Thursday, 13 June 2019

ಔಟ್‌ಡೇಟೆಡ್ ಹುಡುಗ ನಾನು.



ಬದಲಾವಣೆ ಜಗದ ನಿಯಮ, ಕಾಲಕ್ಕೆ ತಕ್ಕಂತೆ ಬದಲಾವಣೆ ಸಹಜ ಎಂಬ ಉಪದೇಶಗಳನ್ನೆಲ್ಲಾ ನಾವು ದಿನಾಲೂ ಕೇಳಿರುತ್ತೇವೆ, ನೋಡಿರುತ್ತೇವೆ, ಅನುಭವಿಸಿರುತ್ತೇವೆ. ಕೆಲವೊಂದು ಬದಲಾವಣೆಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನಾವರಿಸಿಬಿಡುತ್ತವೆ. ಆದರೆ ಕೆಲವು ವಿಚಾರಗಳು ಮಾತ್ರ ನಮಗೂ ಅವುಗಳಿಗೂ ಆಣೆಭಾಷೆ ಆಗಿದೆಯೇನೋ ಎಂಬಂತೆ ಎಷ್ಟೇ ಬಯಸಿದರೂ ನಮ್ಮದಾಗದೇ ಬದಲಾವಣೆಗೆ ಅನುವು ಮಾಡಿಕೊಡದೇ ಹಾಗೆಯೇ ಉಳಿದುಕೊಳ್ಳುತ್ತವೆ. ಅಂತಹ ವಿಚಾರಗಳನ್ನು ನಾವು ಎಷ್ಟೇ ಸಹಜವಾಗಿ ತೆಗೆದುಕೊಂಡರೂ, ಅದರಲ್ಲೇ ಖುಷಿ ಕಂಡುಕೊಂಡರೂ ಯಾವುದೋ ಮಾಯಕದಲ್ಲಿ ಹೊತ್ತಲ್ಲದ ಹೊತ್ತಲ್ಲಿ ತಲೆ ಹೊಕ್ಕು ನಮ್ಮನ್ನು ಔಟ್‌ಡೇಟೆಡ್ ಎಂಬಂತೆ ಬಿಂಬಿಸಿ ನಮ್ಮೊಳಗೆ ತೊಳಲಾಟವೊಂದನ್ನು ಹುಟ್ಟುಹಾಕುತ್ತವೆ. ಹಾಗಂತ ಒತ್ತಾಯ ಪೂರ್ವಕವಾಗಿ ಬದಲಾವಣೆ ಬಯಸಿದರೆ ವಿಚಿತ್ರ, ವಿಸ್ಮಯ ಜೀವಿಗಳಂತೆ ಕಂಡು ನಮ್ಮ ಮೇಲೆ ನಮಗೇ ರೇಜಿಗೆ ಹುಟ್ಟಿಬಿಡುವ ಸಾಧ್ಯತೆಯೂ ಹೆಚ್ಚು! ಇಂತಹ ಪೇಚಾಟಕ್ಕೆ ಸಿಲುಕಿದವರ ಗೋಳು ಮುಗಿಯದ ಮೆಗಾ ಧಾರಾವಾಹಿಗಳಂತೆ!

ಕಾಲೇಜಿನ ಮೆಟ್ಟಿಲು ಹತ್ತಿದ ಮೊದಲ ದಿನ. ಕ್ರಾಪ್ ತೆಗೆದು ತಲೆ ಬಾಚಿಕೊಂಡು, ಹಣೆಗೆ ಚಿಕ್ಕದಾಗಿ ಕುಂಕುಮ ಇಟ್ಟುಕೊಂಡು, ಎರಡು ಜೇಬಿನ ಚೌಕಳಿ ಶರ್ಟು, ಕಪ್ಪು ಪ್ಯಾಂಟು ತೊಟ್ಟು, ಕೈಗೊಂದು ವಾಚ್ ಕಟ್ಟಿಕೊಂಡು ಕ್ಲಾಸ್ ರೂಮಿನೊಳಗೆ ಕಾಲಿಟ್ಟಿದ್ದೆ. ಹೊರಗಿನ ವಾತಾವರಣ ಸಾಧಾರಣವಾಗಿತ್ತು ಅನ್ಸತ್ತೆ ಆದ್ರೆ ಕ್ಲಾಸ್ ರೂಮಿನ ಒಳಗೆ ಹೊಸತಾಗಿ ಬಂದವರು ತಮ್ಮ ತಮ್ಮ ಪರಿಚಯ ಮಾಡಿಕೊಳ್ತಾ ಇದ್ದಿದ್ರಿಂದ ಒಂಚೂರು ಬಿಸಿಯಿತ್ತು. ಆ ಬಿಸಿಯಲ್ಲೇ ಮೊದಲ ಬಾರಿಗೆ ನಾನು ಔಟ್‌ಡೇಟೆಡ್ ಎನ್ನುವ ಅನುಮಾನ ತಲೆಗೆ ಹೊಕ್ಕಿದ್ದು. ಅಪ್ಪಟ ಮಲೆನಾಡಿನಿಂದ ಮೈಸೂರಿಗೆ ಬಂದು ಬಿದ್ದ ಮಾಣಿಯೊಬ್ಬ ಅನುಭವಿಸದ ತೊಳಲಾಟಗಳ ಅಧ್ಯಾಯ ಆರಂಭವಾಗಿದ್ದು!

1. ಮಲೆನಾಡಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದು ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡವನಿಗೆ ಮೈಸೂರು ಒಂದಷ್ಟು ಅಚ್ಚರಿಗಳೊಂದಿಗೆ ಎದುರಾಗಿತ್ತು. ಶಾಲೆಗೆ ಹೋದ ದಿನದಿಂದ ಹೈಸ್ಕೂಲಿನ ತನಕವೂ ಉಳಿದೆಲ್ಲರಿಗಿಂತ ಕುಳ್ಳಗಿದ್ದ ನನಗೆ ಫಸ್ಟ್ ಬೆಂಚ್ ಅನಿವಾರ್ಯ ಬಂಧು. ಇದರಿಂದ ರೋಸಿ ಹೋಗಿದ್ದ ನಾನು ಪಿಯುಸಿಯ ಮೊದಲ ದಿನ ಬಯಸಿ ಬಯಸಿ ಕಟ್ಟಕಡೆಯ ಬೆಂಚು ಹಿಡಿದಿದ್ದೆ. ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಎಂಬಂತೆ ಯಾರೂ ಕೂರದೇ ಖಾಲಿ ಬಿದ್ದಿದ್ದ ಫಸ್ಟ್ ಬೆಂಚಿಗೆ ಲೆಕ್ಚರರ್ಸ್ ಎಳೆದು ತಂದು ಕೂರಿಸಿದ್ದರು. ತರಗತಿಯಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಪರಿಚಯ ಮಾಡಿಕೊಳ್ಳುವಾಗ ಒಬ್ಬೊಬ್ಬರ ವೇಷ ಭೂಷಣವೂ ನನಗೆ ಹೊಸತಾಗಿ ಕಂಡಿತ್ತು. ಅದರಲ್ಲೂ “ಮೈ ನೇಮ್ ಈಸ್...” ಎಂದು ರಾಗವಾಗಿ ಪರಿಚಯ ಆರಂಭಿಸಿಕೊಂಡ ಹುಡುಗಿ ತೊಟ್ಟಿದ್ದ ಟೈಟ್ ಪ್ಯಾಂಟ್, ಸ್ಟೈಲಿಶ್ ಟಾಪ್, ಶೂ ನೋಡಿದ ಮೇಲೆ ನನ್ನ ಎರಡು ಜೇಬಿನ ಅಂಗಿ, ಹೇರ್ ಸ್ಟೈಲುಗಳೆಲ್ಲ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ಕಾಲವನ್ನು ನೆನಪಿಸಿ ನನ್ನನ್ನು ಒಂದೇ ಏಟಿಗೆ ಔಟ್‌ಡೇಟೆಡ್ ಮಾಡಿಬಿಟ್ಟವು.

2. ಅದು ಮೈಸೂರಿನಲ್ಲಿ ಮೊದಲ ಬಾರಿಗೆ ಸಲೂನ್ ಹೊಕ್ಕ ದಿನ. ನಮ್ಮೂರಿನ ಸಲೂನ್ ಶಾಪಿಗಿಂತ ಮೂರು ಪಟ್ಟು ದೊಡ್ಡದಿದ್ದ, ಬಣ್ಣ ಬಣ್ಣದ ಲೈಟುಗಳು, ಟಿವಿ, ಏಸಿಗಳಿದ್ದ ಶಾಪಿನ ಮೆತ್ತನೆಯ ಕುರ್ಚಿಯಲ್ಲಿ ಕೂರಿಸಿದ ಹೇರ್ ಡ್ರೆಸ್ಸರ್ “ಹೇಗಿರ್ಲಿ, ಯಾವ್ ಸ್ಟೈಲ್ ಓಕೆ?” ಅಂದಾಗ ಊರಿನಲ್ಲಿ ಕೇಳುತ್ತಿದ್ದ “ಶಾರ್ಟ್, ಮೀಡಿಯಂ, ಲಾಂಗ್” ಪದಗಳು ಮಾತ್ರ ನೆನಪಾಗಿ ಶಾರ್ಟ್ ಎಂದೆ. ಕಿಸಕ್ಕನೆ ನಕ್ಕ ಪುಣ್ಯಾತ್ಮ ಈಗಿನ ಹುಡ್ಗುರು ಯಾರೂ ಶಾರ್ಟ್ ಹೇರ್ ಇಷ್ಟಪಡಲ್ಲ, ಸ್ಲೋಪ್ ಮಾಡ್ತೀನಿ ಅಂತೇಳಿ ಕನ್ನಡಿ ಮುಂದೆ ಕೂತ ನಾನು ನನಗೇ ಔಟ್‌ಡೇಟೆಡ್ ಎನ್ನುವಂತೆ ಮಾಡ್ಬಿಟ್ರು. ಇವತ್ತಿಗೂ ಹತ್ತಾರು ಹೇರ್ ಸ್ಟೈಲ್‌ಗಳು ಚಾಲ್ತಿಯಲ್ಲಿದ್ದರೂ ಮೈಸೂರಿನ ಸಲೂನಿನವರು ಪರಿಚಯಿಸಿದ ಸ್ಲೋಪ್ ಕಟಿಂಗ್ ಸ್ಟೈಲ್ ನನಗೆ ಕಂಫರ್ಟೇಬಲ್. ಅದೊಮ್ಮೆ ಹಠಕ್ಕೆ ಬಿದ್ದು ಹೆಬ್ಬುಲಿ ಸ್ಟೈಲ್ ಮಾಡಿಸಿಕೊಳ್ಳಲು ಹೋಗಿ ನಂತರ ರೂಮಿಗೆ ಬಂದಾಗ ಅದು ಹೆಬ್ಬುಲಿಯೋ, ಗಬ್ಬುಲಿಯೋ ಎಂದು ಜಿಗುಪ್ಸೆ ಹುಟ್ಟಿದ ಕಾರಣ ಔಟ್‌ಡೇಟೆಡ್ ಆಗಿ ಉಳಿಯುವುದರಲ್ಲೇ ತೃಪ್ತನಾಗಿದ್ದೇನೆ.

3. ಅದೊಮ್ಮೆ ಹೊಸಾ ಡ್ರೆಸ್ ತೆಗೆದುಕೊಳ್ಳೋಕೆ ಅಂತ ದೊಡ್ಡ ಮಾಲ್ ಒಂದಕ್ಕೆ ನಾವೊಂದಷ್ಟು ಹುಡುಗ ಹುಡುಗಿಯರೆಲ್ಲಾ ಒಟ್ಟಾಗಿ ಹೋಗಿದ್ವಿ. ರಾಶಿ ರಾಶಿ ಬಟ್ಟೆಗಳ ಮಧ್ಯೆ ತೀರಾ ಸಿಂಪಲ್ಲು ಎಂಬಂತ ಶರ್ಟ್ ಒಂದನ್ನು ಆರಿಸಿ ತೆಗೆದು ಇದು ಇಷ್ಟವಾಯ್ತು ಅಂದೆ. ನಾ ಆರಿಸಿದ ಶರ್ಟು ಅಷ್ಟೇನೂ ಕಳಪೆ ಅಲ್ಲದಿದ್ದರೂ ಹುಡುಗಿಯರ ಗುಂಪು ಅದನ್ನು ಕಸಿದುಕೊಂಡು ಹಳೇ ಕಾಲದವನ ಥರ ಆಡ್ಬೇಡ ಅಂತ ದಬಾಯಿಸಿದರು. “ಫಂಕಿ”ಯಾಗಿರ್ಬೇಕು ಅಂತ ಬಣ್ಣಬಣ್ಣದ ದೊಗಲೆ ಡ್ರೆಸ್ ಒಂದನ್ನು ಹುಡುಕಿ ಕೊಟ್ಟು ಇದು ಟ್ರೆಂಡಿಂಗ್ ಅಲ್ಲಿದೆ ತಗೋ ಎಂದರು. ಟ್ರಯಲ್ ರೂಮಿನ ಕನ್ನಡಿಯ ಮುಂದೆ ನಿಂತಾಗ ಅವರು ಹೇಳಿದ ಫಂಕಿಯ ಬದಲು ‘ಮಂಕಿ’ಯಂತೆ ಕಂಡು ನನ್ನ ಮೇಲೆ ನನಗೇ ವೈರಾಗ್ಯ ಮೂಡಿತು ಮತ್ತು ಟ್ರೆಂಡಿಂಗ್ ಅಲ್ಲಿ ಇದ್ದ ಡ್ರೆಸ್ ಒಂದು ನನ್ನನ್ನು ಸಂಪೂರ್ಣ ಔಟ್‌ಡೇಟೆಡ್ ಮಾಡಿಬಿಟ್ಟಿತು.

4. ನನಗೆ ಶೂ ಹಾಕುವುದೆಂದರೆ ಅತಿದೊಡ್ಡ ಕಷ್ಟದ ಕೆಲಸ! ಅನಿವಾರ್ಯತೆಗೆ ಸಿಕ್ಕು ನಾಲ್ಕಾರು ಜೊತೆ ಶೂಗಳನ್ನು ಕೊಂಡಿದ್ದರೂ ಅದನ್ನು ಹಾಕಲು ಸೋಮಾರಿತನ ಅಡ್ಡಬಂದು ಜೊತೆಗೆ ಅದರಿಂದ ನನ್ನ ಸ್ಟ್ಯಾಂಡರ್ಡ್ ಏನೂ ಹೆಚ್ಚುವುದಿಲ್ಲ ಎಂಬ ಮನಸ್ಥಿತಿ ಬೆಳೆದ ಕಾರಣ ಎಷ್ಟೋ ಸನ್ನಿವೇಶಗಳಲ್ಲಿ, ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ  ಔಟ್‌ಡೇಟೆಡ್ ಆಗಿ ಕಾಣಿಸಿಕೊಂಡಿದ್ದೇನೆ. ಅದರಲ್ಲೂ ಬರ್ತ್ ಡೇ ಪಾರ್ಟಿ, ನ್ಯೂ ಇಯರ್ ಪಾರ್ಟಿ ಅಂತ ಯಾರಾದರೂ ನನ್ನನ್ನು ಎಳೆದುಕೊಂಡು ಹೋದರೆ ಕುಣಿಯದೇ, ಕೂಗದೇ, ಹೊರಳಾಡದೇ ಡೀಸೆಂಟು ಹುಡುಗನಂತೆ ತಣ್ಣಗೆ ನಿಂತು ಕರೆದುಕೊಂಡು ಹೋದವರಿಗೇ ಜಿಗುಪ್ಸೆ ಮೂಡಿ ಔಟ್‌ಡೇಟೆಡ್ ಫೆಲೋ ಎಂದುಕೊಳ್ಳುವಂತೆ ಮಾಡಿದ್ದೇನೆ.

5. ಜನರೇಷನ್ ಗ್ಯಾಪ್ ಕಾರಣದಿಂದ ಔಟ್‌ಡೇಟೆಡ್ ಎನ್ನಿಸಿಕೊಳ್ಳುವುದಕ್ಕೂ, ಜನರೇಷನ್ನಿನ ಸಾಲಿನಲ್ಲಿದ್ದು ಗುಂಪಿಗೆ ಸೇರದ ಪದದಂತೆ ಕಾಣುವುದಕ್ಕೂ ವ್ಯತ್ಯಾಸವಿದೆ. ಅದೆಷ್ಟೋ ಬಾರಿ ಔಟ್‌ಡೇಟೆಡ್ ಅಂದ್ರೇನು? ಔಟ್‌ಡೇಟೆಡ್ ಆದ್ರೆ ಸಮಸ್ಯೆ ಏನು? ಯಾವುದೆಲ್ಲಾ ಔಟ್‌ಡೇಟೆಡ್ ಅಂತೆಲ್ಲಾ ತಲೆಕೆಡಿಸಿಕೊಂಡಿದ್ದೇನೆ. ಹುಡುಗಿಯರ ಜೊತೆ ಮಾತಾಡಲು ಹಿಂಜರಿದಾಗ, ಶಿಳ್ಳೆ ಹೊಡೆಯೋಕೆ ಬರಲ್ಲ ಎಂದಾಗ, ಗಾಗಲ್ಸ್ ಬದಲು ಕೂಲಿಂಗ್ ಗ್ಲಾಸ್ ಅಂದಾಗ, ಶಾರ್ಟ್ಫಾರ್ಮ್ ಮೆಸೇಜ್‌ಗಳ ಅರ್ಥ ಹುಡುಕುವಾಗ ಔಟ್‌ಡೇಟೆಡ್ ಅಂತ ಹೇಳುವುದನ್ನು ಕೇಳಿ ತಲೆಕೆರೆದುಕೊಂಡಿದ್ದೇನೆ. ಈಗೀಗ ಕೆಲವರು ಔಟ್‌ಡೇಟೆಡ್ ಪದಕ್ಕೂ ಪರ್ಯಾಯ ಹುಡುಕಿ “ನೀವ್ ಬಿಡಿ” ಅಂದುಬಿಡ್ತಾರೆ. ಹಂಗಂದ್ರೆ ಅಂತ ಮರುಪ್ರಶ್ನೆ ಮಾಡದಷ್ಟು ಅಪ್‌ಡೇಟ್ ಆಗಿದ್ದೇನೆ ಎಂಬ ಸಮಾಧಾನವಿದೆ. ಒತ್ತಾಯಪೂರ್ವಕವಾಗಿ ಟ್ರೆಂಡ್ ಫಾಲೋ ಮಾಡುವ ಬದಲು ನಮಗೆ ಕಂಫರ್ಟ್ ಆಗಿದ್ರೆ ಸರಿ ಔಟ್‌ಡೇಟೆಡ್ ಆದ್ರೆ ಏನು? ಅಪ್‌ಡೇಟೆಡ್ ಆದ್ರೆ ಏನು? ಎಂದು ಸಮಾಧಾನಿಸಿಕೊಳ್ಳುವುದನ್ನು ಕಲಿತಿದ್ದೇನೆ.

ಈ ಬರಹ ಆರಂಭಿಸುವ ಮುನ್ನವೂ ಅಷ್ಟೇ, ಜಾಲಿಯಾಗಿ ಏನಾದರೂ ಬರೆಯಬೇಕು ಆದ್ರೆ ಏನು ಅಂತ ಗೊತ್ತಾಗ್ತಿಲ್ಲ ಅಂತ ಅತ್ತೆಗೆ ಹೇಳಿದಾಗ ಒಂದಷ್ಟು ವಿಷಯಗಳ ಪಟ್ಟಿಯನ್ನೇ ತೆರೆದಿಟ್ಟುಬಿಟ್ಟರು. ಆಗಲೇ ಮತ್ತೊಮ್ಮೆ ಮಗದೊಮ್ಮೆ ಅತೀ ತೀವ್ರವಾಗಿ ನಾನು ಔಟ್‌ಡೇಟೆಡ್ ಎನ್ನಿಸಿದ್ದು ಮತ್ತು ಅದೇ ಕಾರಣದಿಂದಲೇ ಇಷ್ಟುದ್ದ ಬರೆದಿದ್ದು. ಸ್ಟಿಲ್ ಐ ಆ್ಯಮ್ ಪ್ರೌಡ್ ಟು ಬಿ ಎ ಔಟ್‌ಡೇಟೆಡ್ ಫೆಲೋ!




ಈ ಬರಹ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.

(ಮೂಲಪ್ರತಿ)


  • ಸ್ಕಂದ ಆಗುಂಬೆ

1 comment:

  1. ಗೆಳೆಯ, ನಿನ್ನ ಕನ್ನಡ ಬರವಣಿಗೆಯನ್ನ....ಓದುವುದಕ್ಕೆ ಆನಂದ . ನೀ ಬರೆದ outdated ಹುಡುಗ ನಾನು ಎಂಬ ಬರಹ ತುಂಬಾ ಚೆನ್ನಾಗಿದೆ. puc ವ್ಯಾಸಂಗ ಮಾಡುತ್ತಿದ್ದಾಗಿನ ಕೆಲ ನೆನಪುಗಳು...ಮರುಕಳಿಸಿದವು....ಅದರಲ್ಲಿ ಮೊದಲನೇ ದಿನ ಬರಹದಲ್ಲಿ ತಿಳಿಸಿರುವ ಹಾಗೆ ನೀನು ಲಾಸ್ಟ್ ಬೆಂಚನಿಂದ ಮೊದಲನೇ ಬೆಂಚ್ ಗೆ ಬಂದಾಗ ನಿನ್ನ ಪಕ್ಕಾ ನಾನೇ ಕುಳಿತಿದ್ದೆ ಮಾರಾಯ ..ಅದೇ ದಿನ ನಾವು ಪರಿಚಯವಾಗಿದ್ದು ಅಂದೆ ನಿನ್ನ ಭಾಷಣ ಕೇಳಿ ನನಗೆ..ನಿನ್ನಲ್ಲಿ ಒಳ್ಳೆಯ..ಅಲೋಚನೆಗಳಿವೆ.ಅಂದುಕೊಂಡಿದ್ದೆ..ನಿನ್ನ ಬರವಣಿಗೆ...ಹೀಗೆ..ಮುಂದುವರಿಯಲಿ...ನಿನ್ನ ಗೆಳೆಯನಾಗಿ...ನಾನು ನಿನಗೊಬ್ಬ ಅಭಿಮಾನಿ. ಆದರೆ...ನನಗೆ..ಇನ್ನ ಒಂದು ಅನುಮಾನ ಕಾಡುತ್ತಿದೆ.ನೀ ಯಾಕೆ..ವಿಜ್ಞಾನ ವಿಭಾಗ ಅರಿಸಿಕೊಂಡಿದ್ದೆ ಅಂತ??

    ReplyDelete

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...