ಹೆಚ್ಚೇನು ಆಸೆಯಿಲ್ಲ...
ತಲೆಗೂದಲು ಹಣ್ಣಾಗಿ..
ನಡು ಪೂರ್ಣ ಬೆಂಡಾಗಿ..
ಬೊಚ್ಚು ಬಾಯಿಂದ ನಾ ನಗುವಾಗ..
ನೀ ನಗಬೇಕು,
ಯೌವ್ವನದಲ್ಲಿ ನಿನ್ನ ಕಾಡಿದ ಕ್ಷಣಗಳನ್ನೆಲ್ಲ ಮೆಲುಕಬೇಕು.
ಮುಡಿಗಿಟ್ಟ ಮಲ್ಲಿಗೆ..
ಕೆನ್ನೆ ಇಳಿಜಾರಿನ ಮುತ್ತು..
ಹುಸಿಕೋಪ ಬಿರುನೋಟ..
ಎಲ್ಲ ನೆನಪಿಸಬೇಕು..
ಸಾಯುವ ಮುನ್ನ ಹುಡುಗನಾಗಬೇಕು,
ನಿನ್ನ ನೋಟಕೆ ಪೂರ್ತಿ ಕರಗಬೇಕು.
ಮತ್ತೆ ಹಂಬಲಿಸಬೇಕು..
ಪ್ರೀತಿಸಲು, ರಮಿಸಲು, ನಿನ್ನೊಡನೆ ಬದುಕಲು..
ನನ್ನ ಹಾತೊರೆಕೆಗೆ ನೀ ಕಡಿವಾಣ ಹಾಕಬೇಕು..
ಕಳಿಸಿಕೊಡಬೇಕು..
ದೇಹ ತಣಿಯುವ ಮುನ್ನ ಎದೆ ಮೇಲೆ ಕೈಯಿಟ್ಟು
ಮನಸಾರೆ ಮುತ್ತಿಟ್ಟು ನನ್ನ ಕಳಿಸಿಕೊಡಬೇಕು.
ಹೆಚ್ಚೇನು ಆಸೆಯಿಲ್ಲ...
ನನ್ನ ಕೊನೆಯುಸಿರು ನಿನ್ನ ಸಾನಿಧ್ಯವ ಬಯಸಿದೆ...
-ಅನಾಸ್ಕ

No comments:
Post a Comment