ಕೂಸುಮರೀ..
ಬೆಳದಿಂಗಳಿನಿಂದ ವಂಚಿತವಾದ ರಾತ್ರಿಯೊಂದು ಚಂದ್ರಮನ ತಂಪಿಗೆ ಹಂಬಲಿಸುವಂತೆ, ಅನಾಮಿಕ ಕಡಲಿನ ಭೋರ್ಗರೆತಕ್ಕೆ ಓಗೊಟ್ಟು ಮೈಲಿಗಟ್ಟಲೆ ಸಾಗಿ ಸೇರಲು ಪರಿತಪಿಸುವ ನದಿಯಂತೆ ಮನವೀಗ ನಿನ್ನ ಧ್ಯಾನದಲ್ಲಿದೆ. ಹಳವಂಡದ ಬದುಕಿಗೆ ಸಿಕ್ಕು ಜಡಗಟ್ಟಿರುವ ಭಾವನೆಗಳಿಗೆ ಮೃದು ಸ್ಪರ್ಶ ಬೇಕಿದೆ. ಸುತ್ತಲಿನ ಜಗದ ಕೌತುಕಗಳನ್ನೆಲ್ಲಾ ಮರೆಮಾಚುವಂತಹ ನಿನ್ನ ಕಾಡುವಿಕೆಯ ಗಾಢತೆ ಬದುಕಿನ ಮತ್ತೊಂದು ಮಜಲನ್ನು ಮುಖ್ಯ ವೇದಿಕೆಗೆ ಕರೆತಂದು ಕೂರಿಸಿದೆ. ನಿನ್ನ ಮೌನವನ್ನು ಅಧ್ಯಾಪಿಸುವ ನನ್ನೆಲ್ಲಾ ಯೋಜನೆಗಳು ತಲೆಕೆಳಗಾಗಿರುವ ಹೊತ್ತಿನಲ್ಲಿ ಭಾವನೆಗಳೆಲ್ಲಾ ಹಾಳೆಗೆ ಬೀಳುತ್ತಿವೆ. ಮಾಮೂಲಿ ಪದಗುಚ್ಛಗಳೆಲ್ಲಾ ನಿನ್ನ ವರ್ಣಿಸುವ ಪ್ರಯತ್ನದಲ್ಲಿ ಸೋತು ಬಿದ್ದಮೇಲೆ, ಇದೆಂಥದ್ದೋ ವಿಚಿತ್ರ ಶೈಲಿಯೊಂದು ಹುಟ್ಟಿಕೊಂಡಿದೆ. ಚಂದದ ಪದಗಳನ್ನೆಲ್ಲಾ ಹೆಕ್ಕಿ ತಂದು ಅದರಲ್ಲೇ ನಿನ್ನ ಮುದ್ದಾಡುವಾಸೆ, ಸದ್ಯಕ್ಕೀಗ ಪದಗಳ ಹುಡುಕಾಟದಲ್ಲಿದ್ದೇನೆ.. ಸಹಕರಿಸು, ಸ್ವೀಕರಿಸು.
ಹರೆಯದ ದೋಣಿ ಶುರುವಿನಲ್ಲೇ ಮಗುಚಿ ಬೀಳುವಂತಹಾ ಸೆಳೆತ ಸೃಷ್ಟಿಸಿದ್ದ ನಿನ್ನ ತುಂಟುತನದ ಅಲೆಯೀಗ ಶಾಂತವಾಗಿದ್ದೇಕೆ? ಹರೆಯವೀಗ ತನ್ನ ಪರಮಾವಧಿಗೆ ಸಾಮಿಪ್ಯವಾಗುತ್ತಾ, ತಟ ಸೇರುವ ಬದಲು ಮತ್ತೆ ಮಗುಚಿ ಬೀಳಲು ಹಪಹಪಿಸುತ್ತಿದೆ, ಸೂಚನೆಯಿಲ್ಲದೇ! ಅಲೆಯೆಬ್ಬಿಸಿಬಿಡು ಮತ್ತೆ ನಿನ್ನಲ್ಲಿ ಮುಳುಗುವೆ. ಸಾವರಿಸಿಕೊಳ್ಳುವ ಮುನ್ನವೇ ಆವರಿಸಿಬಿಡು ಮಿಸುಕಾಡದೇ ಲೀನವಾಗುವೆ. ಒಡಲಲ್ಲಿ ಹುದುಗಿಸಿಕೊಂಡಿರುವ ಇಂತಹ ಅದೆಷ್ಟೋ ಕನಸುಗಳಲ್ಲಿನ ಮುಖ್ಯ ಪಾತ್ರಧಾರಿ ನೀನು. ನಿನ್ನುಸಿರಿಗೆ ಕಾವು ಕೊಡುವ ಕೆಲಸ ಸಿಕ್ಕರೂ ಸಾಕು ಬದುಕಿಬಿಡುವೆ ಎಂಬ ಹುಂಬನ ಸ್ವಪ್ನ ಪ್ರಪಂಚದ ಮುಖ್ಯಾಂಶಗಳು ಇಂತಿವೆ.. ಮುಂಜಾವಿನಲ್ಲಿ ಮೈಮುರಿಯುವ ಸೂರ್ಯನ ಚೊಚ್ಚಲ ಕಿರಣ ನಿನ್ನ ಮುತ್ತಿನೋಲೆಯ ಕಿವಿಗಳಿಗೆ ಮುತ್ತಿಡುವ ಕ್ಷಣದಲ್ಲಿ ನಾನು ಪ್ರತಿಸ್ಪರ್ಧಿಯಾಗಬೇಕು, ನಡು ಮಧ್ಯಾಹ್ನಕ್ಕೆ ನೆರಳಾಗಬೇಕು, ಬೈಗಿನಲ್ಲಿ ನಿನ್ನಾಸೆ ಈಡೇರಿಸುವ ಬಂಧುವಾಗಬೇಕು, ನಿಶೆಯಲ್ಲಿ ನಶೆಯೇರಿಸುವ ಮಧುವಾಗಬೇಕು... ಇಂತಹ ಹಲವು ಬಯಕೆಗಳ ಕರಡು ಪ್ರತಿ ಕನಸಿನ ಕಚೇರಿಯಲ್ಲಿ ಬಿದ್ದಿದೆ, ಸಾಧ್ಯವಾದರೆ ಪರಿಷ್ಕರಣೆಗೆ ಕೈ ಜೋಡಿಸು.
ನಿನ್ನ ಕಾಲುಂಗರದ ಸಂಗೀತಕ್ಕೆ ಪದ ಸಂಯೋಜಿಸಿ ಜೊತೆಗೂಡಿ ಹಾಡುತ್ತಾ, ಸಭ್ಯತೆಯ ಗಡಿ ನೂಕಿ ಬೆಳೆದ ಪೋಲಿತನ ಭರಿತ ರಾತ್ರಿಗೆ ಬಟ್ಟೆ ಹೊಲಿಯೋಣ. ಬದುಕಿನ ಖಾಸಗಿ ಕ್ಷಣಗಳನ್ನು ಕೂಡಿಡಲು ಜಂಟಿಖಾತೆಯೊಂದನ್ನು ತೆರೆದು, ತಂಪುಗತ್ತಲಲ್ಲಿ ನಡುಗುತ್ತಾ ಬಿದ್ದಿರುವ ನಕ್ಷತ್ರ ನಮ್ಮ ಅಪ್ಪುಗೆಯ ಕಂಡೇ ಉದ್ದೀಪಿಸುವಂತೆ ಬದುಕಿಬಿಡೋಣ. ನಿನ್ನ ಕಣ್ರೆಪ್ಪೆ ವಿಶ್ರಮಿಸುವಾಗೆಲ್ಲಾ ನಾ ಕಾವಲುಗಾರನಾಗಬೇಕಿದೆ ಸತಾಯಿಸದೆ ಹ್ಞೂಂಗುಟ್ಟು, ಕಾಡಿಗೆಯ ರೇಖೆಯನ್ನೂ ದಾಟದೆ ಪ್ರಾಮಾಣಿಕನಾಗಿ ದುಡಿಯುವೆ. ದಿನದ ಇಪ್ಪತ್ನಾಲ್ಕು ಗಂಟೆಯಲ್ಲಿ ನನಗಾಗಿ ಕೊಂಚ ಕ್ಷಣಗಳ ಸಾಲ ನೀಡು, ಉಸಿರಿನ ಕೊನೇ ಸಾಲು ದೇಹದಿಂದ ನಿರ್ಗಮಿಸುವವರೆಗೂ ನಿನ್ನ ಜೀತದಾಳಾಗುವೆ. ಭವದ ಅತ್ಯುತ್ಕೃಷ್ಟ ಆಕಾಂಕ್ಷೆಗಳನ್ನೆಲ್ಲಾ ನಿನಗಾಗಿಯೇ ರೂಪಿಸುವೆ, ಬದುಕಿನ ಸಾರಾಂಶವನ್ನು ಹಿಡಿದಿಟ್ಟಿರುವ ಮೂರಕ್ಷರದ ನಿನ್ನ ನಾಮಧೇಯವನ್ನು ಲಗ್ನ ಪತ್ರಿಕೆಯಲ್ಲಿ ನನ್ನ ಹೆಸರೊಟ್ಟಿಗೆ ಉಲ್ಲೇಖಿಸಲು ಅನುಮತಿಸು.. ಇಹದ ಪರಿವೆಯ ಮರೆತು ನವಲೋಕದ ನಾಗರೀಕರಾಗೋಣ.
ತಕರಾರುಗಳಿದ್ದರೆ ಮೇಲ್ಮನವಿ ಸಲ್ಲಿಸು ವಿಚಾರಣೆಗೆ ಹಾಜರಾಗುವೆ. ಒಪ್ಪಿತವಾದಲ್ಲಿ ಗುಳಿ ಬೀಳದ ನಿನ್ನ ತುಂಬುಗೆನ್ನೆಗೆ ಮುತ್ತಿಡುವ ಚಿರಂಜೀವಿ ಆಸೆಗೆ ಚಾಲನೆ ನೀಡುವೆ.
ಇಂತಿ ನಿನ್ನ ಧ್ಯಾನಸ್ಥ..
ಸ್ಕಂದ ಆಗುಂಬೆ
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ಕ್ಯಾಂಪಸ್" ಪುರವಣಿಯಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

No comments:
Post a Comment