Sunday, 8 April 2018

ಹುಲಿಮಾರ


             "ದ್ಯಾವನಾಯ್ಕನ್ನ ಹುಲೀ ಹಿಡೀತಂತೆ, ನಿನ್ನೆ ರಾತ್ರಿ ಶಿಕಾರಿಗ್ ಹೋದೋನು ಬೆಳ್ಗಾದ್ರೂ ಬರ್ದೇ ಇರೋದನ್ ನೋಡಿ ಅವ್ನ್ ಮಗ ಮಾರ ಹುಡ್ಕಂಡ್ ಹೋದಾಗ ಆ ಹುಲಿಯಮ್ಮನ್ ದೇವಸ್ಥಾನದ್ ಎದ್ರಿರೋ ಹೆಬ್ಬಲಸಿನ ಮರದ್ ಕೆಳ್ಗೆ ಬಿದ್ದಿದ್ನಂತೆ, ಮಗ ಹುಟ್ಟಿದಾಗ ಹರಕೆ ತೀರ್ಸೋಕ್ ಹೋದೋನು, ಆಮೇಲ್ ಒಂದ್ ಕೋಳಿ ಬಲಿ ಕೂಡ ಕೊಟ್ಟಿಲ್ಲ, ದೇವ್ರ್ ಸುಮ್ನೆ ಬಿಡ್ತದಾ? ಅವ್ನನ್ನೇ ಬಲಿ ತಗಂಡಿದೆ ನೋಡಿ" ಏದುಸಿರು ಬಿಡುತ್ತಾ ಯಜಮಾನ ಸೀನಯ್ಯಂಗೆ ವರದಿ ಒಪ್ಪಿಸುತ್ತಿದ್ದ ಶಂಕ್ರ. ದ್ಯಾವನಾಯ್ಕ ಸೀನಯ್ಯನ ಮನೆಮಗನಂತೆ ಇದ್ದವನು, ಸುಮಾರು ಐವತ್ತರ ಆಸುಪಾಸಿನವನು. ಸಣ್ಣ ಹುಡುಗನಿರಬೇಕಾದರೆ ಮಂಗನ ಕಾಯಿಲೆ ಬಂದು ಅವನ ಅಪ್ಪ, ಅಮ್ಮ ಸತ್ತ ಲಾಗಾಯ್ತು ಇವನನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸುವ ತನಕವೂ ಮನೆಯಲ್ಲೇ ಇಟ್ಟುಕೊಂಡಿದ್ದರು ಸೀನಯ್ಯ. ಅವನದ್ದೂ ಒಂದು ಸಂಸಾರವೆಂದು ಶುರುವಾದ ಮೇಲೆ ತಮ್ಮ ಮನೆ ಬಳಿಯೇ ಒಂದು ಜಾಗ ಗೊತ್ತು ಮಾಡಿ ಚಿಕ್ಕ ಸೂರನ್ನೂ ಕಟ್ಟಿಕೊಟ್ಟಿದ್ದರು. ಹೀಗೆ ಮನೆ ಮಗನಂತೆ ಬೆಳೆದ ದ್ಯಾವನಾಯ್ಕ ಸತ್ತನೆಂದಾಗ ಸೀನಯ್ಯನಿಗೆ ಕಣ್ಣು ಕತ್ತಲೆಗಟ್ಟಿದಂತಾಗಿತ್ತು. ಅಮ್ಮೋರೇ.. ಸೀನಯ್ಯಂಗ್ ತಲೆ ಸುತ್ ಬಂದಿದೆ ನೀರ್ ತಗಂಬನ್ನಿ ಬೇಗ ಎಂದು ಶಂಕ್ರ ಕೂಗಿದ ತಕ್ಷಣ ಒಳಗಿನಿಂದ ಓಡಿಬಂದ ಮೂಕಮ್ಮ ಗಂಡನಿಗೆ ನೀರು ಕುಡಿಸಿ, ಎದೆಯುಜ್ಜುತ್ತಾ ಶಿವ್ನೇ ಏನಾಯ್ತಪ್ಪಾ ಎಂದು ಗಲಿಬಿಲಿಗೊಳ್ಳಲು, ಶಂಕ್ರ ಸಾವಧಾನವಾಗಿ ನಡೆದಿದ್ದನ್ನೆಲ್ಲಾ ವಿವರಿಸಿದ್ದ. ವಿಷಯ ಕೇಳಿ ದಿಗ್ಭ್ರಾಂತಳಾದ ಮೂಕಮ್ಮ "ದ್ಯಾವ ಹೋದ್ನಾ.." ಎಂಬ ಉದ್ಘಾರ ತೆಗೆದು, ನಿಧಾನಕ್ಕೆ ಕಣ್ಬಿಡುತ್ತಿದ್ದ ಸೀನಯ್ಯನೆಡೆಗೆ ದೈನ್ಯತೆಯಿಂದ ನೋಡುತ್ತಿದ್ದರು.

      "ನಮ್ ವಂಶದ ಹುಲಿ ಇವ್ನು, ದೇವ್ರ್ ಕೊಟ್ಟ ಹುಲಿ, ಇವ್ನಿಗ್ ಹುಲಿಮಾರ ಅಂತಾನೇ ಹೆಸ್ರಿಡ್ತೀನಿ.. ಹುಲಿಮಾರ.. ಹುಲಿಮಾರ.. ಹುಲಿಮಾರ.." ಮಗುವಿನ ಕಿವಿಯಲ್ಲಿ ಮೂರುಬಾರಿ ಹೆಸರು ಕೂಗಿದ ದ್ಯಾವನಾಯ್ಕನ ಮುಖ ಹೊಳೆಯುತ್ತಿತ್ತು, ಹೆಂಡತಿ ನಾಗಿ ಮಾತ್ರ "ಹುಲಿಮಾರ ಅಂತೆ ಹುಲಿಮಾರ ಅದೇನ್ ಹೆಸ್ರೋ? ಮಗೂಗೆ ಒಂದ್ ಒಳ್ಳೇ ಹೆಸ್ರಿಡ್ಬಾರ್ದಾ" ಎಂದು ಸಿಡುಕುತ್ತಿದ್ದರೆ, ಅದ್ಯಾವುದರ ಪರಿವೆಯೇ ಇಲ್ಲದ ದ್ಯಾವನಾಯ್ಕ "ಅಲೆಲೆಲೆ.. ಹುಲಿಮಾರ.. ಬಂಗಾರ.. ನನ್ನೂರ ಸರದಾರ.." ಅಂತ ಮಗುವನ್ನು ಎತ್ತಿಕೊಂಡು ಹಾಡುತ್ತಿದ್ದ. ಅವನ ಖುಷಿಯನ್ನು ನೋಡಿದ ಸೀನಯ್ಯ ಮತ್ತು ಮೂಕಮ್ಮ ಬಳಿ ಬಂದು ಮಗುವಿನ ಕೈಯಲ್ಲಿ ನೂರು ರುಪಾಯಿ ಇಟ್ಟು "ಊರಿಗ್ ಒಳ್ಳೇ ಹೆಸ್ರು ತಗೊಂಡ್ ಬಾ, ಹುಲಿಯಂತೆ ಧೈರ್ಯಶಾಲಿಯಾಗು" ಎಂದು ಮಗುವಿನ ತಲೆ ನೇವರಿಸಿ.. ನಾಗಿಯನ್ನು ಕರೆದು "ಹೆಸರು ಯಾವ್ದಾದ್ರೇನಂತೆ ಮಗುವಿಗೆ ಸಂಸ್ಕಾರ ಮುಖ್ಯ, ಒಳ್ಳೇ ರೀತಿಲಿ ಬೆಳ್ಸು ಮಗನ್ನ" ಅಂತ ಹೇಳಿ ಹಾರೈಸಿ ಹೋಗಿದ್ದರು.
   
         ಮದುವೆಯಾಗಿ ಹನ್ನೆರಡು ವರ್ಷಗಳಾದರೂ ದ್ಯಾವನಾಯ್ಕನ ಮನೆಯಲ್ಲಿ ಕೂಸು ಅಳುವ ಸದ್ದು ಕೇಳಿರದ ಕಾರಣ ಬುಡುಬುಡುಕೆಯವರಿಂದ ಹಿಡಿದು ಮಣಿಪಾಲ ಆಸ್ಪತ್ರೆಯ ಮೆಟ್ಟಿಲನ್ನು ಹತ್ತಿಳಿಯುವ ತನಕ ಎಷ್ಟೇ ದುಡ್ಡು ಸುರಿದರೂ ಪರಿಹಾರ ಸಿಗದೆ, ಊರವರೆಲ್ಲಾ ನಾಗಿ ಬಂಜೆಯಂತೆ ಎಂದು ಮಾತನಾಡಿಕೊಳ್ಳಲು ಶುರುಮಾಡಿದಾಗ ದ್ಯಾವನಾಯ್ಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇವನ ಅವಸ್ಥೆಯನ್ನು ನೋಡಲಾಗದ ಸೀನಯ್ಯ ಅವನನ್ನು ತಾವು ನಂಬಿದ ಘಟ್ಟದ ಕೆಳಗಿನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಕೇಳಿ ಮಾಡಿಸುವಷ್ಟರಲ್ಲಿ ದ್ಯಾವನಾಯ್ಕನ ತಂದೆ ತೀರಿದ ನಂತರ ಅವರ ಕುಲದೇವರಿಗೆ ಈತ ಸರಿಯಾಗಿ ನಡೆದುಕೊಳ್ಳುತ್ತಿಲ್ಲವೆಂದೂ, ಅದರ ಸಿಟ್ಟು ಕಳೆಯುವ ತನಕ ಸಂತಾನ ಭಾಗ್ಯ ಇಲ್ಲವೆಂದೂ ಹೇಳಿ ಕಳುಹಿಸಿದ್ದರು. ಊರಿಗೆ ಬಂದವನೇ ನಡೆದದ್ದನ್ನೆಲ್ಲಾ ನಾಗಿಗೆ ತಿಳಿಸಿ "ಇನ್ಯಾರೂ ನಿನ್ನ ಬಂಜೆ ಅಂತ ಕರ್ಯಂಗಿಲ್ಲ ನೋಡು" ಎಂದು ಹಣೆಗೆ ಮುತ್ತಿಟ್ಟು, ಶಾಸ್ತ್ರಿಗಳ ಅಣತಿಯಂತೆ ಹರಕೆ ತೀರಿಸಲು, ಕಾಕತಾಳೀಯವೆಂಬಂತೆ ಅದಾಗಿ ಎಂಟನೇ ಹುಣ್ಣಿಮೆಗೆ ಮುದ್ದಾದ ಗಂಡು ಮಗು ಜನಿಸಿತ್ತು. ಕುಲದೇವತೆ ಹುಲಿಯಮ್ಮನಿಗೆ ಅಡ್ಡಡ್ಡ ಬಿದ್ದು ನಮಸ್ಕರಿಸಿದ ಮಾರ, ದೇವರ ಸನ್ನಿಧಿಯಲ್ಲೇ ನಾಮಕಾರಣ ಶಾಸ್ತ್ರ ನಡೆಸಲು ನಿರ್ಧರಿಸಿ ಮಗುವಿಗೆ ಹುಲಿಮಾರ ಎಂದು ಹೆಸರಿಟ್ಟಿದ್ದ.
     
        ಅಂಬೆಗಾಲಿಡಲು ಶುರುಮಾಡಿದ ಮಗು ಹುಲಿಮಾರ ಎಂದು ರಾಗವಾಗಿ ಕರೆದೊಡನೆ ಕಿಲಕಿಲನೆ ನಗುತ್ತಿದ್ದರೆ ದ್ಯಾವನಿಗೆ ಪ್ರಪಂಚವನ್ನೇ ಗೆದ್ದಷ್ಟು ಖುಷಿ, ನಾಗಿಗೆ ಮಾತ್ರ ಸಂಕಟ. ಹುಲಿಯಮ್ಮನ ಆಶೀರ್ವಾದಿಂದ ಮಗು ಹುಟ್ಟಿತೆಂದು ದ್ಯಾವ ನಂಬಿದ್ದರೂ, ಆ ಜೀವವನ್ನು ಹೆತ್ತ ನಾಗಿಯ ನಂಬಿಕೆ ಬೇರೆಯೇ ಆಗಿತ್ತು. ಸೀನಯ್ಯ ಮತ್ತು ದ್ಯಾವ ಘಟ್ಟದ ಕೆಳಗೆ ಹೋದ ರಾತ್ರಿಯಂದು ದ್ಯಾವನನ್ನು ಹುಡುಕಿಕೊಂಡು ಬಂದಿದ್ದ ಶಂಕ್ರನ ಬಳಿ ನಾಗಿ ತನ್ನ ಸಂಕಟವನ್ನೆಲ್ಲಾ ಹೇಳಿಕೊಂಡು ಅತ್ತಿದ್ದಳು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡ ಶಂಕ್ರ ನಾಗಿಯ ಸಮ್ಮತಿಯೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದ. "ಬಂಜೆ ನೀನಲ್ಲ ಕಣೇ ನಾಗಿ, ನಿನ್ನ ಗಂಡ.. ಗಂಡು ಮಗು ಹುಟ್ಟಿದ್ರೆ ನನ್ ಹೆಸ್ರನ್ನೇ ಇಡು ಆಯ್ತಾ" ಎಂಬ ಶಂಕ್ರನ ಮಾತು ಕಿವಿಯಲ್ಲಿ ಪ್ರತಿಧ್ವನಿಸುತ್ತಿರುವಾಗ, ಮಗು ದೇವರು ಕೊಟ್ಟ ಫಲವೆಂದು ನಂಬುವುದಾದರೂ ಹೇಗೆ? ಅದೇ ಕಾರಣಕ್ಕೆ ಮಗನಿಗೆ ಹುಲಿಮಾರ ಎಂದು ಹೆಸರಿಟ್ಟಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದಳು.
ಮತ್ತೆ ಮತ್ತೆ ದ್ಯಾವ ಹುಲಿಮಾರ ಎಂದು ರಾಗ ಎಳೆಯುತ್ತಿರಲು, "ಅಪ್ಪಿಮರೀ.. ಬಾರಪ್ಪಿ, ಹುಲಿಮಾರ ಇಶ್ಶೀ.." ಎಂದು ಮಗುವನ್ನೆತ್ತಿಕೊಂಡು ಒಳ ನಡೆಯುತ್ತಿದ್ದರೆ, ಇವನು "ಅದ್ಯಾಕ್ ಹಂಗಾಡ್ತೀಯಾ? ಹುಲಿಯಮ್ಮ ಕಣ್ ಬಿಡ್ದೇ ಇದ್ರೆ ಊರವ್ರ್ ಬಾಯಲ್ಲಿ ಬಂಜೆ ಅಂತ ಕರ್ಸ್ಕೊಂಡೇ ಸಾಯ್ಬೇಕಿತ್ತು, ಹುಲಿಮಾರ ಇಶ್ಶೀ ಅಂತೆ, ತಲೆ ಕೆಟ್ಟವ್ಳೇ" ಎಂದು ನೆಲಕ್ಕುಗಿದು ಹೊರ ನಡೆಯುತ್ತಿದ್ದ. ದ್ಯಾವ ಆಚೆ ಹೋದೊಡನೆ "ಹುಲಿಯಮ್ಮ ಕಣ್ ಬಿಟ್ಟಿದ್ದಂತೆ..." ಎಂದು ನಕ್ಕು  ಶಂಕ್ರಾ.. ನನ್ ಕಂದಾ ಎಂದು ಕಿವಿಯಲ್ಲಿ ಉಸುರಿ ಮಗುವನ್ನು ಎದೆಗವುಚಿಕೊಂಡುಬಿಡುತ್ತಿದ್ದಳು.


     
         ದ್ಯಾವನಿಗೆ ಶಿಕಾರಿ ಚಟ, ಸಂಜೆಯಾಗುತ್ತಿದ್ದಂತೆ ತಲೆಗೆ ಬ್ಯಾಟರಿ ಸಿಕ್ಕಿಸಿಕೊಂಡು ಅಪ್ಪನಿಂದ ಬಳುವಳಿಯಾಗಿ ಬಂದಿದ್ದ ಕಳ್ಳಕೋವಿ ಹಿಡಿದು ಕಾಡಿಗೆ ನುಗ್ಗುತ್ತಿದ್ದ. ಮಲೆನಾಡಿನ ದಟ್ಟಡವಿಯಾದ್ದರಿಂದ ಪ್ರಾಣಿಗಳಿಗೇನು ಕೊರತೆ ಇರಲಿಲ್ಲ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಲ್ಲುತ್ತಿದ್ದ ಕಾನುಕುರಿ, ಹಂದಿಗಳನ್ನು ಲೆಕ್ಕವಿಲ್ಲದಷ್ಟು ಹೊಡೆದುರುಳಿಸಿದ್ದ. ಕೆಂಜಳಿಲು, ಬರ್ಕ, ಮೊಲ ಹೀಗೆ ಚಿಕ್ಕಪುಟ್ಟ ಪ್ರಾಣಿಗಳನ್ನೂ ಬಿಡುತ್ತಿರಲಿಲ್ಲ. ಅದೊಂದು ದಿನ ಕಾಡಿಗೆ ನುಗ್ಗಿದಾಗ ಅನಿರೀಕ್ಷಿತವಾಗಿ ಕಾಡುಕೋಣದ ಗುಂಪೊಂದು ಇವನಿಗೆ ಎದುರಾಗಿತ್ತು, ಬೇಕಾದಷ್ಟು ಸಲ ಕಾಡುಕೋಣಗಳನ್ನು ನೋಡಿದ್ದನಾದರೂ ಅಷ್ಟು ಸಮೀಪದಿಂದ ಯಾವತ್ತೂ ಮುಖಾಮುಖಿಯಾಗಿರಲಿಲ್ಲ. ದ್ಯಾವ ನಿಧಾನವಾಗಿ ಒಂದೆರೆಡು ಹೆಜ್ಜೆ ಹಿಂದಿಟ್ಟಿದ್ದನಷ್ಟೇ ಬ್ಯಾಟರಿಯ ಬೆಳಕು ಪುಟ್ಟ ಕರುವೊಂದರ ಮೇಲೆ ಬಿದ್ದು ಈತನ ಜಂಘಾಬಲವೇ ನಡುಗಿಹೋಯ್ತು. ಕರುವಿದ್ದಾಗ ರಕ್ಷಣೆಗೋಸ್ಕರ ಎಂತಹ ರಾಕ್ಷಸರೂಪವನ್ನೂ ತಾಳುವ ಪ್ರಾಣಿಗಳವು. ಈತ ಹಿಂದೆ ಮುಂದೆ ನೋಡುವಷ್ಟರಲ್ಲಿ ಕೋಣವೊಂದು ನುಗ್ಗಲು, ಆತ್ಮರಕ್ಷಣೆಗಾಗಿ ಬಂದೂಕಿನ ಟ್ರಿಗರ್ ಎಳೆದ. ಸಿಡಿದ ಗುಂಡು ಭಯಂಕರ ಶಬ್ಧದೊಂದಿಗೆ ಕೋಣದ ಬಲ ತೊಡೆಯ ಸೀಳಿ, ಗುಂಪು ದಿಕ್ಕಾಪಾಲಾಗಿತ್ತು. ಇತ್ತ ಗುಂಡು ಹೊಕ್ಕಿದ್ದರಿಂದ ಕೋಣವೂ ಅಡ್ಡಾದಿಡ್ಡಿ ಓಡಿ, ದ್ಯಾವ ಹಿಂತಿರುಗಿ ನೋಡದೆ ಮನೆ ತಲುಪಿದ್ದ. ಒಮ್ಮೆ ಪೆಟ್ಟಾದರೆ ಅಂತಹ ಕೋಣಗಳು ವ್ಯಾಘ್ರವಾಗುತ್ತವೆ, ಸುಖಾಸುಮ್ಮನೆ ಅಟ್ಟಾಡಿಸುತ್ತವೆ ಇಲ್ಲೂ ಹಾಗೇ ಆಯಿತು. ಅವತ್ತೊಂದು ದಿನ ಕಾಡು ಸುತ್ತಲು ಬಂದ ಫಾರೆಸ್ಟ್ ಡಿಪಾರ್ಟ್ಮೆಂಟಿನ ವಾಚರ್ ತಿಮ್ಮ ಅದೇ ಕಾಡುಕೋಣದ ಕಣ್ಣಿಗೆ ಬಿದ್ದಿದ್ದ, ಕಾಡಿನ ಮರ ಮಟ್ಟುಗಳ ಸಂದಿಯಲ್ಲೆಲ್ಲಾ ಓಡಿ ಮೈ ತರಚಿಸಿಕೊಂಡು ಕೊನೆಗೆ ಯಾವುದೋ ಮರ ಹತ್ತಿದರೂ ಅರ್ಧ ಮುಕ್ಕಾಲು ಗಂಟೆ ಕಾಲು ಕೆದರುತ್ತಾ ಅಲ್ಲೇ ನಿಂತಿದ್ದ ಕಾಡುಕೋಣ ಅವನ ಬೆವರಿಳಿಸಿತ್ತು. ಅದರ ತೊಡೆಯಲ್ಲಾದ ವ್ರಣ ತಿಮ್ಮನ ಕಣ್ಣಿಗೆ ಬಿದ್ದು ಇದು ದ್ಯಾವನ ಕೆಲಸವೇ ಸೈ ಎಂದರಿತು ಸೀದಾ ದ್ಯಾವನಾಯ್ಕನ ಮನೆಗೆ ಬಂದು ಬಾಯಿಗೆ ಬಂದಂತೆ ಬೈದು, ಡಿಪಾರ್ಟ್‍ಮೆಂಟಿಗೆ ಹೇಳಿ ಜೈಲಿಗೆ ಕಳುಹಿಸುತ್ತೇನೆಂದು ಬೆದರಿಸಿ ಐನೂರು ರುಪಾಯಿ ಕಿತ್ತಿದ್ದ. ಇದಾಗಿ ಸುಮಾರು ದಿನಗಳ ತನಕ ದ್ಯಾವ ಕಾಡಿಗೆ ನುಗ್ಗಿರಲಿಲ್ಲ.
       
       ಕೋಗಳ್ಳಿಯ ಕಾಡಿನಲ್ಲಿ ಆಗಾಗ ಹುಲಿ ಕೂಗುವ ಸದ್ದು ಕೇಳುವುದು ಮಾಮೂಲಿಯಾಗಿತ್ತು, ರಾತ್ರಿ ಹೊತ್ತು ಊರ ಗಡಿಯಲ್ಲೇ ಕೂಗು ಕೇಳುತ್ತಿದ್ದರೂ ಯಾರಿಗೂ ಉಪಟಳ ಮಾಡುತ್ತಿರಲಿಲ್ಲವಾದ್ದರಿಂದ ಅದು ಹುಲಿಯಮ್ಮನ ಅವತಾರದಲ್ಲಿದ್ದ ದೇವರ ಹುಲಿಯೆಂದು ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಿರಬೇಕಾದರೆ ಇದ್ದಕ್ಕಿದ್ದಂತೆ ಊರ ದನಗಳೆಲ್ಲಾ ಒಂದೊಂದೇ ನಾಪತ್ತೆಯಾಗಲು ಶುರುವಾಗಿ ಕೊನೆಗೆ ಕೊಟ್ಟಿಗೆಗೆ ನುಗ್ಗಿ ಕರುಗಳನ್ನು ಹೊರುವಷ್ಟರ ಮಟ್ಟಿಗೆ ಹುಲಿಕಾಟ ಶುರುವಾಯ್ತು. ಇದರ ನಡುವೆ ಎರಡು ದಿಕ್ಕಿನಲ್ಲಿ ಹುಲಿ ಕೂಗು ಕೇಳುತ್ತಿದ್ದರಿಂದ ದನಗಳನ್ನು ಹೊರುತ್ತಿರುವುದು ದೇವರ ಹುಲಿ ಕೆಲಸವಲ್ಲವೆಂದೂ ಇದು ಬೇರೆಡೆಯಿಂದ ಬಂದಿರುವ ರಕ್ಕಸನೆಂದೂ ಊರ ಜನರು ತೀರ್ಮಾನಕ್ಕೆ ಬಂದು, ದ್ಯಾವನಾಯ್ಕನ ಬಳಿ ಹೇಗಾದರೂ ಮಾಡಿ ಈ ಉಪಟಳವನ್ನು ನಿಲ್ಲಿಸಬೇಕೆಂದು ಕೋರಿದರು. ಈಗಾಗಲೇ ವಾಚರ್ ತಿಮ್ಮ ಎಚ್ಚರಿಕೆ ಕೊಟ್ಟಿದ್ದರಿಂದ ಹ್ಞೂಂಗುಟ್ಟಲು ಹಿಂಜರಿದನಾದರೂ ಊರವರ ಮಾತಿಗೆ ಇಲ್ಲವೆನ್ನಲಾಗದೆ ಮುಲಾಜಿಗೆ ಒಪ್ಪಿಕೊಂಡ. ಅದಾಗಿ ಮಾರನೇ ದಿನಕ್ಕೇ ಹುಲಿ ಕೂಗುವ ಸದ್ದು ಕೇಳಿ ಮಗನೊಡನೆ ಕಾಡು ಹೊಕ್ಕು ಹುಡುಕಾಡಿ, ಹತ್ತಿರದಲ್ಲೇ ಕೂಗು ಕೇಳಿದಾಗ ಎದೆಯಲ್ಲಿ ನಡುಕ ಹುಟ್ಟಿ ಮಗ ಜೊತೆಗಿದ್ದಾನೆಂಬ ಧೈರ್ಯದಲ್ಲೇ ಬ್ಯಾಟರಿ ಹಾಯಿಸಿದ್ದ, ಬ್ಯಾಟರಿ ಬೆಳಕಿಗೆ ಕಣ್ಣುಕೊಟ್ಟು ನಿಂತ ಹುಲಿಯನ್ನು ಒಮ್ಮೆ ದಿಟ್ಟಿಸಲು, ಅಷ್ಟೇನು ಬಲಾಢ್ಯವಲ್ಲದ ಮುದಿ ಹುಲಿಯಾಗಿದ್ದು ಇದು ದೇವರ ಹುಲಿಯಲ್ಲವೆಂಬುದು ಖಚಿತವಾದ ತಕ್ಷಣ ಬಂದೂಕಿನ ಟ್ರಿಗರ್ ಎಳೆದಿದ್ದ, ಗುರಿ ತಪ್ಪಲಿಲ್ಲ.. ಸೀದಾ ಹಣೆಗೆ ಹೊಕ್ಕ ಗುಂಡಿನ ರಭಸಕ್ಕೆ ವ್ಯಾಘ್ರದ ಪ್ರಾಣಪಕ್ಷಿ ಹಾರಿಹೋಗಿತ್ತು. ಹತ್ತಿರ ಹೋಗಿ ಅದರ ಹಲ್ಲು, ಉಗುರುಗಳನ್ನು ಕಿತ್ತು ಮಗನೊಡನೆ ಸೇರಿ ಒಂದು ಗುಂಡಿ ತೋಡಿ ಮಣ್ಣುಮಾಡಿಯೇ ಬಿಟ್ಟ. ಮಾರನೇ ದಿನ ಊರವರೆಲ್ಲಾ "ರಾತ್ರಿ ಹುಲಿ ಕೂಗಿದ ಸ್ವಲ್ಪ ಹೊತ್ತಿಗೇ ಗುಂಡಿನ ಶಬ್ಧ ಕೇಳಿತಲ್ಲಾ.. ಹುಲಿ ಸಿಕ್ತಾ" ಎಂದರೂ, ಇಲ್ಲಪ್ಪಾ ಕಾನುಕುರಿ ಹೊಡ್ದಿದ್ದು ಅಂತ ಸುಳ್ಳೇ ಹೇಳಿ ವಿಷಯವನ್ನು ಮುಚ್ಚಿಟ್ಟ. ಇದಾಗಿ ಮೂರೇ ತಿಂಗಳಲ್ಲಿ ದ್ಯಾವ ಸತ್ತಿದ್ದು. ಅವತ್ತು ಮಗ ಬರುತ್ತೀನೆಂದರೂ ಬೇಡವೆಂದು ಹೇಳಿ ಒಬ್ಬನೇ ಶಿಕಾರಿಗೆ ಹೋಗಿದ್ದ, ಬೆಳಗ್ಗೆಯಾದರೂ ಅಪ್ಪ ಬರದಿದ್ದನ್ನು ನೋಡಿ ಹೊರಟ ಮಾರನಿಗೆ ಹುಲಿಯಮ್ಮನ ದೇವಸ್ಥಾನದ ಎದುರಿರುವ ಹೆಬ್ಬಲಿಸಿನ ಮರದ ಕೆಳಗೆ ದ್ಯಾವನ ಹರಿದ ದೇಹ ಕಣ್ಣಿಗೆ ಬಿದ್ದಿತ್ತು. ಅಪ್ಪನ ಅವಸ್ಥೆಯನ್ನು ನೋಡಿ ಕಂಗಾಲಾದ ಮಾರ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿ ಜೋರಾಗಿ ಕೂಗಿಕೊಂಡಾಗ ಸದ್ದು ಕೇಳಿದ ಊರವರು ಹೋಗಿ ನೋಡಲು ಮಾರ ಕೈಯಲ್ಲಿ ಬಂದೂಕು ಹಿಡಿದು ಹುಲಿಯಮ್ಮನ ಮುಂದೆ ವಿಕಾರವಾಗಿ ಕಿರುಚುತ್ತಾ ಕುಳಿತಿದ್ದ. ಇತ್ತ ಸುಧಾರಿಸಿಕೊಂಡ ಸೀನಯ್ಯನೂ ಸೀದಾ ಹುಲಿಯಮ್ಮನ ಗುಡಿ ಕಡೆಗೆ ಓಡಿದ್ದರು, ಹೋದವರೇ ಮಾರನನ್ನು ಸಂತೈಸಿ ಊರವರ ಬಳಿ ಶವ ಸಂಸ್ಕಾರಕ್ಕೆ ಬೇಕಾದ ಸಿದ್ಧತೆ ಮಾಡಲು ಹೇಳಿ, ಹೆಣವನ್ನು ಮನೆಗೆ ಸಾಗಿಸಿದ್ದರು. ಮನೆ ಮುಂದೆ ಊರ ಹೆಂಗಸರೆಲ್ಲಾ ಸೇರಿಯಾಗಿತ್ತು, ನಾಗಿ ಹಣೆ ಚಚ್ಚಿಕೊಂಡು ಅಳುತ್ತಾ ಅಂಗಳದಲ್ಲಿ ಹೊರಳಾಡುತ್ತಿದ್ದಳು, ಬಳೆ ಒಡೆದು ಕೈಯೆಲ್ಲಾ ರಕ್ತಮಯವಾಗಿತ್ತು. ಸೀನಯ್ಯ ಮುಂದೆ ನಿಂತು ಮಾರನಿಂದ ಶವ ಸಂಸ್ಕಾರ ಮಾಡಿಸಿ, ಶಾಸ್ತ್ರದ ಪ್ರಕಾರ ನಂತರದ ಕ್ರಿಯೆಗಳನ್ನೂ ಪೂರೈಸಿ "ಮಾರ.. ಇಷ್ಟ್ ದಿನ ನಿಮ್ಮಪ್ಪ ಬದುಕಿದಂತೆ ನೀನೂ ನ್ಯಾಯವಾಗಿ ಬದುಕಬೇಕು, ಏನೇ ತೊಂದ್ರೆ ಆದ್ರೂ ನಾನಿದ್ದೀನಿ.. ಹಿಂಜರಿಯದೇ ನಮ್ಮನೆಗೆ ಬಾ" ಎಂದು ಧೈರ್ಯ ತುಂಬಿದ್ದರು.
       
         ದ್ಯಾವ ಇಲ್ಲದ ಸಮಯದಲ್ಲಿ ಮನೆಗೆ ಬರುತ್ತಿದ್ದ ಶಂಕ್ರ ಒಂದೆರಡು ಬಾರಿ ಮಾರನ ಕಣ್ಣಿಗೆ ಬಿದ್ದಿದ್ದ, ಅದರ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಂಡಿರದಿದ್ದ ಮಾರನಿಗೆ ಅಪ್ಪ ಸತ್ತ ಮೇಲೆ ಶಂಕ್ರ ಪದೇ ಪದೇ ಬರುತ್ತಿದುದನ್ನು ನೋಡಿ ಅನುಮಾನ ಶುರುವಾಗಿತ್ತು. ದ್ಯಾವ ಸತ್ತ ಇಪ್ಪತ್ನಾಲ್ಕನೇ ದಿನಕ್ಕೆ ನಾಗಿ ಮತ್ತು ಮಾರನ ನಡುವೆ ದೊಡ್ಡ ವಾಗ್ವಾದವೇ ನಡೆದು ಮಾತಿಗೆ ಮಾತು ಬೆಳೆಯುತ್ತಿರಲು ಗಲಾಟೆಯ ಸದ್ದು ಕೇಳಿದ ಸೀನಯ್ಯ ಸೀದಾ ಅವರ ಮನೆ ಕಡೆ ಓಡಿದ್ದರು. ಕೈಯಲ್ಲಿ ಬಂದೂಕು ಹಿಡಿದಿದ್ದ ಮಾರ ಅಪ್ಪನನ್ನು ಕೊಂದ ದೇವರ ಹುಲಿಯನ್ನು ಸುಟ್ಟು ಹಾಕುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ನಾಗಿ ಮಾತ್ರ "ಹಂಗ್ ಮಾಡ್ಬೇಡ ಮಾರಾಯ, ನಂಗ್ ಮಕ್ಳಿಲ್ಲ ಅಂದಾಗ ನಿನ್ನನ್ನ ಕೊಟ್ಟ ದೇವ್ರದು, ಹುಲಿಯಮ್ಮನ ಹುಲಿ ಹಂಗೆಲ್ಲಾ ಯಾರನ್ನೂ ಹಿಡ್ಯಲ್ಲ, ಬೇರೆ ಯಾವ್ದೋ ಹುಲಿ ಇವ್ರನ್ ಕೊಂದಿರ್ಬೇಕು.. ನಿಂಗ್ ದಮ್ಮಯ್ಯ ಅಂತೀನಿ ದೇವ್ರ್ ಹುಲಿ ತಂಟೆಗೆ ಹೋಗ್ಬೇಡ" ಎಂದು ಗೋಗರೆಯುತ್ತಿರಲು, ಆಕೆಯ ನಾಟಕೀಯ ವರ್ತನೆ ಕಂಡ ಮಾರ, "ಹಾಗಾದ್ರೆ ಬೇರೆ ಹುಲಿಯನ್ನೇ ಕೊಂದು ಬರ್ತೀನಿ ಬಿಡು" ಎಂದು ವ್ಯಂಗ್ಯವಾಗಿ ನಕ್ಕಿದ್ದ. ಅಲ್ಲಿಗೆ ಹೋದ ಸೀನಯ್ಯ ಕೂಡ ದೇವ್ರ್ ಹುಲಿ ಯಾರಿಗೂ ತೊಂದ್ರೆ ಮಾಡಲ್ಲ ದುಡುಕಿ ಅನಾಹುತ ಮಾಡ್ಬೇಡ ಎನ್ನಲು, "ಅಯ್ಯಾ.. ನನ್ ಅಪ್ಪನ್ನ ಕೊಂದ ಪೀಡೆ ಸಾಯ್ಲೇಬೇಕು" ಎಂದು ಬಂದೂಕು ಹಿಡಿದು ಹೊರಟೇ ಬಿಟ್ಟ. ಗಾಬರಿಯಾದ ಸೀನಯ್ಯ "ಏನೇ ನಾಗಿ ಇವ್ನ್ ಹುಟ್ಟಿದಾಗ ಹರಕೆ ತೀರಿಸಿದ್ದು ಬಿಟ್ರೆ ಮತ್ತೆ ಆ ಕಡೆ ಪೂಜೆ ಮಾಡೋಕೂ ಹೋಗಿರ್ಲಿಲ್ವಂತೆ ನಿನ್ ಗಂಡ, ಹೌದಾ?" ಎನ್ನಲು. "ಅಯ್ಯಾ.. ಬಿಡ್ತು ಅನ್ನಿ, ಒಂದ್ ವರ್ಷನೂ ತಪ್ಪಿಸ್ದೇ ಹರಕೆ ತೀರ್ಸಿದಾರೆ, ಆದ್ರೂ ಹಿಂಗಾಯ್ತು ನೋಡಿ" ಎನ್ನುವಷ್ಟರಲ್ಲೇ ಬಂದೂಕಿನಿಂದ ಒಂದರ ಹಿಂದೊಂದರಂತೆ ಮೂರು ಗುಂಡುಗಳು ಸಿಡಿದ ಸದ್ದು ಕೇಳಿ, ಸೀನಯ್ಯ ಮತ್ತು ನಾಗಿ ಫಟ್ಟನೆ ಹುಲಿಯಮ್ಮನ ದೇವಸ್ಥಾನದ ಕಡೆಗೆ ಓಡಿದ್ದರು. ಹುಲಿಮಾರ ಸತ್ತ ಹುಲಿಯ ಹೆಣದ ಮೇಲೆ ಕಾಲಿಟ್ಟು ಗಹಗಹಿಸಿ ನಗುತ್ತಿದ್ದ. ಅವನ ರೌದ್ರಾವತಾರವನ್ನು ಕಂಡ ನಾಗಿ ಅಕ್ಷರಶಃ ನಡುಗಿ ಕುಸಿದು ಕೂತಿದ್ದಳು, "ಏನ್ ಕೆಲ್ಸ ಮಾಡ್ಬಿಟ್ಯೋ ಮಾರ.." ಎಂದು ಓಡಿ ಹೋದ ಸೀನಯ್ಯ ರಕ್ತಸಿಕ್ತವಾಗಿ ಬಿದ್ದಿದ್ದ ಹುಲಿಗೆ ಕೈ ಮುಗಿದು ಅದನ್ನು ದಿಟ್ಟಿಸಿ "ಅಬ್ಬಾ!! ಊರ್ ಉಳೀತು, ಸದ್ಯ ಇದು ದೇವರ ಹುಲಿಯಲ್ಲ" ಎಂದು ನಿಟ್ಟುಸಿರಿಟ್ಟಾಗ, "ಹ್ಞೂಂ.. ದೇವರ ಹುಲಿಯಲ್ಲವಾ? ಇಲ್ಲಿರೋ ಹುಲಿಗಳೆಲ್ಲವೂ ದೇವರ ಹುಲಿಗಳೇ, ನಾನು ಕೊಂದಿದ್ದೂ ದೇವರ ಹುಲಿಯನ್ನೇ, ನನ್ನನ್ನು ಹುಟ್ಟಿಸಿದ ದೇವರ ಹುಲಿಯನ್ನೇ" ಎಂದು ವ್ಯಂಗ್ಯವಾಗಿ ನಕ್ಕ ಹುಲಿಮಾರನ ಕಣ್ಣು ದೂರದ ಪೊದೆಯಲ್ಲಿ ಬಿದ್ದಿದ್ದ ಶಂಕ್ರನ ದೇಹವನ್ನೇ ದಿಟ್ಟಿಸುತ್ತಿತ್ತು. ಸೀನಯ್ಯನ ಅನುಮಾನದ ಕಣ್ಣು ನಾಗಿಯನ್ನೂ, ನಾಗಿಯ ಕಣ್ಣು ಮಾರನನ್ನೂ ಅವಕ್ಕಾಗಿ ನೋಡುತ್ತಿದ್ದವು.

- ಸ್ಕಂದ ಆಗುಂಬೆ


ಈ ಕಥೆ ಕನ್ನಡಪ್ರಭ ದಿನಪತ್ರಿಕೆಯ "ಭಾನುಪ್ರಭ" ಪುರವಣಿಯಲ್ಲಿ ಪ್ರಕಟವಾಗಿದೆ.

Thursday, 29 March 2018

ಇವನ ಪ್ರತಾಪಕ್ಕೆ ನಾನು ಹರಕೆ ಕುರಿ



ಬದುಕು ಕಟ್ಟುವ ಕೆಲಸ ಆರಂಭ ಆಗೋದೇ ಪಿಯುಸಿ ಮುಗಿದ ಮೇಲೆ, ಅಲ್ಲಿಯ ತನಕ ನಮ್ಮ ಗುರಿಯ ಬಗ್ಗೆ ಅರಿವಿದ್ದರೂ, ಸಾಗುವ ದಾರಿಯ ಕುರಿತು ಸ್ಪಷ್ಟತೆ ಇರುವುದಿಲ್ಲ. ಆ ಸಮಯದಲ್ಲಿ ನಮ್ಮ ತೊಳಲಾಟಗಳನ್ನ ಆಲಿಸೋಕೆ ಒಂದೊಳ್ಳೇ ಸ್ನೇಹಮಯಿ ಜೀವದ ಅವಶ್ಯಕತೆ ಖಂಡಿತಾ ಇರುತ್ತದೆ. ಅಂತೆಯೇ ನನಗಿರುವ ಕೆಲವೇ ಕೆಲವು ಬೆರಳೆಣಿಕೆಯಷ್ಟು ಬೆಸ್ಟ್ ಫ್ರೆಂಡ್ಸ್ ಎಂಬುವವರಲ್ಲಿ ಇವನೂ ಒಬ್ಬ, ಹೆಸರು ಶಿವಪ್ರಸಾದ. ನನ್ನೆಲ್ಲಾ ಯಡವಟ್ಟುಗಳಿಗೂ ಸಾಕ್ಷ್ಯ ಹೊಂದಿದವ. ನಮ್ಮ ನಡುವೆ ಅರಿಷಡ್ವರ್ಗಗಳಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ತನಕವೂ ಚರ್ಚೆಗಳಾಗುತ್ತವೆ, ವಯಸ್ಸು ಒಂದೇ ಆಗಿದ್ದರಿಂದ ಹದಿಹರೆಯದ ರಾಮಾಯಣಗಳ ಕುರಿತು ತುಸು ಜಾಸ್ತಿಯೇ ಮಾತನಾಡುತ್ತೇವೆ. ಬೆಳಿಗ್ಗೆ ಸೂರ್ಯ ಏಳುವುದಕ್ಕೆ ಮೊದಲೇ ನನ್ನನ್ನೆಬ್ಬಿಸಿ ನಿದ್ದೆಗಣ್ಣಿನಲ್ಲೇ ಮೊಂಬತ್ತಿಯ ಮುಂದೆ ಕೂರಿಸಿ ಅವನದೇ ಕಲ್ಪನೆಯನ್ನಿಟ್ಟುಕೊಂಡು ಫೋಟೋ‌ ತೆಗೆಯುವ ಇವನ ಹುಚ್ಚಿಗೆ ನಾನು ಹರಕೆಯ ಕುರಿ. ಇವನು ಪ್ರೇಮಪತ್ರ ಬರೆದಾಗ ಅವರಮ್ಮ ಅನುಮಾನಿಸಿದ್ದರಂತೆ, ಆ ಅನುಮಾನ ನಿವಾರಿಸೋಕೆ ನನ್ನ ಅಷ್ಟೂ ಪ್ರೇಮಪತ್ರಗಳನ್ನ ಅವರ ಮುಂದಿಟ್ಟು ತನ್ನನ್ನು ತಾನು ಬಚಾವ್ ಮಾಡಿಕೊಂಡ ಕಿಡಿಗೇಡಿ. ಅತೀ ಮುಗ್ಧನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳೋ ಇವನೊಳಗಿರುವ ಮಹಾನ್ ಕಿಲಾಡಿಯ ಪರಿಚಯ ನನಗಿರುವುದರಿಂದ ಹೆಚ್ಚಿಗೆ ಹೊಗಳಿ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳೋಕೆ ತಯಾರಿಲ್ಲ. ಆದರೆ ಒಂದಂತೂ ಸತ್ಯ ನನಗರಿವಿಲ್ಲದಂತೇ ನನ್ನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ತರುವಲ್ಲಿ ಇವನದೂ ಕೊಂಚ ಪಾಲಿದೆ.

- ಸ್ಕಂದ ಆಗುಂಬೆ



(ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ)

Monday, 5 March 2018

ದಾರಿ ಯಾವುದಯ್ಯಾ.. ಲೈಫಿನ ದಾರಿ ಯಾವುದಯ್ಯಾ??



           

                   ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ಪ್ರೈಮ್ ಟೈಮ್ ಡಿಬೇಟ್ ನಡೆಸಿಕೊಡ್ಬೇಕು.. ನಮಸ್ಕಾರ ನೀವು ನೋಡ್ತಾ ಇದೀರಾ ಸುವರ್ಣ ನ್ಯೂಸ್ ನಾನು ಸ್ಕಂದ ಆಗುಂಬೆ ಅಂತ ಮಾತು ಶುರು ಮಾಡ್ಲಾ..? ಅಯ್ಯೋ ತುಂಬಾ ಹಳೇ ಸ್ಟೈಲ್ ಆಗೋಗಿರುತ್ತೆ ಅಷ್ಟ್ರಲ್ಲಿ.. ಸೋ‌ ಬೇರೆ ಥರ ಏನಾರ್ ಹುಡ್ಕ್ಬೇಕು. ಊಹ್ಞೂಂ ಬೇಡ.. ಆ ವಿಜಯಲಕ್ಷ್ಮಿ ಶಿಬರೂರು ಮೇಡಂಗೆ ಏನ್ ಧೈರ್ಯ ನೋಡು, ಅವ್ರ್ ಥರಾನೇ ಇನ್ವೆಸ್ಟಿಗೇಟಿವ್ ಜರ್ನಲಿಸಂ ಮಾಡ್ಬೇಕು. ಅದೂ ಬೇಡ ಪೇಪರ್ರೇ ಬೆಟರ್ರು ಸ್ವಲ್ಪ ಆದ್ರೂ ಎಥಿಕ್ಸ್ ಉಳ್ಕೊಂಡಿದೆ ಇಲ್ಲೇ ಇದ್ದು ಒಳ್ಳೇ ಹೆಸ್ರು ಮಾಡಣ. ಏಯ್ ರೆಡಿಯೋ ಟ್ರೈ ಮಾಡ್ಬೋದು.‌. ಆರ್ ಜೆ ಆದ್ರೆ ಹೆಂಗೆ..? ಅಥ್ವಾ ಎಂಟ್ರಟೈನ್ಮೆಂಟ್ ಚಾನೆಲ್ ಸೇರ್ಕೊಂಡ್ಬಿಡ್ಲಾ? ಧಾರಾವಾಹಿಗೆ ಸಂಭಾಷಣೆ ಬರ್ದ್ರೆ ಒಳ್ಳೇ ದುಡ್ ಬರುತ್ತಂತೆ ಅದ್ ಕೂಡ ಮಾಡ್ಬೇಕು..‌ ಜಯಂತ್ ಕಾಯ್ಕಿಣಿ ಥರ ಪದ್ಯ ಬರ್ಯೋದ್ ಕಲೀಬೇಕು.. ಒಳ್ಳೇ ಲೈಫು ಅಂದ್ರೆ ಈ ಲೆಕ್ಚರರ್ಸ್ಗಳದ್ದು ಒಳ್ಳೇ ಸ್ಯಾಲ್ರಿನೂ ಇರುತ್ತೆ, ಟೈಮೂ ಇರುತ್ತೆ.. ಅತ್ತೆ ಮಾವನತ್ರ ಹೋಗಿ ಹೆಣ್ ಕೇಳೋಕೆ ಒಂದ್ ಧೈರ್ಯನೂ ಇರತ್ತೆ.. ಉಸ್ತಾದ್ ಹೊಟೇಲ್ ಫಿಲಂ ನೋಡಿ ಮೆಡುಲಾ ಅಬ್ಲಾಂಗೇಟಾದಲ್ಲಿ ವೇರಿಯೇಷನ್ ಆಗಿದೆ ಒಂದ್ ಹೋಟ್ಲು ಇಟ್ ಬಿಡ್ಲಾ..? ಹೇಗೂ ಆಗುಂಬೆ ಪಕ್ದಲ್ಲೇ ಊರಿದೆ ಒಂದ್ ಹೋಂ ಸ್ಟೇ ಮಾಡಿದ್ರೆ ಹೆಂಗೆ..? ಒಂದ್ ಸ್ಕೂಲ್ ಮಾಡ್ಬೇಕು.. ಟ್ರಾವೆಲ್ ಏಜೆನ್ಸಿ ಮಾಡಿದ್ರೆ ಒಳ್ಳೇದು.. ಅದ್ರಲ್ ಲಾಭ ಬಂದ್ರೆ ವಿಜಯ್ ಸಂಕೇಶ್ವರ್ ಥರ ಒಂದ್ ಪೇಪರ್ರು, ಚಾನೆಲ್ಲು ಶುರು ಮಾಡ್ಬೋದು ನೋಡು.. ಅದೆಲ್ಲಕ್ಕಿಂತ ಮೊದ್ಲು ಒಂದ್ ಡಿಎಸ್ಎಲ್ಆರ್ ತಗೋಬೇಕು, ಒಂದ್ ಬೈಕ್ ತಗೊಂಡ್ ಆರಾಮಾಗ್ ಸುತ್ತಾಡ್ಬೇಕು.. ಫಿಲ್ಮಿಗ್ ಹೋಗೋಕ್ ಜೊತೆಗ್ ಒಂದ್ ಜನ ಇಲ್ಲಾ ಅಂತೀನಿ ಒಂದ್ ಹುಡ್ಗಿನ್ ಪಟಾಯಿಸ್ಕೋಬೇಕು.. ಅಬ್ಬಬ್ಬಬ್ಬಾ ಇದೇನ್ ಲೈಫಾ ತರ್ಕಾರಿ ಮಾರ್ಕೆಟ್ಟಾ?? ಇಷ್ಟೊಂದ್ ಆಪ್ಷನ್ ಇದ್ಯಲ್ಲಾ.. ಏನ್ ಮಾಡೋದು ಗುರೂ….?


ಹದಿನೇಳು - ಹದಿನೆಂಟು - ಹತ್ತೊಂಬತ್ತು - ಇಪ್ಪತ್ತು - ಇಪ್ಪತ್ತೊಂದು
ಭಯಂಕರ ಗೊಂದಲದ ವಯಸ್ಸು!! ನನ್ನ ಗುರಿ ಯಾವುದು ಅಂಥ ಸ್ಪಷ್ಟಪಡಿಸಿಕೊಂಡು ಹೋಗೋ ಟೈಮಲ್ಲೇ ಒಂದಷ್ಟು ಕವಲು ದಾರಿಗಳು ಧಿಡೀರನೆ ಪ್ರತ್ಯಕ್ಷವಾಗ್ತಾವೆ..! ಊಹ್ಞೂಂ ಅದು ನನ್ನ ದಾರಿಯಲ್ಲ ಅಂತ ಪದೇ ಪದೇ ನನಗೆ ನಾನೇ ಹೇಳಿಕೊಂಡು ಮತ್ತೊಂದು ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಮತ್ತಷ್ಟು ದಾರಿ! ರಾತ್ರಿ ಮಲಗಿದಾಗ ಅದರಲ್ಲಿ ಹೋದ್ರೆ ಹೇಗಿರುತ್ತೆ? ಇದ್ರಲ್ಲಿ ಹೋದ್ರೆ ಹೇಗಿರುತ್ತೆ? ಅಂತ ಒಂದಷ್ಟು ಕನಸು ಕಾಣೋಕೆ ಶುರುಮಾಡಿದ್ರೆ ಒಂದೊಳ್ಳೇ ಕನಸಿನ ಲೋಕವೇ ಹುಟ್ಕೊಂಡ್ಬಿಡುತ್ತೆ ನೋಡಿ..!

ನನಗೆ ಹತ್ತನೇ ತರಗತಿಯಿಂದಲೇ ಪತ್ರಿಕೋದ್ಯಮದೆಡೆಗೆ ಸೆಳೆತವಿತ್ತು.. ಬಟ್‌ ಟೆಂಥಲ್ಲಿ ಒಳ್ಳೇ ಮಾರ್ಕ್ಸ್ ಬಂದಿದೆ ನೆಕ್ಸ್ಟ್ ಸೈನ್ಸ್ ತಗೊಂಡ್ರೆ ವೆಟರ್ನರಿಗೆ ಒಳ್ಳೇ ಸ್ಕೋಪಿದೆ ನೋಡು ಅಂತ ಒಬ್ರು ಹೇಳಿದ್ ಮಾತು ಕಿವಿಗ್ ಬಿದ್ದಿದ್ದೇ ತಡ, ಹೇಗೂ ನಂಗೆ ದನ, ಕರು, ನಾಯಿ, ಬೆಕ್ಕು ಅಂದ್ರೆ ಲವ್ವು ಸೋ ಈ ಫೀಲ್ಡಲ್ಲಿ ಸಕ್ಸಸ್ ಆಗ್ಬೋದು ಅಂತ ಪಿಸಿಎಂಬಿ ಅಂತ ಫಾರ್ಮ್ ಫಿಲ್ ಮಾಡೇ ಬಿಟ್ಟೆ.. ಎರಡೇ ತಿಂಗ್ಳಲ್ಲಿ ಜೀವನ ಅಲ್ಲೋಲ - ಕಲ್ಲೋಲ. ಸೈನು, ಕಾಸು, ಟ್ಯಾನು, ತೀಟಾ ಅಂತ ಮ್ಯಾಥ್ಸ್ ಕ್ವಾಟ್ಲೆ ಕೊಡ್ತಿದ್ರೆ, ಕೆಮಿಕಲ್ಲು, ಗ್ರಾವಿಟೇಷನ್ನು ಅಂತ ಕೆಮಿಸ್ಟ್ರಿ - ಫಿಸಿಕ್ಸ್ ಎರಡರ ಸಹಭಾಗಿತ್ವದಲ್ಲಿ ಕೀಟ್ಲೆ ಶುರುವಾಗಿತ್ತು, ಇದ್ದಿದ್ರಲ್ಲಿ ಬಯೋಲಜಿಯೇ ಕ್ವೈಟ್ ಇಂಟ್ರೆಸ್ಟಿಂಗ್ ಅನ್ಸಿದ್ದು..!! ಫಸ್ಟ್ ಪಿಯು & ಸೆಕೆಂಡ್ ಪಿಯು ಫೈನಲ್ ಎಕ್ಸಾಂ ಬಿಟ್ರೆ ಮತ್ತೆಲ್ಲಾ ಟೆಸ್ಟು, ಪ್ರಿಪರೇಟರಿಗಳಲ್ಲೂ ಪಿಸಿಎಂಬಿ ಸಬ್ಜೆಕ್ಟ್ಗಳಲ್ಲಿ ಢುಮ್ಕಿ ಹೊಡೆದ ಕೀರ್ತಿ ನನ್ ಮೇಲಿದೆ, ನಮ್ ದೂರದ ನೆಂಟ್ರು ಕಮ್ ಅಜ್ಜ ನಮ್ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ರಿಂದ ಅವ್ರಿಂದಾನೇ ನಾನ್ ಫಸ್ಟ್ ಪಿಯುಸಿ ಪಾಸಾಗಿದ್ದು ಅನ್ನೋ ಡೌಟ್ ಇವತ್ತಿಗೂ ಹಂಗೇ ಇದೆ. ಇಡೀ ಪಿಯುಸಿ ಲೈಫಲ್ಲಿ ಕ್ಲಾಸಿಗಿಂತ ಜಾಸ್ತಿ ಡಿಬೇಟು - ಡ್ರಾಮಾ ಅಂತ ಹೋಗಿ ಅದ್ರಲ್ಲೊಂದಿಷ್ಟು ಪ್ರೈಜ್ ತಗೊಂಡು ಒಂದ್ ರೇಂಜಿಗೆ ಮರ್ಯಾದೆ ಉಳ್ಸ್ಕೊಂಡಿದ್ದೆ, ಜೊತೆಗೆ ನಮ್ ಕನ್ನಡ ಮಾಷ್ಟ್ರು ಶ್ರೀವತ್ಸ ಸರ್ ಕೂಡ ಕ್ಲೋಸ್ ಆಗಿದ್ರಿಂದ ಕಲ್ಚರಲ್ ಆ್ಯಕ್ಟಿವಿಟೀಸಲ್ಲಿ ಈ ಹುಡ್ಗ ಇದಾನೆ ಅಂತ ನನ್ನನ್ನ ಸ್ವಲ್ಪ ಬೆಳಕಿಗೆ ತಂದು ಉಳಿದ ಲೆಕ್ಚರರ್ಸ್ಗಳ ಕೆಂಗಣ್ಣಿಗೆ ಗುರಿಯಾಗೋದ್ ತಪ್ಪಿಸ್ತಿದ್ರು.. ಅದೇನೇ ಆದ್ರೂ ಮುಗ್ಧತೆ ಮಾತ್ರ ಕಳೆದುಕೊಂಡಿರ್ಲಿಲ್ಲ, ಎಲ್ಲವಕ್ಕೂ ಒಂದು ಮುಕ್ತಾಯ ಅನ್ನೋದ್ ಇರುತ್ತೆ ನೋಡಿ, ಅವತ್ತೊಂದಿನ ಡ್ರಾಮಾ ಪ್ರಾಕ್ಟಿಸ್ಸಿಗೆ ಅಂತ ಭಾನುವಾರ ಕಾಲೇಜಿಗೆ ಹೋದೋನಿಗೆ ಮಟಮಟ ಮಧ್ಯಾಹ್ನ ಆಗೋಷ್ಟ್ರಲ್ಲಿ ಜ್ಯೂನಿಯರ್ ಒಬ್ಬಳ ಮೇಲೆ ಸಿಕ್ಕಾಪಟ್ಟೆ ಕ್ರಷ್ ಆಗ್ಬಿಟ್ಟಿತ್ತು.. ಅದು ಒನ್ ವೇ ಲವ್ವಾಗಿ ನಾ ಲವ್ ಲೆಟ್ರು ಬರ್ಯೋ ಮಟ್ಟಕ್ಕೆ ಹಾಳಾಗಿ, ಅದು ಪೇಪರ್ರಲ್ಲಿ ಪಬ್ಲಿಶ್ ಆಗಿ, ಆ ಮ್ಯಾಟ್ರು ಇಡೀ ಕಾಲೇಜಿಗೆಲ್ಲಾ ಗೊತ್ತಾಗಿ, ನಮ್ ಕ್ಲಾಸ್ಮೇಟ್ಸ್ ಎಲ್ಲಾ ರೇಗಿಸೋಕೆ ಶುರು ಮಾಡಿ, ಅವ್ಳೊಂದು ಸಲ ತಿರುಗಿ ಲುಕ್ ಕೊಟ್ಟು ನಗುವಷ್ಟರಲ್ಲಿ ಮುಗ್ಧತೆಗೆ ಕೊನೇ ಮೊಳೆ ಹೊಡೆದಾಗಿತ್ತು.. ಶ್ರೀ ಹರಿ ಕೃಷ್ಣಾರ್ಪಣಮಸ್ತು. ಪಿಯುಸಿ ಮುಗೀತು, ಪಿಸಿಎಂಬಿ ಪಾಸಾಯ್ತು..
ವಾಟ್ ನೆಕ್ಸ್ಟ್? ಅಂತ ಯೋಚಿಸುವಾಗ ಸಂಯುಕ್ತ ಕರ್ನಾಟಕದ ಸ್ಟೇಟ್ ಲೆವೆಲ್ ಕಾಂಪಿಟೇಷನ್ ಒಂದರ ಆ್ಯಡ್ ಕಣ್ಣಿಗೆ ಬಿದ್ದು, ಅಪ್ಪನ ಜೊತೆಗೆ ಹುಬ್ಬಳ್ಳಿಗೆ ಹೋಗಿಯಾಗಿತ್ತು. ಆಕಸ್ಮಿಕ, ಅನಿರೀಕ್ಷಿತ, ಲಕ್ಕು ಏನೆನ್ನಬಹುದೋ ಗೊತ್ತಿಲ್ಲ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಹಲ್ ಕಿರೀತಾ ವೇದಿಕೆ ಮೇಲೆ ನಿಂತಿದ್ದೆ.. ಇಪ್ಪತ್ತೈದ್ ಸಾವ್ರ ದುಡ್ಡು, ಒಂದ್ ದೊಡ್ ಟ್ರೋಫಿ.. ಮಾರನೇ ದಿನ ಪೇಪರ್ ನೋಡಿದ್ರೆ ಫ್ರಂಟ್ ಪೇಜಲ್ಲೇ ಫೋಟೋ ಸಮೇತ "ಚಾಣಾಕ್ಷತನ ಮೆರೆದು ಚಾಣಕ್ಯನಾದ ಆಗುಂಬೆಯ ಸ್ಕಂದ" ಅನ್ನೋ ಹೆಡ್ಲೈನು.. ಹೀಗೇ ಪಿಯುಸಿ ಮುಗ್ದು ಡಿಗ್ರಿ ಸೇರೋಷ್ಟ್ರಲ್ಲಿ ನನ್ನ ಮೂಲ ಆಸಕ್ತಿಯಾದ ಪತ್ರಿಕೋದ್ಯಮ ನನಗೇ ಗೊತ್ತಿಲ್ಲದಂತೆ ನನ್ನ ಸೆಳೆದುಕೊಂಡ್ಬಿಡ್ತು.



ಸೆಕೆಂಡ್ ಇನ್ನಿಂಗ್ಸ್… ಡಿಗ್ರಿ ಲೈಫು..

ಸೈನ್ಸ್ ಟು ಆರ್ಟ್ಸ್.. ಖುಷ್ ಖುಷಿಯಾಗಿ ಡಿಗ್ರಿಗ್ ಸೇರಿದೆ.. ಸ್ಟೇಟ್ ಲೆವೆಲ್ಲಲ್ಲಿ ಫಸ್ಟು.. ಪೇಪರ್ ಫ್ರಂಟ್ ಪೇಜಲ್ಲಿ ಫೋಟೋ.. ಆಲ್ರೆಡಿ ಪಬ್ಲಿಶ್ ಆಗಿರೋ ಒಂದ್ನಾಲ್ಕು ಲವ್ ಲೆಟ್ರು ಇದನ್ನೆಲ್ಲಾ ಗಮನಿಸಿದ ನಮ್ ಲೆಕ್ಚರರ್ ಲೋಹಿತ್ ಸರ್ "ನಿಂಗ್ ಜರ್ನಲಿಸಂನಲ್ಲೇ ಇಂಟ್ರೆಸ್ಟ್ ಇದೆ ಅನ್ನೋದಾದ್ರೆ ಯಾವ್ದಾರ್ ಒಂದ್ ಪೇಪರ್ ಆಫೀಸಿಗೆ ಕಳ್ಸ್ತೀನಿ… ಹೋಗ್ತೀಯಾ" ಅಂತ ಕೇಳಿ ಕನ್ನಡಪ್ರಭ ಆಫೀಸ್ ದಾರಿ ತೋರ್ಸಿದ್ರು. ಅಲ್ಲಿಗೆ ನನ್ನಿಷ್ಟದ ಕ್ಷೇತ್ರದ ಗಂಧಗಾಳಿ ಅಧಿಕೃತವಾಗಿ ಮೈ ಸೋಕಿತ್ತು. ಅಂಶಿ ಪ್ರಸನ್ನಕುಮಾರ್ ಸರ್ ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿದ ದಿನವಿನ್ನೂ ನೆನಪಿದೆ, ಆಮೇಲೆ ದಿನಾ ಸಂಜೆ ಕಾಲೇಜ್ ಮುಗಿಸಿ ಕನ್ನಡಪ್ರಭಕ್ಕೆ ಹೋಗೋದು ರೂಢಿಯಾಯ್ತು.. ಪತ್ರಿಕೋದ್ಯಮದ ಅಆಇಈ ಕಲಿಯೋಕೆ ಶುರುಮಾಡಿದೆ, ಸರಿಯಾಗಿ ಹೋಗಿದ್ರೆ ಇಷ್ಟೊತ್ತಿಗೆ ವರ್ಗೀಯ ವ್ಯಂಜನಗಳ ತನಕ ಆದ್ರೂ ಕಲೀತಿದ್ನೋ? ಏನೋ? ವಾರದಲ್ ಒಂದ್ ದಿನ ಅದೂ ಇದೂ ಕೆಲ್ಸ, ತಿಂಗ್ಳಲ್ ಒಂದ್ ವಾರ ಊರು, ಹಾಗೇ ಹೀಗೇ ಅಂತ ರೆಗ್ಯುಲರ್ಲಿ ಇರ್ರೆಗ್ಯುಲ್ಲರ್ ಆಗಿ ಹೋಗ್ತಾ ಇರೋದ್ರಿಂದ ಔ.. ಅಂ.. ಅಃ ತನಕ ಬಂದು ನಿಂತಿದೆ ವಿದ್ಯಾಭ್ಯಾಸ.
ಇನ್ನೊಂದೆರಡು ತಿಂಗ್ಳಲ್ಲಿ ಡಿಗ್ರಿ ಮುಗ್ಯುತ್ತೆ… ಈಗ ಮತ್ತದೇ ವಾಟ್ ನೆಕ್ಸ್ಟ್? ಅನ್ನೋ ಪ್ರಶ್ನೆ ಹಗಲೂ ರಾತ್ರಿ ಕಾಡೋಕೆ ಶುರು ಮಾಡಿದೆ..
ಕೆಲ್ಸಕ್ ಹೋಗು, ಎಂಎ ಮಾಡು, ಕಾಂಪಿಟೇಟಿವ್ ಎಕ್ಸಾಂ ಬರಿ ಹೀಗೆ ಹತ್ತಾರು ಸಜೆಷನ್ಗಳು ಕಿವಿಗೆ ಬೀಳ್ತಿದೆ. ಈಗ್ಲೇ ಕೆಲ್ಸಕ್ ಸೇರೋವಷ್ಟ್ ಅನಿವಾರ್ಯತೆ ಇಲ್ಲ, ಆಗಿದ್ದಾಗ್ಲಿ ಎಂಎ ಮಾಡಣ ಅಂತ ನಂಗ್ ನಾನೇ ಉತ್ತರ ಹುಡುಕೋಷ್ಟ್ರಲ್ಲಿ ಎಲ್ಲಿ ಎಂಎ ಮಾಡೋದು? ಯಾವ್ ಯುನಿವರ್ಸಿಟಿ ಬೆಟರ್ರು? ಎಂಬೆಲ್ಲಾ ಅಡಿಷನಲ್ ಪ್ರಶ್ನೆಗಳು ಕೈಕಟ್ಕೊಂಡ್ ಎದುರಿಗೆ ನಿಂತ್ಬಿಡ್ತಾವೆ..

ಇರೋ ಭಾರವೇ ಜಾಸ್ತಿಯಾಗಿದೆ ಶಿವಾ ಅನ್ಕೊಳ್ಳೋ ಹೊತ್ತಲ್ಲಿ ಮೊಬೈಲಲ್ಲಿ ನೋಟಿಫಿಕೇಷನ್ ಸೌಂಡ್.. ಅವ್ಳೇ ಮೆಸೇಜ್ ಮಾಡಿರ್ಬೇಕು ಅಂತ ಖುಷಿಯಿಂದ ನೋಡಿದ್ರೆ ಯಾವ್ದೋ ಗ್ರೂಪಲ್ಲಿ ಮಲ್ಕೊಂಡಿರೋ ಮಗು ಚಿತ್ರದ್ ಕೆಳ್ಗೆ ಶುಭರಾತ್ರಿ ಅಂತ ಗೀಚಿರೋ ಮೆಸೇಜು, ದೇಹದಲ್ಲಿ ಹಡ್ರೆಂಡ್ ಡಿಗ್ರಿ ಸೆಲ್ಸಿಯಸ್ ತಾಪಮಾನ.. ಇರೋಬರೋ ಗ್ರೂಪ್ಗಳನ್ನೆಲ್ಲಾ ಮ್ಯೂಟ್ ಮಾಡಿ.. ಅವಳ ನಂಬರ್ರಿಗೆ ಮಾತ್ರ ಲಾಂಗ್ ವೈಬ್ರೇಷನ್ ಆಪ್ಷನ್ ಸೆಲೆಕ್ಟ್ ಮಾಡಿ, ಹಾಯ್..‌ ಅಂತ ಮೆಸೇಜ್ ಕಳ್ಸಿ ಎರ್ಡೆರ್ಡ್ ನಿಮ್ಷಕ್ಕೂ ಅವ್ಳ್ ಆನ್ಲೈನಿಗ್ ಬಂದ್ಲಾ ಅಂತಾ ಕಾಯೋದು ಒಂಥರಾ ಖುಷಿ ಕೊಡುತ್ತೆ, ಆನ್ಲೈನಲ್ಲಿದ್ದೂ ಮೆಸೇಜ್ ನೋಡಿಲ್ಲ ಅಂದ್ರೆ ಬೇಜಾರು.. ಮೆಸೇಜ್ ನೋಡಿಯೂ ರಿಪ್ಲೈ ಮಾಡಿಲ್ಲ ಅಂದ್ರೆ ವಿಪರೀತ ಸಂಕಟ.. ಲಾಂಗ್ ವೈಬ್ರೇಷನ್.. ಪಕ್ಕಾ ಅವ್ಳದ್ದೇ ಮೆಸೇಜು ಅಂತ ಓಪನ್ ಮಾಡಿದ್ರೆ ಮಲ್ಕೋ ಸುಮ್ನೆ.. ಬೈ ಅನ್ನೋ ರೆಡಿಮೇಡ್ ಮೆಸೇಜು, ಮೊದಮೊದಲೆಲ್ಲಾ ಬೇಜಾರ್ ಮಾಡ್ಕೊತ್ತಿದ್ದ ಮನ್ಸು ಬರ್ತಾ ಬರ್ತಾ ರೂಢಿ ಮಾಡ್ಕೊಂಡ್ ಬಿಡ್ತು.. ವಾರಕ್ಕೋ ಹದಿನೈದು ದಿನಕ್ಕೋ ಒಮ್ಮೆ ಅವಳಾಗೇ ಖುಷಿಯಿಂದ ಮಾತಾಡಿದಾಗ ದೀಪಾವಳಿ.. ಉಳಿದ ಸಮಯವೆಲ್ಲಾ ಸೂತಕದಲ್ಲಿ ಬರೋ ಹಬ್ಬಗಳಿದ್ದಂತೆ.. ಇವತ್ತಿಗೂ ಅವಳು ಎದುರಿಗೆ ಸಿಕ್ಕಾಗ ಮಾತು ಹೊರಡಲ್ಲ.. ಒನ್ ವೇ ಲವ್ ಹಣೆಬರಹವೇ ಇಷ್ಟು ಅವ್ರಿಗ್ ಲವ್ವಾಗಲ್ಲ, ನಮ್ಗ್ ಬ್ರೇಕಪ್ ಆಗಲ್ಲ ಅಂತ ಬಯ್ಕೊಂಡು.. ಬರೀ ಐದರ ಸ್ಪೀಡಲ್ಲೇ ತಿರುಗೋ ಟೇಬಲ್ ಫ್ಯಾನನ್ನ ಮುಖಕ್ಕೆ ಗಾಳಿ ಬರೋ ಥರ ಇಟ್ಕೊಂಡ್ ಮಲಗ್ತೀನಿ… ಮತ್ತೆ ಕನ್ಸು ಬೀಳುತ್ತೆ - ಜರ್ನಲಿಸ್ಟ್? ಆರ್ ಜೆ? ಸ್ಕೂಲು? ಲೆಕ್ಚರರ್? ಟ್ರಾವೆಲ್ ಏಜೆನ್ಸಿ? ಹೋಟೆಲ್ಲು? ಹೋಂ ಸ್ಟೇ? ಏನ್ ಮಾಡಣ.. ಯಾವ್ದ್ ಮಾಡಣ..? ಆಪ್ಷನ್ಸ್ ಸಿಕ್ಕಾಪಟ್ಟೆ ಇದಾವೆ.. ಗೊಂದಲ ಮುಂದುವರಿಯುತ್ತದೆ.




- ಸ್ಕಂದ ಆಗುಂಬೆ

Thursday, 22 February 2018

ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!!



ಭವ್ಯ ಕನಸೊಂದಕ್ಕೆ ಬುನಾದಿ ಹಾಕಿದ ಘಳಿಗೆ, ಅದೆಷ್ಟೋ ಜನ್ಮಗಳಿಂದ ಬರಡಾಗಿ ಹೋಗಿದ್ದ ಆತ್ಮದಲ್ಲಿ ಪ್ರೀತಿಯ ಒರೆತ. ತೀರಾ ಸನಿಹದಿಂದ ಗುರಾಯಿಸಿದವಳ ವಯಸ್ಸು ನನಗಿಂತ ಕಡಿಮೆ ಎಂದು ತಿಳಿದಾಗ ವರ್ಷದ ಅಷ್ಟೂ ಹಬ್ಬಗಳ ಸಾಮೂಹಿಕ ಆಚರಣೆ!! ಅವಳನ್ನು ಕಂಡ ಮೊದಲ ಕ್ಷಣವಿನ್ನೂ ಹಸಿರಾಗಿದೆ, ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!! ತೀರಾ ಮೊದಲ ನೋಟದಲ್ಲೇ ಕಣ್ಣಿಗೆ ಬಿದ್ದ ಸಂಗತಿಗಳೆಲ್ಲಾ ಮನದಲ್ಲಿ ಅಚ್ಚಾಗಿ, ಜೀವನದ ಅಷ್ಟೂ ರಾತ್ರಿಗಳಿಗೆ ಸಾಕಾಗುವಷ್ಟು ಕನಸು ಬಿಡುಗಡೆಯಾಗಲು.. ಮೊದಲ ಪ್ರೇಮ ಮೊಳಕೆಯೊಡೆದಿತ್ತು!!
ಒಮ್ಮುಖದ ಪ್ರೀತಿ ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ, ಹುಡುಗಿಯನ್ನು ಪರಿಚಯಿಸಿಕೊಳ್ಳುವುದರಿಂದ ಹಿಡಿದು ಪ್ರೇಮ ನಿವೇದನೆ ಮಾಡಿಕೊಳ್ಳುವ ತನಕ ಅಕ್ಷರಶಃ ತ್ರಿಶಂಕು ಸ್ಥಿತಿ!! ಈ ವಿಚಾರದಲ್ಲಿ ನಾನಂತೂ ಹೈರಾಣಾಗಿದ್ದೆ, ಆಕೆಯ ಪೂರ್ವಾಪರಗಳನ್ನೆಲ್ಲಾ ತಿಳಿಯಲು ರಹಸ್ಯ ಕಾರ್ಯಾಚರಣೆಯನ್ನೇ ನಡೆಸಿ, ಅವಳ ದೋಸ್ತಿಯ ಮೂಲಕ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆಯುವಷ್ಟರಲ್ಲಿ ಒಂದು ಶತಮಾನವೇ ಉರುಳಿದಂಥಾ ಅನುಭವ! ಕುಂಟುನೆಪವಿಟ್ಟುಕೊಂಡು ಮೊದಲ ಬಾರಿಗೆ ಕರೆ ಮಾಡಿದಾಗ ಅವಳೇ ಕರೆ ಸ್ವೀಕರಿಸಿದ್ದು ನನ್ನ ಪೂರ್ವಜರ ಪುಣ್ಯ! ಆಗಿನ್ನೂ ಸ್ಮಾರ್ಟ್ಫೋನ್ ಕೈಗೆ ಸಿಕ್ಕಿರದ ಕಾರಣ ನೋಕಿಯಾ ಕೀಪ್ಯಾಡ್ ಮೊಬೈಲಿನ ಅಷ್ಟೂ ಬಟನ್ನುಗಳನ್ನು ಪಟಪಟನೆ ಒತ್ತಿ ಮೆಸೇಜು ವಿನಿಮಯ ಮಾಡಿಕೊಳ್ಳುವಷ್ಟರಲ್ಲಿ ಪರಿಚಯ ಸ್ನೇಹವಾಗಿ ಪರಿವರ್ತನೆಯಾಗಿತ್ತು. ಅದೆಷ್ಟೇ ಮಾತನಾಡಿದರೂ ಪ್ರೇಮ ನಿವೇದನೆಯ ಕನಸು ಮಾತ್ರ ನನಸಾಗಿರಲಿಲ್ಲ. ಅದ್ಯಾವ ಜನ್ಮದ ಪುಣ್ಯವೋ? ಏನೋ? ಮನದ ತೊಳಲಾಟಗಳನ್ನೆಲ್ಲಾ ಹೊರಹಾಕಲಾಗದೆ ಒದ್ದಾಡುತ್ತಾ ಕುಳಿತಿದ್ದವನಿಗೆ ಹಾಸ್ಟೆಲಿನ ರೂಮಿನಲ್ಲಿದ್ದ ತುಕ್ಕು ಫ್ಯಾನಿನ ಕೆಳಗೆ ಜ್ಞಾನೋದಯವಾಗಿ ಪ್ರೇಮಪತ್ರವೊಂದು ಮೂಡಿತ್ತು. ಪತ್ರವೇನೋ ಬರೆದುಬಿಟ್ಟೆ ಅವಳಿಗೆ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಬಂದಾಗ ಮತ್ತದೇ ಮೌನ! ಬರೋಬ್ಬರಿ ನಾಲ್ಕೈದು ತಿಂಗಳ ಕಾಲ ಕತ್ತಲಲ್ಲೇ ಕುಳಿತ ಪತ್ರ ಕೊನೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದರೂ, ಅಷ್ಟರಲ್ಲಾಗಲೇ ಇದ್ದ ಚೂರುಪಾರು ಧೈರ್ಯವನ್ನೆಲ್ಲಾ ಒಟ್ಟುಹಾಕಿ ಪ್ರೇಮ ನಿವೇದನೆ ಮಾಡಿಕೊಂಡು ಒಪ್ಪಿಗೆಯೂ ಅಲ್ಲ, ತಿರಸ್ಕೃತವೂ ಅಲ್ಲ ಎಂಬ ಅತಂತ್ರ ಸ್ಥಿತಿಗೆ ತಲುಪಿ ಕಂಗಾಲಾಗಿದ್ದೆ. ಪ್ರಕಟವಾದ ಪ್ರೇಮಪತ್ರವನ್ನು ಓದಿ ನಾಚಿದ ಹುಡುಗಿ ಚೆನ್ನಾಗಿದೆ ಎಂಬ ಒಂದು ಪದವನ್ನು ಬಿಟ್ಟು ಮತ್ತೇನೂ ಹೇಳದಿದ್ದಾಗ ಎದೆಯೊಳಗೆ ಮೂರನೇ ಮಹಾಯುದ್ಧ!
ಹಾಗೂ ಹೀಗೂ ಪ್ರೇಮಪತ್ರ ಬರೆಯುವುದೇ ಸಲೀಸೆನ್ನಿಸಿ ಒಂದೆರಡು ಪ್ರೇಮಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗುವಷ್ಟರಲ್ಲಿ ಪಿಯುಸಿ ಮುಗಿದಿತ್ತು, ಗಣಿತದ ಅತ್ಯಂತ ಕಠಿಣವೆನಿಸುವ ಸಮೀಕರಣಗಳನ್ನೆಲ್ಲಾ ಒದ್ದಾಡಿ ಅರ್ಥೈಸಿಕೊಂಡ ನನಗೆ, ಅವಳು ಮಾತ್ರ ಸವಾಲಾಗಿಯೇ ಉಳಿದು, ಹಲವು ಭಗೀರಥ ಪ್ರಯತ್ನಗಳು ನಿರಂತರವಾಗಿ ನಡೆದರೂ ಸಿಕ್ಕಿದ್ದು ಮಾತ್ರ ಭಾರತೀಯರೇ ಕಂಡು ಹಿಡಿದ ಅತೀ ದೊಡ್ಡ ಶೂನ್ಯ! ಅದೇನಾದರೂ ಸೈ ಮೊದಲ ಪ್ರೀತಿಯಲ್ಲೇ ಪಾಸಾಗಬೇಕೆಂಬ ಶಪಥ ತೊಟ್ಟು, ಮತ್ತೆ ಮತ್ತೆ ಪ್ರಯತ್ನ ಮಾಡುವಷ್ಟರಲ್ಲಿ ಈ ಲೇಖನ ಬರೆದು ಮುಗಿಸುತ್ತಿದ್ದೇನೆ…!
ಮೂರೂವರೆ ವರ್ಷಗಳ ಸುದೀರ್ಘಾವಧಿಯಲ್ಲಿ ಅದೇನೇನೋ ಬದಲಾವಣೆಯಾಯಿತು, ಅವಳ ಖಾಲಿ ಮೂಗಿಗೆ ನತ್ತು ಬಂತು, ನನಗೂ ಗಡ್ಡ, ಮೀಸೆ ಬಂತು ಆದರೆ ನನ್ನ ಪ್ರೇಮಕಥೆ ಮಾತ್ರ ಇನ್ನೂ ಸರ್ಕಾರಿ ಕಚೇರಿಯಲ್ಲಿ ಬಿದ್ದಿರುವ ಅರ್ಜಿಯಂತೆ ಅತಂತ್ರವಾಗಿಯೇ ಇದೆ! ಆದರೂ ಅದರಲ್ಲೊಂದು ಖುಷಿಯಿದೆ, ಯಾಕೆಂದರೆ ಅದು ಮೊದಲ ಪ್ರೀತಿ.

- ಸ್ಕಂದ ಆಗುಂಬೆ

(ಮೂಲಪ್ರತಿ)
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.

Tuesday, 20 February 2018

ಒಂಚೂರು ಪಥ್ಯ ಕಲಿಸು, ಅವ್ಯಾಹತವಾಗಿ ಪ್ರೀತಿಸುವೆ




ಜೀವದಾಳದಲ್ಲೆದ್ದ ಅಲೆಯೊಂದು ಒಂದೇ ಸಮನೆ ಭೋರ್ಗರೆಯುತ್ತಿದೆ. ತುರ್ತಾಗಿ ತೀರದಲ್ಲೊಮ್ಮೆ ಸುಳಿದಾಡು, ಹೆಜ್ಜೆಗಳಚ್ಚಿಗೆ ಮುತ್ತಿಕ್ಕಿ ತಣ್ಣಗಾಗಲಿ ಉನ್ಮಾದ. ಬಯಕೆಗಳ ಬತ್ತಳಿಕೆ ಹೊತ್ತು ಕೂತಿರುವ ನಿನ್ನ ಹುಡುಗನುಸಿರಲ್ಲಿ ಬೆರೆತಿರುವುದು ಬರೀ ಇಂತಹುದೇ ಗುಟ್ಟುಗಳು, ಅವುಗಳಲ್ಲೊಂದು ಪಾಲನ್ನು ಬಿಟ್ಟುಕೊಡುವೆ, ಹಿಡಿದಿಟ್ಟುಕೋ.

ಜೀವನ ಪೂರಾ ಭ್ರಾಂತಿಯಲ್ಲಿದೆ, ಪ್ರೀತಿಯಲ್ಲಿ ಬರೀ ಸಿಹಿಯನ್ನೇ ಸವಿದು ಮಧುಮೇಹಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ, ಒಂಚೂರು ಪಥ್ಯ ಕಲಿಸು. ಬದುಕೆಂಬ ಭೂರಿಭೋಜನಕ್ಕೆ ಕೊಂಚ ಮಸಾಲೆ ಬೀಳಲಿ, ಒಗ್ಗರಣೆಯಲ್ಲೊಂದಷ್ಟು ಸಿಡುಕು, ಕೋಪ, ಗುದ್ದಾಟ, ಮುದ್ದಾಟ, ತಮಾಷೆಯಿರಲಿ, ಹದವಾಗಿ ಬೆರೆತ ಪ್ರೀತಿಯ ತುತ್ತು ಹೊಟ್ಟೆ ತುಂಬಿಸಲಿ, ಸಂಕಷ್ಟ ಚತುರ್ಥಿಯಂತೆ ಆಗಾಗ ಉಪವಾಸಕ್ಕೊಂದು ನೆಪ ಸಿಗಲಿ. ನಿನ್ನ ಕೆಂದುಟಿಯ ಮೇಲೆ ಬೆರಳಿಟ್ಟು, ಕಣ್ಣಲ್ಲಿ ಕಣ್ಣಿಟ್ಟು ಪಿಸುಗುಡುವ ನಡುವೆ ಅರಿವಿಲ್ಲದಂತೆ ಮುದ್ದಾಗಿ ತುಟಿಯೊತ್ತಿಬಿಡು, ಸುಖಾಸುಮ್ಮನೆ ಹಠಹಿಡಿದು ಗೋಳಾಡಿಸು, ನನ್ನ ಹುಸಿಮುನಿಸಿಗೊಂದು ನಯವಾದ ಕಾರಣವಿರಲಿ. ಬಯಸಿ ಬಂದಾಗೊಮ್ಮೆ ದೂರತಳ್ಳು, ವಿರಹದ ತಾಪ ಒಂಚೂರು ಸುಡಲಿ. ಚುಂಬಿಸುವ ನೆಪದಲ್ಲಿ ಗಲ್ಲ ಕಚ್ಚುವುದನ್ನು ಮಾತ್ರ ಮರೆಯದಿರು, ನಿನ್ನ ದಾಳಿಂಬೆಯಂಥಾ ಹಲ್ಲುಗಳ ಸಿಹಿ ನನ್ನ ಒರಟು ಕೆನ್ನೆಗೂ ಸೋಕಲಿ. ನನ್ನಷ್ಟೂ ಹಗಲುಗಳಿಗೆ ನೀನೇ ಇಬ್ಬನಿ ಆಗಬೇಕು, ಎಲ್ಲಾ ರಾತ್ರಿಗಳಿಗೂ ನಿನ್ನ ಮಾತೇ ಲಾಲಿಯಾಗಬೇಕು. ಮುದವಾದ ಸಂಚು ರೂಪಿಸಿ ಮತ್ತೆ ಮತ್ತೆ ನನ್ನ ಸೋಲಿಸು, ಸೋಲುವುದೇ ಚಾಳಿಯಾಗಲಿ. ನಿನ್ನ ಮೈ ಹೊಳಪು ಬೆಳದಿಂಗಳೊಂದಿಗೆ ಸ್ಪರ್ಧೆಗಿಳಿಯಲಿ, ಲಂಚ ಕೊಟ್ಟಾದರೂ ನಿನ್ನ ಗೆಲ್ಲಿಸುವೆ. ನೀ ಉಡುವ ಸೀರೆಯಲ್ಲಿ ನನ್ನ ಕನಸು ಅಡಗಲಿ, ಸೆರಗಿನೊಳಗೆ ಭಾವವೊಂದು ಕದ್ದುಮುಚ್ಚಿ ಸೇರಲಿ, ಕಾಣದಂಥಾ ಮಾಯೆಯೊಂದು ಬಿಡದೇ ಕಾಡಲಿ. ನಿನ್ನ ತುಂಬುಗೆನ್ನೆಗೆ ಕಂದಾಯ ಕಟ್ಟುವೆ, ರಶೀದಿಯ ಕೊಡದೆ ಪದೇ ಪದೆ ವಸೂಲಿಗಿಳಿದು ಲೂಟಿ ಮಾಡು, ದಿವಾಳಿಯಾದರೂ ಸೈ ದೂರು ನೀಡದೇ ಸಹಿಸಿಕೊಳ್ಳುವೆ. ಮುದ್ದಾಗಿ ಮೂತಿ ಮುರಿಯುವ ಕಲೆಯನ್ನು ನನಗೂ ಕಲಿಸು, ಸೋಲುವುದಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗುತ್ತದೆ. ಬೆಳದಿಂಗಳ ಇರುಳು ಮಗ್ಗುಲು ಬದಲಿಸುವಾಗ, ಕಡಲ ತಡಿಯಲ್ಲಿ ಕೂತು ಮಹಾಪರ್ವಕ್ಕೆ ಸಾಕ್ಷಿಯಾಗೋಣ, ಚಂದಿರನೂ ನಾಚುವಂತೆ ಅವ್ಯಾಹತವಾಗಿ ಪ್ರೀತಿಸುವೆ. ವೃದ್ಧಾಪ್ಯ ಆವರಿಸಿದಾಗ ಮತ್ತದೇ ಕಡಲ ಮುಂದೆ ಕೂತು ಗುಬ್ಬಿಗೂಡು ಕಟ್ಟೋಣ, ಸಾಕೆನಿಸಿದಾಗ ಇಂತಹ ಬಾಲಿಶ ಗುಟ್ಟುಗಳನ್ನೆಲ್ಲಾ ಮರಳಡಿಯಲ್ಲಿ ಹೂತು ಹೊರಟುಬಿಡೋಣ. ಅಲ್ಲಿಯ ತನಕ ಈ ಹುಡುಗನನ್ನು ಸಂಭಾಳಿಸುವ ಜವಾಬ್ದಾರಿ ನಿನ್ನದು. ಜೋಪಾನ.

ಇಂತಿ…
           ಭ್ರಾಂತಿಗೊಳಗಾದವ
         - ಸ್ಕಂದ ಆಗುಂಬೆ

(ಮೂಲಪ್ರತಿ)

ಈ ಲೇಖನ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.

Tuesday, 13 February 2018

ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ



ರೂಪಸಿ…
                ಅಕಾಲಿಕ ಮಳೆಗೆ ನೆಂದ ಬೀದಿದೀಪದಲ್ಲಿ ಹರಳುಗಟ್ಟಿರುವ ಹನಿಗಳೊಳಗೆ ನಿನ್ನ ಛಾಯೆಯಿದೆ, ತೇವಗೊಂಡಿರುವ ಕುಸುಮದ ಎಸಳು ನಿನ್ನ ಅಧರದಂತೆ ಕೆಂಪುಗೊಂಡಿದೆ, ಇಳಿಸಂಜೆಯ ಬಾನಿನಲ್ಲಿ ನಿನ್ನದೇ ಕೆನ್ನೆಯ ರಂಗಿದೆ, ಪ್ರಕೃತಿಯೊಡನೆ ನಿನ್ನದೇನಾದರೂ ಒಪ್ಪಂದ ಏರ್ಪಟ್ಟಿರಬಹುದೆಂಬ ಗುಮಾನಿ ನನಗೆ.
ನೂಪುರದ ಮಣಿಗಳು ನಿನ್ನ ಕಾಲಿಗೆ ಮುತ್ತಿಡುವಾಗಲೆಲ್ಲಾ ಅತೀವ ಹೊಟ್ಟೆಕಿಚ್ಚಾಗುತ್ತದೆ, ಮೂಗುತಿಗೆ ತಾಗುವ ಉಸಿರ ತಾಪ ನನಗೂ ಸೋಕಲಿ ಎಂದು ಹರಕೆ ಹೊತ್ತಿರುವೆ, ನಿಶಾಚರಿ ಕನಸುಗಳನ್ನೆಲ್ಲಾ ಸಂಪೂರ್ಣ ನಿನಗೇ ಮೀಸಲಿಟ್ಟಿರುವೆ ತಡಮಾಡದೇ ಆಕ್ರಮಿಸಿಕೋ. ಎದೆತಳದ ಅಕ್ಷಾಂಶ ರೇಖಾಂಶಗಳೆಲ್ಲಾ ನಿನ್ನ ಪಾದಸ್ಪರ್ಶದಿಂದ ಪಾವನಗೊಂಡು, ಮನದ ಭೂಪಟದಲ್ಲಿ ನಿನ್ನದೊಂದು ಸಾಮ್ರಾಜ್ಯ ಸ್ಥಾಪನೆಯಾಗಲಿ. ಬೈಗಿನಲ್ಲಿ ದರ್ಬಾರು ನಡೆಸು ಬದುಕು ಸಾರ್ಥಕವಾಗಲಿ. ಪೋರಿಯೊಬ್ಬಳು ಈ ಪರಿ ಕಾಡುವ ಕಥೆ ಯಾವ ರಾಜನ ಇತಿಹಾಸದ ಪುಟದಲ್ಲೂ ನಮೂದಾಗಿರಲಿಕ್ಕಿಲ್ಲ ಅಥವಾ ಮೊದಲ ಪ್ರೇಮವನ್ನೇ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಕಾಯುವ ಹುಡುಗನೂ ಸಿಗಲಿಕ್ಕಿಲ್ಲ. ಇನ್ನೂ ಎಷ್ಟು ವರ್ಷಗಳ ತನಕ ಮೀರಾ ಮಾಧವರ ಕಥೆಯನ್ನೇ ಎಳೆದಾಡುವುದು? ಸತಾಯಿಸದೆ ಸಮ್ಮತಿಸು ಅತ್ಯುತ್ಕೃಷ್ಟ ಪ್ರೇಮಕಥೆಯೊಂದು ಸೃಷ್ಟಿಯಾಗಲಿ.

ಇಂತಿ,
         ಕನಸು ಕಂಗಳ ಹುಡುಗ
         ಸ್ಕಂದ ಆಗುಂಬೆ.

(ಮೂಲಪ್ರತಿ)

ಈ ಲೇಖನ ಪ್ರಜಾವಾಣಿ ದಿನಪತ್ರಿಕೆಯ ಮೆಟ್ರೋ (ಮೈಸೂರು ಆವೃತ್ತಿ) ಪುರವಣಿಯಲ್ಲಿ ಪ್ರಕಟವಾಗಿದೆ.


Tuesday, 30 January 2018

ಪುನರ್ವಸು


           

ಆಷಾಢ ಮಾಸದ ಪುನರ್ವಸು ಮಳೆಯಿದ್ದಿರಬೇಕು, ನನ್ನ ಜೀವನದಲ್ಲಿ ಅಂತಹಾ ಮಳೆಯನ್ನು ಎಂದೂ ನೋಡಿರಲಿಲ್ಲ. ಅದ್ಯಾರ ಮೇಲಿನ ಮುನಿಸಿಗೆ ಮೋಡ ತನ್ನ ಗರ್ಭವನ್ನು ಹಿಸುಕಿಕೊಂಡಿತ್ತೋ ಗೊತ್ತಿಲ್ಲ.

"ತುಂಬಾ ಮಳೆ ಅಲ್ವಾ?" ಹಳೆಯ ಮೂಕಾಂಬಿಕಾ ಬಸ್ಸಿನ ಕಿಟಕಿ ಸಂದಿಯಿಂದ ಒಳಹೊಕ್ಕು ಸೀಟನ್ನಾಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದ ಮಳೆ ನೀರಿನಾಸೆಗೆ ಕಲ್ಲು ಹಾಕಲು ಹೆಣಗಾಡುತ್ತಿದ್ದ ನನ್ನೆಡೆಗೆ ನಾಟಕೀಯವಾಗಿಯೇ ಪ್ರಶ್ನೆಯೊಂದನ್ನು ತೂರಿದಳು. "ವಿಷ್ಯಕ್ಕೆ ಬಾ" ತುಂಬಾ ಸ್ಪಷ್ಟವಾಗಿ ಹೇಳಿದೆ. ತನ್ನ ಹಳೇ ಸ್ಟೈಲಿನಲ್ಲೇ ಮುಂಗುರುಳು ಸರಿಸುತ್ತಾ, ಇರಿಸುಮುರಿಸಾದವಳಂತೆ ಒಂದಿಂಚು ದೂರ ಸರಿದು ಕೂರುವಷ್ಟರಲ್ಲಿ ಏಜೆಂಟರ್ ದೇವಣ್ಣ ನನ್ನೆಡೆಗೆ ಪರಿಚಿತದ ನಗು ಬೀರಿ, ಎರಡೂ ಟಿಕೆಟ್ ನೀನೇ ಮಾಡಿಸ್ತೀಯಾ? ಅಂತ ಕಣ್ಸನ್ನೆಯಲ್ಲೇ ಕೇಳಲು, ಹುಡುಗಿಯರು ಜೊತೆಗಿದ್ದಾಗ ಅವರ ಖರ್ಚನ್ನು  ನಾವೇ ಭರಿಸಬೇಕೆಂಬ ಅಲಿಖಿತ ನಿಯಮವನ್ನು  ಪಾಲಿಸುವ ಸಲುವಾಗಿ ಮಳೆಯಲ್ಲಿ ನೆಂದು ಒಂದಕ್ಕೊಂದು ಬೆಸೆದುಕೊಂಡಿದ್ದ ಐವತ್ತು ರೂಪಾಯಿಯ ಎರಡು ನೋಟುಗಳನ್ನು ಅಂಗಿಯ ಜೇಬಿನಿಂದ ಜೋಪಾನವಾಗಿ ಹೊರಗೆಳೆದು ದೇವಣ್ಣನ ಕೈಗಿತ್ತು "ಒಂದ್ ತೀರ್ಥಹಳ್ಳಿ, ಒಂದ್ ಮಂಡಗದ್ದೆ" ಎಂದು ಅದಾಗ ತಾನೇ ಬಂದಿದ್ದ ಡಿಜಿಟಲ್ ಟಿಕೆಟ್ ಮಶೀನಿನಿಂದ ಕಿರ್ರ್ ಕಿರ್ರ್ ಎಂದು ಸದ್ದು ಮಾಡುತ್ತಾ ಹೊರ ಬರುತ್ತಿದ್ದ ಟಿಕೆಟ್ ಚೀಟಿಯನ್ನು ಗಮನಿಸುತ್ತಾ ಕುಳಿತೆ.

"ಮಂಡಗದ್ದೇಲಿ ಇಳಿತ್ಯಾ? ಅಲ್ಲೇನ್ ಕೆಲ್ಸ?" ಅವಳ ಮಾತಿನಲ್ಲಿ ಅಸಮಾಧಾನವಿದ್ದಂತಿತ್ತು.

"ಕೆಲ್ಸ ಏನಿಲ್ಲ, ಅಲ್ ಇಳ್ಕೊಂಡು ಹಿಂದಿನ್ ಬಸ್ಸಲ್ಲಿ ಬರ್ತೀನಿ,"

"ಇದ್ರಲ್ಲಿ ಸೀಟ್ ಸಿಕ್ಕಿದ್ಯಲ್ಲಾ.. ಇನ್ನೇನ್ ತೊಂದ್ರೆ ನಿಂಗೆ?"

"ಸ್ವಲ್ಪ ಮಾತಾಡೋದಿದೆ ಅಂತ ನೀ ಹೇಳಿದ್ದಕ್ಕೋಸ್ಕರ ಬಂದಿರೋದು, ಮಂಡಗದ್ದೆ ತಲುಪೋಕೆ ಇನ್ನೂ ನಲವತ್ತು ನಿಮ್ಷ ಇದೆ. ಅಷ್ಟರಲ್ಲಿ ಏನ್ ಮಾತಾಡ್ಬೇಕೋ ಆಡಿ ಮುಗಿಸಿಬಿಡು"

"ಮಂಡಗದ್ದೇಲಿ ಯಾಕ್ ಇಳ್ಯೋದು?"

"ಅದು ನನ್ನಿಷ್ಟ, ನೀನು ಏನ್ ಹೇಳ್ಬೇಕು ಅಂತಿದ್ಯೋ ಅದನ್ನ ಮೊದ್ಲು ಹೇಳು,"

"ಪದೇ ಪದೇ ಅದನ್ನೇ ಹೇಳ್ಬೇಡ, ಯಾವಾಗ ಮಾತಾಡ್ಬೇಕು ಅಂತ ನಂಗೊತ್ತು"

ಸೀಟಿಗೆ ಅಂಟಿದ್ದ ಹನಿಗಳನ್ನು ಅಲ್ಲಿಂದ ಓಡಿಸಿ, ಅದೇ ಸೀಟಿಗೆ ಒರಗಿ ಕಣ್ಮುಚ್ಚಿದೆ, ಬಸ್ಸು ಶಿವಮೊಗ್ಗ ದಾಟಿ ಗಾಜನೂರನ್ನು ಸಮೀಪಿಸಿತ್ತು.

"ನಿದ್ದೆ ಬರ್ತಿದ್ಯಾ?" ರೊಮ್ಯಾಂಟಿಕ್ಕಾಗಿ ಕೇಳಿದ್ಳು.

"ನಂಗೆ ನಿದ್ದೆ ಮಾಡೋ ಜಾಗದಲ್ಲಿ ನೆಮ್ಮದಿ ಇರ್ಬೇಕು" ಗಡುಸಾಗಿ ಹೇಳಿದೆ.




"ಅದ್ಯಾಕೆ ನಾ ಮಾತಾಡಿದ್ರೆ ಉರಿದು ಬೀಳ್ತೀಯಾ?"

ಅವಳ ಮಾತಿಗಿಂತ ಸುರಿಯುವ ಮಳೆಯ ಶಬ್ಧವೇ ಆಹ್ಲಾದಕರವೆನಿಸಿತ್ತಿರಬೇಕು ಅಥವಾ ಅವಳ ಪ್ರಶ್ನೆಗೆ ಉತ್ತರ ಹುಡುಕಲು ಆಸಕ್ತಿ ಇಲ್ಲದೇ ಸುಮ್ಮನಾಗಿದ್ದಿರಬೇಕು". ನಮ್ಮಿಬ್ಬರ ಮಧ್ಯದಲ್ಲಿ ನೆಮ್ಮದಿಯಾಗಿ ಉಸಿರಾಡಿಕೊಂಡು ಬಿದ್ದಿದ್ದ ಒಂದೂವರೆ ಇಂಚು ಜಾಗದ ಮೇಲೆ ಹೊಟ್ಟೆಕಿಚ್ಚಾದವಳಂತೆ ಸರಕ್ಕನೆ ಸರಿದು ಮೈಗಂಟಿಕೊಂಡು ಭುಜದ ಮೇಲೆ ತಲೆಯಿಟ್ಟಳು.

ಅವಳ ತಲೆಗೂದಲಿನೊಂದಿಗೆ ಲೀನವಾಗಿದ್ದ ಶ್ಯಾಂಪೂವಿನ ಘಮ ಮೂಗಿನ ಹೊಳ್ಳೆಯ ಪ್ರವೇಶಿಸಲು ಹವಣಿಸುತ್ತಿರುವಾಗಲೇ ಅದಕ್ಕೆ ಅನುವಾಗುವಂತೆ ದೀರ್ಘ ಉಸಿರನ್ನೊಮ್ಮೆ ಎಳೆದು, ಅಚಾನಕ್ಕಾಗಿ ಮುಖ ಸವರಿದ ಕೂದಲೆಳೆಗಳಿಂದ ಘಮ ಹೀರುವ ಕಾಯಕದಲ್ಲಿ ನಿರತವಾಗಿದ್ದೆ. ಅದೇ ವೇಳೆಯಲ್ಲಿ ಮೂರು ದಿನಗಳಿಂದ ನಿದ್ರೆಯನ್ನೇ ಮಾಡದ ಸಾಕ್ಷಾತ್ ಕುಂಭಕರ್ಣನ ತಂಗಿಯಂತೆ ಆಕೆ ಐದಂಗುಲದಗಲ ಬಾಯ್ತೆರೆಯಲು... ಶ್ಯಾಂಪೂವಿನ ಸುವಾಸನೆಗೆ ತದ್ವಿರುದ್ಧವಾದ ವಾಸನೆಯೊಂದು ರಪ್ಪನೆ ಮೂಗಿಗೆ ಬಡಿಯಿತು. ಬಹುಶಃ ಅಕ್ಬರ್ ಸಾಬರ ಡಾಭಾದ ಬಿರಿಯಾನಿಯದ್ದಿರಬೇಕು. ಶುದ್ಧ ಸಸ್ಯಾಹಾರಿ ಎಂಬ ಹಣೆಪಟ್ಟಿ ಹೊತ್ತು ಬೆಳೆದಿದ್ದವನಿಗೆ ಅದೇಕೋ ಸಹ್ಯವಾಗದೆ ಒಳಹೊಕ್ಕಿದ್ದ ವಾಸನೆಯನ್ನೆಲ್ಲಾ ಹೊರದಬ್ಬಲು ಯತ್ನಿಸಿ ಒಂದೆರಡು ಬಾರಿ ಉಸಿರ ಕಕ್ಕಿ ಕಿಟಕಿಯತ್ತ ಮುಖಮಾಡಿದೆ.

ಏದುಸಿರು ಬಿಡುತ್ತಿದ್ದ ಬಸ್ಸು ಸಕ್ರೆಬೈಲನ್ನು ತಲುಪಿಯಾಗಿದೆ ಎಂದು ಅರಿವಿಗೆ ಬಂದದ್ದು ಮಳೆಯ ಹೊಡೆತಕ್ಕೆ ಸಿಕ್ಕು ಏಕಾಂಗಿಯಾಗಿ ನಿಂತಿದ್ದ `ಆನೆ ಬಿಡಾರ'ವೆಂಬ ತುಕ್ಕು ಹಿಡಿದ ಹಸಿರು - ಬಿಳಿ ಮಿಶ್ರಿತ ಬೋರ್ಡನ್ನು ನೋಡಿದಾಗಲೇ. ನಲವತ್ತು ನಿಮಿಷಗಳ ಕಾಲಾವಧಿಯಲ್ಲಿ ಅರ್ಧಭಾಗ ಇತಿಹಾಸದ ಪುಟ ಸೇರಿಯಾಗಿತ್ತು, ಇನ್ನುಳಿದ ಅರ್ಧಭಾಗ ನಮ್ಮ ಮಾತುಗಳ ನಿರೀಕ್ಷೆಯಲ್ಲಿತ್ತೆನಿಸುತ್ತದೆ, ಅವುಗಳ ಪರ ವಕಾಲತ್ತು ವಹಿಸಿದವನಂತೆ "ಇಪ್ಪತ್ತು ನಿಮಿಷ ಬಾಕಿ ಇದೆ" ಎಂದೆ. 

"ಅದ್ಯಾಕ್ ಒಳ್ಳೇ ಎಕ್ಸಾಮ್ ಹಾಲಲ್ಲಿರೋ ಇನ್ವಿಜಲೇಟರ್ ಥರ ಅರ್ಧಗಂಟೆ ಬಾಕಿ ಇದೆ, ಇಪ್ಪತ್ ನಿಮ್ಷ ಬಾಕಿ ಇದೆ ಅಂತ ಬಡ್ಕೋತೀಯಾ? ನಂಗೂ ಟೈಮ್ ನೋಡಕ್ ಬರುತ್ತೆ. ಮೊನ್ನೆಯಷ್ಟೇ ತಗೊಂಡಿರೋ ಫಾಸ್ಟ್ರ್ಯಾಕ್ ವಾಚ್ ಸರಿಯಾಗೇ ಟೈಮ್ ತೋರ್ಸುತ್ತೆ...." ಸೋ ಕಾಲ್ಡ್ ಎಕ್ಸ್‌ಪ್ರೆಸ್ ಬಸ್ಸೇ ನಾಚುವಂತೆ ವೇಗವಾಗಿ ಮಾತನಾಡುತ್ತಲೇ ಇದ್ದಳು.

"ಸುಳ್ ಹೇಳ್ಬೇಡ" ಬ್ರೇಕ್ ಹಾಕಿದೆ.

ವಾಟ್ ನಾನ್‌ಸೆನ್ಸ್ ಎನ್ನುವಂಥಾ ಸಿಗ್ನೇಚರ್ ಲುಕ್ ಕೊಟ್ಟು, ಸುಳ್ಳಾ? ಎಂಬ ಪ್ರಶ್ನಾರ್ಥಕದೊಂದಿಗೆ ಮೌನವಾದಳು. ಇಪ್ಪತ್ತು ಸೆಕೆಂಡುಗಳೂ ಸರಿದಿರಲಿಕ್ಕಿಲ್ಲ ಮರು ಉತ್ತರ ಕೊಡದೆ ಸುಮ್ಮನೆ ಕುಳಿತಿದ್ದ ನನಗೆ ಭುಜ ತಿವಿಯುತ್ತಾ "ಏನ್ ಸುಳ್ಳು ಅಂತ ಬೊಗಳ್ತ್ಯೋ? ಇಲ್ವೋ? ಎಂಬ ಆವಾಜಿನೊಂದಿಗೆ ಮತ್ತೆ ಮಾತು ಆರಂಭಿಸಿದಳು.

"ಆ ವಾಚ್ ನೀನ್ ತಗೊಂಡಿರೋದಲ್ಲ" ನಿರ್ಭಾವುಕನಾದರೂ ತುಸು ಗಟ್ಟಿಯಾಗಿಯೇ ಹೇಳಿದೆ. ಒಂದೈದು ಸೆಕೆಂಡುಗಳ ನಂತರ ಅಸಹನೆ ವ್ಯಕ್ತಪಡಿಸುತ್ತಾ -

"ಹೌದು, ಯಾರೋ ಒಬ್ರು ಕೊಟ್ಟಿದ್ದು.. ಏನಿವಾಗ?"

"ಮತ್ ಮತ್ತೆ ಸುಳ್ ಹೇಳ್ಬೇಡ"

"ನಿಂದ್ಯಾಕೋ ಅತಿಯಾಯ್ತು, ನಾನ್ ತಗೊಂಡಿರೋದಲ್ಲ ಅಂತ ಕ್ಲಿಯರ್ ಆಯ್ತು ತಾನೇ? ಇನ್ನೇನು?"

"ಅದಲ್ಲ, ಯಾರೋ ಒಬ್ರು ಕೊಟ್ಟಿದ್ದು ಅಂದ್ಯಲ್ಲಾ ಅದು ಸುಳ್ಳು" 

"ನಿಂಗೆ ತಲೆ ಕೆಟ್ಟಿದ್ಯಾ? ನಿಜ್ವಾಗ್ಲೂ ಇದು ನಂಗೊಬ್ರು ಕೊಟ್ಟಿರೋ ವಾಚು"

"ಬಟ್, ಅದು `ಯಾರೋ ಒಬ್ರು' ಅಲ್ಲ... ದಟ್ಸ್ ಯುವರ್ ಬಾಯ್‌ಫ್ರೆಂಡ್ ನೋ?"

ಒಂದೈದು ಸೆಕೆಂಡುಗಳ ಕಾಲ ಹುಬ್ಬು ಗಂಟಿಕ್ಕಿಕೊಂಡವಳು "ಸ್ಸಾರಿ, ಅದು ಎಕ್ಸ್ ಬಾಯ್‌ಫ್ರೆಂಡ್" ಎಂದು ತುಂಬಾ ನೇರವಾಗಿಯೇ ಹೇಳಿದಳು.

ಮೊಬೈಲ್ ನೋಡಿದೆ, ಇನ್ನೂ ಹನ್ನೆರಡು ನಿಮಿಷಗಳು ಬಾಕಿ ಇದ್ದವು, ಹನ್ನೆರಡನೇ ನಿಮಿಷ ಗತವಾಗುವ ನಾಲ್ಕೈದು ಸೆಕೆಂಡುಗಳ ಮುಂಚೆ ಕುತೂಹಲ ಮಿಶ್ರಿತ ನೋಟದೊಂದಿಗೆ "ಎಕ್ಸ್ ಯಾವಾಗಾದ?" ಎನ್ನುತ್ತಾ ಕಥೆ ಕೇಳಲು ಸನ್ನದ್ಧನಾಗಿ ಅವಳತ್ತ ತಿರುಗಿ ಕುಳಿತೆ.

"ಉಫ್! ಅದೆಲ್ಲಾ ನಿಂಗ್ಯಾಕೆ?" ಸಿಡುಕಿದಳು.

ಅವಳು ಸಿಡುಕಿದ್ದಕ್ಕೇನೂ ಬೇಸರವಾಗಲಿಲ್ಲ ಆದರೆ ಬಿರಿಯಾನಿಯ ವಾಸನೆ ಮತ್ತೆ ಮೂಗಿಗೆ ಬಡಿದಿದ್ದರಿಂದ ನಿರ್ವಾಹ ಇಲ್ಲದೆ ಕಿಟಕಿಯತ್ತ ತಿರುಗಿದೆ.

"ಯಾಕೆ? ಏನು? ಅಂತ ತುಂಬಾ ಕೆದಕಬಾರ್ದು ಆಯ್ತಾ? ಹಾಗಿದ್ರೆ ಮಾತ್ರ ಹೇಳ್ತೀನಿ" ಬಹುಶಃ ಒಳಗಿದ್ದ ಮಾತುಗಳನ್ನು ಹೊರಹಾಕಲು ಒಳ್ಳೇ ಅವಕಾಶ ಎಂದೆನಿಸಿತೋ ಏನೋ? ವಿನಮ್ರ ಮಿಶ್ರಿತ ತವಕದ ಧ್ವನಿಯಲ್ಲಿ ಹೇಳಿದಳು.

ಕಿಟಕಿಯಾಚೆ ನೋಡುತ್ತಲೇ ಹ್ಞೂಂಗುಟ್ಟಿದೆ.

"ಆಕ್ಚುಯಲಿ ಅವನನ್ನ ನಾ ತುಂಬಾ ನಂಬಿದ್ದೆ, ನನ್ನ ಕನಸುಗಳಲ್ಲೆಲ್ಲಾ ಅವನೇ ಮುಖ್ಯ ಪಾತ್ರಧಾರಿಯಾಗಿದ್ದ. ಆದರೆ ಅವನಿಗೆ ನನ್ ಮೇಲಿರೋದು ಪ್ರೀತಿಯಲ್ಲ ಬದಲಿಗೆ ಸೆಕ್ಶುಯಲ್ ಅಟ್ರ್ಯಾಕ್ಷನ್ ಅಂತ ಗೊತ್ತಾದ ಮರುಕ್ಷಣದಿಂದ ಅವನೊಂದಿಗಿನ ಸಂಬಂಧದಲ್ಲಿ ಹಳಸಲು ವಾಸನೆ ಎದ್ದುಬಿಡ್ತು. ಸರಿ ಮಾಡ್ಕೊಳ್ಳೋ ಅವಕಾಶ ಇತ್ತು ಅನ್ಸುತ್ತೆ, ಆದ್ರೆ ಅವನ ಬಾಯಿಂದ ಅವತ್ತು ಹೊರ ಬಂದ ಮಾತುಗಳು ತೀರಾ ಗಲೀಜಾಗಿತ್ತು.. ಆಮೇಲ್..."

"ನಿನ್ನ ಬಾಯಿಂದ ಬರುವ ಬಿರಿಯಾನಿ ವಾಸನೆಯಂತೆ" ಎಂದು ಹೇಳಬೇಕೆನಿಸಿ.. ಕಿಸಕ್ಕನೆ ನಕ್ಕು, ಅಭಾಸವಾಗದಿರಲೆಂದು ಸೀನಿದವನಂತೆ ನಟಿಸಿ ಮೂಗೊರೆಸಿಕೊಳ್ಳುತ್ತಾ.. ನಕ್ಕಿದ್ದು ಅವಳ ಅರಿವಿಗೆ ಬಾರದಂತೆ ಹೇಗೋ ನಿಭಾಯಿಸಿದೆ.

ಮಾತು ಮುಂದುವರೆಯಿತು - "ಆಮೇಲಿಂದ ಅವನ ಮುಖ ನೋಡಿದ್ರೆ ಹೀಕರಿಕೆ ಬರುವಂತಾಗಿ ಹೋಯ್ತು. ಪ್ರೀತಿಸುತ್ತಿದ್ದೀನಿ ಎಂಬ ಒಂದೇ ಕಾರಣಕ್ಕೆ ನನ್ನ ದೇಹವನ್ನು ಅವನಿಗೆ ಸಮರ್ಪಿಸಿಕೊಂಡು ಸಂತೃಪ್ತಿ ಕೊಡುವಂಥಾ ಮೂರ್ಖಳಲ್ಲ ನಾನು, ಶುದ್ಧತೆಯಿಲ್ಲದ ಪ್ರೀತಿಯ ಸುಳಿಗೆ ಸಿಕ್ಕು ದೇಹವೂ ಅಶುದ್ಧವಾಗದಿರಲೆಂದು ಎದ್ದು ಬಂದುಬಿಟ್ಟೆ" ಸುದೀರ್ಘ ನಿಟ್ಟುಸಿರು ಬಿಟ್ಟಳು.

ಮಾತು ಕೇಳ ಕೇಳುತ್ತಲೇ ಅವಳೆಡೆಗೆ ತುಸು ಗೌರವ ಬೆಳೆದಿತ್ತು ಆದರೂ ಹುಡುಗಾಟಿಕೆಯಿಂದ "ಮುಂದಿನ ನಿಲ್ದಾಣ?" ಎಂಬ ದ್ವಂದ್ವಾರ್ಥದ ಪ್ರಶ್ನೆಯೊಂದನ್ನು ತೇಲಿಬಿಟ್ಟೆ.

"ಮುಂದಿನ ನಿಲ್ದಾಣ ಮಂಡಗದ್ದೆ" ಉತ್ತರದಲ್ಲಿ ಮುಗ್ಧತೆ ಇತ್ತು.

ನಸುನಕ್ಕು ಮೈಮುರಿಯುತ್ತಾ, "ಸರಿ.. ಇನ್ನೇನೂ ಕೆದಕೋದಿಲ್ಲ. ಮಂಡಗದ್ದೆ ಬಂತು ನಾ ಇಳೀತಿನಿ" ಸೀಟಿನಿಂದ ಎದ್ದು ಬಾಗಿಲ ಬಳಿ ತೆರಳಲು ಮುಂದಾದೆ.

"ಇದ್ಯಾಕೋ? ತೀರ್ಥಹಳ್ಳಿಗೆ ಟಿಕೆಟ್ ಮಾಡಿಸಿ ಮಂಡಗದ್ದೇಲಿ ಇಳೀತಿಯಾ?" ನಗು ವ್ಯಂಗ್ಯವಾಗಿತ್ತು. ಜೇಬಿನಲ್ಲಿದ್ದ ಟಿಕೆಟ್ ತೆಗೆದು ತೋರಿಸಿದೆ.

ಯುದ್ಧದಲ್ಲಿ ಎದುರಾಳಿಯ ಬಾಣಕ್ಕೆ ಪ್ರತಿಕಾರವಾಗಿ ಬಾಣ ಹೂಡುವ ಸೈನಿಕನಂತೆ ತನ್ನ ಪರ್ಸಿನಿಂದಲೂ ಟಿಕೆಟ್ಟೊಂದನ್ನು ಹೊರಗೆಳೆದು, ಏನನ್ನೋ ಸಾಧಿಸಿದ ಮುಖಭಾವದೊಂದಿಗೆ ಹುಬ್ಬು ಹಾರಿಸುತ್ತಾ ಮಂದನಗೆಯೊಂದಿಗೆ ಗುರಾಯಿಸಿದಳು.

ಅದ್ಯಾವುದೋ ಮಾಯಕದಲ್ಲಿ ಏಜೆಂಟರ್ ದೇವಣ್ಣ ಇಳಿಯುವ ಮೊದಲೇ ನಾ ಇಳಿಯುವ ನಿಲ್ದಾಣವನ್ನು ಮಂಡಗದ್ದೆಯಿಂದ ತೀರ್ಥಹಳ್ಳಿಗೆ ಮುಂದೂಡಿಸಿದ್ದಳು. ಅವಳ ದುಡ್ಡಲ್ಲೇ ಟಿಕೆಟ್ ಮಾಡಿಸಿದ್ದರೆ ಆಗಿದ್ದಾಗಲಿ ಅಂತ ಇಳಿದುಬಿಡುತ್ತಿದ್ದೆನೇನು! ಆದರೆ ಪುಣ್ಯಾತ್ಗಿತ್ತಿ ನನ್ನ ಅಂಗಿ ಜೇಬಿನಲ್ಲಿದ್ದ ನೋಟನ್ನು ಎಗರಿಸಿ ಟಿಕೆಟ್ ತೆಗೆದಿದ್ದಾಳೆಂಬ ಅರಿವಾದ ಮೇಲೆ ನನ್ನ ಆರ್ಥಿಕತೆಗೆ ನಷ್ಟವಾಗದಿರಲೆಂದು ಮರುಮಾತನಾಡದೇ ಪುನಃ ಅದೇ ಸೀಟಿಗೆ ಅಂಡೂರಿದೆ.


ಮೂರು ನಿಮಿಷದ ಹಿಂದೆ ನಾ ಕೇಳಿದ್ದ ದ್ವಂದ್ವಾರ್ಥದ ಪ್ರಶ್ನೆಯನ್ನು ಮತ್ತೆ ಕೆದಕಿ "ಡಬಲ್ ಮೀನಿಂಗ್ ಡೈಲಾಗೆಲ್ಲಾ ನಂಗೆ ಅರ್ಥ ಆಗೋದಿಲ್ಲ ಅಂದ್ಕೊಂಡ್ಯಾ?" ಹುಸಿಗೋಪದಿಂದ ತಲೆಗೊಮ್ಮೆ ಮೊಟಕಿದಳು.

ಅವಳು ತಲೆ ಮೊಟಕಿದ್ದು ಇಷ್ಟವಾಗಲಿಲ್ಲ, ಆದರೂ ಅವಳ ಬಾಯಿಂದ ತೂರಿ ಬರುವ ಬಿರಿಯಾನಿಯ ದುರ್ವಾಸನೆಗಿಂತ ಇದೇ ಸಹಿಸಬಲ್ ಎಂದೆನಿಸಿ. "ಅರ್ಥವಾಗಿದ್ದರೆ ಉತ್ತರಿಸಬಹುದು" ಎಂದು ವರ್ಣಿಸಲಾಗದ ಧಾಟಿಯಲ್ಲಿ ಹೇಳಿದೆ.

"ಮುಂದಿನ ನಿಲ್ದಾಣವೇ ನನ್ನ ಕೊನೇ ನಿಲ್ದಾಣ ಅಂತ ನಿರ್ಧಾರ ಮಾಡಿದ್ದೀನಿ"

"ಓಹೋ.. ಅದ್ಯಾವ ಲೋಕದಲ್ಲಿದೆ?"

"ನಮ್ಮ ಮನೆಗೆ ತುಂಬಾ ದೂರವೂ ಅಲ್ಲ, ತುಂಬಾ ಹತ್ತಿರವೂ ಇಲ್ಲ"

"ಸರಿಯಾಗಿ ಹೇಳು, ಅಡ್ಡಗೋಡೆಯ ಮೇಲೆ ದೀಪ ಇಡಬೇಡ"

"ನನ್ನ ಕೊನೆಯ ನಿಲ್ದಾಣ ನಿಮ್ಮ ಮನೆ" ಡೈರೆಕ್ಟಾಗಿ ಅಲ್ಲದಿದ್ದರೂ ಅಫೀಶಿಯಲ್ಲಾಗಿ ಪ್ರಪೋಸ್ ಮಾಡಿಬಿಟ್ಟಳು.

"ವಾಟ್ ದ ಹೆಲ್!! ನಮ್ಮ ಮನೇನಾ? ಕನಸಲ್ಲೂ ಅದರ ಬಗ್ಗೆ ಯೋಚಿಸ್ಬೇಡ"

"ಯಾಕ್ ಯೋಚಿಸ್ಬಾರ್ದು..? ನೀನಂದ್ರೆ ನಂಗಿಷ್ಟ"

"ನಂಗೆ ನೀ ಇಷ್ಟ ಇಲ್ಲ, ಇಷ್ಟ ಆಗದೂ ಇಲ್ಲ.. ನೆನಪಿಟ್ಕೋ"

"ಓಹ್.. ಮೊನ್ನೆ ಮೊನ್ನೆ ತಾನೇ ಬೇರೆ ಹುಡುಗನ ಜೊತೆ ಓಡಾಡ್ತಾ ಇದ್ದೋಳು ಈಗ ನನ್ ಹತ್ರ ಬಂದಿದ್ದಾಳೆ ಅಂತ ಅಸಡ್ಡೆನಾ?"

"ಹಾಗೇ ಅಂದ್ಕೋ"

"ನಿಂದೂ ಒಂದ್ ಬ್ರೇಕಪ್ ಸ್ಟೋರಿ ಇರೋದು ನಂಗೆ ಗೊತ್ತಿಲ್ಲಾ ಅಂದ್ಕೊಡಿದ್ಯಾ?"

ನಾನೇ ಮರೆತಿದ್ದ ನನ್ನ ಹಳೆಯ ಕಥೆಗಳನ್ನೆಲ್ಲಾ ಅನ್ಯಾಯವಾಗಿ ಮತ್ತೆ ನೆನಪಿಸಿಬಿಟ್ಟಳು. ಅದರ ಗುಂಗಿನಿಂದ ಹೊರಬರುವಷ್ಟರಲ್ಲಿ ತೀರ್ಥಹಳ್ಳಿ ನಮ್ಮನ್ನು ಸ್ವಾಗತಿಸುತ್ತಿತ್ತು.

"ಹೇಳು.. ನನ್ನನ್ಯಾಕೆ ಒಪ್ಕೊಳ್ಳೋದಿಲ್ಲ?" ಕೈ ಕಟ್ಟಿ ಕುಳಿತವಳು ಗಂಭೀರವಾಗಿ ಪ್ರಶ್ನಿಸಿದಳು.

"ತೀರ್ಥಳ್ಳಿ ಇಳ್ಯೋರು ಮುಂದೆ ಬನ್ನಿ.. ತೀರ್ಥಳ್ಳಿ ತೀರ್ಥಳ್ಳಿ..." ಕಂಡಕ್ಟರ್‌ಗಳೇ ರೂಪಿಸಿಕೊಂಡ ವಿಚಿತ್ರ ಧಾಟಿಯ ಕೂಗು ಕಿವಿ ಹೊಕ್ಕಿತು. 

"ಎದ್ದೇಳು, ಬಸ್‌ಸ್ಟ್ಯಾಂಡ್ ಬಂತು. ಮಳೆ ಸ್ವಲ್ಪ ಕಮ್ಮಿಯಾಗಿದೆ ಬೇಗ ಇಳ್ಕೊಳ್ಳೋಣ"

"ನನ್ ಯಾಕ್ ಒಪ್ಕೊಳ್ಳೋದಿಲ್ಲ" ಯಥಾವತ್ತು ಅದೇ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಳು.

"ಯಾಕಂದ್ರೆ ನೀನು ಸುಭಾನಾ ಖಾನ್!!"

ಏನೂ ಅರ್ಥವಾಗದವಳಂತೆ ಪ್ರಶ್ನಾರ್ಥಕವಾಗಿ ದಿಟ್ಟಿಸಿದಳು. ಅವಳ ನೋಟವನ್ನು ಎದುರಿಸಲಾಗದೆ ದೀರ್ಘ ಉಸಿರನ್ನೊಮ್ಮೆ ಎಳೆದು ಕಣ್ಮುಚ್ಚಿಕೊಂಡೆ.

ಅವಳು ಸುಭಾನಾ ಖಾನ್, ಶಫೀ ಸಾಹೇಬರ ಮಗಳು. ನಮ್ಮ ಮನೆಯಿಂದ ಐದುನೂರು ಮೀಟರ್ ದೂರ ಕ್ರಮಿಸಿದರೆ ಅವರ ಮನೆ. ಅದಕ್ಕಿಂತಲೂ ಹೆಚ್ಚಾಗಿ ಶಫೀ ಸಾಹೇಬರಿಗೆ ನಮ್ಮ ಮನೆಯ ಮೇಲೆ ವಿಶೇಷ ಅಭಿಮಾನ. ಸಾಹೇಬರು ನಮ್ಮ ಮನೆಯ ಸಿಪ್ಪೆಗೋಟಿಗೆ ಖಾಯಂ ಗಿರಾಕಿ ಅಲ್ಲದೇ ಊರಿನ ಇತರೆ ಮನೆಗಳಿಗಿಂತ ಸಾವಿರ ರುಪಾಯಿ ಜಾಸ್ತಿ ಕೊಟ್ಟು ಖರೀದಿಸುತ್ತಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಅವರು ಬರುವುದು, ಅವರ ಮನೆಗೆ ನಾವು ಹೋಗುವುದು ನಡೆದೇ ಇತ್ತು. ಬ್ರಾಹ್ಮಣ ಕೇರಿಯ ಪ್ರಭಾವವೋ? ಏನೋ? ಶಫೀ ಸಾಹೇಬರ ಮನೆಯಲ್ಲಿ ಮಾಂಸಾಹಾರ ನಿಷೇಧವಿತ್ತು, ಅವರ ಮನೆಯವರ‌್ಯಾರೂ ಹೊರಗೆ ಹೋದಾಗಲೂ ಸಹ ಮಾಂಸ ಸೇವಿಸುತ್ತಿರಲಿಲ್ಲ. ಇಂತಹ ಮನೆಯಲ್ಲಿ ಹುಟ್ಟಿದ ಸುಭಾನಾ ಮಾತ್ರ ಅಪ್ಪಟ ಮಾಂಸಾಹಾರ ಪ್ರೇಮಿ, ಇದಕ್ಕೆ ಕಾರಣ ಆಕೆ ಬಾಲ್ಯದಿಂದಲೂ ಅಜ್ಜನ ಮನೆಯಲ್ಲಿ ಬೆಳೆದದ್ದಾಗಿತ್ತು. ಆದ್ದರಿಂದ ವರ್ಷದಲ್ಲಿ ಎರಡು ತಿಂಗಳು ಬೇಸಿಗೆ ರಜೆಗೆಂದು ಊರಿಗೆ ಬಂದಾಗ ನಾವು ಸುಭಾನಾಳನ್ನು ನೋಡುವುದು ಬಿಟ್ಟರೆ ಮಾತನಾಡಿ ಪರಿಚಯವಿರಲಿಲ್ಲ. ಮೊದಲೇ ಪೌರೋಹಿತ್ಯ ಕುಟುಂಬವಾದ್ದರಿಂದ ಮಾಂಸಾಹಾರಿ ಸುಭಾನಾಳನ್ನು ನಮ್ಮ ಮನೆಗೆ ಕರೆಯುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಡಿಗ್ರಿ ಓದಲೆಂದು ಶಿವಮೊಗ್ಗದ ಕಾಲೇಜಿಗೆ ಸೇರಿದಾಗ ಅವಳದ್ದೂ ಅದೇ ಕಾಲೇಜಾದ್ದರಿಂದ ಅಲ್ಲಿ ಮಾತು ಆರಂಭವಾಯಿತು, ಅವಳ ತೀರಾ ವಟಗುಟ್ಟುವ ಸ್ವಭಾವ ನನಗೆ ಹಿಡಿಸುತ್ತಿರಲಿಲ್ಲವಾದ್ದರಿಂದ ಜಾಸ್ತಿ ಸಲುಗೆಯನ್ನೂ ಬೆಳೆಸಿಕೊಂಡಿರಲಿಲ್ಲ. ಇಂತಿಪ್ಪ ಸುಭಾನಾ ನನ್ನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದಾಗ ಅಕ್ಷರಶಃ ದಂಗುಬಡಿದಿತ್ತು.

ಡ್ರೈವರ್ ಬಾಗಿಲು `ಫಟ್' ಅಂತ ಶಬ್ಧ ಮಾಡಿತು, ಹಿಂದೆಯೇ ಮೊಳಗಿದ ಕರ್ಕಶ ಹಾರನ್ ನನ್ನನ್ನು ಸಂಪೂರ್ಣ ಎಚ್ಚರಿಸಿತು. ಪಕ್ಕದಲ್ಲಿದ್ದ ಸುಭಾನಾ ಅದಾಗಲೇ ಇಳಿದು ಹೋಗಾಗಿತ್ತು, ಮಳೆ ಮತ್ತೆ ಜೋರಾಗಿದ್ದರಿಂದ ಪಟಪಟನೆ ಬಸ್ಸಿಳಿದು ಓಡತೊಡಗಿದೆ.

ಮುಖದ ಮೇಲೆ ಹನಿಗಳ ಪ್ರೋಕ್ಷಣೆ ನಡೆಯುತ್ತಿತ್ತು, ಎಷ್ಟೇ ತಪ್ಪಿಸಿಕೊಳ್ಳಲೆತ್ನಿಸಿದರೂ ಆಗುತ್ತಿಲ್ಲ. ಇದೇಕೋ ಕನಸು ಕಾಣುತ್ತಿರಬೇಕೆಂದೆನಿಸಲು ಅದಕ್ಕೆ ಸಾಕ್ಷಿಯೆಂಬಂತೆ "ಮಲಗಿದ್ದು ಸಾಕು, ಎದ್ದೇಳು" ಎಂಬ ದನಿ ಕಿವಿಹೊಕ್ಕಿತು. ದೇವರ ಮನೆಯಲ್ಲಿ ಅಪ್ಪ ಪಠಿಸುತ್ತಿದ್ದ ಮಂತ್ರದೊಂದಿಗೆ ಒಂದೇ ಲಯದಲ್ಲಿ ಹೊಮ್ಮುತ್ತಿದ್ದ ಘಂಟಾನಾದ ನನ್ನನ್ನು ವಾಸ್ತವದತ್ತ ಎಳೆದು ತರುವ ಪ್ರಯತ್ನದಲ್ಲಿ ನಿರತವಾಗಿತ್ತು. ನಿದ್ರೆಯ ಮಂಪರು ಸಂಪೂರ್ಣ ಇಳಿದಿರಲಿಲ್ಲ ಹನಿಗಳ ಸಂಪ್ರೋಕ್ಷಣೆಯೂ ಮುಂದುವರೆದಿತ್ತು... ಫಟ್ಟನೆ ಕಣ್ಬಿಟ್ಟೆ ಮುಗುಳ್ನಗುತ್ತಾ ನಿಂತಿದ್ದ ಹೆಂಡತಿ ನೀರು ಚಿಮುಕಿಸುವುದನ್ನು ನಿಲ್ಲಿಸಿ "ಎದ್ದೇಳಿ ಪತಿರಾಯರೇ" ಎಂದು ಹೊದಿಕೆ ಎಳೆದಾಗ ತಲೆಯಲ್ಲಿ ವಿಜೃಂಭಿಸುತ್ತಿದ್ದ ಹಳೆಯ ನೆನಪುಗಳ ಮೆರವಣಿಗೆ ಇನ್ನೂ ನಿಂತಿರಲಿಲ್ಲ. ಹತ್ತಿರ ಬಂದು "ಆಹ್" ಎಂದು ಬಿಸಿಗಾಳಿಯ ಮುಖಕ್ಕೆ ಊದಲು ಮಲೆನಾಡಿನ ಕಾಫಿಯ ಘಮ ಮೂಗಿಗೆ ಬಡಿದು ಎಂದೋ ಆಘ್ರಾಣಿಸಿದ್ದ ಶ್ಯಾಂಪೂವಿನ ಘಮವೂ ಸೋಕಿದಂತಾಯ್ತು, ಬಿರಿಯಾನಿಯ ವಾಸನೆ ನಿಂತು ವರ್ಷಗಳೇ ಉರುಳಿದ್ದವು, ಅವಳ ತುಂಟಾಟವ ನೋಡಿ ಮುಗುಳ್ನಗುತ್ತಿರಲು, ಹಣೆಗೆ ಹೂ ಮುತ್ತಿಟ್ಟು.. "ತುಂಬಾ ಮಳೆ ಅಲ್ವಾ?" ಎಂದು ಕಣ್ಣು ಮಿಟುಕಿಸಿದಳು.. ಅಷ್ಟರಲ್ಲೇ ಅಡುಗೆ ಮನೆಯಿಂದ "ಸುಭಾನಾ.. ಸ್ಕಂದ ಇನ್ನೂ ಎದ್ದಿಲ್ವೇನೇ?" ಎಂಬ ಅಮ್ಮನ ಕೂಗು ಕೇಳಿಬರಲು.. "ಎಬ್ಸಿದ್ದೀನಿ ಅತ್ತೆ" ಎನ್ನುತ್ತಾ ಮಲಗಿದ್ದ ನನ್ನ ಭುಜ ತಿವಿದು ಬೇಗ ಎದ್ದೇಳು ಎಂದು ಆಜ್ಞಾಪಿಸಿ ಕೋಣೆಯಿಂದ ಆಚೆ ನಡೆದಳು.. ಸುರಿಯುತ್ತಿದ್ದ ಜೋರು ಮಳೆ ಕಿಟಕಿಗೆ ಬಡಿದು ಒಳ ಬರಲು ಹವಣಿಸುತ್ತಿತ್ತು..

_  ಸ್ಕಂದ ಆಗುಂಬೆ

(ಮೂಲಪ್ರತಿ)

ಈ ಕಥೆ "ತರಂಗ" ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಬರೆದ ಮೊದಲ ಕಥೆಯಾಗಿದೆ..

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...