Thursday, 27 February 2020

ಅಜ್ಜ ನಡೆದ ಹಾದಿಯಲ್ಲೀಗ ಗರಿಕೆ ಹುಟ್ಟಿದೆ.



ಅಜ್ಜ ಇನ್ನೊಂದಷ್ಟು ವರ್ಷ ಇರಬೇಕಿತ್ತು..



ಈ ಮಾತನ್ನ ಒಂದು ವರ್ಷದೊಳಗೆ ಅದೆಷ್ಟು ಸಲ ಹೇಳಿದ್ದೇನೋ ಲೆಕ್ಕವಿಲ್ಲ‌. ಇವತ್ತಿಗೂ ಅಜ್ಜನ ಬಗ್ಗೆ ಮಾತನಾಡಲು ಶುರುಮಾಡಿದರೆ ಗಂಟೆಗಟ್ಟಲೆ ಮಾತು ಸಾಗುತ್ತದೆ.

ಅಜ್ಜನ ಎಲೆ ಅಡಿಕೆ ತುಂಬಿದ ಬಾಯಿ, ಇದ್ದೂ ಇರದಂತಿದ್ದ ನಗು, ತೂಕದ ಮಾತು, ಶಿಸ್ತು, ಗತ್ತು, ಗಾಂಭೀರ್ಯ, ಇನ್ನೊಬ್ಬರ ಕುರಿತಾದ ಕಾಳಜಿ, ಗಣಪತಿಯ ಮೇಲಿದ್ದ ಭಕ್ತಿ...

ಅಜ್ಜನ ಬಗ್ಗೆ ಹೇಳೋಕೆ ಕೂತರೆ ಪಟ್ಟಿ ಉದ್ದವಾಗುತ್ತಲೇ ಹೋಗುತ್ತೆ!!
ಅಜ್ಜನ ಬಗ್ಗೆ ಹೇಳೋಕೆ ಸಾಕಷ್ಟಿದೆ, ದೈಹಿಕವಾಗಿ ಕಣ್ಣೆದುರು ಇಲ್ಲವೆಂಬುದನ್ನು ಬಿಟ್ಟರೆ, ಅಜ್ಜ ನಮ್ಮೊಳಗೆ ಸದಾ ಜೀವಂತ.

ಗಣಪತಿಯ ಅಪ್ಪಟ ಭಕ್ತರಾಗಿದ್ದ ನನ್ನ ಅಜ್ಜ ಕಣ್ಮುಚ್ಚಿ ಒಂದು ವರ್ಷವಾಯ್ತು.

ಅಜ್ಜ ನಡೆದ ಹಾದಿಯಲ್ಲೀಗ ಗರಿಕೆ ಹುಟ್ಟಿದೆ.



05/10/2018 - 05/10/2019

ಮಾರುವೇಷ


ಮುಖವಾಡ ತೊಟ್ಟ ಮೇಲೆ ಸಕ್ಕರೆಷ್ಟು? ಅತ್ತರೆಷ್ಟು? ಎದುರು ನಿಂತವರಿಗೆ ಮುಖವಾಡದ ಭಾವವಷ್ಟೇ ಕಾಣುವಾಗ..
'ಯಾರಿಗೆ ಬೇಕು ಮುಖವಾಡ ಯಾರಿಗೆ ಬೇಕು?' ಎಂದು ಈ ಹುಡುಗ ಕರೆಯುತ್ತಿರಲು, ಜಗತ್ತು ಬೇಡವೋ ಹುಡುಗ ಇಲ್ಲಿ ಎಲ್ಲರೂ ಅವರವರ ಮುಖವಾಡ ಧರಿಸಿದವರೇ' ಎಂದು ಹೇಳುವಂತಿದೆ ಈ ದೃಶ್ಯ . ಎಷ್ಟೇ ತೊಟ್ಟರೂ, ಹೇಗೆ ತೊಟ್ಟರೂ, ಕೊನೆಗೊಂದು ದಿನ ಆ ಮುಖವಾಡ ಕಳಚಲೇಬೇಕು ಎನ್ನುವ ಸಂದೇಶ ಇಲ್ಲಿ ಕಾಣುತ್ತದೆ.
ಧರ್ಮಸ್ಥಳದಲ್ಲಿ ಕಳೆದವರ್ಷ ನಡೆದ ಲಕ್ಷದೀಪೋತ್ಸವದಲ್ಲಿ ಕಂಡ ಮುಖ ಭಾಷೆಯಿದು. 



(ಈ ಚಿತ್ರ-ಬರಹ ಉದಯವಾಣಿ ದಿನಪತ್ರಿಕೆಯ ಬಹುಮುಖಿ ಪುರವಣಿಯಲ್ಲಿ ಪ್ರಕಟವಾಗಿದೆ)

ಹಸಿರು ಪಾಠ



ಒಂದು ಕಾಡು, ಒಂದು ಕೊಡಲಿ
ಮರವ ಕಡಿಯಲೊಬ್ಬ ತೊಡಗಿ
ಕಡಿದು, ಕೆಡವಿ, ಮೈಯ ಕೊಡವಿ ಜೋರು ನಕ್ಕನು
ಮರದ ಹೆಣಕೆ ಉಳಿಯ ಹೊಡೆದು ರೂಪ ಕೊಟ್ಟನು.

ಒಂದು ಸೂರ್ಯ, ಒಂದು ದಿನ
ಸುಡುತಲಿತ್ತು ಬೋಳು ವನ
ಉರಿದು, ಹರಿದ ಬಿಸಿಲ ಶಾಖ ವನವ ಸುಟ್ಟಿತು
ಹಸಿರು ಲೋಕ ಬೆಂದು ಹೋಗಿ ಬಯಲು ಹುಟ್ಟಿತು.

ಒಂದು ಮೋಡ, ಒಂದು ಗುಡುಗು
ನಭದ ತುಂಬ ಮಿಂಚ ಸೊಬಗು
ಗುಡುಗು, ಸಿಡಿಲು, ಮೇಘಸ್ಪೋಟ ಮಳೆಯು ಸುರಿಯಿತು
ಗುಡ್ಡ, ಬೆಟ್ಟ, ಬಯಲು ದಾಟಿ ಊರು ಸೇರಿತು.

ಒಂದು ಮಳೆ, ಒಂದು ನದಿ
ಉಕ್ಕಿ ಹರಿವ ರೋಷದಲಿ
ಊರು-ಕೇರಿ ಮಾರುದೂರ ಕೊಚ್ಚಿ ಹೋಯಿತು
ಬದುಕು, ಕೊಡಲಿ, ಮರದ ಕೊರಡು ಕಡಲು ಸೇರಿತು.

ಒಂದು ನೆರೆ, ಒಂದು ನೋಟ
ಮನುಜ ಕುಲಕೆ ನೀತಿಪಾಠ
ಮರೆತು, ಮೆರೆದು, ನಡೆದರಿನ್ನು ಅಂತ್ಯ ಕಾದಿದೆ.
ಅರಿತು, ಕಲಿತು, ನಡೆವ ಸಮಯ ಸನಿಹ ಬಂದಿದೆ.

- ಸ್ಕಂದ ಆಗುಂಬೆ.


(ಈ ಪದ್ಯ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ)

ಬಾಪೂ ತತ್ವಗಳನ್ನು ಮುನ್ನೆಲೆಗೆ ತರುವ ವಿನೂತನ ಪ್ರಯತ್ನ : ಎಸ್.ಡಿ.ಎಂ ಪತ್ರಿಕೋದ್ಯಮ ವಿಭಾಗದಿಂದ ‘ಬಾಪೂ’ ವೆಬ್‌ಸಿರೀಸ್



ಮಹಾತ್ಮಗಾಂಧಿ ಪ್ರತಿಯೊಬ್ಬ ಭಾರತೀಯನ ಪಾಲಿಗೂ ಆದರ್ಶ ಪುರುಷ. ಅವರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಹಾಗೂ ಅನುಕರಣೀಯ. ಆದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅದನ್ನು ಅಳವಡಿಸಿಕೊಳ್ಳುವುದು ಹೇಗೆ ಎಂಬುದು ಮಾತ್ರ ಬಹುತೇಕರ ಮುಂದಿರುವ ಅತಿ ದೊಡ್ಡ ಪ್ರಶ್ನೆ. ಇಂತಹ ಅನುಮಾನಗಳಿಗೆ ಉತ್ತರವೆಂಬಂತೆ ಗಾಂಧೀಜಿಯನ್ನು ವರ್ತಮಾನಕ್ಕೆ ಅನ್ವಯಿಸಿ ಅವರ ತತ್ವಗಳು ಇಂದಿಗೂ ಪ್ರಸ್ತುತ ಎಂಬುದನ್ನು ತೋರಿಸಲು ಉಜಿರೆಯ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದೆ.
ಗಾಂಧೀಜಿ ಹಾಗೂ ಅವರ ತತ್ವಗಳನ್ನು ಇಂದಿನ ತಲೆಮಾರಿಗೆ ಸಲೀಸಾಗಿ ತಲುಪಿಸುವ ಉದ್ದೇಶದೊಂದಿಗೆ “ಬಾಪೂ” ಹೆಸರಿನ ವೆಬ್‌ಸೀರಿಸ್ ಆರಂಭಿಸಲಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಬಾಪೂ” ವರ್ತಮಾನದಲ್ಲಿ ಗಾಂಧೀಜಿಯವರ ಚಿಂತನೆ ಹೇಗೆ ಪ್ರಸ್ತುತ ಹಾಗೂ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸರಳವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿದೆ. ಕಾಲ್ಪನಿಕ ಸನ್ನಿವೇಶವೊಂದರಲ್ಲಿ ಶಾಲಾಮಕ್ಕಳನ್ನು ಹಾಗೂ ಗಾಂಧಿ ಪಾತ್ರವನ್ನು ಬಳಸಿಕೊಂಡು ಹೆಣೆಯಲಾಗುತ್ತಿರುವ ಕತೆಯಲ್ಲಿ ಗಾಂಧೀಜಿಯ ಚಿಂತನೆಗಳನ್ನು ಇಂದಿನ ತಲ್ಲಣಗಳ ನಡುವೆ ವ್ಯಕ್ತಪಡಿಸಲಾಗುತ್ತಿದೆ.
ಹೆಚ್ಚಾಗಿ ಸಿನಿಮಾ, ಕತೆ, ಉಪದೇಶಗಳಿಗಷ್ಟೇ ಸೀಮಿತವಾಗಿದ್ದ ಗಾಂಧೀಜಿಯನ್ನು ವೆಬ್‌ಸೀರೀಸ್ ಮೂಲಕ ತೋರಿಸಲು ಹಲವು ಪೂರ್ವತಯಾರಿಗಳನ್ನು ಮಾಡಿಕೊಂಡ ತಂಡ, ಗಾಂಧಿ ತತ್ವಗಳನ್ನು ಪಾಠದಂತೆ ಒಪ್ಪಿಸುವುದಕ್ಕಿಂತ ವರ್ತಮಾನಕ್ಕೆ ಅನ್ವಯಿಸಿ ಹೇಳಿದರೆ ಹೆಚ್ಚು ಪರಿಣಾಮಕಾರಿ ಎಂದು ಚಿಂತಿಸಿದ ಫಲವಾಗಿ “ಬಾಪೂ” ಶುರುವಾಗಿದೆ. ಈಗಾಗಲೇ ಆರಂಭಿಕ ನಾಲ್ಕು ಸಂಚಿಕೆಗಳಲ್ಲಿ ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಹಾಗೂ ಧರ್ಮ ಎಂಬ ನಾಲ್ಕು ವಿಚಾರಧಾರೆಗಳನ್ನೊಳಗೊಂಡ ಕತೆ ಮೂಡಿಬಂದಿದ್ದು ಪ್ರತಿಯೊಂದು ತತ್ವಗಳ ಮೂಲ ಉದ್ದೇಶ ಹಾಗೂ ಅವುಗಳ ಸಾರ್ವಕಾಲಿಕತೆಯನ್ನು ಸೊಗಸಾಗಿ ವಿವರಿಸಲಾಗಿದೆ.
ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅವರ ಪರಿಕಲ್ಪನೆಯಲ್ಲಿ “ಬಾಪೂ” ಮೂಡಿಬರುತ್ತಿದ್ದು ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ್ ಹೆಗಡೆ ಅವರ ಪ್ರೋತ್ಸಾಹದೊಂದಿಗೆ ಅಧ್ಯಾಪಕರಾದ ಸುನಿಲ್ ಹೆಗ್ಡೆ, ಮಾಧವ್ ಹೊಳ್ಳ, ಕೃಷ್ಣಪ್ರಶಾಂತ್ ಮಾರ್ಗದರ್ಶಕರಾಗಿದ್ದಾರೆ. ಹವ್ಯಾಸಿ ಕಲಾವಿದ ಉಜಿರೆ ನಾಗೇಶ್ ರಾವ್ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಸ್‌ಡಿಎಂ ಸಂಸ್ಥೆಯ ವಿದ್ಯಾರ್ಥಿಗಳೇ ಅಭಿನಯಿಸುತ್ತಿದ್ದಾರೆ.
ಪ್ರತಿದಿನ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವು ನೋಡಿಕೊಳ್ಳುವುದನ್ನು ತಪ್ಪಿಸಿಕೊಂಡರೂ, ನೋಟಿನ ಮೇಲಿರುವ ಗಾಂಧೀಜಿಯನ್ನು ನೋಡದೆಯೇ ದಿನದೂಡಲು ಆಗುವುದಿಲ್ಲ ಅಷ್ಟರ ಮಟ್ಟಿಗೆ ನಮ್ಮ ಜೊತೆಯಲ್ಲಿದ್ದಾರೆ ಗಾಂಧಿ ಆದರೆ, ಈ ಮಹಾತ್ಮನನ್ನು ನಮ್ಮ ಜೇಬಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವಾ ಅಥವಾ ಹೃದಯದೊಳಕ್ಕೂ ಇಟ್ಟುಕೊಂಡಿದ್ದೇವಾ ಎಂದು ಯೋಚಿಸುತ್ತಾ ಈ ವೆಬ್‌ಸೀರೀಸ್ ವೀಕ್ಷಿಸಿದರೆ “ಬಾಪೂ” ಹೃದಯಕ್ಕೆ ಲಗ್ಗೆ ಇಡುವುದರಲ್ಲಿ ಸಂಶಯವಿಲ್ಲ.
ಮಹಾತ್ಮಾ ಗಾಂಧೀಜಿಯವರ ೧೫೦ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಬಾಪೂ ವೆಬ್ ಸೀರೀಸ್ ಆರಂಭಿಸಲಾಗಿದ್ದು ಸುಮಾರು ೧೫ರಿಂದ ೨೫ ನಿಮಿಷಗಳ ಕಾಲಮಿತಿಯಲ್ಲಿಯುವ ಈ ಸಂಚಿಕೆಗಳು ಯೂಟ್ಯೂಬ್ ಎಸ್‌ಡಿಎಂ ಮಲ್ಟಿಮೀಡಿಯಾ ಪುಟದಲ್ಲಿ ಲಭ್ಯ. ಈಗಾಗಲೇ ಆರಂಭಿಕ ನಾಲ್ಕು ಸಂಚಿಕೆಗಳಲ್ಲಿ ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಹಾಗೂ ಧರ್ಮ ಎಂಬ ನಾಲ್ಕು ವಿಚಾರಧಾರೆಗಳನ್ನೊಳಗೊಂಡ ಕತೆ ಮೂಡಿಬಂದಿದೆ. ಪ್ರತಿಯೊಂದು ತತ್ವಗಳ ಮೂಲ ಉದ್ದೇಶ ಹಾಗೂ ಅವುಗಳ ಸಾರ್ವಕಾಲಿಕತೆಯನ್ನು ಸೊಗಸಾಗಿ ವಿವರಿಸಲಾಗಿದೆ.

ಗಾಂಧೀಜಿ ತತ್ವಾದರ್ಶವನ್ನು ಪರಿಚಯಿಸುವ ವಿಶಿಷ್ಟ ಪ್ರಯತ್ನ
ಎಸ್‌ಡಿಎಂ ವಿದ್ಯಾ ಸಂಸ್ಥೆ ಕಳೆದ ಒಂದು ವರ್ಷದಿಂದ ಗಾಂಧೀಜಿಯ ವಿಚಾರಧಾರೆಗಳನ್ನು  ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳಲ್ಲಿ ಮನನ ಮಾಡಲು ಪ್ರಯತ್ನಿಸುತ್ತಿದೆ. ಪ್ರತೀ ತಿಂಗಳ ಒಂದನೇ ಹಾಗೂ ೧೫ನೇ ತಾರೀಖಿನಂದು ಸಂಸ್ಥೆಯ ಉದ್ಯೋಗಿಗಳು ಬಿಳೀ ಬಣ್ಣದ ಖಾದಿ ಬಟ್ಟೆಯನ್ನು ಧರಿಸುತ್ತಿದ್ದಾರೆ. ಪ್ರತಿ ಸೋಮವಾರ ಗಾಂಧೀಜಿಯ ವಿಚಾರಧಾರೆಗಳನ್ನೊಳಗೊಂಡ ಉದ್ಧರಣೆಗಳನ್ನು ಸಿಬ್ಬಂದಿಗಳ ಇ-ಮೇಲ್ ಗಳಿಗೆ ಕಳುಹಿಸುವ ವಿಶಿಷ್ಟ ಪ್ರಯತ್ನವನ್ನೂ ಮಾಡಲಾಗುತ್ತಿದೆ.



-------------------------------------------------------------------------

“ನಾನು ಹಲವು ನಾಟಕಗಳನ್ನು ಮಾಡಿದ್ದೇನೆ. ಆದರೆ ಗಾಂಧಿ ಪಾತ್ರದಿಂದ ಸಿಕ್ಕ ಅನುಭವ ಸಂಪೂರ್ಣ ವಿಭಿನ್ನ. ಎಲ್ಲರ ಮನಸ್ಸಿನಲ್ಲಿ ಗಾಂಧಿ ನೆಲೆಸಿರುವುದರಿಂದ ಅಂತಹ ಮಹಾತ್ಮರ ಪಾತ್ರವನ್ನು ನಿಭಾಯಿಸುವುದು ದೊಡ್ಡ ಜವಾಬ್ದಾರಿ. ಬಣ್ಣ ಹಚ್ಚುವ ಮುನ್ನ ಗಾಂಧಿಯ ಕುರಿತು ಓದಿಕೊಂಡು, ಅವರ ಫೋಟೋಗಳನ್ನು, ಅವರ ನಡೆನುಡಿಯನ್ನು ನನ್ನದಾಗಿಸಿಕೊಳ್ಳುವ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ನಿರ್ದೇಶನ ತಂಡದ ಸುನಿಲ್ ಹೆಗ್ಡೆ, ಮಾಧವ್ ಹೊಳ್ಳ, ಕೃಷ್ಣ ಪ್ರಶಾಂತ್ ಅವರು ಸಾಕಷ್ಟು ಸಹಾಯ ಕೂಡ ಮಾಡಿದ್ದಾರೆ”.
- ನಾಗೇಶ್ ರಾವ್, ಉಜಿರೆ. ಗಾಂಧಿ ಪಾತ್ರಧಾರಿ.

“ಗಾಂಧೀಜಿಯವರ ವಿಶಾಲ ವ್ಯಕ್ತಿತ್ವವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ, ಸರಳೀಕರಿಸಿ ಚಿಕ್ಕ ಮಕ್ಕಳಿಗೂ ಅರ್ಥವಾಗುವಂತೆ ಹೇಳಬೇಕೆನ್ನುವುದು “ಬಾಪೂ” ಉದ್ದೇಶ. ಆದ್ದರಿಂದ ಕತೆ, ಚಿತ್ರಕತೆ, ಸಂಭಾಷಣೆ ಎಲ್ಲವಕ್ಕೂ ಮಹತ್ವ ನೀಡಬೇಕು. ವೆಬ್‌ಸೀರೀಸ್ ಆರಂಭಿಸುವ ಮುನ್ನ ಇದ್ದ ತಳಮಳವಿತ್ತು ಆದರೆ, ನಂತರ ಕಡಿಮೆಯಾಗುತ್ತಾ ಬಂತು. ಬಾಪೂ ಹೆಚ್ಚೆಚ್ಚು ಜನರನ್ನು ತಲುಪಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತದೆ”.
- ಮಾಧವ್ ಹೊಳ್ಳ, ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ

- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ಪತ್ರಿಕೆಯ ಇಂದಿನಸ್ಪೆಷಲ್ ಪುರವಣಿಯಲ್ಲಿ ಪ್ರಕಟವಾಗಿದೆ.

(ಮೂಲಪ್ರತಿ)


Wednesday, 19 June 2019

ಅಮ್ಮಮ್ಮ...



ಅಮ್ಮಮ್ಮ…

ನೀವಿಲ್ಲದೆ ಇಂದಿಗೆ ಒಂದು ವರ್ಷ! ಕಾಲ ಎಷ್ಟು ಆತುರದಲ್ಲಿದೆ? ನಿಮ್ಮ ತಣ್ಣಗಿನ ಕೆನ್ನೆಯನ್ನು ಕೊನೆಯ ಬಾರಿಗೆ ಒತ್ತಿ ಹಿಡಿದ ನನ್ನ ಕೈಗಳು ಈಗಿನ್ನೂ ನಡೆದು ಹೋದ ಘಟನೆಯೇನೋ ಎಂಬಂತೆ ಆ ಸ್ಪರ್ಶವನ್ನು ನೆನಪಿಟ್ಟುಕೊಂಡಿವೆ. ಸದ್ದಿಲ್ಲದೆ ಬದುಕಿಗೆ ಪೂರ್ಣವಿರಾಮವಿಟ್ಟ ನೀವು ನಮ್ಮೊಂದಿಗೆ ಇಲ್ಲ ಎನ್ನುವುದು ಒಂದು ವರ್ಷ ಕಳೆದ ಮೇಲೂ ಒಮ್ಮೊಮ್ಮೆ ಅನುಮಾನ ಹುಟ್ಟಿಸುತ್ತದೆ.

ನಿಮ್ಮ ವಿಚಿತ್ರ ನಗು, ಸುಮ್ನಿರು ಮಾರಾಯ್ನೇ ಎಂಬ ಮಾತು, ಆಹಾಹಾ.. ಎಂಬ ಉದ್ಘಾರ, ಖುಷಿಯಾದಾಗಲೆಲ್ಲಾ ತಟ್ಟುತ್ತಿದ್ದ ಜೋರು ಚಪ್ಪಾಳೆ, ರಾತ್ರಿ ಕಾಲು ನೀಡಿಕೊಂಡು ಔಷಧಿ ತೆಗೆದುಕೊಳ್ಳುತ್ತಿದ್ದ ರೀತಿ, ಉಬ್ಬಸ ಶುರುವಾದಾಗ ಸದ್ದು ಮಾಡುತ್ತಾ ಎಳೆದುಕೊಳ್ಳುತ್ತಿದ್ದ ಉಸಿರು ಎಲ್ಲವೂ ನಮ್ಮ ಕಣ್ಣು, ಕಿವಿಗಳಲ್ಲಿ ಜೀವಂತ ಇವೆ. ಭೌತಿಕವಾಗಿ ನೀವಿಲ್ಲವೆನ್ನುವುದನ್ನು ಬಿಟ್ಟರೆ, ನೀವು ಹೋಗಿದ್ದೀರಿ ಎನ್ನುವುದಕ್ಕೆ ಬೇರೆ ಪುರಾವೆಗಳನ್ನು ಕೊಡುವುದು ಕಷ್ಟ!
ಆ ಹಳೆ ಕಾಲದ ದೊಡ್ಡ ಮನೆಯಲ್ಲಿ ಎಲ್ಲೇ ನಿಂತರೂ ಕೇಳುವಂತಿದ್ದ ನಿಮ್ಮ ಧ್ವನಿ, ಜಗುಲಿಯ ಮುಂಡಿಗೆ ಕಂಬಕ್ಕೆ ಒರಗಿ ನಿಲ್ಲುತ್ತಿದ್ದ ರೀತಿ, ಮಕ್ಕಳು, ಮೊಮ್ಮಕ್ಕಳು ಯಾರಾದರೂ ಮನೆಗೆ ಬರುತ್ತಾರೆ ಎಂಬುದು ಗೊತ್ತಿದ್ದಾಗ ಹೊರಗಿನ ಬಾಗಿಲ್ಲಲ್ಲೇ ಕಾದು ನಿಂತು ನಗು ಬೀರುತ್ತಿದ್ದ ಪರಿ ಇವನ್ನೆಲ್ಲಾ ಮರೆಯುವುದಾದರೂ ಹೇಗೆ? ಮೊಮ್ಮಕ್ಕಳೆಂದರೆ ನಿಮಗೆ ಜಾಸ್ತಿ ಇಷ್ಟ ಅಲ್ವಾ!? ಆದರೆ, ಅಷ್ಟೂ ಜನ ಮೊಮ್ಮಕ್ಕಳ ಪೈಕಿ ನಾನೇ ನಿಮ್ಮನ್ನು ಹಚ್ಚಿಕೊಂಡಿದ್ದು ಕಡಿಮೆ ಅಂತ ಈಗಲೂ ನನಗನ್ನಿಸುತ್ತೆ. ಹಾಗಂತ ಯಾವತ್ತೂ ನೀವು ಅದರ ಬಗ್ಗೆ ಪುಕಾರು ಎತ್ತಲೇ ಇಲ್ಲ.

ಅಮ್ಮಮ್ಮ, ನಾನು ನಿಮ್ಮನ್ನು ಕೊನೆಯ ಬಾರಿ ನೋಡಿದ್ದು, ಮಾತನಾಡಿದ್ದು ನೀವು ಹೋಗುವುದಕ್ಕಿಂತ ಹದಿನೈದೋ ಇಪ್ಪತ್ತೋ ದಿನದ ಮುಂಚೆ ಅಲ್ವಾ? ಅವತ್ತು ನಿಮ್ಮ ಮನೆಗೆ ಬಂದು ಕಾರ್ಡೆಡ್ ಲ್ಯಾಂಡ್‌ಲೈನ್ ಫೋನಿಗೆ ಸಿಮ್ ಹಾಕಿ ಸಿಗ್ನಲ್ ಸಿಗೋ ಹಾಗೆ ಮಾಡ್ಕೊಟ್ಟಿದ್ದೆ. ಹೊರಡಬೇಕಾದರೆ ಯಾವತ್ತಿನ ಹಾಗೆ "ಪುಟ್ಟೂ ಇಲ್ ಬಾ ಅಂತಂದು ಕೈಗೆ ದುಡ್ ಇಟ್ಟಿದ್ರಿ" "ನಂಗ್ ಇವೆಲ್ಲಾ ಬ್ಯಾಡ ಅಮ್ಮಮ್ಮ.. ನಾ ಸಂಬ್ಳಕ್ ಕೆಲ್ಸ ಮಾಡಿದ್ದಲ್ಲ" ಅಂತ ತಮಾಷೆ ಮಾಡ್ದಾಗ.. "ಸ್ವಲ್ಪ ಸುಮ್ನಿರು ಮಾರಾಯ್ನೆ… ನಾ ಅದಕ್ಕಲ್ಲ ದುಡ್ ಕೊಟ್ಟಿದ್ದು, ಹಂಗೆಲ್ಲಾ ಹೇಳ್ಬೇಡ ಇಟ್ಕ" ಅಂದು, ನಿಧಾನಕ್ ಹೋಗು, ಕಾರ್ ಓಡ್ಸ್ತಾ ಜಾಗ್ರತೆ, ಮನೆಗ್ ಹೋದ್ ತಕ್ಷಣ ಫೋನ್ ಮಾಡು ಅಂತೆಲ್ಲಾ ಹೇಳಿದ್ರಿ. ಅದೇ ಕೊನೆಯ ಬಾರಿಗೆ ನಾ ನಿಮ್ಮೊಂದಿಗೆ ಮಾತಾಡಿದ್ದು, ಹೋಗ್ಬರ್ತೀನಿ ಅಂತ ಟಾಟಾ ಮಾಡಿದ್ದು…!
ನಾ ಮನೆಗೆ ಬರೋ ಅಷ್ಟ್ರಲ್ಲಿ ಅಮ್ಮನಿಗೆ ಫೋನ್ ಮಾಡಿ, "ನೋಡೇ, ನಿನ್ ಮಗ ಫೋನ್ ಸರಿ ಮಾಡ್ಕೊಟ್ ಹೋಗಿದಾನೆ. ಈಗ ಒಳ್ಗೇ ಕೂತ್ಗೊಂಡ್ ಮಾತಾಡ್ಬೋದ್.. ಆದ್ರೆ ಕಿಟ್ಕೆ ಒಂಚೂರ್ ಹಾಕಕ್ ಆಗಲ್ಲ, ವಯರ್ರು ಅಲ್ಲೇ ಸಂದೀಲ್ ಬಂದಿದೆ.. ಅಷ್ಟ್ ಬಿಟ್ರೆ ಕ್ಲೀನಾಗ್ ಮಾತಾಡಿದ್ ಕೇಳುತ್ತೆ" ಅಂದು ಖುಷಿಪಟ್ಟಿದ್ರಂತೆ, ಅಮ್ಮ ಇದನ್ನೆಲ್ಲಾ ನಂಗ್ ಹೇಳ್ದಾಗ ಅದೇನ್ ದೊಡ್ ಸಾಧ್ನೆನಾ ಮಾರಾಯ್ತಿ.. ಸುಮ್ನಿರು ಅಂತ ನಕ್ಕಿದ್ದೆ.

ಅದಾದ ಮೇಲೆ ನೀವು ಹೊಗೋ ಎರಡು ದಿನದ ಮುಂಚೆ ಸಂಜೆಯ ಹೊತ್ತಿಗೆ ನನ್ನ ಫೋನಿಗೆ ಕಾಲ್ ಮಾಡಿದ್ರಿ. ನೀವು ಕಾಲ್ ಮಾಡೋಕ್ಕಿಂತ ಐದು ನಿಮಿಷ ಮೊದಲಷ್ಟೇ ಕಾರಿಗೆ ಸಣ್ಣ ಆ್ಯಕ್ಸಿಡೆಂಟ್ ಆಗಿತ್ತು. ಅದೇ ಯೋಚನೆಯಲ್ಲಿದ್ದವನು ಫೋನ್ ರಿಂಗಾಗಿದ್ದನ್ನ ನೋಡಿ ಅಮ್ಮನಿಗೆ ಕೊಟ್ಟು ನೀನೇ ಮಾತಾಡು ಅಂತ ಹೇಳಿ ಸುಮ್ನಾಗಿದ್ದೆ. ಅಷ್ಟಾದ್ಮೇಲೂ ಅಮ್ಮ ಆ್ಯಕ್ಸಿಡೆಂಟ್ ಬಗ್ಗೆ ನಿಮಗೇನೂ ಹೇಳಿರ್ಲಿಲ್ಲ. ಆದ್ರೂ ನೀವೇ ಮಾತಾಡ್ತಾ ಮಾತಾಡ್ತಾ ಜಾಗ್ರತೆ ಓಡ್ಸಕ್ ಹೇಳು, ಸ್ಪೀಡ್ ಎಲ್ಲಾ ಬೇಡ ಅಂತ ಹೇಳಿದ್ರಂತೆ.
ಎಷ್ಟು ಜಾಗ್ರತೆ ಅಲ್ವಾ ನಿಮ್ಗೆ… ಅವತ್ತೇ ಅಮ್ಮ ಕೂಡ ನಿಮ್ ಜೊತೆ ಕೊನೆಯದಾಗಿ‌ ಮಾತಾಡಿದ್ದು…!

ಅದೆಲ್ಲಾ ಆಗಿ ಪೂರ್ತಿ ಎರಡು ದಿನವೂ ಆಗಿರ್ಲಿಲ್ಲ… ಎಷ್ಟು ಬೇಗ ಕಳೆದು ಹೋಗಿಬಿಟ್ರಿ. ಹುಷಾರಿಲ್ಲದ ನಿಮ್ಮ ತಂಗಿಯನ್ನ ನೋಡಿ ಅವರ ಆರೋಗ್ಯದ ಬಗ್ಗೆ ಯೋಚ್ನೆ ಮಾಡ್ತಿದ್ದ ನೀವು ಅವರಿಗಿಂತ ಒಂದು ವಾರ ಮುಂಚೆಯೇ ಹೋಗಿಬಿಟ್ರಿ. ಒಂದೇ ವಾರದಲ್ಲಿ ಅಕ್ಕ - ತಂಗಿ ಇಬ್ರೂ ಹೋದ್ರಲ್ಲಾ ಅಂತ ಅದೆಷ್ಟು ಜನ ಸಂಕಟಪಟ್ರು!

ನೀವಿಲ್ಲ ಅನ್ನೋ ಸುದ್ದಿ ಹೇಳಕ್ಕೆ ಹಿರಿಯಮ್ಮ ಫೋನ್ ಮಾಡಿದಾಗ ಆಗಷ್ಟೇ ಒಂದು ಎಕ್ಸಾಂ ಬರ್ದು ಹೊರಗೆ ಬಂದಿದ್ದೆ, ನಾಳೆಯ ಎಕ್ಸಾಂ ಆದ್ರೂ ನೀಟಾಗ್ ಬರೀಬೇಕು ಅಂತ ಫ್ರೆಂಡ್ ಜೊತೆ ಮಾತಾಡ್ತಿದ್ದೆ.
"ಅಮ್ಮಮ್ಮ.. ಹೋಗಾಯ್ತು ಕಣಾ" ಅಂತ ಹಿರಿಯಮ್ಮ ಅಳ್ತಾ ಹೇಳಿದ ತಕ್ಷಣ ಏನೂ ತೋಚದಂತಾಗಿತ್ತು, ಎರಡೆರೆಡು ಬಾರಿ ಕೇಳಿ ಕನ್ಫರ್ಮ್ ಮಾಡ್ಕೊಂಡ್ಮೇಲೆ ಸ್ತಬ್ಧವಾಗಿ ಹೋಗಿದ್ದೆ.
"ಏನ್ ಮಾಡಕ್ಕಾಗಲ್ಲ ಆರಾಮಾಗಿ ಹೋದ್ರು, ನಪ್ಪಳೀಲಿಲ್ಲ ಅಂತ ಸಮಾಧಾನಿಸಿಕೊಂಡು" ಮಾರನೇ ದಿನದ ಎಕ್ಸಾಂ ಬಿಟ್ಟು ಸೀದಾ ಬಸ್ ಹತ್ತಿ ರಾತ್ರಿಯಷ್ಟರಲ್ಲಿ ನಿಮ್ಮ ಮನೆ ಅಂಗಳಕ್ಕೆ ಬಂದ್ರೆ… ನೀವು ತಣ್ಣಗೆ ಮಲಗಿದ್ರಿ!

ಅತೀ ಹತ್ತಿರದ ಸಂಬಂಧದಲ್ಲಿ ನಾ ನೋಡಿದ ಮೊದಲ ಸಾವು ನಿಮ್ಮದೇ… ಅಳು ಬರಲಿಲ್ಲ, ಹೋಗೇ ಬಿಟ್ರಲಾ ಅಂತ ಅಂದ್ಕೊಳ್ತಾ ಕೆನ್ನೆ ಒತ್ತಿ ಹಿಡಿದೆ… ನೀವು "ಸುಮ್ನಿರು ಮಾರಾಯ್ನೇ" ಅಂತ ಹೇಳ್ಲೂ ಇಲ್ಲ.. ಥಂಡಿಗೆ ಹೆದರುತ್ತಿದ್ದವರು ಹನಿಯುತ್ತಿದ್ದ ಮಳೆಗೆ ದೇಹವೊಡ್ಡಿ ಅಂಗಳದಲ್ಲಿ ಮಲಗಿಬಿಟ್ಟಿದ್ರಿ. ದೊಡ್ಡಿನಮನೆ ಎಂಬ ಊರಿನ ಅತ್ಯಂತ ದೊಡ್ಡದಾದ, ಹಳೆಯದಾದ, ಕತೆ ಹೇಳುವ ಶಕ್ತಿಯುಳ್ಳ ಮನೆಯ ಅಂಗಳದಲ್ಲಿ ಮಲಗಿ ನೀವೂ ಒಂದು ಕತೆಯಾಗಿಬಿಟ್ರಿ…

ಅಮ್ಮಮ್ಮ, ನೀವು ಹೋದ ಒಂದು ವರ್ಷದೊಳಗೆ ನಮ್ಮ ಸುತ್ತಮುತ್ತ ಎಷ್ಟೆಲ್ಲಾ ಬದಲಾವಣೆ ಆಯ್ತು ಗೊತ್ತಾ? ನಿಮ್ಮ ಹಿಂದೆಯೇ ಸ್ಪರ್ಧೆಗೆ ಬಿದ್ದವರಂತೆ ಅದೆಷ್ಟು ಜನ‌ ನಮ್ಮನ್ನ ಅಗಲಿ ಹೋದರು.. ಹೋದ್ರೆ ಯಶೋಧೆ ಥರ ಹೋಗ್ಬೇಕು, ಸುಖದ ಸಾವು ಅಂತ ಹೇಳ್ತಿದ್ದ ನಮ್ಮನೆ ಅಜ್ಜನೂ ಹೋಗೇಬಿಟ್ರು… ಕಾಲ ತುಂಬಾ ಆತುರದಲ್ಲಿದೆ ಅಂತ ಹೇಳಿದ್ದು ಇದೇ ಕಾರಣಕ್ಕೆ!

ಅಮ್ಮಮ್ಮ… ಹೇಳೋಕೆ ಸುಮಾರ್ ಮಾತು ಬಾಕಿ ಇತ್ತು, ನಿಮ್ಮ ಜೊತೆಗೆ ಕೆಲ ಕೋಳಿ ಜಗಳ ಆಡ್ಬೇಕಿತ್ತು, ನಿಮ್ಮನ್ನ ಸುಖಾಸುಮ್ಮನೆ ರೇಗಿಸಿ ಗೋಳು ಹೊಯ್ಕೋಬೇಕಿತ್ತು!!
ಒಮ್ಮೆ ದೊಡ್ಡ ಮನ್ಸು ಮಾಡಿ ವಾಪಾಸ್ ಬರ್ತೀರಾ!? ಬರೋದಾದ್ರೆ ಒಂದ್ ಕಂಡೀಷನ್ನು ಇನ್ಯಾವತ್ತೂ ಹಠಕ್ಕೆ ಬಿದ್ದು ನೆಬ್ಯುಲೈಸೇಷನ್ ಮಾಡಿಸ್ಕೋಬಾರ್ದು…! ಬರ್ತೀರಾ ಅನ್ನೋದಾದ್ರೆ ಹೇಳಿ, ನಿಮ್ಮನೆ ಮುಂಡಿಗೆ ಕಂಬಕ್ಕೆ ಒರಗಿಕೊಂಡು ಕಾಯ್ತಾ ಇರ್ತೀನಿ.

- ಸ್ಕಂದ

Thursday, 13 June 2019

ಔಟ್‌ಡೇಟೆಡ್ ಹುಡುಗ ನಾನು.



ಬದಲಾವಣೆ ಜಗದ ನಿಯಮ, ಕಾಲಕ್ಕೆ ತಕ್ಕಂತೆ ಬದಲಾವಣೆ ಸಹಜ ಎಂಬ ಉಪದೇಶಗಳನ್ನೆಲ್ಲಾ ನಾವು ದಿನಾಲೂ ಕೇಳಿರುತ್ತೇವೆ, ನೋಡಿರುತ್ತೇವೆ, ಅನುಭವಿಸಿರುತ್ತೇವೆ. ಕೆಲವೊಂದು ಬದಲಾವಣೆಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನಾವರಿಸಿಬಿಡುತ್ತವೆ. ಆದರೆ ಕೆಲವು ವಿಚಾರಗಳು ಮಾತ್ರ ನಮಗೂ ಅವುಗಳಿಗೂ ಆಣೆಭಾಷೆ ಆಗಿದೆಯೇನೋ ಎಂಬಂತೆ ಎಷ್ಟೇ ಬಯಸಿದರೂ ನಮ್ಮದಾಗದೇ ಬದಲಾವಣೆಗೆ ಅನುವು ಮಾಡಿಕೊಡದೇ ಹಾಗೆಯೇ ಉಳಿದುಕೊಳ್ಳುತ್ತವೆ. ಅಂತಹ ವಿಚಾರಗಳನ್ನು ನಾವು ಎಷ್ಟೇ ಸಹಜವಾಗಿ ತೆಗೆದುಕೊಂಡರೂ, ಅದರಲ್ಲೇ ಖುಷಿ ಕಂಡುಕೊಂಡರೂ ಯಾವುದೋ ಮಾಯಕದಲ್ಲಿ ಹೊತ್ತಲ್ಲದ ಹೊತ್ತಲ್ಲಿ ತಲೆ ಹೊಕ್ಕು ನಮ್ಮನ್ನು ಔಟ್‌ಡೇಟೆಡ್ ಎಂಬಂತೆ ಬಿಂಬಿಸಿ ನಮ್ಮೊಳಗೆ ತೊಳಲಾಟವೊಂದನ್ನು ಹುಟ್ಟುಹಾಕುತ್ತವೆ. ಹಾಗಂತ ಒತ್ತಾಯ ಪೂರ್ವಕವಾಗಿ ಬದಲಾವಣೆ ಬಯಸಿದರೆ ವಿಚಿತ್ರ, ವಿಸ್ಮಯ ಜೀವಿಗಳಂತೆ ಕಂಡು ನಮ್ಮ ಮೇಲೆ ನಮಗೇ ರೇಜಿಗೆ ಹುಟ್ಟಿಬಿಡುವ ಸಾಧ್ಯತೆಯೂ ಹೆಚ್ಚು! ಇಂತಹ ಪೇಚಾಟಕ್ಕೆ ಸಿಲುಕಿದವರ ಗೋಳು ಮುಗಿಯದ ಮೆಗಾ ಧಾರಾವಾಹಿಗಳಂತೆ!

ಕಾಲೇಜಿನ ಮೆಟ್ಟಿಲು ಹತ್ತಿದ ಮೊದಲ ದಿನ. ಕ್ರಾಪ್ ತೆಗೆದು ತಲೆ ಬಾಚಿಕೊಂಡು, ಹಣೆಗೆ ಚಿಕ್ಕದಾಗಿ ಕುಂಕುಮ ಇಟ್ಟುಕೊಂಡು, ಎರಡು ಜೇಬಿನ ಚೌಕಳಿ ಶರ್ಟು, ಕಪ್ಪು ಪ್ಯಾಂಟು ತೊಟ್ಟು, ಕೈಗೊಂದು ವಾಚ್ ಕಟ್ಟಿಕೊಂಡು ಕ್ಲಾಸ್ ರೂಮಿನೊಳಗೆ ಕಾಲಿಟ್ಟಿದ್ದೆ. ಹೊರಗಿನ ವಾತಾವರಣ ಸಾಧಾರಣವಾಗಿತ್ತು ಅನ್ಸತ್ತೆ ಆದ್ರೆ ಕ್ಲಾಸ್ ರೂಮಿನ ಒಳಗೆ ಹೊಸತಾಗಿ ಬಂದವರು ತಮ್ಮ ತಮ್ಮ ಪರಿಚಯ ಮಾಡಿಕೊಳ್ತಾ ಇದ್ದಿದ್ರಿಂದ ಒಂಚೂರು ಬಿಸಿಯಿತ್ತು. ಆ ಬಿಸಿಯಲ್ಲೇ ಮೊದಲ ಬಾರಿಗೆ ನಾನು ಔಟ್‌ಡೇಟೆಡ್ ಎನ್ನುವ ಅನುಮಾನ ತಲೆಗೆ ಹೊಕ್ಕಿದ್ದು. ಅಪ್ಪಟ ಮಲೆನಾಡಿನಿಂದ ಮೈಸೂರಿಗೆ ಬಂದು ಬಿದ್ದ ಮಾಣಿಯೊಬ್ಬ ಅನುಭವಿಸದ ತೊಳಲಾಟಗಳ ಅಧ್ಯಾಯ ಆರಂಭವಾಗಿದ್ದು!

1. ಮಲೆನಾಡಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡವನಿಗೆ ಮೈಸೂರು ಒಂದಷ್ಟು ಅಚ್ಚರಿಗಳೊಂದಿಗೆ ಎದುರಾಗಿತ್ತು. ಶಾಲೆಗೆ ಹೋದ ದಿನದಿಂದ ಹೈಸ್ಕೂಲಿನ ತನಕವೂ ಉಳಿದೆಲ್ಲರಿಗಿಂತ ಕುಳ್ಳಗಿದ್ದ ನನಗೆ ಫಸ್ಟ್ ಬೆಂಚ್ ಅನಿವಾರ್ಯ ಬಂಧು. ಇದರಿಂದ ರೋಸಿ ಹೋಗಿದ್ದ ನಾನು ಪಿಯುಸಿಯ ಮೊದಲ ದಿನ ಬಯಸಿ ಬಯಸಿ ಕಟ್ಟಕಡೆಯ ಬೆಂಚು ಹಿಡಿದಿದ್ದೆ. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಎಂಬಂತೆ ಯಾರೂ ಕೂರದೇ ಖಾಲಿ ಬಿದ್ದಿದ್ದ ಫಸ್ಟ್ ಬೆಂಚಿಗೆ ಲೆಕ್ಚರರ್ಸ್ ಎಳೆದು ತಂದು ಕೂರಿಸಿದ್ದರು. ತರಗತಿಯಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಪರಿಚಯ ಮಾಡಿಕೊಳ್ಳುವಾಗ ಒಬ್ಬೊಬ್ಬರ ವೇಷ ಭೂಷಣವೂ ನನಗೆ ಹೊಸತಾಗಿ ಕಂಡಿತ್ತು. ಅದರಲ್ಲೂ “ಮೈ ನೇಮ್ ಈಸ್...” ಎಂದು ರಾಗವಾಗಿ ಪರಿಚಯ ಆರಂಭಿಸಿಕೊಂಡ ಹುಡುಗಿ ತೊಟ್ಟಿದ್ದ ಟೈಟ್ ಪ್ಯಾಂಟ್, ಸ್ಟೈಲಿಶ್ ಟಾಪ್, ಶೂ ನೋಡಿದ ಮೇಲೆ ನನ್ನ ಎರಡು ಜೇಬಿನ ಅಂಗಿ, ಹೇರ್ ಸ್ಟೈಲುಗಳೆಲ್ಲ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ಕಾಲವನ್ನು ನೆನಪಿಸಿ ನನ್ನನ್ನು ಒಂದೇ ಏಟಿಗೆ ಔಟ್‌ಡೇಟೆಡ್ ಮಾಡಿಬಿಟ್ಟವು.

2. ಅದು ಮೈಸೂರಿನಲ್ಲಿ ಮೊದಲ ಬಾರಿಗೆ ಸಲೂನ್ ಹೊಕ್ಕ ದಿನ. ನಮ್ಮೂರಿನ ಸಲೂನ್ ಶಾಪಿಗಿಂತ ಮೂರು ಪಟ್ಟು ದೊಡ್ಡದಿದ್ದ, ಬಣ್ಣ ಬಣ್ಣದ ಲೈಟುಗಳು, ಟಿವಿ, ಏಸಿಗಳಿದ್ದ ಶಾಪಿನ ಮೆತ್ತನೆಯ ಕುರ್ಚಿಯಲ್ಲಿ ಕೂರಿಸಿದ ಹೇರ್ ಡ್ರೆಸ್ಸರ್ “ಹೇಗಿರ್ಲಿ, ಯಾವ್ ಸ್ಟೈಲ್ ಓಕೆ?” ಅಂದಾಗ ಊರಿನಲ್ಲಿ ಕೇಳುತ್ತಿದ್ದ “ಶಾರ್ಟ್, ಮೀಡಿಯಂ, ಲಾಂಗ್” ಪದಗಳು ಮಾತ್ರ ನೆನಪಾಗಿ ಶಾರ್ಟ್ ಎಂದೆ. ಕಿಸಕ್ಕನೆ ನಕ್ಕ ಪುಣ್ಯಾತ್ಮ ಈಗಿನ ಹುಡ್ಗುರು ಯಾರೂ ಶಾರ್ಟ್ ಹೇರ್ ಇಷ್ಟಪಡಲ್ಲ, ಸ್ಲೋಪ್ ಮಾಡ್ತೀನಿ ಅಂತೇಳಿ ಕನ್ನಡಿ ಮುಂದೆ ಕೂತ ನಾನು ನನಗೇ ಔಟ್‌ಡೇಟೆಡ್ ಎನ್ನುವಂತೆ ಮಾಡ್ಬಿಟ್ರು. ಇವತ್ತಿಗೂ ಹತ್ತಾರು ಹೇರ್ ಸ್ಟೈಲ್‌ಗಳು ಚಾಲ್ತಿಯಲ್ಲಿದ್ದರೂ ಮೈಸೂರಿನ ಸಲೂನಿನವರು ಪರಿಚಯಿಸಿದ ಸ್ಲೋಪ್ ಕಟಿಂಗ್ ಸ್ಟೈಲ್ ನನಗೆ ಕಂಫರ್ಟೇಬಲ್. ಅದೊಮ್ಮೆ ಹಠಕ್ಕೆ ಬಿದ್ದು ಹೆಬ್ಬುಲಿ ಸ್ಟೈಲ್ ಮಾಡಿಸಿಕೊಳ್ಳಲು ಹೋಗಿ ನಂತರ ರೂಮಿಗೆ ಬಂದಾಗ ಅದು ಹೆಬ್ಬುಲಿಯೋ, ಗಬ್ಬುಲಿಯೋ ಎಂದು ಜಿಗುಪ್ಸೆ ಹುಟ್ಟಿದ ಕಾರಣ ಔಟ್‌ಡೇಟೆಡ್ ಆಗಿ ಉಳಿಯುವುದರಲ್ಲೇ ತೃಪ್ತನಾಗಿದ್ದೇನೆ.

3. ಅದೊಮ್ಮೆ ಹೊಸಾ ಡ್ರೆಸ್ ತೆಗೆದುಕೊಳ್ಳೋಕೆ ಅಂತ ದೊಡ್ಡ ಮಾಲ್ ಒಂದಕ್ಕೆ ನಾವೊಂದಷ್ಟು ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಹೋಗಿದ್ವಿ. ರಾಶಿ ರಾಶಿ ಬಟ್ಟೆಗಳ ಮಧ್ಯೆ ತೀರಾ ಸಿಂಪಲ್ಲು ಎಂಬಂತ ಶರ್ಟ್ ಒಂದನ್ನು ಆರಿಸಿ ತೆಗೆದು ಇದು ಇಷ್ಟವಾಯ್ತು ಅಂದೆ. ನಾ ಆರಿಸಿದ ಶರ್ಟು ಅಷ್ಟೇನೂ ಕಳಪೆ ಅಲ್ಲದಿದ್ದರೂ ಹುಡುಗಿಯರ ಗುಂಪು ಅದನ್ನು ಕಸಿದುಕೊಂಡು ಹಳೇ ಕಾಲದವನ ಥರ ಆಡ್ಬೇಡ ಅಂತ ದಬಾಯಿಸಿದರು. “ಫಂಕಿ”ಯಾಗಿರ್ಬೇಕು ಅಂತ ಬಣ್ಣಬಣ್ಣದ ದೊಗಲೆ ಡ್ರೆಸ್ ಒಂದನ್ನು ಹುಡುಕಿ ಕೊಟ್ಟು ಇದು ಟ್ರೆಂಡಿಂಗ್ ಅಲ್ಲಿದೆ ತಗೋ ಎಂದರು. ಟ್ರಯಲ್ ರೂಮಿನ ಕನ್ನಡಿಯ ಮುಂದೆ ನಿಂತಾಗ ಅವರು ಹೇಳಿದ ಫಂಕಿಯ ಬದಲು ‘ಮಂಕಿ’ಯಂತೆ ಕಂಡು ನನ್ನ ಮೇಲೆ ನನಗೇ ವೈರಾಗ್ಯ ಮೂಡಿತು ಮತ್ತು ಟ್ರೆಂಡಿಂಗ್ ಅಲ್ಲಿ ಇದ್ದ ಡ್ರೆಸ್ ಒಂದು ನನ್ನನ್ನು ಸಂಪೂರ್ಣ ಔಟ್‌ಡೇಟೆಡ್ ಮಾಡಿಬಿಟ್ಟಿತು.

4. ನನಗೆ ಶೂ ಹಾಕುವುದೆಂದರೆ ಅತಿದೊಡ್ಡ ಕಷ್ಟದ ಕೆಲಸ! ಅನಿವಾರ್ಯತೆಗೆ ಸಿಕ್ಕು ನಾಲ್ಕಾರು ಜೊತೆ ಶೂಗಳನ್ನು ಕೊಂಡಿದ್ದರೂ ಅದನ್ನು ಹಾಕಲು ಸೋಮಾರಿತನ ಅಡ್ಡಬಂದು ಜೊತೆಗೆ ಅದರಿಂದ ನನ್ನ ಸ್ಟ್ಯಾಂಡರ್ಡ್ ಏನೂ ಹೆಚ್ಚುವುದಿಲ್ಲ ಎಂಬ ಮನಸ್ಥಿತಿ ಬೆಳೆದ ಕಾರಣ ಎಷ್ಟೋ ಸನ್ನಿವೇಶಗಳಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ  ಔಟ್‌ಡೇಟೆಡ್ ಆಗಿ ಕಾಣಿಸಿಕೊಂಡಿದ್ದೇನೆ. ಅದರಲ್ಲೂ ಬರ್ತ್ ಡೇ ಪಾರ್ಟಿ, ನ್ಯೂ ಇಯರ್ ಪಾರ್ಟಿ ಅಂತ ಯಾರಾದರೂ ನನ್ನನ್ನು ಎಳೆದುಕೊಂಡು ಹೋದರೆ ಕುಣಿಯದೇ, ಕೂಗದೇ, ಹೊರಳಾಡದೇ ಡೀಸೆಂಟು ಹುಡುಗನಂತೆ ತಣ್ಣಗೆ ನಿಂತು ಕರೆದುಕೊಂಡು ಹೋದವರಿಗೇ ಜಿಗುಪ್ಸೆ ಮೂಡಿ ಔಟ್‌ಡೇಟೆಡ್ ಫೆಲೋ ಎಂದುಕೊಳ್ಳುವಂತೆ ಮಾಡಿದ್ದೇನೆ.

5. ಜನರೇಷನ್ ಗ್ಯಾಪ್ ಕಾರಣದಿಂದ ಔಟ್‌ಡೇಟೆಡ್ ಎನ್ನಿಸಿಕೊಳ್ಳುವುದಕ್ಕೂ, ಜನರೇಷನ್ನಿನ ಸಾಲಿನಲ್ಲಿದ್ದು ಗುಂಪಿಗೆ ಸೇರದ ಪದದಂತೆ ಕಾಣುವುದಕ್ಕೂ ವ್ಯತ್ಯಾಸವಿದೆ. ಅದೆಷ್ಟೋ ಬಾರಿ ಔಟ್‌ಡೇಟೆಡ್ ಅಂದ್ರೇನು? ಔಟ್‌ಡೇಟೆಡ್ ಆದ್ರೆ ಸಮಸ್ಯೆ ಏನು? ಯಾವುದೆಲ್ಲಾ ಔಟ್‌ಡೇಟೆಡ್ ಅಂತೆಲ್ಲಾ ತಲೆಕೆಡಿಸಿಕೊಂಡಿದ್ದೇನೆ. ಹುಡುಗಿಯರ ಜೊತೆ ಮಾತಾಡಲು ಹಿಂಜರಿದಾಗ, ಶಿಳ್ಳೆ ಹೊಡೆಯೋಕೆ ಬರಲ್ಲ ಎಂದಾಗ, ಗಾಗಲ್ಸ್ ಬದಲು ಕೂಲಿಂಗ್ ಗ್ಲಾಸ್ ಅಂದಾಗ, ಶಾರ್ಟ್ಫಾರ್ಮ್ ಮೆಸೇಜ್‌ಗಳ ಅರ್ಥ ಹುಡುಕುವಾಗ ಔಟ್‌ಡೇಟೆಡ್ ಅಂತ ಹೇಳುವುದನ್ನು ಕೇಳಿ ತಲೆಕೆರೆದುಕೊಂಡಿದ್ದೇನೆ. ಈಗೀಗ ಕೆಲವರು ಔಟ್‌ಡೇಟೆಡ್ ಪದಕ್ಕೂ ಪರ್ಯಾಯ ಹುಡುಕಿ “ನೀವ್ ಬಿಡಿ” ಅಂದುಬಿಡ್ತಾರೆ. ಹಂಗಂದ್ರೆ ಅಂತ ಮರುಪ್ರಶ್ನೆ ಮಾಡದಷ್ಟು ಅಪ್‌ಡೇಟ್ ಆಗಿದ್ದೇನೆ ಎಂಬ ಸಮಾಧಾನವಿದೆ. ಒತ್ತಾಯಪೂರ್ವಕವಾಗಿ ಟ್ರೆಂಡ್ ಫಾಲೋ ಮಾಡುವ ಬದಲು ನಮಗೆ ಕಂಫರ್ಟ್ ಆಗಿದ್ರೆ ಸರಿ ಔಟ್‌ಡೇಟೆಡ್ ಆದ್ರೆ ಏನು? ಅಪ್‌ಡೇಟೆಡ್ ಆದ್ರೆ ಏನು? ಎಂದು ಸಮಾಧಾನಿಸಿಕೊಳ್ಳುವುದನ್ನು ಕಲಿತಿದ್ದೇನೆ.

ಈ ಬರಹ ಆರಂಭಿಸುವ ಮುನ್ನವೂ ಅಷ್ಟೇ, ಜಾಲಿಯಾಗಿ ಏನಾದರೂ ಬರೆಯಬೇಕು ಆದ್ರೆ ಏನು ಅಂತ ಗೊತ್ತಾಗ್ತಿಲ್ಲ ಅಂತ ಅತ್ತೆಗೆ ಹೇಳಿದಾಗ ಒಂದಷ್ಟು ವಿಷಯಗಳ ಪಟ್ಟಿಯನ್ನೇ ತೆರೆದಿಟ್ಟುಬಿಟ್ಟರು. ಆಗಲೇ ಮತ್ತೊಮ್ಮೆ ಮಗದೊಮ್ಮೆ ಅತೀ ತೀವ್ರವಾಗಿ ನಾನು ಔಟ್‌ಡೇಟೆಡ್ ಎನ್ನಿಸಿದ್ದು ಮತ್ತು ಅದೇ ಕಾರಣದಿಂದಲೇ ಇಷ್ಟುದ್ದ ಬರೆದಿದ್ದು. ಸ್ಟಿಲ್ ಐ ಆ್ಯಮ್ ಪ್ರೌಡ್ ಟು ಬಿ ಎ ಔಟ್‌ಡೇಟೆಡ್ ಫೆಲೋ!




ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.

(ಮೂಲಪ್ರತಿ)


  • ಸ್ಕಂದ ಆಗುಂಬೆ

Saturday, 25 May 2019

ಲಗಾಮಿಲ್ಲದ ಈ ಕುದುರೆ ಸವಾರಿಯಲ್ಲಿ ಬಿಜೆಪಿ ಉರುಳಲೂಬಹುದು, ಉಳಿಯಲೂಬಹುದು!



ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಹಿಡಿಯಬಹುದೆಂಬ ನಿರೀಕ್ಷೆ ಇತ್ತಾದರೂ ಕಳೆದ ಬಾರಿಗಿಂತಲೂ ದೊಡ್ಡ ಮಟ್ಟದ ಗೆಲುವು ಸಿಕ್ಕಿರುವುದು ಬಿಜೆಪಿಗರಿಗೂ ಅಚ್ಚರಿ ತಂದಿರಬಹುದು. ಕರ್ನಾಟಕದಲ್ಲಂತೂ ಪಕ್ಷದ ಮುಖಂಡರೇ ನಿಬ್ಬೆರಗಾಗುವ ಫಲಿತಾಂಶ ಸಿಕ್ಕಿದೆ. ಆದರೆ, ಬಿಜೆಪಿಯ ಪ್ರಚಂಡ ಗೆಲುವು ಹಾಗೂ ಮೈತ್ರಿ ಪಕ್ಷಗಳ ಹೀನಾಯ ಸೋಲನ್ನು ಅವಲೋಕಿಸುವುದಾರೆ, ಉಭಯ ಪಕ್ಷಗಳೂ ನೆನಪಿಡಬೇಕಾದ ಹಲವು ಸಂಗತಿಗಳು ಕಂಡುಬರುತ್ತವೆ.


ಬಿಜೆಪಿಯ ಅಭೂತಪೂರ್ವ ಗೆಲುವು ಮೋದಿಯ ಅಭಿಮಾನಿಗಳಿಗೆ ಎಷ್ಟು ಖುಷಿ ಕೊಟ್ಟಿದೆಯೋ, ಅವರ ಟೀಕಾಕಾರರನ್ನು ಅದಕ್ಕಿಂತಲೂ ದೊಡ್ಡ ಮಟ್ಟದ ಸಂಕಟಕ್ಕೆ ಈಡುಮಾಡಿದೆ. ಇದಕ್ಕೆ ಮುಖ್ಯ ಕಾರಣ, ಮೋದಿಯ ಗೆಲುವನ್ನು ಟೀಕಿಸಲು ಮುಂದಾದಾಗ ಎದುರಾಗುವ ಪರ್ಯಾಯದ ಪ್ರಶ್ನೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಮೆರೆದಿತ್ತೋ ಅದೇ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಜೊತೆಗೆ, ಅಧಿಕಾರವನ್ನು ಅತ್ಯಂತ ನಾಜೂಕಾಗಿ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಂತಿದೆ. ಜನರು ಏನನ್ನು ತಿರಸ್ಕರಿಸುತ್ತಾರೆ ಹಾಗೂ ಏನೇನು ಮಾಡದಿದ್ದರೆ ಉಳಿಯಬಹುದು ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಎದುರಿಸಿದ ಕಷ್ಟಗಳು ಉದಾಹರಣೆಯಂತೆ ಕಣ್ಣ ಮುಂದಿವೆ.

ಆದರೆ, ಈಗ ಬಿಜೆಪಿಯ ಮುಂದಿರುವ ಸವಾಲುಗಳೇ ಬೇರೆ. ಅದರಲ್ಲಿ ಪ್ರಮುಖವೆನಿಸುವ ಅಂಶಗಳು; ಪ್ರಬಲ ವಿರೋಧ ಪಕ್ಷವೇ ಇಲ್ಲದ ಸಂದರ್ಭದಲ್ಲೂ ಆಡಳಿತ ಪಕ್ಷ ಹೇಗೆ ಸ್ವಯಂ ನಿಯಂತ್ರಣದೊಂದಿಗೆ ಹೆಜ್ಜೆ ಇಡುತ್ತದೆ ಎಂಬುದು ಹಾಗೂ ಅವರ ಸ್ವಂತ ಅಭಿಮಾನಿಗಳನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳುತ್ತದೆ ಎನ್ನುವುದು. ಐದು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಏರಿದಾಗ ಇದ್ದ ಪರಿಸ್ಥಿತಿಗೂ, ಈಗಿನದಕ್ಕೂ ಹಲವು ವ್ಯತ್ಯಾಸಗಳಿವೆ. ಅಂದು ಆಡಳಿತದ ಆರಂಭದಲ್ಲಿ ಹಿಂದಿನ ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿಯಲು ಇದ್ದ ಅವಕಾಶ ಈಗ ಕಡಿಮೆಯಾಗಿದೆ ಹಾಗೂ ಬಿಜೆಪಿಯನ್ನು ಒಪ್ಪಿಕೊಳ್ಳದವರು ಸರ್ಕಾರವನ್ನು ಇನ್ನಷ್ಟು ಕಟುವಾಗಿ ಟೀಕಿಸುವ ದಿನಗಳು ಆರಂಭವಾಗಲಿವೆ. ಇದನ್ನು ಮೋದಿಯ ನೇತೃತ್ವದ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ.

ಅತಿ ದೊಡ್ಡ ಸಂಖ್ಯೆಯ ಜನರೇ ತಮ್ಮ ಜೊತೆಗಿರುವಾಗ ತಮ್ಮನ್ನು ವಿರೋಧಿಸುವವರ ಹಿತವನ್ನು ಕಾಪಾಡಿಕೊಂಡು ನಡೆಯುವುದು ಯಾವುದೇ ಸರ್ಕಾರಕ್ಕಾದರೂ ಸವಾಲೇ ಸರಿ! ಪ್ರಸ್ತುತ ಬಿಜೆಪಿಗೆ ಅತಿ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಮೋದಿಯನ್ನು ಟೀಕಿಸುವ ಹಾಗೂ ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ತಿರುಗಿಬೀಳುವವರ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಸೈದ್ಧಾಂತಿಕ ಪ್ರತಿಷ್ಠೆಯಿಂದ ಚರ್ಚೆಗೆ ಒಳಪಡಬೇಕಾದ ಹಲವು ವಿಚಾರಗಳನ್ನು ಹಾಸ್ಯಾಸ್ಪದ ವಸ್ತುಗಳನ್ನಾಗಿಸುವ ಕೆಟ್ಟ ಪದ್ಧತಿ ಇನ್ನಷ್ಟು ಬೃಹದಾಕಾರವಾಗಿ ವ್ಯಾಪಿಸುವ ಸಾಧ್ಯತೆ ಇದೆ. ತಮಗೆ ಆಗದವರು ಯಾವುದನ್ನು ಬೆಂಬಲಿಸುತ್ತಾರೋ, ಏನನ್ನು ಒಪ್ಪಿಕೊಳ್ಳುತ್ತಾರೋ ಅದನ್ನು ತಾವು ವಿರೋಧಿಸಬೇಕು ಎಂಬ ಮನಸ್ಥಿತಿ ಎಡ, ಬಲವೆಂಬ ಭೇದವಿಲ್ಲದೆ ಎಲ್ಲರಲ್ಲೂ ಹುಟ್ಟಿಕೊಂಡಿರುವುದರಿಂದ ಬಿಜೆಪಿಗೆ ಇದು ದೊಡ್ಡ ಸವಾಲಾಗಬಹುದು. ಜೊತೆಗೆ ಸಧೃಡ ವಿರೋಧ ಪಕ್ಷವೂ ಇಲ್ಲದಿರುವುದರಿಂದ ಸರ್ಕಾರ ನೇರವಾಗಿ ಟೀಕೆಗೆ ಗುರಿಯಾಗುವ ಸಾಧ್ಯತೆಗಳೂ ಹೆಚ್ಚು. ಇಂತಹ ವಿಚಾರಗಳೇ ಮುಂಬರುವ ದಿನಗಳಲ್ಲಿ ಅತಿದೊಡ್ಡ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯೇನಲ್ಲ. ಇದರೊಟ್ಟಿಗೆ ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಆಗದಿರಲು ಅಧಿಕಾರಕ್ಕೇರಲಿರುವ ಬಿಜೆಪಿ ತಮ್ಮ ಅಭಿಮಾನಿಗಳಿಂದ ಅತಿರೇಕದ ವರ್ತನೆ ವ್ಯಕ್ತವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ.

ಇನ್ನು, ಈಗ ಸೋಲುಂಡಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ವಿಚಾರಕ್ಕೆ ಬಂದರೆ, ಇವರು ತಮ್ಮ ಸೋಲನ್ನು ಪರಾಮರ್ಶಿಸಿಕೊಂಡು ಸುಧಾರಿಸಿಕೊಳ್ಳಬೇಕೇ ವಿನಾ ಆಧಾರವಿಲ್ಲದ ಆರೋಪಗಳನ್ನು ಮಾಡಿ ಅವಿವೇಕತನ ಪ್ರದರ್ಶಿಸದಿದ್ದರೆ ಒಳಿತು. ಒಂದು ವೇಳೆ, ಮೋದಿಯ ವಿರೋಧಿಗಳೆಲ್ಲ ನಮ್ಮವರು ಎಂಬ ಪೊಳ್ಳು ನಂಬಿಕೆಯನ್ನು ಮುಂದುವರಿಸಿಕೊಂಡು ತಮ್ಮ-ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆ ಇದ್ದರೆ, ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಂತಾಗುವುದು ನಿಶ್ಚಿತ. ಕರ್ನಾಟಕದ ಪರಿಸ್ಥಿತಿಯನ್ನೇ ಗಮನಿಸಿ ಇದನ್ನು ವಿಶ್ಲೇಷಿಸುವುದಾದರೆ, ಮೈತ್ರಿ ಪಕ್ಷದ ಆಡಳಿತವಿದ್ದೂ ಬಿಜೆಪಿ 28ರಲ್ಲಿ 25 ಸ್ಥಾನ ಗಳಿಸಿರುವುದು ಆಶ್ಚರ್ಯಕರ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ನಿಂತು ಚುನಾವಣೆ ಎದುರಿಸಿದ್ದರಿಂದ ಬಿಜೆಪಿ ಕಳೆದ ಬಾರಿಯಷ್ಟು ಸೀಟು ಗಳಿಸಲೂ ಪ್ರಯಾಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಅಂದಾಜಿತ್ತು. ಆದರೆ, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿವೆ. ಮೈತ್ರಿ ಪಕ್ಷಗಳ ನಡುವಿನ ಮನಸ್ತಾಪ, ಪ್ರತಿಷ್ಠೆ ಇತ್ಯಾದಿ ವಿಚಾರಗಳು ಮೈತ್ರಿಯ ಸೋಲಿಗೆ ಕಾರಣಗಳಾಗಿ ಕಂಡರೂ, ಅದರೊಟ್ಟಿಗೆ ಕುಟುಂಬ ರಾಜಕಾರಣವೂ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ಬಾರಿಯೂ ರಾಹುಲ್ ಗಾಂಧಿ ಅವರನ್ನೇ ಪ್ರಧಾನಮಂತ್ರಿ ಅಭ್ಯರ್ಥಿಯಂತೆ ಬಿಂಬಿಸಿ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿತು. ಅಂತೆಯೇ, ರಾಜ್ಯದಲ್ಲಿ ಜೆಡಿಎಸ್ ಪಕ್ಷವೂ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರನ್ನೂ ಅಭ್ಯರ್ಥಿಯನ್ನಾಗಿಸಿ ಕುಟುಂಬ ರಾಜಕಾರಣವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿತು. ಜೆಡಿಎಸ್ ಪಕ್ಷದ ಪಾಲಿಗೆ ಭದ್ರಕೋಟೆಯಾದ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಂದಲೇ ಮೊಮ್ಮಕ್ಕಳನ್ನು ಕಣಕ್ಕಿಳಿಸಿ, ಅವರ ಗೆಲುವಿನ ಹಾದಿಯನ್ನು ಸುಗಮವಾಗಿಸುವ ಲೆಕ್ಕಾಚಾರ ದೇವೇಗೌಡರದ್ದೂ ಆಗಿತ್ತು.

ಆದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಂತೆ, ಮಂಡ್ಯದಲ್ಲೂ ನಿಖಿಲ್ ಗೆಲ್ಲುತ್ತಾರೆ ಎಂಬ ನಂಬಿಕೆ ಹಾಗೂ ತುಮಕೂರಿನಲ್ಲಿ ದೇವೇಗೌಡರು ಮೈತ್ರಿಯ ಸಹಭಾಗಿತ್ವದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಸಂಪೂರ್ಣ ಕೈ ಕೊಟ್ಟಿದ್ದು ಜೆಡಿಎಸ್‍ಗೆ ಅರಗಿಸಿಕೊಳ್ಳಲಾಗದ ಆಘಾತ. ಈಗ ತುಮಕೂರಿನಲ್ಲಿ ದೇವೇಗೌಡರು ಸೋಲುಂಡಿರುವುದನ್ನು ಮೊಮ್ಮಗನಿಗಾಗಿ ಮಾಡಿದ ತ್ಯಾಗ ಎಂದು ಬಿಂಬಿಸಲಾಗುತ್ತಿದೆಯಾದರೂ, ಕುಟುಂಬ ರಾಜಕಾರಣವನ್ನು ವಿಸ್ತರಿಸುವ ಸ್ವಾರ್ಥ ತ್ಯಾಗಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಪ್ರಜ್ವಲ್ ರೇವಣ್ಣ ತಮ್ಮ ಗೆಲುವು ಕಂಡ ನಂತರ ತಾತನಿಗಾಗಿ ರಾಜಿನಾಮೆ ನೀಡುತ್ತೇನೆ, ಅವರೇ ಮತ್ತೊಮ್ಮೆ ಸ್ಪರ್ಧಿಸಿ ಗೆಲ್ಲಲಿ ಎನ್ನುವ ಭಾವನಾತ್ಮಕ ಮಾತುಗಳನ್ನಾಡಿರುವುದು ಜೆಡಿಎಸ್ ಪಕ್ಷದಲ್ಲಿ ಕುಟುಂಬ ಪ್ರೇಮ ಎಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ಜೊತೆಗೆ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರಿಂದ ಮತ್ತಷ್ಟು ಅನುಕಂಪ ಗಿಟ್ಟಿಸಿಕೊಳ್ಳುವ ಹಾಗೂ ಮುಂದಿನ ರಾಜಕೀಯ ಭವಿಷ್ಯವನ್ನು ಈಗಿನಿಂದಲೇ ಬಲಪಡಿಸಿಕೊಳ್ಳುವ ತಂತ್ರವೂ ಅವರಲ್ಲಿ ಇದ್ದಿರಬಹುದು. ಇನ್ನು, ಕೆಲವು ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಅನರ್ಹತೆ ಭೀತಿ ಎದುರಿಸುತ್ತಿರುವುದರಿಂದ ಅದರಲ್ಲಾಗುವ ಮುಜುಗರ ತಪ್ಪಿಸಿಕೊಳ್ಳಲು ಈ ನಡೆ ಅನುಸರಿಸಿರಬಹುದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಅವರು ಹೇಳುತ್ತಿರುವ ಮಾತುಗಳಲ್ಲಿ ಮೇಲ್ನೋಟಕ್ಕೆ ಎದ್ದುಕಾಣುತ್ತಿರುವುದು ಮಾತ್ರ ಕುಟುಂಬ ರಾಜಕಾರಣದ ಬಣ್ಣ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಹ ಹೀಗೆಯೇ ಕುಟುಂಬ ರಾಜಕಾರಣದ ಮೋಹದಿಂದ ಸಮರ್ಥ ನಾಯಕತ್ವ ಇಲ್ಲದೆ ನಗೆಪಾಟಲಿಗೆ ಈಡಾಗುವ ಸ್ಥಿತಿಗೆ ಬಂದು ನಿಂತಿದೆ.

ಬಿಜೆಪಿ ಪಕ್ಷದ ದೊಡ್ಡ ಮಟ್ಟದ ಗೆಲುವಿಗೆ ಕಾರಣವಾದ ಅಂಶಗಳಲ್ಲಿ ಇವುಗಳದ್ದೂ ದೊಡ್ಡ ಪಾಲಿದೆ. ಇದರೊಟ್ಟಿಗೆ ಬಿಜೆಪಿ ಪಕ್ಷ ಚುನಾವಣೆ ಎದುರಿಸಿದ್ದು ನರೇಂದ್ರ ಮೋದಿ ಎಂಬ ವ್ಯಕ್ತಿಯಿಂದ. ಬಿಜೆಪಿ ಕಣಕ್ಕಿಳಿಸಿದ ಬಹುತೇಕ ಅಭ್ಯರ್ಥಿಗಳು ಇತರ ಪಕ್ಷಗಳ ಅಭ್ಯರ್ಥಿಗಳಿಗಿಂತ ಭಿನ್ನವಲ್ಲದಿದ್ದರೂ ಮೋದಿ ಎಂಬ ಒಂದೇ ಹೆಸರು ಅವರಿಗೆ ಬಲ ತುಂಬಿ ನಿರಾಯಾಸ ಗೆಲುವು ತಂದುಕೊಟ್ಟಿತು. ಭಾವನಾತ್ಮಕವಾಗಿ ಜನರನ್ನು ಸೆಳೆಯುವಲ್ಲಿ ಬಿಜಿಪಿಯೂ ಹೊರತಲ್ಲ, ಇತರರಿಗಿಂತ ಒಂದೇ ವ್ಯತ್ಯಾಸವೆಂದರೆ ಕುಟುಂಬ, ಸಂಬಂಧಗಳ ಹೆಸರು ಹೇಳದೇ ದೇಶ, ದೇಶಭಕ್ತಿ ಸೇರಿದಂತೆ ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ವಿಚಾರಗಳಿಂದ ಮತದರಾರನ್ನು ಹಿಡಿದಿಟ್ಟುಕೊಂಡರು. ದೇಶದಲ್ಲಿರುವ ಯುವಮತದಾರರನ್ನು ಅತ್ಯಂತ ಯಶಸ್ವಿಯಾಗಿ ತಮ್ಮ ಮತಗಳಾಗಿ ಪರಿವರ್ತಿಸಿಕೊಂಡರು. ಜೊತೆಗೆ, ಬೇರೆ ಪಕ್ಷಗಳಲ್ಲಿ ಮೋದಿಗೆ ಪರ್ಯಾಯ ನಾಯಕತ್ವರೂಪುಗೊಳ್ಳದೆ ಗೆಲುವು ಮತ್ತಷ್ಟು ಸುಲಭವಾಯಿತು.

ಆದರೆ, ಬಿಜೆಪಿ ಬಹುಮತಕ್ಕಿಂತಲೂ ಅತ್ಯಧಿಕ ಸ್ಥಾನಗಳನ್ನು ಪಡೆದು ವಿರೋಧ ಪಕ್ಷವೇ ಇಲ್ಲವಾಗಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಯೋಚಿಸಿದರೆ, ಪ್ರಸಕ್ತ ಅವಧಿಯಲ್ಲಾದರೂ ಒಂದೊಳ್ಳೆ ವಿರೋಧ ಪಕ್ಷದ ಅವಶ್ಯಕತೆ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಇತ್ತು. ಲಗಾಮಿದ್ದರೆ ಮಾತ್ರ ಕುದುರೆ ಸವಾರಿ ಚೆನ್ನಾಗಿರುತ್ತದೆ ಎಂಬುದು ವಾಸ್ತವ.


(ಪ್ರಸ್ತುತ ಲೇಖನ "ಪ್ರತಿಧ್ವನಿ" ಜಾಲತಾಣದಲ್ಲಿ ಪ್ರಕಟವಾಗಿದೆ)


- ಸ್ಕಂದ ಆಗುಂಬೆ.

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...