ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.
ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆದೆ, ಬಿಕ್ಕಿ ಬಿಕ್ಕಿ ಅತ್ತೆ.. ಊಹ್ಞೂಂ.. ಅವಳ ಮೌನ ಎಳ್ಳಷ್ಟೂ ಕರಗಲಿಲ್ಲ ಬದಲಾಗಿ ಇನ್ನೂ ಗಾಢವಾಗುತ್ತಾ ಹೋಯಿತು.. ಕಾರ್ಮೋಡ ಕವಿದ ಕಗ್ಗತ್ತಲ ಅಮಾವಾಸ್ಯೆಯ ರಾತ್ರಿಯಂತೆ ದಟ್ಟವಾಯಿತು.
ನಾನೋ ಛಲ ಬಿಡದ ಹಠವಾದಿ, ಅವಳೋ ಬರೀ ಮೌನಿ.
ಮತ್ತೆ ಶುರುವಾಯಿತು ಯುದ್ಧ ಮಾತಿಗೂ, ಮೌನಕ್ಕೂ. ಈ ಬಾರಿ ನನ್ನದು ಕವಿತೆಗಳ ಬಾಣ.. ಅವಳಂದವನು ವರ್ಣಿಸಿದೆ, ಅವಳ ಮೌನವನ್ನು ಚಿತ್ರಿಸಿದೆ, ಕೊರೆದೆ, ಕೆತ್ತಿದೆ, ಪುಟಗಟ್ಟಲೆ ಬರೆದೆ. ಬರೆದದ್ದನ್ನೆಲ್ಲಾ ಅವಳಿಗೊಪ್ಪಿಸಿದೆ, ಅವಳ ಕಂಗಳು ಕವಿತೆಯ ಮೇಲೆ ಓಡಾಡಲು ನನಗೆ ಒಳಗೊಳಗೇ ಖುಷಿ.. ಪ್ರಾಸಗಳ ಹುಡುಕಿ ನನಗೆ ತ್ರಾಸವಾಯಿತೇ ಹೊರತು ಅವಳ ಮೌನ ಕರಗಲಿಲ್ಲ, ಸಾಸಿವೆಯಷ್ಟೂ ಕಿರಿದಾಗಲಿಲ್ಲ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಲಾವಿದನಾದೆ, ಬಣ್ಣಗಳೊಂದಿಗೆ ಯುದ್ಧಕ್ಕೆ ಹೊರಟೆ, ಅವಳಂದವನು ಚಿತ್ರಿಸಿದೆ, ಅವಳ ರೂಪವನ್ನು ಯಥಾವತ್ತು ಪುಟಕ್ಕಿಳಿಸಿದೆ, ಅವಳ ಮೌನಕ್ಕೊಂದು ಆಕಾರ ಕೊಟ್ಟೆ, ಗೀಚಿದೆ, ಬಣ್ಣಗಳನ್ನೆಲ್ಲಾ ಒಟ್ಟು ಸೇರಿಸಿ ಬಿಳಿ ಹಾಳೆಯ ಮೇಲೆ ಸುರಿದೆ, ವರ್ಣ ಚಿತ್ತಾರವ ಮೂಡಿಸಿದೆ, ಬಣ್ಣಗಳೊಂದಿಗೆ ಗುದ್ದಾಡಿದೆ, ಕೈಗೆಲ್ಲಾ ಬಣ್ಣಗಳ ಮೆತ್ತಿಕೊಂಡೆ, ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಅವಳ ಪಾದಕ್ಕೆ ಅರ್ಪಿಸಿದೆ. ನಿಶ್ಚಲವಾಗಿ ಕುಳಿತವಳು ಈಗಲಾದರೂ ಅಲುಗಾಡಲೆಂದು.. ಊಹ್ಞೂಂ ಮತ್ತೆ ಸೋತಿದ್ದೆ, ಅವಳ ಕಂಗಳು ಚಲಿಸಿದವೇ ಹೊರತು ಮೌನವಲ್ಲ.. ಇನ್ನು ಹೋರಾಡಲು ಶಕ್ತಿ ಉಳಿದಿರಲಿಲ್ಲ, ನಿಂತಲ್ಲೇ ಕುಸಿದು ಕುಳಿತೆ, ಕೊನೆಗೂ ಅವಳ ಮೌನಕ್ಕೆ ಶರಣಾಗಿ ಮಾತಿಗೆ ಪೂರ್ಣವಿರಾಮವನ್ನಿಟ್ಟೆ. ಅವಳ ಕಂಗಳನ್ನೇ ದಿಟ್ಟಿಸಿದೆ, ಆಗಿದ್ದಾಗಲಿ ಎಂದು ಅವಳ ತೊಡೆಯ ಮೇಲೆ ತಲೆಯೂರಿ ಮಲಗಿಬಿಟ್ಟೆ. ಅವಳು ಪ್ರತಿಕ್ರಿಯಿಸಲಿಲ್ಲ.
ಎಷ್ಟು ಹೊತ್ತು ಕಳೆದಿತ್ತೋ ಗೊತ್ತಿಲ್ಲ, ನಿದ್ರೆಗೆ ಜಾರಿದ್ದೆ. ಹಣೆಯ ಮೇಲೆ ಬೆಚ್ಚಗಿನ ಭಾವವೊಂದು ಹರಿದಂತಾಗಲು ಮಗ್ಗಲು ಬದಲಿಸಿದೆ. ಹನಿಯೊಂದು ಕೆನ್ನೆ ಸವರಿತು, ಕಣ್ಬಿಟ್ಟೆ.. ಮತ್ತೊಂದು ಹನಿ ಬೀಳಲು ಫಕ್ಕನೆ ಎದ್ದು ಕುಳಿತೆ, ಅವಳ ಕಣ್ಣಂಚಿನಲಿ ಹನಿಯೊಂದು ಹೊರಬರಲು ತವಕಿಸುತ್ತಿತ್ತು, ಒರೆಸಲು ಕೈ ಚಾಚಿದೆ ಜಾರಿ ಬಿತ್ತು. ಧಾರಾಕಾರವಾಗಿ ಅತ್ತಳು, ಏನೂ ತೋಚದೆ ಮೂಕನಾದೆ. ಅಲ್ಲೇ ಬಿದ್ದಿದ್ದ ಬಿಳಿ ಹಾಳೆಯೊಂದನ್ನು ಎತ್ತಿಕೊಂಡು ಏನನ್ನೋ ಗೀಚಿ ಕೈಗಿತ್ತಳು, ಹಾಳೆಯನ್ನೇ ದಿಟ್ಟಿಸಿದೆ.. ಅದರಲ್ಲಿ ಬರೆದಿತ್ತು - "ನಾನೊಬ್ಬಳು ಮಾತು ಬಾರದ ಮೂಗಿ, ನೀ ಎಷ್ಟೇ ಕೂಗಿದರೂ ನಾ ಬರಿಯ ಮೌನಿ.." ತಲೆಯೆತ್ತಿದೆ, ಅವಳ ಕಣ್ಣಂಚು ಮಾತನಾಡುತ್ತಿತ್ತು, ಅವಳ ಅಸಹಾಯಕತೆ ಎಲ್ಲವನ್ನೂ ವಿವರಿಸಿತ್ತು. ನನ್ನ ಮಾತುಗಳು ನಾಲಗೆಯಲ್ಲೇ ಕರಗಿ ಹೋದವು,
ಈಗ ನಾನು ಮೂಗನಾಗಿದ್ದೆ, ಮಾತು ಬರುವ ಮೂಗನಾಗಿದ್ದೆ..
ಅವಳು ಮಾತಾದಳು.. ನಾನು ಮೌನಿಯಾದೆ. ಮಾತು ಮೌನವಾಯಿತು, ಮೌನ ಮಾತಾಯಿತು.. ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗಿತ್ತು, ಭಾವನೆಯ ಹೊರತು..
- ಸ್ಕಂದ ಆಗುಂಬೆ
ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ ಪ್ರಕಟವಾಗಿದೆ..
(ಮೂಲಪ್ರತಿ)

ಕಡೆಯಲ್ಲಿ ನಮ್ಮನ್ನು ಮೌನಿಯಾಗಿಸಿ ಬಿಟ್ರಿ👍👌👌👌..
ReplyDeleteಥ್ಯಾಂಕ್ಯೂ 😍😍
Delete