Thursday, 27 February 2020

"ಕಂದ" ಪದ್ಯ




ಎಷ್ಟು ಚಂದ ನಮ್ಮ ಕಂದ
ಬಾಯಿ ತೆರೆದು ನಕ್ಕರೆ
ಪುಟ್ಟ ಹಲ್ಲು, ಹಾಲುಗಲ್ಲ
ನಗುವೆ ಸಿಹಿಯ ಸಕ್ಕರೆ

ನಮ್ಮ ಕಂದ ಇನ್ನೂ ಚಂದ
ಸಿಟ್ಟು ಮಾಡಿಕೊಂಡರೆ
ಕೆಂಪು ಮೂಗು, ಜೋರು ಕೂಗು
ಬಾಯಿ ಜೊಲ್ಲು ಇಳಿದರೆ

ನಮ್ಮ ಕಂದ ಬಹಳ ಅಂದ
ಗುಮ್ಮನಂತೆ ಕೂತರೆ
ಕೆನ್ನೆ ದಪ್ಪ ಮಾಡಿಕೊಂಡು
ತುಟಿಯ ಮುಚ್ಚಿಕೊಂಡರೆ

ಸಾಕು ಕಂದ‌ ಇಷ್ಟು ಚಂದ
ಇನ್ನು ಹೊಗಳಲಾರೆನು
ಸಿಟ್ಟು, ಸಿಡುಕು ಬಿಟ್ಟರೀಗ
ಮುದ್ದು ಮಾಡಿ ಬಿಡುವೆನು...!

- ಸ್ಕಂದ ಆಗುಂಬೆ

ಈ ಪದ್ಯ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ

ವಿವಿಧತೆಯಿಲ್ಲದ ಏಕತೆ ಏತಕೆ?



ವಿವಾದಗಳೆಲ್ಲಾ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಸಹಜ ಎನ್ನಿಸಿದರೂ, ಅದೊರಳಗಿನ ಸೂಕ್ಷ್ಮತೆಯನ್ನು ಅರಿತು ನಿಭಾಯಿಸದಿದ್ದಲ್ಲಿ ಇವುಗಳೇ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

ಭಾರತದಲ್ಲಿ ಸುಲಲಿತ ಆಡಳಿತ ಹಾಗೂ ಜನಸಾಮಾನ್ಯರ ಅನುಕೂಲವನ್ನು ದೃಷ್ಟಿಯಲ್ಲಿರಿಸಿಕೊಂಡು ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಅವರದೇ ಆದ ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಬಳಸಲಾಗುತ್ತಿದೆ. ಆಯಾ ರಾಜ್ಯಗಳ ಜನರಿಗೆ ಬೇರೆಲ್ಲಾ ಭಾಷೆಗಳಿಗಿಂತ ನಮ್ಮ ಭಾಷೆಯೇ ಹೆಚ್ಚು ಎಂಬ ಶ್ರೇಷ್ಠತೆಯ ವ್ಯಸನ ಕೂಡ ಸಹಜವಾಗಿಯೇ ಇದೆ. ಅದೇ ಕಾರಣಕ್ಕಾಗಿ ನಮ್ಮಲ್ಲಿ ಭಾಷೆಯ ವಿಚಾರಕ್ಕಾಗಿಯೇ ಹಲವು ಆಂದೋಲನಗಳಾಗಿವೆ ಕೂಡ. ಇತ್ತೀಚಿನ ವರ್ಷಗಳಲ್ಲಿ ಭಾಷೆಯ ಕುರಿತಾಗಿ ಅತಿ ಹೆಚ್ಚು ಚಾಲ್ತಿಯಲ್ಲಿರುವುದು “ಹಿಂದಿ ಹೇರಿಕೆ” ಕೂಗು. ನಾವುಗಳು ಶಾಲೆಯಲ್ಲಿರುವಾಗ ಕಲಿತಿದ್ದ “ಹಿಂದಿ ನಮ್ಮ ರಾಷ್ಟ್ರಭಾಷೆ” ಎಂಬ ವಿಚಾರವೇ ಈಗ ಅತಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಉತ್ತರ ಭಾರತದಲ್ಲಿ ಹಿಂದಿ ಪ್ರಧಾನ ಭಾಷೆಯಾಗಿ ಕಂಡುಬರುವುದರಿAದ ಅಲ್ಲಿಯ ಬಹುತೇಕ ಭಾಗದಲ್ಲಿ ಬಳಕೆಯಲ್ಲಿದೆ. ಆದರೆ, ದಕ್ಷಿಣ ಭಾಗದಲ್ಲಿ ಹಿಂದಿ ಇಂದಿಗೂ ಪರಭಾಷೆಯಂತೆಯೇ ಇದೆ.

ಅದೇ ಕಾರಣಕ್ಕಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳುವುದಕ್ಕೆ ಹಾಗೂ ಹಿಂದಿ ಭಾಷೆಯನ್ನು ನಾಮಫಲಕಗಳಲ್ಲಿ, ವ್ಯವಹಾರದ ಸಂದರ್ಭಗಳಲ್ಲಿ ತೂರಿಸುವುದಕ್ಕೆ ಬಲವಾದ ವಿರೋಧ ವ್ಯಕ್ತವಾಗುತ್ತಿರುವುದು. ಅಂದಹಾಗೆ ಈ ವಿವಾದ ಒಂದೆರೆಡು ದಿನಗಳದ್ದೇನಲ್ಲ, ಭಾಷೆಯ ವಿಚಾರಕ್ಕಾಗಿ ದೇಶದಲ್ಲಿ ಆಗಾಗ ಒಂದಷ್ಟು ವಿವಾದ, ಚರ್ಚೆ, ಕೂಗು ಕೇಳಿಸುತ್ತಲೇ ಇರುತ್ತದೆ. ಕೆಲವು ತಿಂಗಳ ಹಿಂದೆಯಷ್ಟೇ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನಾಧರಿಸಿಕೊಂಡು “ಒಂದು ರಾಷ್ಟ್ರ, ಒಂದು ಭಾಷೆ” ಪರಿಕಲ್ಪನೆಯ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಕರ್ನಾಟಕ - ಬರೋಡ ರಣಜಿ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ ವೀಕ್ಷಕ ವಿವರಣೆಗಾರ ಸುಶೀಲ್ ದೋಶಿ “ಪ್ರತಿಯೊಬ್ಬ ಭಾರತೀಯನೂ ಹಿಂದಿ ಭಾಷೆ ಕಲಿಯಬೇಕು. ಅದು ನಮ್ಮ ಮಾತೃಭಾಷೆ, ಹಿಂದಿಗಿAತ ಉತ್ತಮ ಭಾಷೆ ಮತ್ತೊಂದಿಲ್ಲ” ಎಂದಿರುವುದು ಹಿಂದಿ ಹೇರಿಕೆ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿಟ್ಟಿದೆ.

ಇಂತಹ ಹಲವು ಹೇಳಿಕೆಗಳು ಈ ಹಿಂದೆ ಕೂಡ ವ್ಯಕ್ತವಾಗಿವೆ. ಅವುಗಳನ್ನೆಲ್ಲಾ ಒಟ್ಟಾಗಿ ನೋಡಿದಾಗ ಕಾಣುವ ಸಾಮಾನ್ಯ ಅಂಶವೆAದರೆ ಹಿಂದಿ ಭಾರತದಲ್ಲಿ ಅತ್ಯವಶ್ಯಕ ಎಂದು ನಂಬಿಸುವ ಪ್ರಯತ್ನ. ಪ್ರಸ್ತುತ ನಮ್ಮ ಪ್ರಾದೇಶಿಕ ಭಾಷೆಗಳನ್ನು ಕಲಿಸುವುದು ಹಾಗೂ ಉಳಿಸುವುದೇ ಸವಾಲು ಎನ್ನಿಸುತ್ತಿರುವ ಸಂದರ್ಭದಲ್ಲಿ ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡುವ ಪ್ರಯತ್ನ ಒಳ್ಳೆಯದೂ ಅಲ್ಲ. ನಾವಿಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದದ್ದೇನೆಂದರೆ ವಿರೋಧ ಇರುವುದು ಬೇರೆ ಭಾಷೆಗಳನ್ನು ಕಲಿಯುವುದಕ್ಕಲ್ಲ ಪರಭಾಷೆಗಳನ್ನು ನಮ್ಮ ನೆಲದಲ್ಲಿ ತಂದು ಬೇರೂರುವಂತೆ ಮಾಡುವ ಯತ್ನಕ್ಕೆ. ಸಾಧಾರಣವಾಗಿ ಶಾಲೆಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸಲಾಗುತ್ತದೆ. ಹಿಂದಿಯನ್ನಾಗಲೀ, ಇನ್ನಿತರ ಯಾವುದೇ ಭಾಷೆಗಳಾಗಳನ್ನಾಗಲೀ ನಮ್ಮ ಸ್ವಂತ ಇಚ್ಛೆಯಿಂದ ಕಲಿತರೆ ಖಂಡಿತವಾಗಿಯೂ ತೊಂದರೆ ಇಲ್ಲ. ಆದರೆ, ಅದೇ ಭಾಷೆಗಳನ್ನು ನೀವು ಕಲಿಯಲೇಬೇಕು ಎಂದು ಒತ್ತಾಯಿಸುವುದರಲ್ಲಿ, ಅನಾವಶ್ಯಕವಾಗಿ ತಂದು ನಮ್ಮ ಮೇಲೆ ಹೇರುವುದರಲ್ಲಿ ಅಪಾಯವಿದೆ.

ಒಂದು ವೇಳೆ, ಇಡೀ ಭಾರತಕ್ಕೆ ಹಿಂದಿ ಅಗತ್ಯ ಎಂಬ ನಿಯಮ ರೂಪಿತವಾಯಿತು ಎಂದಿಟ್ಟಕೊಳ್ಳಿ, ಆಗ ಅಳಿಯುವುದು ಪ್ರಾದೇಶಿಕ ಭಾಷೆಗಳಷ್ಟೇ ಅಲ್ಲ, ಅಲ್ಲಿಯ ಸಂಸ್ಕೃತಿ, ಆಚರಣೆ, ವೈವಿಧ್ಯತೆ ಎಲ್ಲವೂ ಅಲ್ಲಿಯ ಭಾಷೆಯೊಟ್ಟಿಗೇ ಮಣ್ಣಾಗುತ್ತವೆ. ವಿವಿಧತೆಯನ್ನು ಅಳಿಸುವ ಪ್ರಯತ್ನ ಯಾವ ವಲಯದಲ್ಲೂ ಆಗದೇ ಇರಲಿ. ವಿವಿಧತೆಯಿಲ್ಲದ ಏಕತೆ ನಮಗೇತಕೆ?



- ಸ್ಕಂದ ಆಗುಂಬೆ



ಈ ಲೇಖನ ಪ್ರತಿಧ್ವನಿ.ಕಾಂ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

ಆಗುಂಬೆ ಎಂಬ ಹಸಿರುಲೋಕ!



ಆಗುಂಬೆ, ಮಲೆನಾಡಿನ ಮಡಿಲಿನಲ್ಲಿರುವ ಒಂದು ಪುಟ್ಟ ಊರು. ಮಳೆಗಾಲದಲ್ಲಿ ಸೂರ್ಯನ ಅಸ್ತಿತ್ವವನ್ನೂ ಮರೆಯಿಸುವಂತೆ ಗಾಢವಾದ ಮೋಡಗಳಿಂದ ಆವೃತವಾಗಿ ಭೋರ್ಗರೆವ ಮಳೆಯಲ್ಲಿ ತೊಯ್ಯುವ ಊರು ಮಳೆಗಾಲ ಮುಗಿಯುತ್ತಿದ್ದಂತೆಯೇ ಸೂರ್ಯಾಸ್ತಮಾನದ ಭವ್ಯ ನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ. ಹೊರಜಗತ್ತಿಗೆ ದಕ್ಷಿಣ ಭಾರತದ ಚಿರಾಪುಂಚಿ ಎಂದು ಪರಿಚಿತವಾಗಿರುವುದರಿಂದ ಆಗುಂಬೆಯ ಹೆಸರನ್ನು ಕೇಳದೇ ಇರುವವರ ಸಂಖ್ಯೆ ವಿರಳಾತಿವಿರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕಂತೆ ಭೂ ವಿಸ್ತೀರ್ಣದಲ್ಲಿ ಚಿಕ್ಕ ಊರಾದರೂ ತನ್ನ ವಿಶಿಷ್ಟತೆಗಳ ಕಾರಣದಿಂದ ಪ್ರಸಿದ್ಧಿಯಾಗಿದೆ. ಆಗುಂಬೆಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಘಾಟಿಯ ತಿರುವುಗಳಂತೆಯೇ ಹಲವು ಕತೆಗಳು ಒಂದರ ಹಿಂದೊಂದು ತೆರೆದುಕೊಳ್ಳುತ್ತವೆ.
ಶ್ರೀ ಮದಗಂಬಾಪುರ ಎಂಬುದು ಆಗುಂಬಾಪುರವಾಗಿ ನಂತರ ಆಗುಂಬೆ ಎಂಬ ಹೆಸರನ್ನು ಅಂಟಿಸಿಕೊಂಡ ಈ ಊರು ಪ್ರವಾಸಿತಾಣವೆಂಬ ಪಟ್ಟವನ್ನು ಹೊತ್ತಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ. ಅಲ್ಲಿಯ ಜನರೇ ಹೇಳುವಂತೆ ಹಲವು ವರ್ಷಗಳ ಹಿಂದೆ ವ್ಯಾಪಾರ, ವಹಿವಾಟು ಚಟುವಟಿಕೆಗಳ ಕೇಂದ್ರವಾಗಿದ್ದ ಆಗುಂಬೆ ಘಟ್ಟ ಪ್ರದೇಶ ಹಾಗೂ ಕರಾವಳಿಯನ್ನು ಬೆಸೆಯುವ ಬಹುಮುಖ್ಯ ಕೊಂಡಿ ಎಂದು ಗುರುತಿಸಿಕೊಂಡಿದ್ದರಿAದ ಘಾಟಿಯ ಮೂಲಕ ಹಾದು ಹೋಗಲು ಉಗಿಯಿಂದ ಓಡುವ ಬಸ್ ಸೌಲಭ್ಯವಿತ್ತಂತೆ. ಆದರೆ, ಇದ್ದಿದ್ದು ಒಂದೇ ಬಸ್ ಆಗಿದ್ದರಿಂದ ಘಟ್ಟ ಇಳಿಯಲು ಬಂದವರು, ಮುಂಬಯಿಯಂತಹ ನಗರಗಳಿಗೆ ತೆರಳಬೇಕಾದವರು ಆಗುಂಬೆಯಲ್ಲಿ ತಮ್ಮ ಸರತಿ ಬರುವ ತನಕ ಉಳಿದು ನಂತರ ತೆರಳಬೇಕಾಗುತ್ತಿತ್ತು. ಇಂತಹ ಪ್ರಯಾಣಿಕರೇ ಆಗುಂಬೆಯ ವ್ಯಾಪಾರಸ್ಥರ ಆದಾಯದ ಮೂಲವಾಗಿದ್ದರು. ಆಗುಂಬೆಯಲ್ಲಿ ಕಾರ್ಖಾನೆ, ಉದ್ಯಮವನ್ನು ಆರಂಭಿಸಲು ಹಲವು ಪ್ರಯತ್ನಗಳು ನಡೆದಿತ್ತಾದರೂ ಪರಿಸರವಾದಿಗಳ ಪ್ರತಿರೋಧದ ಫಲವಾಗಿ ಅಂತಹ ಯೋಜನೆಗಳು ವಿಫಲಗೊಂಡವು. ಆಗುಂಬೆಯ ಬಳಿಯಿರುವ ನಿಶಾನಿ ಗುಡ್ಡದಿಂದ ಮ್ಯಾಂಗನೀಸ್ ಅದಿರನ್ನು ತೆಗೆದು ಸಾಗಿಸುವ ಸಲುವಾಗಿ ಕಾಡನ್ನು ಕಡಿದು ರಸ್ತೆಗಳನ್ನು ಮಾಡಲಾಗಿತ್ತಾದರೂ ಕ್ರಮೇಣ ಆ ಹಾದಿಗಳೂ ಮುಚ್ಚಿ ಹೋದವು. ಮ್ಯಾಂಗನೀಸ್ ಅದಿರನ್ನು ತೆಗೆದು ಅದರಿಂದ ಸಿಗುತ್ತಿದ್ದ ಕಿಟ್ಟವನ್ನು  (ತ್ಯಾಜ್ಯ) ಒಂದೆಡೆ ಸುರಿದ ಪರಿಣಾಮವಾಗಿ ನಿರ್ಮಿತವಾದ ಗುಡ್ಡವೆಂಬ ಕಾರಣಕ್ಕೆ ಇಂದಿಗೂ ಅಲ್ಲಿನ ಒಂದು ಪ್ರದೇಶವನ್ನು ಕಿಟ್ಟನ ಗುಡ್ಡ ಎಂದೇ ಕರೆಯಲಾಗುತ್ತದೆ. ಇಂತಹ ಘಟನೆಗಳನ್ನು ಹೊರತುಪಡಿಸಿದರೆ ಆಗುಂಬೆಯ ಸುಸ್ಥಿರ ಅಭಿವೃದ್ಧಿಗಾಗಿ ನಡೆದ ಯಾವ ಯೋಜನೆಗಳೂ ನೆನಪಿಗೆ ಬರುವುದಿಲ್ಲ!
ಆಗುಂಬೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಸುತ್ತಮುತ್ತಲಿನ ಊರವರನ್ನು ಒಂದೆಡೆ ಸೇರಿಸುವ ಮುಖ್ಯ ಉತ್ಸವ. ಇಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೂ ಒಂದು ಕತೆಯಿದೆ. ಬಹಳ ವರ್ಷಗಳ ಹಿಂದೆ ವೇಣುಗೋಪಾಲ ಸ್ವಾಮಿ ವಿಗ್ರಹವನ್ನು ಬೇರೊಂದು ಊರಿನಿಂದ ತನ್ನೂರಿಗೆ ಕೊಂಡೊಯ್ಯುತ್ತಿದ್ದ ವ್ಯಕ್ತಿ ಆಗುಂಬೆಗೆ ಬರುವಷ್ಟರಲ್ಲಿ ಕತ್ತಲಾದ ಕಾರಣ ಅಲ್ಲಿಯೇ ತಂಗುತ್ತಾನೆ. ಆ ರಾತ್ರಿ ಆತನ ಕನಸಿನಲ್ಲಿ ಶ್ರೀಕೃಷ್ಣ (ವೇಣುಗೋಪಾಲ) ಪ್ರತ್ಯಕ್ಷನಾಗಿ ತನ್ನ ಮೂರ್ತಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸುವಂತೆ ಸೂಚಿಸಿದನಂತೆ. ಆ ವಿಗ್ರಹಕ್ಕೆ ಕಾವಲುಗಾರರಾಗಿ ಮುಂದಿದ್ದ ಗುತ್ಯಮ್ಮ ಆಗುಂಬೆಯಿಂದ ಎರಡು ಕಿ.ಮೀ ದೂರದಲ್ಲಿರುವ ತಲ್ಲೂರಂಗಡಿಯಲ್ಲಿ ನೆಲೆಸಿದಳಂತೆ. ವಿಗ್ರಹದ ಹಿಂದೆ ಕಾವಲಿಗಿದ್ದ ಭೂತರಾಜ ಆಗುಂಬೆ ಘಾಟಿಯ ಮೂರನೇ ಸುತ್ತಿನಲ್ಲಿ ನೆಲೆಯೂರಿದನಂತೆ. ಒಮ್ಮೆ ಆ ಕಲ್ಲನ್ನು ಒಡೆಯಲು ಮುಂದಾದಾಗ ಅದು ಆನೆಯಂತೆ ಘೀಳಿಟ್ಟಿತ್ತಲ್ಲದೇ ಅದು ದೂರದಿಂದ ನೋಡಲು ಆನೆಯ ಮುಖದಂತಿದೆ ಎಂಬೆಲ್ಲಾ ಪ್ರತೀತಿ, ಕಾರಣಗಳಿಂದ ಇಂದಿಗೂ ಅದನ್ನು ಆನೆಕಲ್ಲು ಎಂದು ಕರೆಯಲಾಗುತ್ತದೆ. ಆಗುಂಬೆ ಘಾಟಿಯ ಮೂಲಕ ಪ್ರಯಾಣಿಸುವಾಗ ಅರ್ಧ ರಸ್ತೆಯ ತನಕ ಚಾಚಿಕೊಂಡಿರುವ ಆನೆಕಲ್ಲನ್ನು ಈಗಲೂ ಕಾಣಬಹುದು.
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯಕೊಂಡಿಯಾಗಿರುವ ಹದಿನಾಲ್ಕು ಸುತ್ತಿನ ಆಗುಂಬೆ ಘಾಟಿಯ ಕಡಿದಾದ ತಿರುವುಗಳು, ಘಾಟಿಯುದ್ದಕ್ಕೂ ಕಾಣಸಿಗುವ ಹಸಿರುಹೊದ್ದ ಪರಿಸರ, ಮೇಲಿನ ಸುತ್ತುಗಳಲ್ಲಿ ಕಿವಿ ಹೊಕ್ಕುವ ತಂಪು ಗಾಳಿ, ಕೆಳಗಿನ ಸುತ್ತುಗಳಲ್ಲಿ ಆಗುವ ಬೆಚ್ಚನೆಯ ಅನುಭವ, ಎರಡು ಜಿಲ್ಲೆಗಳ ಮಧ್ಯೆ ಹಂಚಿಕೆಯಾಗಿರುವ ಘಾಟಿ, ಮೇಲ್ಭಾಗದಲ್ಲಿನ ಘಾಟಿ ಚೌಡಮ್ಮನ ಕೆರೆ, ಮಳೆಕಾಡು, ಸಿಂಹಬಾಲದ ಕೋತಿ, ಮುಸಿಯಗಳ ಕೂಗು, ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರ, ಸಸ್ಯ ವೈವಿಧ್ಯತೆ, ಇವೆಲ್ಲದರ ಮಧ್ಯೆ ಸದ್ದುಗದ್ದಲವಿಲ್ಲದೇ ತಣ್ಣಗೆ ನಿಂತಿರುವ ಆಗುಂಬೆಯ ಸಣ್ಣಪೇಟೆ ನೋಡುಗರನ್ನು ವಿಸ್ಮಯಗೊಳಿಸುತ್ತದೆ.



ಇಷ್ಟು ಬೆರಗು ಹುಟ್ಟಿಸುವ ಆಗುಂಬೆಯಿಂದ ಕೊಂಚ ಆಚೀಚೆ ಹೆಜ್ಜೆಯಿಟ್ಟರೆ ಇನ್ನೊಂದು ಮಾಯಾಲೋಕ ತೆರೆದುಕೊಳ್ಳುತ್ತದೆ. ಆಗುಂಬೆಯ ಸುತ್ತಮುತ್ತಲು ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಒನಕೆ ಅಬ್ಬಿ, ಜೋಗಿಗುಂಡಿ, ಬರ್ಕಣ ಎಂಬ ಹೆಸರಿನ ಜಲಪಾತಗಳು ಹಸಿರು ಲೋಕದ ಮಧ್ಯದಲ್ಲಿ ಧುಮ್ಮಿಕ್ಕುತ್ತಾ ಬೆಳ್ಳಿಗೆರೆಗಳಂತೆ ಕಂಗೊಳಿಸುತ್ತವೆ. ಜಲಪಾತಗಳನ್ನು ತಲುಪುವ ಹಾದಿ ದಟ್ಟ ಕಾನನವನ್ನು ಸೀಳಿಕೊಂಡು ಹೋಗುವುದರಿಂದ ಅಲ್ಲಿ ಹೆಜ್ಜೆ ಹೆಜ್ಜೆಗೂ ಮಲೆನಾಡಿನ ಚಿಕ್ಕಪುಟ್ಟ ಸಂಗತಿಗಳನ್ನು, ಅವ್ಯಕ್ತ ಕತೆಗಳನ್ನು, ಕಾಡಿನ ಮೌನವನ್ನು ಅನುಭವಿಸಬಹುದು. ಆಗುಂಬೆಯ ಸಂಜೆ ಸೂರ್ಯ ಕರಗುವುದಕ್ಕೆ ಸಾಕ್ಷಿಯಾದರೆ ಆಗುಂಬೆಯಿಂದ ಹದಿನೆಂಟು ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯದ ಸೊಬಗನ್ನು ಕಟ್ಟಿಕೊಡುತ್ತದೆ.
ಅಂದಹಾಗೆ, ಮಳೆಗಾಲವನ್ನು ಅನುಭವಿಸುತ್ತಾ ಇಂಬಳಗಳಿಗೆ ರಕ್ತದಾನ ಮಾಡಲು ಇಚ್ಛೆಯಿರುವವರು ಜೂನ್‌ನ ನಂತರ ಹಾಗೂ ಸೂರ್ಯಾಸ್ತ, ಸೂರ್ಯೋದಯಗಳ ಸೊಬಗಿನ ಜೊತೆಗೆ ಜಲಪಾತಗಳನ್ನು ನೋಡ ಬಯಸುವವರು ಡಿಸೆಂಬರ್‌ನಿAದ ಮೇ ತಿಂಗಳ ಒಳಗೆ ಆಗುಂಬೆಗೆ ಬರಬಹುದು. ಮಲೆನಾಡಿನ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಮ್ಮೆ ಕೆಲವು ತಾಣಗಳ ಪ್ರವೇಶಕ್ಕೆ ನಿರ್ಬಂಧನೆ ಇರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯವರ ಮಾರ್ಗದರ್ಶನ ಪಡೆದು ತೆರಳುವುದು ಉತ್ತಮ.
ಆಗುಂಬೆಯನ್ನು ನೋಡುವ ಮನಸ್ಸಿದ್ದರೂ ಅದನ್ನು ಈಡೇರಿಸಿಕೊಳ್ಳಲಾಗದವರಿಗೆಂದೇ ಮಾಲ್ಗುಡಿ ಡೇಸ್ ಸೀರೀಸ್, ಆಕಸ್ಮಿಕ ಚಿತ್ರದ ಆಗುಂಬೆಯ ಪ್ರೇಮ ಸಂಜೆಯ... ಹಾಡು ಇತ್ಯಾದಿ ಅಭ್ಯವಿದೆ. ನೋಡಿ, ಕೇಳಿ, ಆನಂದಿಸಿ!

- ಸ್ಕಂದ ಆಗುಂಬೆ.
(ಮಾಹಿತಿ – ಅಕ್ಷತಾ ಆಗುಂಬೆ)

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಸಚಿತ್ರ ಕರ್ನಾಟಕ ಪುರವಣಿಯಲ್ಲಿ ಪ್ರಕಟಗೊಂಡಿದೆ. 

ಸೋಶಿಯಲ್ ಮೀಡಿಯಾ ಮತ್ತು ನಾವು!




ನಿನ್ನೆ (04/02/2020) ಕನ್ನಡ ದಿನಪತ್ರಿಕೆಯೊಂದು "ಬೆನ್ನತ್ತಿ ಬಂದು ಬಸ್ ಮೇಲೆ ಗುಂಪಿನ ದಾಳಿ" ಎಂಬ ತಲೆಬರಹದಡಿ ಪ್ರಕಟಿಸಿದ ವರದಿಯಲ್ಲಿ ಗಲಾಟೆ ಎಬ್ಬಿಸಿದವರು ಯಾವ ಧರ್ಮದವರು ಎಂದು ಹೆಸರಿಸುವ ಬದಲು "ಒಂದು ಕೋಮಿನವರು" ಎಂದು ಪ್ರಕಟಿಸಿತ್ತು. ಅದಕ್ಕೆ ಆಕ್ಷೇಪಣೆ ಎತ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರು - "ದಿನ ಪತ್ರಿಕೆಗಳು ಇಷ್ಟೊಂದು ಪುಕ್ಕಲು ಅಂತ ಗೊತ್ತಿರ್ಲಿಲ್ಲ.. ಮಾತೆತ್ತಿದರೆ ಪತ್ರಿಕಾ ಧರ್ಮ, ಹಾಗೆ ಹೀಗೆ ಬದನೆಕಾಯಿ ಅಂತೆಲ್ಲ ಹೇಳೋದ್ ಕೇಳಿದಿವಿ.. ಇಲ್ಲಿ 'ಬಸ್ ಮೇಲೆ ಮುಗಿಬಿದ್ದ ಒಂದು ಕೋಮಿನ ಗುಂಪು ಅಂತ ಬರೆಯಲಾಗಿದೆ..' ಆದರೆ ಯಾಕೆ ಆ ಒಂದು ಕೋಮು ಯಾವುದು ಅಂತ ಹೇಳಿಲ್ಲ..? ಯಾಕೆ ಹೇಳೋಕ್ ಧಮ್ ಇಲ್ವಾ..? ಹಾಗಾದರೆ ಯಾವುದು ನಿಮ್ಮ ಪತ್ರಿಕಾ ಧರ್ಮ..?" ಎಂದು ಪ್ರಶ್ನಿಸಿದ್ದಾರೆ.
ಇದು ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಥಿತಿಗೆ ಒಂದು ಉದಾಹರಣೆಯಷ್ಟೇ. ವಾಸ್ತವವಾಗಿ ಯಾವುದೇ ಮಾಧ್ಯಮಗಳು ಜಾತಿ, ಧರ್ಮ ಇವುಗಳಿಗೆ ಮಹತ್ವ ನೀಡದೆ ಕೇವಲ ನಡೆದ ಘಟನೆಯ ಕುರಿತು ಬೆಳಕು ಚೆಲ್ಲುವುದು ಸರಿಯಾದ ಮಾರ್ಗ. ಆದರೆ, ದುರಂತವೆಂಬಂತೆ ಇಂದಿನ ಓದುಗರೇ ಪತ್ರಿಕೆಗಳು ಜಾತಿ, ಧರ್ಮಗಳ ಕುರಿತು ಉಲ್ಲೇಖಿಸಬೇಕೆಂದು ಅಪೇಕ್ಷಿಸಿ, ಉಲ್ಲೇಖಿಸದೇ ಇರುವುದು ಪತ್ರಿಕಾ ಧರ್ಮವಲ್ಲ ಎಂದು ತೀರ್ಪು ನೀಡುವ ಮಟ್ಟಿಗೆ ಬದಲಾಗಿದ್ದಾರೆ. ಈ ಮನಸ್ಥಿತಿ ಯಾವುದೇ ಒಂದು ಸಿದ್ಧಾಂತಕ್ಕೆ ಸೀಮಿತವೇನಲ್ಲ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ನಂತರ ಜನರು ಮಾಧ್ಯಮಗಳನ್ನು ಟೀಕಿಸುವುದು ಹೇಗೆ ಹೆಚ್ಚಾಗಿದೆಯೋ. ಹಾಗೆಯೇ ಮಾಧ್ಯಮಗಳು ತಮಗೆ ಬೇಕಾದ ಸುದ್ದಿಗಳನ್ನು, ತಾವು ಬಯಸುವ ರೀತಿಯಲ್ಲೇ ನೀಡಬೇಕೆಂಬ ಮನಸ್ಥಿತಿಯೂ ಹೆಚ್ಚುತ್ತಿದೆ. ಇದಕ್ಕೆ ತಕ್ಕುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಯಾ ಸಿದ್ಧಾಂತ, ಪಕ್ಷ, ಜಾತಿ, ಧರ್ಮಗಳನ್ನು ಬೆಂಬಲಿಸಿಕೊಂಡು, ಮುಖಸ್ತುತಿ ಮಾಡಲೆಂದೇ ಪ್ರತ್ಯೇಕವಾಗಿ ವೇದಿಕೆಗಳು ಸೃಷ್ಟಿಯಾಗಿರುವುದರಿಂದ ಅವುಗಳಲ್ಲಿ ಪ್ರಕಟವಾಗುವುದೇ ಪರಮ ಸತ್ಯವೆಂದು ನೆಚ್ಚಿಕೊಳ್ಳುತ್ತಿದ್ದಾರೆ.

"ಸೋಶಿಯಲ್ ಮೀಡಿಯಾ" ಇಂದು ನಮ್ಮ ಕೈಗಳಲ್ಲಿರುವ ಅತಿದೊಡ್ಡ ಅಸ್ತ್ರ. ಯಾವ ಕ್ಷಣದಲ್ಲೂ, ಎಲ್ಲಿ ಬೇಕಿದ್ದರೂ ಕೂತು, ಯಾರ ಹಂಗಿಲ್ಲದೇ ನಮ್ಮ ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಲು ಅವಕಾಶವಿರುವ ಕಾರಣ ಸದಾ ಸೋಶಿಯಲ್ ಮೀಡಿಯಾಗಳತ್ತ ಮುಖಮಾಡಿ ಕುಳಿತು ಬಿಡುತ್ತೇವೆ.
ಕೆಲವೇ ಕೆಲವು ವರ್ಷ ಹಿಂದಿನವರೆಗೂ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳ ಮೊರೆ ಹೋಗಬೇಕಿತ್ತು, ನಾಲ್ಕು ಸಾಲುಗಳ ಅಭಿಪ್ರಾಯ ಪ್ರಕಟವಾಗಲು ನಾಲ್ಕು ದಿನ ಕಾಯಬೇಕಿತ್ತು. ಆದರೆ ಈಗ ಮಾಧ್ಯಮಗಳೇ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಹುಡುಕಿ ಹೆಕ್ಕಿ ತೆಗೆದು ಪ್ರಕಟಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಂತರ್ಜಾಲ ವ್ಯವಸ್ಥೆ ಸುಲಭವಾಗಿ ಕೈಗೆಟುಕಲು ಆರಂಭವಾದ ನಂತರ ಜನರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಂದಿಂಚೂ ಬಿಡದೆ ಬಳಸಿಕೊಳ್ಳುವುದನ್ನೂ ಕಲಿತಿದ್ದಾರೆ.
ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹೀಗೆ ಯಾವುದೇ ವಲಯದ ಸುದ್ದಿಗಳಾದರೂ ಸಾಮಾಜಿಕ ಜಾಲತಾಣಗಳ ಕಣ್ತಪ್ಪಿಸಿ ಉಳಿಯುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಹಬ್ಬಿಕೊಂಡಿದೆ. ಈ ಮೂಲಕ ಸಾಮಾನ್ಯ ಜನರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆ‌ ಕಲ್ಪಿಸಿರುವುದು ಸಾಮಾಜಿಕ ಜಾಲತಾಣಗಳ ಹೆಗ್ಗಳಿಕೆ ಎಂದು ಹೇಳಬಹುದಾದರೂ ಅದರಿಂದಾಗುತ್ತಿರುವ ಅಪಸವ್ಯಗಳನ್ನು ಗಮನಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯ ಹಲವು ಸಾಧ್ಯತೆಗಳು ಸಾಕ್ಷಿ ಸಮೇತ ಎದುರಾಗುತ್ತವೆ. ಕೆಲ ವರ್ಷಗಳ ಹಿಂದೆ ಜನರ ಅಭಿಪ್ರಾಯಕ್ಕೆ ಮುಖ್ಯ ಮಾಧ್ಯಮವಾಗಿದ್ದ ಮುದ್ರಣ ಮಾಧ್ಯಮ ಕ್ಷೇತ್ರವೇ ಇಂದು ತನ್ನ ಮೂಲ ಉದ್ದೇಶದಿಂದ ಮಾರುದೂರ ಸರಿದು ನಿಂತಿದೆಯಾದರೂ ಅದಕ್ಕಿರುವ ಕೆಲವು ನೀತಿ, ನಿರ್ಬಂಧನೆಗಳ ಕಾರಣದಿಂದ ತೋರ್ಪಡಿಕೆಗಾದರೂ ಸೂಕ್ಷ್ಮತೆಯನ್ನು ಉಳಿಸಿಕೊಂಡಿದೆ. ಆದರೆ, ಇಂದು ಬಹುತೇಕ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆಯಾಗಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮತೆಯನ್ನು ಹುಡುಕುವುದೇ ಅಸಾಧ್ಯ!

ಬೀದಿಯಲ್ಲಾಗುವ ಪ್ರೇಮಿಗಳ ಜಗಳದಿಂದ ಹಿಡಿದು ಸಿಎಎ - ಎನ್‌ಆರ್‌ಸಿ ಗಲಭೆಯ ತನಕ ಪ್ರಮುಖ - ಅಪ್ರಮುಖವೆಂಬ ಬೇಧ ಭಾವಗಳಿಲ್ಲದೆ ಎಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಗಗಿಟ್ಟಿಸಿಕೊಳ್ಳುತ್ತವೆ. ಇದನ್ನೇ ಆಹಾರವನ್ನಾಗಿಸಿಕೊಂಡು ಅದೆಷ್ಟೋ ಟ್ರೋಲ್‌ಪೇಜ್‌ಗಳು ಬದುಕುತ್ತಿವೆ ಕೂಡ. ಆದರೆ, ಇವುಗಳೆಲ್ಲಾ ಕಾರ್ಯ ನಿರ್ವಹಿಸುವ ರೀತಿ, ಅವುಗಳು ಬಳಸುವ ಭಾಷೆ, ಅದಕ್ಕಿರುವ ಪ್ರತಿಕ್ರಿಯೆ ಇವುಗಳನ್ನೆಲ್ಲಾ ನೋಡಿದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ.
ಮುಖ್ಯವಾಹಿನಿ ಮಾಧ್ಯಮಗಳ ಭಾಷೆಯ ಗಂಭೀರತೆಗೆ ಸಂಪೂರ್ಣ ತದ್ವಿರುದ್ಧವಾಗಿರುವ "ಆನ್‌ಲೈನ್ ಭಾಷೆ" ಇಂದಿನ ಸಮಾಜದ ಹದಗೆಟ್ಟ ಮನಸ್ಥಿತಿಯ ಪ್ರತಿಬಿಂಬದಂತೆ ಕಾಣುವುದಂತೂ ಸುಳ್ಳಲ್ಲ. ಸಿದ್ಧಾಂತ, ಪಕ್ಷ, ಜಾತಿ, ಧರ್ಮ ಹೀಗೆ ಯಾವುದೋ ಒಂದು ವಿಷಯದ ಕುರಿತು ಅಭಿಮಾನ ವ್ಯಕ್ತಪಡಿಸುವಲ್ಲಿ, ಅದನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ನಾವು ಬಳಸುವ ಭಾಷೆ, ವಿಚಾರ, ಅದು ಸೃಷ್ಟಿಸಬಹುದಾದ ತೊಂದರೆಯ ಕುರಿತು ಯೋಚಿಸುವ ವ್ಯವಧಾನ ನಮಗಿಲ್ಲವಾದ್ದರಿಂದ ಸೋಶಿಯಲ್ ಮೀಡಿಯಾದ ಎಷ್ಟೋ ಚರ್ಚೆಗಳು ಕೆಸರೆರಚಾಟದಲ್ಲಿ ಮುಕ್ತಾಯಗೊಳ್ಳುತ್ತಿವೆ. ಒಂದು ವಿಚಾರದ ಬಗ್ಗೆ ನಿಖರ ಮಾಹಿತಿ ಇಲ್ಲವೆಂದರೂ ಗುಂಪಿನಲ್ಲಿ ಗೋವಿಂದ ಎನ್ನುವ ಪರಿಪಾಠ ನಮ್ಮನ್ನು ಆವರಿಸಿಕೊಂಡಿರುವುದರಿಂದ ಎಷ್ಟೋ ತಪ್ಪುಗಳು ನಮ್ಮ ಅರಿವಿಗೆ ಬಾರದೆ ನಿರಂತರವಾಗಿ ನಮ್ಮಿಂದಲೇ ಆಗುತ್ತಿರುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಅಥವಾ ಧಾರ್ಮಿಕತೆಯ ಮೇಲೆ ನಡೆಯುವ ಬಹುತೇಕ ಚರ್ಚೆಗಳಲ್ಲಿ ಬಳಕೆಯಾಗುವ ಅವಾಚ್ಯ, ಅಶ್ಲೀಲ ಶಬ್ಧಗಳ ಹಾವಳಿಯನ್ನು ನೋಡಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಪದೇಪದೇ ಕಾಡುತ್ತದೆ. ವೈಯಕ್ತಿಕ ದ್ವೇಷ, ಆಕ್ರೋಶಗಳನ್ನೆಲ್ಲಾ ಅತೀ ಕೀಳುಮಟ್ಟದಲ್ಲಿ ವ್ಯಕ್ತಪಡಿಸುವುದೇ ಹಿರಿಮೆ, ಇನ್ನೊಬ್ಬರ ವೈಯುಕ್ತಿಕ ವಿಷಯವನ್ನು ಇಟ್ಟುಕೊಂಡು ಕಾಲೆಳೆಯುವುದೇ ಸೃಜನಶೀಲತೆ ಎಂಬ ಭ್ರಮೆ ಆವರಿಸಿಕೊಂಡಿರುವ ಈ ಹೊತ್ತಿನಲ್ಲಿ ಇದನ್ನೆಲ್ಲಾ ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿಕೊಂಡರೆ ಉತ್ತರವೂ ಸಿಗದಂತಹ ಪರಿಸ್ಥಿತಿ ಇದೆ.

ಇತ್ತೀಚೆಗೆ ಪೇಜಾವಾರ ಶ್ರೀಗಳು ನಿಧನರಾದಾಗ ಫೇಸ್‌ಬುಕ್‌ನಲ್ಲಿ - "ಎಂದೋ ಅಳಿದಿರುತ್ತಾರೆ,ಇಂದು ಅನೌನ್ಸ್ ಮಾಡಿರುತ್ತಾರೆ. ವಿಶ್ವಮಾನವ ದಿನಾಚರಣೆಯ ತೀವ್ರತೆಯ ತಗ್ಗಿಸಲು.
ಪ್ರತಿಯೊಬ್ಬರು ವಿಶ್ವಮಾನವರಾಗಲು ಬಿಡದ ಕುತಂತ್ರಿಗಳು ಇವರು...." ಎಂಬ ಪೋಸ್ಟ್ ಒಂದು ಹರಿದಾಡಿತು.
ಅದೇ ರೀತಿ ಕಳೆದ ಜನವರಿ 30 ರಂದು ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆಯನ್ನು ವಿರೋಧಿಸುವ ನೆಪದಲ್ಲಿ ಕೆಲವರು ಗೋಡ್ಸೆಯ ಫೋಟೋವನ್ನು ಪೋಸ್ಟ್ ಮಾಡಿದರು. ವಿಪರ್ಯಾಸವೆಂದರೆ ಅದೇ ಸಂದರ್ಭದಲ್ಲಿ ಜಾಮಿಯಾ ವಿವಿ ಬಳಿ ಪ್ರತಿಭಟನೆ ನಡೆಯುವಾಗ ಜಾಮಿಯಾ ವಿವಿ ಬಳಿ ಯುವಕನೋರ್ವ ಗುಂಡು ಹಾರಿಸಿದ ಘಟನೆಯ ವರದಿಯೂ ಹರಿದಾಡಿತು. ಇವೆಲ್ಲವೂ ನಮ್ಮ ಸಮಾಜ ಹದಗೆಡುತ್ತಿರುವುದಕ್ಕೆ ಉದಾಹರಣೆಗಳು. ಯಾವುದೇ ವಿಚಾರವನ್ನು ವಿರೋಧಿಸಲು ಅಥವಾ ಕಣ್ಮುಚ್ಚಿಕೊಂಡು ಸಮರ್ಥಿಸಲು ನಮಗೆ ಯಾವ ಸಾಕ್ಷಿ, ದಾಖಲೆಗಳೂ ಬೇಕಾಗಿಲ್ಲ. ಮನಸ್ಸಿನಲ್ಲಿ ಯಾವುದೇ ಒಂದು ಸಿದ್ಧಾಂತ, ಪಕ್ಷ ಅಥವಾ ಧರ್ಮದ ಬಗ್ಗೆ ಅಂಧಾಭಿಮಾನ ಹಾಗೂ  ಸೋಶಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್, ಮೊಬೈಲಲ್ಲಿ ಇಂಟರ್ನೆಟ್ ಇಷ್ಟು ಇದ್ದುಬಿಟ್ಟರೆ ಸಾಕೆಂಬಂತಾಗಿದೆ.

ಇವುಗಳನ್ನು ನಿರ್ಲಕ್ಷಿಸಿ ಸರಿಪಡಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕೊಳಕು ಆಲೋಚನೆ, ಮೂಟೆಗಟ್ಟಲೆ ದ್ವೇಷವನ್ನು ಬಿಟ್ಟು ಬೇರೇನನ್ನೂ ನಾವು ಉಳಿಸಲಾರೆವು. ಇದೇ ಮನಸ್ಥಿತಿ ಮುಂದುವರೆದರೆ ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳುಮಾಡಿದ ಅಪಕೀರ್ತಿ ನಮಗೆ ಮೆತ್ತಿಕೊಳ್ಳುವುದಂತೂ ನಿಶ್ಚಿತ.



- ಸ್ಕಂದ ಆಗುಂಬೆ

ಈ ಬರಹ ಪ್ರತಿಧ್ವನಿ.ಕಾಂ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

ಸ್ಟೈಲಿಂಗ್ ಅಟ್ ದಿ ಟಾಪ್


ಶಿವರಾಮ ಭಂಡಾರಿಯವರು ಕಳೆದ ಬಾರಿ ಉಜಿರೆಗೆ ಬಂದಾಗ ತಮ್ಮ ಕತೆಯನ್ನು ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದರು. ಅದನ್ನು ಕೇಳುವಾಗಲೇ ನಮಗೆ "ಅಬ್ಬಬ್ಬಾ" ಎನ್ನಿಸಿತ್ತು. ಬದುಕು ನಡೆಸಲೆಂದು ಕ್ಷೌರಿಕ ವೃತ್ತಿಯನ್ನು ಅವಲಂಬಿಸಿಕೊಂಡು ಕೊನೆಗೆ ಅದೇ ಕ್ಷೇತ್ರದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡ ಶಿವರಾಮ ಭಂಡಾರಿಯವರ ಜೀವನಗಾಥೆ ಎಂಥವರಲ್ಲೂ ಅಚ್ಚರಿ ಮೂಡಿಸಲೇಬೇಕು!

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಸಹೋದರಿಯ ಅಕಾಲಿಕ ಸಾವನ್ನು ಅರಗಿಸಿಕೊಂಡು, ಬಂಧುಗಳೆನಿಸಿಕೊಂಡವರಿಂದಲೇ ಅವಮಾನಕ್ಕೊಳಗಾಗಿ, ಬದುಕು ತಂದೊಡ್ಡಿದ್ದ ಸಕಲ ರೀತಿಯ ಕಷ್ಟಗಳಿಗೂ ಸಾಕ್ಷಿಯಾಗಿ.. ಕೊನೆಗೆ "ಶಿವಾಸ್" ಎಂಬ ಸಾಮ್ರಾಜ್ಯವನ್ನು ಕಟ್ಟಿದ ಶಿವರಾಮ ಭಂಡಾರಿಯವರ ಜೀವನ ಪಯಣವನ್ನು ಓದುವಾಗ ಮನಸ್ಸು ಭಾರವಾಗುತ್ತಲೇ ಹೋಗುತ್ತದೆ. ದಕ್ಷಿಣ ಕನ್ನಡದ ಕುಗ್ರಾಮವೊಂದರಲ್ಲಿ ಹುಟ್ಟಿ, ಬೆಳೆದ ಶಿವರಾಮ ಭಂಡಾರಿ ಇವತ್ತು ಮುಂಬೈನಂಥ ಮಾಯಾನಗರಿಯಲ್ಲಿ "ಶಿವಾಸ್" ಸಮೂಹದ ಒಡೆಯ. ಇವರ ಕೈಚಳಕಕ್ಕೆ ಮಾರುಹೋದ ಬಾಲಿವುಡ್, ಕ್ರಿಕೆಟ್, ಪಾಲಿಟಿಕ್ಸ್ ಹೀಗೆ ಅನೇಕ ಕ್ಷೇತ್ರಗಳ ಸೆಲೆಬ್ರಿಟಿಗಳು ಇವರನ್ನರಸಿಕೊಂಡು ಬರುತ್ತಾರೆ.

ವಿಪರ್ಯಾಸವೆಂದರೆ ಇಂದು ಪ್ರಸಿದ್ಧ ಕೇಶವಿನ್ಯಾಸಕರೆನಿಸಿಕೊಂಡಿರುವ ಇವರ ವೃತ್ತಿ ಜೀವನ ಆರಂಭವಾಗಿದ್ದು ವಿಧವೆಯೊಬ್ಬರ ಕೇಶಮುಂಡನ ಮಾಡುವುದರೊಂದಿಗೆ. ಶಿವರಾಮ ಭಂಡಾರಿಯವರೇ ಹೇಳಿಕೊಳ್ಳುವಂತೆ ಅವರು ತಮ್ಮ ಮೊದಲ ಗಿರಾಕಿಯನ್ನು ಕುರೂಪುಗೊಳಿಸಿದ್ದರು! ಹೀಗೆ... "ಸ್ಟೈಲಿಂಗ್ ಅಟ್ ದಿ ಟಾಪ್" ಪುಸ್ತಕದುದ್ದಕ್ಕೂ ಶಿವರಾಮ ಭಂಡಾರಿಯವರ ದುಃಖ-ಸುಖ, ಕಷ್ಟ-ಇಷ್ಟ, ಸೋಲು-ಗೆಲುವು, ನೋವು-ನಲಿವುಗಳ ಕತೆ ಪ್ರಕಟಗೊಂಡಿವೆ.

ಈ ಪುಸ್ತಕದ ಕುರಿತು ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ, ಸಿ.ವಿದ್ಯಾಸಾಗರ್ ರಾವ್, ಡಾ| ಡಿ‌.ವೀರೇಂದ್ರ ಹೆಗ್ಗಡೆ, ರವೀನಾ ಟಂಡನ್, ಸೋನೂ ಸೂದ್ ಅವರೆಲ್ಲಾ ಮಾತನಾಡಿದ್ದಾರೆ. ಕರ್ನಾಟಕ ಮೂಲದ ಒಬ್ಬ ಕೇಶ ವಿನ್ಯಾಸಕಾರ ಈ ಮಟ್ಟಿಗೆ ಬೆಳೆದು ನಿಂತಿರುವುದು ನಿಜಕ್ಕೂ ಸಂತಸದ ಸಂಗತಿ.

ಇಂಗ್ಲಿಷ್‌ನಲ್ಲಿ ಜಯಶ್ರೀ ಶೆಟ್ಟಿ ಅವರು ಬರೆದಿರುವ ಈ ಕೃತಿಯನ್ನು ಡಾ| ಶಿವಾನಂದ ಬೇಕಲ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾಷಾಂತರಗೊಂಡರೂ ಅದರಲ್ಲಿ ವ್ಯಕ್ತವಾಗುವ ಭಾವನೆಗಳಿಗೆ ಧಕ್ಕೆ ಉಂಟಾಗಿಲ್ಲ.

ಈ ಪುಸ್ತಕವನ್ನೊಮ್ಮೆ ಓದಿ ನೋಡಿ.

ಸ್ಕಂದ ಆಗುಂಬೆ

ಈ ಬರಹ "ಬುಕ್ ಬ್ರಹ್ಮ" ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.

ಓದು 2019 : ಬಸವರಾಜ ವಿಳಾಸ


ಯಥಾಪ್ರಕಾರ ವರ್ಷವೊಂದರ ಅಂಚಿಗೆ ಬಂದು ನಿಂತಿದ್ದೇವೆ. ಈಗೊಮ್ಮೆ ನಿಂತು 2019ರಲ್ಲಿ ನಾನು ಓದಿದ ಪುಸ್ತಕಗಳನ್ನು ಮೆಲುಕು ಹಾಕಿದರೆ, ಮೊದಲು ಕಾಣಿಸುವುದು ಇತ್ತೀಚೆಗೆ ಬಿಡುಗಡೆಯಾದ, ವಿಕಾಸ್ ನೇಗಿಲೋಣಿಯವರ  "ಬಸವರಾಜ ವಿಳಾಸ" ಕಥಾ ಸಂಕಲನ.

"ಬಸವರಾಜ ವಿಳಾಸ" ಓದುಗರ ಎದೆಯೊಳಗೆ ಸಲೀಸಾಗಿ ಇಳಿಯುವ ಒಂದು ಕಥಾ ಸಂಕಲನ. ಅದರಲ್ಲಿನ ಕತೆಗಳು ಕಾಲ್ಪನಿಕ ಕಾಲ, ದೇಶಗಳಿಂದ ಇಳಿದು ಬಂದವುಗಳಲ್ಲ ಅಥವಾ ಒತ್ತಾಯಪೂರ್ವಕವಾಗಿ ಕಟ್ಟಿದವುಗಳಲ್ಲ.

ಆ ಕತೆಗಳನ್ನು ಓದುವಾಗ ನಮ್ಮ ಊರು, ನಾವು ಕಂಡ ಪಾತ್ರ, ನಾವೇ ಮರೆತ ಹಳೆಯ ಘಟನೆ ಸೇರಿದಂತೆ ನಮ್ಮೊಳಗಿನ ತವಕ - ತಲ್ಲಣಗಳೆಲ್ಲ ಒಂದರ ಹಿಂದೊಂದು ಎದುರಾಗಿ ನಮ್ಮನ್ನು ಎಚ್ಚರಿಸುತ್ತವೆ. ಜೊತೆಗೆ, ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತವೆ.

ಈ ಕಥಾಸಂಕಲನದ - ಅವರವರ ಭಾಗ, ಅಂಥವೇ ಎರಡು ಗಿಣಿ ಕಾಣೋ ಬಳೆಗಾರ, ಚಿದಂಬರ ರಹಸ್ಯ, ಕಾರಣ ಇನ್ನೂ ತಿಳಿದು ಬಂದಿಲ್ಲ ಸೇರಿದಂತೆ ಬಹುತೇಕ ಎಲ್ಲಾ ಕತೆಗಳು ನಮಗೆ ನಮ್ಮ ಜಗತ್ತನ್ನು ಹೊಸ ಕಿಟಕಿಯೊಂದರ ಮೂಲಕ ತೋರಿಸುತ್ತವೆ. ಆ ಕತೆಗಳಲ್ಲಿ ಬರುವ ಪಾತ್ರಗಳು ಕೂಡ ಓದಿ ಮುಗಿಸಿದ ನಂತರವೂ ಎದೆಯಲ್ಲಿ ಕೂತು ಕಾಡುತ್ತವೆ.

ತುಂಬಾ ಸರಳವಾಗಿ ಹೇಳುವುದಾದರೆ "ಬಸವರಾಜ ವಿಳಾಸ" ಸಂಕಲನ ವಿಭಿನ್ನ ಕತೆಗಳ ಒಂದು ಮಳಿಗೆ.
ಇಂತಹದ್ದೊಂದು ಅಪರೂಪದ ಮಳಿಗೆಯನ್ನು ಈ ವರ್ಷ ಪರಿಚಯಿಸಿದ್ದಕ್ಕಾಗಿ ವಿಕಾಸ್ ನೇಗಿಲೋಣಿಯವರಿಗೆ ಧನ್ಯವಾದಗಳನ್ನು ತಿಳಿಸಲೇಬೇಕು.



- ಸ್ಕಂದ ಆಗುಂಬೆ.

ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಭಾನುಪ್ರಭ ಪುರವಣಿಯಲ್ಲಿ ಪ್ರಕಟವಾಗಿದೆ.


ಅಪ್ರಕಟಿತ ಅಭಿಪ್ರಾಯ :

ನನ್ನ ಅತ್ತೆ ಮನೆಗೆ ಹೋಗುವ ದಾರಿಯ ಒಂದು ತಿರುವಿನಲ್ಲಿ ಸಿಗುವ ಊರೊಂದರ ಹೆಸರು ನೇಗಿಲೋಣಿ. ಚಿಕ್ಕವನಾಗಿದ್ದಾಗಿಂದಲೂ ಆ ದಾರಿಯಲ್ಲಿ ಸಾಕಷ್ಟು ಬಾರಿ ತಿರುಗಾಡಿರುವೆನಾದರೂ "ನೇಗಿಲೋಣಿ" ಎಂಬ ಬೋರ್ಡನ್ನು ತಪ್ಪದೇ ಗಮನಿಸುವ ಅಭ್ಯಾಸ ಬೆಳೆದಿದ್ದು ಮಾತ್ರ ವಿಕಾಸ್ ನೇಗಿಲೋಣಿಯವರ ಪರಿಚಯವಾದ ಮೇಲೆ.

ನಮ್ಮೂರಿಗೂ, ನೇಗಿಲೋಣಿಗೂ ನಡುವೆ ತೀರಾ ಅಂತರವೇನಿಲ್ಲ. ಅಬ್ಬಬ್ಬಾ ಎಂದರೆ ಒಂದು ಗಂಟೆಯ ಹಾದಿ. ಆದರೆ, ನಾನು, ವಿಕಾಸ್ ಸರ್ ಅವರನ್ನು ಮೊದಲು ಭೇಟಿಯಾಗಿದ್ದು ಮಾತ್ರ ಈ ಎರಡೂ ಊರುಗಳಿಂದ ದೂರದಲ್ಲಿರುವ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ. ಪರಿಚಯ ಮಾಡಿಸಿಕೊಟ್ಟಿದ್ದು ಅದೇ ನೇಗಿಲೋಣಿಯನ್ನು ದಾಟಿ ಮುಂದೆ ಹೋದರೆ ಸಿಗುವ ನನ್ನ ಅತ್ತೆಯ ಮನೆಗೇ ಸೇರಿದ, ಆದರೆ ಬೆಂಗಳೂರಿನಲ್ಲಿರುವ ಇನ್ನೊಬ್ಬರು ಅತ್ತೆ, ಮಾಲಿನಿ ಅತ್ತೆ.



ಹೀಗೆ ಈ ಸಂಬಂಧ, ಸಂಪರ್ಕಗಳೆಲ್ಲಾ ಹೇಗೆ ಬೇಕಾದರೂ ಬೆಳೆಯಬಹುದು ಥೇಟ್ ಕತೆಗಳಂತೆಯೇ ಅಂತ ಒಮ್ಮೊಮ್ಮೆ ಅನ್ನಿಸಿಬಿಡುತ್ತೆ.
ನನಗೆ ಕತೆ ಓದುವುದೆಂದರೆ ಖುಷಿ. ಅದರಲ್ಲೂ ಕತೆಯಲ್ಲಿ ಬರುವ ಪಾತ್ರಗಳು ನಮಗೆ ಆಪ್ತವಾಗುತ್ತಾ ಹೋದಾಗ, ಕತೆಯ ಯಾವುದೋ ಒಂದು ಘಟನೆ ನಮ್ಮ ನೆನಪುಗಳನ್ನು ಕೆದಕಿದಾಗ, ಕತೆಯಲ್ಲಿ ಬರುವ ಜಾಗ, ಊರು ನಮ್ಮವೇ ಎನ್ನಿಸಿಬಿಟ್ಟಾಗ ನನಗೇ ಗೊತ್ತಿಲ್ಲದಂತೆ ಕತೆ ತನ್ನನ್ನು ಓದಿಸಿಕೊಂಡು ಬಿಡುತ್ತದೆ.
ವಿಕಾಸ್ ಸರ್ ಕತೆಗಳನ್ನು ಓದುವಾಗ ಹಲವೆಡೆ ನನಗೆ ಈ ಅನುಭವ ಆಗಿದೆ. ಹತ್ತಿರದ ಊರಿನವರಾಗಿರುವುದಕ್ಕೋ, ಯಾವಾಗಲೋ ಮಾತನಾಡುವಾಗ ಮಿಂಚಿನಂತೆ ಬಂದು ಹೋಗುವ ಘಟನೆಯ ಎಳೆಗಳು ಕತೆಯ ನಡುವೆಲ್ಲೋ ಸಿಕ್ಕಿ ಮುದ ನೀಡುವುದಕ್ಕೋ ಅಥವಾ ಕತೆಯಲ್ಲಿ ಬರುವ ಭಾಷೆ, ಪದಗಳ ಕಾರಣಕ್ಕೋ… ಅವರ ಕತೆಗಳು ಹೆಚ್ಚೆಚ್ಚು ಹತ್ತಿರವಾಗುತ್ತವೆ.

ವಿಕಾಸ್ ಸರ್ ಅವರ "ಮಳೆಗಾಲ ಬಂದು ಬಾಗಿಲು ತಟ್ಟಿತು" ಕಥಾ ಸಂಕಲನ ಓದಿದಾಗ ಹೀಗೆ ಅನ್ನಿಸಿತ್ತು. ಈಗ ಬಂದಿರುವ ಹೊಸ ಕಥಾ ಸಂಕಲನ "ಬಸವರಾಜ ವಿಳಾಸ"ವನ್ನು ಓದಿದಾಗಲೂ ಮತ್ತೆ ಅದೇ ಅನುಭವವಾಗಿದೆ.
ಬಸವರಾಜ ವಿಳಾಸದಲ್ಲಿರುವ ಕೆಲ ಕತೆಗಳನ್ನು ಈ ಮೊದಲೇ ಓದಿಯಾಗಿತ್ತಾದ್ದರಿಂದ ಮೊದಲ ಬಾರಿಗೆ ಕಥಾ ಸಂಕಲನವೊಂದು ಪ್ರಕಟವಾಗುವ ಮುನ್ನವೇ ಅದರ ಕತೆಗಳನ್ನು ಓದಿರುವೆನಲ್ಲಾ ಎಂಬ ಖುಷಿ ಆಗಾಗ ಕಾಣಿಸಿಕೊಳ್ಳುತ್ತಲೇ ಇತ್ತು. ಬಸವರಾಜ ವಿಳಾಸದ ಕುರಿತು ಹೆಚ್ಚು ಹೇಳಲಿಕ್ಕೆ ಹೋಗುವುದಿಲ್ಲ, ಅಲ್ಲಿನ ಕತೆಗಳನ್ನು ನೀವು ಓದಿದಾಗಲೇ ಆ ಖುಷಿ ದಕ್ಕುವುದಕ್ಕೆ ಸಾಧ್ಯ.

ನನ್ನ ಪಾಲಿಗೆ "ಬಸವರಾಜ ವಿಳಾಸ" ಕತೆಗಳಾಚೆಗೂ ಹೊಸ ಖುಷಿಯನ್ನು ನೀಡಿದೆ. ಅದನ್ನು ಒಂಚೂರಾದರೂ ವ್ಯಕ್ತಪಡಿಸಲೇಬೇಕು.
ಪುಸ್ತಕದ ಹಿಂಬದಿಯ ಪುಟಕ್ಕೆ ಒಂದೊಳ್ಳೇ ಫೋಟೋ ಬೇಕು. ನಿಮ್ಮೂರಿಗೆ ಬಂದಾಗ ತೆಗೆದ ಫೋಟೋ ಯಾವುದಾದರೂ ಇದ್ದರೆ ಕಳುಹಿಸಿ ಎಂದು ವಿಕಾಸ್ ಸರ್ ಹೇಳಿದಾಗಲೇ ನನಗೆ ವಿಪರೀತ ಖುಷಿಯಾಗಿತ್ತು. ಆದರೆ, ಆ ಫೋಟೋವನ್ನು ಬಳಸಿಕೊಳ್ಳುವ ಜೊತೆಗೆ ನನ್ನ ಹೆಸರನ್ನು ಪ್ರಕಟಿಸಿದ್ದು, ಹಾಗೆಯೇ ಕತೆಯ ಮೊದಲ ಓದುಗರ ಸಾಲಿನಲ್ಲೂ ನನ್ನನ್ನು ಸೇರಿಸಿ ನೆನೆಸಿಕೊಂಡಿದ್ದು ನನಗೆ ಅನಿರೀಕ್ಷಿತ ಅಚ್ಚರಿ ಮತ್ತು ಪುಳಕ.
ಪುಸ್ತಕದ ಜೊತೆಗೆ ಇಷ್ಟೆಲ್ಲಾ ಖುಷಿಗಳನ್ನು ಕೊಟ್ಟಿರುವ ವಿಕಾಸ್ ಸರ್‌ಗೆ ನನ್ನ ಪ್ರೀತಿಪೂರ್ವಕ ನಮಸ್ಕಾರಗಳು.

ಹಾಗೆಯೇ,
ಬಸವರಾಜ ವಿಳಾಸ ಓದಿ ಆಯ್ತು, ಮುಂದಿನ ಪುಸ್ತಕ ಯಾವಾಗ ವಿಕಾಸ್ ಸರ್ ಎಂದು ಈ ಮೂಲಕವೇ ಕೇಳ ಬಯಸುತ್ತೇನೆ…

ಕ್ಯಾಂಪಸ್‌ಗಳಲ್ಲಿ 2019



ವರ್ಷಗಳು ಉರುಳುವುದು ಭಾರೀ ಮಹತ್ವದ ಸಂಗತಿಯೇನಲ್ಲ. 365 ಹಗಲು, ರಾತ್ರಿಗಳ ಬದಲಾವಣೆ ಆಟದಲ್ಲಿ ಒಂದಿಡೀ ವರ್ಷವೇ ನುಸುಳಿ ತಪ್ಪಿಸಿಕೊಳ್ಳುತ್ತದೆ. ಆದರೆ, ಈ ಅವಧಿಯಲ್ಲಿ ನಾವು ಅದೆಷ್ಟು ವಿಚಾರಗಳೆಡೆಗೆ ಗಮನ ಹರಿಸುತ್ತೇವೆ, ಏನೇನೆಲ್ಲಾ ಚರ್ಚಿಸುತ್ತೇವೆ, ಯಾವುದಕ್ಕೆಲ್ಲಾ ತಲೆ ಕೆಡಿಸಿಕೊಂಡಿರುತ್ತೇವೆ ಎಂದು ಪಟ್ಟಿ ಮಾಡಿದರೆ ಒಂದಷ್ಟು ವಿಷಯಗಳು ಸರತಿಯಲ್ಲಿ ನಿಲ್ಲುತ್ತವೆ. ಅದರಲ್ಲೂ ನಮ್ಮಂತಹ ವಿದ್ಯಾರ್ಥಿಗಳು ವರ್ಷದ ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುವುದರಿಂದ ಅಲ್ಲಿ ಮಾತನಾಡುವ ಸಂಗತಿಗಳೇ ನಮಗೆ ಮುಖ್ಯವೆನಿಸುತ್ತವೆ.

ಈ ವರ್ಷ ಕಾಲೇಜು ವಿದ್ಯಾರ್ಥಿಗಳ ಗಮನ ಸೆಳೆದ ಅಂತಹ ಕೆಲವು ವಿಷಯಗಳೆಂದರೆ :

1. ಕೆ.ಜಿ.ಎಫ್ : ಕೆ.ಜಿ.ಎಫ್ 2018ರಲ್ಲಿ ಹುಟ್ಟಿ, 2019ರಲ್ಲಿ ಹರಿದ ನದಿಯಂತಹ ಸಿನಿಮಾ. ಬಹುಭಾಷೆಗಳಲ್ಲಿ ತೆರೆ ಕಂಡಿದ್ದ ಕನ್ನಡ ನೆಲದ ಸಿನಿಮಾ ಸಹಜವಾಗಿಯೇ ಕಾಲೇಜು ಕ್ಯಾಂಪಸ್ಸುಗಳಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿತ್ತು. ಕೆ.ಜಿ.ಎಫ್ ಸಿನಿಮಾದ ಹಾಡು, ಡೈಲಾಗುಗಳು ವಿದ್ಯಾರ್ಥಿಗಳ ಬಾಯಲ್ಲಿ ಓಡಾಡುವ ಮೂಲಕ ಕ್ಯಾಂಪಸ್‌ಗಳಲ್ಲೂ ಹವಾ ಸೃಷ್ಟಿಸಿತ್ತು.

2. ಎಲೆಕ್ಷನ್, ಅರ್ಹ – ಅನರ್ಹ : ಸರ್ಕಾರ, ಲೀಡರ್ಸ್, ರಾಜಕಾರಣ ಎಂದೆಲ್ಲಾ ಮಾತನಾಡುವವರಿಗೆ ಈ ಬಾರಿ ರಾಜಕೀಯ ಸುದ್ದಿಗಳಿಗಂತೂ ಕೊರತೆಯೇ ಇರಲಿಲ್ಲ. ಮೇ ತಿಂಗಳ ತನಕ ಲೋಕಸಭಾ ಚುನಾವಣೆಯ ಗುಂಗು, ನಂತರ ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಪರ್ವ, ಅದಾದ ಮೇಲೆ ಅನರ್ಹರ ಗದ್ದಲ, ಸಮ್ಮಿಶ್ರ ಸರ್ಕಾರದ ಪತನ, ಹೊಸ ಸರ್ಕಾರದ ರಚನೆ ಸೇರಿದಂತೆ ದಿನಕ್ಕೊಂದು ರಾಜಕೀಯ ಕತೆಗಳು ಪ್ರತ್ಯಕ್ಷವಾಗುತ್ತಿದ್ದವು. ಕ್ಲಾಸಿನಲ್ಲಿ ಬೇರೆ ಬೇರೆ ಪಕ್ಷದ ಅಭಿಮಾನಿಗಳು, ಸಿದ್ಧಾಂತದ ಹಿಂಬಾಲಕರು ಇದ್ದರಂತೂ ಮಿನಿ ವಿಧಾನಸೌಧವೇ ಕಣ್ಮುಂದೆ ಬಂದು ನಿಂತಂತೆ ಆಗುತ್ತಿತ್ತು. ಇದರ ನಡುವಲ್ಲೇ ಆದ ಐ.ಟಿ, ಇ.ಡಿ ದಾಳಿಗಳು ಕೂಡ ಕ್ಯಾಂಪಸ್ಸಿನಲ್ಲಿ ಒಂದಷ್ಟು ಸಂಚಲನ ಮೂಡಿಸಿದ್ದವು.

3. ಚಂದ್ರಯಾನ 2 : ಇಸ್ರೋ ವಿಜ್ಞಾನಿಗಳ “ಚಂದ್ರಯಾನ 2” ಯೋಜನೆ ಇಡೀ ದೇಶದ ಗಮನ ಸೆಳೆದಿತ್ತು. ಹಲವು ಕಾಲೇಜು
ಕ್ಯಾಂಪಸ್ಸುಗಳಲ್ಲಿ ಈ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅತ್ಯಂತ ಕುತೂಹಲ, ಸಂಭ್ರಮ, ಹೆಮ್ಮೆಗೆ ಕಾರಣವಾಗಿದ್ದ ಚಂದ್ರಯಾನ 2 ಯೋಜನೆ ಕೊನೆಯ ಹಂತದಲ್ಲಿ ವಿಫಲವಾದಾಗ ಯುವ ಸಮುದಾಯದ ಎದೆಯೂ ಭಾರವಾಗಿತ್ತು.

4. ಹೈದರಾಬಾದ್, ಉನ್ನಾವೋ ಪ್ರಕರಣ : ತೀರಾ ಇತ್ತೀಚೆಗೆ ಒಟ್ಟೊಟ್ಟಿಗೇ ನಡೆದ ಈ ಎರಡು ದುರಂತ ಘಟನೆಗಳು ಯುವ ಸಮೂಹದಲ್ಲಿ ಆತಂಕ, ಆಕ್ರೋಷಗಳನ್ನು ಹುಟ್ಟುಹಾಕಿಸಿದ ವಿಷಯಗಳು. ಅತ್ಯಾಚಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಿತು, ಕಾಲೇಜು ಕ್ಯಾಂಪಸ್ಸುಗಳಲ್ಲಿ ವಿರೋಧದ ಧ್ವನಿ ಮೊಳಗಿತು. ಇದರ ಬೆನ್ನಲ್ಲೇ ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ನಡೆದಾಗಲೂ ಕ್ಯಾಂಪಸ್‌ಗಳಲ್ಲಿ ಈ ವಿಷಯದ ಕುರಿತು ವ್ಯಾಪಕ ಚರ್ಚೆ ನಡೆದು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಯಾಗಲಿ ಎಂಬ ಒತ್ತಾಯ ಮೂಡಲು ಕಾರಣವಾಯಿತು.

5. ಫ್ರೀ ಕಾಲ್ ಕಟ್, ಡೇಟಾ ದರ ಏರಿಕೆ : ಕಳೆದ ಎರಡು ಮೂರು ವರ್ಷಗಳಿಂದ ಅನ್‌ಲಿಮಿಟೆಡ್ ಡೇಟಾ, ಫ್ರೀ ಕಾಲ್ ಎಂದು ಅದರಲ್ಲೇ ಮುಳುಗಿಹೋಗಿದ್ದ ಯುವ ಜನತೆಗೆ ಈ ವರ್ಷ ಭರ್ಜರಿ ಶಾಕ್ ಹೊಡೆದಿದೆ. ಏರ್ಟೆಲ್, ವೊಡಾಫೋನ್ – ಐಡಿಯಾ, ಜಿಯೋ ಎಲ್ಲವೂ ತಮ್ಮ ಟೆಲಿಕಾಂ ದರಗಳನ್ನು ಒಂದೇ ಸಲಕ್ಕೆ ಏರಿಸಿ, ಇಷ್ಟು ದಿನ ಕಡಿಮೆ ದರದಲ್ಲಿ ಕೊಟ್ಟದ್ದನ್ನೆಲ್ಲಾ ಮುಂಬರುವ ದಿನಗಳಲ್ಲಿ ವಸೂಲಿ ಮಾಡುವ ಸೂಚನೆ ಕೊಟ್ಟಿವೆ. ಟೆಲಿಕಾಂ ಕಂಪನಿಗಳ ಈ ನಡೆ ಕ್ಯಾಂಪಸ್
ಕಾರ್ನರ್‌ಗಳಲ್ಲೂ ಚರ್ಚೆಯಾಗಿದ್ದನ್ನು ಗಮನಿಸಿದರೆ ಯುವಜನತೆ ಯಾವ ಮಟ್ಟಿಗೆ “ಡಿಜಿಟಲೈಜ್” ಆಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು.

6. ಸಿಎಎ, ಎನ್‌ಆರ್‌ಸಿ : 2019ರ ಬೇರೆಲ್ಲಾ ವಿದ್ಯಮಾನಗಳಿಗೆ ಹೋಲಿಸಿದರೆ ಇದು ಅತ್ಯಂತ ಬಿಸಿ ವಿಚಾರ. ಸದ್ಯಕ್ಕೆ ಸಿಎಎ, ಎನ್‌ಆರ್‌ಸಿ ಕಾವು ಇನ್ನೂ ತಣಿದಿಲ್ಲ. ದೇಶದೆಲ್ಲೆಡೆ ಇದರ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಾರ್ವಜನಿಕ ವಲಯದಲ್ಲಷ್ಟೇ ಅಲ್ಲದೇ ಕ್ಯಾಂಪಸ್ಸಿನ ಒಳಗೂ ಈ ವಿಚಾರ ಸಂಚಲನ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್ಸುಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಶ್ರೇಯಸ್ಸು ಸಿಎಎ, ಎನ್‌ಆರ್‌ಸಿ ಕಾಯ್ದೆಗಳಿಗೆ ಸಲ್ಲುತ್ತದೆ.

7. ಅವನೇ ಶ್ರೀಮನ್ನಾರಾಯಣ : ಕೆಜಿಎಫ್ ಹವಾದೊಂದಿಗೆ ಶುರುವಾದ 2019ನೇ ಇಸವಿಯನ್ನು ಈಗ ಇನ್ನೊಂದು ದೊಡ್ಡ ಸಿನಿಮಾದೊಂದಿಗೆ ಬೀಳ್ಕೊಡುವಂತಾಗಿದೆ. ಈಗಲೂ ಕನ್ನಡ ನೆಲದ ಬಹುನಿರೀಕ್ಷಿತ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಲು ಕಾದು ಕುಳಿತಿದೆ. ಕನ್ನಡದ “ಅವನೇ ಶ್ರೀಮನ್ನಾರಾಯಣ” ಸಿನಿಮಾ ಸದ್ಯ ಕ್ಯಾಂಪಸ್ಸು, ಕಾರಿಡಾರುಗಳಲ್ಲಿ ಸದ್ದು ಮಾಡುತ್ತಿದೆ. 2019ನೇ ಇಸವಿಯಲ್ಲಿ ಹುಟ್ಟಿ, 2020ರಲ್ಲಿ ಹರಿಯಲು ಸಿದ್ದವಾಗಿರುವ ಈ ನದಿಯಂತಹಾ ಸಿನಿಮಾ ಯಶಸ್ವಿಯಾಗಲಿ ಎಂಬುದೇ ಸದ್ಯದ ಹಾರೈಕೆ.



ಹೀಗೆ ಪ್ರತಿವರ್ಷವೂ ಹಲವು ವಿಚಾರಗಳು ಘಟಿಸುತ್ತಲೇ ಇರುತ್ತವೆ. ಇಲ್ಲಿ ಉಲ್ಲೇಖಿಸಿಲ್ಲ ಎಂದ ಮಾತ್ರಕ್ಕೆ ಇನ್ನುಳಿದ ವಿಷಯಗಳು ಅಮುಖ್ಯ ಎಂದೇನಲ್ಲ. ಸದ್ಯಕ್ಕೆ ಈ ವರ್ಷ ಕ್ಯಾಂಪಸ್ಸಿನಲ್ಲಿ ಚರ್ಚೆಯಾದ ವಿಷಯಗಳು ಎಂದ ತಕ್ಷಣ ನೆನಪಿಗೆ ಬಂದದ್ದು ಇವಿಷ್ಟು.

- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟಗೊಂಡಿದೆ.

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...