"ಅಬ್ಬಾ, ಅಂತೂ ಇಂತೂ ಸೆಕೆಂಡ್ ಪಿ.ಯು. ಎಕ್ಸಾಮ್ ಹತ್ತಿರ ಬಂತು. ಅದೊಂದು ಮುಗಿದು
ಬಿಟ್ರೆ ದೊಡ್ಡ ಪೀಡೆ ತೊಲಗಿದ ಹಾಗೆ ಆಗುತ್ತೆ." ಹೀಗಂತ ನಾನು ಸೈನ್ಸ್ ಎಂಬ ಪಿಶಾಚಿಗೆ ಬೈತಾ
ಇದ್ರೆ ಅತ್ತ ಕಡೆ ಇದೇ ಮಾತು ನಿನ್ನ ಬಾಯಲ್ಲೂ ಬಂದಿರಬಹುದು ಅಲ್ವಾ? ಪರವಾಗಿಲ್ಲ
ನೀ ಹಾಗೆ ಹೇಳಿದರೂ ನನಗೆ ಬೇಜಾರಿಲ್ಲ. ನಾ ಕೊಡೋ ಕಾಟಕ್ಕೆ ನೀನು ಆ ರೇಂಜಿನಲ್ಲಿ ಬಯ್ಯೋದು ಆಶ್ಚರ್ಯವೇನಲ್ಲ
ಬಿಡು. ಇಷ್ಟು ದಿನ ಕಾಲೇಜಿನಲ್ಲಿ ಬೇಡ ಅಂದ್ರೂ ನಿನಗೆ ಎದುರಾಗುತ್ತಿದ್ದ ನಾನು ಇನ್ಮುಂದೆ ಹಾಗೆಲ್ಲ
ನಿನ್ನೆದುರು ಬರೋದಿಲ್ಲ. ಕಾರಿಡಾರ್ನಲ್ಲಿ ನಿಂತಾಗ ನಿನ್ನ ಕಡೆ ನೋಡ್ತಿದ್ದ ಎರಡು ಕಣ್ಗಳು, ಎದುರು ಸಿಕ್ಕ
ಕೂಡಲೇ ದರ್ಶನ ನೀಡುತ್ತಿದ್ದ ಮೂವತ್ತೊಂದೂವರೆ ಹಲ್ಲುಗಳು.. ಎಲ್ಲವಕ್ಕೂ ಸದ್ಯದಲ್ಲೇ ವರ್ಗಾವಣೆ ಆಗಲಿದೆ.
ಉರುಳುವ ಕಾಲಚಕ್ರದ ಜೊತೆಗೆ ಹೆಜ್ಜೆ ಹಾಕಬೇಕಾಗಿರುವುದು ಅನಿವಾರ್ಯ.
ಇದು ಗೊತ್ತಿದ್ದರೂ ಇನ್ಮುಂದೆ ನೀನು ದಿನಾಲೂ ಸಿಗುವುದಿಲ್ಲ ಅನ್ನೋದನ್ನ ನೆನೆಸಿಕೊಂಡರೆ ಮನಸ್ಸು
ಮೂಕವಾಗಿ ಬಿಡುತ್ತದೆ. ನಮ್ಮಿಬ್ಬರದ್ದು ತೀರಾ ಇತ್ತೀಚಿನ ಪರಿಚಯ. ಆರು ತಿಂಗಳ ಹಿಂದೆ ನೀನ್ಯಾರು
ಅಂತ ನನಗೆ ಗೊತ್ತೇ ಇರಲಿಲ್ಲ. ನಾನ್ಯಾರು ಅಂತ ನಿನಗೆ ಗೊತ್ತಿತ್ತೋ? ಗೊತ್ತಿರಲಿಲ್ವೋ? ಅಂತ ನನ್ಗೆ
ಗೊತ್ತಿಲ್ಲ. ನಿನ್ನನ್ನ ನಾನ್ಯಾಕೆ ಇಷ್ಟಪಟ್ಟೆ ಅನ್ನೋದು ನಂಗೊತ್ತು. ಆದ್ರೆ, ನಮ್ಮಿಬ್ಬರ
ಮಧ್ಯೆ ಇಷ್ಟೊಂದು ಗಾಢ ಸ್ನೇಹ ಹೇಗೆ ಬೆಳೆಯಿತೆಂದು ಸತ್ಯವಾಗ್ಲೂ ನಂಗೊತ್ತಿಲ್ಲ. ಈ ಗೊತ್ತು - ಗೊತ್ತಿಲ್ಲಗಳ
ನಡುವೆ ಆರು ತಿಂಗಳು ಹೇಗೆ ಉರುಳಿ ಹೋದವು ಅಂತಾನೂ ಗೊತ್ತಾಗ್ಲಿಲ್ಲ.
ಹೌದು ಕಣೇ ಹುಡ್ಗಿ, ಜೀವನವೇ ಹಾಗೆ
ನಾವು ಬಯಸದೇ ಇದ್ರೂ ಕೆಲವೊಂದನ್ನು ತಾನಾಗಿಯೇ ಕೊಡುತ್ತದೆ. ನೀನು ಕೂಡ ನನ್ನ ಪಾಲಿಗೆ ಬಯಸದೇ ಬಂದ
ಭಾಗ್ಯ ಯೋಜನೆಯಲ್ಲೇ ಸಿಕ್ಕಿದವಳು! ಹುಡುಗಿಯರೆಂದರೆ ಮಾರು ದೂರ ಸರಿಯುತ್ತಿದ್ದ ನಾನು ಅದ್ಯಾವ ರೀತಿಯಲ್ಲಿ
ನಿನಗೆ ಹತ್ತಿರವಾದೆ ಎನ್ನೋದು ನನ್ನ ಪಾಲಿಗೆ ಸದಾ ಕಾಡುವ ಪ್ರಶ್ನೆಯಾಗಿಯೇ ಉಳಿದಿದೆ. ನೀ ನನ್ನ
ನೋಡಿ ಮುಗುಳ್ನಗೆ ಚೆಲ್ಲಿದಾಗ, ಮುಂಗುರುಳನ್ನು ಸರಿಸುತ್ತ ಕಳ್ಳನೋಟ ಬೀರಿದಾಗ, ಸುಖಾಸುಮ್ಮನೆ
ಮಾತನಾಡಿಸಿದಾಗ ಮನಸ್ಸು ಒಳಗೊಳಗೇ ಖುಷಿಪಡ್ತಾ ಇತ್ತು. ನಿನ್ನೆದುರು ಮಂಡಿಯೂರಿ ನನ್ನನ್ನು ಪ್ರೀತಿಸ್ತೀಯಾ?ಎಂದು ಕೇಳ್ಬೇಕು
ಅಂತ ಹೃದಯ ಚಡಪಡಿಸುತ್ತಿತ್ತು. ನಿನ್ನ ಕೈಗೊಂದು ಕೆಂಗುಲಾಬಿ ಕೊಟ್ಟು ಐ ಲವ್ ಯೂ "______"..ಅಂತ
ಹೇಳ್ಬೇಕು ಅನ್ನಿಸ್ತಿತ್ತು. ಆದ್ರೆ, ಇವನ್ನೆಲ್ಲ ಹೇಳಿದ್ರೆ ನೀನು ಏನೆಂದುಕೊಳ್ತೀಯೋ? ಏನೋ? ಎಂಬ ಭಯದಿಂದ
ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಾಗಿಬಿಡ್ತಿದ್ದೆ. ನಿನ್ನ ಜೊತೆ ಕಳೆದ ಪ್ರತಿಕ್ಷಣವೂ ನನ್ನ ಜೀವನದ
ಅಮೃತ ಘಳಿಗೆ. ನೀ ಪಟಪಟನೆ ಅರಳು ಹುರಿದಂತೆ ಮಾತನಾಡ್ತ ಇದ್ರೆ ನಗು ನನ್ನ ತುಟಿಯ ಮೇಲೆ ಸದ್ದಿಲ್ಲದೆ
ಬಂದು ನಿಂತು ಬಿಡುತ್ತದೆ. "ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ.." ಅಂತ ಸೋನು ನಿಗಮ್
ಕಿವಿಯೊಳಗೇ ಬಂದು ಹಾಡಿದ ಹಾಗೆ ಆಗುತ್ತೆ.
ನಿಂಗೊಂದು ವಿಷ್ಯ ಗೊತ್ತಾ? ನಾನು ಮೂರು
ವರ್ಷಗಳ ಕಾಲ ಹಾಸ್ಟೆಲ್ ವಾಸ ಮಾಡಿದ್ದರೂ ಅಪ್ಪಿತಪ್ಪಿಯೂ ಬೇರೆಯವರ ಎಂಜಲು ತಿಂದವನಲ್ಲ. ಮನೆಯಲ್ಲೂ
ಕೂಡ ಪುಟ್ಟ ತಂಗಿಯ ಹೊರತಾಗಿ ಬೇರೆಯವರ ಎಂಜಲು ತಿನ್ನೋ ಆಸಾಮಿ ನಾನಲ್ಲ. ಹಾಗಿರುವಾಗ ಅವತ್ತು ನೀನು
ಕೈ ಚಾಚಿ ತಿಂಡಿ ಡಬ್ಬಿಯನ್ನು ನನ್ನೆದುರು ಹಿಡಿದಾಗ ಒಂದು ಕ್ಷಣ ಏನು ಮಾಡೋದು ಅಂತಾನೆ ಗೊತ್ತಾಗ್ಲಿಲ್ಲ, ಹೇಗೆ ತಿನ್ನಲಿ? ಎಂದು ಯೋಚಿಸುವಷ್ಟರಲ್ಲಾಗಲೇ
ಡಬ್ಬಿಯಲ್ಲಿದ್ದ ತಿಂಡಿ ನನ್ನ ಹೊಟ್ಟೆ ಸೇರಿತ್ತು. ದೇವ್ರಾಣೆಗೂ ಒಂದು ಮಾತು ಹೇಳ್ತೀನಿ- ನಿನ್ನ ಹೊರತಾಗಿ
ಬೇರೆ ಯಾರಾದರೂ ಹಾಗೆ ಕೊಟ್ಟಿದ್ದರೆ ನಿಜವಾಗ್ಲೂ ತಿನ್ನುತ್ತಿರಲಿಲ್ಲ, ಹಾಗಂತ ನಾ ಇಷ್ಟಪಡೋ
ಹುಡುಗಿಯ ಎಂಜಲು ಅನ್ನೋ ಕಾರಣದಿಂದಲೂ ತಿಂದಿದ್ದಲ್ಲ. ನಿನ್ನ ನಿಷ್ಕಲ್ಮಶ ಮನಸ್ಸನ್ನು ನೋಡಿ ಅದನ್ನು
ಎಂಜಲು ಅಂತ ಹೇಳಿದ್ರೆ ನನಗೆ ಪಾಪ ತಟ್ಟುತ್ತೆ ಅಂತ ತಿಂದುಬಿಟ್ಟೆ ಮಾರಾಯ್ತಿ.
ಹೋಗ್ಲಿ ಬಿಡು, ಹಳೆ ಕಥೆ ಎಲ್ಲ ಈಗ್ಯಾಕೆ ಬೇಕು? ಅಂದಹಾಗೆ ನಿನ್ನ
ಮುಖ ನೋಡದೆ ಬರೋಬ್ಬರಿ ಒಂದು ತಿಂಗಳಾಯ್ತು. ಈ ದೀರ್ಘಾವಧಿಯಲ್ಲಿ ನಿನ್ನಲ್ಲಿ ಏನೇನು ಬದಲಾವಣೆ ಆಗಿರಬಹುದು
ಅಂತ ಮನಸ್ಸು ಯೋಚಿಸ್ತಾ ಇದೆ. ಕೆಲವು ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಅಬ್ಬಬ್ಬಾ ಅಂದ್ರೆ ತಿಂದೂ
ತಿಂದು ನೀನು ಒಂದೈವತ್ತು ಗ್ರಾಂ ಜಾಸ್ತಿ ಆಗಿರಬಹುದು ಅಥವಾ ಒಂದು ಮಿಲಿಮೀಟರ್ ಹೆಚ್ಚು ಎತ್ತರ ಆಗಿರಬಹುದು.
ಅದನ್ನ ಬಿಟ್ರೆ ನಿನ್ನ ಚೆಂದದ ಬಿಳಿ ಹಲ್ಲುಗಳು ಲೈಟಾಗಿ ಹಳದಿ ಬಣ್ಣಕ್ಕೆ ತಿರುಗಿರಬಹುದು. ಇಲ್ಲಾಂದ್ರೆ
ನಿನ್ನ ಉಗುರುಗಳಿಗೆ ಬೇರೆ ಬಣ್ಣ ಪ್ರಾಪ್ತಿಯಾಗಿರಬಹುದು. ಇನ್ನೂ ಜಾಸ್ತಿ ಅಂದ್ರೆ ನಿನ್ನ ಮುಂಗುರುಳು
ಒಂದೆರಡು ಸೆಂಟಿಮೀಟರ್ ಉದ್ದ ಆಗಿರಬಹುದು ಅಥವಾ ನಿನ್ನ ಗಲ್ಲದ ಮೇಲೆ ಒಂದು ಪಿಂಪಲ್ ಸೃಷ್ಟಿಯಾಗಿರಬಹುದು.
ಇದರ ಹೊರತಾಗಿ ಇನ್ನೇನೂ ಬದಲಾಗಿರಲಿಕ್ಕಿಲ್ಲ ಅಂತ ತಿಳಿದು ಬಂದಿದೆ. ಇದಕ್ಕಿಂತ ಮಹತ್ತರವಾದ ಬದಲಾವಣೆಗಳೇನಾದರೂ
ಆಗಿದ್ದರೆ ದಯಮಾಡಿ ಆದಷ್ಟು ಬೇಗ ತಿಳಿಸು. ಕಣ್ಣೊಳಗೆ ಸೇವ್ ಆಗಿರೋ ನಿನ್ನ ಫೋಟೋವನ್ನು ಎಡಿಟ್
ಮಾಡಿ ಮಿದುಳಿಗೆ ಅಪ್ಡೇಟ್ ಮಾಡ್ಬೇಕು.
ಹೂಂ..ಇನ್ನೂ ಜಾಸ್ತಿ ಕೊರೆಯೋದಿಲ್ಲ ಬಿಡು. ಇವೆಲ್ಲವನ್ನೂ ಓದಿ ಈಗಾಗಲೇ
ನಿನ್ನ ಪಿತ್ತ ನೆತ್ತಿಗೇರಿ ಮುಖ ಕೆಂಪಾಗಿದ್ದರೆ ಬೈಗುಳಗಳನ್ನೆಲ್ಲ ಲಿಸ್ಟ್ ಮಾಡಿಕೊಂಡು ಜಸ್ಟ್ ಒಂದು
ಮಿಸ್ ಕಾಲ್ ಕೊಡು ಅಥವಾ ಇದನ್ನೆಲ್ಲ ಓದಿ ನನ್ನ ಪ್ರೀತಿಯನ್ನು ಒಪ್ಪಿಕೊಳ್ಬೇಕು ಅನ್ನಿಸಿದ್ರೆ...
ಆಗಲೂ ಒಂದು ಮಿಸ್ ಕಾಲ್ ಕೊಡು ಮಾರಾಯ್ತಿ ಅಷ್ಟೇ ಸಾಕು! ನಾನೇ ಕಾಲ್ ಮಾಡಿ ಉಳಿದದ್ದನ್ನೆಲ್ಲ ಕೇಳ್ತೀನಿ.
ಇಷ್ಟೊಂದೆಲ್ಲ ಓದಿದ ಮೇಲೂ ಸೈಲೆಂಟಾಗಿದ್ರೆ "ಮೌನಂ ಸಮ್ಮತಿ ಲಕ್ಷಣಂ" ಎಂದು ತಿಳಿದು
ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಎಚ್ಚರಿಕೆ!
ಇಂತಿ,
ನೀ ಕದ್ದಿರುವ ಹೃದಯದ ಒಡೆಯ
ಕೆ.ಎನ್.ಸ್ಕಂದ, ಆಗುಂಬೆ.
ಈ ಪ್ರೇಮಪತ್ರ ವಿಜಯವಾಣಿ ದಿನಪತ್ರಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾಗಿದೆ..
(ಮೂಲಪ್ರತಿ)

ವ್ಹಾ ವ್ಹಾ...!
ReplyDeleteಸೂಪರ್..
ಮುದ್ದಾಗಿದೆ ಅಣ್ಣಾ..
😍