ಮೊನ್ನೆ ಮೊನ್ನೆ ತನಕ ಹೀರೋ ಆಗಿದ್ದ ಖಡಕ್ ಅಧಿಕಾರಿಯೊಬ್ಬರು ಸಡನ್ನಾಗಿ ವಿಲನ್ ಆಗ್ತಾರೆ...
ರಾಜಕೀಯಕ್ಕೆ ಬಂದು ಹಾಳಾಗ್ಬಿಟ್ರು ಅಂತ ಬೈಸ್ಕೊಳ್ತಿದ್ದ ರಾಜಕಾರಣಿಯೊಬ್ಬರು ಇದ್ದಕ್ಕಿದ್ದಂತೆ ಮಾದರಿ ವ್ಯಕ್ತಿಯಾಗ್ತಾರೆ...
ಆದರೆ, ಈ ಅಭಿಪ್ರಾಯಗಳೆಲ್ಲಾ ಎಷ್ಟು ದಿನದವರೆಗೆ ಇರ್ತಾವೆ? ಅವರ ಇನ್ನೊಂದು ನಿರ್ಧಾರ ನಮ್ಮ ವೈಯುಕ್ತಿಕ ನಿಲುವಿನೊಂದಿಗೆ ತಾಳೆಯಾಗುತ್ತಿಲ್ಲ ಅನ್ನಿಸೋವರೆಗೆ.. ಅಷ್ಟೇ, ಮತ್ತೆ ಉಲ್ಟಾಪಲ್ಟಾ.
ಅವರು ಆ ಕ್ಷಣಕ್ಕೆ ತೋಚಿದಂತೆ ರಿಯಾಕ್ಟ್ ಮಾಡಿದ್ರೂ ಸಹ ನಾವು ಮಾತ್ರ ಅದನ್ನ ಸ್ಕ್ರಿಪ್ಟೆಡ್ ಅನ್ನೋ ಥರ ನೋಡ್ತೀವಿ, ಘಟನೆ ಕುರಿತು ಅವರು ಅಭಿಪ್ರಾಯ ವ್ಯಕ್ತಪಡಿಸುವ ಮೊದಲೇ ನಾವು ನಮಗೆ ಬೇಕಾದಂತೆ ತೀರ್ಪು ಕೊಡ್ತೀವಿ.
ಒಬ್ಬ ಸಂಸದ - ನನಗೆ ರಾಜಕೀಯ ಭವಿಷ್ಯಕ್ಕಿಂತ ಧರ್ಮ ಮುಖ್ಯ ಅಂದಾಗ ನಾವು ಸಂಭ್ರಮಿಸೋದು ಎಷ್ಟರ ಮಟ್ಟಿಗೆ ಸಮಂಜಸ? ಅವರು ಆ ಕ್ಷಣಕ್ಕೆ ಭಾವೋದ್ವೇಗದಿಂದ ಆಡಿದ ಮಾತು ಮುಂದೆ ಬದಲಾಗಲೂಬಹುದು. ಅಂತೆಯೇ ಒಬ್ಬ ಪೊಲೀಸ್ ಅಧಿಕಾರಿ ಅದೂ ಸಹ ಯುವಕರ ಕಂಗಳಿಗೆ ಹೊಳಪನ್ನು ತುಂಬುವ ಶಕ್ತಿಯುಳ್ಳ ದಕ್ಷ ಅಧಿಕಾರಿ ಮೇಲಿನವರ ಆದೇಶವನ್ನು ಪಾಲಿಸಿದರೆ ನಮ್ಮ ಕಣ್ಣಿಗೆ ಧರ್ಮದ್ರೋಹಿಯಾಗೋದು ವಿಪರ್ಯಾಸ.. ಕಷ್ಟಪಟ್ಟು ಆ ಸ್ಥಾನಕ್ಕೆ ಏರಿದಾತನಿಗೆ ನಾವು ಕೊಡುವ ಮರ್ಯಾದೆಯಾ ಅದು? ಹೋಗಲಿ... ಒಬ್ಬ ಅಧಿಕಾರಿ ಒಂದು ಧರ್ಮದ ಪರವಾಗಿ ಇರಬೇಕು ಅಂತ ಅಂದುಕೊಳ್ಳೋದು ಸರಿಯಾ?
ಈ ಸರ್ಕಾರಗಳು ತಮಗೆ ಬೇಕಾದಂತೆ ಆದೇಶ ಹೊರಡಿಸಿ ಜನರ ಮಧ್ಯೆ ಮತ್ಸರ ಹುಟ್ಟೋಕೆ ಕಾರಣವಾಗ್ತಾರೆ ಅನ್ನೋದನ್ನ ಒಪ್ಪಿಕೊಳ್ಳೋಣ. ಆದರೆ, ಸರ್ಕಾರದ ಯಡವಟ್ಟುಗಳನ್ನು ವಿಶ್ಲೇಷಿಸೋ ನಮಗೆ ಅವರ ಕುತಂತ್ರಗಳನ್ನು ವಿಫಲಗೊಳಿಸೋ ಬುದ್ದಿ ಯಾಕೆ ಬರಲ್ಲ? ಹಿಂದೂ - ಮುಸ್ಲಿಂ ಅನ್ನೋದು ಹಾವು - ಮುಂಗುಸಿಯಂತಾಗಲೇ ಬೇಕು ಅಂತ ಬಯಸುವವರು ಯಾವತಿದ್ದರೂ ಅಪಾಯಕಾರಿಯೇ.
ಊರಿನ ನೆಲಕ್ಕೆ, ಮಣ್ಣಿಗೆ ಅದನ್ನು ತುಳಿಯುವವನು ಯಾವ ಧರ್ಮದವನು ಅನ್ನೋದು ಗೊತ್ತಿರಲ್ಲ, ಅವುಗಳಿಗೆ ಸೂಕ್ಷ್ಮಪ್ರದೇಶ, ಅದೂ ಇದು ಅನ್ನೋ ಬೋರ್ಡ್ ನೇತಾಕೋದು ನಾವುಗಳು, ಎಷ್ಟಂದರೂ ಗಡಿ ಹಾಕಿ ಬದುಕೋದೇ ನಮಗೆ ರೂಢಿ ಅಲ್ವಾ?
ಅಸ್ಪೃಶ್ಯತೆ, ಅಸಮಾನತೆ ಎಲ್ಲವನ್ನೂ ತೊಲಗಿಸಬೇಕು ಅಂತ ಹೇಳುವ ನಮ್ಮದೇ ಬಾಯಲ್ಲಿ, ಹಿಂದೂಗಳನ್ನ ತುಳೀಬೇಕು/ಮುಸ್ಲಿಂರನ್ನ ಓಡಿಸ್ಬೇಕು ಅನ್ನೋ ಮಾತೂ ಬರುತ್ತೆ ಅಂದ್ರೆ ನಮ್ಮ ನಿಲುವು ಎಷ್ಟು ಸ್ಪಷ್ಟ, ನಮ್ಮ ಮಾನವೀಯತೆ ಎಷ್ಟು ಜೀವಂತ ಅನ್ನೋದನ್ನ ಪರಾಮರ್ಶಿಸಿಕೊಳ್ಬೇಕು. ಹಬ್ಬ ಹರಿದಿನಗಳು ಸಂಭ್ರಮಕ್ಕೆ ಕಾರಣವಾಗೋ ಬದಲು ಸೂತಕಕ್ಕೆ ಕಾರಣವಾಗುತ್ತೆ ಅನ್ನೋದಾದ್ರೆ, ನಮ್ಮ ಖುಷಿಯನ್ನು ಇಂತಿಷ್ಟೇ ಪರಿಧಿಯೊಳಗೆ ಈಡೇರಿಸಿಕೊಳ್ಬೇಕು ಅನ್ನೋದನ್ನು ಸರ್ಕಾರ/ವ್ಯವಸ್ಥೆ ತೀರ್ಮಾನಿಸೋದಾದ್ರೆ ಅದನ್ನು ಹಬ್ಬ ಅನ್ನೋದೇ ವ್ಯರ್ಥ.
ಇವತ್ತು ಹೀರೋ ಆದವನು ನಾಳೆ ವಿಲನ್ ಆಗ್ತಾನೆ ನಾಡಿದ್ದು ಹೀರೋ, ಆಚೆನಾಡಿದ್ದು ಮತ್ತೆ.... ಹೀಗೇ ಚಕ್ರದ ಥರ ನಮ್ಮ ನಿರ್ಧಾರಗಳೂ ಬದಲಾಗ್ತಾನೆ ಇದ್ದಾವೆ ಅಂದ್ರೆ ನಮ್ಮನ್ನ ನಾವು ಮೊದಲು ನಿಯಂತ್ರಿಸಿಕೊಳ್ಳೋದು ಅವಶ್ಯಕ. ಇಡೀ ವ್ಯವಸ್ಥೆ ನಮ್ಮ ಮೂಗಿನ ನೇರಕ್ಕೆ ನಡೆಯೋದಿಲ್ಲ ಅಂದ್ರೂ ಅದನ್ನ ಬಯಸ್ತೀವಿ ಅಂದ್ರೆ ನಮ್ಮನ್ನು ನಾವು ಹೇಗೆ ವ್ಯಾಖ್ಯಾನಿಸಿಕೊಳ್ಳಬೇಕು?
ಊಹ್ಞೂಂ... ಗೊತ್ತಿಲ್ಲ.
ಇದೆಲ್ಲವೂ ಒಂದು ರೀತಿ ಬಿಗ್ಬಾಸ್ ಆಟ ಇದ್ದಂಗೆ... ಬಯ್ಯೋದೂ ಬಿಟ್ಟಿಲ್ಲ ಅಂದ್ರೆ, ನೋಡೋದು ಬಿಟ್ಟಿಲ್ಲ ಅಂತಾನೇ ಅರ್ಥ. ಇವತ್ತು ಇಷ್ಟವಾದ ಸ್ಪರ್ಧಿ ನಾಳೆಗೆ ಕಳ್ಳ ಅನ್ನಿಸ್ತಾನೆ, ಡಬಲ್ ಗೇಮ್ ಆಡ್ತಿದ್ದೋಳೇ ಸ್ಟ್ರೈಟ್ ಫಾರ್ವರ್ಡ್ ಅನ್ಸ್ತಾಳೆ. ಒಳ್ಗಿರೋರು ಮಿಸ್ಟರ್ ಪರ್ಫೆಕ್ಟ್ ಅಲ್ಲ, ಜೊತೆಗೆ ನಾವುಗಳೂ.....
ನನಗೆ ಅನ್ನಿಸಿದ್ದನ್ನ ತಡಬಡಾಯಿಸಿದ್ದೇನೆ ಅಷ್ಟೇ.. ಇನ್ನೂ ಆಳವಾಗಿ ಯೋಚನೆ ಮಾಡೋಕೆ ಮನಸ್ಸು ಸಹಕರಿಸುತ್ತಿಲ್ಲ... ಇಷ್ಟೇ 😊
(ಈ ಲೇಖನ "ಹಾಯ್ ಬೆಂಗಳೂರ್" ಪತ್ರಿಕೆಯಲ್ಲಿ ಪ್ರಕಟವಾಗಿದೆ)


No comments:
Post a Comment