Thursday, 2 November 2017

ಕನ್ನಡ ಟಂಗ್ ಟ್ವಿಸ್ಟರ್




೬೨ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪ್ರಜಾವಾಣಿ ದಿನಪತ್ರಿಕೆ ಏರ್ಪಡಿಸಿದ್ದ, ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್ ವೀಡಿಯೋ ಇದಾಗಿದ್ದು, ಪ್ರಜಾವಾಣಿ ಅಂತರ್ಜಾಲ ಪುಟದಲ್ಲಿ ಪ್ರಕಟಗೊಂಡಿದೆ.
ವೀಡಿಯೋದಲ್ಲಿ ಸ್ಕಂದ ಹಸ್ಸೀಮನೆ ಎಂದು ತಪ್ಪಾಗಿದ್ದು ಅದು ಸ್ಕಂದ ಅಸೀಮನೆ ಆಗಬೇಕಿತ್ತು.

Monday, 9 October 2017

ನವರಸ


ಬದುಕೆಂಬ ನಳಪಾಕ
ಭಾವನೆಯೇ ಒಗ್ಗರಣೆ
ಚಿಟಪಟನೆ ಸಿಡಿಯುವುದು
ಘಮ್ಮೆಂದು ಹರಡುವುದು
ಖಾರ ತುಸು ಮುಂದಾಗೆ
ಕಣ್ಣಾಲಿ ತುಂಬುವುದು
ಸಿಹಿ ಖಾದ್ಯ ಬಾಯ್ಗಿಡಲು
ನಾಲಿಗೆ ನಾಚುವುದು
ಉಪ್ಪು ಹದ ತಪ್ಪಿದರೆ
ಭಯಂಕರ ಕೋಪ
ಜಾಸ್ತಿ ಹುಳಿ ಹಿಂಡಿದರೆ
ಬೀಭತ್ಸ ರೂಪ
ಹೊಟ್ಟೆ ಬಿರಿ ತಿಂದರೆ
ವಾಯು ಭಾರ ಕುಸಿತ
ಬಿಗಿಹಿಡಿದು ತೇಗಿದರೆ
ಮನವು ಶಾಂತ

ಎಂಬಲ್ಲಿಗೆ ಬದುಕು ಸಂತೃಪ್ತವಾಯ್ತು
ನವರಸಗಳ ಮೇಳ ಸಂಪನ್ನವಾಯ್ತು..

- ಅನಾಸ್ಕ

Saturday, 7 October 2017

ಅವನು - ಅವಳು ಮತ್ತು ವಿಕ್ರಾಂತ್



ಬಿಟ್ಟು ಹೋಗಿದ್ದ.. ಸೌಜನ್ಯಕ್ಕೆ ತಿರುಗಿಯೂ ನೋಡದೆ ಬೈಕ್ ಸ್ಟಾರ್ಟ್ ಮಾಡಿದವನು ಭರ್ರನೆ ಹೊಗೆಯೆಬ್ಬಿಸಿ ಹೊರಟುಹೋಗಿದ್ದ. ಹಸಿರು ಹುಲ್ಲು ಹಾಸಿನ ಮೇಲೆ ಕುಳಿತಿದ್ದವಳ ಕನಸು ಸುಡುತ್ತಿತ್ತು.

ಇಷ್ಟಕ್ಕೂ ಅವಳು ಮಾಡಿದ ತಪ್ಪಾದರೂ ಏನು? ಮೊನ್ನೆ ಕಾಲೇಜಿಗೆ ಹೋಗಲು ಬಸ್ ತಪ್ಪಿಸಿಕೊಂಡಾಗ ಅವಳದೇ ತರಗತಿಯ ವಿಕ್ರಾಂತ್ ಬೈಕಿನಲ್ಲಿ ಹೋಗೋಣ ಬಾ ಅಂತ ಕರೆದಿದ್ದ, ತರಗತಿಯ ಹುಡುಗನಾದ್ದರಿಂದ ಇವಳೂ ಕೂಡ ಹೆಚ್ಚು ಯೋಚಿಸದೆ ಬೈಕ್ ಹತ್ತಿದ್ದಳು. ಎಡವಟ್ಟಾಗಿದ್ದೇ ಅಲ್ಲಿ.. ವಿಕ್ರಾಂತ್ ಪಾಪದ ಹುಡುಗನಾದರೂ ಆತನಿಗೂ ಇವಳ ಪ್ರಿಯಕರ ಮನೋಹರನಿಗೂ ಸಣ್ಣ ಮನಸ್ತಾಪವಿತ್ತು. ಮೇಲ್ನೋಟಕ್ಕೆ ತೋರಿಸಿಕೊಳ್ಳುತ್ತಿರಲಿಲ್ಲವಾದರೂ ಒಳಗೊಳಗೇ ದ್ವೇಷಿಸುತ್ತಿದ್ದರು. ಇದಕ್ಕೆಲ್ಲಾ ಮೂಲ ಕಾರಣ ವಿಕ್ರಾಂತ್ ಪ್ರಿಯಾಳಿಗೆ ಸದ್ದಿಲ್ಲದೇ ಕಾಳು ಹಾಕುತ್ತಿದ್ದ. ಮನೋಹರ್ ಮತ್ತು ಪ್ರಿಯಾ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಅದಾಗಲೇ ಎರಡು ವರ್ಷ ಕಳೆದಿತ್ತು, ಅವರ ಪ್ರೇಮ ಪುರಾಣ ಇಡೀ ಕಾಲೇಜಿಗೇ ಗೊತ್ತಿದ್ದರಿಂದ ಯಾರೂ ಆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಹೀಗಿರುವಾಗಲೇ ವಿಕ್ರಾಂತನಿಗೆ ಪ್ರಿಯಾಳ ಮೇಲೆ ಆಕರ್ಷಣೆ ಹುಟ್ಟಿದ್ದು. ಹೇಳಿ ಕೇಳಿ ವಿಕ್ರಾಂತ್ ಶ್ರೀಮಂತರ ಮನೆಯ ಹುಡುಗ, ಇಡೀ ಕಾಲೇಜೇ ಅವನತ್ತ ತಿರುಗಿ ನೋಡುವಂತೆ ದಿನಕ್ಕೊಂದು ಬಗೆಯ ಬೈಕು, ಬಟ್ಟೆ, ಶೂಗಳೊಂದಿಗೆ ಬರುತ್ತಿದ್ದ. ಇವನಿಗೆ ಪ್ರಿಯಾ ಮತ್ತು ಮನೋಹರರ ಕಥೆ ಗೊತ್ತಿತ್ತಾದರೂ ಹಣದ ಮದ ಏರಿದ್ದರಿಂದ ಭಾವನೆಗಳ ವಿರುದ್ಧ ಯುದ್ಧ ಸಾರಿದ್ದ. ಹೇಗಾದರೂ ಮಾಡಿ ಪ್ರಿಯಾಳನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳಬೇಕೆಂದು ಪಣ ತೊಟ್ಟು, ಮನೋಹರನಿಗೆ ಸೆಡ್ಡು ಹೊಡೆದಿದ್ದ. ಅವನ ಮಾತು ಕೇಳಿ ಮನೋಹರನಿಗೆ ಕಸಿವಿಸಿಯಾದರೂ ಪ್ರಿಯಾಳಿಗೆ ಈ ವಿಚಾರ ತಿಳಿಸದಿರಲು ನಿರ್ಧರಿಸಿ, ಸ್ನೇಹಿತರೊಡನೆ ಸೇರಿ ವಿಕ್ರಾಂತನನ್ನು ಹಣಿಯಲು ಸಿದ್ಧತೆ ನಡೆಸುತ್ತಿದ್ದ. ಇದ್ಯಾವುದರ ಪರಿವೆಯೇ ಇಲ್ಲದ ಪ್ರಿಯಾ ಎಂದಿನಂತೇ ಮನೋಹರನ ಜೊತೆ ನಗುನಗುತ್ತಾ ಓಡಾಡಿಕೊಂಡಿದ್ದಳು. ಅವಳು ಮನೋಹರನ ಕೈ ಹಿಡಿದಾಗಲೆಲ್ಲಾ ವಿಕ್ರಾಂತ ಉರಿದು ಬೀಳುತ್ತಿದ್ದರೆ, ಮನೋಹರ ಜಗತ್ತನ್ನೇ ಗೆದ್ದವನಂತೆ ಬೀಗುತ್ತಿದ್ದ. ಬರುಬರುತ್ತಾ ಇದು ವಿಕ್ರಾಂತನಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಮಟ್ಟಕ್ಕೆ ದ್ವೇಷ ಹುಟ್ಟುಹಾಕಿತು.

ಅಸಲಿಗೆ ಸುಮಾರು ವಾರಗಳಿಂದ ವಿಕ್ರಾಂತ ಪ್ರಿಯಾಳನ್ನು ಹಿಂಬಾಲಿಸಲು ಶುರುಮಾಡಿದ್ದ, ಆಗಾಗ ಪ್ರಿಯಾಳ ಜೊತೆ ನಗುತ್ತಾ ಮಾತನಾಡುವುದು ಅದೂ ಇದೂ ಅನ್ನುತ್ತಾ ಸೇಡಿನ ಮೊದಲ ಹೆಜ್ಜೆ ಇಟ್ಟಿದ್ದ. ಇತ್ತ ಮನೋಹರ ಪ್ರಿಯಾಳಿಗೆ ವಿಷಯ ಹೇಳಲೂ ಆಗದೆ, ಸುಮ್ಮನಿರಲೂ ಆಗದೆ ಒದ್ದಾಡತೊಡಗಿದ್ದ. ವಿಕ್ರಾಂತನ ಜೊತೆ ಇವಳು ನಕ್ಕು ಮಾತಾನಾಡಿದಾಗೆಲ್ಲಾ ಮನೋಹರನಿಗೆ ಒಳಗೊಳಗೆ ಅಸೂಯೆ ಹುಟ್ಟಿ, ಪ್ರಿಯಾಳ ಮೇಲೆ ಅನುಮಾನ ಪಡುವಂತೆ ಮಾಡಿತು.
ಇದಕ್ಕೆ ಮತ್ತಷ್ಟು ಇಂಬು ನೀಡುವಂತೆ ಪ್ರಿಯಾ ಅವತ್ತು ವಿಕ್ರಾಂತನ ಗಾಡಿಯಲ್ಲಿ ಬಂದಿದ್ದಳು. ಕಾಲೇಜಿನ ಗೇಟಿನಲ್ಲಿ ನಿಂತು ಪ್ರಿಯಾಳಿಗಾಗಿ ಕಾಯುತ್ತಿದ್ದ ಮನೋಹರ ಆ ದೃಶ್ಯವನ್ನು ನೋಡಿ ದಿಗ್ಭ್ರಾಂತನಾಗಿದ್ದ. ಬೈಕಿಳಿದು ಬಳಿ ಬಂದ ಪ್ರಿಯಾ ಹಾಯ್ ಎಂದರೂ ಇವನು ಮೌನವಾಗಿದ್ದ. ಅವತ್ತು ಸಂಜೆಯ ತನಕವೂ ಯಾವುದಕ್ಕೂ ಸರಿಯಾಗಿ ಉತ್ತರಿಸದ ಮನೋಹರ, ತರಗತಿಗಳೆಲ್ಲಾ ಮುಗಿದ‌ ಮೇಲೆ ಪ್ರಿಯಾಳ ಕೈ ಹಿಡಿದು ಪಾರ್ಕಿಗೆ ಎಳೆದುಕೊಂಡು ಹೋಗಿದ್ದ. ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಪ್ರಿಯಾಳ ಕೆನ್ನೆಯ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಕಿರುಚಿ ಕುಸಿದು ಬಿದ್ದ ಪ್ರಿಯಾಳಿಗೆ ಬಾಯಿಗೆ ಬಂದಂತೆ ಬೈದ ಮನೋಹರ ಕೈ ಮುಗಿದು ಹೊರಟೇಬಿಟ್ಟ.

ಮಾತೇ ಬಾರದಂತಾಗಿದ್ದ ಪ್ರಿಯಾ ಕಣ್ಣೀರು ಸುರಿಸುತ್ತಾ‌ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ ಇದೆಲ್ಲವನ್ನೂ ದೂರದಿಂದಲೇ ಗಮನಿಸಿದ ವಿಕ್ರಾಂತ್ ಗಹಗಹಿಸಿ ನಗುತ್ತಿದ್ದ. ಅಲ್ಲಿಗೆ ಅನುಮಾನವೆಂಬ ಪಿಶಾಚಿಗೆ ಸಿಕ್ಕು ಶುದ್ಧ ಪ್ರೀತಿಯೊಂದು ಒಡೆದು ಹೋಗಿತ್ತು, ದುಡುಕದೇ ಕುಳಿತು ಮಾತನಾಡಿದ್ದರೂ ಸಾಕಿತ್ತು ವಿಕ್ರಾಂತನ ಕುತಂತ್ರವನ್ನು ಕೊನೆಗಾಣಿಸಬಹುದಿತ್ತು. ಆದರೆ.. ಊಹ್ಞೂಂ ಮನೋಹರ ದುಡುಕಿದ್ದ, ಅಮಾಯಕ ಪ್ರಿಯಾ ಸೋತು ಹೋದಳು.

 ಸ್ಕಂದ ಆಗುಂಬೆ

http://www.thenewindiantimes.com/sad-love-story-kannada/

ಈ ಲೇಖನ "ದಿ ನ್ಯೂ ಇಂಡಿಯನ್ ಟೈಮ್ಸ್"ನಲ್ಲಿ ಪ್ರಕಟವಾಗಿದೆ.
                           (ಮೂಲಪ್ರತಿ)

Thursday, 5 October 2017

ಬರಗಾಲ



ಕೆಂಡ ಕಾರುವ ಭಾನು
ಸುಟ್ಟು ಬಿದ್ದ ಮೇಘ
ಭುವಿಯೀಗ ಒಣಗಿದ ಗರಿಗರಿ ಬಟ್ಟೆ
ಬಡವಿ ಭೂಮಾತೆ
ಬಸವಳಿದು ಕುಳಿತಿಹಳು
ಮೂರು ಮಾಸದಿಂದ ಉಪವಾಸವಂತೆ

ಹೊಳೆದಂಡೆ ಗರಿಕೆಯ ಬದುಕು ಬಡವಾಗಿರಲು
ಚಿಗರೆ ಮರಿಗೆಲ್ಲಿ ಹೊತ್ತು ಊಟ?
ಎದೆ ಕವಚ ಹೊರಗಿಣುಕಿ, ಭುವಿ ಕದವ ಬಡಿದಿರಲು
ರಕ್ತನಾಳಕ್ಕೀಗ ಸಾವಿನಾಟ

ಬತ್ತಿದ ಹೊಲದಲ್ಲಿ ಬಿತ್ತಿದ ಬೀಜವು
ನರಳಾಟದ ಹಾಡು ಹಾಡುತ್ತಿತ್ತು
ಮೊಳಕೆಯ ಮೂಲವೇ ಮೌನವಾಗಿರಲು
ಶ್ವಾಸಕೋಶದ ಒಳಗೆ ಶೋಕಗೀತೆ

ಹತ್ತು ಎಕರೆಯ ಒಡೆಯ ಅತ್ತು ಸುಸ್ತಾಗಿರಲು
ಮೂರು ಗುಂಟೆಯ ರೈತ ಸತ್ತು ಹೋದ
ಹಟ್ಟಿಯಲಿ ಕಟ್ಟಿದ ಬಾಚು ಕೋಡಿನ ಎತ್ತು
ಹಿಡಿ ಹುಲ್ಲಿಗಾಗಿ ಕೊರಗುತಿತ್ತು

ಕೆರೆ ತಳದಿ ಕಪ್ಪೆಮರಿ ಅಂಗಾತ ಬಿದ್ದಿರಲು
ಸರಸರನೆ ಓಡಿತ್ತು ಉರಗರಾಜ
ಸರಿಸೃಪದ ಪರದಾಟ ಕಣ್ಣಿಗೆ ಗೋಚರಿಸೆ
ಒಣಕು ಕೊಕ್ಕರೆಗೀಗ ಹಬ್ಬದೂಟ

- ಅನಾಸ್ಕ

Wednesday, 9 August 2017

ಕೈ ಬರಹ ಸರಿಯಿಲ್ಲ ಗುರೂ..!



ಅವನು ಕ್ಲಾಸಿನ ತಲೆಹರಟೆ ಹುಡುಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವನು, ತರಗತಿಯ ಅಷ್ಟೂ ಹುಡುಗಿಯರನ್ನು ಬಿಟ್ಟೂಬಿಡದೆ ರೇಗಿಸುತ್ತಾ, ಕಾಲೆಳೆಯುತ್ತಿದ್ದ. ಆದರೆ ಅವರಲ್ಲಿ ಒಬ್ಬಳ ಮೇಲೆ ಮಾತ್ರ ವಿಶೇಷ ಪ್ರೀತಿ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಬೇಕೆಂಬ ಬಯಕೆ. ಎಷ್ಟೋ ಬಾರಿ ತರಗತಿಯಲ್ಲೇ ಪ್ರಪೋಸ್ ಮಾಡಿ ಮಂಗಳಾರತಿ ಮಾಡಿಸಿಕೊಂಡಿದ್ದ. ಆದರೆ ತಲೆಹರಟೆಯ ಉತ್ತುಂಗ ತಲುಪಿದ್ದ ಅವನಿಗೆ ಅದೆಲ್ಲಾ ತಾಗುತ್ತಿರಲಿಲ್ಲ. ಇವನ ಆಟಗಳನ್ನು ನೋಡಿ ನೋಡಿ ಬೇಸತ್ತವಳಿಗೆ ಅವನಿಂದ ಮುಕ್ತಿ ಸಿಕ್ಕರೆ ಸಾಕೆನಿಸಿಹೋಗಿತ್ತು. ಅವಳ ಸಮಸ್ಯೆಯನ್ನರಿತ ತರಗತಿಯ ಹುಡುಗಿಯರೆಲ್ಲಾ ಅವಳ ಬೆಂಬಲಕ್ಕೆ ನಿಂತರು.
ಮೊನ್ನೆ ಸೋಮವಾರ, ಅದಕ್ಕಿಂತಲೂ ಮಿಗಿಲಾಗಿ 'ರಕ್ಷಾ ಬಂಧನ'ದ ದಿನ. ಅವನನ್ನು ಖೆಡ್ಡಾಕ್ಕೆ ಬೀಳಿಸಲು ಹುಡುಗಿಯರ ಗುಂಪು ಸರ್ವಸನ್ನದ್ಧವಾಗಿತ್ತು. ಅವನೆಲ್ಲೇ ಕಂಡರೂ ಸರಿ, ಐಟಿ ಅಧಿಕಾರಿಗಳಂತೆ ದಾಳಿ ಮಾಡಲು ಹುಡುಗಿಯರ ತಂಡ ತಯಾರಾಗಿತ್ತು. ಹಿಂದಿನ ದಿನ ಪೂರ್ತಿ ಫೋನಿನಲ್ಲೇ ಯೋಜನೆ ರೂಪಿಸಿ ಕಾಲೇಜಿಗೆ ಬಂದ ಹುಡುಗಿಯರಿಗೆ ಅವನು ಮಾತ್ರ ದೊಡ್ಡ ಶಾಕ್ ಕೊಟ್ಟಿದ್ದ! ಕ್ಯಾಂಟೀನಿನಿಂದ ಹಿಡಿದು ಕಾರಿಡಾರಿನ ಮೂಲೆಮೂಲೆಗಳಲ್ಲೂ ಅವನಿಗಾಗಿ ಶೋಧಕಾರ್ಯ ಆರಂಭವಾಯ್ತು. ಊಹ್ಞೂಂ.. ಅವನ ಸುಳಿವೇ ಇಲ್ಲ. ಇವರ ಪ್ರಯತ್ನವನ್ನು ವಿಫಲಗೊಳಿಸುವ ಸಲುವಾಗಿ ಅಂದು ಆತ ಕಾಲೇಜಿಗೆ ಬರಲೇ ಇಲ್ಲ! ಫೋನ್ ಮಾಡಿದರೂ ಉತ್ತರವಿಲ್ಲ. ಹುಡುಗಿಯರ ಅಷ್ಟೂ ಯೋಜನೆಗಳು ತಲೆಕೆಳಗಾಗಿತ್ತು.
ಹೌದು! ಇತ್ತೀಚಿನ ಅನಧಿಕೃತ ಸಮೀಕ್ಷೆಗಳಿಂದ ತಿಳಿದು ಬಂದಿರುವುದೇನೆಂದರೆ - ರಕ್ಷಾ ಬಂಧನದ ದಿನ ಹುಡುಗರು ಸ್ವಯಂ ಪ್ರೇರಿತರಾಗಿ ಗೃಹ ಬಂಧನಕ್ಕೊಳಗಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಹುಡುಗರಂತೂ ಮೈಯೆಲ್ಲಾ ಕಣ್ಣಾಗಿರುತ್ತಾರೆ.
ಖಾಕಿಗೂ ಹೆದರದ ಹುಡುಗರು ರಾಖಿಗೆ ಹೆದರುತ್ತಾರೆ ಎಂಬ ಆರೋಪಕ್ಕೆ ಹುಡುಗರು ಹೀಗೆ ಹೇಳುತ್ತಾರೆ : ಅಯ್ಯೋ! ರಾಖಿ ಕಟ್ಟಿಸಿಕೊಳ್ಳೋಕೆ ನಮಗೇನು ತೊಂದರೆ ಇಲ್ಲ ಸ್ವಾಮಿ. ಆದ್ರೆ ಎಲ್ಲರೂ ಸಾಮೂಹಿಕವಾಗಿ ಅಣ್ಣನ ಪಟ್ಟ ಕಟ್ಟಿದರೆ ನಮ್ಮ ಕಥೆ ಏನು? ಕಾಲೇಜಿಗೆ ಹೋಗುವಾಗಲೇ ಸನ್ಯಾಸತ್ವ ತೆಗೆದುಕೊಳ್ಳೋಕೆ ಆಗುತ್ತಾ? ಈ ವಯಸ್ಸಲ್ಲಿ ಅಲ್ಲದೆ ಇನ್ಯಾವಾಗ ಲೈನ್ ಹೊಡೆಯೋದು? ಕಡೇಪಕ್ಷ ನಮ್ಮ ಅನುಮತಿ ಪಡೆದು ಕಟ್ಟುವುದಾದರೆ ಹ್ಞೂಂ ಅನ್ನಬಹುದಿತ್ತು. ಆದರೆ ಅನುಮತಿ ಪಡೆಯುವ ಸೌಜನ್ಯವಿರಲಿ, ಕಳ್ಳ ಕಾಕರನ್ನು ಪೊಲೀಸರು ಅಟ್ಟಿಸಿಕೊಂಡು ಹೋಗುವಂತೆ ಮಾಡಿದರೆ ಯಾರಿಗೆ ತಾನೆ ಕಟ್ಟಿಸಿಕೊಳ್ಳುವ ಮನಸ್ಸಾಗುತ್ತೆ?
ರಕ್ಷಾ ಬಂಧನವೆಂದರೆ ಕ್ರಶ್ಗಳ ಲಿಸ್ಟ್ ಪರಿಷ್ಕರಣೆಗೊಳ್ಳುವ ದಿನ. ಯಾವ ರಾಖಿಯಲ್ಲಿ ಯಾರ ಹೆಸರು ಬರೆದಿರುತ್ತೋ ಬಲ್ಲವರಾರು? ನಮ್ಮ 'ಕೈ ಬರಹ' ಸರಿಯಿಲ್ಲ ಗುರೂ! ಎಂದು ಕೈ ನೋಡಿಕೊಳ್ಳುತ್ತಾರೆ ಹುಡುಗರು. ಹಾಗೆಯೇ ರಾಖಿ ಕಟ್ಟುವುದು ಇಂದು ಕೇವಲ ಸಂಪ್ರದಾಯವಾಗಿ‌ ಉಳಿದಿಲ್ಲ ಬದಲಿಗೆ ಹುಡುಗರಿಂದ ಹಣ ಪೀಕುವ ಹಬ್ಬವನ್ನಾಗಿಸಿಕೊಂಡಿದ್ದಾರೆ ಹೆಣ್ಣುಮಕ್ಕಳು! ಎಂಬುದು ಇನ್ನೊಂದಿಷ್ಟು ನೊಂದ ಹುಡುಗರ ಅಭಿಪ್ರಾಯ. ರಾಖಿ ಕಟ್ಟಿ ಗಿಫ್ಟ್ ಬೇಕೆಂದು ಬೇಡಿಕೆ ಇಡುವ ಹುಡುಗಿಯರು ನಾವು ಕೂಡಿಡುವ ಅಲ್ಪಸ್ವಲ್ಪ ಹಣವನ್ನೂ ಕಬಳಿಸಿಬಿಡುತ್ತಾರೆ. ಕೆಲವರಂತೂ ರಾಖಿ ಹಬ್ಬದ ಹೆಸರಲ್ಲಿ ಒಳ್ಳೇ ದುಡಿಮೆ ಮಾಡುತ್ತಾರೆ. ಇಷ್ಟವಿಲ್ಲದಿದ್ದರೂ ಅಣ್ಣನೆನ್ನಿಸಿಕೊಳ್ಳುವ ಜೊತೆಗೆ ಜೇಬು ಖಾಲಿಯಾಗುವ ನೋವನ್ನೂ ಸಹಿಸಿಕೊಳ್ಳಬೇಕು.. ಆದ್ದರಿಂದ ರಾಖಿ ಹಬ್ಬದ ದಿನ ನಾವು ಕಾಣೆಯಾಗುತ್ತೇವೆ ಎನ್ನುವುದು ಹುಡುಗರ ಅಂಬೋಣ.
ಇಷ್ಟಾಗಿಯೂ ಅಣ್ಣನಾಗಿ‌ ರಕ್ಷಣೆ ನೀಡಿದರೆ ಸಾಕು‌ ಬೇರೇನೂ ಬೇಡ ಎಂದು ಒಳ್ಳೇ ಮನಸ್ಸಿನಿಂದ ರಾಖಿ ಕಟ್ಟುವವರಿಗೆ 'ಕೈ ಚಾಚಲು' ಸದಾ ಸಿದ್ಧ ಎನ್ನುವ ಹುಡುಗರೂ ಇದ್ದಾರೆ.

- ಸ್ಕಂದ ಆಗುಂಬೆ
     
             
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ‌ ಪ್ರಕಟವಾಗಿದೆ..

(ಮೂಲಪ್ರತಿ)

Saturday, 15 July 2017

ಹೋಗೇ..‌


ಸ್ಮಶಾನದಲ್ಲಿ ಸತ್ತು ಬಿದ್ದ
ಇದ್ದಿಲ ಚೂರಿನಷ್ಟು ಕಪ್ಪೇನಲ್ಲ
ಚಂದ್ರ ಸಾಯುವ ಮೂರು ದಿನ
ಮುಂಚಿನ ನಡುರಾತ್ರಿ ಹೊತ್ತು..
ಕಾಡಂಚಿನಲ್ಲಿ ಹುಲಿ ಕೂಗಿದ್ದು
ಕಿವಿಗಿನ್ನೂ ನೆನಪಿದೆ
ಮಳೆನೀರಿನ ತುಂಟ ಹನಿಯೊಂದು
ಹೆಂಚುಗಳ ಒಳಹೊಕ್ಕು
ಕದ್ದು ನೋಡಿದ್ದು ಆವಾಗಲೇ..
ತುಟಿ ಕಚ್ಚಿರಲಿಲ್ಲ ಅಲ್ಲವಾ?
ಛೇ.. ಕಚ್ಚಿಬಿಡಬೇಕಿತ್ತು
ನೋಡು‌ ನಿನ್ನ ಉಗುರಿನ ಗಾಯ
ಇನ್ನೂ ಅಂಗಿಗೆ ಬಣ್ಣ ಬಳಿಯುತ್ತಿದೆ
ಕಾಲ್ಗೆಜ್ಜೆಯನ್ನು ಎಲ್ಲಿ ಬಿಚ್ಚಿಟ್ಟಿದ್ದಿ
ಪಪ್ಪಿ ಇಡಬೇಕು ಅದರ ಹೊಳಪಿಗೆ
ಅವತ್ತು ನಿನ್ನ ಸೆರಗಿಗಂಟಿದ್ದ
ಅತ್ತರಿನ ಘಮವಿನ್ನೂ ಕೋಣೆ ದಾಟಿಲ್ಲ
ಆತುರವಿದ್ದಿದ್ದು ನಿನಗೆ ಮಾತ್ರ
ಎಂಥಾ ಹುಡುಗಿ ಮಾರಾಯ್ತಿ.. ಹೋಗೇ
ನನಗೊಂದು ಮಾತು ಹೇಳಲು
ನಿನ್ನ ಗಂಟಲಲ್ಲೇನು ಕಡುಬು ಸಿಕ್ಕಿಕೊಂಡಿತ್ತಾ?
ನೀನವತ್ತು ರಸದೌತಣ ಬಡಿಸಿದಾಗಲೇ
ಕೇಳಿಬಿಡಬೇಕಿತ್ತು ನಾನು..
ಆ ಬಿಸಿಯಲ್ಲಿ ನೀ ತಣಿದಿದ್ದೂ
ಗೊತ್ತಾಗದೇ ಹೋಯಿತಲ್ಲಾ
ಅಳುತ್ತಾ ಕೂತಿದ್ದೀನಿ ಗೊತ್ತಾ?
ನೀ ಹೊರಡುವಾಗ ಎಷ್ಟೊತ್ತಾಗಿತ್ತು
ಹಿತ್ತಲಲ್ಲಿ ದಿನಾ ಕಿರುಚಾಡುವ
ಜೀರುಂಡೆಯಾದರೂ ಎದ್ದಿತ್ತಾ?
ಹಣೆ ಮೇಲೆ ಕುಂಕುಮವಿದ್ದಾಗಲೇ ಸಾಯಬೇಕು
ಎಂದು ಮದುವೆಯ ದಿನವೇ ಹೇಳಿದ್ದೆಯಲ್ಲಾ?
ಆ ಆಸೆಯೂ ಬೆವರಿನಲ್ಲಿ ಕರಗಿದೆ ನೋಡು
ಏಯ್ ಪುಟ್ಟಾ ಒಂಚೂರು ಎದ್ದೇಳೇ
ಅಂಗಳದಂಚಿನಲ್ಲಿ ಗುಲಾಬಿ ಅರಳಿದೆ
ಮೊನ್ನೆ ತಾನೇ ನೀ ಮುತ್ತಿಟ್ಟಿದ್ದೆಯಲ್ಲಾ
ಅದೇ ಮೊಗ್ಗು ಮೈನೆರೆದಿರುವುದು
ಎದ್ದೇಳೋದಿಲ್ವಾ? ಬೇಜಾರಾ?
ಮೊನ್ನೆ ಬೆಂಕಿ ಹಚ್ಚಿದ್ದಕ್ಕೆ ಸಿಟ್ಟಾ?
ಇನ್ಯಾವತ್ತೂ ಆ ಥರ ಮಾಡೋದಿಲ್ಲ
ಇದೊಂದು ಸಲ ಕ್ಷಮಿಸಿಬಿಡೇ
ಹೋಗೇ ಎಷ್ಟು ಕರೆದರೂ
ಮಾತಾಡೋದಿಲ್ಲ ಸೊಕ್ಕು ನಿಂಗೆ
ಗೂಬೆ, ಕತ್ತೆ, ಹಂದಿ, ಮಂಗ
ಅಯ್ಯೋ ಈಗ ನೆನಪಾಯ್ತು ನೋಡು
ಕೊಟ್ಟಿಗೆಯಲ್ಲಿ ಪುಟ್ಟ ಕರು ಕೂಗ್ತಾ ಇದೆ
ನನಗೆ ನಿನ್ನಷ್ಟು ಚುರುಕು
ಹಾಲು ಕರೆಯೋದಿಕ್ಕೆ ಬರೋದೂ ಇಲ್ಲ
ಇನ್ನೊಂದೈದು ದಿನ
ಅಭ್ಯಾಸವಾಗುತ್ತೆ ಬಿಡು
ಇನ್ನೂ ಒಂದು ವಾರ ದೇವರಿಗೆ ಉಪವಾಸ
ಅನುಭವಿಸಲಿ ಅವನು
ನನ್ನ ಹೊಟ್ಟೆಗೆ ಕಲ್ಲು ಹಾಕಿದ್ದಾನಲ್ಲ
ಥೋ.. ಇದ್ಯಾಕೋ ನಿಲ್ಲೋದಿಲ್ಲ
ಕರು ಬೊಬ್ಬೆ ಹೊಡೀತಿದೆ
ದೀಪ‌ ಹಚ್ಚಿ ಹೋಗ್ತೀನಿ
ಬತ್ತಿ ಸರಿ ಮಾಡೋಕೋಗಿ ಕೈ ಸುಟ್ಕೋಬೇಡ
ಹೀಗೆ ಹೋಗಿ ಹಾಗೆ ಬರ್ತೀನಿ
ಚೇಷ್ಟೆ ಮಾಡದೆ ಸುಮ್ನೆ ಕೂತ್ಕೊ.. ಜಾಣಮರಿ!!

- ಅನಾಸ್ಕ

Monday, 29 May 2017

ಮೂರಿಂಚು ಜಾಗದಲ್ಲಿ ನನ್ನ ಹೆಜ್ಜೆ ಗುರುತಿವೆ..



ಮತ್ತದೇ ಹಳೇ ಹುಡುಗಿಗೆ...
                                        ಡಿಯರ್ ಕೂಸೇ, ನಿನ್ ಮುಖ ನೋಡಿ ನೋಡಿ ಬೇಜಾರಾಗಿದೆ, ಅದೇ ನಗು! ಅದೇ ಸಿಟ್ಟು! ಅದೇ ತಲೆಹರಟೆ! ಏನೂ ಚೇಂಜ್ ಇಲ್ಲ ಸೋ ಇದೆಲ್ಲದರ ಸಹವಾಸ ಬಿಟ್ಟುಬಿಡಬೇಕು ಅನ್ನಿಸ್ತಿತ್ತು.. ಆದ್ರೇನ್ಮಾಡೋದು? ನಿನಗಿಂತ ಹಳತಾಗಿರೋ ನನ್ ಮುಖಕ್ಕೆ ಬೇರೆ ಯಾರೂ ಸಿಗದೇ ಇದ್ರೆ? ಎಂಬ ಭಯ.. ಆದ್ದರಿಂದ ಹೆಂಗೂ ನಿಂಗೆ ತಗ್ಲಾಕ್ಕೊಂಡಾಗಿದೆ, ಕಷ್ಟನೋ? ಸುಖನೋ? ಕಣ್ಮುಚ್ಕಂಡ್ ನಿನ್ ಜೊತೆ ಬದುಕಬೇಕು ಅನ್ನೋ ದುಸ್ಸಾಹಸದ ನಿರ್ಧಾರಕ್ಕೆ ಕೈ ಹಾಕಿದೀನಿ.. ಜಾಸ್ತಿ ಕಾಟ ಕೊಡದೆ ಕಾಪಾಡು!!
ಸಿಟ್ ಬಂತಾ? ಕ್ವಾಪನಾ? ಮುಖ ಕೆಂಪಾಯ್ತಾ? ಅಯ್ಯೋ ಆಗ್ಲಿ ಬಿಡೇ, ನಿನ್ ಜೊತೆ ಬದುಕೋ ನಿರ್ಧಾರ ತಗೊಂಡಿದೀನಲ್ಲ ಅದಕ್ಕಿಂತ ದೊಡ್ಡದೇನಲ್ಲ ಇದು. ನಿನ್ನನ್ನು ಮೊದಲ ಬಾರಿಗೆ ನೋಡಿದ ದಿನ ನನ್ನ ಬದುಕಿನ ಅತಿ ದೊಡ್ಡ ದುರಂತಕ್ಕೆ ಮುನ್ನುಡಿ ಹಾಡಿದ ದಿನ, ಆ ನಿನ್ ಮನೆಹಾಳ್ ಮುಂಗುರುಳಿನಿಂದ ನನ್ನ ಬ್ರಹ್ಮಚರ್ಯವನ್ನ ಗಲ್ಲಿಗೇರಿಸಿದ ದಿನ, ಪಂಚಾಂಗದಲ್ಲಿ ಅದೇನೋ ಗಂಡಕಾಲ ಅಂತಾರಲ್ಲ ಮೋಸ್ಟ್ಲಿ ಅದೇ ಘಳಿಗೆಯಲ್ಲಿ ನೀ ನನ್ ಕಣ್ಣಿಗೆ ಬಿದ್ದಿದ್ದಿರಬೇಕು. ಆ ಕ್ಷಣದಲ್ಲಿ ನಮ್ಮನೆ ದೇವ್ರು ನಿದ್ದೆ ಮಾಡ್ತಿದ್ದ ಅನ್ಸುತ್ತೆ ಇಲ್ಲಾಂದ್ರೆ ಖಂಡಿತ ಈ ಘನಘೋರ ಅಪಘಾತದಿಂದ ನನ್ನ ಬಚಾವ್ ಮಾಡ್ತಿದ್ದ ಅಥವಾ ಇನ್ಯಾವುದೋ ಹರಕೆ ತೀರಿಸದೇ ಬಾಕಿ ಉಳಿದಿದ್ದು ಅದೇ ಸಿಟ್ಟಲ್ಲಿ ನನ್ನ ಹರಕೆ ಕುರಿ ಮಾಡಿದ್ನೋ? ಏನೋ? ನಾ ಕಾಣೆ. ಹೋಗ್ಲಿಬಿಡು ನನ್ನ ಹಣೆಬರಹಕ್ಕೆ ನಿನ್ನನ್ಯಾಕೆ ದೂಷಣೆ ಮಾಡ್ಲಿ? ನ್ಯಾಯವಾಗಿ ನೋಡೋದಾದ್ರೆ ಇದ್ರಿಂದ ನಿನಗೆ ಲಾಭವೇ ಆಗಿರೋದು ಯಾಕಂದ್ರೆ ನನ್ನಂತ ಹುಡುಗನನ್ನ ಪಡೆಯೋಕೆ ವಸಿ ಪುಣ್ಯ ಮಾಡಿರ್ಬೇಕಾ? ಎಂಥೆಂಥಾ ಒಳ್ಳೇ ಹುಡುಗಿಯರಿಗೆ ಸಿಗದ ಸುವರ್ಣಾವಕಾಶ ನಿನಗೆ ಸಿಕ್ಕಿದೆ ನೋಡು. ಹಾಗಂತ ನೀ ಕೆಟ್ಟವ್ಳು ಅಂತ ಹೇಳ್ತಿಲ್ಲ ಬಟ್ ನೀ ನನ್ ಹಾಗೆ ತುಂಬಾ ಒಳ್ಳೆಯವಳೇನಲ್ಲ ಆಯ್ತಾ?
            ಥೋ.. ಪ್ರೇಮಪತ್ರ ಬರೆಯೋಣ ಅಂತ ಕೂತ್ರೆ ಏನೇನೋ ಪುರಾಣಗಳೆಲ್ಲಾ ಹೊರಗೆ ಬರ್ತಿದ್ದಾವೆ.. ಇದಕ್ಕೇ ಅನ್ಸುತ್ತೆ ನನ್ ಹಳೇ ಕ್ರಷ್ಷು "ನಿಂಗ್ ಲವ್ ಲೆಟ್ರು ಬರ್ಯೋಕೆ ಬರೋದಿಲ್ಲ ಕಣೋ ಗೂಬೆ" ಅಂತ ಬೈತಾ ಇದ್ದಿದ್ದು, ಅಷ್ಟೆಲ್ಲಾ ಪೋಸ್ ಕೊಡೋದು ನೋಡಿ ಅವ್ಳು ಪ್ರೇಮಪತ್ರ ಬರ್ಯೋದ್ರಲ್ಲಿ ಎಕ್ಸ್ಪರ್ಟ್ ಅಂದ್ಕೊಂಡಿದ್ದೆ ಬಟ್ ಆಮೇಲ್ ಗೊತ್ತಾಯ್ತು, ಅವ್ಳು ವಾರಕ್ಕೆ‌ ಏನಿಲ್ಲಾ ಅಂದ್ರೂ ಒಂದೈವತ್ತು ಲವ್ ಲೆಟರ್ಸ್ ವ್ಯಾಲ್ಯೂಯೇಷನ್ ಮಾಡ್ತಿದ್ಳು ಅಂತ.. ಅಯ್ಯೋ ಬೇಜಾರ್ ಮಾಡ್ಕೋಬೇಡ ಅವ್ಳು ಜಸ್ಟ್ ಕ್ರಷ್ ಮಾರಾಯ್ತಿ, ನೀನೇ ನನ್ ಫಸ್ಟ್ ಅಂಡ್ ಲಾಸ್ಟ್ ಲವ್ವು ಆಯ್ತಾ? ಬೇರೆ ಹುಡ್ಗಿ ವಿಷ್ಯ ಎಲ್ಲಾ ಈಗ್ಯಾಕೆ? ನಮ್ದೇ ಬೇಜಾನ್ ಕಥೆ ಇದೆ ಅದ್ರ ಬಗ್ಗೆನೂ ಒಂಚೂರ್ ತಲೆ ಕೆಡ್ಸ್ಕಳಣ ಬಾ..
                ಇತ್ತೀಚೆಗೆ ನಿನ್ ಮೇಲೆ ಲವ್ ಜಾಸ್ತಿ ಆಗ್ತಿದೆ, ಓಲ್ಡ್ ಈಸ್ ಗೋಲ್ಡ್ ಅಂತಾರಲ್ಲ ಹಾಗೇ ಇರ್ಬೇಕು. ದಿನಾಲು ನಿನ್ ಮುಖ ನೋಡ್ಬೇಕು, ನಿನ್ ಜೊತೆ ಮಾತಾಡ್ಬೇಕು ಅಂತೆಲ್ಲಾ ಅನ್ಸುತ್ತೆ, ಆದ್ರೇನ್ಮಾಡ್ಲಿ ಈ ಬಿಟ್ಟಿ ಜಿಯೋ ನೆಟ್ವರ್ಕ್ ನೆಟ್ಟಗಿರೋದೇ ಇಲ್ಲ.. ಹೋಗ್ಲಿ ವಾಟ್ಸಪ್ಪಲ್ಲಿ ಚಾಟ್ ಮಾಡೋಣ ಅಂದ್ರೆ ನೀನೊಳ್ಳೇ ಪುರುಸೊತ್ತಿಲ್ಲದ ಪದ್ಮಾವತಿ ಥರ ಆಡ್ತೀಯ.. ಎಲ್ಲೋ ಅಪ್ರೂಪಕ್ಕೊಂದ್ಸಾರಿ ಹಾಯ್ ಅನ್ನೋದ್ರೊಳಗೆ ಬೈ ಅಂದು ತಾಚಿ ಮಾಡ್ಬೇಕು‌ ಅನ್ನೋ ನೆಪ ಕೊಟ್ಟು ಮತ್ತೊಂದ್ ಘಂಟೆ ಆನ್ಲೈನಲ್ಲೇ ಜಪ ಮಾಡ್ತಾ ಇರ್ತೀಯ.. ನಂಗಂತೂ ನಿನ್ ಧ್ವನೀನೇ ಮರ್ತೋದಂಗಾಗಿದೆ. ಅವತ್ತು ಕಿರಿಕ್ ಪಾರ್ಟಿ ಸಿನಿಮಾಕ್ಕೆ ಹೋದಾಗ "ನೀನಿರೆ ಸನಿಹ ನೀನಿರೆ...." ಹಾಡು ಬಂದಾಗ್ಲಂತೂ ಅದೆಷ್ಟರ ಮಟ್ಟಿಗೆ ನಿನ್ನ ನೆನಪಾಯ್ತು ಗೊತ್ತಾ? ನಿನ್ ಜೊತೆ ಥಿಯೇಟ್ರಲ್ಲಿ ಕೂತ್ಕೊಂಡು ಆ ಹಾಡು ನೋಡ್ಬೇಕು ಅಂತ ಅನ್ನಿಸಿ ಬಿಡ್ತು.
ಕೆಲವೊಮ್ಮೆ ನೀ ನನ್ನಿಂದ ದೂರ ಆಗ್ತಿದ್ಯೇನೋ? ನನ್ನ ಕಡೆಗಾಣಿಸ್ತಿಯೇನೋ? ಅಂತೆಲ್ಲಾ ಭಯ ಆಗುತ್ತೆ. ಎಷ್ಟೋ ಸಲ ಈ ಪ್ರೀತಿ ಪ್ರೇಮ ಎಲ್ಲಾ ಭ್ರಮೆ.. ನೀ ನಂಗ್ ಸಿಗೋದೇ ಇಲ್ಲ ಅನ್ಸೋಕೆ ಶುರುವಾಗಿ ಮಂಕಾಗಿ ಬಿಡ್ತೀನಿ. ಇವೆಲ್ಲಾ ಅನುಮಾನಗಳನ್ನ ಒಂದೇ ಉಸಿರಿಗೆ ನಿನ್ನ ಬಳಿ ಹೇಳಿಕೊಂಡು ಮನಸ್ಸಿನ ಭಾರವನ್ನೆಲ್ಲಾ ಕರಗಿಸಿಕೊಳ್ಬೇಕು ಅನ್ನಿಸಿದಾಗಲೆಲ್ಲಾ ನಿನಗೆಲ್ಲಿ ನೋವಾಗ್ತದೋ ಅಂತ ಸುಮ್ಮನಾಗಿಬಿಡ್ತೀನಿ. ನಿಜ ಹೇಳ್ತೀನಿ ಕೇಳು.. ಹುಡುಗರು ಪ್ರೀತಿಯ ವಿಷ್ಯದಲ್ಲಿ ನಿಮಗಿಂತ ತುಸು ಹೆಚ್ಚೇ ಸ್ವಾರ್ಥಿಗಳು, ನಾವಿಷ್ಟಪಡೋ ಹುಡುಗಿಗೆ ನಮ್ ಮೇಲೂ ಒಂದ್ ಕಣ್ಣಿದೆ ಅಂತ ಗೊತ್ತಾದ್ರೆ ಮುಗಿದೇ ಹೋಯ್ತು, ಅಂಗೈಯಲ್ಲೇ ಪ್ರಪಂಚ ಸೃಷ್ಟಿಸಿಕೊಂಡು ಬಿಡ್ತೀವಿ, ಆದ್ರೆ ಯಾರೋ ಒಂದ್ನಾಲ್ಕ್ ಜನ ಪ್ರೀತಿ ಹೆಸ್ರಲ್ಲಿ ಮಾಡಬಾರದ ಅನಾಚಾರ ಮಾಡಿ ಎಲ್ರೂ ಹುಡುಗ್ರನ್ನ ಅನುಮಾನದಿಂದ ನೋಡೋ ಹಾಗಾಗಿದೆ ಆದ್ರಿಂದ ಕೆಲವೊಮ್ಮೆ ಮನಸು ಬಿಚ್ಚಿ ಮಾತಾಡೋಕೂ ಯೋಚ್ನೆ ಮಾಡ್ಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
                     ನನ್ನನ್ನ ಸ್ಟೇಜ್ ಮೇಲೆ ನಿಲ್ಸಿ ಗಂಟೆಗಟ್ಲೆ ಮಾತಾಡು ಅಂದ್ರೂ ಮಾತಾಡ್ತಿನೇನು ಬಟ್ ನಿನ್ ಜೊತೆ ಮಾತಾಡ್ಬೇಕಾದ್ರೆ ಒಳ್ಳೇ ಮದ್ವೆ ದಿನ ಹೆಣ್ಣು ನಾಚ್ಕೊಳ್ಳೋ ಲೆವೆಲ್ಲಿಗೆ ನಾಚ್ಕೊತೀನಿ.. ಅದ್ರಲ್ಲೂ ನೀ ಮುಂದೆ ಇದ್ರಂತೂ ಮುಗಿದೇ ಹೋಯ್ತು..‌ ಬಟ್ ಮೊದಲೆಲ್ಲಾ ನಾವ್ ಎಷ್ಟೊಂದ್ ಮಾತಾಡ್ತಿದ್ವಿ ಅಲ್ವಾ? ಮಿನಿಮಮ್ ಇಪತ್ - ಮೂವತ್ ನಿಮ್ಷ ಫೋನಲ್ಲಿ ಅಂಟ್ಕೊತ್ತಿದ್ವಿ, ದಿನಾ ಫೋನು..!! ಆವಾಗಿದ್ದ ಎಕ್ಸೈಟ್ಮೆಂಟ್ ಎಲ್ಲೋಯ್ತು, ಟೈಂ ಪಾಸ್ ಮಾಡೋಕೋಸ್ಕರ ಮಾತಾಡ್ತಿದ್ವಾ? ಅಥ್ವಾ ಒಬ್ರಿಗೊಬ್ರು ಟೈಂ ಕೊಡೋಕಾಗ್ದಿರೋ ಅಷ್ಟು ದೊಡ್ಡೋರಾಗ್ಬಿಟ್ವಾ? ನಾವ್ ಅಷ್ಟೊಂದ್ ಬ್ಯುಸಿನಾ?  ಅಬ್ಬಾ.. ಒಟ್ನಲ್ಲಿ ನಿನ್ ಹತ್ರ ಮಾತಾಡೋದೆ ಕಮ್ಮಿ ಆಗೋಗಿದೆ. ಆ್ಯಕ್ಚುಲಿ ನಿನ್ ಜೊತೆ ಮಾತಾಡಿದ್ರೆ ನಂಗೇನೋ ಒಂಥರಾ ತಲೇಲಿ ರಿಫ್ರೆಶ್ ಬಟನ್ ಒತ್ತಿದಂಗಾಗುತ್ತೆ  ಗೊತ್ತಾ?
         ಅದಿರ್ಲಿ ಆವಾಗೆಲ್ಲ ಡಿಯರ್ರು, ಕಂದ, ಮಣ್ಣು ಮಸಿ ಅಂತೆಲ್ಲಾ ಕರೀತಿದ್ಯಲ್ಲಾ ಅದೆಲ್ಲಾ ಈಗೆಲ್ಲೋಯ್ತು? ನೀ ಹಂಗ್ ಕರೆದ್ರೆ ನಂಗ್ ಬೇಜಾನ್ ಖುಷಿ.. ಯಾಕೋ ಗೊತ್ತಿಲ್ಲ ನಿನ್ ಹತ್ರ ಬೈಸ್ಕೊಳ್ಳೋದ್ರಲ್ಲೂ ಮಜಾ ಇದೆ. ನೀ ಹ್ಞೂಂ, ಓಕೆ,ಅಂತೆಲ್ಲಾ ಕಳಿಸಿದ್ರೆ ಮಾತ್ರ ಅಷ್ಟೇ ಬೇಜಾರ್ ಆಗ್ತದೆ.
          ಇಷ್ಟೆಲ್ಲಾ ಆಗಿ... ನೀ ನಿನ್ ಹೃದಯದಲ್ಲಿ ನನಗೊಂದ್ ಮೂರಿಂಚ್ ಜಾಗ ಆದ್ರೂ ಕೊಟ್ಟಿರ್ತೀಯ ಅನ್ನೋ ನಂಬಿಕೆ ಇದೆ ಸೋ ಪ್ರಾಮಾಣಿಕವಾಗಿ ಹೇಳ್ತೀನಿ ಕೇಳು.. ನಿನ್ನ ಮನಸಲ್ಲಿರೋದನ್ನ ಮುಚ್ಚಿಟ್ಕೊಂಡು ಇನ್ನೊಬ್ರ ಖುಷಿಗಾಗಿ ಮುಖವಾಡ ಹಾಕೋ ನಿರ್ಧಾರನ್ನ ದಯವಿಟ್ಟು ತಗೋಬೇಡ, ನೀ ಎಷ್ಟೇ ಮರೆತಂತೆ ನಟಿಸಿದ್ರೂ ಆ ಮೂರಿಂಚು ಜಾಗದಲ್ಲಿ ನಾ ಓಡಾಡಿ ಸವೆಸಿರೋ ಹಾದಿಯನ್ನ ಮತ್ತೆ ಹೊಸತರಂತೆ ಮಾಡೋಕೆ ಆಗಲ್ಲ, ಯಾರೆಷ್ಟೇ ತೇಪೆ ಹಚ್ಚಿದ್ರೂ ಅದು ತಾತ್ಕಾಲಿಕ‌ ಸೋ ನಿನ್ ಭಾವನೆಗಳನ್ನ ನೀನೇ ನಿರ್ಲಕ್ಷ್ಯ ಮಾಡಿ ಬೇರ್ಯಾವ್ದೋ ಬಣ್ಣ ಹಚ್ಬೇಡ ಆಯ್ತಾ?
           ಬರೋಬ್ಬರಿ ಎರಡು ಮಳೆಗಾಲಗಳ ನಂತರ ಮತ್ತೆ ಲವ್ ಲೆಟರ್ ಬರ್ದಿದೀನಿ. ಬರವಣಿಗೆಯ ಶೈಲಿ ಕೊಂಚ ಬದಲಾಗಿರಬಹುದು, ಪದಗಳು ಬದಲಾಗಿರಬಹುದು ಆದ್ರೆ ಭಾವನೆಗಳು ಮಾತ್ರ ಅವತ್ತಿನಂತೇ ಇವೆ ಮತ್ತು ಅಷ್ಟೇ ಪರಿಶುದ್ಧವಾಗಿವೆ, ಮುಂದೆಯೂ ಹೀಗೆ ಇರುತ್ತವೆ ಅವು ಎಂದಿಗೂ ಅಮರ..  ಪತ್ರದ ಸ್ಟಾರ್ಟಿಂಗಲ್ಲಿ ಏನೇನೋ ತಲೆಹರಟೆ ಮಾಡಿದೀನಿ ಅದ್ರಿಂದ ಬೇಜಾರಾಗಿದ್ರೆ ದಯವಿಟ್ಟು ಹೊಟ್ಟೆಗಾಕ್ಕೋ.. ಹೇಗೂ ಇಷ್ಟುದ್ದ ಲೆಟರ್ ಓದ್ಬೇಕಾದ್ರೆ ನಿನಗೆ ಹಸಿವಾಗಿರುತ್ತೆ ಅಂತ ನಂಗೊತ್ತು..
ಹ್ಞೂಂ.. ಹಂಗೇ ಇನ್ನೊಂದ್ ಮಾತು - ಮನುಷ್ಯ ಎಷ್ಟೇ ತಪ್ ಮಾಡಿದ್ರೂ ಅದನ್ನ ಒಪ್ಕೊಂಡು ತಿದ್ಕೋಬೇಕು ಆದ್ರೆ ಯಾವ್ ಕಾರಣಕ್ಕೂ ಮೋಸ‌ ಮಾಡಕ್ ಹೋಗ್ಬಾರ್ದು ಅವು ನಮ್ ಖುಷೀನೆಲ್ಲಾ ನುಂಗಿಹಾಕ್ ಬಿಡ್ತಾವೆ.. ಈ ಮಾತ್ ಯಾಕ್ ಹೇಳ್ದೆ ಅಂತ ಗೊತ್ತಿಲ್ಲ.. ಬಟ್ ಇದು ನಿಂಗಿಂತ ಜಾಸ್ತಿ ನಂಗೇ ಅಪ್ಲೈ ಆಗ್ತದೆ ಬಿಡು.
ಸಾಕ್ ಬಿಡು.. ತಲೆಗ್ ಬಂದಿದ್ದನ್ನೆಲ್ಲಾ ಹೇಳಿದೀನಿ.. ಇನ್ನೂ ಏನಾರ್ ಉಳ್ದಿದ್ರೆ ಮುಂದಿನ್ ಲೆಟರ್ ಅಲ್ಲಿ ಬರೀತಿನಿ... ಕಾಯ್ತಾ ಇರು... ಆದಷ್ಟ್ ಬೇಗ ಯಾವತ್ತಾದ್ರೂ ಸಿಗಣ.. ನಾನೂ ಕಾಯ್ತಾ ಇರ್ತೀನಿ.. ಬೇಜಾನ್ ಮಾತಾಡ್ಬೇಕು, ಈ ಸರಿ ಪಕ್ಕಾ ನಡಗೋದಿಲ್ಲ... ಯಾವತ್ತು ಅಂತ ಹೇಳು.. ಲವ್ ಯೂ..


ಇಂತಿ.
ಮೂರಿಂಚು ಜಾಗವ ಸವೆಸಿದವ...
ಸ್ಕಂದ ಆಗುಂಬೆ


ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ವಿ+ ಪುರವಣಿಯಲ್ಲಿ ಪ್ರಕಟವಾಗಿದೆ..

                         (ಮೂಲಪ್ರತಿ)

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...