷ್ಟಕ್ಕೇ ಮುಗಿಯುವುದಿಲ್ಲ.


    ಇಪ್ಪತ್ತಕ್ಕೆ ಅರಳು-ಮರಳು


ಅಪ್ಪ, ಅಮ್ಮನಿಗೆ ಮಕ್ಕಳು ಹಾದಿ ತಪ್ಪಿದರೆ ಎಂಬ ಭಯ, ಅದು ತಪ್ಪೆಂದು ಹೇಳಲೂ ಆಗುವುದಿಲ್ಲ. ಕೆಲವೊಂದು ವಿಚಾರಗಳಲ್ಲಿ ಮಕ್ಕಳಾದ ನಾವುಗಳು ನಡೆದುಕೊಳ್ಳುವ ರೀತಿ ಅವರಿಗೆ ಮತ್ತಷ್ಟು ಅನುಮಾನಿಸಲು ಕಾರಣವಾಗುತ್ತದೆ, ಮೀಸೆ ಚಿಗುರುವಾಗ ಲೋಕ ಕಾಣುವುದಿಲ್ಲ ಎಂಬಂತೆ, ಹುಡುಗರು ನಾವು ಮಾಡಿದ್ದೇ ಸರಿ ಎಂಬ ಧೋರಣೆ ತಾಳುತ್ತೇವೆ. ಕಾಲೇಜಿಗೆ ಹೋಗೋ ನಮಗೆ ಬುದ್ದಿವಾದ ಹೇಳೋದು ಅಂದ್ರೆ ಏನು? ಅಂತ ತಿರುಗಿ ಮಾತಾಡೋಕೆ ಶುರುಮಾಡ್ತೀವಿ. ಹುಡುಗಿಗೆ ವಾಟ್ಸಪ್ಪಿನಲ್ಲಿ ಕಳುಹಿಸಿದ ಹಾರ್ಟ್ ಸಿಂಬಲ್, ಗುಡ್ ನೈಟ್ ಬೇಬಿ ಮೆಸೇಜುಗಳನ್ನ ಡಿಲೀಟ್ ಮಾಡೋಕೆ ಮನಸ್ಸು ಒಪ್ಪದಿದ್ದಾಗ ಅಪ್ಪ, ಅಮ್ಮನ ಕಣ್ಣಿಗೆ ಬೀಳದಿರಲೆಂದು ಮೊಬೈಲ್‍ಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಒದಗಿಸುತ್ತೇವೆ. ಅತ್ತ ಹುಡುಗಿಯರು ಹಾಯ್ ಹನಿ ಎಂದು ಸ್ವೀಟಾಗಿ ಮೆಸೇಜು ಕಳುಹಿಸೋ ಹುಡುಗನ ನಂಬರನ್ನು ತನ್ನ ಗೆಳತಿಯ ಹೆಸರಿನಲ್ಲಿ ಸೇವ್ ಮಾಡಿಕೊಳ್ತಾರೆ, ಬೆಳಗ್ಗೆ ತಡವಾಗಿ ಎದ್ದು ಅರ್ಧ ಗಂಟೆಯಲ್ಲಿ ರೆಡಿಯಾಗಿ ಸ್ಕೂಲಿಗೆ ಹೋಗುತ್ತಿದ್ದವರು, ಕಾಲೇಜಿಗೆ ಹೋಗೋಕೆ ಶುರು ಮಾಡಿದ ಮೇಲೆ ದಿನಕ್ಕೊಂದು ಹೇರ್‍ಸ್ಟೈಲ್, ಡ್ರೆಸ್ ಎನ್ನುತ್ತಾ ಗಂಟೆಗಟ್ಟಲೆ ಸಿಂಗರಿಸಿಕೊಳ್ಳುತ್ತಾರೆ, ಮೊದಲೆಲ್ಲಾ ಅಮ್ಮನೊಟ್ಟಿಗೆ ಕುಳಿತು ಧಾರಾವಾಹಿ ನೋಡ್ತಿದ್ದವರು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಅವರದ್ದೇ ಲೋಕದಲ್ಲಿ ತೇಲಾಡೋಕೆ ಶುರುಮಾಡ್ತಾರೆ. ಒಟ್ನಲ್ಲಿ ಹರೆಯ ನಮ್ಮನ್ನು ಆವರಿಸಿಕೊಂಡ ತಕ್ಷಣ ಬದಲಾಗ್ತಾ ಹೋಗ್ತೀವಿ. ಅದು ನಮ್ಮಲ್ಲಾಗುವ ಸಹಜ ಬದಲಾವಣೆಯಾದರೂ ಕಾಲ ಕೆಟ್ಟೋಗಿದೆ ಎಂಬ ಸಾರ್ವಜನಿಕ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸುವ ಪೋಷಕರುಗಳಿಗೆ ಮಾತ್ರ ಸಂಥಿಂಗ್ ಈಸ್ ರಾಂಗ್ ಎಂಬ ಅನುಮಾನ ಬಿಟ್ಟೂಬಿಡದೆ ಕಾಡೋಕೆ ಶುರುವಾಗುತ್ತೆ.


     ಅಯ್ಯೋ! ಕಾಲ ಸರಿಯಿಲ್ಲ.


ಕಾಲೇಜಿನಿಂದ ವಾಪಾಸ್ಸು ಮನೆಗೆ ಬರಬೇಕಾಗಿದ್ದ ಹುಡುಗಿ ಹೋಗಿದ್ದಾದರೂ ಎಲ್ಲಿಗೆ? ಪ್ರೀತಿಸಿದವನೇ ಮೋಸ ಮಾಡಿಬಿಟ್ಟನಾ? ಆ ಕೊಲೆಯ ಹಿಂದೆ ಯಾರ ನೆರಳಿದೆ? ಹೆಣ್ಣು ಹೆತ್ತ ಪೋಷಕರು ನೋಡಲೇ ಬೇಕಾದ ಸ್ಟೋರಿ ಇದು! ಪಾತಕಿಗಳ ಲೋಕ.. ಇಂದು ರಾತ್ರಿ ಹತ್ತು ಗಂಟೆಗೆ. ಹೀಗೆ ನ್ಯೂಸ್ ಚಾನೆಲ್‍ಗಳು ದಿನಕ್ಕೊಂದು ಕಥೆಗಳನ್ನು ತೋರಿಸಲು ಶುರುಮಾಡಿದ ಮೇಲಂತೂ.. ಪೋಷಕರ ಕಣ್ಣಲ್ಲಿ ಕಲಿಯುಗ ಕುಲಗೆಟ್ಟು ಹೋಗಿದೆ! ತಮ್ಮ ಮಕ್ಕಳಿಗೆ ಏನಾದೀತೋ ಎಂಬ ಭಯದಿಂದ ಅವಶ್ಯಕತೆಗಿಂತ ಜಾಸ್ತಿ ಕಾಳಜಿ ವಹಿಸೋಕೆ ನೋಡ್ತಾರೆ. ಆದರೆ ಮಕ್ಕಳಿಗೆ ಮಾತ್ರ ಇದು ಅತಿರೇಖ ಅನ್ನಿಸೋಕೆ ಶುರುವಾಗಿ ಪೋಷಕರಿಂದ ಸಾಧ್ಯವಾದಷ್ಟು ದೂರ ಇರೋಕೆ ಪ್ರಯತ್ನಿಸುತ್ತಾರೆ, ನಿರಾಕರಿಸುತ್ತಾರೆಂಬ ಸೂಚನೆ ಸಿಕ್ಕಲ್ಲಿ ಸುಳ್ಳು ಹೇಳಿ ಹೊರಹೋಗೋಕೆ ಶುರುಮಾಡಿಬಿಡ್ತಾರೆ. ತಾವು ಕೂಡ ಆ ವಯಸ್ಸನ್ನು ದಾಟಿ ಬಂದಿದ್ದಾದರೂ, ಕಾಲ ಬದಲಾಗಿದೆ ಎಂಬ ಕಾರಣಕ್ಕೆ ಹರೆಯದ ಮನಸ್ಸಿನ ತುಮುಲ, ಚಂಚಲತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ತಂದೆ ತಾಯಿಯರು ವಿಫಲರಾಗಿಬಿಡುತ್ತಾರೆ.


     ತಪ್ಪಾದ್ರೆ ತಿದ್ಕೋತಾರೆ..!


ಹುಚ್ಚುಕೋಡಿ ಮನಸ್ಸು ಕೆಲ ಪ್ರಯೋಗಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಪಕ್ವವಾಗೋಕೆ ಸಾಧ್ಯ. ಮಕ್ಕಳು ಹಾಳಾಗ್ತಾರೆ ಎಂಬ ಭಯದಿಂದ ಬಂದೋಬಸ್ತ್ ಮಾಡಿಬಿಟ್ಟರೆ, ಕಣ್ಣಾಮುಚ್ಚಾಲೆ ಆಟ ಶುರುಮಾಡ್ತಾರೆ. ಆದ್ದರಿಂದ ಹರೆಯದ ಮಕ್ಕಳಿಗೆ ಅವರ ಇತಿ ಮಿತಿಗಳನ್ನ ಸೂಕ್ಷ್ಮವಾಗಿ ಅರ್ಥೈಸಿ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ಮಿತಿಮೀರಿದರೆ ಅಂಕುಶದಿಂದ ತಿವಿಯುವುದು ಇದ್ದಿದ್ದೇ. ಕಾಲೇಜಿನಲ್ಲಿ ಕಂಡ ಮುದ್ದು ಹುಡುಗಿಯ ಕುರಿತು ಕವನವೋ, ಪ್ರೇಮಪತ್ರವೋ ಬರಯಬೇಕೆನಿಸಿದರೆ ಬರೆಯುವಷ್ಟು ಸ್ವಾತಂತ್ರ್ಯ ಕೊಡಿ, ಹರೆಯದ ತೊಳಲಾಟಗಳನ್ನ ಹಂಚಿಕೊಂಡರೆ ಅಪರಾಧ ಮಾಡಿದಂತೆ ಗದರಬೇಡಿ, ಹರೆಯದ ಜೀವಗಳು ಅನ್ಯಲಿಂಗದವರೊಡನೆ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ ಅದಕ್ಕೇ ಬೇರೆ ಅರ್ಥ ಕಲ್ಪಿಸಿಕೊಂಡು ಅನುಮಾನಿಸಬೇಡಿ. ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದೆನಿಸಿದರೆ ಮುಕ್ತವಾಗಿ ನಿಮ್ಮ ಅನಿಸಿಕೆಯನ್ನು ಹಂಚಿಕೊಂಡು ಸಮಸ್ಯೆ ಬಗೆಹರಿಸಿಬಿಡಿ. ಇಷ್ಟಕ್ಕೂ ನಡೆಯಲು ಕಲಿಯುವಾಗ ಎಡವಿ ಬೀಳುವುದು ಸಹಜ.  ಎಡವಿದರೆ ಅದನ್ನು ನಿಮ್ಮ ಬಳಿ ಮುಚ್ಚುಮರೆ ಇಲ್ಲದೇ ಹಂಚಿಕೊಳ್ಳುವಷ್ಟು ಸಲುಗೆ ಕೊಡಿ, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಪಾಲಿಗೆ ನಂಬಿಕಸ್ಥ ಸ್ನೇಹಿತರಾಗಿ. ಅವರ ಮಾತುಗಳನ್ನು ಕೇಳುವ ಕಿವಿಗಳಾಗಿ, ಮರಳಿ ನಿಮ್ಮ ಹರೆಯಕ್ಕಿಳಿಯಿರಿ.




ಬಾಡುವ ಮುನ್ನ ಹರೆಯವನ್ನು ಆಸ್ವಾದಿಸಿ


ಹದಿನೈದು, ಹದಿನಾರು ವರ್ಷಗಳನ್ನು ದಾಟುವಷ್ಟರಲ್ಲಿ ನಮ್ಮಲ್ಲಿ ಸರಿ, ತಪ್ಪುಗಳ ಅರಿವು ಮೂಡಿರುತ್ತದೆ. ಆದ್ದರಿಂದ ನಾವುಗಳೂ ಕೂಡ ಮನಸ್ಸನ್ನು ಸ್ವಯಂ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಕಲಿಯಬೇಕು. ಬದುಕನ್ನು ರೂಪಿಸುವ ವಯಸ್ಸಿನಲ್ಲಿ ಓದು, ಮೋಜು, ಮಸ್ತಿಗಳನ್ನು ಸರಿಯಾಗಿ ನಿಭಾಯಿಸಬೇಕು. ಪ್ರೇಮ ವೈಫಲ್ಯವಾಯಿತೆಂದೋ, ಪರೀಕ್ಷೆಯಲ್ಲಿ ಫೇಲ್ ಆಯಿತೆಂದೋ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಎಲ್ಲಾ ನೋವುಗಳನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಬೇಕು. ಯಾವುದೋ ಚಟಕ್ಕೆ ದಾಸನಾಗಿ ಜೀವನ ಹಾಳುಮಾಡಿಕೊಳ್ಳುವದಕ್ಕಿಂತ ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಲು ಸಹಕರಿಸುವ ದಾರಿಗಳನ್ನ ಹುಡುಕಬೇಕು. ಮೋಜು ಮಸ್ತಿಗೆ ಸಿಗರೇಟ್, ಗಾಂಜಾ, ಎಣ್ಣೆಗಳ ಹೊರತಾಗಿ ಸಾಕಷ್ಟು ಉತ್ತಮ ಮಾರ್ಗಗಳಿದೆಯೆಂಬುದನ್ನು ಅರಿತು ಸಿಕ್ಕ ಸ್ವಾತಂತ್ಯವನ್ನು ಸ್ವೇಚ್ಛೆಯನ್ನಾಗಿಸಿಕೊಳ್ಳದೇ ಬದುಕಬೇಕು. ಅಪ್ಪ, ಅಮ್ಮ, ಅಣ್ಣ, ತಂಗಿಯರ ಬಳಿ ಭಾವನೆಗಳನ್ನು ಹಂಚಿಕೊಳ್ಳಿ. ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ಹರೆಯ ಮತ್ತಷ್ಟು ಸುಗಮವಾಗುತ್ತದೆ. ಹರೆಯದ ಹವ್ಯಾಸ, ಅಭ್ಯಾಸಗಳು ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂಬುದನ್ನು ಮರೆಯದಿರಿ. ಉಳಿದ ತಲೆನೋವುಗಳು ಇದ್ದಿದ್ದೇ, ಹರೆಯದ ಹೂವು ಬಾಡುವ ಮುನ್ನ ಆಸ್ವಾದಿಸಿ.


- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ 'ನಾವು' ಪುರವಣಿಯಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

Saturday, 18 November 2017

ಊಹಾರೇಖೆ


ನವಜಾತ ತಂಗಾಳಿ
ಹೊಕ್ಕುಳ ಬಳ್ಳಿ ಸಡಿಲಿಸಿ
ದಿಕ್ಕು ದೆಸೆಯಿಲ್ಲದೆ
ಬೀದಿಗಿಳಿಯುತ್ತದೆ..

ಅಪ್ರಾಪ್ತ ಇರುಳಿಗೆ
ರಾತ್ರಿಯಿಡೀ ಉರಿವ
ಹುಣ್ಣಿಮೆ ಚಂದ್ರಮನ ಮೇಲೆ
ಹುಸಿಗೋಪ..

ಚಡಪಡಿಸುತ್ತೇನೆ..

ಮೆದು ಪಾದದ ಹುಡುಗಿ
ಎದೆ ತುಳಿಯುತ್ತಾಳೆ
ಊಹಾರೇಖೆಗಳ ರಂಗೋಲಿ
ಉದರದಂಗಳದಲ್ಲಿ.‌.

ಬಿಳಿರಾತ್ರಿ ಬಿಳಿಚಿಕೊಳ್ಳಲು
ಹುಡುಗಿ ಹೊರಡುತ್ತಾಳೆ
ಚೆಂಗೆದ್ದು ಕುಣಿದ
ಸ್ವಪ್ನ ಸುಸ್ತುಗೊಳ್ಳುತ್ತದೆ..

ಮತ್ತೆ ಚಡಪಡಿಸುತ್ತೇನೆ.‌‌.

ಸ್ವಯಂಕೃತ ಅಪರಾಧಕ್ಕೆ
ಕ್ಷಮೆಯಾಚಿಸಿಕೊಂಡು
ಆತ್ಮಾವಲೋಕಿಸಿ
ಕ್ಷಮಿಸಿಕೊಳ್ಳುತ್ತೇನೆ

ಅಸ್ವಸ್ಥ ಕನಸಿಗಾಗಿ
ಕೂತು ಕೊರಗುತ್ತೇನೆ
ಸುಡುವ ನೆನಪು ಅಳೆಯಲು
ಯಾವ ಮಾಪಕ?

- ಅನಾಸ್ಕ


Saturday, 4 November 2017

ಮುದ್ದು ಜೀವಗಳಿಗೆ ಹ್ಯಾಪಿ ಬರ್ತ್ ಡೇ 😘


ಸಂಬಂಧಗಳಿಗೆ ತೀರಾ ನಿರ್ಬಂಧ ಹೇರಿ.. ಟೈಂ ಟೇಬಲ್‌ ಹಾಕಿ ಶಿಸ್ತುಬದ್ಧ ಮಾಡೋಕ್ ಹೋಗ್ಬಾರ್ದು, ಅವುಗಳ ಪಾಡಿಗೆ ಸ್ವತಂತ್ರವಾಗಿರೋಕೆ ಬಿಟ್ಟುಬಿಡಬೇಕು, ನಿಜವಾಗಿಯೂ ಸೆಳೆತ ಇದ್ದಿದ್ದೇ ಹೌದಾದರೆ ಅವು ಎಲ್ಲೇ ಹೋದರೂ ದೂರಾಗುವುದಿಲ್ಲ, ಎಂದೋ ಯಾವುದೋ ಬಿಂದುವಿನಲ್ಲಿ ಸಂಧಿಸುವುದು ಖಚಿತ. ಕರುಳಿಗೆ ನೈಜ ಸಂಬಂಧಗಳನ್ನು ಹಿಡಿದಿಟ್ಟುಕೊಳ್ಳೋ ತಾಕತ್ತು ಇದ್ದೇ ಇರುತ್ತೆ..

ಈ ನವೆಂಬರ್ ನಾಲ್ಕು ಅನ್ನೋದೇ ಹುಣ್ಣಿಮೆ ಬೆಳದಿಂಗಳಿದ್ದಂತೆ, ಸಾಲದ್ದಕ್ಕೆ ಇವತ್ತು ಅಸಲಿ ಪೌರ್ಣಿಮೆ, ಅದೇ ಖುಷಿಯಲ್ಲಿ ಒಂದಷ್ಟ್ ಸಾಲುಗಳನ್ನ ಗೀಚ್ತಿದ್ದೀನಿ.. ಸಹಿಸಿಕೊಳ್ಳಿ -

ಒಡಹುಟ್ಟಿದವಳು.. ತೀರಾ ಒದ್ದಾಡಿ ಬದುಕಿದ ಕೂಸು ಅದು. ಏಳು ತಿಂಗಳಿಗೆ ಹುಟ್ಟಿ, ಏಳು ಜನ್ಮಕ್ಕಾಗುವಷ್ಟು ಸಂಕಟಪಟ್ಟಿರಬಹುದು. ಹುಟ್ಟಿ ಹೆಚ್ಚೂ ಕಡಿಮೆ ಹದಿನೈದು ದಿನಗಳಾದ ಮೇಲೆ ತಂಗಿಯ ಮುಖ ನೋಡಿದ್ದು ನಾನು. ಅವ್ಳು ಶಾಲೆಗ್ ಸೇರೋಷ್ಟ್ರಲ್ಲಿ ನಾನು ಹಾಸ್ಟೆಲ್ ಸೇರಿದೆ, ಸರಿಸುಮಾರು ಆರು ವರ್ಷವಾಯ್ತು ಅವಳೊಟ್ಟಿಗೆ ಹೆಚ್ಚು ಕಾಲ ಕಳೆಯದೆ. ಮನೆಗ್ ಹೋದಾಗ ಜಗಳ - ಹೊಡೆದಾಟಕ್ಕೇ ಟೈಂ ಸಾಕಾಗಲ್ಲ, ಇನ್ನು ಕೂತ್ಕೊಂಡ್ ಮಾತಾಡೋದ್ ಎಲ್ಲಿ? 😉 ಮನೆಗ್ ದಿನಾ ಫೋನ್ ಮಾಡಿ ಅರ್ಧರ್ಧ ಗಂಟೆ ಮಾತಾಡಿದ್ರೂ ಅವ್ಳತ್ರ ಮಾತಾಡೋದ್ ಕಮ್ಮಿನೇ. ಅವ್ಳ ಕತೆಗಳಿಗೂ ನಮ್ಮ ಕತೆಗಳಿಗೂ ಅಜಗಜಾಂತರ ವ್ಯತ್ಯಾಸ ಇರೋದ್ರಿಂದ ಪರಸ್ಪರ ಹಂಚಿಕೊಳ್ಳೋಕೂ ಆಗಲ್ಲ 😂😂 ಆದ್ರೂ ಅದೊಂಥರಾ ಮುದ್ಮುದ್ದು ಜೀವ, ನಾ ಕೊಡೋ ಅತೀ ಚಿಕ್ಕ ಸರ್ಪ್ರೈಸ್ಗಳನ್ನೂ ತೀರಾ ದೊಡ್ಡ ಖುಷಿಯಂತೆ ಸಂಭ್ರಮಿಸುತ್ತೆ, ಇದಕ್ಕಿಂತ ಗಾಢ ಪ್ರೀತಿ ಇನ್ನೆಲ್ಲಿರೋಕೆ ಸಾಧ್ಯ? 😘❤

ಮತ್ತೆ ಕೆಲವು ಸಂಬಂಧಗಳು ಜೀವನದ ನಡುದಾರಿಯಲ್ಲೆಲ್ಲೋ ಆಕಸ್ಮಿಕವಾಗಿ ಸಿಕ್ಕು ಆಪ್ತವಾಗುವವು, ಅದ್ರಲ್ಲಿ ಹೆಚ್ಚಿನವು ಸದ್ದೇ ಮಾಡದೆ ಎದ್ದು ಹೊರಟು.. ಹೆಚ್ಚು ಕಾಡದೇ ಮರೆಯಾದ್ರೆ, ಬೆರಳೆಣಿಕೆಯಷ್ಟು ಸಂಬಂಧಗಳು ಮಾತ್ರ ರಕ್ತಸಂಬಂಧಗಳಷ್ಟೇ ಗಟ್ಟಿಯಾಗ್ಬಿಡ್ತಾವೆ. ಅಂತಹ ಅತ್ಯಾಪ್ತ ಜೀವಗಳಲ್ಲೊಬ್ಬಳು Mandara 😘 ಇವ್ಳ್ ನನ್ ಜೊತೆ ಅದ್ಯಾಕ್ ಅಷ್ಟ್ ಕ್ಲೋಸ್ ಆಗಿದ್ದು? ಅದ್ಹೇಗೆ ಸಲುಗೆ ಬೆಳ್ಸ್ಕೊಂಡಿದ್ದು? ಅನ್ನೋ ಯಾವ್ ಪ್ರಶ್ನೆಗಳಿಗೂ ಉತ್ತರ ಇಲ್ಲ.. ಇವ್ಳ್ ನನ್ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ರೆ ಮೇಲಿರೋ ದೇವ್ರ್ ಕೂಡ ನಗ್ಬಹುದೇನು.. ತಿಂಗ್ಳಿಗೊಂದ್ಸಲ ಫೋನಲ್ಲಿ ಮಾತಾಡಿದ್ರೆ ಅದೇ ಹೆಚ್ಚು, ಹುಚ್ಚೆದ್ದು ಒಂದ್ ವಾರ ಫುಲ್ ಮೆಸೇಜ್ ಮಾಡಿದ್ರೆ, ನೆಕ್ಸ್ಟ್ ಸ್ವಲ್ಪ‌ ದಿನಕ್ಕೆ ಉಳ್ದಿದ್ದೀವೋ? ಇಲ್ವೋ? ಅನ್ನೋದು ಕೂಡ ಇಬ್ರಿಗೂ ಗೊತ್ತಿರಲ್ಲ.. ಅಬ್ಬಬ್ಬಾ ಅಂದ್ರೆ ವರ್ಷದಲ್ ಎರಡ್ಮೂರ್ನಾಲ್ಕ್ ಸಲ ಮುಖಾಮುಖಿ ಆಗೋ ಅಂತ ಬೆಸ್ಟ್ ಫ್ರೆಂಡ್ಸು ನಾವು 😂😂 ನಾ ಕೊಡೋ ಎಲ್ಲಾ ಕಾಟಗಳನ್ನು ಸಹಿಸ್ಕೊಂಡು, ಚಕ್ರಬಡ್ಡಿ ಸಮೇತ ಅದನ್ನ ಹಿಂದಿರುಗಿಸೋ ದೋಸ್ತಿ ಇದು.. ಇವ್ಳನ್ನ ಜಾಸ್ತಿ ಹೊಗ್ಳೋಕ್ ಹೋದ್ರೆ ನಾನು ಆತ್ಮವಂಚನೆ ಮಾಡ್ಕೊಂಡಂಗ್ ಆಗುತ್ತೆ ಸೋ ಇಷ್ಟೇ ಸಾಕು ಬಿಡಿ 😝❤

ಈ ಎರಡು ಮುದ್ದು ಜೀವಗಳು ಹುಟ್ಟಿದ ದಿನ ಇವತ್ತು.. ಹುಣ್ಣಿಮೆ ಚಂದ್ರನಂತೆಯೇ ಇವರ ಬದುಕು ಸದಾ ಕಂಗೊಳಿಸಲಿ, ಇಂಥಾ ಚಂದದ ಸಂಬಂಧಗಳನ್ನ ಅಷ್ಟೇ ಜತನವಾಗಿ ಬೇಲಿ ಹಾಕದೇ ಉಳಿಸಿಕೊಳ್ಳೋ ಶಕ್ತಿ ನನಗೆ ಸಿಗಲಿ 😍😍😍
ನಿಮ್ಮ ಹಾರೈಕೆ ಸದಾ ಇರಲಿ 😘

Thursday, 2 November 2017

ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಆಸೆ ಚಿರಾಯು...



ಕೂಸುಮರೀ..

                   ಬೆಳದಿಂಗಳಿನಿಂದ ವಂಚಿತವಾದ ರಾತ್ರಿಯೊಂದು ಚಂದ್ರಮನ ತಂಪಿಗೆ ಹಂಬಲಿಸುವಂತೆ, ಅನಾಮಿಕ ಕಡಲಿನ ಭೋರ್ಗರೆತಕ್ಕೆ ಓಗೊಟ್ಟು ಮೈಲಿಗಟ್ಟಲೆ ಸಾಗಿ ಸೇರಲು ಪರಿತಪಿಸುವ ನದಿಯಂತೆ ಮನವೀಗ ನಿನ್ನ ಧ್ಯಾನದಲ್ಲಿದೆ. ಹಳವಂಡದ ಬದುಕಿಗೆ ಸಿಕ್ಕು ಜಡಗಟ್ಟಿರುವ ಭಾವನೆಗಳಿಗೆ ಮೃದು ಸ್ಪರ್ಶ ಬೇಕಿದೆ. ಸುತ್ತಲಿನ ಜಗದ ಕೌತುಕಗಳನ್ನೆಲ್ಲಾ ಮರೆಮಾಚುವಂತಹ ನಿನ್ನ ಕಾಡುವಿಕೆಯ ಗಾಢತೆ ಬದುಕಿನ ಮತ್ತೊಂದು ಮಜಲನ್ನು ಮುಖ್ಯ ವೇದಿಕೆಗೆ ಕರೆತಂದು ಕೂರಿಸಿದೆ. ನಿನ್ನ ಮೌನವನ್ನು ಅಧ್ಯಾಪಿಸುವ ನನ್ನೆಲ್ಲಾ ಯೋಜನೆಗಳು ತಲೆಕೆಳಗಾಗಿರುವ ಹೊತ್ತಿನಲ್ಲಿ ಭಾವನೆಗಳೆಲ್ಲಾ ಹಾಳೆಗೆ ಬೀಳುತ್ತಿವೆ. ಮಾಮೂಲಿ ಪದಗುಚ್ಛಗಳೆಲ್ಲಾ ನಿನ್ನ ವರ್ಣಿಸುವ ಪ್ರಯತ್ನದಲ್ಲಿ ಸೋತು ಬಿದ್ದಮೇಲೆ, ಇದೆಂಥದ್ದೋ ವಿಚಿತ್ರ ಶೈಲಿಯೊಂದು ಹುಟ್ಟಿಕೊಂಡಿದೆ. ಚಂದದ ಪದಗಳನ್ನೆಲ್ಲಾ ಹೆಕ್ಕಿ ತಂದು ಅದರಲ್ಲೇ ನಿನ್ನ ಮುದ್ದಾಡುವಾಸೆ, ಸದ್ಯಕ್ಕೀಗ ಪದಗಳ ಹುಡುಕಾಟದಲ್ಲಿದ್ದೇನೆ.. ಸಹಕರಿಸು, ಸ್ವೀಕರಿಸು.

                    ಹರೆಯದ ದೋಣಿ ಶುರುವಿನಲ್ಲೇ ಮಗುಚಿ ಬೀಳುವಂತಹಾ ಸೆಳೆತ ಸೃಷ್ಟಿಸಿದ್ದ ನಿನ್ನ ತುಂಟುತನದ ಅಲೆಯೀಗ ಶಾಂತವಾಗಿದ್ದೇಕೆ? ಹರೆಯವೀಗ ತನ್ನ ಪರಮಾವಧಿಗೆ ಸಾಮಿಪ್ಯವಾಗುತ್ತಾ, ತಟ ಸೇರುವ ಬದಲು ಮತ್ತೆ ಮಗುಚಿ ಬೀಳಲು ಹಪಹಪಿಸುತ್ತಿದೆ, ಸೂಚನೆಯಿಲ್ಲದೇ! ಅಲೆಯೆಬ್ಬಿಸಿಬಿಡು ಮತ್ತೆ ನಿನ್ನಲ್ಲಿ ಮುಳುಗುವೆ. ಸಾವರಿಸಿಕೊಳ್ಳುವ ಮುನ್ನವೇ ಆವರಿಸಿಬಿಡು ಮಿಸುಕಾಡದೇ ಲೀನವಾಗುವೆ. ಒಡಲಲ್ಲಿ ಹುದುಗಿಸಿಕೊಂಡಿರುವ ಇಂತಹ ಅದೆಷ್ಟೋ ಕನಸುಗಳಲ್ಲಿನ ಮುಖ್ಯ ಪಾತ್ರಧಾರಿ ನೀನು. ನಿನ್ನುಸಿರಿಗೆ ಕಾವು ಕೊಡುವ ಕೆಲಸ ಸಿಕ್ಕರೂ ಸಾಕು ಬದುಕಿಬಿಡುವೆ ಎಂಬ ಹುಂಬನ ಸ್ವಪ್ನ ಪ್ರಪಂಚದ ಮುಖ್ಯಾಂಶಗಳು ಇಂತಿವೆ..  ಮುಂಜಾವಿನಲ್ಲಿ ಮೈಮುರಿಯುವ ಸೂರ್ಯನ ಚೊಚ್ಚಲ ಕಿರಣ ನಿನ್ನ ಮುತ್ತಿನೋಲೆಯ ಕಿವಿಗಳಿಗೆ ಮುತ್ತಿಡುವ ಕ್ಷಣದಲ್ಲಿ ನಾನು ಪ್ರತಿಸ್ಪರ್ಧಿಯಾಗಬೇಕು, ನಡು ಮಧ್ಯಾಹ್ನಕ್ಕೆ ನೆರಳಾಗಬೇಕು, ಬೈಗಿನಲ್ಲಿ ನಿನ್ನಾಸೆ ಈಡೇರಿಸುವ ಬಂಧುವಾಗಬೇಕು, ನಿಶೆಯಲ್ಲಿ ನಶೆಯೇರಿಸುವ ಮಧುವಾಗಬೇಕು... ಇಂತಹ ಹಲವು ಬಯಕೆಗಳ ಕರಡು ಪ್ರತಿ ಕನಸಿನ ಕಚೇರಿಯಲ್ಲಿ ಬಿದ್ದಿದೆ, ಸಾಧ್ಯವಾದರೆ ಪರಿಷ್ಕರಣೆಗೆ ಕೈ ಜೋಡಿಸು.

                    ನಿನ್ನ ಕಾಲುಂಗರದ ಸಂಗೀತಕ್ಕೆ ಪದ ಸಂಯೋಜಿಸಿ ಜೊತೆಗೂಡಿ ಹಾಡುತ್ತಾ, ಸಭ್ಯತೆಯ ಗಡಿ ನೂಕಿ ಬೆಳೆದ ಪೋಲಿತನ ಭರಿತ ರಾತ್ರಿಗೆ ಬಟ್ಟೆ ಹೊಲಿಯೋಣ. ಬದುಕಿನ ಖಾಸಗಿ ಕ್ಷಣಗಳನ್ನು ಕೂಡಿಡಲು ಜಂಟಿಖಾತೆಯೊಂದನ್ನು ತೆರೆದು, ತಂಪುಗತ್ತಲಲ್ಲಿ ನಡುಗುತ್ತಾ ಬಿದ್ದಿರುವ ನಕ್ಷತ್ರ ನಮ್ಮ ಅಪ್ಪುಗೆಯ ಕಂಡೇ ಉದ್ದೀಪಿಸುವಂತೆ ಬದುಕಿಬಿಡೋಣ. ನಿನ್ನ ಕಣ್ರೆಪ್ಪೆ ವಿಶ್ರಮಿಸುವಾಗೆಲ್ಲಾ ನಾ ಕಾವಲುಗಾರನಾಗಬೇಕಿದೆ ಸತಾಯಿಸದೆ ಹ್ಞೂಂಗುಟ್ಟು, ಕಾಡಿಗೆಯ ರೇಖೆಯನ್ನೂ ದಾಟದೆ ಪ್ರಾಮಾಣಿಕನಾಗಿ ದುಡಿಯುವೆ. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ನನಗಾಗಿ ಕೊಂಚ ಕ್ಷಣಗಳ ಸಾಲ ನೀಡು, ಉಸಿರಿನ ಕೊನೇ ಸಾಲು ದೇಹದಿಂದ ನಿರ್ಗಮಿಸುವವರೆಗೂ ನಿನ್ನ ಜೀತದಾಳಾಗುವೆ. ಭವದ ಅತ್ಯುತ್ಕೃಷ್ಟ ಆಕಾಂಕ್ಷೆಗಳನ್ನೆಲ್ಲಾ ನಿನಗಾಗಿಯೇ ರೂಪಿಸುವೆ, ಬದುಕಿನ ಸಾರಾಂಶವನ್ನು ಹಿಡಿದಿಟ್ಟಿರುವ ಮೂರಕ್ಷರದ ನಿನ್ನ ನಾಮಧೇಯವನ್ನು ಲಗ್ನ ಪತ್ರಿಕೆಯಲ್ಲಿ ನನ್ನ ಹೆಸರೊಟ್ಟಿಗೆ ಉಲ್ಲೇಖಿಸಲು ಅನುಮತಿಸು.. ಇಹದ ಪರಿವೆಯ ಮರೆತು ನವಲೋಕದ ನಾಗರೀಕರಾಗೋಣ.

             ತಕರಾರುಗಳಿದ್ದರೆ ಮೇಲ್ಮನವಿ ಸಲ್ಲಿಸು ವಿಚಾರಣೆಗೆ ಹಾಜರಾಗುವೆ. ಒಪ್ಪಿತವಾದಲ್ಲಿ ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಚಿರಂಜೀವಿ ಆಸೆಗೆ ಚಾಲನೆ ನೀಡುವೆ.


                                                   ಇಂತಿ ನಿನ್ನ ಧ್ಯಾನಸ್ಥ..

                                                      ಸ್ಕಂದ ಆಗುಂಬೆ

 ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ಕ್ಯಾಂಪಸ್" ಪುರವಣಿಯಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

   

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...