Friday, 28 October 2016

ಅಗ್ನಿ ಮೂಲೆಯ ಕೋಣೆ..


ಅಗ್ನಿ ಮೂಲೆಯ ಕೋಣೆ..
ಬಾಗಿಲಿಗೆ ಹಳೆಬೀಗ..
ಕ್ವಿಂಟಲ್ಲು ಧೂಳು, ಜೊತೆಗಷ್ಟು ತುಕ್ಕು..
ಒಡೆದು ನುಗ್ಗಿದ ಠಕ್ಕ..
ಹುಡುಕುತ್ತ ವರಹಗಳ.

ಒಳಗೆ ಮರದ ಟ್ರಂಕು..
ಅದರೊಳಗೆ ಬಿಳಿಪೇಜು..
ಅರ್ಥವಾಗದ ಬರಹ..
ನಡುನಡುವೆ ಶಾಹಿ ಕಲೆ..
ಕೊನೆಗೊಂದು ಪ್ರೇಮಪತಾಕೆ.

ಓದಿದ್ದೊಂದೇ ವರ್ಷ ಬಾಲವಾಡಿಯಲ್ಲಿ..
ಆಮೇಲೆ ಸುತ್ತಿದ್ದು ಮನೆಹಿಂದಿನ ಬ್ಯಾಣ..
ಆಗಿದ್ದು ಮಾತ್ರ ಚೋರವಿದ್ಯಾ ಪ್ರವೀಣ..
ತಲೆಕೆಡಿಸಿಕೊಂಡ ಬಿಳಿ ಪೇಜನು ನೋಡಿ..
ಇರಬಹುದೇ ಇದು ಆಸ್ತಿ ಪತ್ರ ಎಂದು.

ನೆನಪಾಯಿತು ಹತ್ತರ ನೋಟು..
ಒಂದುದ್ದ ಗೆರೆ ಪಕ್ಕಕ್ಕೆ ಕೋಳಿಮೊಟ್ಟೆ..
ತಡಕಾಡಿದ ಕಳ್ಳ ಗೆರೆ-ಮೊಟ್ಟೆಗಳಿಗಾಗಿ..
ಮೊಟ್ಟೆಗಳ ರಾಶಿ ಎದುರಾಯಿತು ಕಣ್ಗೆ..
ಕಂಡ ಗೆರೆಗಳು ಮಾತ್ರ ಸೊನ್ನೆ ಸೊನ್ನೆ..

ಇರಬೇಕು ಪತ್ರದಲಿ ಒಂದಾದರು ನಂಬರು..
ಇರದಿರೇ ಅದೆಂಥಾ ಆಸ್ತಿಪತ್ರ..?
ತಲೆ ಓಡಿಸಿದ ಚೋರ ಪ್ರವೀಣ..
ಮತ್ತೆ ಹಾಳೆಯ ತೆಗೆದು ನೋಡೇಬಿಟ್ಟ..
ವ್ಹಾ.. ಕೊನೆಯಲ್ಲಿ ಕಂಡಿತು ಗೆರೆ ಮತ್ತು ಮೊಟ್ಟೆ.

ಕುಣಿದು ಕುಪ್ಪಳಿಸಿದ, ಚೀಟಿಯ ಮಡಚಿದ..
ಹರಕು ಜೇಬಿಗೆ ತುರುಕಿ ಹುಚ್ಚೆದ್ದು ಓಡಿದ..
ದಾರಿಯಲಿ ಎದುರಾದ ಪ್ರಾಣಸ್ನೇಹಿತ..
ಒಂದನೇ ಕ್ಲಾಸಿಗೆ ಇಸ್ಕೂಲು ಬಿಟ್ಟವ..
ಕಳ್ಳನ ಕಾಲಿಗೆ ಬಿತ್ತು ಗಕ್ಕನೆ ಬ್ರೇಕು..

ಪಟಪಟನೆ ಒದರಿದ, ಕಿವಿಗಷ್ಟು ಮೊಳೆಹೊಡೆದ..
ಅಪ್ಪಿ, ಎಳೆದಾಡಿ ಕೈಹಿಡಿದು ಕುಣಿದ..
ಕೊನೆಗೂ ಚೀಟಿಯ ತೆಗೆದು ಸ್ನೇಹಿತನ ಕೈಗಿತ್ತ..
ಕೋಟಿಯ ಕನಸಲ್ಲೇ ಚೀಟಿ ಬಿಚ್ಚಿದ ಪುಣ್ಯಾತ್ಮ..
ಓದಿದ್ದೇ ತಡ ನೆತ್ತಿಗೇರಿತು ಪಿತ್ತ.

ಕೆನ್ನೆಗೆರಡು ಬಿಟ್ಟ, ಸೆನ್ಸಾರಿಲ್ಲದೆ ಬೈದ..
ತುಪುಕ್ ಎಂದು ಉಗಿದು, ತಿರುಗಿ ನೋಡದೆ ನಡೆದ..
ಟೆನ್ಸಾದ ಕಳ್ಳ, ಮಿಕಿಮಿಕಿ ನೋಡುತ್ತಾ ಕೆನ್ನೆ ಮುಟ್ಟಿಕೊಂಡ.
ಹಿಂತಿರುಗಿ ನೋಡಿದ ಒಂದನೇ ಕ್ಲಾಸಿನ ಹೈದ..
ಕಿಸಕ್ಕನೇ ನಕ್ಕ ಇವನ ಅವಸ್ಥೆಯ ಕಂಡು.

ಆಸ್ತಿಪತ್ರದ ಬದಲು ಪ್ರೇಮಪತ್ರವಾಗಿತ್ತು ಚೀಟಿ..
ಆದರೂ.. ಕಳ್ಳ ಹುಡುಕಿದ ಗೆರೆ-ಮೊಟ್ಟೆ ಅಲ್ಲಿತ್ತು..
ದೂರದೂರಿನ ಇಂಗ್ಲೀಷು ಭಾಷೆಯಲಿ ಬರೆದ ಕೊನೆಸಾಲಲ್ಲಿತ್ತು..
ಒಂದನೇ ಕ್ಲಾಸಿನ ಹೈದನಿಗೆ ಅರ್ಥವಾಗುವಂತೆ ಸ್ಫುಟವಾಗಿ ಬರೆಯಾಲಾಗಿತ್ತು..
I 'lo've you ಎಂದು.. 😍 😍

-ಅನಾಸ್ಕ

No comments:

Post a Comment

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...