ಆಷಾಢ ಮಾಸದ ಪುನರ್ವಸು ಮಳೆಯಿದ್ದಿರಬೇಕು, ನನ್ನ ಜೀವನದಲ್ಲಿ ಅಂತಹಾ ಮಳೆಯನ್ನು ಎಂದೂ ನೋಡಿರಲಿಲ್ಲ. ಅದ್ಯಾರ ಮೇಲಿನ ಮುನಿಸಿಗೆ ಮೋಡ ತನ್ನ ಗರ್ಭವನ್ನು ಹಿಸುಕಿಕೊಂಡಿತ್ತೋ ಗೊತ್ತಿಲ್ಲ.
"ತುಂಬಾ ಮಳೆ ಅಲ್ವಾ?" ಹಳೆಯ ಮೂಕಾಂಬಿಕಾ ಬಸ್ಸಿನ ಕಿಟಕಿ ಸಂದಿಯಿಂದ ಒಳಹೊಕ್ಕು ಸೀಟನ್ನಾಕ್ರಮಿಸಿಕೊಳ್ಳಲು ಯತ್ನಿಸುತ್ತಿದ್ದ ಮಳೆ ನೀರಿನಾಸೆಗೆ ಕಲ್ಲು ಹಾಕಲು ಹೆಣಗಾಡುತ್ತಿದ್ದ ನನ್ನೆಡೆಗೆ ನಾಟಕೀಯವಾಗಿಯೇ ಪ್ರಶ್ನೆಯೊಂದನ್ನು ತೂರಿದಳು. "ವಿಷ್ಯಕ್ಕೆ ಬಾ" ತುಂಬಾ ಸ್ಪಷ್ಟವಾಗಿ ಹೇಳಿದೆ. ತನ್ನ ಹಳೇ ಸ್ಟೈಲಿನಲ್ಲೇ ಮುಂಗುರುಳು ಸರಿಸುತ್ತಾ, ಇರಿಸುಮುರಿಸಾದವಳಂತೆ ಒಂದಿಂಚು ದೂರ ಸರಿದು ಕೂರುವಷ್ಟರಲ್ಲಿ ಏಜೆಂಟರ್ ದೇವಣ್ಣ ನನ್ನೆಡೆಗೆ ಪರಿಚಿತದ ನಗು ಬೀರಿ, ಎರಡೂ ಟಿಕೆಟ್ ನೀನೇ ಮಾಡಿಸ್ತೀಯಾ? ಅಂತ ಕಣ್ಸನ್ನೆಯಲ್ಲೇ ಕೇಳಲು, ಹುಡುಗಿಯರು ಜೊತೆಗಿದ್ದಾಗ ಅವರ ಖರ್ಚನ್ನು ನಾವೇ ಭರಿಸಬೇಕೆಂಬ ಅಲಿಖಿತ ನಿಯಮವನ್ನು ಪಾಲಿಸುವ ಸಲುವಾಗಿ ಮಳೆಯಲ್ಲಿ ನೆಂದು ಒಂದಕ್ಕೊಂದು ಬೆಸೆದುಕೊಂಡಿದ್ದ ಐವತ್ತು ರೂಪಾಯಿಯ ಎರಡು ನೋಟುಗಳನ್ನು ಅಂಗಿಯ ಜೇಬಿನಿಂದ ಜೋಪಾನವಾಗಿ ಹೊರಗೆಳೆದು ದೇವಣ್ಣನ ಕೈಗಿತ್ತು "ಒಂದ್ ತೀರ್ಥಹಳ್ಳಿ, ಒಂದ್ ಮಂಡಗದ್ದೆ" ಎಂದು ಅದಾಗ ತಾನೇ ಬಂದಿದ್ದ ಡಿಜಿಟಲ್ ಟಿಕೆಟ್ ಮಶೀನಿನಿಂದ ಕಿರ್ರ್ ಕಿರ್ರ್ ಎಂದು ಸದ್ದು ಮಾಡುತ್ತಾ ಹೊರ ಬರುತ್ತಿದ್ದ ಟಿಕೆಟ್ ಚೀಟಿಯನ್ನು ಗಮನಿಸುತ್ತಾ ಕುಳಿತೆ.
"ಮಂಡಗದ್ದೇಲಿ ಇಳಿತ್ಯಾ? ಅಲ್ಲೇನ್ ಕೆಲ್ಸ?" ಅವಳ ಮಾತಿನಲ್ಲಿ ಅಸಮಾಧಾನವಿದ್ದಂತಿತ್ತು.
"ಕೆಲ್ಸ ಏನಿಲ್ಲ, ಅಲ್ ಇಳ್ಕೊಂಡು ಹಿಂದಿನ್ ಬಸ್ಸಲ್ಲಿ ಬರ್ತೀನಿ,"
"ಇದ್ರಲ್ಲಿ ಸೀಟ್ ಸಿಕ್ಕಿದ್ಯಲ್ಲಾ.. ಇನ್ನೇನ್ ತೊಂದ್ರೆ ನಿಂಗೆ?"
"ಸ್ವಲ್ಪ ಮಾತಾಡೋದಿದೆ ಅಂತ ನೀ ಹೇಳಿದ್ದಕ್ಕೋಸ್ಕರ ಬಂದಿರೋದು, ಮಂಡಗದ್ದೆ ತಲುಪೋಕೆ ಇನ್ನೂ ನಲವತ್ತು ನಿಮ್ಷ ಇದೆ. ಅಷ್ಟರಲ್ಲಿ ಏನ್ ಮಾತಾಡ್ಬೇಕೋ ಆಡಿ ಮುಗಿಸಿಬಿಡು"
"ಮಂಡಗದ್ದೇಲಿ ಯಾಕ್ ಇಳ್ಯೋದು?"
"ಅದು ನನ್ನಿಷ್ಟ, ನೀನು ಏನ್ ಹೇಳ್ಬೇಕು ಅಂತಿದ್ಯೋ ಅದನ್ನ ಮೊದ್ಲು ಹೇಳು,"
"ಪದೇ ಪದೇ ಅದನ್ನೇ ಹೇಳ್ಬೇಡ, ಯಾವಾಗ ಮಾತಾಡ್ಬೇಕು ಅಂತ ನಂಗೊತ್ತು"
ಸೀಟಿಗೆ ಅಂಟಿದ್ದ ಹನಿಗಳನ್ನು ಅಲ್ಲಿಂದ ಓಡಿಸಿ, ಅದೇ ಸೀಟಿಗೆ ಒರಗಿ ಕಣ್ಮುಚ್ಚಿದೆ, ಬಸ್ಸು ಶಿವಮೊಗ್ಗ ದಾಟಿ ಗಾಜನೂರನ್ನು ಸಮೀಪಿಸಿತ್ತು.
"ನಿದ್ದೆ ಬರ್ತಿದ್ಯಾ?" ರೊಮ್ಯಾಂಟಿಕ್ಕಾಗಿ ಕೇಳಿದ್ಳು.
"ನಂಗೆ ನಿದ್ದೆ ಮಾಡೋ ಜಾಗದಲ್ಲಿ ನೆಮ್ಮದಿ ಇರ್ಬೇಕು" ಗಡುಸಾಗಿ ಹೇಳಿದೆ.
"ಅದ್ಯಾಕೆ ನಾ ಮಾತಾಡಿದ್ರೆ ಉರಿದು ಬೀಳ್ತೀಯಾ?"
ಅವಳ ಮಾತಿಗಿಂತ ಸುರಿಯುವ ಮಳೆಯ ಶಬ್ಧವೇ ಆಹ್ಲಾದಕರವೆನಿಸಿತ್ತಿರಬೇಕು ಅಥವಾ ಅವಳ ಪ್ರಶ್ನೆಗೆ ಉತ್ತರ ಹುಡುಕಲು ಆಸಕ್ತಿ ಇಲ್ಲದೇ ಸುಮ್ಮನಾಗಿದ್ದಿರಬೇಕು". ನಮ್ಮಿಬ್ಬರ ಮಧ್ಯದಲ್ಲಿ ನೆಮ್ಮದಿಯಾಗಿ ಉಸಿರಾಡಿಕೊಂಡು ಬಿದ್ದಿದ್ದ ಒಂದೂವರೆ ಇಂಚು ಜಾಗದ ಮೇಲೆ ಹೊಟ್ಟೆಕಿಚ್ಚಾದವಳಂತೆ ಸರಕ್ಕನೆ ಸರಿದು ಮೈಗಂಟಿಕೊಂಡು ಭುಜದ ಮೇಲೆ ತಲೆಯಿಟ್ಟಳು.
ಅವಳ ತಲೆಗೂದಲಿನೊಂದಿಗೆ ಲೀನವಾಗಿದ್ದ ಶ್ಯಾಂಪೂವಿನ ಘಮ ಮೂಗಿನ ಹೊಳ್ಳೆಯ ಪ್ರವೇಶಿಸಲು ಹವಣಿಸುತ್ತಿರುವಾಗಲೇ ಅದಕ್ಕೆ ಅನುವಾಗುವಂತೆ ದೀರ್ಘ ಉಸಿರನ್ನೊಮ್ಮೆ ಎಳೆದು, ಅಚಾನಕ್ಕಾಗಿ ಮುಖ ಸವರಿದ ಕೂದಲೆಳೆಗಳಿಂದ ಘಮ ಹೀರುವ ಕಾಯಕದಲ್ಲಿ ನಿರತವಾಗಿದ್ದೆ. ಅದೇ ವೇಳೆಯಲ್ಲಿ ಮೂರು ದಿನಗಳಿಂದ ನಿದ್ರೆಯನ್ನೇ ಮಾಡದ ಸಾಕ್ಷಾತ್ ಕುಂಭಕರ್ಣನ ತಂಗಿಯಂತೆ ಆಕೆ ಐದಂಗುಲದಗಲ ಬಾಯ್ತೆರೆಯಲು... ಶ್ಯಾಂಪೂವಿನ ಸುವಾಸನೆಗೆ ತದ್ವಿರುದ್ಧವಾದ ವಾಸನೆಯೊಂದು ರಪ್ಪನೆ ಮೂಗಿಗೆ ಬಡಿಯಿತು. ಬಹುಶಃ ಅಕ್ಬರ್ ಸಾಬರ ಡಾಭಾದ ಬಿರಿಯಾನಿಯದ್ದಿರಬೇಕು. ಶುದ್ಧ ಸಸ್ಯಾಹಾರಿ ಎಂಬ ಹಣೆಪಟ್ಟಿ ಹೊತ್ತು ಬೆಳೆದಿದ್ದವನಿಗೆ ಅದೇಕೋ ಸಹ್ಯವಾಗದೆ ಒಳಹೊಕ್ಕಿದ್ದ ವಾಸನೆಯನ್ನೆಲ್ಲಾ ಹೊರದಬ್ಬಲು ಯತ್ನಿಸಿ ಒಂದೆರಡು ಬಾರಿ ಉಸಿರ ಕಕ್ಕಿ ಕಿಟಕಿಯತ್ತ ಮುಖಮಾಡಿದೆ.
ಏದುಸಿರು ಬಿಡುತ್ತಿದ್ದ ಬಸ್ಸು ಸಕ್ರೆಬೈಲನ್ನು ತಲುಪಿಯಾಗಿದೆ ಎಂದು ಅರಿವಿಗೆ ಬಂದದ್ದು ಮಳೆಯ ಹೊಡೆತಕ್ಕೆ ಸಿಕ್ಕು ಏಕಾಂಗಿಯಾಗಿ ನಿಂತಿದ್ದ `ಆನೆ ಬಿಡಾರ'ವೆಂಬ ತುಕ್ಕು ಹಿಡಿದ ಹಸಿರು - ಬಿಳಿ ಮಿಶ್ರಿತ ಬೋರ್ಡನ್ನು ನೋಡಿದಾಗಲೇ. ನಲವತ್ತು ನಿಮಿಷಗಳ ಕಾಲಾವಧಿಯಲ್ಲಿ ಅರ್ಧಭಾಗ ಇತಿಹಾಸದ ಪುಟ ಸೇರಿಯಾಗಿತ್ತು, ಇನ್ನುಳಿದ ಅರ್ಧಭಾಗ ನಮ್ಮ ಮಾತುಗಳ ನಿರೀಕ್ಷೆಯಲ್ಲಿತ್ತೆನಿಸುತ್ತದೆ, ಅವುಗಳ ಪರ ವಕಾಲತ್ತು ವಹಿಸಿದವನಂತೆ "ಇಪ್ಪತ್ತು ನಿಮಿಷ ಬಾಕಿ ಇದೆ" ಎಂದೆ.
"ಅದ್ಯಾಕ್ ಒಳ್ಳೇ ಎಕ್ಸಾಮ್ ಹಾಲಲ್ಲಿರೋ ಇನ್ವಿಜಲೇಟರ್ ಥರ ಅರ್ಧಗಂಟೆ ಬಾಕಿ ಇದೆ, ಇಪ್ಪತ್ ನಿಮ್ಷ ಬಾಕಿ ಇದೆ ಅಂತ ಬಡ್ಕೋತೀಯಾ? ನಂಗೂ ಟೈಮ್ ನೋಡಕ್ ಬರುತ್ತೆ. ಮೊನ್ನೆಯಷ್ಟೇ ತಗೊಂಡಿರೋ ಫಾಸ್ಟ್ರ್ಯಾಕ್ ವಾಚ್ ಸರಿಯಾಗೇ ಟೈಮ್ ತೋರ್ಸುತ್ತೆ...." ಸೋ ಕಾಲ್ಡ್ ಎಕ್ಸ್‌ಪ್ರೆಸ್ ಬಸ್ಸೇ ನಾಚುವಂತೆ ವೇಗವಾಗಿ ಮಾತನಾಡುತ್ತಲೇ ಇದ್ದಳು.
"ಸುಳ್ ಹೇಳ್ಬೇಡ" ಬ್ರೇಕ್ ಹಾಕಿದೆ.
ವಾಟ್ ನಾನ್‌ಸೆನ್ಸ್ ಎನ್ನುವಂಥಾ ಸಿಗ್ನೇಚರ್ ಲುಕ್ ಕೊಟ್ಟು, ಸುಳ್ಳಾ? ಎಂಬ ಪ್ರಶ್ನಾರ್ಥಕದೊಂದಿಗೆ ಮೌನವಾದಳು. ಇಪ್ಪತ್ತು ಸೆಕೆಂಡುಗಳೂ ಸರಿದಿರಲಿಕ್ಕಿಲ್ಲ ಮರು ಉತ್ತರ ಕೊಡದೆ ಸುಮ್ಮನೆ ಕುಳಿತಿದ್ದ ನನಗೆ ಭುಜ ತಿವಿಯುತ್ತಾ "ಏನ್ ಸುಳ್ಳು ಅಂತ ಬೊಗಳ್ತ್ಯೋ? ಇಲ್ವೋ? ಎಂಬ ಆವಾಜಿನೊಂದಿಗೆ ಮತ್ತೆ ಮಾತು ಆರಂಭಿಸಿದಳು.
"ಆ ವಾಚ್ ನೀನ್ ತಗೊಂಡಿರೋದಲ್ಲ" ನಿರ್ಭಾವುಕನಾದರೂ ತುಸು ಗಟ್ಟಿಯಾಗಿಯೇ ಹೇಳಿದೆ. ಒಂದೈದು ಸೆಕೆಂಡುಗಳ ನಂತರ ಅಸಹನೆ ವ್ಯಕ್ತಪಡಿಸುತ್ತಾ -
"ಹೌದು, ಯಾರೋ ಒಬ್ರು ಕೊಟ್ಟಿದ್ದು.. ಏನಿವಾಗ?"
"ಮತ್ ಮತ್ತೆ ಸುಳ್ ಹೇಳ್ಬೇಡ"
"ನಿಂದ್ಯಾಕೋ ಅತಿಯಾಯ್ತು, ನಾನ್ ತಗೊಂಡಿರೋದಲ್ಲ ಅಂತ ಕ್ಲಿಯರ್ ಆಯ್ತು ತಾನೇ? ಇನ್ನೇನು?"
"ಅದಲ್ಲ, ಯಾರೋ ಒಬ್ರು ಕೊಟ್ಟಿದ್ದು ಅಂದ್ಯಲ್ಲಾ ಅದು ಸುಳ್ಳು"
"ನಿಂಗೆ ತಲೆ ಕೆಟ್ಟಿದ್ಯಾ? ನಿಜ್ವಾಗ್ಲೂ ಇದು ನಂಗೊಬ್ರು ಕೊಟ್ಟಿರೋ ವಾಚು"
"ಬಟ್, ಅದು `ಯಾರೋ ಒಬ್ರು' ಅಲ್ಲ... ದಟ್ಸ್ ಯುವರ್ ಬಾಯ್‌ಫ್ರೆಂಡ್ ನೋ?"
ಒಂದೈದು ಸೆಕೆಂಡುಗಳ ಕಾಲ ಹುಬ್ಬು ಗಂಟಿಕ್ಕಿಕೊಂಡವಳು "ಸ್ಸಾರಿ, ಅದು ಎಕ್ಸ್ ಬಾಯ್‌ಫ್ರೆಂಡ್" ಎಂದು ತುಂಬಾ ನೇರವಾಗಿಯೇ ಹೇಳಿದಳು.
ಮೊಬೈಲ್ ನೋಡಿದೆ, ಇನ್ನೂ ಹನ್ನೆರಡು ನಿಮಿಷಗಳು ಬಾಕಿ ಇದ್ದವು, ಹನ್ನೆರಡನೇ ನಿಮಿಷ ಗತವಾಗುವ ನಾಲ್ಕೈದು ಸೆಕೆಂಡುಗಳ ಮುಂಚೆ ಕುತೂಹಲ ಮಿಶ್ರಿತ ನೋಟದೊಂದಿಗೆ "ಎಕ್ಸ್ ಯಾವಾಗಾದ?" ಎನ್ನುತ್ತಾ ಕಥೆ ಕೇಳಲು ಸನ್ನದ್ಧನಾಗಿ ಅವಳತ್ತ ತಿರುಗಿ ಕುಳಿತೆ.
"ಉಫ್! ಅದೆಲ್ಲಾ ನಿಂಗ್ಯಾಕೆ?" ಸಿಡುಕಿದಳು.
ಅವಳು ಸಿಡುಕಿದ್ದಕ್ಕೇನೂ ಬೇಸರವಾಗಲಿಲ್ಲ ಆದರೆ ಬಿರಿಯಾನಿಯ ವಾಸನೆ ಮತ್ತೆ ಮೂಗಿಗೆ ಬಡಿದಿದ್ದರಿಂದ ನಿರ್ವಾಹ ಇಲ್ಲದೆ ಕಿಟಕಿಯತ್ತ ತಿರುಗಿದೆ.
"ಯಾಕೆ? ಏನು? ಅಂತ ತುಂಬಾ ಕೆದಕಬಾರ್ದು ಆಯ್ತಾ? ಹಾಗಿದ್ರೆ ಮಾತ್ರ ಹೇಳ್ತೀನಿ" ಬಹುಶಃ ಒಳಗಿದ್ದ ಮಾತುಗಳನ್ನು ಹೊರಹಾಕಲು ಒಳ್ಳೇ ಅವಕಾಶ ಎಂದೆನಿಸಿತೋ ಏನೋ? ವಿನಮ್ರ ಮಿಶ್ರಿತ ತವಕದ ಧ್ವನಿಯಲ್ಲಿ ಹೇಳಿದಳು.
ಕಿಟಕಿಯಾಚೆ ನೋಡುತ್ತಲೇ ಹ್ಞೂಂಗುಟ್ಟಿದೆ.
"ಆಕ್ಚುಯಲಿ ಅವನನ್ನ ನಾ ತುಂಬಾ ನಂಬಿದ್ದೆ, ನನ್ನ ಕನಸುಗಳಲ್ಲೆಲ್ಲಾ ಅವನೇ ಮುಖ್ಯ ಪಾತ್ರಧಾರಿಯಾಗಿದ್ದ. ಆದರೆ ಅವನಿಗೆ ನನ್ ಮೇಲಿರೋದು ಪ್ರೀತಿಯಲ್ಲ ಬದಲಿಗೆ ಸೆಕ್ಶುಯಲ್ ಅಟ್ರ್ಯಾಕ್ಷನ್ ಅಂತ ಗೊತ್ತಾದ ಮರುಕ್ಷಣದಿಂದ ಅವನೊಂದಿಗಿನ ಸಂಬಂಧದಲ್ಲಿ ಹಳಸಲು ವಾಸನೆ ಎದ್ದುಬಿಡ್ತು. ಸರಿ ಮಾಡ್ಕೊಳ್ಳೋ ಅವಕಾಶ ಇತ್ತು ಅನ್ಸುತ್ತೆ, ಆದ್ರೆ ಅವನ ಬಾಯಿಂದ ಅವತ್ತು ಹೊರ ಬಂದ ಮಾತುಗಳು ತೀರಾ ಗಲೀಜಾಗಿತ್ತು.. ಆಮೇಲ್..."
"ನಿನ್ನ ಬಾಯಿಂದ ಬರುವ ಬಿರಿಯಾನಿ ವಾಸನೆಯಂತೆ" ಎಂದು ಹೇಳಬೇಕೆನಿಸಿ.. ಕಿಸಕ್ಕನೆ ನಕ್ಕು, ಅಭಾಸವಾಗದಿರಲೆಂದು ಸೀನಿದವನಂತೆ ನಟಿಸಿ ಮೂಗೊರೆಸಿಕೊಳ್ಳುತ್ತಾ.. ನಕ್ಕಿದ್ದು ಅವಳ ಅರಿವಿಗೆ ಬಾರದಂತೆ ಹೇಗೋ ನಿಭಾಯಿಸಿದೆ.
ಮಾತು ಮುಂದುವರೆಯಿತು - "ಆಮೇಲಿಂದ ಅವನ ಮುಖ ನೋಡಿದ್ರೆ ಹೀಕರಿಕೆ ಬರುವಂತಾಗಿ ಹೋಯ್ತು. ಪ್ರೀತಿಸುತ್ತಿದ್ದೀನಿ ಎಂಬ ಒಂದೇ ಕಾರಣಕ್ಕೆ ನನ್ನ ದೇಹವನ್ನು ಅವನಿಗೆ ಸಮರ್ಪಿಸಿಕೊಂಡು ಸಂತೃಪ್ತಿ ಕೊಡುವಂಥಾ ಮೂರ್ಖಳಲ್ಲ ನಾನು, ಶುದ್ಧತೆಯಿಲ್ಲದ ಪ್ರೀತಿಯ ಸುಳಿಗೆ ಸಿಕ್ಕು ದೇಹವೂ ಅಶುದ್ಧವಾಗದಿರಲೆಂದು ಎದ್ದು ಬಂದುಬಿಟ್ಟೆ" ಸುದೀರ್ಘ ನಿಟ್ಟುಸಿರು ಬಿಟ್ಟಳು.
ಮಾತು ಕೇಳ ಕೇಳುತ್ತಲೇ ಅವಳೆಡೆಗೆ ತುಸು ಗೌರವ ಬೆಳೆದಿತ್ತು ಆದರೂ ಹುಡುಗಾಟಿಕೆಯಿಂದ "ಮುಂದಿನ ನಿಲ್ದಾಣ?" ಎಂಬ ದ್ವಂದ್ವಾರ್ಥದ ಪ್ರಶ್ನೆಯೊಂದನ್ನು ತೇಲಿಬಿಟ್ಟೆ.
"ಮುಂದಿನ ನಿಲ್ದಾಣ ಮಂಡಗದ್ದೆ" ಉತ್ತರದಲ್ಲಿ ಮುಗ್ಧತೆ ಇತ್ತು.
ನಸುನಕ್ಕು ಮೈಮುರಿಯುತ್ತಾ, "ಸರಿ.. ಇನ್ನೇನೂ ಕೆದಕೋದಿಲ್ಲ. ಮಂಡಗದ್ದೆ ಬಂತು ನಾ ಇಳೀತಿನಿ" ಸೀಟಿನಿಂದ ಎದ್ದು ಬಾಗಿಲ ಬಳಿ ತೆರಳಲು ಮುಂದಾದೆ.
"ಇದ್ಯಾಕೋ? ತೀರ್ಥಹಳ್ಳಿಗೆ ಟಿಕೆಟ್ ಮಾಡಿಸಿ ಮಂಡಗದ್ದೇಲಿ ಇಳೀತಿಯಾ?" ನಗು ವ್ಯಂಗ್ಯವಾಗಿತ್ತು. ಜೇಬಿನಲ್ಲಿದ್ದ ಟಿಕೆಟ್ ತೆಗೆದು ತೋರಿಸಿದೆ.
ಯುದ್ಧದಲ್ಲಿ ಎದುರಾಳಿಯ ಬಾಣಕ್ಕೆ ಪ್ರತಿಕಾರವಾಗಿ ಬಾಣ ಹೂಡುವ ಸೈನಿಕನಂತೆ ತನ್ನ ಪರ್ಸಿನಿಂದಲೂ ಟಿಕೆಟ್ಟೊಂದನ್ನು ಹೊರಗೆಳೆದು, ಏನನ್ನೋ ಸಾಧಿಸಿದ ಮುಖಭಾವದೊಂದಿಗೆ ಹುಬ್ಬು ಹಾರಿಸುತ್ತಾ ಮಂದನಗೆಯೊಂದಿಗೆ ಗುರಾಯಿಸಿದಳು.
ಅದ್ಯಾವುದೋ ಮಾಯಕದಲ್ಲಿ ಏಜೆಂಟರ್ ದೇವಣ್ಣ ಇಳಿಯುವ ಮೊದಲೇ ನಾ ಇಳಿಯುವ ನಿಲ್ದಾಣವನ್ನು ಮಂಡಗದ್ದೆಯಿಂದ ತೀರ್ಥಹಳ್ಳಿಗೆ ಮುಂದೂಡಿಸಿದ್ದಳು. ಅವಳ ದುಡ್ಡಲ್ಲೇ ಟಿಕೆಟ್ ಮಾಡಿಸಿದ್ದರೆ ಆಗಿದ್ದಾಗಲಿ ಅಂತ ಇಳಿದುಬಿಡುತ್ತಿದ್ದೆನೇನು! ಆದರೆ ಪುಣ್ಯಾತ್ಗಿತ್ತಿ ನನ್ನ ಅಂಗಿ ಜೇಬಿನಲ್ಲಿದ್ದ ನೋಟನ್ನು ಎಗರಿಸಿ ಟಿಕೆಟ್ ತೆಗೆದಿದ್ದಾಳೆಂಬ ಅರಿವಾದ ಮೇಲೆ ನನ್ನ ಆರ್ಥಿಕತೆಗೆ ನಷ್ಟವಾಗದಿರಲೆಂದು ಮರುಮಾತನಾಡದೇ ಪುನಃ ಅದೇ ಸೀಟಿಗೆ ಅಂಡೂರಿದೆ.
ಮೂರು ನಿಮಿಷದ ಹಿಂದೆ ನಾ ಕೇಳಿದ್ದ ದ್ವಂದ್ವಾರ್ಥದ ಪ್ರಶ್ನೆಯನ್ನು ಮತ್ತೆ ಕೆದಕಿ "ಡಬಲ್ ಮೀನಿಂಗ್ ಡೈಲಾಗೆಲ್ಲಾ ನಂಗೆ ಅರ್ಥ ಆಗೋದಿಲ್ಲ ಅಂದ್ಕೊಂಡ್ಯಾ?" ಹುಸಿಗೋಪದಿಂದ ತಲೆಗೊಮ್ಮೆ ಮೊಟಕಿದಳು.
ಅವಳು ತಲೆ ಮೊಟಕಿದ್ದು ಇಷ್ಟವಾಗಲಿಲ್ಲ, ಆದರೂ ಅವಳ ಬಾಯಿಂದ ತೂರಿ ಬರುವ ಬಿರಿಯಾನಿಯ ದುರ್ವಾಸನೆಗಿಂತ ಇದೇ ಸಹಿಸಬಲ್ ಎಂದೆನಿಸಿ. "ಅರ್ಥವಾಗಿದ್ದರೆ ಉತ್ತರಿಸಬಹುದು" ಎಂದು ವರ್ಣಿಸಲಾಗದ ಧಾಟಿಯಲ್ಲಿ ಹೇಳಿದೆ.
"ಮುಂದಿನ ನಿಲ್ದಾಣವೇ ನನ್ನ ಕೊನೇ ನಿಲ್ದಾಣ ಅಂತ ನಿರ್ಧಾರ ಮಾಡಿದ್ದೀನಿ"
"ಓಹೋ.. ಅದ್ಯಾವ ಲೋಕದಲ್ಲಿದೆ?"
"ನಮ್ಮ ಮನೆಗೆ ತುಂಬಾ ದೂರವೂ ಅಲ್ಲ, ತುಂಬಾ ಹತ್ತಿರವೂ ಇಲ್ಲ"
"ಸರಿಯಾಗಿ ಹೇಳು, ಅಡ್ಡಗೋಡೆಯ ಮೇಲೆ ದೀಪ ಇಡಬೇಡ"
"ನನ್ನ ಕೊನೆಯ ನಿಲ್ದಾಣ ನಿಮ್ಮ ಮನೆ" ಡೈರೆಕ್ಟಾಗಿ ಅಲ್ಲದಿದ್ದರೂ ಅಫೀಶಿಯಲ್ಲಾಗಿ ಪ್ರಪೋಸ್ ಮಾಡಿಬಿಟ್ಟಳು.
"ವಾಟ್ ದ ಹೆಲ್!! ನಮ್ಮ ಮನೇನಾ? ಕನಸಲ್ಲೂ ಅದರ ಬಗ್ಗೆ ಯೋಚಿಸ್ಬೇಡ"
"ಯಾಕ್ ಯೋಚಿಸ್ಬಾರ್ದು..? ನೀನಂದ್ರೆ ನಂಗಿಷ್ಟ"
"ನಂಗೆ ನೀ ಇಷ್ಟ ಇಲ್ಲ, ಇಷ್ಟ ಆಗದೂ ಇಲ್ಲ.. ನೆನಪಿಟ್ಕೋ"
"ಓಹ್.. ಮೊನ್ನೆ ಮೊನ್ನೆ ತಾನೇ ಬೇರೆ ಹುಡುಗನ ಜೊತೆ ಓಡಾಡ್ತಾ ಇದ್ದೋಳು ಈಗ ನನ್ ಹತ್ರ ಬಂದಿದ್ದಾಳೆ ಅಂತ ಅಸಡ್ಡೆನಾ?"
"ಹಾಗೇ ಅಂದ್ಕೋ"
"ನಿಂದೂ ಒಂದ್ ಬ್ರೇಕಪ್ ಸ್ಟೋರಿ ಇರೋದು ನಂಗೆ ಗೊತ್ತಿಲ್ಲಾ ಅಂದ್ಕೊಡಿದ್ಯಾ?"
ನಾನೇ ಮರೆತಿದ್ದ ನನ್ನ ಹಳೆಯ ಕಥೆಗಳನ್ನೆಲ್ಲಾ ಅನ್ಯಾಯವಾಗಿ ಮತ್ತೆ ನೆನಪಿಸಿಬಿಟ್ಟಳು. ಅದರ ಗುಂಗಿನಿಂದ ಹೊರಬರುವಷ್ಟರಲ್ಲಿ ತೀರ್ಥಹಳ್ಳಿ ನಮ್ಮನ್ನು ಸ್ವಾಗತಿಸುತ್ತಿತ್ತು.
"ಹೇಳು.. ನನ್ನನ್ಯಾಕೆ ಒಪ್ಕೊಳ್ಳೋದಿಲ್ಲ?" ಕೈ ಕಟ್ಟಿ ಕುಳಿತವಳು ಗಂಭೀರವಾಗಿ ಪ್ರಶ್ನಿಸಿದಳು.
"ತೀರ್ಥಳ್ಳಿ ಇಳ್ಯೋರು ಮುಂದೆ ಬನ್ನಿ.. ತೀರ್ಥಳ್ಳಿ ತೀರ್ಥಳ್ಳಿ..." ಕಂಡಕ್ಟರ್‌ಗಳೇ ರೂಪಿಸಿಕೊಂಡ ವಿಚಿತ್ರ ಧಾಟಿಯ ಕೂಗು ಕಿವಿ ಹೊಕ್ಕಿತು.
"ಎದ್ದೇಳು, ಬಸ್‌ಸ್ಟ್ಯಾಂಡ್ ಬಂತು. ಮಳೆ ಸ್ವಲ್ಪ ಕಮ್ಮಿಯಾಗಿದೆ ಬೇಗ ಇಳ್ಕೊಳ್ಳೋಣ"
"ನನ್ ಯಾಕ್ ಒಪ್ಕೊಳ್ಳೋದಿಲ್ಲ" ಯಥಾವತ್ತು ಅದೇ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಳು.
"ಯಾಕಂದ್ರೆ ನೀನು ಸುಭಾನಾ ಖಾನ್!!"
ಏನೂ ಅರ್ಥವಾಗದವಳಂತೆ ಪ್ರಶ್ನಾರ್ಥಕವಾಗಿ ದಿಟ್ಟಿಸಿದಳು. ಅವಳ ನೋಟವನ್ನು ಎದುರಿಸಲಾಗದೆ ದೀರ್ಘ ಉಸಿರನ್ನೊಮ್ಮೆ ಎಳೆದು ಕಣ್ಮುಚ್ಚಿಕೊಂಡೆ.
ಅವಳು ಸುಭಾನಾ ಖಾನ್, ಶಫೀ ಸಾಹೇಬರ ಮಗಳು. ನಮ್ಮ ಮನೆಯಿಂದ ಐದುನೂರು ಮೀಟರ್ ದೂರ ಕ್ರಮಿಸಿದರೆ ಅವರ ಮನೆ. ಅದಕ್ಕಿಂತಲೂ ಹೆಚ್ಚಾಗಿ ಶಫೀ ಸಾಹೇಬರಿಗೆ ನಮ್ಮ ಮನೆಯ ಮೇಲೆ ವಿಶೇಷ ಅಭಿಮಾನ. ಸಾಹೇಬರು ನಮ್ಮ ಮನೆಯ ಸಿಪ್ಪೆಗೋಟಿಗೆ ಖಾಯಂ ಗಿರಾಕಿ ಅಲ್ಲದೇ ಊರಿನ ಇತರೆ ಮನೆಗಳಿಗಿಂತ ಸಾವಿರ ರುಪಾಯಿ ಜಾಸ್ತಿ ಕೊಟ್ಟು ಖರೀದಿಸುತ್ತಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೆ ಅವರು ಬರುವುದು, ಅವರ ಮನೆಗೆ ನಾವು ಹೋಗುವುದು ನಡೆದೇ ಇತ್ತು. ಬ್ರಾಹ್ಮಣ ಕೇರಿಯ ಪ್ರಭಾವವೋ? ಏನೋ? ಶಫೀ ಸಾಹೇಬರ ಮನೆಯಲ್ಲಿ ಮಾಂಸಾಹಾರ ನಿಷೇಧವಿತ್ತು, ಅವರ ಮನೆಯವರ‌್ಯಾರೂ ಹೊರಗೆ ಹೋದಾಗಲೂ ಸಹ ಮಾಂಸ ಸೇವಿಸುತ್ತಿರಲಿಲ್ಲ. ಇಂತಹ ಮನೆಯಲ್ಲಿ ಹುಟ್ಟಿದ ಸುಭಾನಾ ಮಾತ್ರ ಅಪ್ಪಟ ಮಾಂಸಾಹಾರ ಪ್ರೇಮಿ, ಇದಕ್ಕೆ ಕಾರಣ ಆಕೆ ಬಾಲ್ಯದಿಂದಲೂ ಅಜ್ಜನ ಮನೆಯಲ್ಲಿ ಬೆಳೆದದ್ದಾಗಿತ್ತು. ಆದ್ದರಿಂದ ವರ್ಷದಲ್ಲಿ ಎರಡು ತಿಂಗಳು ಬೇಸಿಗೆ ರಜೆಗೆಂದು ಊರಿಗೆ ಬಂದಾಗ ನಾವು ಸುಭಾನಾಳನ್ನು ನೋಡುವುದು ಬಿಟ್ಟರೆ ಮಾತನಾಡಿ ಪರಿಚಯವಿರಲಿಲ್ಲ. ಮೊದಲೇ ಪೌರೋಹಿತ್ಯ ಕುಟುಂಬವಾದ್ದರಿಂದ ಮಾಂಸಾಹಾರಿ ಸುಭಾನಾಳನ್ನು ನಮ್ಮ ಮನೆಗೆ ಕರೆಯುವ ಗೋಜಿಗೆ ಯಾರೂ ಹೋಗುತ್ತಿರಲಿಲ್ಲ. ಡಿಗ್ರಿ ಓದಲೆಂದು ಶಿವಮೊಗ್ಗದ ಕಾಲೇಜಿಗೆ ಸೇರಿದಾಗ ಅವಳದ್ದೂ ಅದೇ ಕಾಲೇಜಾದ್ದರಿಂದ ಅಲ್ಲಿ ಮಾತು ಆರಂಭವಾಯಿತು, ಅವಳ ತೀರಾ ವಟಗುಟ್ಟುವ ಸ್ವಭಾವ ನನಗೆ ಹಿಡಿಸುತ್ತಿರಲಿಲ್ಲವಾದ್ದರಿಂದ ಜಾಸ್ತಿ ಸಲುಗೆಯನ್ನೂ ಬೆಳೆಸಿಕೊಂಡಿರಲಿಲ್ಲ. ಇಂತಿಪ್ಪ ಸುಭಾನಾ ನನ್ನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದಾಗ ಅಕ್ಷರಶಃ ದಂಗುಬಡಿದಿತ್ತು.
ಡ್ರೈವರ್ ಬಾಗಿಲು `ಫಟ್' ಅಂತ ಶಬ್ಧ ಮಾಡಿತು, ಹಿಂದೆಯೇ ಮೊಳಗಿದ ಕರ್ಕಶ ಹಾರನ್ ನನ್ನನ್ನು ಸಂಪೂರ್ಣ ಎಚ್ಚರಿಸಿತು. ಪಕ್ಕದಲ್ಲಿದ್ದ ಸುಭಾನಾ ಅದಾಗಲೇ ಇಳಿದು ಹೋಗಾಗಿತ್ತು, ಮಳೆ ಮತ್ತೆ ಜೋರಾಗಿದ್ದರಿಂದ ಪಟಪಟನೆ ಬಸ್ಸಿಳಿದು ಓಡತೊಡಗಿದೆ.
ಮುಖದ ಮೇಲೆ ಹನಿಗಳ ಪ್ರೋಕ್ಷಣೆ ನಡೆಯುತ್ತಿತ್ತು, ಎಷ್ಟೇ ತಪ್ಪಿಸಿಕೊಳ್ಳಲೆತ್ನಿಸಿದರೂ ಆಗುತ್ತಿಲ್ಲ. ಇದೇಕೋ ಕನಸು ಕಾಣುತ್ತಿರಬೇಕೆಂದೆನಿಸಲು ಅದಕ್ಕೆ ಸಾಕ್ಷಿಯೆಂಬಂತೆ "ಮಲಗಿದ್ದು ಸಾಕು, ಎದ್ದೇಳು" ಎಂಬ ದನಿ ಕಿವಿಹೊಕ್ಕಿತು. ದೇವರ ಮನೆಯಲ್ಲಿ ಅಪ್ಪ ಪಠಿಸುತ್ತಿದ್ದ ಮಂತ್ರದೊಂದಿಗೆ ಒಂದೇ ಲಯದಲ್ಲಿ ಹೊಮ್ಮುತ್ತಿದ್ದ ಘಂಟಾನಾದ ನನ್ನನ್ನು ವಾಸ್ತವದತ್ತ ಎಳೆದು ತರುವ ಪ್ರಯತ್ನದಲ್ಲಿ ನಿರತವಾಗಿತ್ತು. ನಿದ್ರೆಯ ಮಂಪರು ಸಂಪೂರ್ಣ ಇಳಿದಿರಲಿಲ್ಲ ಹನಿಗಳ ಸಂಪ್ರೋಕ್ಷಣೆಯೂ ಮುಂದುವರೆದಿತ್ತು... ಫಟ್ಟನೆ ಕಣ್ಬಿಟ್ಟೆ ಮುಗುಳ್ನಗುತ್ತಾ ನಿಂತಿದ್ದ ಹೆಂಡತಿ ನೀರು ಚಿಮುಕಿಸುವುದನ್ನು ನಿಲ್ಲಿಸಿ "ಎದ್ದೇಳಿ ಪತಿರಾಯರೇ" ಎಂದು ಹೊದಿಕೆ ಎಳೆದಾಗ ತಲೆಯಲ್ಲಿ ವಿಜೃಂಭಿಸುತ್ತಿದ್ದ ಹಳೆಯ ನೆನಪುಗಳ ಮೆರವಣಿಗೆ ಇನ್ನೂ ನಿಂತಿರಲಿಲ್ಲ. ಹತ್ತಿರ ಬಂದು "ಆಹ್" ಎಂದು ಬಿಸಿಗಾಳಿಯ ಮುಖಕ್ಕೆ ಊದಲು ಮಲೆನಾಡಿನ ಕಾಫಿಯ ಘಮ ಮೂಗಿಗೆ ಬಡಿದು ಎಂದೋ ಆಘ್ರಾಣಿಸಿದ್ದ ಶ್ಯಾಂಪೂವಿನ ಘಮವೂ ಸೋಕಿದಂತಾಯ್ತು, ಬಿರಿಯಾನಿಯ ವಾಸನೆ ನಿಂತು ವರ್ಷಗಳೇ ಉರುಳಿದ್ದವು, ಅವಳ ತುಂಟಾಟವ ನೋಡಿ ಮುಗುಳ್ನಗುತ್ತಿರಲು, ಹಣೆಗೆ ಹೂ ಮುತ್ತಿಟ್ಟು.. "ತುಂಬಾ ಮಳೆ ಅಲ್ವಾ?" ಎಂದು ಕಣ್ಣು ಮಿಟುಕಿಸಿದಳು.. ಅಷ್ಟರಲ್ಲೇ ಅಡುಗೆ ಮನೆಯಿಂದ "ಸುಭಾನಾ.. ಸ್ಕಂದ ಇನ್ನೂ ಎದ್ದಿಲ್ವೇನೇ?" ಎಂಬ ಅಮ್ಮನ ಕೂಗು ಕೇಳಿಬರಲು.. "ಎಬ್ಸಿದ್ದೀನಿ ಅತ್ತೆ" ಎನ್ನುತ್ತಾ ಮಲಗಿದ್ದ ನನ್ನ ಭುಜ ತಿವಿದು ಬೇಗ ಎದ್ದೇಳು ಎಂದು ಆಜ್ಞಾಪಿಸಿ ಕೋಣೆಯಿಂದ ಆಚೆ ನಡೆದಳು.. ಸುರಿಯುತ್ತಿದ್ದ ಜೋರು ಮಳೆ ಕಿಟಕಿಗೆ ಬಡಿದು ಒಳ ಬರಲು ಹವಣಿಸುತ್ತಿತ್ತು..
_ ಸ್ಕಂದ ಆಗುಂಬೆ
(ಮೂಲಪ್ರತಿ)
ಈ ಕಥೆ "ತರಂಗ" ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಾನು ಬರೆದ ಮೊದಲ ಕಥೆಯಾಗಿದೆ..






