Tuesday, 30 January 2018

ಗಾಂಧಿ ಕ್ಲಾಸ್..!



ಗಾಂಧಿ.. ಇದೊಂದು ಹೆಸರು ದುರುಪಯೋಗಕ್ಕೊಳಗಾದಷ್ಟು ಮತ್ಯಾವ ಹೆಸರುಗಳೂ ಆಗಿರಲಿಕ್ಕಿಲ್ಲ.. ರಾಜಕೀಯ ನಾಯಕರಿಂದ ಹಿಡಿದು, ಶಾಲಾ ಮಕ್ಕಳ ತನಕ ಎಲ್ಲರ ಬಾಯಲ್ಲೂ ಗಾಂಧಿ ಇದ್ದೇ ಇರ್ತಾರೆ. ಇದೊಂಥರಾ "ನಾಮವೊಂದು ರೂಪ ಹಲವು".

ಆಗ ನಾನಿನ್ನೂ ನಾಲ್ಕನೇ ತರಗತಿ ವಿದ್ಯಾರ್ಥಿ ಇರಬಹುದು.. ಒಂದೆಡೆ ಮೇಷ್ಟ್ರು ಕೊಡುವ ಬೆತ್ತದೇಟು, ಮತ್ತೊಂದೆಡೆ ಮನೆಯಲ್ಲಿ ಅಮ್ಮ ಕರುಣಿಸುತ್ತಿದ್ದ ಕೆಂಪನೆಯ ಬರೆ, ಫಟ್ ಎಂದು ಒಂದೇಟು ಕೊಟ್ಟರೆ ಐದು ಕೈಬೆರಳುಗಳ ಅಚ್ಚೂ ತೊಡೆಯ ಮೇಲೆ ಹಾಜರ್!! ಇಂತಹ ಪರಿಸ್ಥಿತಿಯಲ್ಲಿ ವಿಧೇಯ ವಿದ್ಯಾರ್ಥಿ ಆಗದಿದ್ದರೆ ಉಳಿಗಾಲವಿಲ್ಲ ಎಂದು ಅರಿವಾಗಿ ಶಿಸ್ತಿನ ಸಿಪಾಯಿಯಾಗಿದ್ದೆ. ನಾಲ್ಕು ದಿನಗಳ ಕಾಲ ರಜೆಯಿದ್ದರೆ, ರಜೆಯ ಮೊದಲ ದಿನವೇ ಹೋಂ ವರ್ಕ್ ಎಲ್ಲಾ ಮುಗಿಸಿಡುವುದೇನು? ತರಗತಿಯಲ್ಲಿ ಕೇಳಿದ ಪ್ರಶ್ನೆಗೆಲ್ಲಾ ಥಟ್ಟನೆ ಎದ್ದು ಉತ್ತರಿಸುವುದೇನು? ಸಹಪಾಠಿಗಳೆಲ್ಲಾ ಒಂಬತ್ತರ ಮಗ್ಗಿಗೇ ತಡವರಿಸುತ್ತಿದ್ದರೆ ನಾನು ಮಾತ್ರ ಇಪ್ಪತ್ನಾಲ್ಕೊಂದ್ಲಿ ಇಪ್ಪತ್ನಾಲ್ಕ ಎಂದು ರಾಜಗಾಂಭೀರ್ಯದಿಂದ ಮೇಷ್ಟ್ರ ಮುಂದೆ ನಿಲ್ಲುವುದೇನು? ಆಹಾ!! ಮೆರೆದಿದ್ದೇ ಮೆರೆದಿದ್ದು. ನಾನು ಪಟಪಟನೆ ಉತ್ತರಿಸುತ್ತಿದ್ದರೆ ಮೇಷ್ಟ್ರಿಗೆ ಖುಷಿಯೋ ಖುಷಿ, ಅದೇ ಖುಷಿಯಲ್ಲಿ ಪಕ್ಕದಲ್ಲಿ ಉತ್ತರಿಸಲು ತಡವರಿಸಿ ಗೊಣ್ಣೆ ಸುರಿಸುತ್ತಿದ್ದ ಗೋಪಾಲನ ಮೂಗು ಹಿಡಿದು ಕೆನ್ನೆಗೆ ಬಾರಿಸು ಎಂದು ಆರ್ಡರ್ ಮಾಡುವ ತನಕ ನಾನೆಂಥಾ ತಪ್ಪು ಮಾಡಿದೆ ಎಂಬ ಅರಿವಾಗಿರಲಿಲ್ಲ.. ಹೀಗೆ ಗೊತ್ತೋ ಗೊತ್ತಿಲ್ಲದೆಯೋ ಒಳ್ಳೆಯ ವಿದ್ಯಾರ್ಥಿ ಎಂದು ಶಿಕ್ಷಕರಿಂದ ಬಿರುದು ಪಡೆದಿದ್ದರೆ, ಗೊಣ್ಣೆ ಗೋಪಾಲ ಮಾತ್ರ ನನಗೆ "ಗಾಂಧಿ" ಎಂದು ಹೆಸರಿಟ್ಟು ಇಡೀ ಸ್ಕೂಲಿಗೇ ಫೇಮಸ್ ಮಾಡಿದ್ದ, ಏಳನೇ ತರಗತಿ ಮುಗಿಸಿ ಶಾಲೆಯಿಂದ ಆಚೆ ಕಾಲಿಡುವ ತನಕ ನನ್ನ ಪಾಲಿಗೆ ದಿನವೂ ಗಾಂಧಿ ಜಯಂತಿ!!
ಹೈಸ್ಕೂಲಿಗೆ ನಾನು ಬೇರೆ ಶಾಲೆಗೆ ಸೇರಿದ ಕಾರಣ ಗೊಣ್ಣೆ ಗೋಪಾಲ ಹಾಗೂ ಗಾಂಧಿ ಎಂದು ಕೂಗುವ ಇತರ ಸಹಪಾಠಿಗಳಿಂದ ಮುಕ್ತಿ ಸಿಕ್ಕಿತ್ತು. ಹೊಸ ಸ್ಕೂಲು, ಹೊಸ ಫ್ರೆಂಡ್ಸು.. ಒಂದು ವರ್ಷ ಸರಾಗವಾಗಿ ಕಳೆದಿತ್ತು, ಓದುವುದರಲ್ಲಿ ಮುಂಚೂಣಿಯಲ್ಲಿದ್ದ ಕಾರಣ ಇಲ್ಲಿಯೂ ಶಿಕ್ಷಕರುಗಳೊಂದಿಗೆ ತುಸು ಸಲುಗೆಯಿಂದಲೇ ಇದ್ದೆ. ಇಂತಹ ಹೈಸ್ಕೂಲಿನ ವಾತಾವರಣ ಮಾತ್ರ ವಿಚಿತ್ರವಾಗಿತ್ತು, ಒಬ್ಬ ಹುಡುಗ - ಹುಡುಗಿ ಪರಸ್ಪರ ಮಾತನಾಡಿದರೆ ದೊಡ್ಡ ಕೋಲಾಹಲವೇ ಮೂಡುತ್ತಿದ್ದ ಕಾರಣ ಅಪ್ಪಿತಪ್ಪಿಯೂ ಹುಡುಗಿಯರತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹೀಗಿರುವಾಗಲೇ ವೆಂಕಟರಮಣ ಮೇಷ್ಟ್ರು ನನ್ನನ್ನು ಕ್ಲಾಸ್ ಲೀಡರ್ ಎಂದೂ, ಹೊಸದಾಗಿ ಬಂದಿದ್ದ ಸಹಪಾಠಿ ಸಂಗೀತಳನ್ನು ಸೆಕೆಂಡ್ ಲೀಡರ್ ಎಂದೂ ನೇಮಕ ಮಾಡಿದ್ದು. ಸಂಗೀತಳ ಅಂದಕ್ಕೆ ಅದಾಗಲೇ ನನ್ನನ್ನೂ ಸೇರಿಸಿ ಸುಮಾರು ಹುಡುಗರು ಮಾರುಹೋಗಿದ್ದರಾದರೂ, ಸ್ಕೂಲಿನ ಅಲಿಖಿತ ನಿಯಮಕ್ಕೆ ಹೆದರಿ ಮಾತನಾಡಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಲೀಡರ್ ಆದಾಗ ಮಾತನಾಡಿಸುವ ಅನಿವಾರ್ಯತೆ ಮೂಡುತ್ತಿದ್ದುದರಿಂದ ಆಗಾಗ ಅವಶ್ಯಕತೆಗಿಂತ ಕಡಿಮೆಯೇ ಮಾತನಾಡಿ ಸುಮ್ಮನಾಗುತ್ತಿದ್ದೆ. ಛೇ!! ಹೆಚ್ಚು ಮಾತನಾಡೋಕೆ ಆಗುತ್ತಿಲ್ಲವಲ್ಲಾ ಎಂದು ನಾನು ಹೊಟ್ಟೆ ಉರಿಸಿಕೊಳ್ಳುತ್ತಿದ್ದರೆ, ಒಂದಕ್ಷರ ಮಾತನಾಡಲೂ ಆಗದ ಅವಕಾಶ ವಂಚಿತ ಪುಣ್ಯಾತ್ಮರು ಚೂರುಪಾರು ಮಾತನಾಡುತ್ತಿದ್ದ ನನ್ನನ್ನು ಕಂಡೇ ಹೊಟ್ಟೆ ಉರಿಸಿಕೊಂಡು, ಸಂಗೀತಳ ಜೊತೆ ನನ್ನ ಹೆಸರನ್ನು ತಳುಕು ಹಾಕಿ ಪ್ರಚಾರ ಶುರುಮಾಡಿದ್ದರು. ಪಕ್ಕದ ತರಗತಿಗೂ ಈ ವಿಷಯ ಹರಡಿದಾಗ ನನಗೆ ಪುಕ್ಕಲು ಶುರುವಾಗಿ, ಎಲ್ಲಿ ವೆಂಕಟರಮಣ ಮೇಷ್ಟ್ರಿಗೆ ವಿಷಯ ತಲುಪುತ್ತದೋ ಎಂದು ಬೆದರಿ ಸಂಗೀತಳನ್ನು ಕಂಡರೆ ಮಾರು ದೂರ ಸರಿಯುತ್ತಿದ್ದೆ. ರೇಗಿಸಿದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಸಂಗೀತ, ಪುಕ್ಕಲನಂತೆ ಹೆದರಿ ಮಾತುಬಿಟ್ಟ ನನ್ನೆಡೆಗೆ ಉರಿದುಬಿದ್ದಿದ್ದಳು. ಅದೇ ಸಿಟ್ಟಿನಲ್ಲಿ ಪುಣ್ಯಾತ್ಗಿತ್ತಿ ನಾನು ಕಳಚಿಕೊಂಡಿದ್ದ ಗಾಂಧಿ ಪಟ್ಟವನ್ನು ಮತ್ತೆ ಹೆಗಲಿಗೇರಿಸಿದ್ದಳು.. ಅದಾದ ನಂತರ ಹೈಸ್ಕೂಲಿನಲ್ಲೂ ದಿನವೂ ಗಾಂಧಿ ಜಯಂತಿ!!
ತೀರಾ ಮೊನ್ನೆ ಹುಡುಗಿಯ ಜೊತೆ ಕಬ್ಬನ್ ಪಾರ್ಕ್ ಸುತ್ತಾಡಲು ಹೋದಾಗ ಅಲ್ಲೇ ಹತ್ತಿರದಲ್ಲಿರುವ ಗಾಂಧಿ ಪ್ರತಿಮೆ ಕಣ್ ಸೆಳೆಯಿತು, ಮುದ್ದೂ ಗಾಂಧಿ ಸ್ಟ್ಯಾಚ್ಯೂ ಹತ್ರ ಹೋಗಿ ಒಂದ್ ಸೆಲ್ಫಿ ತಗೋಳಣ ಬಾರೇ ಅಂದಾಗ "ನೀನೇ ದೊಡ್ ಗಾಂಧಿ.. ನಿನ್ ಜೊತೆ ಸೆಲ್ಫಿ ತಗೊಂಡ್ರೆ ಸಾಕು ನಾನು.. ಅಲ್ಲಿ ತನಕ ಹೋಗೋದೇ ಬೇಡ" ಅಂತ ನಕ್ಕು ತಲೆ ಮೊಟಕಿದಾಗ ಸಂಗೀತ, ಗೊಣ್ಣೆ ಗೋಪಾಲ ಎಲ್ಲಾ ಒಟ್ಟಾಗಿ ಗಾಂಧಿ ಎಂದು ಕೂಗಿದಂತಾಯ್ತು.
ಈಗಂತೂ ಗಾಂಧಿ ಎಂಬ ಪಟ್ಟ ಕೇವಲ ಹುಡುಗರಿಗೆ ಮಾತ್ರ ಸೀಮಿತವಾಗದೆ ಹುಡುಗಿಯರನ್ನೂ ಆವರಿಸಿದೆ. ರಸ್ತೆಯಲ್ಲಿ ತಲೆತಗ್ಗಿಸಿಕೊಂಡು ಹೋಗುವ ಹುಡುಗಿ, ಹಣೆಗೆ ಬಿಂದಿಯಿಟ್ಟು ಹೂ ಮುಡಿದಾಕೆ, ಹುಡುಗರೊಂದಿಗೆ ಮಾತಾಡಲು ಹಿಂಜರಿಯುವವಳು ಎಲ್ಲರೂ ಗಾಂಧಿಯಾಗುತ್ತಾರೆ. ಹೀಗೆ ಯುವಜನತೆ ಮಹಾತ್ಮ ಗಾಂಧೀಜಿಯವರ ತತ್ವ, ಸಂದೇಶಗಳನ್ನು ಪಾಲಿಸದಿದ್ದರೂ ಅವರ ಹೆಸರನ್ನು ಮಾತ್ರ ಸದಾ ಜಪಿಸುತ್ತಿರುತ್ತಾರೆ. ಥಿಯೇಟರ್ನಲ್ಲಿರುವ ಮುಂದಿನ ಸಾಲು ಹೇಗೆ ಗಾಂಧಿಕ್ಲಾಸ್ ಎನ್ನಿಸಿಕೊಳ್ಳುತ್ತದೋ ಹಾಗೇ ತರಗತಿಯ ಮೊದಲ ಬೆಂಚು ಸಹ ಗಾಂಧಿ ಕ್ಲಾಸ್!
ಗಾಂಧಿ ಸರ್ವಾಂತರ್ಯಾಮಿ, ಪ್ರತಿ ತರಗತಿಯಲ್ಲೂ, ಸ್ನೇಹಿತರ ಗುಂಪಿನಲ್ಲೂ, ಕೊನೆಗೆ ನಮ್ಮೊಳಗೂ ಒಬ್ಬ ಗಾಂಧಿ ಚಿರಸ್ಥಾಯಿ.
ಆದರೆ ನಾವು ಮತ್ತೊಬ್ಬರಿಗೆ ಗಾಂಧಿ ಎಂದು ಕೂಗುವಾಗ ಅದರೊಳಗೊಂದಷ್ಟು ಅಸಹನೆ, ವ್ಯಂಗ್ಯವನ್ನು ತುಂಬುತ್ತೇವೆ. ತಪ್ಪನ್ನು ತಪ್ಪು ಎಂದವ, ಸತ್ಯಕ್ಕೆ ತಲೆ ಬಾಗಿದವ, ಸಂಸ್ಕಾರಕ್ಕೆ ಅಂಟಿಕೊಂಡವ, ರ‌್ಯಾಂಕ್ ಪಡೆದವ, ಗಲಾಟೆಗಳಿಂದ ದೂರ ಇರುವವ, ಕಡೆಗೆ ಫೇಸ್ಬುಕ್, ವಾಟ್ಸಪ್ ಯಾವುದನ್ನೂ ಬಳಸದವ ಹೀಗೆ ಎಲ್ಲರೂ ಗಾಂಧಿಯಾಗುತ್ತಾರೆ!!
ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತೆ ಈ ಕ್ಷಣಕ್ಕೂ ಎಷ್ಟೋ ಜನ ಗಾಂಧಿ ಎಂಬ ಹೆಸರಿನಿಂದ ಹೊರಬರಲು ಹೋರಾಡುತ್ತಿರುತ್ತಾರೆ. ತಾನು ಗಾಂಧಿಯಲ್ಲ ಎಂದು ನಿರೂಪಿಸಿಕೊಳ್ಳಲು ಅನುಕ್ಷಣವೂ ಗಾಂಧೀತನಕ್ಕೆ ಹೊಂದಿಕೆಯಾಗದ ಕೆಲಸ ಮಾಡಲು ಪ್ರಯತ್ನಿಸಿರುತ್ತಾರೆ. ಗಾಂಧಿ ಈಗ ಕೇವಲ ಮಹಾತ್ಮ, ರಾಷ್ಟ್ರಪಿತ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ ಉಳಿದಿಲ್ಲ. ತನ್ನ ತತ್ವ, ಸಂದೇಶಗಳ ಮೂಲಕ ಎಷ್ಟೋ ಜನರ ಬದುಕನ್ನು ಸರಿದಾರಿಗೆ ತಂದ ಗಾಂಧಿ ಎಂಬ ಹೆಸರು ಇಂದು ಎಷ್ಟೋ ಜನರಿಗೆ ಕಿರಿಕಿರಿ, ಸಿಟ್ಟು, ಹತಾಶೆಯನ್ನು ತಂದಿಡುತ್ತಿದೆ.
ಮಹಾತ್ಮ ಗಾಂಧಿಯವರ ಪುಣ್ಯತಿಥಿಯ ಸಂದರ್ಭದಲ್ಲಿ ಇವೆಲ್ಲಾ ನೆನಪಾಯಿತು, ಗಾಂಧಿ ಎಂಬ ದೇಹ ಮಣ್ಣಾಗಿ ಎಪ್ಪತ್ತು ವರ್ಷಗಳಾದವೂ ಆದರೆ ಅವರ ಹೆಸರು ಮಾತ್ರ ಇಂದಿಗೂ ಉಸಿರಾಡುತ್ತಿದೆ ತುಸು ಕಷ್ಟದಲ್ಲಿ…!


- ಸ್ಕಂದ ಆಗುಂಬೆ

(ಮೂಲಪ್ರತಿ)

ಈ ಲೇಖನ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.

No comments:

Post a Comment

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...