ಭವ್ಯ ಕನಸೊಂದಕ್ಕೆ ಬುನಾದಿ ಹಾಕಿದ ಘಳಿಗೆ, ಅದೆಷ್ಟೋ ಜನ್ಮಗಳಿಂದ ಬರಡಾಗಿ ಹೋಗಿದ್ದ ಆತ್ಮದಲ್ಲಿ ಪ್ರೀತಿಯ ಒರೆತ. ತೀರಾ ಸನಿಹದಿಂದ ಗುರಾಯಿಸಿದವಳ ವಯಸ್ಸು ನನಗಿಂತ ಕಡಿಮೆ ಎಂದು ತಿಳಿದಾಗ ವರ್ಷದ ಅಷ್ಟೂ ಹಬ್ಬಗಳ ಸಾಮೂಹಿಕ ಆಚರಣೆ!! ಅವಳನ್ನು ಕಂಡ ಮೊದಲ ಕ್ಷಣವಿನ್ನೂ ಹಸಿರಾಗಿದೆ, ಎಳೆ ಮುಂಗುರುಳು, ಓರೆ ಬೈತಲೆ, ಕಡುಗಪ್ಪು ಕಾಡಿಗೆ, ಚುಕ್ಕಿ ಬೊಟ್ಟು, ಜೋತುಬಿದ್ದ ಕಿವಿಯೋಲೆ, ಖಾಲಿ ಮೂಗು!! ತೀರಾ ಮೊದಲ ನೋಟದಲ್ಲೇ ಕಣ್ಣಿಗೆ ಬಿದ್ದ ಸಂಗತಿಗಳೆಲ್ಲಾ ಮನದಲ್ಲಿ ಅಚ್ಚಾಗಿ, ಜೀವನದ ಅಷ್ಟೂ ರಾತ್ರಿಗಳಿಗೆ ಸಾಕಾಗುವಷ್ಟು ಕನಸು ಬಿಡುಗಡೆಯಾಗಲು.. ಮೊದಲ ಪ್ರೇಮ ಮೊಳಕೆಯೊಡೆದಿತ್ತು!!
ಒಮ್ಮುಖದ ಪ್ರೀತಿ ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ, ಹುಡುಗಿಯನ್ನು ಪರಿಚಯಿಸಿಕೊಳ್ಳುವುದರಿಂದ ಹಿಡಿದು ಪ್ರೇಮ ನಿವೇದನೆ ಮಾಡಿಕೊಳ್ಳುವ ತನಕ ಅಕ್ಷರಶಃ ತ್ರಿಶಂಕು ಸ್ಥಿತಿ!! ಈ ವಿಚಾರದಲ್ಲಿ ನಾನಂತೂ ಹೈರಾಣಾಗಿದ್ದೆ, ಆಕೆಯ ಪೂರ್ವಾಪರಗಳನ್ನೆಲ್ಲಾ ತಿಳಿಯಲು ರಹಸ್ಯ ಕಾರ್ಯಾಚರಣೆಯನ್ನೇ ನಡೆಸಿ, ಅವಳ ದೋಸ್ತಿಯ ಮೂಲಕ ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆಯುವಷ್ಟರಲ್ಲಿ ಒಂದು ಶತಮಾನವೇ ಉರುಳಿದಂಥಾ ಅನುಭವ! ಕುಂಟುನೆಪವಿಟ್ಟುಕೊಂಡು ಮೊದಲ ಬಾರಿಗೆ ಕರೆ ಮಾಡಿದಾಗ ಅವಳೇ ಕರೆ ಸ್ವೀಕರಿಸಿದ್ದು ನನ್ನ ಪೂರ್ವಜರ ಪುಣ್ಯ! ಆಗಿನ್ನೂ ಸ್ಮಾರ್ಟ್ಫೋನ್ ಕೈಗೆ ಸಿಕ್ಕಿರದ ಕಾರಣ ನೋಕಿಯಾ ಕೀಪ್ಯಾಡ್ ಮೊಬೈಲಿನ ಅಷ್ಟೂ ಬಟನ್ನುಗಳನ್ನು ಪಟಪಟನೆ ಒತ್ತಿ ಮೆಸೇಜು ವಿನಿಮಯ ಮಾಡಿಕೊಳ್ಳುವಷ್ಟರಲ್ಲಿ ಪರಿಚಯ ಸ್ನೇಹವಾಗಿ ಪರಿವರ್ತನೆಯಾಗಿತ್ತು. ಅದೆಷ್ಟೇ ಮಾತನಾಡಿದರೂ ಪ್ರೇಮ ನಿವೇದನೆಯ ಕನಸು ಮಾತ್ರ ನನಸಾಗಿರಲಿಲ್ಲ. ಅದ್ಯಾವ ಜನ್ಮದ ಪುಣ್ಯವೋ? ಏನೋ? ಮನದ ತೊಳಲಾಟಗಳನ್ನೆಲ್ಲಾ ಹೊರಹಾಕಲಾಗದೆ ಒದ್ದಾಡುತ್ತಾ ಕುಳಿತಿದ್ದವನಿಗೆ ಹಾಸ್ಟೆಲಿನ ರೂಮಿನಲ್ಲಿದ್ದ ತುಕ್ಕು ಫ್ಯಾನಿನ ಕೆಳಗೆ ಜ್ಞಾನೋದಯವಾಗಿ ಪ್ರೇಮಪತ್ರವೊಂದು ಮೂಡಿತ್ತು. ಪತ್ರವೇನೋ ಬರೆದುಬಿಟ್ಟೆ ಅವಳಿಗೆ ತಲುಪಿಸುವುದು ಹೇಗೆ ಎಂಬ ಪ್ರಶ್ನೆ ಬಂದಾಗ ಮತ್ತದೇ ಮೌನ! ಬರೋಬ್ಬರಿ ನಾಲ್ಕೈದು ತಿಂಗಳ ಕಾಲ ಕತ್ತಲಲ್ಲೇ ಕುಳಿತ ಪತ್ರ ಕೊನೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದರೂ, ಅಷ್ಟರಲ್ಲಾಗಲೇ ಇದ್ದ ಚೂರುಪಾರು ಧೈರ್ಯವನ್ನೆಲ್ಲಾ ಒಟ್ಟುಹಾಕಿ ಪ್ರೇಮ ನಿವೇದನೆ ಮಾಡಿಕೊಂಡು ಒಪ್ಪಿಗೆಯೂ ಅಲ್ಲ, ತಿರಸ್ಕೃತವೂ ಅಲ್ಲ ಎಂಬ ಅತಂತ್ರ ಸ್ಥಿತಿಗೆ ತಲುಪಿ ಕಂಗಾಲಾಗಿದ್ದೆ. ಪ್ರಕಟವಾದ ಪ್ರೇಮಪತ್ರವನ್ನು ಓದಿ ನಾಚಿದ ಹುಡುಗಿ ಚೆನ್ನಾಗಿದೆ ಎಂಬ ಒಂದು ಪದವನ್ನು ಬಿಟ್ಟು ಮತ್ತೇನೂ ಹೇಳದಿದ್ದಾಗ ಎದೆಯೊಳಗೆ ಮೂರನೇ ಮಹಾಯುದ್ಧ!
ಹಾಗೂ ಹೀಗೂ ಪ್ರೇಮಪತ್ರ ಬರೆಯುವುದೇ ಸಲೀಸೆನ್ನಿಸಿ ಒಂದೆರಡು ಪ್ರೇಮಪತ್ರಗಳು ಪತ್ರಿಕೆಯಲ್ಲಿ ಪ್ರಕಟವಾಗುವಷ್ಟರಲ್ಲಿ ಪಿಯುಸಿ ಮುಗಿದಿತ್ತು, ಗಣಿತದ ಅತ್ಯಂತ ಕಠಿಣವೆನಿಸುವ ಸಮೀಕರಣಗಳನ್ನೆಲ್ಲಾ ಒದ್ದಾಡಿ ಅರ್ಥೈಸಿಕೊಂಡ ನನಗೆ, ಅವಳು ಮಾತ್ರ ಸವಾಲಾಗಿಯೇ ಉಳಿದು, ಹಲವು ಭಗೀರಥ ಪ್ರಯತ್ನಗಳು ನಿರಂತರವಾಗಿ ನಡೆದರೂ ಸಿಕ್ಕಿದ್ದು ಮಾತ್ರ ಭಾರತೀಯರೇ ಕಂಡು ಹಿಡಿದ ಅತೀ ದೊಡ್ಡ ಶೂನ್ಯ! ಅದೇನಾದರೂ ಸೈ ಮೊದಲ ಪ್ರೀತಿಯಲ್ಲೇ ಪಾಸಾಗಬೇಕೆಂಬ ಶಪಥ ತೊಟ್ಟು, ಮತ್ತೆ ಮತ್ತೆ ಪ್ರಯತ್ನ ಮಾಡುವಷ್ಟರಲ್ಲಿ ಈ ಲೇಖನ ಬರೆದು ಮುಗಿಸುತ್ತಿದ್ದೇನೆ…!
ಮೂರೂವರೆ ವರ್ಷಗಳ ಸುದೀರ್ಘಾವಧಿಯಲ್ಲಿ ಅದೇನೇನೋ ಬದಲಾವಣೆಯಾಯಿತು, ಅವಳ ಖಾಲಿ ಮೂಗಿಗೆ ನತ್ತು ಬಂತು, ನನಗೂ ಗಡ್ಡ, ಮೀಸೆ ಬಂತು ಆದರೆ ನನ್ನ ಪ್ರೇಮಕಥೆ ಮಾತ್ರ ಇನ್ನೂ ಸರ್ಕಾರಿ ಕಚೇರಿಯಲ್ಲಿ ಬಿದ್ದಿರುವ ಅರ್ಜಿಯಂತೆ ಅತಂತ್ರವಾಗಿಯೇ ಇದೆ! ಆದರೂ ಅದರಲ್ಲೊಂದು ಖುಷಿಯಿದೆ, ಯಾಕೆಂದರೆ ಅದು ಮೊದಲ ಪ್ರೀತಿ.
- ಸ್ಕಂದ ಆಗುಂಬೆ
(ಮೂಲಪ್ರತಿ)
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುರವಣಿಯಲ್ಲಿ ಪ್ರಕಟವಾಗಿದೆ.


