"ಕನ್ನಡಪ್ರಭ" - ನಾನು ಅತ್ಯಂತ ಇಷ್ಟಪಡುವ ದಿನಪತ್ರಿಕೆ. ಪತ್ರಿಕೋದ್ಯಮದೆಡೆಗೆ ಬಾಲ್ಯದಿಂದಲೂ ಆಸಕ್ತಿಯಿದ್ದರೂ ಅದರೆಡೆಗೆ ಕುತೂಹಲ ಮೂಡಿಸಿದ್ದು ಕನ್ನಡಪ್ರಭ. ಪಿಯುಸಿ ಮುಗಿಸಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಮಗೆ ಉಪನ್ಯಾಸಕರಾಗಿದ್ದ ಲೋಹಿತ್ ಸರ್ ನನ್ನನ್ನು ಕರೆದು ಯಾವುದಾದರು ಪತ್ರಿಕೆಯಲ್ಲಿ Internship ಮಾಡ್ತೀಯಾ? ಎಂದಾಗ ಖುಷಿಯಿಂದ ಹ್ಞೂಂ ಎಂದಿದ್ದೆ. ಹಾಗಾದರೆ ಕನ್ನಡಪ್ರಭ ಕಚೇರಿಗೆ ಹೋಗು ನಾನು ಅಂಶಿ ಸರ್ ಹತ್ತಿರ ಮಾತನಾಡಿದ್ದೇನೆ ಎಂದಾಗಲಂತೂ ಹಿರಿಹಿರಿ ಹಿಗ್ಗಿದ್ದೆ.
ಕನ್ನಡಪ್ರಭ ಕಚೇರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ಈ ಮೂರು ವರ್ಷಗಳ ಅವಧಿಯಲ್ಲಿ ದಿನದಿನವೂ ಹೊಸ ಪಾಠಗಳನ್ನು ಕಲಿಯುತ್ತಲೇ ಇದ್ದೇನೆ, ಮೈಸೂರಿನ ಕನ್ನಡಪ್ರಭ ಕಚೇರಿ ನನಗೆ ಕಾಲೇಜಿಗಿಂತಲೂ ಹೆಚ್ಚಿನ ಪಾಠವನ್ನು ಕಲಿಸಿದೆ. ಅಲ್ಲಿರುವ ಪ್ರತಿಯೊಬ್ಬರೂ ನನಗೆ ಅಣ್ಣಂದಿರ ಹಾಗೆ ಸಿಡುಕದೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಾರೆ. ಅದರಲ್ಲೂ ಮೈಸೂರು ಆವೃತ್ತಿಯ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಸರ್ ಅವರಂತೂ ಮಾರ್ಗದರ್ಶನದ ಜೊತೆಜೊತೆಗೆ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಆಗಾಗ ನಾನು ಕಚೇರಿಗೆ ಗೈರಾಗುತ್ತಲೇ ಇರುವುದರಿಂದ "Regularly Irregular fellow" ಎಂಬ ಪಟ್ಟವನ್ನು ಕಟ್ಟಿ ರೇಗಿಸುತ್ತಿರುತ್ತಾರೆ.
ಕನ್ನಡಪ್ರಭದಲ್ಲಿ ನನ್ನ ಬೈಲೈನ್ ಬಂದಾಗಲೆಲ್ಲಾ ಹಲವರು ಅರೆ!! ಕೆಲಸಕ್ಕೆ ಸೇರಿಕೊಂಡಾಯ್ತಾ ಎಂದು ಕೇಳುವುದುಂಟು, ಹೀಗೆ ಬೈಲೈನ್ ಕೊಡುತ್ತಾ, ವರದಿ ಮಾಡುವುದನ್ನು ಕಲಿಸುತ್ತಾ ದಿನೇ ದಿನೇ ಪತ್ರಿಕಾ ಪ್ರಪಂಚದ ಆಳ ಅಗಲಗಳನ್ನು ಪರಿಚಯಿಸುತ್ತಿರುವ ಅಂಶಿ ಸರ್ ಅವರು ಬರೆದಿರುವ "ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ" ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ.
ಈ ಸುಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತಾ - ಕೆಲ ದಿನಗಳ ಹಿಂದೆ ಅವರೊಂದಿಗೆ ನಡೆಸಿದ್ದ ಚಿಕ್ಕ ಸಂದರ್ಶನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ…
ಕನ್ನಡ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದವರ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ದಕ್ಕಿದ ಗೌರವಕ್ಕೆ ಯಾವುದೇ ಚ್ಯುತಿ ಬಾರದಂತೆ ಅತ್ಯಂತ ಜವಾಬ್ದಾರಿಯುತವಾಗಿ ಕಾಯ್ದುಕೊಂಡು, ಹಮ್ಮುಬಿಮ್ಮುಗಳಿಲ್ಲದೇ ಸರಳವಾಗಿ ಬದುಕುತ್ತಿರುವವರು ವಿರಳ. ಸುದೀರ್ಘ ಮೂವತ್ತು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಜೀವಿಸಿ, ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ, ಬದಲಾಗುತ್ತಿರುವ ಪತ್ರಿಕೋದ್ಯಮ ಲೋಕದಲ್ಲಿ ಅದರ ಮೂಲ ತತ್ವಗಳಿಗೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವವರು ಶ್ರೀಯುತ ಅಂಶಿ ಪ್ರಸನ್ನಕುಮಾರ್. ಕರ್ನಾಟಕ ರಾಜ್ಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀಯುತರು ಹತ್ತಕ್ಕೂ ಹೆಚ್ಚು ಪುಸ್ತಕಗಳ ಲೇಖಕರೂ ಹೌದು. ಪ್ರಸ್ತುತ ಕನ್ನಡಪ್ರಭ ದೈನಿಕದ ಮೈಸೂರು ಆವೃತ್ತಿ ಸಂಪಾದಕರಾಗಿರುವ ಅಂಶಿ ಪ್ರಸನ್ನಕುಮಾರ್ ಅವರೊಂದಿಗಿನ ಕಿರು ಸಂದರ್ಶನ ಇಲ್ಲಿದೆ.
ಸ್ಕಂದ : ನಮಸ್ತೇ, ಪತ್ರಿಕೋದ್ಯಮದಲ್ಲಿನ ನಿಮ್ಮ ಸುದೀರ್ಘ ಪಯಣ ಹೇಗಿದೆ?
ಅಂಶಿ ಪ್ರಸನ್ನಕುಮಾರ್ : ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟು ಮೂವತ್ತು ವರ್ಷಗಳಾಯಿತು, ಪ್ರಾರಂಭದ ದಿನಗಳಲ್ಲಿ ಆಂದೋಲನ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ಕನ್ನಡಪ್ರಭ ಸೇರಿದೆ. ಹಿರಿಯರು ಮತ್ತು ಸಹೋದ್ಯೋಗಿಗಳೆಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.
ಸ್ಕಂದ : ಪತ್ರಿಕೋದ್ಯಮದೆಡೆಗೆ ಸೆಳೆತ ಮೂಡಲು ಕಾರಣವೇನು?
ಅಂಶಿ : ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ ಕ್ಷೇತ್ರದೆಡೆಗೆ ಒಲವಿತ್ತು, ಕಥೆ, ಕವನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಒಂದೆರೆಡು ಕವನಗಳಿಗೆ ಬಹುಮಾನವೂ ಲಭಿಸಿತ್ತು. ಸಾಹಿತ್ಯಾಸಕ್ತಿಯೇ ನನ್ನನ್ನು ಪತ್ರಿಕಾ ರಂಗದೆಡೆಗೆ ಕರೆದು ತಂದಿತು.
ಸ್ಕಂದ : ಪತ್ರಕರ್ತನಾಗಿ ನಿಮ್ಮ ಆರಂಭದ ದಿನಗಳಿಗೂ, ಇಂದಿಗೂ ಏನು ವ್ಯತ್ಯಾಸ ಕಾಣುತ್ತದೆ?
ಅಂಶಿ : ತುಂಬಾ ಬದಲಾವಣೆ ಆಗಿದೆ, ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿದೆ. ಅಂದಿನ ದಿನಗಳಲ್ಲಿ ಇದ್ದ ಗುಣಾತ್ಮಕತೆ, ನೈತಿಕತೆ ಈಗಿನ ಪತ್ರಕರ್ತರಲ್ಲಿ ಕಾಣುತ್ತಿಲ್ಲ. ಸ್ಪರ್ಧೆಯ ಜಂಜಾಟದಲ್ಲಿ ಪತ್ರಿಕೋದ್ಯಮದ ಮೂಲ ಆಶಯ ಮರೆಯಾಗುತ್ತಿದೆ.
ಸ್ಕಂದ : ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮ ಇವೆರಡರಲ್ಲಿ ಯಾವುದು ಉತ್ತಮ?
ಅಂಶಿ : ಪತ್ರಿಕೋದ್ಯಮದ ಅರ್ಥವೇ ಇಂದು ಬದಲಾಗಿದೆ. ಅಂತಹದ್ದರಲ್ಲಿ ದೃಶ್ಯ ಮಾಧ್ಯಮಕ್ಕೆ ಹೋಲಿಸಿದರೆ ಪತ್ರಿಕಾರಂಗ ಜವಾಬ್ದಾರಿಯುತವಾಗಿದ್ದು, ತನ್ನ ಘನತೆ ಉಳಿಸಿಕೊಂಡಿದೆ. ಪತ್ರಿಕೆಯಲ್ಲಿ ಕೆಲಸದ ಜೊತೆಜೊತೆಗೆ ಜ್ಞಾನಾಭಿವೃದ್ಧಿ ಮಾಡಿಕೊಳ್ಳಲೂ ಅವಕಾಶವಿದೆ. ಓದು, ಬರಹವೇ ಪತ್ರಕರ್ತನನ್ನು ಕ್ರಿಯಾಶೀಲರನ್ನಾಗಿಸುವುದು. ಆದರೆ ದೃಶ್ಯ ಮಾಧ್ಯಮ ಸಮಯದೊಟ್ಟಿಗೆ ಮಾಡುವ ಹೋರಾಟ. ಪ್ರತಿ ಕ್ಷಣವೂ ಒತ್ತಡವಿರುತ್ತದೆ, ಟಿಆರ್‌ಪಿ ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮೌಲ್ಯವನ್ನೇ ಬದಿಗಿಡುವ ಪರಿಸ್ಥಿತಿಯನ್ನೂ ಎದುರಿಸಬೇಕಾಗುತ್ತದೆ. ಧಾವಂತದ ಬದುಕಿನಲ್ಲಿ ರಣರಂಗೋತ್ಸಾಹದಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ದೃಶ್ಯ ಮಾಧ್ಯಮಕ್ಕೆ ಹೋಗುವ ಮೊದಲು ಕೆಲ ವರ್ಷಗಳ ಮಟ್ಟಿಗಾದರೂ ಪತ್ರಿಕೆಯಲ್ಲಿ ದುಡಿದು ಅನುಭವ ಪಡೆದುಕೊಳ್ಳುವುದು ಉತ್ತಮ.
ಸ್ಕಂದ : ಪತ್ರಿಕೋದ್ಯಮ ಓದಿದವರು ಯಾವ ಯಾವ ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು?
ಅಂಶಿ : ಪತ್ರಿಕೋದ್ಯಮ ಓದಿದವರಿಗೆ ಅವಕಾಶ ತುಂಬಾ ವಿಫುಲವಾಗಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನು ಹೊರತುಪಡಿಸಿ ರೇಡಿಯೋ, ಸರ್ಕಾರಿ ನೌಕರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಪಡೆಯಬಹುದು. ಉತ್ತಮ ಭಾಷಾ ಜ್ಞಾನ ಮತ್ತು ಬರವಣಿಗೆಯ ಹಿಡಿತ ಉಳ್ಳವರನ್ನು ಪ್ರತಿಷ್ಠಿತ ಕಂಪೆನಿಗಳು ಕೈ ಬೀಸಿ ಕರೆಯುತ್ತವೆ. ಆದ್ದರಿಂದ ಪತ್ರಿಕೋದ್ಯಮವೆಂದರೆ ಕೇವಲ ಪತ್ರಿಕೆ, ಟಿವಿ ಎಂದು ಭಾವಿಸಬೇಕಿಲ್ಲ.
ಸ್ಕಂದ : ಮೈಸೂರಿನ ಎಲ್ಲಾ ಪತ್ರಿಕಾ ಕಚೇರಿಗಳಿಗಿಂತ ಕನ್ನಡಪ್ರಭ ತುಂಬಾ ವಿಭಿನ್ನ. ನೀವು ಹಲವು ವಿದ್ಯಾರ್ಥಿಗಳಿಗೆ ಕೆಲಸ ಕಲಿಯಲು ಅವಕಾಶ ಕಲ್ಪಿಸಿದ್ದೀರಿ, ಯಾವುದೇ ಅಹಂಕಾರವಿಲ್ಲದೇ ಕಚೇರಿಯಲ್ಲಿ ಉತ್ತಮ ವಾತಾವರಣ ಕಟ್ಟಿಕೊಡುವ ಮೂಲಕ ಪತ್ರಿಕೋದ್ಯಮದ ಪರಿಚಯ ಮಾಡಿಕೊಡುವ ನಿಮ್ಮ ಕುರಿತು ಹಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಅಂಶಿ : ಪತ್ರಿಕೋದ್ಯಮ ನಿಂತ ನೀರಲ್ಲ, ಅದು ನಿರಂತರ ಹೊಸತನವನ್ನು ಬಯಸುತ್ತದೆ. ಇಂತಹ ಕ್ಷೇತ್ರಕ್ಕೆ ಬರಲು ಆಸಕ್ತಿ ಹೊಂದಿದವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಉತ್ತಮ ಪತ್ರಕರ್ತರನ್ನು ರೂಪಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕುರಿತು ಇಲ್ಲಸಲ್ಲದ ಕಲ್ಪನೆಗಳನ್ನು ಕಟ್ಟಿಕೊಂಡು, ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಪತ್ರಕರ್ತ ಎಲ್ಲವನ್ನೂ ಮೀರಿದವ, ತನ್ನಿಚ್ಛೆಯಂತೆ ಬದುಕಬಹುದು ಎಂದು ಭಾವಿಸುತ್ತಾರೆ. ಆದರೆ ಪತ್ರಿಕೋದ್ಯಮದ ಮೂಲ ರೂಪವೇ ಬೇರೆ, ಇದರ ನೈಜತೆಯ ಕುರಿತು ಅವರಲ್ಲಿ ಅರಿವು ಮೂಡಿಸಿ, ವಿದ್ಯಾರ್ಥಿಗಳಾಗಿದ್ದಾಗಲೇ ಉತ್ತಮ ಮೌಲ್ಯಗಳನ್ನು ಬಿತ್ತಿದರೆ ಮಾತ್ರ ಮುಂದೆ ಅವರಿಂದ ಉತ್ತಮ ಪತ್ರಕರ್ತನನ್ನು ನಿರೀಕ್ಷಿಸಲು ಸಾಧ್ಯ. ಅದರ ಹೊರತಾಗಿ ಅಹಂಕಾರದಿಂದ ನಡೆದುಕೊಂಡರೆ ಅವರ ಆಸಕ್ತಿಯನ್ನು ನಾವೇ ಚಿವುಟಿದಂತಾಗುತ್ತದೆ.
ಸ್ಕಂದ : ಪತ್ರಿಕೋದ್ಯಮಕ್ಕೆ ಬರಲಿಚ್ಛಿಸುವ ಯುವ ಪತ್ರಕರ್ತರಿಗೆ ನಿಮ್ಮ ಸಂದೇಶವೇನು?
ಅಂಶಿ : ಪತ್ರಕರ್ತನಾಗಲು ಬಯಸುವವನಿಗೆ ಅತಿ ಮುಖ್ಯವಾಗಿ ನೈತಿಕತೆ ಇರಬೇಕು. ನೈತಿಕತೆ ಇಲ್ಲದವರು ಪತ್ರಕರ್ತರಾಗಲು ಯೋಗ್ಯರಲ್ಲ. ಹಣ ಸಂಪಾದನೆ, ಪ್ರಚಾರ ಪ್ರಿಯತೆಯನ್ನೇ ಗುರಿಯಾಗಿಸಿಕೊಂಡು ಈ ಕ್ಷೇತ್ರಕ್ಕೆ ಬಂದರೆ ಹೆಚ್ಚು ದಿನ ಇಲ್ಲಿ ಉಳಿಯುವುದಿಲ್ಲ. ಸಮಾಜಮುಖಿ ಕೆಲಸ ಮಾಡುವ ಮನೋಭಾವ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಬಂದರೆ ಮಾತ್ರ ಯಶಸ್ಸು ಸಾಧ್ಯ.
-----------------
- ಸ್ಕಂದ ಆಗುಂಬೆ