Monday, 14 November 2016

ಅನರ್ಥಗಳ ಮಾಲೀಕ

ಪೌರ್ಣಿಮೆಯ ಬರುವಿಕೆಗಾಗಿ
ಅಮವಾಸ್ಯೆಯ ಇಳಿಸಂಜೆಯಿಂದಲೇ
ಆಗಸದಡಿಯಲ್ಲಿ ರಚ್ಚೆಹಿಡಿದು ಕುಳಿತು
ಹದಿನಾಲ್ಕನೇ ದಿನಕ್ಕೆ ಸೋಲೊಪ್ಪಿಕೊಳ್ಳುವ
ಹುಚ್ಚುಹುಡುಗ ನಾನು.

ಭ್ರಮೆಯೊಳಗಿನ ವಾಸ್ತವತೆಯಲ್ಲಿ
ಬದುಕು ಕಟ್ಟಿಕೊಳ್ಳಲು
ಕನಸು ಕಾಣುವುದರಲ್ಲೇ
ಸುಖವನ್ನರಸುವ ಚಾಳಿಗೆ ಬಲಿಯಾದ
ಬಡಜೀವಿ ನಾನು.

ಅರ್ಥವಿಲ್ಲದ ಸಾಲುಗಳನ್ನು
ಒಂದಕ್ಕೊಂದು ಕಟ್ಟುತ್ತಾ
ಸಾಕೆನಿಸಿದಾಗ ನಿಟ್ಟುಸಿರಿಟ್ಟು
ಅದರೊಳಗೊಂದು ಕವಿತೆ ಹುಡುಕುವ
ಸಾಹಸಿಗ ನಾನು.

ಬೆಳಕಿನ ಕೋಣೆಯೊಳಗೆ
ಕಪ್ಪು ದೀಪವನ್ನಿಟ್ಟು
ಬೆಳಕಿನ ಅಹಂಕಾರವ ಕರಗಿಸಲು
ವ್ಯರ್ಥ ಪ್ರಯತ್ನದೊಳು ಮುಳುಗುವ
ಹಠಮಾರಿ ನಾನು.

ನನ್ನದೊಂದು ಅರ್ಥವಿಲ್ಲದ ಬದುಕು
ಬೊಗಸೆ ಪ್ರೀತಿಗೆ ಕರಗುತ್ತಾ
ನನ್ನ ಅಸ್ತಿತ್ವವನ್ನೇ ಮರೆತು
ಇನ್ನೊಬ್ಬರಿಗಾಗಿ ನಗುವ
ಅನರ್ಥಗಳ ಮಾಲೀಕ ನಾನು.

ನನಗಾಗಿ ಕಾಯಬೇಡ
ಬದುಕು ಬಾಡುವ ಮುನ್ನ
ಹೊಸ ಕನಸುಗಳನ್ನು ಹೆತ್ತು
ನನ್ನೆದೆಗೊಮ್ಮೆ ಒದ್ದು ಹೊರಟು ಬಿಡು
ಅವಮಾನಕ್ಕೆ ಅರ್ಹನಾದವನು ನಾನು.

-ಅನಾಸ್ಕ

Sunday, 30 October 2016

ಮೊದಲ ಹಂತದ ಪ್ರೀತಿ...

ಮೊದಲ ಹಂತದ ಪ್ರೀತಿ..
ಲವಲವಿಕೆ, ಉತ್ಸಾಹ..
ಇಬ್ಬರೂ ಎಕ್ಸೈಟು..
ಲವ್ ಅಟ್ ಫಸ್ಟ್ ಸೈಟು.

ಗಂಟೆಗಟ್ಟಲೆ ಮಾತು..
ಹೈಕು, ವಾಟ್ಸಾಪು..
ಅದರಲ್ಲೇ ಲವ್ವಿಂಗು..
ಅದರೊಳಗೇ ಲಿವ್ವಿಂಗು.

ತಲೆಹರಟೆ ಹುಡುಗ..
ವಿಚಿತ್ರ ಆಸೆಗಳ ಓನರ್ರು..
ಡೀಸೆಂಟು ಹುಡುಗಿ..
ಹದಿನೆಂಟಾಗದ ಮೈನರ್ರು.

ಬೈಬೇಕು ಅವಳು..
ಹೊಡಿಬೇಕು, ಬಡಿಬೇಕು..
ಕ್ಷಣಕ್ಷಣಕೂ ಸಿಡುಕಿದರೆ..
ಇನ್ನೂ ಒಳ್ಳೆಯದು.

ಕೇಳಬಾರದು ಸಾರಿ..
ಬಿಡಬೇಕು ಮಾತುಕತೆ..
ಹುಸಿ ಮುನಿಸು ಮುಗಿದಾಗ..
ಗುನುಗಬೇಕು ಲವ್ ಯೂ.

ಪಾಪ!! ಹೊಸದು ಪ್ರೀತಿ..
ಆಗಿಲ್ಲ ಅನುಭವ..
ಮಾಡಿದ್ದೆಲ್ಲಾ ಚೆಂದ..
ಏನೇನೋ ಹುಚ್ಚು ಆಸೆ.

ಹುಡುಗಿ ಪಾಪದ ಜೀವ..
ಬರೀ ಮಾತಿನ ಮಲ್ಲಿ..
ಕಡಿಮೆ ಕಾಮನ್ ಸೆನ್ಸು..
ಸ್ಟುಡೆಂಟ್ ಆಫ್ ಸೈನ್ಸು.

ಈ ಕ್ಷಣಕೆ ಲವ್ವು..
ಇನ್ನೊಮ್ಮೆಗೆ ಫ್ರೆಂಡ್ಶಿಪ್ಪು..
ಮೂಡಿಲ್ಲ ಕ್ಲಾರಿಟಿ..
ಕನ್ಫ್ಯೂಶನ್ ಪಾರ್ಟಿ.

ಕುಲವೊಂದೇ, ಕ್ಯಾಸ್ಟೊಂದೇ..
ಸಬ್ ಡಿವಿಷನ್ ಬೇರೆ..
ಅದೇ ದೊಡ್ಡ ಪ್ರಾಬ್ಲಮ್ಮು..
ಮುಂದೆ ಮದುವೆಗೆ.

ಒಪ್ಪುವುದು ಮ್ಯಾಟ್ರಲ್ಲ..
ಉಳಿಸಿಕೊಳ್ಳುವುದೇ ಚಾಲೆಂಜು..
ಸಕ್ಸಸ್ ಆಗದ ಪ್ರೀತಿಯ..
ಶುರು ಮಾಡುವುದೇಕೆ?

ಹಚ್ಚಿದಳು ಹುಡುಗಿ ಆನೆಪಟಾಕಿ..
ದಂಗಾದ ಹುಡುಗ ಹೊಸವರಸೆ ನೋಡಿ..
ಹಣೆಬರಹ ಸರಿಯಿಲ್ಲ, ಕ್ಯಾಲೆಂಡರ್ ನೋಡಿದ..
ಎದ್ದು ಕಾಣುತ್ತಿತ್ತು ಏಪ್ರಿಲ್ ಒಂದು.

-ಅನಾಸ್ಕ

Friday, 28 October 2016

ಅಗ್ನಿ ಮೂಲೆಯ ಕೋಣೆ..


ಅಗ್ನಿ ಮೂಲೆಯ ಕೋಣೆ..
ಬಾಗಿಲಿಗೆ ಹಳೆಬೀಗ..
ಕ್ವಿಂಟಲ್ಲು ಧೂಳು, ಜೊತೆಗಷ್ಟು ತುಕ್ಕು..
ಒಡೆದು ನುಗ್ಗಿದ ಠಕ್ಕ..
ಹುಡುಕುತ್ತ ವರಹಗಳ.

ಒಳಗೆ ಮರದ ಟ್ರಂಕು..
ಅದರೊಳಗೆ ಬಿಳಿಪೇಜು..
ಅರ್ಥವಾಗದ ಬರಹ..
ನಡುನಡುವೆ ಶಾಹಿ ಕಲೆ..
ಕೊನೆಗೊಂದು ಪ್ರೇಮಪತಾಕೆ.

ಓದಿದ್ದೊಂದೇ ವರ್ಷ ಬಾಲವಾಡಿಯಲ್ಲಿ..
ಆಮೇಲೆ ಸುತ್ತಿದ್ದು ಮನೆಹಿಂದಿನ ಬ್ಯಾಣ..
ಆಗಿದ್ದು ಮಾತ್ರ ಚೋರವಿದ್ಯಾ ಪ್ರವೀಣ..
ತಲೆಕೆಡಿಸಿಕೊಂಡ ಬಿಳಿ ಪೇಜನು ನೋಡಿ..
ಇರಬಹುದೇ ಇದು ಆಸ್ತಿ ಪತ್ರ ಎಂದು.

ನೆನಪಾಯಿತು ಹತ್ತರ ನೋಟು..
ಒಂದುದ್ದ ಗೆರೆ ಪಕ್ಕಕ್ಕೆ ಕೋಳಿಮೊಟ್ಟೆ..
ತಡಕಾಡಿದ ಕಳ್ಳ ಗೆರೆ-ಮೊಟ್ಟೆಗಳಿಗಾಗಿ..
ಮೊಟ್ಟೆಗಳ ರಾಶಿ ಎದುರಾಯಿತು ಕಣ್ಗೆ..
ಕಂಡ ಗೆರೆಗಳು ಮಾತ್ರ ಸೊನ್ನೆ ಸೊನ್ನೆ..

ಇರಬೇಕು ಪತ್ರದಲಿ ಒಂದಾದರು ನಂಬರು..
ಇರದಿರೇ ಅದೆಂಥಾ ಆಸ್ತಿಪತ್ರ..?
ತಲೆ ಓಡಿಸಿದ ಚೋರ ಪ್ರವೀಣ..
ಮತ್ತೆ ಹಾಳೆಯ ತೆಗೆದು ನೋಡೇಬಿಟ್ಟ..
ವ್ಹಾ.. ಕೊನೆಯಲ್ಲಿ ಕಂಡಿತು ಗೆರೆ ಮತ್ತು ಮೊಟ್ಟೆ.

ಕುಣಿದು ಕುಪ್ಪಳಿಸಿದ, ಚೀಟಿಯ ಮಡಚಿದ..
ಹರಕು ಜೇಬಿಗೆ ತುರುಕಿ ಹುಚ್ಚೆದ್ದು ಓಡಿದ..
ದಾರಿಯಲಿ ಎದುರಾದ ಪ್ರಾಣಸ್ನೇಹಿತ..
ಒಂದನೇ ಕ್ಲಾಸಿಗೆ ಇಸ್ಕೂಲು ಬಿಟ್ಟವ..
ಕಳ್ಳನ ಕಾಲಿಗೆ ಬಿತ್ತು ಗಕ್ಕನೆ ಬ್ರೇಕು..

ಪಟಪಟನೆ ಒದರಿದ, ಕಿವಿಗಷ್ಟು ಮೊಳೆಹೊಡೆದ..
ಅಪ್ಪಿ, ಎಳೆದಾಡಿ ಕೈಹಿಡಿದು ಕುಣಿದ..
ಕೊನೆಗೂ ಚೀಟಿಯ ತೆಗೆದು ಸ್ನೇಹಿತನ ಕೈಗಿತ್ತ..
ಕೋಟಿಯ ಕನಸಲ್ಲೇ ಚೀಟಿ ಬಿಚ್ಚಿದ ಪುಣ್ಯಾತ್ಮ..
ಓದಿದ್ದೇ ತಡ ನೆತ್ತಿಗೇರಿತು ಪಿತ್ತ.

ಕೆನ್ನೆಗೆರಡು ಬಿಟ್ಟ, ಸೆನ್ಸಾರಿಲ್ಲದೆ ಬೈದ..
ತುಪುಕ್ ಎಂದು ಉಗಿದು, ತಿರುಗಿ ನೋಡದೆ ನಡೆದ..
ಟೆನ್ಸಾದ ಕಳ್ಳ, ಮಿಕಿಮಿಕಿ ನೋಡುತ್ತಾ ಕೆನ್ನೆ ಮುಟ್ಟಿಕೊಂಡ.
ಹಿಂತಿರುಗಿ ನೋಡಿದ ಒಂದನೇ ಕ್ಲಾಸಿನ ಹೈದ..
ಕಿಸಕ್ಕನೇ ನಕ್ಕ ಇವನ ಅವಸ್ಥೆಯ ಕಂಡು.

ಆಸ್ತಿಪತ್ರದ ಬದಲು ಪ್ರೇಮಪತ್ರವಾಗಿತ್ತು ಚೀಟಿ..
ಆದರೂ.. ಕಳ್ಳ ಹುಡುಕಿದ ಗೆರೆ-ಮೊಟ್ಟೆ ಅಲ್ಲಿತ್ತು..
ದೂರದೂರಿನ ಇಂಗ್ಲೀಷು ಭಾಷೆಯಲಿ ಬರೆದ ಕೊನೆಸಾಲಲ್ಲಿತ್ತು..
ಒಂದನೇ ಕ್ಲಾಸಿನ ಹೈದನಿಗೆ ಅರ್ಥವಾಗುವಂತೆ ಸ್ಫುಟವಾಗಿ ಬರೆಯಾಲಾಗಿತ್ತು..
I 'lo've you ಎಂದು.. 😍 😍

-ಅನಾಸ್ಕ

Thursday, 27 October 2016

ಹೆಚ್ಚೇನು ಆಸೆಯಿಲ್ಲ...


ಹೆಚ್ಚೇನು ಆಸೆಯಿಲ್ಲ...
ತಲೆಗೂದಲು ಹಣ್ಣಾಗಿ..
ನಡು ಪೂರ್ಣ ಬೆಂಡಾಗಿ..
ಬೊಚ್ಚು ಬಾಯಿಂದ ನಾ ನಗುವಾಗ..
ನೀ ನಗಬೇಕು,
ಯೌವ್ವನದಲ್ಲಿ ನಿನ್ನ ಕಾಡಿದ ಕ್ಷಣಗಳನ್ನೆಲ್ಲ ಮೆಲುಕಬೇಕು.
ಮುಡಿಗಿಟ್ಟ ಮಲ್ಲಿಗೆ..
ಕೆನ್ನೆ ಇಳಿಜಾರಿನ ಮುತ್ತು..
ಹುಸಿಕೋಪ ಬಿರುನೋಟ..
ಎಲ್ಲ ನೆನಪಿಸಬೇಕು..
ಸಾಯುವ ಮುನ್ನ ಹುಡುಗನಾಗಬೇಕು,
ನಿನ್ನ ನೋಟಕೆ ಪೂರ್ತಿ ಕರಗಬೇಕು.
ಮತ್ತೆ ಹಂಬಲಿಸಬೇಕು..
ಪ್ರೀತಿಸಲು, ರಮಿಸಲು, ನಿನ್ನೊಡನೆ ಬದುಕಲು..
ನನ್ನ ಹಾತೊರೆಕೆಗೆ ನೀ ಕಡಿವಾಣ ಹಾಕಬೇಕು..
ಕಳಿಸಿಕೊಡಬೇಕು..
ದೇಹ ತಣಿಯುವ ಮುನ್ನ ಎದೆ ಮೇಲೆ ಕೈಯಿಟ್ಟು
ಮನಸಾರೆ ಮುತ್ತಿಟ್ಟು ನನ್ನ ಕಳಿಸಿಕೊಡಬೇಕು.

ಹೆಚ್ಚೇನು ಆಸೆಯಿಲ್ಲ...
ನನ್ನ ಕೊನೆಯುಸಿರು ನಿನ್ನ ಸಾನಿಧ್ಯವ ಬಯಸಿದೆ...

-ಅನಾಸ್ಕ

Friday, 3 June 2016

ಕಟ್ಟುಮಸ್ತಾದ ಮೈಕಟ್ಟುಳ್ಳ ಸುಂದರ ಚಿತ್ರ

                       



ಜೀವನದ ಜಂಜಾಟದಲ್ಲಿ ಭಾವನೆ, ಸಂಬಂಧಗಳಿಗಿಂತ ಮುಖ್ಯವಾಗುವ ಕೆಲಸ, ಅಷ್ಟೋ ಇಷ್ಟೋ ದುಡ್ಡು ಕೊಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತೆಂದು ಕೈ ತೊಳೆದುಕೊಳ್ಳುವ ಮಕ್ಕಳು, ಮಾನವೀಯತೆಯೇ ಕಾಣೆಯಾಗಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಕಾಣುವ ನಿಸ್ವಾರ್ಥ ಕೈಗಳು ಇವೆಲ್ಲವೂ ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತವೆ, ಹೀಗೆ ಸಂಬಂಧಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಕಥೆಯ ರೂಪದಲ್ಲಿ ತೆರೆದಿಡುತ್ತಾ ನೋಡುಗನಿಗೆ ಅದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರದ ನಿರ್ದೇಶಕ ಹೇಮಂತ್ ಯಶಸ್ವಿಯಾಗಿದ್ದಾರೆ.

ಮರೆಗುಳಿ (Alzheimers) ಖಾಯಿಲೆಗೆ ತುತ್ತಾಗಿರುವ ಅಪ್ಪ ವೆಂಕೋಬ ರಾವ್, ಅಪ್ಪನಿಗಿಂತ ಕೆಲಸವೇ ಮುಖ್ಯವೆಂದು ಆ ಖಾಯಿಲೆ ಬಂದಿರುವವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಒಂದು ಸಂಸ್ಥೆಗೆ ಅಪ್ಪನನ್ನು ಸೇರಿಸಿ ಹೊರಟು ಹೋಗುವ ಮಗ ಶಿವ, ಆತನಿಗೆ ಅಪ್ಪನ ಮೇಲೆ ಪ್ರೀತಿ - ಕಾಳಜಿ ಇಲ್ಲದಿದ್ದರೂ ಆಕಸ್ಮಿಕವಾಗಿ ಅಪ್ಪ ಕಳೆದುಹೋದಾಗ ಅವರನ್ನು ಹುಡುಕಲು ಶುರುಮಾಡುತ್ತಾನೆ, ಹುಡುಕಾಟದಲ್ಲಿ ವೆಂಕೋಬರನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯ ವೈದ್ಯೆ ಸಹನಾ ಅವನ ಜೊತೆಗೆ ಸೇರಿಕೊಳ್ಳುತ್ತಾರೆ, ಹುಡುಕಾಟದ ಸಂದರ್ಭದಲ್ಲಿ ಬಿಚ್ಚಿಕೊಳ್ಳುವ ಹೊಸ ಹೊಸ ಕಥೆಗಳು ಅವನಿಗೇ ತಿಳಿಯದಂತೆ ಅಪ್ಪನ ಮೇಲೆ ಪ್ರೀತಿಯನ್ನು ಮೂಡಿಸುತ್ತದೆ. ಇತ್ತ ದಾರಿ ತಪ್ಪಿಸಿಕೊಂಡು ಅಲೆದಾಡುವ ತಂದೆ ಯಾವುದೋ ಕೊಲೆಗಾರನೊಬ್ಬನ ಗಾಡಿ ಹತ್ತಿ ಕೂರುತ್ತಾನೆ, ಆ ಸಂದರ್ಭದಲ್ಲಿ ನಡೆಯುವ ರಸ್ತೆ ಅಪಘಾತ, ಅಲ್ಲಿಗೆ ಬರುವ ಮೂರನೆ ವ್ಯಕ್ತಿ, ನಂತರ ಅವನ ಮನೆ ಸೇರುವ ಕೊಲೆಗಾರರು ಮತ್ತು ವೆಂಕೋಬ ರಾವ್ ಹೀಗೆ ಕಥೆ ಎಳೆ ಎಳೆಯಾಗಿ ತೆರೆದುಕೊಳುತ್ತಾ ಹೋಗುತ್ತದೆ. ಮರೆಗುಳಿ ವ್ಯಕ್ತಿಯ ಪಾತ್ರದಲ್ಲಿ ಅನಂತ್ ನಾಗ್ ಮಿಂಚಿದ್ದಾರೆ, ಸತ್ತು ಹೋದ ಹೆಂಡತಿಯ ಬಗ್ಗೆ ಪದೇ ಪದೇ ಕೇಳುತ್ತಾ, ಮುಗ್ಧ ಮಗುವಿನಂತೆ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾ ಪ್ರೇಕ್ಷಕರನ್ನು ಕಾಡುತ್ತಾರೆ. ಮೊದಮೊದಲು ಬೇಜವಾಬ್ದಾರಿಯುತ ಮಗನಾಗಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿ ನಂತರ ತಂದೆಗಾಗಿ ಹಪಹಪಿಸುವ ಮಗನಾಗಿ ನೋಡುಗರ ಮನ ಗೆಲ್ಲುತ್ತಾರೆ. ಭಾವನೆಗಳಿಗೆ ಬೆಲೆ ಕೊಡುವ ಹೆಣ್ಣಾಗಿ, ಜವಾಬ್ದಾರಿಯುತ ವೈದ್ಯೆಯಾಗಿ ಕಾಣಿಸಿಕೊಂಡಿರುವ ಶೃತಿ ಹರಿಹರನ್ ಇಷ್ಟವಾಗುತ್ತಾರೆ. ಹೆತ್ತವರ ಮಹತ್ವವನ್ನು ತಮ್ಮದೇ ಧಾಟಿಯಲ್ಲಿ ಹೇಳುವ ದತ್ತಣ್ಣ, ದಾರಿ ತಪ್ಪಿಸಿಕೊಂಡು ಕೊಲೆಗಾರರ ಜೊತೆ ಬಂದು ಮನೆ ಸೇರುವ ವೆಂಕೋಬರನ್ನು ತಮ್ಮದೇ ಮನೆಯ ಸದಸ್ಯನಂತೆ ನೋಡಿಕೊಳ್ಳುವ ಅಚ್ಯುತ್ ಪ್ರೇಕ್ಷಕನ ಮನದಲ್ಲಿ ಅಚ್ಚೊತ್ತುತ್ತಾರೆ. ಮನುಷ್ಯ ಎಷ್ಟೇ ಕ್ರೂರಿಯಾದರೂ ಅವನೊಳಗೊಬ್ಬ ಸಾತ್ವಿಕ ವ್ಯಕ್ತಿ ಇದ್ದೇ ಇರುತ್ತಾನೆ, ಅನಿವಾರ್ಯತೆ ಅವನನ್ನು ಕೆಟ್ಟವನನ್ನಾಗಿಸುತ್ತದೆ ಎಂದು ತೋರಿಸುವ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಸಿಷ್ಟ ಸಿಂಹ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸಂಭಾಷಣೆ ಕೇಳಲು ಹಿತವಾಗಿದೆ, ಹಿನ್ನೆಲೆ ಸಂಗೀತವೂ ಅತ್ಯದ್ಭುತವಾಗಿ ಮೂಡಿ ಬಂದಿದೆ, ದ್ವಿತೀಯಾರ್ಧದಲ್ಲಿ ಕೆಲ ನಿಮಿಷಗಳ ಕಾಲ ಕಥೆ ತೆವಳಿಕೊಂಡು ಹೋಗುವಂತೆ ಭಾಸವಾಗುತ್ತದೆ ಹಾಗೂ ಛಾಯಾಗ್ರಹಣ ಇನ್ನಷ್ಟು ಸುಂದರವಾಗಿ ಮೂಡಿ ಬಂದಿದ್ದರೆ ಸೊಗಸಾಗಿತ್ತು ಎನಿಸುತ್ತದೆ, ಇವೆರಡು ಅಂಶಗಳನ್ನು ಬದಿಗಿಟ್ಟರೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅತ್ಯದ್ಭುತ ಚಲನಚಿತ್ರ ಎಂಬುದರಲ್ಲಿ ಸಂದೇಹವಿಲ್ಲ, ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಟ್ಟುಮಸ್ತಾದ ಚಿತ್ರವೊಂದು ಎಂಟ್ರಿ ಕೊಟ್ಟಿದೆ.
                          

Friday, 8 April 2016

ಹಾರುವುದು ಅನಿವಾರ್ಯ ಕರ್ಮ ನಮಗೆ..!!


ಹಾಯ್ ಸ್ವೀಟು…
ಇಷ್ಟು ದಿನದ ಪರಿಚಯದಲ್ಲಿ ಎಲ್ಲೋ ಒಂದು ಸಾರಿ ಮಾತ್ರ ನಾ ನಿನ್ನನ್ನ ಹೀಗೆ ಕರ್ದಿರೋದು… ಮತ್ಯಾವತ್ತು ಹೀಗೆ ಕರ್ದಿರ್ಲಿಲ್ಲ, ಕರೀಬೇಕು ಅಂತ ಅನ್ನಿಸಿಯೂ ಇರಲಿಲ್ಲ, ಮುಂದೆ ಕರೆಯೋದೂ ಇಲ್ಲ, ಕಾರಣ ಗೊತ್ತಿಲ್ಲ. ಕೊನೇ ಸಾರಿ ಕೂಗ್ತಿದ್ದೀನಿ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕಿವಿಗೊಟ್ಟು ಕೇಳಿಬಿಡು, ಸ್ವೀಟೂ….
ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ, ನಿನ್ನಲ್ಲಿರೋ ಪ್ರೀತಿಗೆ ಪ್ರತಿಯಾಗಿ ನೀಡೋಕೆ ಪ್ರೀತಿಯೂ ಇಲ್ಲ. ನಾ ನಿನ್ನ ಜೀವನದಲ್ಲಿ ಬಂದ ಒಂದು ಪಾತ್ರ, ನೀ ಅಂದುಕೊಂಡಂತೆ ನಿನ್ನ ಜೀವನಕ್ಕೆ ಸೂತ್ರ ಅಲ್ಲ, ನಿನ್ನೆಡೆಗೆ ನನಗೆ ಸೆಳೆತವಿರುವುದು ನಿಜ ಆದರೆ ಅದು ಎಂದಿಗೂ ಪ್ರೀತಿಯಾಗಿ ಪರಿವರ್ತನೆ ಹೊಂದಲಾರದು, ಆದ್ದರಿಂದ ನನ್ನಿಂದ ಏನನ್ನೂ ಅಪೇಕ್ಷಿಸಬೇಡ.
ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀನಿ ಅಂತ ಅರ್ಥ ಆಗ್ತಾ ಇಲ್ವಾ?? ಪರ್ವಾಗಿಲ್ಲ ಬಿಡು ನಿಧಾನಕ್ಕೆ ಅರ್ಥ ಆಗುತ್ತೆ, ಹೆಣ್ಣಿನ ಭಾವನೆಗಳೇ ಹಾಗೆ ಕೆಲವೊಮ್ಮೆ ಅವಳಿಗೇ ಅರ್ಥವಾಗುವುದಿಲ್ಲ.. ಅವಳ ತೊಳಲಾಟಗಳಿಗೆ ಕಾರಣವನ್ನೂ ಅವಳೇ ಹುಡುಕಿಕೊಳ್ಳಬೇಕು, ಪರಿಹಾರವನ್ನೂ ಅವಳೇ ಕಂಡುಕೊಳ್ಳಬೇಕು. ಇದನ್ನ ಅವಳಿಗೆ ಯಾರೂ ಕಲಿಸಬೇಕಾಗಿಲ್ಲ, ತಾನಾಗೇ ಕಲಿತು ಬಿಡ್ತಾಳೆ.. ಹೆಣ್ಣಿನ ಜೀವನ ನೀವಂದುಕೊಂಡಷ್ಟು ಸುಲಭವಲ್ಲ.. ನಿಮ್ಮ ಕಣ್ಣಿಗೆ ನಾವು ಆಕಾಶದಲ್ಲಿ ಸ್ವತಂತ್ರವಾಗಿ ಹಾರೋ ಗಿಣಿಗಳ ಥರ ಕಾಣ್ತೀವಿ ಆದ್ರೆ ನಾವು ಕೇವಲ ಗಿಣಿಗಳು ಅಷ್ಟೇ, ನೀವಂದುಕೊಂಡಂತೆ ಸ್ವತಂತ್ರ ಗಿಣಿಗಳಲ್ಲ, ಹಾರುವುದು ಅನಿವಾರ್ಯ ಆದ್ದರಿಂದ ಹಾರಾಡ್ತೀವಿ, ಎಂದೋ ಒಂದು ದಿನ ಪಂಜರದೊಳಗೆ ಸೆರೆಯಾಗಲೇಬೇಕು ಅನ್ನೋದು ಗೊತ್ತಿದ್ದರೂ ಅದೆಲ್ಲವನ್ನೂ ಮರೆತು ಹಾರ್ತೀವಿ.. ಗುರುಗುಟ್ಟಿಕೊಂಡು ನೋಡುವ ಗಿಡುಗಗಳಿಂದ ತಪ್ಪಿಸಿಕೊಳ್ಳೋಕೆ ಹಾರ್ತೀವಿ, ಕೆಲ ನಾಟಕಗಳನ್ನ ಮಾಡಿ ಮೋಸಗಾರ್ತಿ ಅನ್ನೋ ಪಟ್ಟವನ್ನೂ ಕಟ್ಟಿಕೊಳ್ತೀವಿ.. ಆದ್ರೂ ಅದ್ಯಾವುದಕ್ಕೂ ಲೆಕ್ಕಿಸದೇ ಮತ್ತೆ ರೆಕ್ಕೆ ಬಿಚ್ಚಿ ಹಾರ್ತೀವಿ ಯಾಕಂದ್ರೆ ಹಾರುವುದು ಅನಿವಾರ್ಯ ಕರ್ಮ ನಮಗೆ.
ನೀವೇನಿದ್ರೂ ಹೆಣ್ಣನ್ನು ವರ್ಣಿಸೋಕೆ ಮಾತ್ರ ಲಾಯಕ್ಕು, ಅರ್ಥ ಮಾಡಿಕೊಳ್ಳೋಕಲ್ಲ. ನಾವು ನಕ್ಕರೂ ಅದಕ್ಕೊಂದು ಅರ್ಥ ಕಲ್ಪಿಸಿಕೊಳ್ಳೋ ನೀವು, ನಿಮ್ ಜೊತೆ ಕ್ಲೋಸಾಗಿದ್ರೆ ಸಾಕು ಅದನ್ನೇ ಲವ್ವು ಅಂತ ತಿಳ್ಕೊತೀರಿ, ನೀವೇ ಏನೇನನ್ನೋ ಕಲ್ಪಿಸಿಕೊಂಡು ಬಿಡ್ತೀರಿ, ನಮ್ಮ ಪ್ರತಿ ನಡೆಗೂ ಒಂದೊಂದು ಅರ್ಥವನ್ನು ಸೃಷ್ಟಿ ಮಾಡಿಕೊಳ್ತೀರಿ, ಇಷ್ಟೆಲ್ಲಾ ಆದ್ರೂ ನಮ್ಮ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗೋದೇ ಇಲ್ಲ. ಕೊನೆಗೊಂದು ದಿನ ನಿಮ್ಮ ಕಲ್ಪನೆಗಳೆಲ್ಲ ಸುಳ್ಳು ಅಂತ ಗೊತ್ತಾದಾಗ ನಮ್ಮನ್ನ ಮನಸಾರೆ ಶಪಿಸಿ ಬಿಡ್ತೀರಿ.. ಅದೆಷ್ಟು ಶಾಪ ತಟ್ಟಿರುತ್ತೋ ನಮ್ ಜೀವಕ್ಕೆ ದೇವ್ರಿಗೇ ಗೊತ್ತು.
ಹ್ಞಾಂ.. ಇದನ್ನೆಲ್ಲಾ ಯಾಕೆ ಹೇಳ್ದೇ ಅಂತ ಈಗ್ಲಾದ್ರೂ ಅರ್ಥವಾಯ್ತಾ?? ಆಗಿಲ್ಲ ಅಂದ್ರೆ ಹೋಗಿ ತುಂಬೆ ಗಿಡಕ್ಕೆ ನೇಣು ಹಾಕ್ಕೋ.. ಇನ್ನೂ ಬಿಡಿಸಿ ಹೇಳೋಕೆ ನನ್ನಿಂದ ಸಾಧ್ಯವಿಲ್ಲ. ಹೆಚ್ಚಂದ್ರೆ ಇನ್ನೊಂದ್ ಮಾತ್ ಹೇಳ್ತೀನಿ - ನಾ ನಿನ್ನನ್ನ ಪ್ರೀತ್ಸೋದು ಅಮಾವಾಸ್ಯೆ ದಿನ ಚಂದ್ರ ಕಂಡಷ್ಟೇ ಸತ್ಯ. ಹಾಗಂತ ಜಾಸ್ತಿ ಫೀಲ್ ಮಾಡ್ಕೋಬೇಡ. ನಾ ನಿನ್ ಪ್ರೀತಿಯನ್ನ ಒಪ್ಕೊಂಡಿಲ್ಲ ಅಂದ್ರೆ ಏನಂತೆ?? ನಿಂಗೆ ನನಗಿಂತ ಒಳ್ಳೇ ಹುಡುಗಿ ಸಿಗ್ತಾಳೆ ಬಿಡೋ. ಮದ್ವೆಗೆ ನನ್ನ ಕರೀದೇ ಇದ್ರೂ ಪರವಾಗಿಲ್ಲ ಬಟ್ ನಿಂಗೆ ಐ ಮೀನ್ ನಿನ್ ಹೆಂಡ್ತಿಗೆ ಹೆಣ್ಣು ಮಗು ಹುಟ್ಟಿದ್ರೆ ಅಪ್ಪಿತಪ್ಪಿನೂ ನನ್ ಹೆಸ್ರು ಇಡ್ಬೇಡ, ತುಂಬಾ ಹಳೇ ಹೆಸ್ರು ಆಗೋಗುತ್ತೆ. ಅಂದ್ಹಾಗೆ ಅವತ್ತು ನಿಂಗೆ ಮೆಸೇಜ್ ಮಾಡಿ ಲವ್ವೆಲ್ಲ ನಂಗೆ ಸರಿ ಬರಲ್ಲ, ನಮ್ಮ ಮನೇಲಿ ಒಪ್ಪೋದಿಲ್ಲ ಅಂತ ಹೇಳಿದ್ನಲ್ಲಾ ಅದು ಕೇವಲ ನೆಪ ಮಾತ್ರ, ನೈಜ ಕಾರಣಗಳು ಬೇರೇನೇ ಇದೆ ಆದ್ರೆ ಅದೇನು ಅನ್ನೋದು ನಂಗೆ ಗೊತ್ತಿಲ್ಲ ಅದನ್ನ ಕೇಳಲೂ ಬೇಡ ಗೊತ್ತಾದರೂ ನಾ ಹೇಳೋದಿಲ್ಲ ಯಾಕಂದ್ರೆ ನಾನೊಬ್ಬಳು ಹೆಣ್ಣು.

  ಇಂತಿ ನಿನ್ನ ಮಾಜಿ ಕನಸು
   ಕೆ.ಎನ್.ಸ್ಕಂದ ಆಗುಂಬೆ.




 ಈ ಲೇಖನವು ದಿ ನ್ಯೂ ಇಂಡಿಯನ್ ಟೈಮ್ಸ್ www.thenewindiantimes.com ನಲ್ಲಿ ಪ್ರಕಟವಾಗಿದೆ.

http://thenewindiantimes.com/index.php/2016/04/07/love-letter-in-kannada/

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...