ಅಮ್ಮಮ್ಮ…
ನೀವಿಲ್ಲದೆ ಇಂದಿಗೆ ಒಂದು ವರ್ಷ! ಕಾಲ ಎಷ್ಟು ಆತುರದಲ್ಲಿದೆ? ನಿಮ್ಮ ತಣ್ಣಗಿನ ಕೆನ್ನೆಯನ್ನು ಕೊನೆಯ ಬಾರಿಗೆ ಒತ್ತಿ ಹಿಡಿದ ನನ್ನ ಕೈಗಳು ಈಗಿನ್ನೂ ನಡೆದು ಹೋದ ಘಟನೆಯೇನೋ ಎಂಬಂತೆ ಆ ಸ್ಪರ್ಶವನ್ನು ನೆನಪಿಟ್ಟುಕೊಂಡಿವೆ. ಸದ್ದಿಲ್ಲದೆ ಬದುಕಿಗೆ ಪೂರ್ಣವಿರಾಮವಿಟ್ಟ ನೀವು ನಮ್ಮೊಂದಿಗೆ ಇಲ್ಲ ಎನ್ನುವುದು ಒಂದು ವರ್ಷ ಕಳೆದ ಮೇಲೂ ಒಮ್ಮೊಮ್ಮೆ ಅನುಮಾನ ಹುಟ್ಟಿಸುತ್ತದೆ.
ನಿಮ್ಮ ವಿಚಿತ್ರ ನಗು, ಸುಮ್ನಿರು ಮಾರಾಯ್ನೇ ಎಂಬ ಮಾತು, ಆಹಾಹಾ.. ಎಂಬ ಉದ್ಘಾರ, ಖುಷಿಯಾದಾಗಲೆಲ್ಲಾ ತಟ್ಟುತ್ತಿದ್ದ ಜೋರು ಚಪ್ಪಾಳೆ, ರಾತ್ರಿ ಕಾಲು ನೀಡಿಕೊಂಡು ಔಷಧಿ ತೆಗೆದುಕೊಳ್ಳುತ್ತಿದ್ದ ರೀತಿ, ಉಬ್ಬಸ ಶುರುವಾದಾಗ ಸದ್ದು ಮಾಡುತ್ತಾ ಎಳೆದುಕೊಳ್ಳುತ್ತಿದ್ದ ಉಸಿರು ಎಲ್ಲವೂ ನಮ್ಮ ಕಣ್ಣು, ಕಿವಿಗಳಲ್ಲಿ ಜೀವಂತ ಇವೆ. ಭೌತಿಕವಾಗಿ ನೀವಿಲ್ಲವೆನ್ನುವುದನ್ನು ಬಿಟ್ಟರೆ, ನೀವು ಹೋಗಿದ್ದೀರಿ ಎನ್ನುವುದಕ್ಕೆ ಬೇರೆ ಪುರಾವೆಗಳನ್ನು ಕೊಡುವುದು ಕಷ್ಟ!
ಆ ಹಳೆ ಕಾಲದ ದೊಡ್ಡ ಮನೆಯಲ್ಲಿ ಎಲ್ಲೇ ನಿಂತರೂ ಕೇಳುವಂತಿದ್ದ ನಿಮ್ಮ ಧ್ವನಿ, ಜಗುಲಿಯ ಮುಂಡಿಗೆ ಕಂಬಕ್ಕೆ ಒರಗಿ ನಿಲ್ಲುತ್ತಿದ್ದ ರೀತಿ, ಮಕ್ಕಳು, ಮೊಮ್ಮಕ್ಕಳು ಯಾರಾದರೂ ಮನೆಗೆ ಬರುತ್ತಾರೆ ಎಂಬುದು ಗೊತ್ತಿದ್ದಾಗ ಹೊರಗಿನ ಬಾಗಿಲ್ಲಲ್ಲೇ ಕಾದು ನಿಂತು ನಗು ಬೀರುತ್ತಿದ್ದ ಪರಿ ಇವನ್ನೆಲ್ಲಾ ಮರೆಯುವುದಾದರೂ ಹೇಗೆ? ಮೊಮ್ಮಕ್ಕಳೆಂದರೆ ನಿಮಗೆ ಜಾಸ್ತಿ ಇಷ್ಟ ಅಲ್ವಾ!? ಆದರೆ, ಅಷ್ಟೂ ಜನ ಮೊಮ್ಮಕ್ಕಳ ಪೈಕಿ ನಾನೇ ನಿಮ್ಮನ್ನು ಹಚ್ಚಿಕೊಂಡಿದ್ದು ಕಡಿಮೆ ಅಂತ ಈಗಲೂ ನನಗನ್ನಿಸುತ್ತೆ. ಹಾಗಂತ ಯಾವತ್ತೂ ನೀವು ಅದರ ಬಗ್ಗೆ ಪುಕಾರು ಎತ್ತಲೇ ಇಲ್ಲ.
ಅಮ್ಮಮ್ಮ, ನಾನು ನಿಮ್ಮನ್ನು ಕೊನೆಯ ಬಾರಿ ನೋಡಿದ್ದು, ಮಾತನಾಡಿದ್ದು ನೀವು ಹೋಗುವುದಕ್ಕಿಂತ ಹದಿನೈದೋ ಇಪ್ಪತ್ತೋ ದಿನದ ಮುಂಚೆ ಅಲ್ವಾ? ಅವತ್ತು ನಿಮ್ಮ ಮನೆಗೆ ಬಂದು ಕಾರ್ಡೆಡ್ ಲ್ಯಾಂಡ್‌ಲೈನ್ ಫೋನಿಗೆ ಸಿಮ್ ಹಾಕಿ ಸಿಗ್ನಲ್ ಸಿಗೋ ಹಾಗೆ ಮಾಡ್ಕೊಟ್ಟಿದ್ದೆ. ಹೊರಡಬೇಕಾದರೆ ಯಾವತ್ತಿನ ಹಾಗೆ "ಪುಟ್ಟೂ ಇಲ್ ಬಾ ಅಂತಂದು ಕೈಗೆ ದುಡ್ ಇಟ್ಟಿದ್ರಿ" "ನಂಗ್ ಇವೆಲ್ಲಾ ಬ್ಯಾಡ ಅಮ್ಮಮ್ಮ.. ನಾ ಸಂಬ್ಳಕ್ ಕೆಲ್ಸ ಮಾಡಿದ್ದಲ್ಲ" ಅಂತ ತಮಾಷೆ ಮಾಡ್ದಾಗ.. "ಸ್ವಲ್ಪ ಸುಮ್ನಿರು ಮಾರಾಯ್ನೆ… ನಾ ಅದಕ್ಕಲ್ಲ ದುಡ್ ಕೊಟ್ಟಿದ್ದು, ಹಂಗೆಲ್ಲಾ ಹೇಳ್ಬೇಡ ಇಟ್ಕ" ಅಂದು, ನಿಧಾನಕ್ ಹೋಗು, ಕಾರ್ ಓಡ್ಸ್ತಾ ಜಾಗ್ರತೆ, ಮನೆಗ್ ಹೋದ್ ತಕ್ಷಣ ಫೋನ್ ಮಾಡು ಅಂತೆಲ್ಲಾ ಹೇಳಿದ್ರಿ. ಅದೇ ಕೊನೆಯ ಬಾರಿಗೆ ನಾ ನಿಮ್ಮೊಂದಿಗೆ ಮಾತಾಡಿದ್ದು, ಹೋಗ್ಬರ್ತೀನಿ ಅಂತ ಟಾಟಾ ಮಾಡಿದ್ದು…!
ನಾ ಮನೆಗೆ ಬರೋ ಅಷ್ಟ್ರಲ್ಲಿ ಅಮ್ಮನಿಗೆ ಫೋನ್ ಮಾಡಿ, "ನೋಡೇ, ನಿನ್ ಮಗ ಫೋನ್ ಸರಿ ಮಾಡ್ಕೊಟ್ ಹೋಗಿದಾನೆ. ಈಗ ಒಳ್ಗೇ ಕೂತ್ಗೊಂಡ್ ಮಾತಾಡ್ಬೋದ್.. ಆದ್ರೆ ಕಿಟ್ಕೆ ಒಂಚೂರ್ ಹಾಕಕ್ ಆಗಲ್ಲ, ವಯರ್ರು ಅಲ್ಲೇ ಸಂದೀಲ್ ಬಂದಿದೆ.. ಅಷ್ಟ್ ಬಿಟ್ರೆ ಕ್ಲೀನಾಗ್ ಮಾತಾಡಿದ್ ಕೇಳುತ್ತೆ" ಅಂದು ಖುಷಿಪಟ್ಟಿದ್ರಂತೆ, ಅಮ್ಮ ಇದನ್ನೆಲ್ಲಾ ನಂಗ್ ಹೇಳ್ದಾಗ ಅದೇನ್ ದೊಡ್ ಸಾಧ್ನೆನಾ ಮಾರಾಯ್ತಿ.. ಸುಮ್ನಿರು ಅಂತ ನಕ್ಕಿದ್ದೆ.
ಅದಾದ ಮೇಲೆ ನೀವು ಹೊಗೋ ಎರಡು ದಿನದ ಮುಂಚೆ ಸಂಜೆಯ ಹೊತ್ತಿಗೆ ನನ್ನ ಫೋನಿಗೆ ಕಾಲ್ ಮಾಡಿದ್ರಿ. ನೀವು ಕಾಲ್ ಮಾಡೋಕ್ಕಿಂತ ಐದು ನಿಮಿಷ ಮೊದಲಷ್ಟೇ ಕಾರಿಗೆ ಸಣ್ಣ ಆ್ಯಕ್ಸಿಡೆಂಟ್ ಆಗಿತ್ತು. ಅದೇ ಯೋಚನೆಯಲ್ಲಿದ್ದವನು ಫೋನ್ ರಿಂಗಾಗಿದ್ದನ್ನ ನೋಡಿ ಅಮ್ಮನಿಗೆ ಕೊಟ್ಟು ನೀನೇ ಮಾತಾಡು ಅಂತ ಹೇಳಿ ಸುಮ್ನಾಗಿದ್ದೆ. ಅಷ್ಟಾದ್ಮೇಲೂ ಅಮ್ಮ ಆ್ಯಕ್ಸಿಡೆಂಟ್ ಬಗ್ಗೆ ನಿಮಗೇನೂ ಹೇಳಿರ್ಲಿಲ್ಲ. ಆದ್ರೂ ನೀವೇ ಮಾತಾಡ್ತಾ ಮಾತಾಡ್ತಾ ಜಾಗ್ರತೆ ಓಡ್ಸಕ್ ಹೇಳು, ಸ್ಪೀಡ್ ಎಲ್ಲಾ ಬೇಡ ಅಂತ ಹೇಳಿದ್ರಂತೆ.
ಎಷ್ಟು ಜಾಗ್ರತೆ ಅಲ್ವಾ ನಿಮ್ಗೆ… ಅವತ್ತೇ ಅಮ್ಮ ಕೂಡ ನಿಮ್ ಜೊತೆ ಕೊನೆಯದಾಗಿ ಮಾತಾಡಿದ್ದು…!
ಅದೆಲ್ಲಾ ಆಗಿ ಪೂರ್ತಿ ಎರಡು ದಿನವೂ ಆಗಿರ್ಲಿಲ್ಲ… ಎಷ್ಟು ಬೇಗ ಕಳೆದು ಹೋಗಿಬಿಟ್ರಿ. ಹುಷಾರಿಲ್ಲದ ನಿಮ್ಮ ತಂಗಿಯನ್ನ ನೋಡಿ ಅವರ ಆರೋಗ್ಯದ ಬಗ್ಗೆ ಯೋಚ್ನೆ ಮಾಡ್ತಿದ್ದ ನೀವು ಅವರಿಗಿಂತ ಒಂದು ವಾರ ಮುಂಚೆಯೇ ಹೋಗಿಬಿಟ್ರಿ. ಒಂದೇ ವಾರದಲ್ಲಿ ಅಕ್ಕ - ತಂಗಿ ಇಬ್ರೂ ಹೋದ್ರಲ್ಲಾ ಅಂತ ಅದೆಷ್ಟು ಜನ ಸಂಕಟಪಟ್ರು!
ನೀವಿಲ್ಲ ಅನ್ನೋ ಸುದ್ದಿ ಹೇಳಕ್ಕೆ ಹಿರಿಯಮ್ಮ ಫೋನ್ ಮಾಡಿದಾಗ ಆಗಷ್ಟೇ ಒಂದು ಎಕ್ಸಾಂ ಬರ್ದು ಹೊರಗೆ ಬಂದಿದ್ದೆ, ನಾಳೆಯ ಎಕ್ಸಾಂ ಆದ್ರೂ ನೀಟಾಗ್ ಬರೀಬೇಕು ಅಂತ ಫ್ರೆಂಡ್ ಜೊತೆ ಮಾತಾಡ್ತಿದ್ದೆ.
"ಅಮ್ಮಮ್ಮ.. ಹೋಗಾಯ್ತು ಕಣಾ" ಅಂತ ಹಿರಿಯಮ್ಮ ಅಳ್ತಾ ಹೇಳಿದ ತಕ್ಷಣ ಏನೂ ತೋಚದಂತಾಗಿತ್ತು, ಎರಡೆರೆಡು ಬಾರಿ ಕೇಳಿ ಕನ್ಫರ್ಮ್ ಮಾಡ್ಕೊಂಡ್ಮೇಲೆ ಸ್ತಬ್ಧವಾಗಿ ಹೋಗಿದ್ದೆ.
"ಏನ್ ಮಾಡಕ್ಕಾಗಲ್ಲ ಆರಾಮಾಗಿ ಹೋದ್ರು, ನಪ್ಪಳೀಲಿಲ್ಲ ಅಂತ ಸಮಾಧಾನಿಸಿಕೊಂಡು" ಮಾರನೇ ದಿನದ ಎಕ್ಸಾಂ ಬಿಟ್ಟು ಸೀದಾ ಬಸ್ ಹತ್ತಿ ರಾತ್ರಿಯಷ್ಟರಲ್ಲಿ ನಿಮ್ಮ ಮನೆ ಅಂಗಳಕ್ಕೆ ಬಂದ್ರೆ… ನೀವು ತಣ್ಣಗೆ ಮಲಗಿದ್ರಿ!
ಅತೀ ಹತ್ತಿರದ ಸಂಬಂಧದಲ್ಲಿ ನಾ ನೋಡಿದ ಮೊದಲ ಸಾವು ನಿಮ್ಮದೇ… ಅಳು ಬರಲಿಲ್ಲ, ಹೋಗೇ ಬಿಟ್ರಲಾ ಅಂತ ಅಂದ್ಕೊಳ್ತಾ ಕೆನ್ನೆ ಒತ್ತಿ ಹಿಡಿದೆ… ನೀವು "ಸುಮ್ನಿರು ಮಾರಾಯ್ನೇ" ಅಂತ ಹೇಳ್ಲೂ ಇಲ್ಲ.. ಥಂಡಿಗೆ ಹೆದರುತ್ತಿದ್ದವರು ಹನಿಯುತ್ತಿದ್ದ ಮಳೆಗೆ ದೇಹವೊಡ್ಡಿ ಅಂಗಳದಲ್ಲಿ ಮಲಗಿಬಿಟ್ಟಿದ್ರಿ. ದೊಡ್ಡಿನಮನೆ ಎಂಬ ಊರಿನ ಅತ್ಯಂತ ದೊಡ್ಡದಾದ, ಹಳೆಯದಾದ, ಕತೆ ಹೇಳುವ ಶಕ್ತಿಯುಳ್ಳ ಮನೆಯ ಅಂಗಳದಲ್ಲಿ ಮಲಗಿ ನೀವೂ ಒಂದು ಕತೆಯಾಗಿಬಿಟ್ರಿ…
ಅಮ್ಮಮ್ಮ, ನೀವು ಹೋದ ಒಂದು ವರ್ಷದೊಳಗೆ ನಮ್ಮ ಸುತ್ತಮುತ್ತ ಎಷ್ಟೆಲ್ಲಾ ಬದಲಾವಣೆ ಆಯ್ತು ಗೊತ್ತಾ? ನಿಮ್ಮ ಹಿಂದೆಯೇ ಸ್ಪರ್ಧೆಗೆ ಬಿದ್ದವರಂತೆ ಅದೆಷ್ಟು ಜನ ನಮ್ಮನ್ನ ಅಗಲಿ ಹೋದರು.. ಹೋದ್ರೆ ಯಶೋಧೆ ಥರ ಹೋಗ್ಬೇಕು, ಸುಖದ ಸಾವು ಅಂತ ಹೇಳ್ತಿದ್ದ ನಮ್ಮನೆ ಅಜ್ಜನೂ ಹೋಗೇಬಿಟ್ರು… ಕಾಲ ತುಂಬಾ ಆತುರದಲ್ಲಿದೆ ಅಂತ ಹೇಳಿದ್ದು ಇದೇ ಕಾರಣಕ್ಕೆ!
ಅಮ್ಮಮ್ಮ… ಹೇಳೋಕೆ ಸುಮಾರ್ ಮಾತು ಬಾಕಿ ಇತ್ತು, ನಿಮ್ಮ ಜೊತೆಗೆ ಕೆಲ ಕೋಳಿ ಜಗಳ ಆಡ್ಬೇಕಿತ್ತು, ನಿಮ್ಮನ್ನ ಸುಖಾಸುಮ್ಮನೆ ರೇಗಿಸಿ ಗೋಳು ಹೊಯ್ಕೋಬೇಕಿತ್ತು!!
ಒಮ್ಮೆ ದೊಡ್ಡ ಮನ್ಸು ಮಾಡಿ ವಾಪಾಸ್ ಬರ್ತೀರಾ!? ಬರೋದಾದ್ರೆ ಒಂದ್ ಕಂಡೀಷನ್ನು ಇನ್ಯಾವತ್ತೂ ಹಠಕ್ಕೆ ಬಿದ್ದು ನೆಬ್ಯುಲೈಸೇಷನ್ ಮಾಡಿಸ್ಕೋಬಾರ್ದು…! ಬರ್ತೀರಾ ಅನ್ನೋದಾದ್ರೆ ಹೇಳಿ, ನಿಮ್ಮನೆ ಮುಂಡಿಗೆ ಕಂಬಕ್ಕೆ ಒರಗಿಕೊಂಡು ಕಾಯ್ತಾ ಇರ್ತೀನಿ.
- ಸ್ಕಂದ

No comments:
Post a Comment