Wednesday, 17 May 2017

ಮೌನ ಮಾತಾದಾಗ...


        ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.
        ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆದೆ, ಬಿಕ್ಕಿ ಬಿಕ್ಕಿ ಅತ್ತೆ.. ಊಹ್ಞೂಂ.. ಅವಳ ಮೌನ ಎಳ್ಳಷ್ಟೂ ಕರಗಲಿಲ್ಲ ಬದಲಾಗಿ ಇನ್ನೂ ಗಾಢವಾಗುತ್ತಾ ಹೋಯಿತು.. ಕಾರ್ಮೋಡ ಕವಿದ ಕಗ್ಗತ್ತಲ ಅಮಾವಾಸ್ಯೆಯ ರಾತ್ರಿಯಂತೆ ದಟ್ಟವಾಯಿತು.
        ನಾನೋ ಛಲ ಬಿಡದ ಹಠವಾದಿ, ಅವಳೋ ಬರೀ ಮೌನಿ.
        ಮತ್ತೆ ಶುರುವಾಯಿತು ಯುದ್ಧ ಮಾತಿಗೂ, ಮೌನಕ್ಕೂ. ಈ ಬಾರಿ ನನ್ನದು ಕವಿತೆಗಳ ಬಾಣ.. ಅವಳಂದವನು ವರ್ಣಿಸಿದೆ, ಅವಳ ಮೌನವನ್ನು ಚಿತ್ರಿಸಿದೆ, ಕೊರೆದೆ, ಕೆತ್ತಿದೆ, ಪುಟಗಟ್ಟಲೆ ಬರೆದೆ. ಬರೆದದ್ದನ್ನೆಲ್ಲಾ ಅವಳಿಗೊಪ್ಪಿಸಿದೆ, ಅವಳ ಕಂಗಳು ಕವಿತೆಯ ಮೇಲೆ ಓಡಾಡಲು ನನಗೆ ಒಳಗೊಳಗೇ ಖುಷಿ.. ಪ್ರಾಸಗಳ ಹುಡುಕಿ ನನಗೆ ತ್ರಾಸವಾಯಿತೇ ಹೊರತು ಅವಳ ಮೌನ ಕರಗಲಿಲ್ಲ, ಸಾಸಿವೆಯಷ್ಟೂ ಕಿರಿದಾಗಲಿಲ್ಲ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಲಾವಿದನಾದೆ, ಬಣ್ಣಗಳೊಂದಿಗೆ ಯುದ್ಧಕ್ಕೆ ಹೊರಟೆ, ಅವಳಂದವನು ಚಿತ್ರಿಸಿದೆ, ಅವಳ ರೂಪವನ್ನು ಯಥಾವತ್ತು ಪುಟಕ್ಕಿಳಿಸಿದೆ, ಅವಳ ಮೌನಕ್ಕೊಂದು ಆಕಾರ ಕೊಟ್ಟೆ, ಗೀಚಿದೆ, ಬಣ್ಣಗಳನ್ನೆಲ್ಲಾ ಒಟ್ಟು ಸೇರಿಸಿ ಬಿಳಿ ಹಾಳೆಯ ಮೇಲೆ ಸುರಿದೆ, ವರ್ಣ ಚಿತ್ತಾರವ ಮೂಡಿಸಿದೆ, ಬಣ್ಣಗಳೊಂದಿಗೆ ಗುದ್ದಾಡಿದೆ, ಕೈಗೆಲ್ಲಾ ಬಣ್ಣಗಳ ಮೆತ್ತಿಕೊಂಡೆ, ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಅವಳ ಪಾದಕ್ಕೆ ಅರ್ಪಿಸಿದೆ. ನಿಶ್ಚಲವಾಗಿ ಕುಳಿತವಳು ಈಗಲಾದರೂ ಅಲುಗಾಡಲೆಂದು.. ಊಹ್ಞೂಂ ಮತ್ತೆ ಸೋತಿದ್ದೆ, ಅವಳ ಕಂಗಳು ಚಲಿಸಿದವೇ ಹೊರತು ಮೌನವಲ್ಲ.. ಇನ್ನು ಹೋರಾಡಲು ಶಕ್ತಿ ಉಳಿದಿರಲಿಲ್ಲ, ನಿಂತಲ್ಲೇ ಕುಸಿದು ಕುಳಿತೆ, ಕೊನೆಗೂ ಅವಳ ಮೌನಕ್ಕೆ ಶರಣಾಗಿ ಮಾತಿಗೆ ಪೂರ್ಣವಿರಾಮವನ್ನಿಟ್ಟೆ. ಅವಳ ಕಂಗಳನ್ನೇ ದಿಟ್ಟಿಸಿದೆ, ಆಗಿದ್ದಾಗಲಿ ಎಂದು ಅವಳ ತೊಡೆಯ ಮೇಲೆ ತಲೆಯೂರಿ ಮಲಗಿಬಿಟ್ಟೆ. ಅವಳು ಪ್ರತಿಕ್ರಿಯಿಸಲಿಲ್ಲ.
        ಎಷ್ಟು ಹೊತ್ತು ಕಳೆದಿತ್ತೋ ಗೊತ್ತಿಲ್ಲ, ನಿದ್ರೆಗೆ ಜಾರಿದ್ದೆ. ಹಣೆಯ ಮೇಲೆ ಬೆಚ್ಚಗಿನ ಭಾವವೊಂದು ಹರಿದಂತಾಗಲು ಮಗ್ಗಲು ಬದಲಿಸಿದೆ. ಹನಿಯೊಂದು ಕೆನ್ನೆ ಸವರಿತು, ಕಣ್ಬಿಟ್ಟೆ.. ಮತ್ತೊಂದು ಹನಿ ಬೀಳಲು ಫಕ್ಕನೆ ಎದ್ದು ಕುಳಿತೆ, ಅವಳ ಕಣ್ಣಂಚಿನಲಿ ಹನಿಯೊಂದು ಹೊರಬರಲು ತವಕಿಸುತ್ತಿತ್ತು, ಒರೆಸಲು ಕೈ ಚಾಚಿದೆ ಜಾರಿ ಬಿತ್ತು.  ಧಾರಾಕಾರವಾಗಿ ಅತ್ತಳು, ಏನೂ ತೋಚದೆ ಮೂಕನಾದೆ. ಅಲ್ಲೇ ಬಿದ್ದಿದ್ದ ಬಿಳಿ ಹಾಳೆಯೊಂದನ್ನು ಎತ್ತಿಕೊಂಡು ಏನನ್ನೋ ಗೀಚಿ ಕೈಗಿತ್ತಳು, ಹಾಳೆಯನ್ನೇ ದಿಟ್ಟಿಸಿದೆ.. ಅದರಲ್ಲಿ ಬರೆದಿತ್ತು - "ನಾನೊಬ್ಬಳು ಮಾತು ಬಾರದ ಮೂಗಿ, ನೀ ಎಷ್ಟೇ ಕೂಗಿದರೂ ನಾ ಬರಿಯ ಮೌನಿ.." ತಲೆಯೆತ್ತಿದೆ, ಅವಳ ಕಣ್ಣಂಚು ಮಾತನಾಡುತ್ತಿತ್ತು, ಅವಳ ಅಸಹಾಯಕತೆ ಎಲ್ಲವನ್ನೂ ವಿವರಿಸಿತ್ತು. ನನ್ನ ಮಾತುಗಳು ನಾಲಗೆಯಲ್ಲೇ ಕರಗಿ ಹೋದವು,
        ಈಗ ನಾನು ಮೂಗನಾಗಿದ್ದೆ, ಮಾತು ಬರುವ ಮೂಗನಾಗಿದ್ದೆ..
ಅವಳು ಮಾತಾದಳು.. ನಾನು ಮೌನಿಯಾದೆ. ಮಾತು ಮೌನವಾಯಿತು, ಮೌನ ಮಾತಾಯಿತು.. ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗಿತ್ತು, ಭಾವನೆಯ ಹೊರತು..
                                             
- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ ಪ್ರಕಟವಾಗಿದೆ..

                        (ಮೂಲಪ್ರತಿ)

Sunday, 14 May 2017

ಅಪ್ಪ, ಅಮ್ಮ ಮತ್ತು ನಾನು



ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು!

ಬಟ್.‌.
ಅಪ್ಪ - ಅಮ್ಮಂದಿರ ವಿಷ್ಯದಲ್ಲಿ?
ನಾನಂತೂ ಇದೂವರೆಗೂ ಅಪ್ಪ - ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! 😘

ನಾನ್ ಅಪ್ಪ - ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು..
ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ - ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇನು ಇಲ್ಲ.. ಮೊನ್ನೆ ಮೊನ್ನೆಯಷ್ಟೇ ಮಾಲಿನಿ ಅತ್ತೆ ನನ್ ಜೊತೆ ಮಾತಾಡ್ಬೇಕಾದ್ರೆ "ನಿಮ್ಮಪ್ಪ ನಿನ್ನನ್ನ ಸ್ವತಂತ್ರವಾಗಿ ಬೆಳೆಸಿದ ರೀತಿ ತುಂಬಾ ಡಿಫರೆಂಟ್.. ಅದು ಸಾಮಾನ್ಯ ಅಪ್ಪಂದಿರಿಗೆ ಸಾಧ್ಯ ಆಗೋದಿಲ್ಲ" ಅಂದಾಗ ನನ್ನಪ್ಪನ ಬಗ್ಗೆ ಹೆಮ್ಮೆಯಾಗಿದ್ದು ಸುಳ್ಳಲ್ಲ..

ಇನ್ನು ನನ್ನಮ್ಮ.. ಅವಳೊಂದಿಗೆ ನನ್ನ ತಲೆಹರಟೆ, ಮುನಿಸು, ಅನುಮಾನ, ಫಿಲಾಸಫಿ ಎಲ್ಲವನ್ನೂ ಹಂಚಿಕೊಳ್ತೇನೆ.. ನಾ ಜಾಸ್ತಿ ಲವ್ ಲೆಟರ್ಸ್ ಬರೆದಾಗ ಎಲ್ರೂ "ನಿಮ್ಮನೆಯಲ್ಲಿ ಏನೂ ಹೇಳಲ್ವಾ" ಅಂತ ಆಶ್ಚರ್ಯಪಟ್ಟಿದ್ರು.. ಆದ್ರೆ ನಾ ಬರ್ದಿರೋ ಲವ್ ಲೆಟರ್ಸ್ಗಳನ್ನ ಎಲ್ಲರಿಗಿಂತ ಮೊದಲು ತೋರಿಸೋದೇ ಅಮ್ಮನಿಗೆ.. ಫೋನಲ್ಲೇ ಓದಿ ಹೇಳಿ, ಹೇಗಾಗಿದ್ಯೇ ಅಂದಾಗ.. ಅಮ್ಮ ಅವಳಿಗೆ ತೋಚಿದಷ್ಟು ಸಲಹೆಗಳನ್ನ ಕೊಟ್ಟು.. ಕೊನೆಯಲ್ಲಿ ಲವ್ ಲೆಟರ್ಸ್ ಬಿಟ್ಟು ಬೇರೆ ಏನಾರ್ ಬರ್ಯೋ.. ಚೆನ್ನಾಗಿರುತ್ತೆ ಅಂತ ಸಪೋರ್ಟ್ ಮಾಡಿದ್ದಾಳೆ ಹೊರತು.. ಯಾವತ್ತೂ ಕೂಡ "ಹೇಳು, ಯಾಕ್ ಬರ್ದಿದ್ದು? ಯಾರಿಗ್ ಬರ್ದಿದ್ದು?" ಅಂತ ಜಾಸ್ತಿ ಕೆದುಕೋಕೆ ಹೋಗಿಲ್ಲ.. ನನ್ನ ವಯಸ್ಸಿನ ತುಮುಲಗಳನ್ನ ನಾ ನಿರಾತಂಕವಾಗಿ ವ್ಯಕ್ತಪಡಿಸೋಕೆ ಇಂತಹ ವಾತಾವರಣವೇ ಪ್ರಮುಖ ಕಾರಣ..
ಅಪ್ಪ‌ - ಅಮ್ಮನಿಗೆ ನಾ ದಾರಿ ತಪ್ಪೋದಿಲ್ಲ ಅನ್ನೋ ಓವರ್ ಕಾನ್ಫಿಡೆನ್ಸೋ? ಅಥವಾ ದಾರಿ ತಪ್ಪಿದ್ರೆ ವಾಪಾಸ್ ಬರ್ತಾನೆ ಅನ್ನೋ ನಂಬಿಕೆಯೋ? ಗೊತ್ತಿಲ್ಲ.. ಒಟ್ನಲ್ಲಿ ನನ್ನ ಮಾರ್ಕ್ಸ್ ಕಾರ್ಡಿನಿಂದ ಹಿಡಿದು.. ನನ್ನ ತಲೆಹರಟೆ ಕೆಲಸಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ.. ಬಹುಶಃ ಅವರ ಇಂತಹ ಸ್ವಭಾವವೇ ನನಗೆ ನನ್ನ ಇತಿಮಿತಿಗಳನ್ನ ಸ್ವತಃ ಅರಿತುಕೊಳ್ಳಲು ಸಹಕರಿಸಿದ್ದು.. ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ್ಯೂ ಅದನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳದಂತೆ ತಡೆದಿರುವುದು..

ಸೋ ನನ್ನ ಅಪ್ಪ - ಅಮ್ಮ ನನ್ನ ಬೆಸ್ಟ್ ಫ್ರೆಂಡ್ಸು.. ಈ ಥರ ಭಾವನೆ ಮೂಡಿಸಿದ್ದಕ್ಕೆ ಥ್ಯಾಂಕ್ಸ್ ಅನ್ಬೇಕಾ? ಅದಕ್ಕೂ ಮಿಗಿಲಾಗಿದ್ ಯಾವ್ದಾರ್ ಇದ್ಯಾ? ಗೊತ್ತಿಲ್ಲ..
ಬಟ್ ಅವರಿಬ್ಬರ ಮೇಲೆ ಸದಾ ಇಷ್ಟೇ ಪ್ರೀತಿ - ಅಭಿಮಾನ ಉಳಿಸಿಕೊಳ್ಳೋ ಶಕ್ತಿ ನನಗೆ ದಕ್ಕಲಿ ❤

ಏನೋ ಬರ್ಯೋಕ್ ಹೊರ್ಟಿದ್ದು, ಏನೋ ಆಯ್ತು.. ಎಡಿಟ್ ಮಾಡೋ ಮನಸಿಲ್ಲ ಸೋ ಸಹಿಸಿಕೊಳ್ಳಿ 😊

Thursday, 27 April 2017

ನಿನ್ನ ಮುಂಗುರುಳ ತಿರುವು ಅಪಘಾತ ವಲಯ..!!

ಕಣ್ಸೆಳೆತದಲ್ಲೆನ್ನೆದೆಗಡಲಲೆಗಳೇರಿಳಿತಗಳನೇರುಪೇರುಗೊಳಿಸಿದವಳೇ..

     ಲಯ ತಪ್ಪಿದ ಹೃದಯ ಬಡಿತದ ಸಮ್ಮುಖದಲ್ಲೇ ನಿನಗಾಗಿ (ಕೊನೆಯದಾಗಿ?) ಈ ಪತ್ರ ಬರೆಯುತ್ತಿದ್ದೇನೆ.. ಒಪ್ಪಿಸಿಕೋ..

ಸಂವತ್ಸರವೊಂದು ಕಳಚಿ ಬಿದ್ದು ಹೊಸದಕ್ಕೆ ದಾರಿ ಮಾಡಿಕೊಟ್ಟಿದೆ ಅಂತೆಯೇ ಸಂಬಂಧವೂ ಕೂಡ.. ಆದರಿಲ್ಲಿ ಹೊಸದರ ನೆರಳು ಇಣುಕುವ ಸಾಧ್ಯತೆ ಕಡಿಮೆ ಇದೆ ಅದಕ್ಕಾಗಿ ಸದ್ಯದ ಪರಿಸ್ಥಿಯ ಮಟ್ಟಿಗೆ ಇದು ಯುಗಾಂತ್ಯ.
ಇಷ್ಟು ವರ್ಷಗಳವರೆಗೆ ಕಣ್ಣಲ್ಲಿ ಕಾಪಿಟ್ಟುಕೊಂಡು ಬಂದಿದ್ದ ನಿನ್ನ ಬಿಂಬ ಕದಡಿ ಹೋಗಿದೆ, ಎದ್ದಿರುವ ಅಲೆಗಳು ಮೌನವಾಗುವ ಸಂಭವವಂತೂ ಕಾಣುತ್ತಿಲ್ಲ, ಬೊಗಸೆಯಲ್ಲಿ‌ ನಿನ್ನ ಬಿಂಬವ ಬಂಧಿಸಿ ಉಳಿಸಿಕೊಳ್ಳೋಣವೆಂದರೆ ನಡುಗುವ ಕೈಗಳು ಅದಕ್ಕೆ ಸಹಕರಿಸುತ್ತಿಲ್ಲ, ಅಸಹಾಯಕ ಅಮಾಯಕ ನಿರ್ದೋಷಿ ನಿರಪರಾಧಿಗೆ ನೀ ಕೊಟ್ಟ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸುವ ಮುನ್ಸೂಚನೆಯಂತೂ ಯಾವ ದಿಕ್ಕಿನಲ್ಲೂ ತೋರುತ್ತಿಲ್ಲ, ಕನಸುಗಳನ್ನೆಲ್ಲ ಕಳೆದುಕೊಂಡು ಬದುಕಿನ ನಡುಬೀದಿಯಲಿ ದಿವಾಳಿಯಾಗಿ ಕುಳಿತಿರುವೆ.‌. ಮುಂದೇನು?

ಅದ್ಯಾಕೆ ಅಷ್ಟೊಂದು ಕಟುವಾಗಿ ಹೋದೆ? ಚಿಕ್ಕ ಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಳ್ಳುತ್ತಿದ್ದವಳು, ನಾ ಪರಿಪರಿಯಾಗಿ ಬೇಡಿಕೊಂಡರೂ ನಿರ್ಲಕ್ಷಿಸಿ ಬಿಟ್ಟೆಯಲ್ಲಾ? ಹೊರಟು ಹೋಗು ಅಂತ ಒಲ್ಲದ ಮನಸ್ಸಿನಿಂದಲೇ ಹೇಳಿ ಕಳಿಸಿಬಿಟ್ಟೆಯಲ್ಲಾ? ನಿನ್ನಿಷ್ಟವನ್ನೆಲ್ಲಾ ಒತ್ತೆಯಿಟ್ಟು ಏನನ್ನ ಸಾಧಿಸೋಕೆ ಹೊರಟಿದ್ದಿ? ನನ್ನ ನಿಷ್ಕಲ್ಮಶ ಭಾವವೀಗ ಜೀವವಿಲ್ಲದೆ ತಣ್ಣಗೆ ಬಿದ್ದಿದೆ.

ನೀ ಹೋಗಿದ್ದೋ? ನಾನೇ ಕಳಿಸಿದ್ದೋ? ಗೊಂದಲವಿನ್ನೂ ಸತ್ತಿಲ್ಲ. ನೀ ಉಳಿಯುತ್ತೇನೆಂದರೂ ಉಳಿಸಿಕೊಳ್ಳುವ ಶಕ್ತಿ ನನಗಿರಲಿಲ್ಲವಾ? ಅಥವಾ ನೀ ಬಯಸಿದಂತೆ ನನಗಿರಲು ಸಾಧ್ಯವಾಗುವುದಿಲ್ಲವೆಂಬುದೇ ಎಲ್ಲದಕ್ಕೂ ಮೂಲವಾ? ಸಂಬಂಧಕ್ಕೆ ನಾಂದಿ ಹಾಡುವ ಮುನ್ನ ಮೂಡುತ್ತಿದ್ದ ಹತ್ತಾರು ಕಾರಣಗಳು, ನಿಷ್ಕಾರಣವಾಗಿ ಚೂರಾಗಿವೆ. ನನ್ನ ಜೀವನದಲ್ಲಿ ರಕ್ತಸಂಬಂಧಗಳಾಚೆಗೆ ಬಹುವಾಗಿ ಪ್ರೀತಿಸಿದ್ದು ನಿನ್ನನ್ನು ಮಾತ್ರ.. ಅಂತಹ ನೀನೇ ಕಾರಣ ನೀಡದೆ ಹೊರಟುಬಿಟ್ಟರೆ ಏನೆಂದುಕೊಳ್ಳಲಿ? ಸಂಪೂರ್ಣ ಕಾರಣ ತಿಳಿದುಕೊಳ್ಳಲೂ ಯೋಗ್ಯತೆ ಇಲ್ಲದವನಾಗಿ ಹೋದೆನಾ?

ಜೊತೆಗಿದ್ದ ಜೀವವೊಂದು ಕನಸಾಗಿ ಪರಿವರ್ತನೆ ಹೊಂದುವ ವೇಳೆಯಲ್ಲಿ ಅಸಹಾಯಕನಾಗಿ ನಿಂತು ನೋಡುವಾಗ ಎದೆಯಲ್ಲಾಗೋ ಸಂಕಟವಿದೆಯಲ್ಲಾ ಅದಕ್ಕೆ ಸಾಟಿಯಿಲ್ಲ.
ತುಟಿಯಂಚಲ್ಲಿ ಮೂಡುವ ಕಿರುನಗೆಗೆ ಇನ್ನೆಂದೂ ನೀ ಕಾರಣವಾಗುವುದಿಲ್ಲ ಎಂದು ನೆನೆದರೇ ಮನಸ್ಸು ಬಿಕ್ಕಳಿಸುತ್ತದೆ.

ನಿನ್ನ ಮುಂಗುರುಳ ತಿರುವಲ್ಲಿ "ಅಪಘಾತ ವಲಯ.. ಎಚ್ಚರಿಕೆ!!" ಎಂಬ ಸೂಚನಾ ಫಲಕ ಹಾಕಿಸಿಬಿಡು, ಇನ್ಯಾವುದೋ ಬಡಪಾಯಿಯ ಕನಸು ನುಚ್ಚುನೂರಾಗುವ ಮುನ್ನ.
ನನಗಾದಂಥ ಅನುಭವ ನಿನಗಾಗದಿರಲಿ, ನಿನ್ನಿಷ್ಟಗಳೆಲ್ಲಾ ನಿನಗೆ ದಕ್ಕಲಿ, ನಿನ್ನ ಕನಸುಗಳೆಲ್ಲಾ ಈಡೇರಲಿ, ನಿನ್ನ ಜೀವನ ತುಂಬಾ ಎತ್ತರಕ್ಕೇರಿ ಉಜ್ವಲವಾಗಿ ಬೆಳಗಲಿ ಆದರೆ ಆ ಬೆಳಕು ಅಪ್ಪಿಪತಪ್ಪಿಯೂ ನನ್ನ ಕಣ್ಣಿಗೆ ಬೀಳದಿರಲಿ..
ಗುಂಡಗಿರೋ ಭೂಮಿಯಲ್ಲಿ ಎಷ್ಟೇ ನಡೆದರೂ ನಾವಿಬ್ಬರೂ ಮತ್ತೆ ಸಂಧಿಸದಿರಲಿ.. ಮುಖ ನೋಡಿಯೂ ನೋಡದಂತೆ ನಟಿಸಿ ನೋವುಣ್ಣುವ ದೌರ್ಭಾಗ್ಯ ನನಗೆ ಬರದಿರಲಿ, ನಿನ್ನ ದುಪ್ಪಟ್ಟಾದಿಂದ ಹೊರಬೀಳುವ ಘಮ ನನ್ನ ಮೂಗಿಗೆ ಬಡಿಯದಿರಲಿ.. ಹೊರಟುಹೋಗುತ್ತಿರುವ ಶುಭ ಸಂದರ್ಭದಲ್ಲಿ ನಿನ್ನ ಹೆಜ್ಜೆ ಗುರುತುಗಳನ್ನೂ ಅಳಿಸಿ ಹೊರಟು ಬಿಡು, ಇಲ್ಲವಾದಲ್ಲಿ ಅದರೊಳಗೆ ಕಾಲಿಟ್ಟು ನಾ ಎಡವುವ ಸಾಧ್ಯತೆ ಇದೆ.

ಕೊನೆಯದಾಗಿ.. ನಿನ್ನ ಕಾಲಿಗೆ ಗೆಜ್ಜೆ ಕಟ್ಟುವ ಆಸೆಯೊಂದು ಹಾಗೇ ಉಳಿದುಹೋಗಿದೆ ಮರೆಯೋಕಂತೂ ಆಗೋದಿಲ್ಲ ಕಡೇಪಕ್ಷ ಮುಂದೆ ಯಾವುದಾದರೂ ಗೆಜ್ಜೆ ಸದ್ದು ಕೇಳಿದಾಗ ಬಂದು ಕಾಡದಿರು..

ವಿಶ್ ಮಿ ಗುಡ್ ಲಕ್

ಇಂತಿ..
ಕನಸಿನ ಗೋರಿಯ ಕಾವಲುಗಾರ
ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ...

                       (ಮೂಲಪ್ರತಿ)

Monday, 14 November 2016

ಅನರ್ಥಗಳ ಮಾಲೀಕ

ಪೌರ್ಣಿಮೆಯ ಬರುವಿಕೆಗಾಗಿ
ಅಮವಾಸ್ಯೆಯ ಇಳಿಸಂಜೆಯಿಂದಲೇ
ಆಗಸದಡಿಯಲ್ಲಿ ರಚ್ಚೆಹಿಡಿದು ಕುಳಿತು
ಹದಿನಾಲ್ಕನೇ ದಿನಕ್ಕೆ ಸೋಲೊಪ್ಪಿಕೊಳ್ಳುವ
ಹುಚ್ಚುಹುಡುಗ ನಾನು.

ಭ್ರಮೆಯೊಳಗಿನ ವಾಸ್ತವತೆಯಲ್ಲಿ
ಬದುಕು ಕಟ್ಟಿಕೊಳ್ಳಲು
ಕನಸು ಕಾಣುವುದರಲ್ಲೇ
ಸುಖವನ್ನರಸುವ ಚಾಳಿಗೆ ಬಲಿಯಾದ
ಬಡಜೀವಿ ನಾನು.

ಅರ್ಥವಿಲ್ಲದ ಸಾಲುಗಳನ್ನು
ಒಂದಕ್ಕೊಂದು ಕಟ್ಟುತ್ತಾ
ಸಾಕೆನಿಸಿದಾಗ ನಿಟ್ಟುಸಿರಿಟ್ಟು
ಅದರೊಳಗೊಂದು ಕವಿತೆ ಹುಡುಕುವ
ಸಾಹಸಿಗ ನಾನು.

ಬೆಳಕಿನ ಕೋಣೆಯೊಳಗೆ
ಕಪ್ಪು ದೀಪವನ್ನಿಟ್ಟು
ಬೆಳಕಿನ ಅಹಂಕಾರವ ಕರಗಿಸಲು
ವ್ಯರ್ಥ ಪ್ರಯತ್ನದೊಳು ಮುಳುಗುವ
ಹಠಮಾರಿ ನಾನು.

ನನ್ನದೊಂದು ಅರ್ಥವಿಲ್ಲದ ಬದುಕು
ಬೊಗಸೆ ಪ್ರೀತಿಗೆ ಕರಗುತ್ತಾ
ನನ್ನ ಅಸ್ತಿತ್ವವನ್ನೇ ಮರೆತು
ಇನ್ನೊಬ್ಬರಿಗಾಗಿ ನಗುವ
ಅನರ್ಥಗಳ ಮಾಲೀಕ ನಾನು.

ನನಗಾಗಿ ಕಾಯಬೇಡ
ಬದುಕು ಬಾಡುವ ಮುನ್ನ
ಹೊಸ ಕನಸುಗಳನ್ನು ಹೆತ್ತು
ನನ್ನೆದೆಗೊಮ್ಮೆ ಒದ್ದು ಹೊರಟು ಬಿಡು
ಅವಮಾನಕ್ಕೆ ಅರ್ಹನಾದವನು ನಾನು.

-ಅನಾಸ್ಕ

Sunday, 30 October 2016

ಮೊದಲ ಹಂತದ ಪ್ರೀತಿ...

ಮೊದಲ ಹಂತದ ಪ್ರೀತಿ..
ಲವಲವಿಕೆ, ಉತ್ಸಾಹ..
ಇಬ್ಬರೂ ಎಕ್ಸೈಟು..
ಲವ್ ಅಟ್ ಫಸ್ಟ್ ಸೈಟು.

ಗಂಟೆಗಟ್ಟಲೆ ಮಾತು..
ಹೈಕು, ವಾಟ್ಸಾಪು..
ಅದರಲ್ಲೇ ಲವ್ವಿಂಗು..
ಅದರೊಳಗೇ ಲಿವ್ವಿಂಗು.

ತಲೆಹರಟೆ ಹುಡುಗ..
ವಿಚಿತ್ರ ಆಸೆಗಳ ಓನರ್ರು..
ಡೀಸೆಂಟು ಹುಡುಗಿ..
ಹದಿನೆಂಟಾಗದ ಮೈನರ್ರು.

ಬೈಬೇಕು ಅವಳು..
ಹೊಡಿಬೇಕು, ಬಡಿಬೇಕು..
ಕ್ಷಣಕ್ಷಣಕೂ ಸಿಡುಕಿದರೆ..
ಇನ್ನೂ ಒಳ್ಳೆಯದು.

ಕೇಳಬಾರದು ಸಾರಿ..
ಬಿಡಬೇಕು ಮಾತುಕತೆ..
ಹುಸಿ ಮುನಿಸು ಮುಗಿದಾಗ..
ಗುನುಗಬೇಕು ಲವ್ ಯೂ.

ಪಾಪ!! ಹೊಸದು ಪ್ರೀತಿ..
ಆಗಿಲ್ಲ ಅನುಭವ..
ಮಾಡಿದ್ದೆಲ್ಲಾ ಚೆಂದ..
ಏನೇನೋ ಹುಚ್ಚು ಆಸೆ.

ಹುಡುಗಿ ಪಾಪದ ಜೀವ..
ಬರೀ ಮಾತಿನ ಮಲ್ಲಿ..
ಕಡಿಮೆ ಕಾಮನ್ ಸೆನ್ಸು..
ಸ್ಟುಡೆಂಟ್ ಆಫ್ ಸೈನ್ಸು.

ಈ ಕ್ಷಣಕೆ ಲವ್ವು..
ಇನ್ನೊಮ್ಮೆಗೆ ಫ್ರೆಂಡ್ಶಿಪ್ಪು..
ಮೂಡಿಲ್ಲ ಕ್ಲಾರಿಟಿ..
ಕನ್ಫ್ಯೂಶನ್ ಪಾರ್ಟಿ.

ಕುಲವೊಂದೇ, ಕ್ಯಾಸ್ಟೊಂದೇ..
ಸಬ್ ಡಿವಿಷನ್ ಬೇರೆ..
ಅದೇ ದೊಡ್ಡ ಪ್ರಾಬ್ಲಮ್ಮು..
ಮುಂದೆ ಮದುವೆಗೆ.

ಒಪ್ಪುವುದು ಮ್ಯಾಟ್ರಲ್ಲ..
ಉಳಿಸಿಕೊಳ್ಳುವುದೇ ಚಾಲೆಂಜು..
ಸಕ್ಸಸ್ ಆಗದ ಪ್ರೀತಿಯ..
ಶುರು ಮಾಡುವುದೇಕೆ?

ಹಚ್ಚಿದಳು ಹುಡುಗಿ ಆನೆಪಟಾಕಿ..
ದಂಗಾದ ಹುಡುಗ ಹೊಸವರಸೆ ನೋಡಿ..
ಹಣೆಬರಹ ಸರಿಯಿಲ್ಲ, ಕ್ಯಾಲೆಂಡರ್ ನೋಡಿದ..
ಎದ್ದು ಕಾಣುತ್ತಿತ್ತು ಏಪ್ರಿಲ್ ಒಂದು.

-ಅನಾಸ್ಕ

Friday, 28 October 2016

ಅಗ್ನಿ ಮೂಲೆಯ ಕೋಣೆ..


ಅಗ್ನಿ ಮೂಲೆಯ ಕೋಣೆ..
ಬಾಗಿಲಿಗೆ ಹಳೆಬೀಗ..
ಕ್ವಿಂಟಲ್ಲು ಧೂಳು, ಜೊತೆಗಷ್ಟು ತುಕ್ಕು..
ಒಡೆದು ನುಗ್ಗಿದ ಠಕ್ಕ..
ಹುಡುಕುತ್ತ ವರಹಗಳ.

ಒಳಗೆ ಮರದ ಟ್ರಂಕು..
ಅದರೊಳಗೆ ಬಿಳಿಪೇಜು..
ಅರ್ಥವಾಗದ ಬರಹ..
ನಡುನಡುವೆ ಶಾಹಿ ಕಲೆ..
ಕೊನೆಗೊಂದು ಪ್ರೇಮಪತಾಕೆ.

ಓದಿದ್ದೊಂದೇ ವರ್ಷ ಬಾಲವಾಡಿಯಲ್ಲಿ..
ಆಮೇಲೆ ಸುತ್ತಿದ್ದು ಮನೆಹಿಂದಿನ ಬ್ಯಾಣ..
ಆಗಿದ್ದು ಮಾತ್ರ ಚೋರವಿದ್ಯಾ ಪ್ರವೀಣ..
ತಲೆಕೆಡಿಸಿಕೊಂಡ ಬಿಳಿ ಪೇಜನು ನೋಡಿ..
ಇರಬಹುದೇ ಇದು ಆಸ್ತಿ ಪತ್ರ ಎಂದು.

ನೆನಪಾಯಿತು ಹತ್ತರ ನೋಟು..
ಒಂದುದ್ದ ಗೆರೆ ಪಕ್ಕಕ್ಕೆ ಕೋಳಿಮೊಟ್ಟೆ..
ತಡಕಾಡಿದ ಕಳ್ಳ ಗೆರೆ-ಮೊಟ್ಟೆಗಳಿಗಾಗಿ..
ಮೊಟ್ಟೆಗಳ ರಾಶಿ ಎದುರಾಯಿತು ಕಣ್ಗೆ..
ಕಂಡ ಗೆರೆಗಳು ಮಾತ್ರ ಸೊನ್ನೆ ಸೊನ್ನೆ..

ಇರಬೇಕು ಪತ್ರದಲಿ ಒಂದಾದರು ನಂಬರು..
ಇರದಿರೇ ಅದೆಂಥಾ ಆಸ್ತಿಪತ್ರ..?
ತಲೆ ಓಡಿಸಿದ ಚೋರ ಪ್ರವೀಣ..
ಮತ್ತೆ ಹಾಳೆಯ ತೆಗೆದು ನೋಡೇಬಿಟ್ಟ..
ವ್ಹಾ.. ಕೊನೆಯಲ್ಲಿ ಕಂಡಿತು ಗೆರೆ ಮತ್ತು ಮೊಟ್ಟೆ.

ಕುಣಿದು ಕುಪ್ಪಳಿಸಿದ, ಚೀಟಿಯ ಮಡಚಿದ..
ಹರಕು ಜೇಬಿಗೆ ತುರುಕಿ ಹುಚ್ಚೆದ್ದು ಓಡಿದ..
ದಾರಿಯಲಿ ಎದುರಾದ ಪ್ರಾಣಸ್ನೇಹಿತ..
ಒಂದನೇ ಕ್ಲಾಸಿಗೆ ಇಸ್ಕೂಲು ಬಿಟ್ಟವ..
ಕಳ್ಳನ ಕಾಲಿಗೆ ಬಿತ್ತು ಗಕ್ಕನೆ ಬ್ರೇಕು..

ಪಟಪಟನೆ ಒದರಿದ, ಕಿವಿಗಷ್ಟು ಮೊಳೆಹೊಡೆದ..
ಅಪ್ಪಿ, ಎಳೆದಾಡಿ ಕೈಹಿಡಿದು ಕುಣಿದ..
ಕೊನೆಗೂ ಚೀಟಿಯ ತೆಗೆದು ಸ್ನೇಹಿತನ ಕೈಗಿತ್ತ..
ಕೋಟಿಯ ಕನಸಲ್ಲೇ ಚೀಟಿ ಬಿಚ್ಚಿದ ಪುಣ್ಯಾತ್ಮ..
ಓದಿದ್ದೇ ತಡ ನೆತ್ತಿಗೇರಿತು ಪಿತ್ತ.

ಕೆನ್ನೆಗೆರಡು ಬಿಟ್ಟ, ಸೆನ್ಸಾರಿಲ್ಲದೆ ಬೈದ..
ತುಪುಕ್ ಎಂದು ಉಗಿದು, ತಿರುಗಿ ನೋಡದೆ ನಡೆದ..
ಟೆನ್ಸಾದ ಕಳ್ಳ, ಮಿಕಿಮಿಕಿ ನೋಡುತ್ತಾ ಕೆನ್ನೆ ಮುಟ್ಟಿಕೊಂಡ.
ಹಿಂತಿರುಗಿ ನೋಡಿದ ಒಂದನೇ ಕ್ಲಾಸಿನ ಹೈದ..
ಕಿಸಕ್ಕನೇ ನಕ್ಕ ಇವನ ಅವಸ್ಥೆಯ ಕಂಡು.

ಆಸ್ತಿಪತ್ರದ ಬದಲು ಪ್ರೇಮಪತ್ರವಾಗಿತ್ತು ಚೀಟಿ..
ಆದರೂ.. ಕಳ್ಳ ಹುಡುಕಿದ ಗೆರೆ-ಮೊಟ್ಟೆ ಅಲ್ಲಿತ್ತು..
ದೂರದೂರಿನ ಇಂಗ್ಲೀಷು ಭಾಷೆಯಲಿ ಬರೆದ ಕೊನೆಸಾಲಲ್ಲಿತ್ತು..
ಒಂದನೇ ಕ್ಲಾಸಿನ ಹೈದನಿಗೆ ಅರ್ಥವಾಗುವಂತೆ ಸ್ಫುಟವಾಗಿ ಬರೆಯಾಲಾಗಿತ್ತು..
I 'lo've you ಎಂದು.. 😍 😍

-ಅನಾಸ್ಕ

Thursday, 27 October 2016

ಹೆಚ್ಚೇನು ಆಸೆಯಿಲ್ಲ...


ಹೆಚ್ಚೇನು ಆಸೆಯಿಲ್ಲ...
ತಲೆಗೂದಲು ಹಣ್ಣಾಗಿ..
ನಡು ಪೂರ್ಣ ಬೆಂಡಾಗಿ..
ಬೊಚ್ಚು ಬಾಯಿಂದ ನಾ ನಗುವಾಗ..
ನೀ ನಗಬೇಕು,
ಯೌವ್ವನದಲ್ಲಿ ನಿನ್ನ ಕಾಡಿದ ಕ್ಷಣಗಳನ್ನೆಲ್ಲ ಮೆಲುಕಬೇಕು.
ಮುಡಿಗಿಟ್ಟ ಮಲ್ಲಿಗೆ..
ಕೆನ್ನೆ ಇಳಿಜಾರಿನ ಮುತ್ತು..
ಹುಸಿಕೋಪ ಬಿರುನೋಟ..
ಎಲ್ಲ ನೆನಪಿಸಬೇಕು..
ಸಾಯುವ ಮುನ್ನ ಹುಡುಗನಾಗಬೇಕು,
ನಿನ್ನ ನೋಟಕೆ ಪೂರ್ತಿ ಕರಗಬೇಕು.
ಮತ್ತೆ ಹಂಬಲಿಸಬೇಕು..
ಪ್ರೀತಿಸಲು, ರಮಿಸಲು, ನಿನ್ನೊಡನೆ ಬದುಕಲು..
ನನ್ನ ಹಾತೊರೆಕೆಗೆ ನೀ ಕಡಿವಾಣ ಹಾಕಬೇಕು..
ಕಳಿಸಿಕೊಡಬೇಕು..
ದೇಹ ತಣಿಯುವ ಮುನ್ನ ಎದೆ ಮೇಲೆ ಕೈಯಿಟ್ಟು
ಮನಸಾರೆ ಮುತ್ತಿಟ್ಟು ನನ್ನ ಕಳಿಸಿಕೊಡಬೇಕು.

ಹೆಚ್ಚೇನು ಆಸೆಯಿಲ್ಲ...
ನನ್ನ ಕೊನೆಯುಸಿರು ನಿನ್ನ ಸಾನಿಧ್ಯವ ಬಯಸಿದೆ...

-ಅನಾಸ್ಕ

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...