ಕಾಲ ನಿಂತ ನೀರಲ್ಲ. ಪ್ರತಿಯೊಂದು ಕ್ಷೇತ್ರವೂ ಸದಾ ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಮುಂದೆ ಸಾಗುತ್ತದೆ. ಇದು ಸಹಜ ಮತ್ತು ಅನಿವಾರ್ಯ. ಪತ್ರಿಕೋದ್ಯಮ / ಪತ್ರಿಕಾ ರಂಗ ಕೂಡ ಇದಕ್ಕೆ ಹೊರತಲ್ಲ. ದಶಕಗಳ ಹಿಂದಿನ ಪತ್ರಿಕೋದ್ಯಮಕ್ಕೂ ಈಗಿನದ್ದಕ್ಕೂ ತುಲನೆ ಮಾಡಿದರೆ ಅಗಾಧ ವ್ಯತ್ಯಾಸವನ್ನು ನಿರಾಯಾಸವಾಗಿ ಗುರುತಿಸಬಹುದು.
ಹಿಂದೆ ಪತ್ರಕರ್ತರನ್ನ ಸಮಾಜ ಕಾಣುವ ಬಗೆ ವಿಭಿನ್ನವಾಗಿತ್ತು. ಪತ್ರಕರ್ತರೆಂದರೆ ಕಡಿಮೆ ಹಣ ಸಂಪಾದಿಸುವವರು / ಕಡಿಮೆ ಆದಾಯ ಗಳಿಸುವವರು ಎಂಬ ಕಾರಣಕ್ಕೆ ಅವರಿಗೆ ಹೆಣ್ಣು ಕೊಡಲೂ ಹಿಂದೆ ಮುಂದೆ ನೋಡುತ್ತಿದ್ದರಂತೆ ಮತ್ತು ಹಲವು ಪತ್ರಕರ್ತರು ಇವನ್ನೆಲ್ಲಾ ಅನುಭವಿಸಿದ್ದೂ ಸತ್ಯ. ಆದರೆ, ಅದೆಲ್ಲವನ್ನೂ ಹೊರತುಪಡಿಸಿ ಅಂದಿನ ಪತ್ರಕರ್ತರನ್ನು ಸಮಾಜ ಗೌರವ ಪೂರ್ವಕವಾಗಿ, ನಂಬಿಕಸ್ಥರನ್ನಾಗಿ ಕಾಣುತ್ತಿದ್ದ ಬಗೆ ಗಮನಿಸಿದರೆ ಬಹುತೇಕ ಪತ್ರಕರ್ತರು ಹಣದ ವಿಚಾರದಲ್ಲಿ ಬಡವರಾಗಿದ್ದರೂ, ನೈತಿಕತೆ ಅಥವಾ ವ್ಯಕ್ತಿತ್ವದ ವಿಚಾರದಲ್ಲಿ ಶ್ರೀಮಂತರಾಗಿದ್ದರು ಮತ್ತು ಪತ್ರಿಕೋದ್ಯಮ ಕ್ಷೇತ್ರದ ಘನತೆ, ಗಾಂಭೀರ್ಯವನ್ನು ಪ್ರಜ್ಞಾವಂತಿಕೆಯಿಂದ ಉಳಿಸಿಕೊಂಡು ಬಂದಿದ್ದರು ಎನ್ನಬಹುದು. ಆದರೆ, ಕಾಲಚಕ್ರ ಪತ್ರಕರ್ತರಿಗೆ ವಿನಾಯಿತಿ ನೀಡಬೇಕಲ್ಲಾ? ಬದಲಾವಣೆಯ ಸುಳಿಗೆ ಸಿಕ್ಕ ಪತ್ರಿಕೋದ್ಯಮ ಬೇರೆ ಯಾವ ಕ್ಷೇತ್ರಗಳಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದಿದೆ. ನೋಡನೋಡುತ್ತಲೇ ಉದ್ಯಮವಾಗಿ ಬೆಳೆದು ನಿಂತು, ಪತ್ರಕರ್ತರೂ ಇತರೆ ಕ್ಷೇತ್ರದ ಉದ್ಯೋಗಿಗಳಂತೆ ಹೆಚ್ಚೆಚ್ಚು ಸಂಬಳ ಪಡೆಯುವ ಕಾಲ ಬಂದಿದೆ. ಆದರೆ, ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬಂತೆ ನೈತಿಕತೆಯ ವಿಚಾರದಲ್ಲಿ ಪತ್ರಿಕೋದ್ಯಮ, ಪತ್ರಕರ್ತ ಬಡವರಾಗುವಂತಹ ಸ್ಥಿತಿ ಕೂಡ ನಿರ್ಮಾಣವಾಗಿರುವುದು ಕಟು ಸತ್ಯ. ಇಂದಿನ ಬಹುತೇಕ ಮಾಧ್ಯಮಗಳಿಗೆ ಉದ್ಯಮಿಗಳು ಹಾಗೂ ರಾಜಕಾರಣಿಗಳೇ ಹೂಡಿಕೆದಾರರಾಗಿರುವುದರಿಂದ ಹೆಚ್ಚಿನ ಪತ್ರಕರ್ತರು ಅವರ ಕೈಗೊಂಬೆಯಾಗಿ ವರ್ತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೊತೆಗೆ ಪತ್ರಿಕೋದ್ಯಮ ಲಾಭದಾಯಕ ಉದ್ಯಮವಾಗಿ ಪರಿವರ್ತನೆ ಹೊಂದಿರುವುದರಿಂದ ಪತ್ರಕರ್ತರು ಅನೇಕ ಸಂದರ್ಭಗಳಲ್ಲಿ ಜಾಣ ಕುರುಡರಾಗಬೇಕಾದ ಸಂದಿಗ್ಧತೆ ಎದುರಾಗಿದೆ.
ಇವತ್ತಿನ ಕಾಲಘಟ್ಟದಲ್ಲಿ, ಕನ್ನಡ ಪತ್ರಿಕೋದ್ಯಮ ಕ್ಷೇತ್ರದತ್ತಲೇ ಕಣ್ಣು ಹಾಯಿಸುವುದಾದರೆ ಖುಷಿ ಹಾಗೂ ಸಿಕ್ಕ ಖುಷಿಯಷ್ಟನ್ನೂ ನುಂಗಬಲ್ಲ ಬೇಸರದ ವಿಚಾರ ಎರಡೂ ಒಂದರ ಹಿಂದೊಂದು ನಿಂತಿರುವುದು ಗೋಚರಿಸುತ್ತದೆ. ಕನ್ನಡ ಮಾಧ್ಯಮ ಕ್ಷೇತ್ರ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ಮನೋರಂಜನಾ ಕ್ಷೇತ್ರವನ್ನು ಪಕ್ಕಕ್ಕಿಟ್ಟು ಬರೀ ಸುದ್ದಿ ಮಾಧ್ಯಮಗಳನ್ನೇ ಕೇಂದ್ರೀಕರಿಸಿಕೊಂಡು ಲೆಕ್ಕ ಹಾಕಿದರೂ ಕನ್ನಡದಲ್ಲಿ ಸರಿಸುಮಾರು ಹದಿನೈದು ಸುದ್ದಿ ವಾಹಿನಿಗಳು ಮತ್ತು ಹತ್ತು ದಿನಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತೆಯೇ ಕೆಲವು ಮಾಧ್ಯಮಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜೀವ ತಳೆದು, ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಸ್ಥಗಿತಗೊಂಡ ಉದಾಹರಣೆಗಳೂ ಇವೆ.
ದಶಕಗಳ ಹಿಂದೆ ಬೆರಳೆಣಿಕೆಯಷ್ಟು ಮಾಧ್ಯಮಗಳಿದ್ದ ಕಾಲದಲ್ಲಿ ಜನರು ಪತ್ರಕರ್ತರನ್ನು ಕಾಣುತ್ತಿದ್ದ ರೀತಿಗೂ ಮತ್ತು ಅಣಬೆಗಳಂತೆ ಮಾಧ್ಯಮಗಳ ಸಂಖ್ಯೆ ಏರಿದಂತೆ ಪತ್ರಕರ್ತರೆಡೆಗಿನ ದೃಷ್ಟಿಕೋನ ಬದಲಾದ ಬಗೆಗೂ ಅವಿನಾಭಾವ ಸಂಬಂಧವಿದೆ. ಹಾಗೆ ನೋಡಿದರೆ ಹಿಂದೆ ಕೆಲವೇ ಕೆಲವು ಮಾಧ್ಯಮಗಳಿದ್ದ ಕಾಲದಲ್ಲಿ ಸಮಾಜದ ಅಕ್ರಮಗಳನ್ನು ಅವುಗಳು ಹೊರಗೆಳೆಯುತ್ತಿದ್ದ ಪರಿ ಹಾಗೂ ಜನರ ಮನಸ್ಸಿನಲ್ಲಿ ಪತ್ರಕರ್ತರು ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂದು ಹುಟ್ಟಿದ ನಂಬಿಕೆ ಇಂದು ದುಪ್ಪಟ್ಟಾಗಬೇಕಿತ್ತು. ಮಾರುಕಟ್ಟೆಯ ಎಲ್ಲಾ ಪೈಪೋಟಿಗಳಾಚೆಗೂ ಮಾಧ್ಯಮಗಳು ಹೊಸ ಕ್ರಾಂತಿಯೊಂದನ್ನು ಮೂಡಿಸಬೇಕಿತ್ತು. ಆದರೆ, ಸಿದ್ಧ ಮಾದರಿಯ ಹಿಂದೆ ಬಿದ್ದ ಸುದ್ದಿ ವಾಹಿನಿಗಳು ಪತ್ರಕರ್ತರು ಹಾಗೂ ಜನರ ನಡುವೆ ಇದ್ದ ನಂಬಿಕೆಯ ಕೊಂಡಿಯನ್ನು ಕಿತ್ತು ಹಾಕಿದವೇ ವಿನಃ ಯಾವ ಹೊಸತನಕ್ಕೂ, ಯಾವ ಕ್ರಾಂತಿಗೂ ಸಾಕ್ಷಿಯಾಗಲಿಲ್ಲ ಎಂಬುದು ಬೇಸರದ ಸಂಗತಿ.
ಮಾಧ್ಯಮಗಳ ಅದರಲ್ಲೂ ಸುದ್ದಿ ವಾಹಿನಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದಂತೆ ಚಿತ್ರ ವಿಚಿತ್ರ ಪರಿಕಲ್ಪನೆಗಳು ಹುಟ್ಟಿಕೊಂಡು, ಸುದ್ದಿ ಸಂಸ್ಕೃತಿ ಸಂಪೂರ್ಣ ಬದಲಾಗಿದ್ದು ನಿಸ್ಸಂದೇಹ ಸಂಗತಿ. ಟಿಆರ್‌ಪಿ ಎಂಬ ಅಂಕಗಳಿಕೆ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ವಾಹಿನಿಗಳು ಪೈಪೋಟಿಗೆ ಬಿದ್ದ ಮೇಲೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳೆಲ್ಲವೂ ಜನರಿಗೆ ರೇಜಿಗೆ ಹುಟ್ಟಿಸುವಂತವೇ. ಸುದ್ದಿ ವಾಹಿನಿಗಳ ಕರಿನೆರಳು ಯಾವಮಟ್ಟಿಗೆ ಕನ್ನಡ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರಿತೆಂದರೆ ಜನರ ಅಭಿರುಚಿ ಬದಲಾಗುವುದರೊಂದಿಗೆ, ಮುದ್ರಣ ಮಾಧ್ಯಮಗಳ ಭಾಷಾ ಸಂಸ್ಕೃತಿಯೂ ಬದಲಾಗಿ ಗಂಭೀರ ಪದಬಳಕೆಯೊಂದಿಗೆ ಗುರುತಿಸಿಕೊಂಡಿದ್ದ ಪತ್ರಿಕಾ ಭಾಷೆ, ಕ್ರಿಯಾತ್ಮಕತೆ ಅಥವಾ ಜನರನ್ನು ಆಕರ್ಷಿಸುವ ನೆಪದಲ್ಲಿ ಪೀತ ಪತ್ರಿಕೋದ್ಯಮ ಭಾಷೆಯ ಆಸುಪಾಸಿಗೆ ಬಂದು ನಿಲ್ಲುವಂತಾಯಿತು. ಸುದ್ದಿ ವಾಹಿನಿಗಳ ಆಗಮನ ಪತ್ರಕರ್ತರ ಸಂಖ್ಯೆಯನ್ನು ವೃದ್ಧಿಸಿತೇ ವಿನಃ ಗುಣಮಟ್ಟದ ಅಭಿವೃದ್ಧಿಯಲ್ಲಿ ಅದರದ್ದು ಶೂನ್ಯ ಕೊಡುಗೆ ಎಂದು ಹೇಳಲು ಯಾವ ಅನುಮಾನವೂ ಇಲ್ಲ.
ಯಾವಾಗ ಮಾಧ್ಯಮಗಳು ಜನರ ಬಾಯಿಗೆ, ಬೈಗುಳಕ್ಕೆ ತುತ್ತಾಗಲು ಆರಂಭವಾದವೋ ಅಂದು ಪತ್ರಿಕೋದ್ಯಮದ ಘನತೆ ಹಾಗೂ ಗಾಂಭೀರ್ಯತೆಗೆ ಮೊದಲ ಕೊಡಲಿ ಏಟು ಬಿದ್ದಿತು. ಮಾಧ್ಯಮಗಳು, ಪತ್ರಕರ್ತರು ಪ್ರಶ್ನಾತೀತರಲ್ಲ ಎಂಬ ಮಾತು ಹುಟ್ಟಲು ಕಾರಣವೇ ಕ್ಷೇತ್ರದಲ್ಲಾದ ಕಲ್ಮಶ. ಪತ್ರಕರ್ತರು ತಮ್ಮ ವೈಯಕ್ತಿಕ, ರಾಜಕೀಯ ಹಾಗೂ ಸೈದ್ಧಾಂತಿಕ ಚಿಂತನೆಗಳನ್ನು ತಮ್ಮ ವೃತ್ತಿಯಲ್ಲಿ ಬೆರೆಸಲು ಆರಂಭಿಸಿದಾಗಿನಿಂದ ಮಾಧ್ಯಮಗಳಿಗೆ ಹಣೆಪಟ್ಟಿ ಕಟ್ಟುವ ಸಂಪ್ರದಾಯವೂ ಆರಂಭವಾಯಿತು. ಇವೆಲ್ಲವೂ ಪತ್ರಿಕಾ ರಂಗದ ವಿಶ್ವಾಸಾರ್ಹತೆಗೆ ಮಾರಕವಾಗಲು ಕಾರಣವಾದ ಆರಂಭಿಕ ಹೆಜ್ಜೆಗಳು.
ಇತ್ತೀಚಿನ ಕೆಲ ತಾಜಾ ಉದಾಹರಣೆಗಳನ್ನೇ ಗಮನಿಸುವುದಾದರೆ ಕನ್ನಡ ಪತ್ರಿಕೋದ್ಯಮ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಬಹುದು. ಈಗ ಕೆಲವು ದಿನಗಳ ಹಿಂದೆ ಕನ್ನಡದ ಹೆಸರಾಂತ ಮಾಧ್ಯಮಗಳ ಕೆಲ ಪತ್ರಕರ್ತರು ಹಣದ ಹಿಂದೆ ಬಿದ್ದು ಸಮಾಜದ ಮುಂದೆ ನೈತಿಕವಾಗಿ ಬೆತ್ತಲಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕನ್ನಡದ ಮತ್ತೊಂದು ಸುದ್ದಿ ವಾಹಿನಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವೃತ್ತಿಪರ ಪತ್ರಕರ್ತರೇ ಕಟ್ಟಿದ ವಾಹಿನಿ, ಭರವಸೆಯ ಬೆಳಕು ಎಂಬ ಅಡಿಬರಹದೊಂದಿಗೆ ಆರಂಭವಾದ ವಾಹಿನಿ ತನ್ನ ವೈಯಕ್ತಿಕ ದ್ವೇಷ ಸಾಧನೆಗಾಗಿ ವ್ಯಕ್ತಿಯೊಬ್ಬರ ವಿರುದ್ಧ ತಿರುಗಿ ಬಿದ್ದಿದೆ. ಪ್ರತಿ ಘಟನೆಗೂ ಬೇರೆ ಬೇರೆ ಆಯಾಮಗಳಿರುತ್ತವೆ ಎಂಬುದು ಸತ್ಯವಾದರೂ ಕಳೆದ ಮೂರ್ನಾಲ್ಕು ದಿನಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಧ್ಯಮವೊಂದು ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದವರ ಧ್ವನಿಯನ್ನು ತಗ್ಗಿಸಲು ಸತತ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ದುರಾದೃಷ್ಟವಶಾತ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದನ್ನು ಸಹಿಸಿಕೊಳ್ಳದ ವಾಹಿನಿ ಕಳೆದ ಕೆಲವು ತಿಂಗಳಿಂದಲೂ ಒಂದು ಪಕ್ಷದ ಪರ ಒಲವು ತೋರಿಸಿಕೊಂಡು, ಅನೇಕ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡಿದೆ ಎಂಬುದೂ ಗಮನಾರ್ಹ ಸಂಗತಿ. ವಾಸ್ತವ ಹೀಗಿರುವಾಗ ತನ್ನನ್ನು ಪ್ರಶ್ನಿಸಿದವರು ಸರಿಯಿಲ್ಲ ಎಂದು ದನಿಯೆತ್ತುವ ನೈತಿಕತೆ ಇರಲು ಹೇಗೆ ಸಾಧ್ಯ? ನಿಷ್ಠುರತೆಯೊಂದಿಗೆ ಗುರುತಿಸಿಕೊಳ್ಳಬೇಕಾದ ಮಾಧ್ಯಮ ವ್ಯಕ್ತಿ ಅಥವಾ ಪಕ್ಷ ನಿಷ್ಠೆಯೊಂದಿಗೆ ಗುರುತಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಹೂಡಿಕೆದಾರರ ಕೈಗೊಂಬೆಯಾಗಿ ಪತ್ರಕರ್ತ ಕುಣಿಯಲು ಆರಂಭಿಸಿದರೆ ಅದು ಕೇವಲ ಆ ಸಂಸ್ಥೆಯ ಸೋಲಲ್ಲ ಬದಲಾಗಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಸೋಲು. ಇಂತಹ ಸಂಸ್ಕೃತಿಗಳಿಗೆ ಪೂರ್ಣ ವಿರಾಮ ಬೀಳದ ಹೊರತು ಪತ್ರಿಕೋದ್ಯಮ ಮತ್ತು ಪತ್ರಕರ್ತರೆಡೆಗಿನ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವುದೂ ಕಷ್ಟ ಸಾಧ್ಯ. ಅಂತೆಯೇ, ಜನಸಾಮಾನ್ಯರೂ ಕೂಡ ಯಾವುದೇ ಒಂದು ವಿಚಾರವನ್ನು ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೇ ವೇದಿಕೆಯಲ್ಲಾಗಲಿ ಹಂಚಿಕೊಳ್ಳುವ ಮುನ್ನ ಅದತ ಸತ್ಯಾಸತ್ಯತೆಯನ್ನು ವಿಮರ್ಶಿಸುವಷ್ಟು ವ್ಯವಧಾನ ತೋರಿಸುವುದೂ ಅತ್ಯಗತ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಒಟ್ಟಿನಲ್ಲಿ ಮಾಧ್ಯಮಗಳು ಹಂತ ಹಂತವಾಗಿ ಸುದ್ದಿ ಸಂಸ್ಕೃತಿಯನ್ನು ಕಲುಷಿತಗೊಳಿಸಿದ ಫಲವಾಗಿ ಪ್ರಬುದ್ಧ ಮಾಧ್ಯಮ ಹಾಗೂ ಪ್ರಬುದ್ಧ ಓದುಗ ಇಬ್ಬರನ್ನೂ ಕಳೆದುಕೊಂಡಂತಾಗಿದೆ ಎಂಬುದು ವಿಷಾದನೀಯ. ಇದನ್ನು ಬದಲಾಯಿಸಬೇಕೆಂದರೆ ಪತ್ರಕರ್ತ ಅಥವಾ ಓದುಗ ಅಥವಾ ಇಬ್ಬರೂ ಒಂದಾಗಿ ಹೆಜ್ಜೆ ಇಡಲೇಬೇಕಿದೆ. ನಿರಂತರ ಬದಲಾವಣೆಯ ಹಾದಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಮುಂದಿನ ಬದಲಾವಣೆಗಳು ಸಕಾರಾತ್ಮಕ ಹಾದಿಯತ್ತಲೇ ಹೊರಳುವಂತೆ ನಿಗಾ ವಹಿಸಬೇಕಿದೆ.
ಕೇವಲ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಕೇಳಿದ ಅಥವಾ ನೋಡಿದ ಅಲ್ಪಸ್ವಲ್ಪ ಅನುಭವಗಳೊಂದಿಗೆ ಹೀಗೆಲ್ಲಾ ಬರೆಯುವಾಗ ನನ್ನಲ್ಲಿ ಮೂಡುತ್ತಿದ್ದ ಅನುಮಾನವೆಂದರೆ ಇದನ್ನು ಓದಿದ ಅನುಭವೀ ಪತ್ರಕರ್ತರ ಪ್ರತಿಕ್ರಿಯೆ ಹೇಗಿರಬಹುದೆಂದು.
ನನಗನ್ನಿಸುವ ಹಾಗೆ ಮುಖ್ಯ ಹಾಗೂ ಸಹಜ ಪ್ರತಿಕ್ರಿಯೆ ಎಂದರೆ ವಾಸ್ತವವೇ ಬೇರೆ ಕಲ್ಪನೆಯೇ ಬೇರೆ ಎಂಬುದು. ದುರಂತವೆಂದರೆ ಇಂದು ಯಾರೇ ನಿಷ್ಠುರವಾಗಿ ಯೋಚಿಸಲು ಪ್ರಯತ್ನಿಸಿದರೂ ಅದನ್ನು ಅಲ್ಲಗಳೆಯುವ ಹಾಗೂ ಅದು ಏಕೆ ಅಸಾಧ್ಯವೆಂಬ ಸಂಗತಿಗಳನ್ನು ವಿವರಿಸುವವರು ಸಿಗುತ್ತಾರೆಯೇ ವಿನಃ ಈಗಿರುವ ಅಡೆತಡೆಗಳನ್ನೆಲ್ಲಾ ದಾಟಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕುವ ಮಾತುಗಳನ್ನಾಡುವವರು ಸಿಗುವುದು ವಿರಳ. ಇವೆಲ್ಲದರ ಅರಿವಿದ್ದೂ ಕಲ್ಪನೆಗಳಿಲ್ಲದೇ ಹೊಸತನ್ನು ಸಾಧಿಸುವುದು ಅಸಾಧ್ಯ ಎಂಬ ಸಮಾಧಾನದೊಂದಿಗೆ ನನ್ನ ಯೋಚನೆಗಳನ್ನು ಇಲ್ಲಿ ಹರವಿಟ್ಟಿದ್ದೇನೆ.
(ಪ್ರಸ್ತುತ ಲೇಖನ 'ಪ್ರತಿಧ್ವನಿ' ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ)
- ಸ್ಕಂದ ಆಗುಂಬೆ.


No comments:
Post a Comment