Saturday, 25 May 2019

ಲಗಾಮಿಲ್ಲದ ಈ ಕುದುರೆ ಸವಾರಿಯಲ್ಲಿ ಬಿಜೆಪಿ ಉರುಳಲೂಬಹುದು, ಉಳಿಯಲೂಬಹುದು!



ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಹಿಡಿಯಬಹುದೆಂಬ ನಿರೀಕ್ಷೆ ಇತ್ತಾದರೂ ಕಳೆದ ಬಾರಿಗಿಂತಲೂ ದೊಡ್ಡ ಮಟ್ಟದ ಗೆಲುವು ಸಿಕ್ಕಿರುವುದು ಬಿಜೆಪಿಗರಿಗೂ ಅಚ್ಚರಿ ತಂದಿರಬಹುದು. ಕರ್ನಾಟಕದಲ್ಲಂತೂ ಪಕ್ಷದ ಮುಖಂಡರೇ ನಿಬ್ಬೆರಗಾಗುವ ಫಲಿತಾಂಶ ಸಿಕ್ಕಿದೆ. ಆದರೆ, ಬಿಜೆಪಿಯ ಪ್ರಚಂಡ ಗೆಲುವು ಹಾಗೂ ಮೈತ್ರಿ ಪಕ್ಷಗಳ ಹೀನಾಯ ಸೋಲನ್ನು ಅವಲೋಕಿಸುವುದಾರೆ, ಉಭಯ ಪಕ್ಷಗಳೂ ನೆನಪಿಡಬೇಕಾದ ಹಲವು ಸಂಗತಿಗಳು ಕಂಡುಬರುತ್ತವೆ.


ಬಿಜೆಪಿಯ ಅಭೂತಪೂರ್ವ ಗೆಲುವು ಮೋದಿಯ ಅಭಿಮಾನಿಗಳಿಗೆ ಎಷ್ಟು ಖುಷಿ ಕೊಟ್ಟಿದೆಯೋ, ಅವರ ಟೀಕಾಕಾರರನ್ನು ಅದಕ್ಕಿಂತಲೂ ದೊಡ್ಡ ಮಟ್ಟದ ಸಂಕಟಕ್ಕೆ ಈಡುಮಾಡಿದೆ. ಇದಕ್ಕೆ ಮುಖ್ಯ ಕಾರಣ, ಮೋದಿಯ ಗೆಲುವನ್ನು ಟೀಕಿಸಲು ಮುಂದಾದಾಗ ಎದುರಾಗುವ ಪರ್ಯಾಯದ ಪ್ರಶ್ನೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಹೇಗೆ ಮೆರೆದಿತ್ತೋ ಅದೇ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಜೊತೆಗೆ, ಅಧಿಕಾರವನ್ನು ಅತ್ಯಂತ ನಾಜೂಕಾಗಿ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಂತಿದೆ. ಜನರು ಏನನ್ನು ತಿರಸ್ಕರಿಸುತ್ತಾರೆ ಹಾಗೂ ಏನೇನು ಮಾಡದಿದ್ದರೆ ಉಳಿಯಬಹುದು ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಎದುರಿಸಿದ ಕಷ್ಟಗಳು ಉದಾಹರಣೆಯಂತೆ ಕಣ್ಣ ಮುಂದಿವೆ.

ಆದರೆ, ಈಗ ಬಿಜೆಪಿಯ ಮುಂದಿರುವ ಸವಾಲುಗಳೇ ಬೇರೆ. ಅದರಲ್ಲಿ ಪ್ರಮುಖವೆನಿಸುವ ಅಂಶಗಳು; ಪ್ರಬಲ ವಿರೋಧ ಪಕ್ಷವೇ ಇಲ್ಲದ ಸಂದರ್ಭದಲ್ಲೂ ಆಡಳಿತ ಪಕ್ಷ ಹೇಗೆ ಸ್ವಯಂ ನಿಯಂತ್ರಣದೊಂದಿಗೆ ಹೆಜ್ಜೆ ಇಡುತ್ತದೆ ಎಂಬುದು ಹಾಗೂ ಅವರ ಸ್ವಂತ ಅಭಿಮಾನಿಗಳನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳುತ್ತದೆ ಎನ್ನುವುದು. ಐದು ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಏರಿದಾಗ ಇದ್ದ ಪರಿಸ್ಥಿತಿಗೂ, ಈಗಿನದಕ್ಕೂ ಹಲವು ವ್ಯತ್ಯಾಸಗಳಿವೆ. ಅಂದು ಆಡಳಿತದ ಆರಂಭದಲ್ಲಿ ಹಿಂದಿನ ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿಯಲು ಇದ್ದ ಅವಕಾಶ ಈಗ ಕಡಿಮೆಯಾಗಿದೆ ಹಾಗೂ ಬಿಜೆಪಿಯನ್ನು ಒಪ್ಪಿಕೊಳ್ಳದವರು ಸರ್ಕಾರವನ್ನು ಇನ್ನಷ್ಟು ಕಟುವಾಗಿ ಟೀಕಿಸುವ ದಿನಗಳು ಆರಂಭವಾಗಲಿವೆ. ಇದನ್ನು ಮೋದಿಯ ನೇತೃತ್ವದ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯವಾಗುತ್ತದೆ.

ಅತಿ ದೊಡ್ಡ ಸಂಖ್ಯೆಯ ಜನರೇ ತಮ್ಮ ಜೊತೆಗಿರುವಾಗ ತಮ್ಮನ್ನು ವಿರೋಧಿಸುವವರ ಹಿತವನ್ನು ಕಾಪಾಡಿಕೊಂಡು ನಡೆಯುವುದು ಯಾವುದೇ ಸರ್ಕಾರಕ್ಕಾದರೂ ಸವಾಲೇ ಸರಿ! ಪ್ರಸ್ತುತ ಬಿಜೆಪಿಗೆ ಅತಿ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಮೋದಿಯನ್ನು ಟೀಕಿಸುವ ಹಾಗೂ ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ತಿರುಗಿಬೀಳುವವರ ಸಂಖ್ಯೆ ಸಹಜವಾಗಿ ಹೆಚ್ಚಿದೆ. ಸೈದ್ಧಾಂತಿಕ ಪ್ರತಿಷ್ಠೆಯಿಂದ ಚರ್ಚೆಗೆ ಒಳಪಡಬೇಕಾದ ಹಲವು ವಿಚಾರಗಳನ್ನು ಹಾಸ್ಯಾಸ್ಪದ ವಸ್ತುಗಳನ್ನಾಗಿಸುವ ಕೆಟ್ಟ ಪದ್ಧತಿ ಇನ್ನಷ್ಟು ಬೃಹದಾಕಾರವಾಗಿ ವ್ಯಾಪಿಸುವ ಸಾಧ್ಯತೆ ಇದೆ. ತಮಗೆ ಆಗದವರು ಯಾವುದನ್ನು ಬೆಂಬಲಿಸುತ್ತಾರೋ, ಏನನ್ನು ಒಪ್ಪಿಕೊಳ್ಳುತ್ತಾರೋ ಅದನ್ನು ತಾವು ವಿರೋಧಿಸಬೇಕು ಎಂಬ ಮನಸ್ಥಿತಿ ಎಡ, ಬಲವೆಂಬ ಭೇದವಿಲ್ಲದೆ ಎಲ್ಲರಲ್ಲೂ ಹುಟ್ಟಿಕೊಂಡಿರುವುದರಿಂದ ಬಿಜೆಪಿಗೆ ಇದು ದೊಡ್ಡ ಸವಾಲಾಗಬಹುದು. ಜೊತೆಗೆ ಸಧೃಡ ವಿರೋಧ ಪಕ್ಷವೂ ಇಲ್ಲದಿರುವುದರಿಂದ ಸರ್ಕಾರ ನೇರವಾಗಿ ಟೀಕೆಗೆ ಗುರಿಯಾಗುವ ಸಾಧ್ಯತೆಗಳೂ ಹೆಚ್ಚು. ಇಂತಹ ವಿಚಾರಗಳೇ ಮುಂಬರುವ ದಿನಗಳಲ್ಲಿ ಅತಿದೊಡ್ಡ ಮುಳುವಾಗಿ ಪರಿಣಮಿಸಿದರೂ ಅಚ್ಚರಿಯೇನಲ್ಲ. ಇದರೊಟ್ಟಿಗೆ ಉರಿವ ಬೆಂಕಿಗೆ ತುಪ್ಪ ಸುರಿಯುವಂತೆ ಆಗದಿರಲು ಅಧಿಕಾರಕ್ಕೇರಲಿರುವ ಬಿಜೆಪಿ ತಮ್ಮ ಅಭಿಮಾನಿಗಳಿಂದ ಅತಿರೇಕದ ವರ್ತನೆ ವ್ಯಕ್ತವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ.

ಇನ್ನು, ಈಗ ಸೋಲುಂಡಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ವಿಚಾರಕ್ಕೆ ಬಂದರೆ, ಇವರು ತಮ್ಮ ಸೋಲನ್ನು ಪರಾಮರ್ಶಿಸಿಕೊಂಡು ಸುಧಾರಿಸಿಕೊಳ್ಳಬೇಕೇ ವಿನಾ ಆಧಾರವಿಲ್ಲದ ಆರೋಪಗಳನ್ನು ಮಾಡಿ ಅವಿವೇಕತನ ಪ್ರದರ್ಶಿಸದಿದ್ದರೆ ಒಳಿತು. ಒಂದು ವೇಳೆ, ಮೋದಿಯ ವಿರೋಧಿಗಳೆಲ್ಲ ನಮ್ಮವರು ಎಂಬ ಪೊಳ್ಳು ನಂಬಿಕೆಯನ್ನು ಮುಂದುವರಿಸಿಕೊಂಡು ತಮ್ಮ-ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದೆ ಇದ್ದರೆ, ತಲೆಯ ಮೇಲೆ ಚಪ್ಪಡಿ ಎಳೆದುಕೊಂಡಂತಾಗುವುದು ನಿಶ್ಚಿತ. ಕರ್ನಾಟಕದ ಪರಿಸ್ಥಿತಿಯನ್ನೇ ಗಮನಿಸಿ ಇದನ್ನು ವಿಶ್ಲೇಷಿಸುವುದಾದರೆ, ಮೈತ್ರಿ ಪಕ್ಷದ ಆಡಳಿತವಿದ್ದೂ ಬಿಜೆಪಿ 28ರಲ್ಲಿ 25 ಸ್ಥಾನ ಗಳಿಸಿರುವುದು ಆಶ್ಚರ್ಯಕರ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ ನಿಂತು ಚುನಾವಣೆ ಎದುರಿಸಿದ್ದರಿಂದ ಬಿಜೆಪಿ ಕಳೆದ ಬಾರಿಯಷ್ಟು ಸೀಟು ಗಳಿಸಲೂ ಪ್ರಯಾಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಅಂದಾಜಿತ್ತು. ಆದರೆ, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿವೆ. ಮೈತ್ರಿ ಪಕ್ಷಗಳ ನಡುವಿನ ಮನಸ್ತಾಪ, ಪ್ರತಿಷ್ಠೆ ಇತ್ಯಾದಿ ವಿಚಾರಗಳು ಮೈತ್ರಿಯ ಸೋಲಿಗೆ ಕಾರಣಗಳಾಗಿ ಕಂಡರೂ, ಅದರೊಟ್ಟಿಗೆ ಕುಟುಂಬ ರಾಜಕಾರಣವೂ ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ಬಾರಿಯೂ ರಾಹುಲ್ ಗಾಂಧಿ ಅವರನ್ನೇ ಪ್ರಧಾನಮಂತ್ರಿ ಅಭ್ಯರ್ಥಿಯಂತೆ ಬಿಂಬಿಸಿ ಕುಟುಂಬ ರಾಜಕಾರಣವನ್ನು ಮುಂದುವರಿಸುವ ಸ್ಪಷ್ಟ ಸೂಚನೆ ನೀಡಿತು. ಅಂತೆಯೇ, ರಾಜ್ಯದಲ್ಲಿ ಜೆಡಿಎಸ್ ಪಕ್ಷವೂ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರನ್ನೂ ಅಭ್ಯರ್ಥಿಯನ್ನಾಗಿಸಿ ಕುಟುಂಬ ರಾಜಕಾರಣವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿತು. ಜೆಡಿಎಸ್ ಪಕ್ಷದ ಪಾಲಿಗೆ ಭದ್ರಕೋಟೆಯಾದ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಿಂದಲೇ ಮೊಮ್ಮಕ್ಕಳನ್ನು ಕಣಕ್ಕಿಳಿಸಿ, ಅವರ ಗೆಲುವಿನ ಹಾದಿಯನ್ನು ಸುಗಮವಾಗಿಸುವ ಲೆಕ್ಕಾಚಾರ ದೇವೇಗೌಡರದ್ದೂ ಆಗಿತ್ತು.

ಆದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಂತೆ, ಮಂಡ್ಯದಲ್ಲೂ ನಿಖಿಲ್ ಗೆಲ್ಲುತ್ತಾರೆ ಎಂಬ ನಂಬಿಕೆ ಹಾಗೂ ತುಮಕೂರಿನಲ್ಲಿ ದೇವೇಗೌಡರು ಮೈತ್ರಿಯ ಸಹಭಾಗಿತ್ವದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಸಂಪೂರ್ಣ ಕೈ ಕೊಟ್ಟಿದ್ದು ಜೆಡಿಎಸ್‍ಗೆ ಅರಗಿಸಿಕೊಳ್ಳಲಾಗದ ಆಘಾತ. ಈಗ ತುಮಕೂರಿನಲ್ಲಿ ದೇವೇಗೌಡರು ಸೋಲುಂಡಿರುವುದನ್ನು ಮೊಮ್ಮಗನಿಗಾಗಿ ಮಾಡಿದ ತ್ಯಾಗ ಎಂದು ಬಿಂಬಿಸಲಾಗುತ್ತಿದೆಯಾದರೂ, ಕುಟುಂಬ ರಾಜಕಾರಣವನ್ನು ವಿಸ್ತರಿಸುವ ಸ್ವಾರ್ಥ ತ್ಯಾಗಕ್ಕಿಂತ ದೊಡ್ಡದಾಗಿ ಕಾಣುತ್ತಿದೆ. ಪ್ರಜ್ವಲ್ ರೇವಣ್ಣ ತಮ್ಮ ಗೆಲುವು ಕಂಡ ನಂತರ ತಾತನಿಗಾಗಿ ರಾಜಿನಾಮೆ ನೀಡುತ್ತೇನೆ, ಅವರೇ ಮತ್ತೊಮ್ಮೆ ಸ್ಪರ್ಧಿಸಿ ಗೆಲ್ಲಲಿ ಎನ್ನುವ ಭಾವನಾತ್ಮಕ ಮಾತುಗಳನ್ನಾಡಿರುವುದು ಜೆಡಿಎಸ್ ಪಕ್ಷದಲ್ಲಿ ಕುಟುಂಬ ಪ್ರೇಮ ಎಷ್ಟರ ಮಟ್ಟಿಗೆ ಬಲವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ಜೊತೆಗೆ ಇಂತಹ ಹೇಳಿಕೆ ನೀಡುವ ಮೂಲಕ ಕ್ಷೇತ್ರದ ಜನರಿಂದ ಮತ್ತಷ್ಟು ಅನುಕಂಪ ಗಿಟ್ಟಿಸಿಕೊಳ್ಳುವ ಹಾಗೂ ಮುಂದಿನ ರಾಜಕೀಯ ಭವಿಷ್ಯವನ್ನು ಈಗಿನಿಂದಲೇ ಬಲಪಡಿಸಿಕೊಳ್ಳುವ ತಂತ್ರವೂ ಅವರಲ್ಲಿ ಇದ್ದಿರಬಹುದು. ಇನ್ನು, ಕೆಲವು ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಅನರ್ಹತೆ ಭೀತಿ ಎದುರಿಸುತ್ತಿರುವುದರಿಂದ ಅದರಲ್ಲಾಗುವ ಮುಜುಗರ ತಪ್ಪಿಸಿಕೊಳ್ಳಲು ಈ ನಡೆ ಅನುಸರಿಸಿರಬಹುದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ಅವರು ಹೇಳುತ್ತಿರುವ ಮಾತುಗಳಲ್ಲಿ ಮೇಲ್ನೋಟಕ್ಕೆ ಎದ್ದುಕಾಣುತ್ತಿರುವುದು ಮಾತ್ರ ಕುಟುಂಬ ರಾಜಕಾರಣದ ಬಣ್ಣ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಹ ಹೀಗೆಯೇ ಕುಟುಂಬ ರಾಜಕಾರಣದ ಮೋಹದಿಂದ ಸಮರ್ಥ ನಾಯಕತ್ವ ಇಲ್ಲದೆ ನಗೆಪಾಟಲಿಗೆ ಈಡಾಗುವ ಸ್ಥಿತಿಗೆ ಬಂದು ನಿಂತಿದೆ.

ಬಿಜೆಪಿ ಪಕ್ಷದ ದೊಡ್ಡ ಮಟ್ಟದ ಗೆಲುವಿಗೆ ಕಾರಣವಾದ ಅಂಶಗಳಲ್ಲಿ ಇವುಗಳದ್ದೂ ದೊಡ್ಡ ಪಾಲಿದೆ. ಇದರೊಟ್ಟಿಗೆ ಬಿಜೆಪಿ ಪಕ್ಷ ಚುನಾವಣೆ ಎದುರಿಸಿದ್ದು ನರೇಂದ್ರ ಮೋದಿ ಎಂಬ ವ್ಯಕ್ತಿಯಿಂದ. ಬಿಜೆಪಿ ಕಣಕ್ಕಿಳಿಸಿದ ಬಹುತೇಕ ಅಭ್ಯರ್ಥಿಗಳು ಇತರ ಪಕ್ಷಗಳ ಅಭ್ಯರ್ಥಿಗಳಿಗಿಂತ ಭಿನ್ನವಲ್ಲದಿದ್ದರೂ ಮೋದಿ ಎಂಬ ಒಂದೇ ಹೆಸರು ಅವರಿಗೆ ಬಲ ತುಂಬಿ ನಿರಾಯಾಸ ಗೆಲುವು ತಂದುಕೊಟ್ಟಿತು. ಭಾವನಾತ್ಮಕವಾಗಿ ಜನರನ್ನು ಸೆಳೆಯುವಲ್ಲಿ ಬಿಜಿಪಿಯೂ ಹೊರತಲ್ಲ, ಇತರರಿಗಿಂತ ಒಂದೇ ವ್ಯತ್ಯಾಸವೆಂದರೆ ಕುಟುಂಬ, ಸಂಬಂಧಗಳ ಹೆಸರು ಹೇಳದೇ ದೇಶ, ದೇಶಭಕ್ತಿ ಸೇರಿದಂತೆ ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ವಿಚಾರಗಳಿಂದ ಮತದರಾರನ್ನು ಹಿಡಿದಿಟ್ಟುಕೊಂಡರು. ದೇಶದಲ್ಲಿರುವ ಯುವಮತದಾರರನ್ನು ಅತ್ಯಂತ ಯಶಸ್ವಿಯಾಗಿ ತಮ್ಮ ಮತಗಳಾಗಿ ಪರಿವರ್ತಿಸಿಕೊಂಡರು. ಜೊತೆಗೆ, ಬೇರೆ ಪಕ್ಷಗಳಲ್ಲಿ ಮೋದಿಗೆ ಪರ್ಯಾಯ ನಾಯಕತ್ವರೂಪುಗೊಳ್ಳದೆ ಗೆಲುವು ಮತ್ತಷ್ಟು ಸುಲಭವಾಯಿತು.

ಆದರೆ, ಬಿಜೆಪಿ ಬಹುಮತಕ್ಕಿಂತಲೂ ಅತ್ಯಧಿಕ ಸ್ಥಾನಗಳನ್ನು ಪಡೆದು ವಿರೋಧ ಪಕ್ಷವೇ ಇಲ್ಲವಾಗಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಯೋಚಿಸಿದರೆ, ಪ್ರಸಕ್ತ ಅವಧಿಯಲ್ಲಾದರೂ ಒಂದೊಳ್ಳೆ ವಿರೋಧ ಪಕ್ಷದ ಅವಶ್ಯಕತೆ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಇತ್ತು. ಲಗಾಮಿದ್ದರೆ ಮಾತ್ರ ಕುದುರೆ ಸವಾರಿ ಚೆನ್ನಾಗಿರುತ್ತದೆ ಎಂಬುದು ವಾಸ್ತವ.


(ಪ್ರಸ್ತುತ ಲೇಖನ "ಪ್ರತಿಧ್ವನಿ" ಜಾಲತಾಣದಲ್ಲಿ ಪ್ರಕಟವಾಗಿದೆ)


- ಸ್ಕಂದ ಆಗುಂಬೆ.

Tuesday, 21 May 2019

ಚುನಾವಣೆಯಲ್ಲಿ ದುಡ್ಡು ಹಂಚುವ ವಾಡಿಕೆ: ನಿಜವಾಗಿಯೂ ತಪ್ಪು ಯಾರದ್ದು?


ಕಳೆದ ನಾಲ್ಕೈದು ತಿಂಗಳಿನಿಂದ ದೇಶಾದ್ಯಂತ ಆವರಿಸಿದ್ದ ಲೋಕಸಭಾ ಚುನಾವಣೆಯ ಮೋಡ ಮಳೆಯಾಗುವ ಹಂತಕ್ಕೆ ಬಂದು ನಿಂತಿದೆ. ಮತಪೆಟ್ಟಿಗೆಯ ಒಳಗಿನ ಗುಟ್ಟು ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ವಿವಿಧ ಕಾರಣಗಳಿಗಾಗಿ ಸದ್ದು - ಸುದ್ದಿ ಮಾಡಿದೆ. ರಾಜಕಾರಣಿಗಳು ಪ್ರಚಲಿತ ಸಮಸ್ಯೆ, ಪರಿಹಾರ, ಪರ್ಯಾಯ ವ್ಯವಸ್ಥೆ, ಅಭಿವೃದ್ಧಿ ಕ್ರಮ ಇತ್ಯಾದಿ ಚಿಂತನೆಗಳ ಕುರಿತು ಮಾತನಾಡುವ ಬದಲು ಪರಸ್ಪರ ಜಗಳ, ಟೀಕೆ, ಕೆಸರೆರಚಾಟ ಸೇರಿದಂತೆ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಅಲಿಖಿತ ಪರಂಪರೆಯನ್ನು ಕಾಪಾಡಿಕೊಳ್ಳುವಲ್ಲಿಯೇ ಹೆಚ್ಚು ಆಸಕ್ತಿ ತೋರಿಸಿದರು.
ಅಷ್ಟೇ ಮಹತ್ವವನ್ನು ತಮ್ಮ ತೋಳ್ಬಲ, ಧನಬಲ ಪ್ರದರ್ಶನದಲ್ಲೂ ತೋರಿಸಿ ಸುದ್ದಿಯಾದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ ಸೇರಿದಂತೆ ವಿವಿಧ ಆಮಿಷಗಳನ್ನೊಡ್ಡಿ ಮತದಾರರನ್ನು ಸೆಳೆಯುವುದು ಇದೇ ಮೊದಲಲ್ಲ. ಬಹುಶಃ ಕೊನೆಯೂ ಅಲ್ಲ. ಆದರೆ, ಇಪ್ಪತ್ತೊಂದನೆಯ ಶತಮಾನದ ಈ ಸಂದರ್ಭದಲ್ಲೂ ಈ ಪದ್ಧತಿ ಚಾಲ್ತಿಯಲ್ಲಿರುವುದು ಮಾತ್ರ ಶೋಚನೀಯ. ಗೆದ್ದು ಪಾರದರ್ಶಕ ಆಡಳಿತಕ್ಕೆ ಕಾರಣರಾಗಬೇಕಾದವರೇ ಅಕ್ರಮಗಳಲ್ಲಿ ಸಕ್ರಿಯರಾಗಿ ಪ್ರಜಾಪ್ರಭುತ್ವ ರಾಷ್ಟ್ರದ ವ್ಯವಸ್ಥೆ ತಳಮಟ್ಟದಲ್ಲೇ ಹದಗೆಡಲು ಕಾರಣರಾಗುವುದು ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಜನಸಾಮಾನ್ಯರು ಮತದಾನದ ಮೂಲಕ ಅಭ್ಯರ್ಥಿಗಳನ್ನು ಆರಿಸುವಾಗ ಗಮನ ಹರಿಸುವ ವಿಷಯಗಳು, ಮತದಾನದ ಕುರಿತು ಹೊಂದಿರುವ ಗಾಂಭೀರ್ಯತೆ, ಚಿಂತನಾತ್ಮಕ ವಿಚಾರಗಳಿಗಿಂತ ಹೆಚ್ಚು ಭಾವನಾತ್ಮಕ ವಿಷಯಗಳಿಗೆ ಮಾರುಹೋಗುವ ರೀತಿ ಇವೆಲ್ಲವೂ ಉತ್ತಮ ಆಡಳಿತ ವ್ಯವಸ್ಥೆಯ ರಚನೆಗೆ ಉರುಳಾಗುವ ಕೆಲ ಅಂಶಗಳು.
ಇದರೊಂದಿಗೆ ಕೀಳುಮಟ್ಟದ ರಾಜಕಾರಣ, ಮತದಾರರಿಗೆ ನೇರವಾಗಿ ಒಡ್ಡಲಾಗುವ ಆಮಿಷ ಇವೆಲ್ಲವೂ ಪ್ರಜಾತಂತ್ರ ಹಬ್ಬದಲ್ಲಿ ಆಚರಣೆಗಳಂತೆ ಬೆರೆತು, ಭಾರತದಲ್ಲಾಗುವ ಚುನಾವಣೆಗಳ ಸ್ವರೂಪವೇ ಹೀಗೆ ಎಂಬಷ್ಟರ ಮಟ್ಟಿಗೆ ವ್ಯವಸ್ಥೆ ಕಲುಷಿತಗೊಂಡಿದೆ. ಮತದಾರ ಪ್ರಭುಗಳೆಂದು ಕರೆಸಿಕೊಳ್ಳುವ ಜನರೇ ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳೆಡೆಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ‘ಅಕ್ರಮ ಪರಂಪರೆ’ಯನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಇದನ್ನು ಸರಿಪಡಿಸುವುದು ಅತಿ ದೊಡ್ಡ ಸವಾಲಿನಂತೆ ಕಾಣುತ್ತದೆ.

ದಶಕಗಳ ಹಿಂದೆ ಚುನಾವಣೆ ನಡೆಯುತ್ತಿದ್ದ ರೀತಿಗೂ, ಇಂದಿಗೂ ತಾಂತ್ರಿಕವಾಗಿ ಕೆಲ ಬದಲಾವಣೆಗಳಾಗಿವೆ. ಆದರೆ, ಬದಲಾಗದೆ ಮೊದಲಿಗಿಂತಲೂ ಹೆಚ್ಚು ಗಾಢವಾಗಿ ಆವರಿಸಿಕೊಂಡ ಅಂಶಗಳು ಹಲವಾರು ಇವೆ. ಚುನಾವಣಾ ಸಂದರ್ಭದಲ್ಲಿ ಹಂಚಲಾಗುವ ಹಣವನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಜನ ವರ್ತಿಸಲು ಆರಂಭಿಸಿರುವುದು ಸಮಸ್ಯೆ ಹೆಚ್ಚಿದೆ ಎಂಬುದಕ್ಕೆ ಸಣ್ಣ ನಿದರ್ಶನ. 

ಪ್ರಸ್ತುತ ಜನರು ಆಲೋಚಿಸುವ ಕ್ರಮ ಹೇಗಿದೆ ಎಂಬುದಕ್ಕೆ ನನ್ನ ಹತ್ತಿರದವರಿಂದ ಕೇಳಲ್ಪಟ್ಟ ಈ ನೈಜ ಘಟನೆಗಳೇ ಸಾಕ್ಷಿ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರು ತಮ್ಮ ಬೂತಿನ ಮತದಾರರಿಗೆ ಹಣ ಹಂಚದಿರಲು ಯೋಚಿಸಿ, ಅಕ್ರಮವಾಗಿ ಹಂಚಲು ತಮ್ಮದೇ ಪಕ್ಷ ನೀಡಿರುವ ಹಣವನ್ನು ತಮ್ಮೂರಿನ ಸರ್ಕಾರಿ ಶಾಲೆಗೆ ಹಾಗೂ ಕೆಲವು ಸಣ್ಣಪುಟ್ಟ ಕಾಮಗಾರಿಗಳಿಗೆ ವಿನಿಯೋಗಿಸಲು ನಿರ್ಧರಿಸಿದರು. ಈ ಅಭಿಪ್ರಾಯವನ್ನು ಬಹುತೇಕರು ಶ್ಲಾಘಿಸಿದರು ಕೂಡ. ಆದರೆ, ಚುನಾವಣೆಗೆ ಎರಡು ದಿನವಿರುವಾಗ ಮುಖಂಡರ ನಿರ್ಧಾರವನ್ನು ತಿಳಿದ ಒಂದಿಷ್ಟು ಮಂದಿ, “ಜನರಿಗೆ ಹಂಚಬೇಕಾದ ಹಣದಲ್ಲಿ ಅಭಿವೃದ್ಧಿ ಮಾಡುವ ಅವಶ್ಯಕತೆ ಇಲ್ಲ ಹಾಗೂ ಹಂಚದಿದ್ದರೆ ಪಕ್ಷದ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವುದಿಲ್ಲ,” ಎಂದು ಮುಲಾಜಿಲ್ಲದೆ ಹೇಳಿದರು. ಅಂತಿಮವಾಗಿ ಹಣ ಮತದಾರರ ಜೇಬು ಸೇರಿತು. ಇಲ್ಲಿ ರಾಜಕೀಯದವರಿಗಿಂತ ಜನಸಾಮಾನ್ಯರೇ ಹಣ ಹಂಚುವುದರ ಪರವಾಗಿರುವುದನ್ನು ಗಮನಿಸಬಹುದು.
ಅದೇ ರೀತಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದು ಬೂತ್‍ನಲ್ಲಿ ಹಂಚಲೆಂದು ಎರಡು ಪ್ರಮುಖ ಪಕ್ಷಗಳಿಗೆ ಕೆಲ ಲಕ್ಷಗಳಷ್ಟು ಹಣ ಸಂದಾಯವಾಗಿತ್ತು. ಅದೇ ಸಂದರ್ಭದಲ್ಲಿ ಬೂತ್ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ ಊರ ದೇವಾಲಯವೊಂದರ ಅಭಿವೃದ್ಧಿ ಕುರಿತು ಗ್ರಾಮಸ್ಥರಲ್ಲಿ ಚರ್ಚೆಯಾಗುತ್ತಿತ್ತು. ಇದರ ಕುರಿತು ಚಿಂತಿಸಿದ ಉಭಯ ಪಕ್ಷಗಳ ಮುಖಂಡರು, ತಮ್ಮ-ತಮ್ಮ ಪಕ್ಷಗಳಿಗೆ ನೀಡಲಾದ ಅಷ್ಟೂ ಅಕ್ರಮ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸುರಿದು ಪಾಪ ತೊಳೆದುಕೊಳ್ಳಲು ನಿರ್ಧರಿಸಿದರು. ಆದರೆ, ಇದನ್ನು ತಿಳಿದ ಕೂಡಲೇ ಪಕ್ಷದ ಕಾರ್ಯಕರ್ತರೇ ಜಾತಿ, ಧರ್ಮಗಳ ಲೆಕ್ಕಾಚಾರವನ್ನು ಎಳೆದುತಂದು ಮುಖಂಡರ ನಿರ್ಧಾರಕ್ಕೆ ಕಲ್ಲು ಹಾಕಿ, ತಮ್ಮ ಪಾಲಿನ ಹಣವನ್ನು ಬಾಚಿಕೊಂಡರು. ಚುನಾವಣೆ ಮುಗಿಯುವ ತನಕವೂ ಕಾರ್ಯಕರ್ತರ ಕಾರು, ಬೈಕು ಊರೂರು ಅಲೆದು ಹೋಟೆಲಿನ ಮುಂದೆ ನಿಲ್ಲುತ್ತಿತ್ತು. ಇದೊಂಥರಾ ಕೋಳಿ ಮೊದಲಾ, ಮೊಟ್ಟೆ ಮೊದಲಾ? ಎಂಬಂತಹ ಪರಿಸ್ಥಿತಿ. ರಾಜಕಾರಣ ಹೇಗೆ ತಳಮಟ್ಟದಲ್ಲೇ ಹದಗೆಟ್ಟಿದೆ ಹಾಗೂ ಇದನ್ನು ಸರಿದಾರಿಗೆ ತರುವುದು ಏಕೆ ಕಷ್ಟಸಾಧ್ಯ ಎಂಬುದನ್ನು ಈ ಸಣ್ಣ ಉದಾಹರಣೆಗಳ ಮೂಲಕವೇ ಅರ್ಥೈಸಿಕೊಳ್ಳಬಹುದು.
ವಿಪರ್ಯಾಸವೆಂದರೆ, ಇಂದಿಗೂ ಎಷ್ಟೋ ಜನ ಮತದಾರರು ತಮಗೆ ರಾಜಕೀಯ ಪಕ್ಷಗಳಿಂದ ಹಣ ಬಂದಿಲ್ಲ ಹಾಗೂ ಹಂಚಬೇಕಾದ ಹಣವನ್ನು ಕಾರ್ಯಕರ್ತರೇ ನುಂಗಿ ಮೋಸ ಮಾಡಿದ್ದಾರೆ ಎಂದು ದನಿಯೆತ್ತರಿಸಿ ಹೇಳುತ್ತಾರೆ. ಹಲವರು ಬಹುತೇಕ ಎಲ್ಲ ಪಕ್ಷಗಳಿಂದಲೂ ಹಣ ಸಿಗಲೆಂದು ಆಶಿಸುತ್ತಾರೆ. ಆದರೆ, ಇದೇ ಜನರು ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಅಭಿವೃದ್ಧಿಯೆಡೆಗೆ ತೋರುವ ಅಸಡ್ಡೆ ಕುರಿತು ಪುಂಖಾನುಪುಂಖವಾಗಿ ಮಾತನಾಡಿ ತಮ್ಮನ್ನು ಸುಬಗರಂತೆ ಬಿಂಬಿಸಿಕೊಳ್ಳುತ್ತಾರೆ.

ಮೇಲ್ನೋಟಕ್ಕೆ ಇವೆಲ್ಲವೂ ಅತ್ಯಂತ ಸಾಧಾರಣ ವಿಚಾರಗಳಂತೆ ಕಂಡರೂ, ಇಡೀ ದೇಶದ ಮತದಾರರ ಮನಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅವಲೋಕಿಸಿದರೆ ಪರಿಸ್ಥಿತಿಯ ಗಂಭೀರತೆ ಎದ್ದು ಕಾಣುತ್ತದೆ. ಚುನಾವಣಾ ಸಂದರ್ಭಗಳಲ್ಲಿ ವಿವಿಧ ಆಮಿಷಗಳನ್ನೊಡ್ಡಿ ಜನರಿಗೆ ಹಣದ ರುಚಿ ಹತ್ತಿಸಿರುವ ರಾಜಕೀಯ ಪಕ್ಷಗಳು ಹಾಗೂ ಅದು ಅನೈತಿಕವೆಂಬ ಅರಿವಿದ್ದರೂ ತಮ್ಮ ಹಕ್ಕು ಎಂಬಂತೆ ವರ್ತಿಸುವ ಜನರು ವ್ಯವಸ್ಥೆಯ ಬಹುದೊಡ್ಡ ವ್ಯಂಗ್ಯವಾಗಿ ಕಾಣುತ್ತಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯೂ ತಾನು ಹಣ ಪಡೆದ ಪಕ್ಷಕ್ಕೇ ಮತ ಹಾಕಬೇಕೆಂಬ ನಿಷ್ಠೆ ತೋರುವುದು ಅನುಮಾನ. ರಾಜಕೀಯ ಪಕ್ಷಗಳಿಗೂ ಈ ವಿಚಾರ ತಿಳಿಯದಿರುವುದೇನಲ್ಲ. ಆದರೆ, ಚುನಾವಣೆ ಎಂದಾಕ್ಷಣ ಒಂದಷ್ಟು ಹಣ ಚೆಲ್ಲುವುದು ರಾಜಕೀಯ ಪಕ್ಷಗಳ ಪಾಲಿಗೆ ಸಂಪ್ರದಾಯವಾಗಿದೆ. ಹೀಗೆ ಹರಿದು ಸಾಗುವ ಹಣ ಕಾನೂನಿನ ಪ್ರಕಾರ ಅಕ್ರಮವೆಂದು ಗುರುತಿಸಿಕೊಂಡರೂ ಕಾನೂನಿನ ನೆರಳಿನಲ್ಲೇ ನಿರ್ಭಯವಾಗಿ ಸಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಚುನಾವಣಾ ಸಂದರ್ಭದಲ್ಲಿ ಅಲ್ಲಲ್ಲಿ ಅಕ್ರಮ ಹಣ ಜಪ್ತಿ ಎಂಬ ಸುದ್ದಿ ಕಿವಿಗೆ ಬಿದ್ದರೂ ಅವು ನ್ಯಾಯದೇವತೆಗೆ ತೆರುವ ಕನಿಷ್ಠ ಮೊತ್ತದ ತಪ್ಪುಕಾಣಿಕೆಯಂತೆ ಎಂಬುದು ಒಂದು ಅಪ್ರಿಯ ಸತ್ಯ. ದುರದೃಷ್ಟವಶಾತ್ ಯಾವ ರಾಜಕೀಯ ಪಕ್ಷವೂ ಈ ಪರಂಪರೆಗೆ ಅಂತ್ಯ ಹಾಡುವ ಧೈರ್ಯ ಮಾತ್ರ ತೋರುತ್ತಿಲ್ಲ ಮತ್ತು ಇದಕ್ಕೆ ಕಾರಣ ಜನಸಾಮಾನ್ಯರು ಎಂಬುದು ಮಾತ್ರ ಕಟುವಾಸ್ತವ.

ಪ್ರತಿಯೊಂದು ಚುನಾವಣೆಗಾಗಿ ರಾಜಕೀಯ ಪಕ್ಷಗಳು ನಡೆಸುವ ದುಂದುವೆಚ್ಚ ಸಾವಿರ ಕೋಟಿಗಳನ್ನು ಮೀರಿಹೋಗುತ್ತದೆ ಹಾಗೂ ಇಷ್ಟು ದೊಡ್ಡ ಮಟ್ಟದ ಹಣ ಅಷ್ಟೇ ದೊಡ್ಡ ಮಟ್ಟದ ಜನಸಾಗರದಲ್ಲಿ ಹರಿದುಹೋಗುವುದರಿಂದ ಅತಿದೊಡ್ಡ ಅನುಕೂಲ ಯಾವೊಬ್ಬ ಜನಸಾಮಾನ್ಯನಿಗೂ ಆಗಲಾರದು. ಒಂದು ವೇಳೆ, ರಾಜಕೀಯ ಪಕ್ಷಗಳು ಹೀಗೆ ಪೋಲಾಗುವ ಹಣವನ್ನು ಕಟ್ಟುನಿಟ್ಟಾಗಿ ನಿಲ್ಲಿಸಿದರೆ ಪಕ್ಷಗಳ ವತಿಯಿಂದಲೇ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಆ ಮೂಲಕ ಜನರನ್ನು ತಲುಪಬಹುದು. ಆದರೆ, ಈ ಯಾವುದೇ ವಿಚಾರಗಳು ಸಾಧ್ಯವಾಗಬೇಕೆಂದರೆ ಜನರ ಮನಸ್ಥಿತಿ ಬದಲಾಗಬೇಕು, ಮತ ಚಲಾಯಿಸುವುದು ಮಾತ್ರವೇ ಹಕ್ಕು ಹೊರತು ಮತ ಚಲಾಯಿಸಲು ಹಣ ಪಡೆಯುವುದು ಹಕ್ಕಲ್ಲ ಎಂಬ ಅರಿವು ಜನರಲ್ಲಿ ಮೂಡಬೇಕು. ಈ ಕೆಲಸಗಳು ಈಗಾಗಲೇ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಹಾಗೂ ಜನರ ಮನಸ್ಥಿತಿಯ ಪರಸ್ಪರ ಸಹಯೋಗದಲ್ಲಿ ನಡೆಯಬೇಕು.


(ಪ್ರಸ್ತುತ ಲೇಖನ "ಪ್ರತಿಧ್ವನಿ" ಜಾಲತಾಣದಲ್ಲಿ ಪ್ರಕಟವಾಗಿದೆ)

- ಸ್ಕಂದ ಆಗುಂಬೆ

Sunday, 5 May 2019

ನೈತಿಕತೆಯಿಂದ ದೂರ ಸಾಗುತ್ತಿರುವ ಮಾಧ್ಯಮಗಳನ್ನು ಸರಿದಾರಿಗೆ ತರುವುದು ಹೇಗೆ?



ಕಾಲ ನಿಂತ ನೀರಲ್ಲ. ಪ್ರತಿಯೊಂದು ಕ್ಷೇತ್ರವೂ ಸದಾ ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಮುಂದೆ ಸಾಗುತ್ತದೆ. ಇದು ಸಹಜ ಮತ್ತು ಅನಿವಾರ್ಯ. ಪತ್ರಿಕೋದ್ಯಮ / ಪತ್ರಿಕಾ ರಂಗ ಕೂಡ ಇದಕ್ಕೆ ಹೊರತಲ್ಲ. ದಶಕಗಳ ಹಿಂದಿನ ಪತ್ರಿಕೋದ್ಯಮಕ್ಕೂ ಈಗಿನದ್ದಕ್ಕೂ ತುಲನೆ ಮಾಡಿದರೆ ಅಗಾಧ ವ್ಯತ್ಯಾಸವನ್ನು ನಿರಾಯಾಸವಾಗಿ ಗುರುತಿಸಬಹುದು.
ಹಿಂದೆ ಪತ್ರಕರ್ತರನ್ನ ಸಮಾಜ ಕಾಣುವ ಬಗೆ ವಿಭಿನ್ನವಾಗಿತ್ತು. ಪತ್ರಕರ್ತರೆಂದರೆ ಕಡಿಮೆ ಹಣ ಸಂಪಾದಿಸುವವರು / ಕಡಿಮೆ ಆದಾಯ ಗಳಿಸುವವರು ಎಂಬ ಕಾರಣಕ್ಕೆ ಅವರಿಗೆ ಹೆಣ್ಣು ಕೊಡಲೂ ಹಿಂದೆ ಮುಂದೆ ನೋಡುತ್ತಿದ್ದರಂತೆ ಮತ್ತು ಹಲವು ಪತ್ರಕರ್ತರು ಇವನ್ನೆಲ್ಲಾ ಅನುಭವಿಸಿದ್ದೂ ಸತ್ಯ. ಆದರೆ, ಅದೆಲ್ಲವನ್ನೂ ಹೊರತುಪಡಿಸಿ ಅಂದಿನ ಪತ್ರಕರ್ತರನ್ನು ಸಮಾಜ ಗೌರವ ಪೂರ್ವಕವಾಗಿ, ನಂಬಿಕಸ್ಥರನ್ನಾಗಿ ಕಾಣುತ್ತಿದ್ದ ಬಗೆ ಗಮನಿಸಿದರೆ ಬಹುತೇಕ ಪತ್ರಕರ್ತರು ಹಣದ ವಿಚಾರದಲ್ಲಿ ಬಡವರಾಗಿದ್ದರೂ, ನೈತಿಕತೆ ಅಥವಾ ವ್ಯಕ್ತಿತ್ವದ ವಿಚಾರದಲ್ಲಿ ಶ್ರೀಮಂತರಾಗಿದ್ದರು ಮತ್ತು ಪತ್ರಿಕೋದ್ಯಮ ಕ್ಷೇತ್ರದ ಘನತೆ, ಗಾಂಭೀರ್ಯವನ್ನು ಪ್ರಜ್ಞಾವಂತಿಕೆಯಿಂದ ಉಳಿಸಿಕೊಂಡು ಬಂದಿದ್ದರು ಎನ್ನಬಹುದು. ಆದರೆ, ಕಾಲಚಕ್ರ ಪತ್ರಕರ್ತರಿಗೆ ವಿನಾಯಿತಿ ನೀಡಬೇಕಲ್ಲಾ? ಬದಲಾವಣೆಯ ಸುಳಿಗೆ ಸಿಕ್ಕ ಪತ್ರಿಕೋದ್ಯಮ ಬೇರೆ ಯಾವ ಕ್ಷೇತ್ರಗಳಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದಿದೆ. ನೋಡನೋಡುತ್ತಲೇ ಉದ್ಯಮವಾಗಿ ಬೆಳೆದು ನಿಂತು, ಪತ್ರಕರ್ತರೂ ಇತರೆ ಕ್ಷೇತ್ರದ ಉದ್ಯೋಗಿಗಳಂತೆ ಹೆಚ್ಚೆಚ್ಚು ಸಂಬಳ ಪಡೆಯುವ ಕಾಲ ಬಂದಿದೆ. ಆದರೆ, ಒಂದನ್ನು ಪಡೆಯಲು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬಂತೆ ನೈತಿಕತೆಯ ವಿಚಾರದಲ್ಲಿ ಪತ್ರಿಕೋದ್ಯಮ, ಪತ್ರಕರ್ತ ಬಡವರಾಗುವಂತಹ ಸ್ಥಿತಿ ಕೂಡ ನಿರ್ಮಾಣವಾಗಿರುವುದು ಕಟು ಸತ್ಯ. ಇಂದಿನ ಬಹುತೇಕ ಮಾಧ್ಯಮಗಳಿಗೆ ಉದ್ಯಮಿಗಳು ಹಾಗೂ ರಾಜಕಾರಣಿಗಳೇ ಹೂಡಿಕೆದಾರರಾಗಿರುವುದರಿಂದ ಹೆಚ್ಚಿನ ಪತ್ರಕರ್ತರು ಅವರ ಕೈಗೊಂಬೆಯಾಗಿ ವರ್ತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೊತೆಗೆ ಪತ್ರಿಕೋದ್ಯಮ ಲಾಭದಾಯಕ ಉದ್ಯಮವಾಗಿ ಪರಿವರ್ತನೆ ಹೊಂದಿರುವುದರಿಂದ ಪತ್ರಕರ್ತರು ಅನೇಕ ಸಂದರ್ಭಗಳಲ್ಲಿ ಜಾಣ ಕುರುಡರಾಗಬೇಕಾದ ಸಂದಿಗ್ಧತೆ ಎದುರಾಗಿದೆ.

ಇವತ್ತಿನ ಕಾಲಘಟ್ಟದಲ್ಲಿ, ಕನ್ನಡ ಪತ್ರಿಕೋದ್ಯಮ ಕ್ಷೇತ್ರದತ್ತಲೇ ಕಣ್ಣು ಹಾಯಿಸುವುದಾದರೆ ಖುಷಿ ಹಾಗೂ ಸಿಕ್ಕ ಖುಷಿಯಷ್ಟನ್ನೂ ನುಂಗಬಲ್ಲ ಬೇಸರದ ವಿಚಾರ ಎರಡೂ ಒಂದರ ಹಿಂದೊಂದು ನಿಂತಿರುವುದು ಗೋಚರಿಸುತ್ತದೆ. ಕನ್ನಡ ಮಾಧ್ಯಮ ಕ್ಷೇತ್ರ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ಮನೋರಂಜನಾ ಕ್ಷೇತ್ರವನ್ನು ಪಕ್ಕಕ್ಕಿಟ್ಟು ಬರೀ ಸುದ್ದಿ ಮಾಧ್ಯಮಗಳನ್ನೇ ಕೇಂದ್ರೀಕರಿಸಿಕೊಂಡು ಲೆಕ್ಕ ಹಾಕಿದರೂ ಕನ್ನಡದಲ್ಲಿ ಸರಿಸುಮಾರು ಹದಿನೈದು ಸುದ್ದಿ ವಾಹಿನಿಗಳು ಮತ್ತು ಹತ್ತು ದಿನಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಅಂತೆಯೇ ಕೆಲವು ಮಾಧ್ಯಮಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜೀವ ತಳೆದು, ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಸ್ಥಗಿತಗೊಂಡ ಉದಾಹರಣೆಗಳೂ ಇವೆ.
ದಶಕಗಳ ಹಿಂದೆ ಬೆರಳೆಣಿಕೆಯಷ್ಟು ಮಾಧ್ಯಮಗಳಿದ್ದ ಕಾಲದಲ್ಲಿ ಜನರು ಪತ್ರಕರ್ತರನ್ನು ಕಾಣುತ್ತಿದ್ದ ರೀತಿಗೂ‌ ಮತ್ತು ಅಣಬೆಗಳಂತೆ ಮಾಧ್ಯಮಗಳ ಸಂಖ್ಯೆ ಏರಿದಂತೆ ಪತ್ರಕರ್ತರೆಡೆಗಿನ ದೃಷ್ಟಿಕೋನ ಬದಲಾದ ಬಗೆಗೂ ಅವಿನಾಭಾವ ಸಂಬಂಧವಿದೆ. ಹಾಗೆ ನೋಡಿದರೆ ಹಿಂದೆ ಕೆಲವೇ ಕೆಲವು ಮಾಧ್ಯಮಗಳಿದ್ದ ಕಾಲದಲ್ಲಿ ಸಮಾಜದ ಅಕ್ರಮಗಳನ್ನು ಅವುಗಳು ಹೊರಗೆಳೆಯುತ್ತಿದ್ದ ಪರಿ ಹಾಗೂ ಜನರ ಮನಸ್ಸಿನಲ್ಲಿ ಪತ್ರಕರ್ತರು ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂದು ಹುಟ್ಟಿದ ನಂಬಿಕೆ ಇಂದು ದುಪ್ಪಟ್ಟಾಗಬೇಕಿತ್ತು. ಮಾರುಕಟ್ಟೆಯ ಎಲ್ಲಾ ಪೈಪೋಟಿಗಳಾಚೆಗೂ ಮಾಧ್ಯಮಗಳು ಹೊಸ ಕ್ರಾಂತಿಯೊಂದನ್ನು ಮೂಡಿಸಬೇಕಿತ್ತು. ಆದರೆ, ಸಿದ್ಧ ಮಾದರಿಯ ಹಿಂದೆ ಬಿದ್ದ ಸುದ್ದಿ ವಾಹಿನಿಗಳು ಪತ್ರಕರ್ತರು ಹಾಗೂ ಜನರ ನಡುವೆ ಇದ್ದ ನಂಬಿಕೆಯ ಕೊಂಡಿಯನ್ನು ಕಿತ್ತು ಹಾಕಿದವೇ ವಿನಃ ಯಾವ ಹೊಸತನಕ್ಕೂ, ಯಾವ ಕ್ರಾಂತಿಗೂ ಸಾಕ್ಷಿಯಾಗಲಿಲ್ಲ ಎಂಬುದು ಬೇಸರದ ಸಂಗತಿ.

ಮಾಧ್ಯಮಗಳ ಅದರಲ್ಲೂ ಸುದ್ದಿ ವಾಹಿನಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದಂತೆ ಚಿತ್ರ ವಿಚಿತ್ರ ಪರಿಕಲ್ಪನೆಗಳು ಹುಟ್ಟಿಕೊಂಡು, ಸುದ್ದಿ ಸಂಸ್ಕೃತಿ ಸಂಪೂರ್ಣ ಬದಲಾಗಿದ್ದು ನಿಸ್ಸಂದೇಹ ಸಂಗತಿ. ಟಿಆರ್‌ಪಿ ಎಂಬ ಅಂಕಗಳಿಕೆ ಹಾಗೂ ತಮ್ಮ ಅಸ್ತಿತ್ವಕ್ಕಾಗಿ ವಾಹಿನಿಗಳು ಪೈಪೋಟಿಗೆ ಬಿದ್ದ ಮೇಲೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉಂಟಾದ ಬದಲಾವಣೆಗಳೆಲ್ಲವೂ ಜನರಿಗೆ ರೇಜಿಗೆ ಹುಟ್ಟಿಸುವಂತವೇ. ಸುದ್ದಿ ವಾಹಿನಿಗಳ ಕರಿನೆರಳು ಯಾವಮಟ್ಟಿಗೆ ಕನ್ನಡ ಪತ್ರಿಕೋದ್ಯಮದ ಮೇಲೆ ಪ್ರಭಾವ ಬೀರಿತೆಂದರೆ ಜನರ ಅಭಿರುಚಿ ಬದಲಾಗುವುದರೊಂದಿಗೆ, ಮುದ್ರಣ ಮಾಧ್ಯಮಗಳ ಭಾಷಾ ಸಂಸ್ಕೃತಿಯೂ ಬದಲಾಗಿ ಗಂಭೀರ ಪದಬಳಕೆಯೊಂದಿಗೆ ಗುರುತಿಸಿಕೊಂಡಿದ್ದ ಪತ್ರಿಕಾ ಭಾಷೆ, ಕ್ರಿಯಾತ್ಮಕತೆ ಅಥವಾ ಜನರನ್ನು ಆಕರ್ಷಿಸುವ ನೆಪದಲ್ಲಿ ಪೀತ ಪತ್ರಿಕೋದ್ಯಮ ಭಾಷೆಯ ಆಸುಪಾಸಿಗೆ ಬಂದು ನಿಲ್ಲುವಂತಾಯಿತು. ಸುದ್ದಿ ವಾಹಿನಿಗಳ ಆಗಮನ ಪತ್ರಕರ್ತರ ಸಂಖ್ಯೆಯನ್ನು ವೃದ್ಧಿಸಿತೇ ವಿನಃ ಗುಣಮಟ್ಟದ ಅಭಿವೃದ್ಧಿಯಲ್ಲಿ ಅದರದ್ದು ಶೂನ್ಯ ಕೊಡುಗೆ ಎಂದು ಹೇಳಲು ಯಾವ ಅನುಮಾನವೂ ಇಲ್ಲ.

ಯಾವಾಗ ಮಾಧ್ಯಮಗಳು ಜನರ ಬಾಯಿಗೆ, ಬೈಗುಳಕ್ಕೆ ತುತ್ತಾಗಲು ಆರಂಭವಾದವೋ ಅಂದು ಪತ್ರಿಕೋದ್ಯಮದ ಘನತೆ ಹಾಗೂ ಗಾಂಭೀರ್ಯತೆಗೆ ಮೊದಲ ಕೊಡಲಿ ಏಟು ಬಿದ್ದಿತು. ಮಾಧ್ಯಮಗಳು, ಪತ್ರಕರ್ತರು ಪ್ರಶ್ನಾತೀತರಲ್ಲ ಎಂಬ ಮಾತು ಹುಟ್ಟಲು ಕಾರಣವೇ ಕ್ಷೇತ್ರದಲ್ಲಾದ ಕಲ್ಮಶ. ಪತ್ರಕರ್ತರು ತಮ್ಮ ವೈಯಕ್ತಿಕ, ರಾಜಕೀಯ ಹಾಗೂ ಸೈದ್ಧಾಂತಿಕ ಚಿಂತನೆಗಳನ್ನು ತಮ್ಮ ವೃತ್ತಿಯಲ್ಲಿ ಬೆರೆಸಲು ಆರಂಭಿಸಿದಾಗಿನಿಂದ ಮಾಧ್ಯಮಗಳಿಗೆ ಹಣೆಪಟ್ಟಿ ಕಟ್ಟುವ ಸಂಪ್ರದಾಯವೂ ಆರಂಭವಾಯಿತು. ಇವೆಲ್ಲವೂ ಪತ್ರಿಕಾ ರಂಗದ ವಿಶ್ವಾಸಾರ್ಹತೆಗೆ ಮಾರಕವಾಗಲು ಕಾರಣವಾದ ಆರಂಭಿಕ ಹೆಜ್ಜೆಗಳು.

ಇತ್ತೀಚಿನ ಕೆಲ ತಾಜಾ ಉದಾಹರಣೆಗಳನ್ನೇ ಗಮನಿಸುವುದಾದರೆ ಕನ್ನಡ ಪತ್ರಿಕೋದ್ಯಮ ಯಾವ ಮಟ್ಟದಲ್ಲಿದೆ ಎಂಬುದನ್ನು ಊಹಿಸಬಹುದು. ಈಗ ಕೆಲವು ದಿನಗಳ ಹಿಂದೆ ಕನ್ನಡದ ಹೆಸರಾಂತ ಮಾಧ್ಯಮಗಳ ಕೆಲ ಪತ್ರಕರ್ತರು ಹಣದ ಹಿಂದೆ ಬಿದ್ದು ಸಮಾಜದ ಮುಂದೆ ನೈತಿಕವಾಗಿ ಬೆತ್ತಲಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕನ್ನಡದ ಮತ್ತೊಂದು ಸುದ್ದಿ ವಾಹಿನಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ವೃತ್ತಿಪರ ಪತ್ರಕರ್ತರೇ ಕಟ್ಟಿದ ವಾಹಿನಿ, ಭರವಸೆಯ ಬೆಳಕು ಎಂಬ ಅಡಿಬರಹದೊಂದಿಗೆ ಆರಂಭವಾದ ವಾಹಿನಿ ತನ್ನ ವೈಯಕ್ತಿಕ ದ್ವೇಷ ಸಾಧನೆಗಾಗಿ ವ್ಯಕ್ತಿಯೊಬ್ಬರ ವಿರುದ್ಧ ತಿರುಗಿ ಬಿದ್ದಿದೆ. ಪ್ರತಿ ಘಟನೆಗೂ ಬೇರೆ ಬೇರೆ ಆಯಾಮಗಳಿರುತ್ತವೆ ಎಂಬುದು ಸತ್ಯವಾದರೂ ಕಳೆದ ಮೂರ್ನಾಲ್ಕು ದಿನಗಳ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾಧ್ಯಮವೊಂದು ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದವರ ಧ್ವನಿಯನ್ನು ತಗ್ಗಿಸಲು ಸತತ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ದುರಾದೃಷ್ಟವಶಾತ್ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದನ್ನು ಸಹಿಸಿಕೊಳ್ಳದ ವಾಹಿನಿ ಕಳೆದ ಕೆಲವು ತಿಂಗಳಿಂದಲೂ ಒಂದು ಪಕ್ಷದ ಪರ ಒಲವು ತೋರಿಸಿಕೊಂಡು, ಅನೇಕ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡಿದೆ ಎಂಬುದೂ ಗಮನಾರ್ಹ ಸಂಗತಿ. ವಾಸ್ತವ ಹೀಗಿರುವಾಗ ತನ್ನನ್ನು ಪ್ರಶ್ನಿಸಿದವರು ಸರಿಯಿಲ್ಲ ಎಂದು ದನಿಯೆತ್ತುವ ನೈತಿಕತೆ ಇರಲು ಹೇಗೆ ಸಾಧ್ಯ? ನಿಷ್ಠುರತೆಯೊಂದಿಗೆ ಗುರುತಿಸಿಕೊಳ್ಳಬೇಕಾದ ಮಾಧ್ಯಮ ವ್ಯಕ್ತಿ ಅಥವಾ ಪಕ್ಷ ನಿಷ್ಠೆಯೊಂದಿಗೆ ಗುರುತಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಹೂಡಿಕೆದಾರರ ಕೈಗೊಂಬೆಯಾಗಿ ಪತ್ರಕರ್ತ ಕುಣಿಯಲು ಆರಂಭಿಸಿದರೆ ಅದು ಕೇವಲ ಆ ಸಂಸ್ಥೆಯ ಸೋಲಲ್ಲ ಬದಲಾಗಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯ ಸೋಲು. ಇಂತಹ ಸಂಸ್ಕೃತಿಗಳಿಗೆ ಪೂರ್ಣ ವಿರಾಮ ಬೀಳದ ಹೊರತು ಪತ್ರಿಕೋದ್ಯಮ ಮತ್ತು ಪತ್ರಕರ್ತರೆಡೆಗಿನ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವುದೂ ಕಷ್ಟ ಸಾಧ್ಯ. ಅಂತೆಯೇ, ಜನಸಾಮಾನ್ಯರೂ ಕೂಡ ಯಾವುದೇ ಒಂದು ವಿಚಾರವನ್ನು ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೇ ವೇದಿಕೆಯಲ್ಲಾಗಲಿ ಹಂಚಿಕೊಳ್ಳುವ ಮುನ್ನ ಅದತ ಸತ್ಯಾಸತ್ಯತೆಯನ್ನು ವಿಮರ್ಶಿಸುವಷ್ಟು ವ್ಯವಧಾನ ತೋರಿಸುವುದೂ ಅತ್ಯಗತ್ಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಒಟ್ಟಿನಲ್ಲಿ ಮಾಧ್ಯಮಗಳು ಹಂತ ಹಂತವಾಗಿ ಸುದ್ದಿ ಸಂಸ್ಕೃತಿಯನ್ನು ಕಲುಷಿತಗೊಳಿಸಿದ ಫಲವಾಗಿ ಪ್ರಬುದ್ಧ ಮಾಧ್ಯಮ ಹಾಗೂ ಪ್ರಬುದ್ಧ ಓದುಗ ಇಬ್ಬರನ್ನೂ ಕಳೆದುಕೊಂಡಂತಾಗಿದೆ ಎಂಬುದು ವಿಷಾದನೀಯ. ಇದನ್ನು ಬದಲಾಯಿಸಬೇಕೆಂದರೆ ಪತ್ರಕರ್ತ ಅಥವಾ ಓದುಗ ಅಥವಾ ಇಬ್ಬರೂ ಒಂದಾಗಿ ಹೆಜ್ಜೆ ಇಡಲೇಬೇಕಿದೆ. ನಿರಂತರ ಬದಲಾವಣೆಯ ಹಾದಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಮುಂದಿನ ಬದಲಾವಣೆಗಳು ಸಕಾರಾತ್ಮಕ ಹಾದಿಯತ್ತಲೇ ಹೊರಳುವಂತೆ ನಿಗಾ ವಹಿಸಬೇಕಿದೆ.


ಕೇವಲ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಕೇಳಿದ ಅಥವಾ ನೋಡಿದ ಅಲ್ಪಸ್ವಲ್ಪ ಅನುಭವಗಳೊಂದಿಗೆ ಹೀಗೆಲ್ಲಾ ಬರೆಯುವಾಗ ನನ್ನಲ್ಲಿ ಮೂಡುತ್ತಿದ್ದ ಅನುಮಾನವೆಂದರೆ ಇದನ್ನು ಓದಿದ ಅನುಭವೀ ಪತ್ರಕರ್ತರ ಪ್ರತಿಕ್ರಿಯೆ ಹೇಗಿರಬಹುದೆಂದು.
ನನಗನ್ನಿಸುವ ಹಾಗೆ ಮುಖ್ಯ ಹಾಗೂ ಸಹಜ ಪ್ರತಿಕ್ರಿಯೆ ಎಂದರೆ ವಾಸ್ತವವೇ ಬೇರೆ ಕಲ್ಪನೆಯೇ ಬೇರೆ ಎಂಬುದು. ದುರಂತವೆಂದರೆ ಇಂದು ಯಾರೇ ನಿಷ್ಠುರವಾಗಿ ಯೋಚಿಸಲು ಪ್ರಯತ್ನಿಸಿದರೂ ಅದನ್ನು ಅಲ್ಲಗಳೆಯುವ ಹಾಗೂ ಅದು ಏಕೆ ಅಸಾಧ್ಯವೆಂಬ ಸಂಗತಿಗಳನ್ನು ವಿವರಿಸುವವರು ಸಿಗುತ್ತಾರೆಯೇ ವಿನಃ ಈಗಿರುವ ಅಡೆತಡೆಗಳನ್ನೆಲ್ಲಾ ದಾಟಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕುವ ಮಾತುಗಳನ್ನಾಡುವವರು ಸಿಗುವುದು ವಿರಳ. ಇವೆಲ್ಲದರ ಅರಿವಿದ್ದೂ ಕಲ್ಪನೆಗಳಿಲ್ಲದೇ ಹೊಸತನ್ನು ಸಾಧಿಸುವುದು ಅಸಾಧ್ಯ ಎಂಬ ಸಮಾಧಾನದೊಂದಿಗೆ ನನ್ನ ಯೋಚನೆಗಳನ್ನು ಇಲ್ಲಿ ಹರವಿಟ್ಟಿದ್ದೇನೆ.

(ಪ್ರಸ್ತುತ ಲೇಖನ 'ಪ್ರತಿಧ್ವನಿ' ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ)

- ಸ್ಕಂದ ಆಗುಂಬೆ.

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...