ನನ್ನಿಷ್ಟದ ಕೃಷ್ಣ ಬಿಕರಿಯಾದ
ಭಕ್ತಿ ವ್ಯಾಪಾರಕ್ಕೆ
ರಂಗು ರಂಗಿನ ದೀಪವಿಲ್ಲಿ
ಎಳೆ ಬತ್ತಿ ಹಣತೆಯಿಲ್ಲ
ಢೋಲು, ಢಕ್ಕೆ, ತಮಟೆಯಲ್ಲಿ
ಕೊಳಲು ಊದಿದರೆ ಕೇಳುವವರಿಲ್ಲ
ಕೋಲ್ಮಿಂಚಿನಾಭರಣವಿದೆ
ಬಾಯಿ ತುದಿಗೆ ಕದ್ದ ಬೆಣ್ಣೆಯಿಲ್ಲ
ಗೋವು ಕಾಯುತ್ತಿದ್ದವನಿಗೆ
ಇದೆಂಥಾ ದುಸ್ಥಿತಿ?
ನನ್ನ ಕೃಷ್ಣ ಪುಟ್ಟ ಮೂರ್ತಿ
ಅಹಂಕಾರದಿ ತಲೆಯೆತ್ತಿದವನಲ್ಲ
ಕೈ ಚಾಚುತ್ತಿದ್ದುದು ಬೆಣ್ಣೆ ಮುದ್ದೆಗೆ
ಮೂರು ಕಾಸಿನಾಸೆಗಲ್ಲ
ದನದ ಹಿಂಡಲ್ಲಿ ಓಡಿದವನಿಗೆ
ಧನದಾಹ ಹುಟ್ಟಿಸಿದವರಾರೋ?
ರಾಧೆ, ರುಕ್ಮಿಣಿಯರ ಗೆದ್ದವನ ಹೆಸರಲ್ಲಿ
ಪ್ರೇಮ ಮಂದಿರವಂತೆ,
ಮೋಹ ಮಂದಿರವಂತೆ
ಹೆಸರಷ್ಟೇ,
ಇಲ್ಲಿ ಪ್ರೇಮವಿಲ್ಲ, ರಾಧೆಯಿಲ್ಲ, ರುಕ್ಮಿಣಿಯಿಲ್ಲ
ಹುಡುಕಿದರೆ ಕೃಷ್ಣನೂ ಇಲ್ಲ…
ಬೆಣ್ಣೆ ಕದ್ದ ತಪ್ಪಿಗೆ ಘೋರ ಅಪಮಾನ
ಛೇ!! ಸಾಧುವಲ್ಲ..
ತುಂಟ ಮಾಧವನಿಗೆ ಗಾಂಭೀರ್ಯ ಸಲ್ಲ
ಭಕ್ತಿ ವ್ಯಾಪಾರದ ಹಸಿವಿಗೆ
ಕೃಷ್ಣ ಬಿಕರಿಯಾದ, ಅವನೊಟ್ಟಿಗೆ ರಾಧೆಯೂ
- ಅನಾಸ್ಕ

No comments:
Post a Comment