Sunday, 18 September 2016
Friday, 3 June 2016
ಕಟ್ಟುಮಸ್ತಾದ ಮೈಕಟ್ಟುಳ್ಳ ಸುಂದರ ಚಿತ್ರ
ಜೀವನದ ಜಂಜಾಟದಲ್ಲಿ ಭಾವನೆ, ಸಂಬಂಧಗಳಿಗಿಂತ ಮುಖ್ಯವಾಗುವ ಕೆಲಸ, ಅಷ್ಟೋ
ಇಷ್ಟೋ ದುಡ್ಡು ಕೊಟ್ಟು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ತಮ್ಮ ಜವಾಬ್ಧಾರಿ ಮುಗಿಯಿತೆಂದು
ಕೈ ತೊಳೆದುಕೊಳ್ಳುವ ಮಕ್ಕಳು, ಮಾನವೀಯತೆಯೇ ಕಾಣೆಯಾಗಿದೆ ಎಂದು ನಿಟ್ಟುಸಿರು ಬಿಡುವ ವೇಳೆಯಲ್ಲಿ ಕಾಣುವ
ನಿಸ್ವಾರ್ಥ ಕೈಗಳು ಇವೆಲ್ಲವೂ ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯ ನಮಗೆ ಕಾಣಸಿಗುತ್ತವೆ, ಹೀಗೆ ಸಂಬಂಧಗಳು
ಮಹತ್ವ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಂಬಂಧಗಳ ಪ್ರಾಮುಖ್ಯತೆಯನ್ನು ಕಥೆಯ ರೂಪದಲ್ಲಿ ತೆರೆದಿಡುತ್ತಾ
ನೋಡುಗನಿಗೆ ಅದನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು"
ಚಿತ್ರದ ನಿರ್ದೇಶಕ ಹೇಮಂತ್ ಯಶಸ್ವಿಯಾಗಿದ್ದಾರೆ.
ಮರೆಗುಳಿ (Alzheimers) ಖಾಯಿಲೆಗೆ ತುತ್ತಾಗಿರುವ ಅಪ್ಪ ವೆಂಕೋಬ ರಾವ್,
ಅಪ್ಪನಿಗಿಂತ ಕೆಲಸವೇ ಮುಖ್ಯವೆಂದು ಆ ಖಾಯಿಲೆ ಬಂದಿರುವವರನ್ನು ನೋಡಿಕೊಳ್ಳುವುದಕ್ಕಾಗಿಯೇ ಇರುವ ಒಂದು
ಸಂಸ್ಥೆಗೆ ಅಪ್ಪನನ್ನು ಸೇರಿಸಿ ಹೊರಟು ಹೋಗುವ ಮಗ ಶಿವ, ಆತನಿಗೆ ಅಪ್ಪನ ಮೇಲೆ ಪ್ರೀತಿ - ಕಾಳಜಿ ಇಲ್ಲದಿದ್ದರೂ
ಆಕಸ್ಮಿಕವಾಗಿ ಅಪ್ಪ ಕಳೆದುಹೋದಾಗ ಅವರನ್ನು ಹುಡುಕಲು ಶುರುಮಾಡುತ್ತಾನೆ, ಹುಡುಕಾಟದಲ್ಲಿ ವೆಂಕೋಬರನ್ನು
ನೋಡಿಕೊಳ್ಳುತ್ತಿದ್ದ ಸಂಸ್ಥೆಯ ವೈದ್ಯೆ ಸಹನಾ ಅವನ ಜೊತೆಗೆ ಸೇರಿಕೊಳ್ಳುತ್ತಾರೆ, ಹುಡುಕಾಟದ ಸಂದರ್ಭದಲ್ಲಿ
ಬಿಚ್ಚಿಕೊಳ್ಳುವ ಹೊಸ ಹೊಸ ಕಥೆಗಳು ಅವನಿಗೇ ತಿಳಿಯದಂತೆ ಅಪ್ಪನ ಮೇಲೆ ಪ್ರೀತಿಯನ್ನು ಮೂಡಿಸುತ್ತದೆ.
ಇತ್ತ ದಾರಿ ತಪ್ಪಿಸಿಕೊಂಡು ಅಲೆದಾಡುವ ತಂದೆ ಯಾವುದೋ ಕೊಲೆಗಾರನೊಬ್ಬನ ಗಾಡಿ ಹತ್ತಿ ಕೂರುತ್ತಾನೆ,
ಆ ಸಂದರ್ಭದಲ್ಲಿ ನಡೆಯುವ ರಸ್ತೆ ಅಪಘಾತ, ಅಲ್ಲಿಗೆ ಬರುವ ಮೂರನೆ ವ್ಯಕ್ತಿ, ನಂತರ ಅವನ ಮನೆ ಸೇರುವ
ಕೊಲೆಗಾರರು ಮತ್ತು ವೆಂಕೋಬ ರಾವ್ ಹೀಗೆ ಕಥೆ ಎಳೆ ಎಳೆಯಾಗಿ ತೆರೆದುಕೊಳುತ್ತಾ ಹೋಗುತ್ತದೆ. ಮರೆಗುಳಿ
ವ್ಯಕ್ತಿಯ ಪಾತ್ರದಲ್ಲಿ ಅನಂತ್ ನಾಗ್ ಮಿಂಚಿದ್ದಾರೆ, ಸತ್ತು ಹೋದ ಹೆಂಡತಿಯ ಬಗ್ಗೆ ಪದೇ ಪದೇ ಕೇಳುತ್ತಾ,
ಮುಗ್ಧ ಮಗುವಿನಂತೆ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತಾ ಪ್ರೇಕ್ಷಕರನ್ನು ಕಾಡುತ್ತಾರೆ. ಮೊದಮೊದಲು
ಬೇಜವಾಬ್ದಾರಿಯುತ ಮಗನಾಗಿ ಕಾಣಿಸಿಕೊಳ್ಳುವ ರಕ್ಷಿತ್ ಶೆಟ್ಟಿ ನಂತರ ತಂದೆಗಾಗಿ ಹಪಹಪಿಸುವ ಮಗನಾಗಿ
ನೋಡುಗರ ಮನ ಗೆಲ್ಲುತ್ತಾರೆ. ಭಾವನೆಗಳಿಗೆ ಬೆಲೆ ಕೊಡುವ ಹೆಣ್ಣಾಗಿ, ಜವಾಬ್ದಾರಿಯುತ ವೈದ್ಯೆಯಾಗಿ ಕಾಣಿಸಿಕೊಂಡಿರುವ ಶೃತಿ ಹರಿಹರನ್ ಇಷ್ಟವಾಗುತ್ತಾರೆ. ಹೆತ್ತವರ ಮಹತ್ವವನ್ನು ತಮ್ಮದೇ ಧಾಟಿಯಲ್ಲಿ
ಹೇಳುವ ದತ್ತಣ್ಣ, ದಾರಿ ತಪ್ಪಿಸಿಕೊಂಡು ಕೊಲೆಗಾರರ ಜೊತೆ ಬಂದು ಮನೆ ಸೇರುವ ವೆಂಕೋಬರನ್ನು ತಮ್ಮದೇ
ಮನೆಯ ಸದಸ್ಯನಂತೆ ನೋಡಿಕೊಳ್ಳುವ ಅಚ್ಯುತ್ ಪ್ರೇಕ್ಷಕನ ಮನದಲ್ಲಿ ಅಚ್ಚೊತ್ತುತ್ತಾರೆ. ಮನುಷ್ಯ ಎಷ್ಟೇ
ಕ್ರೂರಿಯಾದರೂ ಅವನೊಳಗೊಬ್ಬ ಸಾತ್ವಿಕ ವ್ಯಕ್ತಿ ಇದ್ದೇ ಇರುತ್ತಾನೆ, ಅನಿವಾರ್ಯತೆ ಅವನನ್ನು ಕೆಟ್ಟವನನ್ನಾಗಿಸುತ್ತದೆ
ಎಂದು ತೋರಿಸುವ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಸಿಷ್ಟ ಸಿಂಹ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸಂಭಾಷಣೆ ಕೇಳಲು ಹಿತವಾಗಿದೆ, ಹಿನ್ನೆಲೆ ಸಂಗೀತವೂ ಅತ್ಯದ್ಭುತವಾಗಿ ಮೂಡಿ ಬಂದಿದೆ,
ದ್ವಿತೀಯಾರ್ಧದಲ್ಲಿ ಕೆಲ ನಿಮಿಷಗಳ ಕಾಲ ಕಥೆ ತೆವಳಿಕೊಂಡು ಹೋಗುವಂತೆ ಭಾಸವಾಗುತ್ತದೆ ಹಾಗೂ ಛಾಯಾಗ್ರಹಣ
ಇನ್ನಷ್ಟು ಸುಂದರವಾಗಿ ಮೂಡಿ ಬಂದಿದ್ದರೆ ಸೊಗಸಾಗಿತ್ತು ಎನಿಸುತ್ತದೆ, ಇವೆರಡು ಅಂಶಗಳನ್ನು ಬದಿಗಿಟ್ಟರೆ
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಅತ್ಯದ್ಭುತ ಚಲನಚಿತ್ರ ಎಂಬುದರಲ್ಲಿ ಸಂದೇಹವಿಲ್ಲ, ಒಟ್ಟಿನಲ್ಲಿ ಕನ್ನಡ
ಚಿತ್ರರಂಗಕ್ಕೆ ಕಟ್ಟುಮಸ್ತಾದ ಚಿತ್ರವೊಂದು ಎಂಟ್ರಿ ಕೊಟ್ಟಿದೆ.
Friday, 8 April 2016
ಹಾರುವುದು ಅನಿವಾರ್ಯ ಕರ್ಮ ನಮಗೆ..!!
ಹಾಯ್ ಸ್ವೀಟು…
ಇಷ್ಟು ದಿನದ ಪರಿಚಯದಲ್ಲಿ ಎಲ್ಲೋ ಒಂದು ಸಾರಿ ಮಾತ್ರ ನಾ ನಿನ್ನನ್ನ ಹೀಗೆ ಕರ್ದಿರೋದು… ಮತ್ಯಾವತ್ತು ಹೀಗೆ ಕರ್ದಿರ್ಲಿಲ್ಲ, ಕರೀಬೇಕು ಅಂತ ಅನ್ನಿಸಿಯೂ ಇರಲಿಲ್ಲ, ಮುಂದೆ ಕರೆಯೋದೂ ಇಲ್ಲ, ಕಾರಣ ಗೊತ್ತಿಲ್ಲ. ಕೊನೇ ಸಾರಿ ಕೂಗ್ತಿದ್ದೀನಿ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕಿವಿಗೊಟ್ಟು ಕೇಳಿಬಿಡು, ಸ್ವೀಟೂ….
ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ, ನಿನ್ನಲ್ಲಿರೋ ಪ್ರೀತಿಗೆ ಪ್ರತಿಯಾಗಿ ನೀಡೋಕೆ ಪ್ರೀತಿಯೂ ಇಲ್ಲ. ನಾ ನಿನ್ನ ಜೀವನದಲ್ಲಿ ಬಂದ ಒಂದು ಪಾತ್ರ, ನೀ ಅಂದುಕೊಂಡಂತೆ ನಿನ್ನ ಜೀವನಕ್ಕೆ ಸೂತ್ರ ಅಲ್ಲ, ನಿನ್ನೆಡೆಗೆ ನನಗೆ ಸೆಳೆತವಿರುವುದು ನಿಜ ಆದರೆ ಅದು ಎಂದಿಗೂ ಪ್ರೀತಿಯಾಗಿ ಪರಿವರ್ತನೆ ಹೊಂದಲಾರದು, ಆದ್ದರಿಂದ ನನ್ನಿಂದ ಏನನ್ನೂ ಅಪೇಕ್ಷಿಸಬೇಡ.
ಇದನ್ನೆಲ್ಲ ಈಗ್ಯಾಕೆ ಹೇಳ್ತಿದ್ದೀನಿ ಅಂತ ಅರ್ಥ ಆಗ್ತಾ ಇಲ್ವಾ?? ಪರ್ವಾಗಿಲ್ಲ ಬಿಡು ನಿಧಾನಕ್ಕೆ ಅರ್ಥ ಆಗುತ್ತೆ, ಹೆಣ್ಣಿನ ಭಾವನೆಗಳೇ ಹಾಗೆ ಕೆಲವೊಮ್ಮೆ ಅವಳಿಗೇ ಅರ್ಥವಾಗುವುದಿಲ್ಲ.. ಅವಳ ತೊಳಲಾಟಗಳಿಗೆ ಕಾರಣವನ್ನೂ ಅವಳೇ ಹುಡುಕಿಕೊಳ್ಳಬೇಕು, ಪರಿಹಾರವನ್ನೂ ಅವಳೇ ಕಂಡುಕೊಳ್ಳಬೇಕು. ಇದನ್ನ ಅವಳಿಗೆ ಯಾರೂ ಕಲಿಸಬೇಕಾಗಿಲ್ಲ, ತಾನಾಗೇ ಕಲಿತು ಬಿಡ್ತಾಳೆ.. ಹೆಣ್ಣಿನ ಜೀವನ ನೀವಂದುಕೊಂಡಷ್ಟು ಸುಲಭವಲ್ಲ.. ನಿಮ್ಮ ಕಣ್ಣಿಗೆ ನಾವು ಆಕಾಶದಲ್ಲಿ ಸ್ವತಂತ್ರವಾಗಿ ಹಾರೋ ಗಿಣಿಗಳ ಥರ ಕಾಣ್ತೀವಿ ಆದ್ರೆ ನಾವು ಕೇವಲ ಗಿಣಿಗಳು ಅಷ್ಟೇ, ನೀವಂದುಕೊಂಡಂತೆ ಸ್ವತಂತ್ರ ಗಿಣಿಗಳಲ್ಲ, ಹಾರುವುದು ಅನಿವಾರ್ಯ ಆದ್ದರಿಂದ ಹಾರಾಡ್ತೀವಿ, ಎಂದೋ ಒಂದು ದಿನ ಪಂಜರದೊಳಗೆ ಸೆರೆಯಾಗಲೇಬೇಕು ಅನ್ನೋದು ಗೊತ್ತಿದ್ದರೂ ಅದೆಲ್ಲವನ್ನೂ ಮರೆತು ಹಾರ್ತೀವಿ.. ಗುರುಗುಟ್ಟಿಕೊಂಡು ನೋಡುವ ಗಿಡುಗಗಳಿಂದ ತಪ್ಪಿಸಿಕೊಳ್ಳೋಕೆ ಹಾರ್ತೀವಿ, ಕೆಲ ನಾಟಕಗಳನ್ನ ಮಾಡಿ ಮೋಸಗಾರ್ತಿ ಅನ್ನೋ ಪಟ್ಟವನ್ನೂ ಕಟ್ಟಿಕೊಳ್ತೀವಿ.. ಆದ್ರೂ ಅದ್ಯಾವುದಕ್ಕೂ ಲೆಕ್ಕಿಸದೇ ಮತ್ತೆ ರೆಕ್ಕೆ ಬಿಚ್ಚಿ ಹಾರ್ತೀವಿ ಯಾಕಂದ್ರೆ ಹಾರುವುದು ಅನಿವಾರ್ಯ ಕರ್ಮ ನಮಗೆ.
ನೀವೇನಿದ್ರೂ ಹೆಣ್ಣನ್ನು ವರ್ಣಿಸೋಕೆ ಮಾತ್ರ ಲಾಯಕ್ಕು, ಅರ್ಥ ಮಾಡಿಕೊಳ್ಳೋಕಲ್ಲ. ನಾವು ನಕ್ಕರೂ ಅದಕ್ಕೊಂದು ಅರ್ಥ ಕಲ್ಪಿಸಿಕೊಳ್ಳೋ ನೀವು, ನಿಮ್ ಜೊತೆ ಕ್ಲೋಸಾಗಿದ್ರೆ ಸಾಕು ಅದನ್ನೇ ಲವ್ವು ಅಂತ ತಿಳ್ಕೊತೀರಿ, ನೀವೇ ಏನೇನನ್ನೋ ಕಲ್ಪಿಸಿಕೊಂಡು ಬಿಡ್ತೀರಿ, ನಮ್ಮ ಪ್ರತಿ ನಡೆಗೂ ಒಂದೊಂದು ಅರ್ಥವನ್ನು ಸೃಷ್ಟಿ ಮಾಡಿಕೊಳ್ತೀರಿ, ಇಷ್ಟೆಲ್ಲಾ ಆದ್ರೂ ನಮ್ಮ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳೋ ಗೋಜಿಗೆ ಹೋಗೋದೇ ಇಲ್ಲ. ಕೊನೆಗೊಂದು ದಿನ ನಿಮ್ಮ ಕಲ್ಪನೆಗಳೆಲ್ಲ ಸುಳ್ಳು ಅಂತ ಗೊತ್ತಾದಾಗ ನಮ್ಮನ್ನ ಮನಸಾರೆ ಶಪಿಸಿ ಬಿಡ್ತೀರಿ.. ಅದೆಷ್ಟು ಶಾಪ ತಟ್ಟಿರುತ್ತೋ ನಮ್ ಜೀವಕ್ಕೆ ದೇವ್ರಿಗೇ ಗೊತ್ತು.
ಹ್ಞಾಂ.. ಇದನ್ನೆಲ್ಲಾ ಯಾಕೆ ಹೇಳ್ದೇ ಅಂತ ಈಗ್ಲಾದ್ರೂ ಅರ್ಥವಾಯ್ತಾ?? ಆಗಿಲ್ಲ ಅಂದ್ರೆ ಹೋಗಿ ತುಂಬೆ ಗಿಡಕ್ಕೆ ನೇಣು ಹಾಕ್ಕೋ.. ಇನ್ನೂ ಬಿಡಿಸಿ ಹೇಳೋಕೆ ನನ್ನಿಂದ ಸಾಧ್ಯವಿಲ್ಲ. ಹೆಚ್ಚಂದ್ರೆ ಇನ್ನೊಂದ್ ಮಾತ್ ಹೇಳ್ತೀನಿ - ನಾ ನಿನ್ನನ್ನ ಪ್ರೀತ್ಸೋದು ಅಮಾವಾಸ್ಯೆ ದಿನ ಚಂದ್ರ ಕಂಡಷ್ಟೇ ಸತ್ಯ. ಹಾಗಂತ ಜಾಸ್ತಿ ಫೀಲ್ ಮಾಡ್ಕೋಬೇಡ. ನಾ ನಿನ್ ಪ್ರೀತಿಯನ್ನ ಒಪ್ಕೊಂಡಿಲ್ಲ ಅಂದ್ರೆ ಏನಂತೆ?? ನಿಂಗೆ ನನಗಿಂತ ಒಳ್ಳೇ ಹುಡುಗಿ ಸಿಗ್ತಾಳೆ ಬಿಡೋ. ಮದ್ವೆಗೆ ನನ್ನ ಕರೀದೇ ಇದ್ರೂ ಪರವಾಗಿಲ್ಲ ಬಟ್ ನಿಂಗೆ ಐ ಮೀನ್ ನಿನ್ ಹೆಂಡ್ತಿಗೆ ಹೆಣ್ಣು ಮಗು ಹುಟ್ಟಿದ್ರೆ ಅಪ್ಪಿತಪ್ಪಿನೂ ನನ್ ಹೆಸ್ರು ಇಡ್ಬೇಡ, ತುಂಬಾ ಹಳೇ ಹೆಸ್ರು ಆಗೋಗುತ್ತೆ. ಅಂದ್ಹಾಗೆ ಅವತ್ತು ನಿಂಗೆ ಮೆಸೇಜ್ ಮಾಡಿ ಲವ್ವೆಲ್ಲ ನಂಗೆ ಸರಿ ಬರಲ್ಲ, ನಮ್ಮ ಮನೇಲಿ ಒಪ್ಪೋದಿಲ್ಲ ಅಂತ ಹೇಳಿದ್ನಲ್ಲಾ ಅದು ಕೇವಲ ನೆಪ ಮಾತ್ರ, ನೈಜ ಕಾರಣಗಳು ಬೇರೇನೇ ಇದೆ ಆದ್ರೆ ಅದೇನು ಅನ್ನೋದು ನಂಗೆ ಗೊತ್ತಿಲ್ಲ ಅದನ್ನ ಕೇಳಲೂ ಬೇಡ ಗೊತ್ತಾದರೂ ನಾ ಹೇಳೋದಿಲ್ಲ ಯಾಕಂದ್ರೆ ನಾನೊಬ್ಬಳು ಹೆಣ್ಣು.
ಇಂತಿ ನಿನ್ನ ಮಾಜಿ ಕನಸು
ಕೆ.ಎನ್.ಸ್ಕಂದ ಆಗುಂಬೆ.
ಈ ಲೇಖನವು ದಿ ನ್ಯೂ ಇಂಡಿಯನ್ ಟೈಮ್ಸ್ www.thenewindiantimes.com ನಲ್ಲಿ ಪ್ರಕಟವಾಗಿದೆ.
http://thenewindiantimes.com/index.php/2016/04/07/love-letter-in-kannada/
Friday, 18 December 2015
ಬಾರದ ಹುಡುಗಿಗೆ ಹಂಬಲಿಸಿದೆ ಮನ....
ಓ ದೇವರೇ..
ನಿನ್ನನ್ನ ಎಲ್ರೂ ತ್ರಿಕಾಲ ಜ್ಞಾನಿ ಅಂತಾರೆ!! ನೀ ಯಾವ ಸೀಮೆಯ ಜ್ಞಾನಿಯೋ?? ಇಷ್ಟ್ ದಿನ ಕೈ ಮುಗಿದು ಕಾಪಾಡು ತಂದೆ ಅಂತಿದ್ದ ಹುಡುಗ ಈಗ ಹೀಗ್ಯಾಕೆ ಮಾತಾಡ್ತಿದ್ದಾನೆ ಅನ್ನೋದು ನಿಂಗೆ ಗೊತ್ತಿರ್ಲೇಬೇಕು ಬಿಕಾಸ್ ಯೂ ಆರ್ ಎ ತ್ರಿಕಾಲ ಜ್ಞಾನಿ ನೋ? ಹೋಗೋಗು ಇನ್ಮುಂದೆ ನಾ ನಿನ್ ಮೇಲೆ ಯಾವತ್ತೂ ನಂಬ್ಕೆ ಇಡಲ್ಲ.
ಆ ಹುಡ್ಗಿ ನನ್ನನ್ನ ಯಾವತ್ತಿಗೂ ಪ್ರೀತ್ಸೋದಿಲ್ಲ ಅನ್ನೋದು ನಿಂಗೆ ಗೊತ್ತಿರ್ಲಿಲ್ವಾ? ಗೊತ್ತಿಲ್ಲ ಅನ್ಬೇಡಪ್ಪಾ, ನೀನು ತ್ರಿಕಾಲ ಜ್ಞಾನಿ! ಮುಂದೇನಾಗುತ್ತೆ ಅನ್ನೋದು ನಿಂಗೆ ಗೊತ್ತಿಲ್ದೇ ಇರುತ್ತಾ?? ಮೋಸ್ಟ್ಲಿ ನಿನಗೆ ಹುಡುಗರ ಮೇಲೆ ದ್ವೇಷ ಇದೆ ಅನ್ಸುತ್ತೆ ಅದ್ಕೆ ಹೆಚ್ಚಿನ ಹುಡುಗ್ರು ಲೈಫಲ್ಲಿ ಒಂದೊಂದು ಇತಿಹಾಸ ಇಡ್ತೀಯ!! ಅಲ್ಲಯ್ಯಾ ಚಿಕ್ಕಂದಿನಿಂದಲೂ ಅಜ್ಜ ಹೇಳ್ಕೊಟ್ಟ ಶ್ಲೋಕಗಳನ್ನ ಒಂದಿನಾನೂ ತಪ್ಪಿಸ್ದೆ ನಿಂಗೆ ಒಪ್ಸಿದ್ದಕ್ಕೆ ಇಂಥಾ ಕಾಣಿಕೆ ಕೊಡೋದಾ??
ಓಯ್ ನನ್ ಮಾತು ಕೇಳ್ಸ್ಕೊತ್ತಿದ್ದೀಯಾ? ಈಗ ನಾ ಕೇಳೋದಕ್ಕೆಲ್ಲಾ ಉತ್ರ ಕೊಡು. ಅವ್ಳನ್ನ ನನ್ ಜೀವ್ನಕ್ಕೆ ಯಾಕೆ ಪರಿಚಯ್ಸಿದ್ದು?? ಅದೂ ಸಾಲದು ಅನ್ನೋ ಹಾಗೆ ಅವ್ಳನ್ನ ತೀರಾ ಹತ್ರ ಮಾಡಿದ್ಯಾಕೆ?? ಊಹುಂ.. ಅದ್ಕೂ ಮೊದ್ಲು ಅವ್ಳ ಮೇಲೆ ನಂಗೆ ಪ್ರೀತಿ ಬೆಳೆಯೋ ಹಾಗೆ ಮಾಡಿದ್ಯಾಕೆ ಅಂತ ಹೇಳು. ಓಹ್.. ಮುಂದೆ ಮದ್ವೆ ಆಗೋ ಹುಡ್ಗೀಗೆ ಹೇಳೋಕೆ ಹಳೆ ಕಥೆ ಒಂದಿರ್ಲಿ ಅಂತಾನಾ? ನಿಂಗಿದು ಹೊಸತೇನಲ್ಲ ಬಿಡು ನನ್ ತರಾನೇ ಎಷ್ಟೋ ಹುಡ್ಗುರಿಗೆ ಹೀಗೆ ಮಾಡಿ ಮಜಾ ತಂಗೊಡಿದ್ದಿ ಅಲ್ವಾ? ನೀ ಮಾತ್ರ ಇಷ್ಟ ಪಟ್ಟೋರನ್ನೇ ಪಟಾಯಿಸಿಕೊಳ್ತೀಯಾ! ಒಂದೊಂದು ಸರಿ ಒಂದೊಂದ್ ಹೆಸ್ರು ಇಟ್ಕೊಂಡು ನಾಲ್ಕೈದು ಮದ್ವೆ ಆಗ್ತೀಯ ಬಟ್ ನಾವು ನಿಯತ್ತಾಗಿ ಒಬ್ರನ್ನೇ ಇಷ್ಟ ಪಟ್ರೂ ನಮ್ಗೆ ಮೋಸ ಮಾಡಿಸ್ತೀಯ. ನಮ್ ಮಠದಲ್ಲಿ ಹೇಗೂ ಸ್ವಾಮಿಗಳಿಲ್ಲ ಸೋ ಆ ಜಾಗಕ್ಕೆ ನನ್ನನ್ನ ಕೂರಿಸ್ಬೇಕು ಅಂತ ಸ್ಕೆಚ್ ಏನಾದ್ರೂ ಹಾಕಿದ್ದೀಯಾ?? ಹಂಗೆಲ್ಲಾ ಮಾಡಿದ್ ಗೊತ್ತಾದ್ರೆ ಸರಿ ಇರಲ್ಲ ನೋಡು. ಅದಿರ್ಲಿ ಯಾವಾಗ್ಲೂ ಹುಡುಗರೇ ಹುಡ್ಗೀರ ಭಾವನೆಗಳಿಗೆ ಬೆಲೆ ಕೊಡ್ಬೇಕಾ?? ನಮ್ಗೆ ಬೆಲೇನೇ ಇಲ್ವಾ? ಒಂದ್ ಕಣ್ಣಿಗೆ ಬೆಣ್ಣೆ ಒಂದ್ ಕಣ್ಣಿಗೆ ಸುಣ್ಣ ಇದೆಂಥಾ ನ್ಯಾಯ ಗುರೂ??
ಹೋಗ್ಲಿ ಬಿಡು ಫ್ಲೋ ಅಲ್ಲಿ ಏನೇನೋ ಹೇಳ್ಬಿಟ್ಟೆ ಬೇಜಾರ್ ಮಾಡ್ಕೊಬೇಡ, ಊಫಿ. ದೇವ್ರು.. ನಾಯಿ ಬಾಲಕ್ಕೆ ಏನ್ಮಾಡಿದ್ರೂ ಅದು ಡೊಂಕೇ ಕಣೋ ಅದ್ಕೆ ಹೇಳ್ತಿದೀನಿ ಕೇಳು ಅವ್ಳನ್ನ ಏನಾರ್ ಮಾಡಿ ಒಪ್ಸೋ.. ಪ್ಲೀಸ್ ಪ್ಲೀಸ್ ಪ್ಲೀಸ್… ಎಂಥೆಥಾ ಪವಾಡಗಳನ್ನ ಮಾಡ್ದೋನು ನೀನು ಅಂತಹದ್ದರಲ್ಲಿ ಈ ಕೆಲ್ಸ ಆಗಲ್ವ?? ಯೂ ಕ್ಯಾನ್ ಡು ಇಟ್ ದೇವ!! ಆಗಿದ್ದಾಗ್ಲಿ ನಿನ್ ಪವರ್ ತೋರ್ಸೇ ಬಿಡು. ಅಂದ್ಹಾಗೆ ಇದಕ್ಕೆ ಈಗ್ಲೇ ಉತ್ರ ಕೊಡು - ಬಾರದ ಹುಡುಗಿಗೆ ಹಂಬಲಿಸಿದೆ ಮನ.. ಬರುವಳೇನೋ ಒಂದು ದಿನ.. ಹುಡುಗಿಯು ಅರಿವಳೇನೋ ನನ್ನ ಮನ.
ಇಂತಿ ನಿನ್ ದೋಸ್ತಿ,
ಕೆ.ಎನ್.ಸ್ಕಂದ ಆಗುಂಬೆ.
(ಮೂಲಪ್ರತಿ)
ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.Tuesday, 1 December 2015
ನಂಬಲೇನಾ ನಿನ್ನಾ ನಗೆಯನ್ನಾ??
ಹುಡುಗೀ..
ಎಷ್ಟೋ ದಿನಗಳ
ನಂತರ ಮತ್ತೆ ಮನದಲ್ಲಿ ಮುಗುಳ್ನಗೆಯೊಂದು ಮೂಡಿದೆ. ಬರಗಾಲದಿಂದ ಕಾದುಹೋಗಿದ್ದ ಹೃದಯದಂಗಳ ನೆನಪುಗಳ
ಮಳೆಗೆ ಮೈಯೊಡ್ಡಿ ನೆನೆಯುತಿದೆ. ನಿನ್ನ ಮಾತು, ನಿನ್ನ ನಗು, ನಿನ್ನ ಕೋಪ ಎಲ್ಲವೂ ಮತ್ತೆ ಮನದ ಚಿತ್ರಮಂದಿರದಲ್ಲಿ
ಪ್ರದರ್ಶನಗೊಳ್ಳುತ್ತಿವೆ. ಇವಕ್ಕೆಲ್ಲಾ ಕಾರಣ ಆ ನಿನ್ನ ಒಂದೇ ಒಂದು ಕಣ್ಣೋಟ. ಅವತ್ತು ನೀನು ಮತ್ತೆ
ನಿನ್ ಫ್ರೆಂಡ್ಗಳು ನಾ ಬರೆದ ಲೆಟರ್ ಗಳನ್ನೆಲ್ಲಾ ಓದುತ್ತಿರಬೇಕಾದರೆ ನಿನ್ ಫ್ರೆಂಡೊಬ್ಬಳು ನನ್ನ
ಮುಖ ನೋಡಿ ಅಣ್ಣಾ.. ನಿಮ್ ಹುಡ್ಗಿ ಫೋಟೋ ತೋರ್ಸಿ ಅಂದಕೂಡಲೇ ನೀನು ಛಕ್ಕನೆ ನನ್ನ ಕಡೆ ತಿರುಗಿ ನಿನ್ನ
ಮಾಮೂಲೀ ಸ್ಟೈಲ್ ನಲ್ಲಿ ಗುರಾಯಿಸಿಕೊಂಡು ನೋಡಿ, ಒಂಥರಾ ಸ್ಮೈಲ್ ಬಿಸಾಕಿದ್ಯಲ್ಲಾ ಅದ್ರ ಜೊತೆಗೆ ಉರಿಯೋ
ಬೆಂಕಿಗೆ ತುಪ್ಪ ಸುರಿಯೋ ಥರದಲ್ಲಿ ಆಮೇಲೆ ನಂಗೆ ಕಾಲ್ ಮಾಡಿ ಮೊದಲಿನ ಥರಾನೇ ಕ್ಯೂಟ್ ಕ್ಯೂಟಾಗಿ ಮಾತಾಡ್ಕೊಂಡು,
"ನೀ ಬರೆದ ಲೆಟರ್ ಎಲ್ಲವೂ ಚೆನ್ನಾಗಿದೆ ನಂಗೆ ಇಷ್ಟ ಆಯ್ತು" ಅಂದ್ಯಲ್ಲಾ ಅದೇ ಇಷ್ಟಕ್ಕೆಲ್ಲಾ
ಮೂಲ ಕಾರಣ. ಅದ್ಯಾಕೋ ಗೊತ್ತಿಲ್ಲ ನೀ ಹಂಗೆ ನೋಡಿದಾಗಿನಿಂದ ನನ್ನ ಮನಸ್ಸು "ಅವ್ಳು ನಿನ್ನನ್ನ
ಲವ್ ಮಾಡ್ತವ್ಳೆ ಕಣೋ" ಅಂತ ಹೇಳೋಕೆ ಶುರು ಮಾಡಿದೆ. ಹೌದೋ? ಇಲ್ವೋ? ಅಂತ ನಿನ್ನನ್ನೇ ಕೇಳೋಣ
ಅಂತಂದ್ರೆ ಅದೇ ಮನಸ್ಸು ಅಡ್ಡಗಾಲು ಹಾಕ್ತಾ ಇದೆ. ಸೋ ನಂದೊಂಥರಾ ಒನ್ ಅಂಡ್ ಹಾಫ್ ವೇ ಲವ್ ಆಗೋಗಿದೆ.
ಅಂದಹಾಗೆ
ನಿನಗೆ ತಲೆ ಒಳಗೆ ಹುಳ ಬಿಡೋ ವಿದ್ಯೆ ಹೇಳಿಕೊಟ್ಟವ್ರು ಯಾರು ಮಾರಾಯ್ತಿ? ನಾನೊಬ್ಬನೇ ಇದ್ದಾಗ ಏಯ್..ಹೋಗೋ,
ಬಾರೋ ಅಂತ ಕರ್ಕೊಂಡು. ಯಾರಾದ್ರು ಬಂದ ತಕ್ಷಣ ಅಣ್ಣಾ ಅಂತ ರಾಗ ಎಳೀತೀಯಾ, ಸಾಲದ್ದಕ್ಕೆ ಸಂಜೆ ಹೊತ್ತಲ್ಲಿ
ಫೋನ್ ಮಾಡಿ ನಿನ್ ಲೆಟರ್ರು ಚೆನ್ನಾಗಿದೆ. ನಾ ನಿಂಗೆ ಏನೋ ಹೇಳ್ಬೇಕು ಅಂತ ಹೇಳಿ, ನಾ ಏನೇನೋ ಯೋಚ್ನೆ
ಮಾಡ್ಕೊಂಡು ಖುಷಿ ಪಡುವಷ್ಟರಲ್ಲಿ ಅಯ್ಯೋ ಈಗ ಮರ್ತೋಯ್ತು ಇನ್ನೊಂದಿನ ಹೇಳ್ತೀನಿ ಅಂತ ಫೋನ್ ಇಡ್ತೀಯಾ.
ಹಿಂಗೆಲ್ಲಾ ಮಾಡಿದ್ರೆ ನಾನ್ ಏನ್ ಅನ್ಕೋಬೇಕು?? ನಂಗೂ ಒಂದ್ ಮನಸ್ಸು ಅಂತ ಇದೆ ಕಣೇ.. ಸ್ವಲ್ಪ ಅರ್ಥ
ಮಾಡ್ಕೋ. ನೀನ್ ಅವತ್ತು ನಕ್ಕಿದ್ದನ್ನೇ ಗ್ರೀನ್ ಸಿಗ್ನಲ್ ಅನ್ಕೊಂಡು ಫ್ಯೂಚರ್ ಬಗ್ಗೆ ಕನಸು ಕಾಣೋಕೆ
ಆಲ್ರೆಡಿ ಶುರು ಮಾಡ್ಕೊಂಡಿದೀನಿ. ಒಂದುವೇಳೆ ನಾನಂದುಕೊಂಡಿರೋದು ಸುಳ್ಳು ಅಂತಾದ್ರೆ ತಡಮಾಡದೆ ಈ ಕೂಡಲೇ
ತಿಳಿಸಿಬಿಡು. ಯಾಕಂದ್ರೆ ಕನಸಿನ ಕೋಟೆಯನ್ನ ಕಟ್ಟಿದ ಮೇಲೆ ಕೆಡುಗುವುದು ಅಷ್ಟು ಸುಲಭವಲ್ಲ. ನಿನ್ನ
ನಗುವನ್ನೇ ನಂಬಿದ್ದೇನೆ. ನಗಿಸುವೆಯೋ? ಅಳಿಸುವೆಯೋ? ನಿನಗೆ ಬಿಟ್ಟಿದ್ದು.
ಇಂತಿ ನಿನ್ನನ್ನೇ ನಂಬಿರುವ.
ಕೆ.ಎನ್.ಸ್ಕಂದ
ಆಗುಂಬೆ.
(ಮೂಲಪ್ರತಿ)
ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.Tuesday, 20 October 2015
ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ...
ನನ್ನೊಲವೇ..
ಖಾಲಿತನ ಆವರಿಸಿದೆ, ಬರೆಯಲೆಂದು ಲೇಖನಿ ಹಿಡಿದರೆ ಪದಗಳೇ ಸಿಗುತ್ತಿಲ್ಲ, ಬಿಳಿ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗಳಿಂದಾಯ್ದ ಕೆಲ ನೆನಪುಗಳನ್ನು ಅಕ್ಷರ ರೂಪದಲ್ಲಿ ನಿನ್ನ ಮುಂದೆ ಹರವಿಡುತ್ತಿದ್ದೇನೆ ಒಮ್ಮೆ ಕಣ್ಣಾಯಿಸಿ ಬಿಡು....
ನೀನೇನು ನನ್ನ ಬಾಲ್ಯದ ಗೆಳತಿಯಲ್ಲ, ಹೃದಯದೊಳಗೆ ನಿನ್ನ ಪ್ರವೇಶವಾಗಿ ದ್ವಾದಶ ಮಾಸಗಳಾಯಿತಷ್ಟೇ, ಅಂದು ನೀ ನನ್ನ ಕಣ್ಣಿಗೆ ಕಾಣದೇ ಇದ್ದಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನು!! ನನ್ನ ಪಾಲಿಗೆ ಅದು ಮರೆಯಲಾಗದ ದಿನ, ಹೃದಯದೊಳಗೆ ಸಾವಿರ ಕನಸುಗಳು ಗರ್ಭತಳೆದ ದಿನ, ರಾತ್ರಿ ಬೀಳುತ್ತಿದ್ದ ತರಹೇವಾರಿ ಸ್ವಪ್ನಗಳಿಗೆ ಪೂರ್ಣವಿರಾಮವನ್ನಿಟ್ಟ ದಿನ.. ಅಂದಿನಿಂದ ಇಂದಿನವರೆಗೂ ನೀ ನನ್ನ ಕನಸಲ್ಲಿ ಬಾರದ ರಾತ್ರಿಯೇ ಇಲ್ಲ.. ನನ್ನ ಕನಸುಗಳನ್ನೆಲ್ಲ ನೀನೇ ಕೊಂಡುಕೊಂಡಿದ್ದಿಯೇನೋ ಎಂಬ ಅನುಮಾನ ಕಾಡುತ್ತಿದೆ, ಇವೆಲ್ಲಾ ಭಾವಗಳಿಗೀಗ ಭರ್ತಿ ಒಂದು ವರ್ಷ.
ನಿನ್ನನ್ನು ಮೊದಲ ಬಾರಿಗೆ ನೋಡಿದ ಮಧುರ ಕ್ಷಣ ನನ್ನ ಕಣ್ಣೆದುರಲ್ಲಿ ಇಂದಿಗೂ ಹಚ್ಚಹಸುರಾಗಿಯೇ ಇದೆ, ಬಹುಶಃ ನೀ ಅಂದು ತೊಟ್ಟಿದ್ದ ಹಸುರು ಬಣ್ಣದ ಚೂಡಿದಾರವೇ ಇದಕ್ಕೆ ಕಾರಣವಿರಬೇಕು, ಆ ಕ್ಷಣದಲ್ಲಿ "ವಾಹ್!! ಹುಡ್ಗಿ ಒಂದ್ ರೇಂಜಿಗೆ ಇದ್ದಾಳೆ.." ಅನ್ನಿಸಿದರೂ ಅದು ಪ್ರೀತಿಯೋ? ವಯೋಸಹಜ ಆಕರ್ಷಣೆಯೋ? ಎಂಬ ಗೊಂದಲಕ್ಕೆ ಸಿಲುಕಿ ಸುಮ್ಮನಾಗಿದ್ದೆ. ಆದರೆ ಅದಾಗಿ ಮೂರ್ನಾಲ್ಕು ದಿನಗಳಂತರದಲ್ಲಿದ್ದ ರಕ್ಷಾಬಂಧನದ ದಿನ ನೀನು ನನ್ನ ಮುಖ ನೋಡಿ "ಅಣ್ಣಾ ಹ್ಯಾಪಿ ರಕ್ಷಾಬಂಧನ್" ಅಂದಾಗ ಹೃದಯಕ್ಕೆ ಸೂಜಿ ಚುಚ್ಚಿದಂತಾಗಿ ಅದು ಪ್ರೀತಿ ಅಂತ ಕನ್ಫರ್ಮ್ ಆಯ್ತು, ಆಗ “ಛೇ ಇವಳ ಬಾಯಲ್ಲಿ ಅಣ್ಣ ಎನ್ನಿಸಿಕೊಂಡೆನ್ನಲ್ಲಾ ಎಂತಹಾ ದುರಂತ” ಎಂದು ಯೋಚಿಸುತ್ತಿರಬೇಕಾದರೆ ನಿನಗೆ ಪ್ರಪೋಸ್ ಮಾಡೋಕೆ ಹೋಗಿ ರಾಕಿ ಕಟ್ಟಿಸಿಕೊಂಡ ಬಡಪಾಯಿಯ ಬಾಡಿಹೋಗಿದ್ದ ಮುಖ ನೋಡಿ ಅಬ್ಬಾ ಬಚಾವಾದೆ ಅಂತ ನಿರುಮ್ಮಳನಾಗಿದ್ದೆ. ಆದರೂ ಕೆಲವೊಮ್ಮೆ ಸುಮ್ಮನೆ ಕುಳಿತಾಗ ಅವತ್ತು ನೀ ನಂಗೆ ರಾಕಿ ಕಟ್ಟಿದ್ದರೇ ಒಳ್ಳೇದಿತ್ತೇನು ಎಂದೆನಿಸಿದ್ದಿದೆ ಹಾಗಂತ ಆ ಕಾರಣ ಇಟ್ಕೊಂಡು ಈ ವರ್ಷ ನನ್ನ ಕೈಗೆ ರಾಕಿ ಕಟ್ಬೇಡ ಮಾರಾಯ್ತಿ. ನಿನ್ನ ರೂಪಕ್ಕೆ ಮನಸೋತು ಇಷ್ಟೆಲ್ಲ ಕನಸು ಹುಟ್ಟಿದ್ದರೆ ಅದನ್ನು ಮೋಹ ಅಂದುಕೊಂಡು ನಿನ್ನನ್ನು ಮರೆತು ಬಿಡಬಹುದಿತ್ತು, ಆದರೆ ನನ್ನನ್ನು ಕ್ಲೀನ್ ಬೋಲ್ಡ್ ಮಾಡಿದ್ದು ನಿನ್ನ ಆ ಶುದ್ಧ ಮನಸ್ಸು, ಅದೊಂದು ದಿನ ನಾ ಎನ್ನ ಮನದ ಭಾವನೆಗಳನ್ನೆಲ್ಲ ನಿನ್ನ ಬಳಿ ಹಂಚಿಕೊಂಡಾಗ "ಅದನ್ನೆಲ್ಲ ತಕ್ಷಣಕ್ಕೆ ಹೇಳೋಕಾಗಲ್ಲ ಸ್ವಲ್ಪ ಸಮಯ ಬೇಕು" ಅಂತ ಹೇಳಿ ನನ್ನಾಸೆಗೆ ತುಪ್ಪ ಸುರಿದೆ, ಅದೇಕೋ ಗೊತ್ತಿಲ್ಲ ರೋಗಿ ಬಯಸಿದ್ದು ಬರ್ಗರ್ ವೈದ್ಯ ಹೇಳಿದ್ದೂ ಬರ್ಗರ್ ಅನ್ನೋ ಹಾಗೆ ದಿನೇ ದಿನೇ ನೀ ನನಗೆ ಹತ್ತಿರಾಗುತ್ತಾ ಹೋದೆ, ನೀ ನಿಮಿಷಕ್ಕೆ ನೂರು ಕಿಲೋಮೀಟರ್ ವೇಗದಲ್ಲಿ ಮಾತಾಡ್ತಾ ಪಟಪಟನೆ ಕಣ್ಣ ರೆಪ್ಪೆಯ ಮಿಟುಕಿಸ್ತಾ ಇದ್ರೆ ನನಗೆ ನಿನ್ನ ಹತ್ರ ಮಾತಾಡ್ಬೇಕು ಅಂತ ಅನ್ಕೊಂಡಿರೋ ವಿಷ್ಯಾನೇ ಮರೆತು ಹೋಗ್ತಿತ್ತು, ಅದೇ ಕಾರಣಕ್ಕಾಗಿ ನೀ ಎದುರು ಸಿಕ್ಕಾಗ ಜಾಸ್ತಿ ಮಾತನಾಡದೆ ಫೋನ್ ಮಾಡಿ ಅರ್ಧರ್ಧ ಗಂಟೆ ಕಚ್ಕೊಳ್ತಿದ್ದಿದ್ದು, ಮೆಸೇಜ್ ಮಾಡಿ ನಿದ್ದೆ ಹಾಳು ಮಾಡ್ತಿದ್ದಿದ್ದು. ನಿಜ ಹೇಳ್ಬೇಕು ಅಂದ್ರೆ ನನ್ನ ಮೊಬೈಲ್ ಕೀಪ್ಯಾಡ್ ಸವೆದು ಹೋಗೋಕೆ ನೀನೇ ಕಾರಣ!!! ನಿನ್ನನ್ನು ನಗಿಸ್ಬೇಕು ಅನ್ನೋ ಒಂದೇ ಒಂದು ನೆಪ ಇಟ್ಕೊಂಡು ಸಿಲ್ ಸಿಲ್ಲಿಯಾಗಿ ಮನಸ್ಸಿಗೆ ಬಂದಿದ್ದನ್ನ ಬರೆದು, ಕಿತ್ತೋದ ಕವನಗಳನ್ನ, ಉದ್ದುದ್ದ ಫಿಲಾಸಫಿಗಳನ್ನ ಟೈಪ್ ಮಾಡಿ ನನ್ನ ಮೊಬೈಲಿಗೆ ಘನಘೋರ ಶಿಕ್ಷೆಯನ್ನೇ ಕೊಟ್ಟಿದ್ದೇನೆ. ಅದೇ ಕಾರಣಕ್ಕೋ ಏನೋ?? ನೀನೀಗ ಅದಕ್ಕೆ ರಜೆ ಕಲ್ಪಿಸಿರೋದು!!!
ಹೌದು.. ನೀನೀಗ ಮೊದಲಿನಂತಿಲ್ಲ, ಮನೇಲಿ ಒಬ್ಳೇ ಇದೀನಿ ಬೇಜಾರಾಗ್ತಿದೆ ಏನಾದ್ರು ಮಾತಾಡು ಎಂದು ವಾರಕ್ಕೊಮ್ಮೆಯಾದರು ನೀನಾಗಿಯೇ ಕಾಲ್ ಮಾಡ್ತಾ ಇದ್ದವಳು, ಈಗ ನಾನಾಗಿಯೇ ಮಾಡಿದರೂ ಜಾಸ್ತಿ ಮಾತನಾಡುತ್ತಿಲ್ಲ, ಯಾವುದೋ ಅಪರಿಚಿತನೊಡನೆ ಮಾತನಾಡುವಂತೆ ವರ್ತಿಸುತ್ತಿದ್ದೀಯ. ಮೆಸೇಜುಗಳಿಗಂತೂ ಮೌನವೇ ಉತ್ತರ, ನಿನ್ನ ಈ ಮೌನಕ್ಕೆ ಕಾರಣವೇನೆಂಬುದು ಸತ್ಯವಾಗ್ಲೂ ನಂಗೊತ್ತಿಲ್ಲ, ನಗುನಗುತ್ತಲೇ ಮನದ ಸನಿಹಕ್ಕೆ ಬಂದು ಕನಸುಗಳನ್ನು ಬಿತ್ತಿದ ನೀನೇ ಹೀಗೆ ವಿನಾಕಾರಣವಾಗಿ ಮೌನಕ್ಕೆ ಶರಣಾದರೆ ನಾನೇನೆಂದುಕೊಳ್ಳಬೇಕು? ನನ್ನ ಮೇಲೇನಾದರು ಕೋಪಾನಾ? ಅಥವಾ ನನ್ನನ್ನು ದೂರ ಮಾಡಲು ನೀನಿಟ್ಟ ಮೊದಲ ಹೆಜ್ಜೆಯಾ ಇದು? ಪರವಾಗಿಲ್ಲ ಬಿಡು ನಿನಗೆ ಅದೆಷ್ಟೇ ಕಾರಣಗಳಿದ್ದರೂ ನಾನು ಮಾತ್ರ ನಿಂಗೆ ಓದೋಕೆ ತುಂಬಾ ಇರಬಹುದು ಅಥವಾ ಮನೇಲಿ ಮೊಬೈಲ್ ನೋಡೋದು ಕಡಿಮೆ ಮಾಡೋಕೆ ಹೇಳಿರಬಹುದು ಅಂತಾನೇ ತಿಳಿದುಕೊಳ್ತೀನಿ. ಒಂದುವೇಳೆ ನನ್ನನ್ನು ದೂರ ಮಾಡ್ಬೇಕು ಅನ್ನೋದೆ ನಿನ್ನ ಉದ್ದೇಶ ಆಗಿದ್ರೆ ಇಂತಹ ವ್ಯರ್ಥ ಪ್ರಯತ್ನವನ್ನು ಬಿಟ್ಟು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಬಿಡು ಯಾಕಂದ್ರೆ ಇಂತಹ ಚಿಕ್ಕಪುಟ್ಟ ಕಾರಣಗಳಿಗೆ ಸಾಯುವುದು ಮೋಹವೇ ಹೊರತು ಪ್ರೀತಿಯಲ್ಲ..
ನಾ ನಿನ್ನ ಬಳಿ ಬಾಯ್ಬಿಟ್ಟು "ಐ ಲವ್ ಯೂ" ಅಂತ ಹೇಳ್ದೇ ಇರ್ಬೋದು ಆದ್ರೆ ಅಂದು ನಾ ನಿನಗೆ ಕೊಟ್ಟ ಮಾತಿನಂತೆ ಓದು ಮುಗಿಸಿ ನೀ ನಿನ್ನ ಕಾಲ ಮೇಲೆ ನಿಲ್ಲುವ ತನಕ ನಿನಗಾಗಿ ಕಾಯುತ್ತೇನೆ ಆದರೆ ಅಲ್ಲಿಯವರೆಗೆ ನಿನ್ನ ಹೃದಯದ ಕವಾಟ ಖಾಲಿಯಾಗಿಯೇ ಇರುತ್ತದಾ?? ಇದ್ದರೂ ನನಗೆ ಪ್ರವೇಶ ನೀಡುತ್ತೀಯಾ?? ಈ ಪ್ರಶ್ನೆಗಳಿಗೆ ಈಗಲೇ ಉತ್ತರಿಸಿ ಬಿಡು. ಹೂಂ ಅನ್ನೋದಾದ್ರೆ ಇನ್ಮೇಲೆ ತಮಾಷೆಗೂ ಅಣ್ಣ ಎನ್ನಬೇಡ, ನೋ ಅನ್ನೋದಾದ್ರೆ ಆದಷ್ಟು ಬೇಗ ಸ್ಪಷ್ಟಪಡಿಸಿಬಿಡು ಯಾವುದಕ್ಕೂ ಈಗೊಂದು ಮಿಸ್ ಕಾಲ್ ಕೊಡು ಕಾಯ್ತಾ ಇದ್ದೀನಿ..
ಅಂದಹಾಗೆ ಈ ಪತ್ರ ಬರೆಯಲು ಆರಂಭಿಸುವ ಮುನ್ನ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗೆ ಕಾರಣ ಆ ಶೆಟ್ರಂಗಡಿಯ ಯಮಕಾರದ ಮೆಣಸಿನಕಾಯಿ ಬಜ್ಜಿ ಅದ್ಯಾಕೋ ಗೊತ್ತಿಲ್ಲ ಏನಾದ್ರು ತಿನ್ನೋ ಟೈಮಲ್ಲಿ ನಿನ್ನ ನೆನಪು ಹಸಿವಿಗಿಂತ ಜಾಸ್ತಿ ಕಾಡುತ್ತೆ, ಇವೆಲ್ಲವನ್ನೂ ಒಂದೇ ಪದದಲ್ಲಿ ಹೇಳೋದಾದ್ರೆ "ಐ ಮಿಸ್ ಯೂ ಅರ್ಧೇಶ್ವರಿ!!!!" ಇನ್ಮೇಲಾದ್ರೂ ಆಗಾಗ ಕಾಲ್ ಮಾಡ್ತಾ ಇರು, ಅಟ್ಲೀಸ್ಟ್ ಮಿಸ್ ಕಾಲಾದ್ರೂ ಕೊಡು..... ಓಕೆನಾ??
ಕೆ.ಎನ್. ಸ್ಕಂದ ಆಗುಂಬೆ.

ಇಂತಿ ನಿನ್ನ ಆರಾಧಕ
ಕೆ.ಎನ್. ಸ್ಕಂದ ಆಗುಂಬೆ.
(ಮೂಲಪ್ರತಿ)
ಈ ಪ್ರೇಮಪತ್ರ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.
Sunday, 27 September 2015
ನಿಂಗೂ ಹಿಂಗೆಲ್ಲಾ ಅನ್ಸುತ್ತಾ??
ಏಯ್ ಕಂದ...!!
ನೀನು ಅದ್ಯಾವ ಘಳಿಗೆಯಲ್ಲಿ ಹುಟ್ಟಿದ್ದು ಮಾರಾಯ..!! ನಿನ್ನ ಮುರಿದು ಹೋಗಿರುವ ಅರ್ಧ ಹಲ್ಲಿನ ಮೇಲೆ ಆಣೆ ಮಾಡಿ ಹೇಳ್ತೀನಿ - ನೀನು ಪೆದ್ದ ಕಣೋ.. ಅದ್ಯಾವ ಜನ್ಮದಲ್ಲಿ ಏನು ಘನಂದಾರಿ ಕೆಲಸ ಮಾಡಿದ್ದೆವೋ? ಏನೋ? ಈ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ, ಆ ಪರಮಾತ್ಮ ನಮ್ಮಿಬ್ಬರಿಗೂ ಮನುಷ್ಯ ರೂಪವನ್ನೇನೋ ನೀಡಿದ ಆದರೆ ಇದ್ರಲ್ಲಿ ನಾನು ಹುಡುಗನಾಗಿ ಹಾಗೂ ನೀನು ಹುಡುಗಿಯಾಗಿ ಹುಟ್ಟಬೇಕಿತ್ತು ಕಣೋ ಆಗ ಅದರ ಮಜಾನೇ ಬೇರೆ ಇರ್ತಿತ್ತು, ಹಾಗೇನಾದ್ರು ಆಗಿದ್ದಿದ್ದರೆ ನಾ ನಿನ್ನನ್ನ ಸಖತ್ತಾಗಿ ಗೋಳು ಹುಯ್ಕೋತಿದ್ದೆ, ನಿನ್ನ ಹಿಂದೆ ಮುಂದೆ ಸುತ್ತಾಡ್ಕೊಂಡು ಯರ್ರಾಬಿರ್ರಿ ಕಾಟ ಕೊಡ್ತಿದ್ದೆ, ಆದ್ರೆ ಈಗ ಎಲ್ಲವೂ ಉಲ್ಟಾ...!!! ಅಲ್ಲಾ ತಂದೆ ನೀನು ಅಷ್ಟೊಂದು ಪುಕ್ಕಲಾನಾ?? ಫಸ್ಟ್ ಟೈಮ್ ನೀನು ನನ್ನ ಜೊತೆ ಮಾತನಾಡುವಾಗಲೇ ಅಂದುಕೊಂಡೆ ನೀನು ತುಂಬಾ ಪಾಪದವನು ಅಂತ..! ನೀ ನನ್ನನ್ನ ಪ್ರೀತಿಸ್ತಾ ಇರೋದು ಇಡೀ ಊರಿಗೇ ಗೊತ್ತಿರೋ ವಿಷಯವಾದ್ರೂ ಅದನ್ನೇ ದೊಡ್ಡ ಸೀಕ್ರೇಟ್ ಅನ್ನೋ ಥರ ಸುತ್ತಿ ಬಳಸಿ ನನ್ನ ಹತ್ರ ಹೇಳೋಕೆ ನೋಡ್ತೀಯಲ್ಲಾ ಅದರ ಬದಲು ಡೈರೆಕ್ಟಾಗಿ ಒಂದೇ ಒಂದು ಸಲ ಐ ಲವ್ ಯೂ ಅಂತ ಹೇಳ್ಬಾರ್ದೇನೋ ಕೋತಿ??.
ಲೋ ಪುಣ್ಯಾತ್ಮ, ನನಗೂ ಬೇರೆ ಹುಡುಗಿಯರ ಥರ ಆಸೆ, ಕನಸು ಎಲ್ಲಾ ಇದೆ ಕಣಯ್ಯಾ.. ಆದ್ರೆ ಅದಕ್ಕೆ ರೆಕ್ಕೆ ಕಟ್ಟಬೇಕಾದ ನೀನೇ ಇಷ್ಟೊಂದು ಹೆದರಿದರೆ ನನ್ನ ಕಥೆ ಏನೋ?? ಹೋಗ್ಲಿ ನಿನ್ನ ವಯಸ್ಸಿನ ಬೇರೆ ಹುಡುಗರನ್ನ ನೋಡಿಯಾದ್ರು ಕಲಿಯಬಾರ್ದಾ? ಹುಡುಗಿಯರು ಒಂದು ಸ್ಮೈಲ್ ಕೊಟ್ರೆ ಸಾಕು ಓಡಿ ಹೋಗಿ ಪ್ರಪೋಸ್ ಮಾಡ್ತಾರೆ ಅಂತಹದ್ದರಲ್ಲಿ ನಾ ನಿನ್ನ ಜೊತೆ ಗಂಟೆಗಟ್ಟಲೆ ಮಾತಾಡ್ತೀನಿ, ಐಸ್ ಕ್ರೀಮ್ ಕೊಡಿಸು ಅಂತ ಬಾಯ್ಬಿಟ್ಟು ಕೇಳಿ ನಿನ್ನ ಜೊತೆಗೇ ನಿಂತ್ಕೊಂಡು ತಿಂದಿದ್ದೀನಿ, ಸಾಲದ್ದಕ್ಕೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸ್ಮೈಲ್ ಕೊಡ್ತೀನಿ, ಇಷ್ಟಾದರೂ ನಿನಗೆ ನಾ ನಿನ್ನ ಪ್ರೀತಿಸ್ತೀನಿ ಅನ್ನೋದು ಗೊತ್ತಾಗಲ್ವಾ?? ಅಲ್ಲಾ ಮಾರಾಯಾ! ನಾ ನಿನ್ನ ಜೊತೆ ಇಷ್ಟೊಂದು ಕ್ಲೋಸಾಗಿ ಇದ್ದೀನಿ ಅಂದ ಮೇಲೂ ನನ್ನ ದೋಸ್ತಿಗೆ ಕಾಲ್ ಮಾಡಿ - ”ಅವಳು ನನ್ನ ಇಷ್ಟಪಡ್ತಾಳಾ?”, ”ಅವಳ ಮನಸ್ಸಲ್ಲಿ ನನ್ನ ಬಗ್ಗೆ ಯಾವ ರೀತಿಯ ಭಾವನೆಗಳಿವೆ?” ಅಂತ ಕೇಳ್ತೀಯಂತಲ್ಲಾ? ನಿನಗೆ ಎಂತ ತಗೊಂಡು ಹೊಡಿಬೇಕು ಮಹರಾಯ!!. ಇವೆಲ್ಲವನ್ನೂ ನನ್ನ ಹತ್ರಾನೇ ಕೇಳು ಒಂದೇ ಉಸಿರಿನಲ್ಲಿ ನಿನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀನಿ.
ತಥ್... ನೀನಾಗಿಯೇ ಪ್ರಪೋಸ್ ಮಾಡ್ತೀಯೇನೋ ಅಂತ ಕಾದು ಕಾದು ಬೇಜಾರಾಗಿ ಹೋಯ್ತು, ನೋಡು ಕೊನೆಯದಾಗಿ ಒಂದೇ ಒಂದು ಛಾನ್ಸ್ ಕೊಡ್ತಾ ಇದೀನಿ.. ಈ ಪತ್ರ ಓದಿದ ಇಪ್ಪತ್ನಾಲ್ಕು ಗಂಟೆಯ ಒಳಗಾಗಿ ಫೋನ್ ಮಾಡಿ ”ಐ ಲವ್ ಯೂ” ಅಂತ ಹೇಳಿದ್ರೆ ಸರಿ ಇಲ್ಲಾ ಅಂದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಹುಷಾರ್...!!
ಇಂತಿ,
ನಿನಗಾಗಿಯೇ ಇರುವ ನಿನ್ನವಳು.
ಅಬ್ಬಬ್ಬಾ..!! ನಿನ್ನ ಮನಸ್ಸಿಗೆ ಹೀಗೆಲ್ಲಾ ಅನ್ನಿಸಿರಬಹುದಾ ಎಂದು ಊಹಿಸಿಕೊಂಡು ಬರೆಯುವಾಗಲೇ ಮೈ ರೋಮಾಂಚನವಾಗ್ತಿತ್ತು. ಇನ್ನು ನಿಜವಾಗ್ಲೂ ನಿನಗೆ ಹೀಗೆಲ್ಲಾ ಅನ್ನಿಸಿದ್ರೆ ನಾನೇ ಧನ್ಯ..! ಹೇಳು ಮಾರಾಯ್ತಿ, ನಿನಗೆ ಯಾವತ್ತಾದ್ರು ಈ ರೀತಿ ಲವ್ ಲೆಟರ್ ಬರೀಬೇಕು ಅನ್ಸಿತ್ತಾ?? ಹೂಂ.. ಅನ್ನೋದಾದ್ರೆ ಎಂದಿನಂತೆ ಒಂದು ಮಿಸ್ ಕಾಲ್ ಕೊಡು, ವಾಪಾಸ್ ನಾನೇ ಕಾಲ್ ಮಾಡಿ ನೀ ಹಲೋ ಅನ್ನೋ ಮೊದಲೇ ”ಐ ಲವ್ ಯೂ..” ಅಂದುಬಿಡ್ತೀನಿ ಅಥವಾ ನಿನಗೆ ಹೀಗೆಲ್ಲಾ ಅನ್ನಿಸಿರಲಿಲ್ಲ ಅನ್ನೋದಾದ್ರೆ ಒಂದು ಮೆಸೇಜ್ ಮಾಡು ನೆಕ್ಸ್ಟ್ ಟೈಮ್ ಬೇರೆ ರೀತಿ ಬರೆಯೋಕೆ ಟ್ರೈ ಮಾಡ್ತೀನಿ...
ಇಂತಿ,
ನೀನಾಗಿ ಬರೆದ ನಾನು.. ಸ್ಕಂದ ನಾಗೇಂದ್ರ.
ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)
Subscribe to:
Posts (Atom)
"ಕಂದ" ಪದ್ಯ
ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...
-
ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ಪ್ರೈಮ್ ಟೈಮ್ ಡಿಬೇಟ್ ನಡೆಸಿಕೊಡ್ಬೇಕು.. ನಮಸ್ಕಾರ ನೀವು ನೋಡ್ತಾ ಇದೀರಾ ಸುವರ್ಣ ನ್ಯೂಸ್ ನಾನ...
-
ಕಣ್ಸೆಳೆತದಲ್ಲೆನ್ನೆದೆಗಡಲಲೆಗಳೇರಿಳಿತಗಳನೇರುಪೇರುಗೊಳಿಸಿದವಳೇ.. ಲಯ ತಪ್ಪಿದ ಹೃದಯ ಬಡಿತದ ಸಮ್ಮುಖದಲ್ಲೇ ನಿನಗಾಗಿ (ಕೊನೆಯದಾಗಿ?) ಈ ಪತ್ರ ಬರೆಯುತ್ತಿದ್ದೇನ...
-
ಪೌರ್ಣಿಮೆಯ ಬರುವಿಕೆಗಾಗಿ ಅಮವಾಸ್ಯೆಯ ಇಳಿಸಂಜೆಯಿಂದಲೇ ಆಗಸದಡಿಯಲ್ಲಿ ರಚ್ಚೆಹಿಡಿದು ಕುಳಿತು ಹದಿನಾಲ್ಕನೇ ದಿನಕ್ಕೆ ಸೋಲೊಪ್ಪಿಕೊಳ್ಳುವ ಹುಚ್ಚುಹುಡುಗ ನಾನು. ಭ...