ಸ್ಮಶಾನದಲ್ಲಿ ಸತ್ತು ಬಿದ್ದ
ಇದ್ದಿಲ ಚೂರಿನಷ್ಟು ಕಪ್ಪೇನಲ್ಲ
ಚಂದ್ರ ಸಾಯುವ ಮೂರು ದಿನ
ಮುಂಚಿನ ನಡುರಾತ್ರಿ ಹೊತ್ತು..
ಕಾಡಂಚಿನಲ್ಲಿ ಹುಲಿ ಕೂಗಿದ್ದು
ಕಿವಿಗಿನ್ನೂ ನೆನಪಿದೆ
ಮಳೆನೀರಿನ ತುಂಟ ಹನಿಯೊಂದು
ಹೆಂಚುಗಳ ಒಳಹೊಕ್ಕು
ಕದ್ದು ನೋಡಿದ್ದು ಆವಾಗಲೇ..
ತುಟಿ ಕಚ್ಚಿರಲಿಲ್ಲ ಅಲ್ಲವಾ?
ಛೇ.. ಕಚ್ಚಿಬಿಡಬೇಕಿತ್ತು
ನೋಡು ನಿನ್ನ ಉಗುರಿನ ಗಾಯ
ಇನ್ನೂ ಅಂಗಿಗೆ ಬಣ್ಣ ಬಳಿಯುತ್ತಿದೆ
ಕಾಲ್ಗೆಜ್ಜೆಯನ್ನು ಎಲ್ಲಿ ಬಿಚ್ಚಿಟ್ಟಿದ್ದಿ
ಪಪ್ಪಿ ಇಡಬೇಕು ಅದರ ಹೊಳಪಿಗೆ
ಅವತ್ತು ನಿನ್ನ ಸೆರಗಿಗಂಟಿದ್ದ
ಅತ್ತರಿನ ಘಮವಿನ್ನೂ ಕೋಣೆ ದಾಟಿಲ್ಲ
ಆತುರವಿದ್ದಿದ್ದು ನಿನಗೆ ಮಾತ್ರ
ಎಂಥಾ ಹುಡುಗಿ ಮಾರಾಯ್ತಿ.. ಹೋಗೇ
ನನಗೊಂದು ಮಾತು ಹೇಳಲು
ನಿನ್ನ ಗಂಟಲಲ್ಲೇನು ಕಡುಬು ಸಿಕ್ಕಿಕೊಂಡಿತ್ತಾ?
ನೀನವತ್ತು ರಸದೌತಣ ಬಡಿಸಿದಾಗಲೇ
ಕೇಳಿಬಿಡಬೇಕಿತ್ತು ನಾನು..
ಆ ಬಿಸಿಯಲ್ಲಿ ನೀ ತಣಿದಿದ್ದೂ
ಗೊತ್ತಾಗದೇ ಹೋಯಿತಲ್ಲಾ
ಅಳುತ್ತಾ ಕೂತಿದ್ದೀನಿ ಗೊತ್ತಾ?
ನೀ ಹೊರಡುವಾಗ ಎಷ್ಟೊತ್ತಾಗಿತ್ತು
ಹಿತ್ತಲಲ್ಲಿ ದಿನಾ ಕಿರುಚಾಡುವ
ಜೀರುಂಡೆಯಾದರೂ ಎದ್ದಿತ್ತಾ?
ಹಣೆ ಮೇಲೆ ಕುಂಕುಮವಿದ್ದಾಗಲೇ ಸಾಯಬೇಕು
ಎಂದು ಮದುವೆಯ ದಿನವೇ ಹೇಳಿದ್ದೆಯಲ್ಲಾ?
ಆ ಆಸೆಯೂ ಬೆವರಿನಲ್ಲಿ ಕರಗಿದೆ ನೋಡು
ಏಯ್ ಪುಟ್ಟಾ ಒಂಚೂರು ಎದ್ದೇಳೇ
ಅಂಗಳದಂಚಿನಲ್ಲಿ ಗುಲಾಬಿ ಅರಳಿದೆ
ಮೊನ್ನೆ ತಾನೇ ನೀ ಮುತ್ತಿಟ್ಟಿದ್ದೆಯಲ್ಲಾ
ಅದೇ ಮೊಗ್ಗು ಮೈನೆರೆದಿರುವುದು
ಎದ್ದೇಳೋದಿಲ್ವಾ? ಬೇಜಾರಾ?
ಮೊನ್ನೆ ಬೆಂಕಿ ಹಚ್ಚಿದ್ದಕ್ಕೆ ಸಿಟ್ಟಾ?
ಇನ್ಯಾವತ್ತೂ ಆ ಥರ ಮಾಡೋದಿಲ್ಲ
ಇದೊಂದು ಸಲ ಕ್ಷಮಿಸಿಬಿಡೇ
ಹೋಗೇ ಎಷ್ಟು ಕರೆದರೂ
ಮಾತಾಡೋದಿಲ್ಲ ಸೊಕ್ಕು ನಿಂಗೆ
ಗೂಬೆ, ಕತ್ತೆ, ಹಂದಿ, ಮಂಗ
ಅಯ್ಯೋ ಈಗ ನೆನಪಾಯ್ತು ನೋಡು
ಕೊಟ್ಟಿಗೆಯಲ್ಲಿ ಪುಟ್ಟ ಕರು ಕೂಗ್ತಾ ಇದೆ
ನನಗೆ ನಿನ್ನಷ್ಟು ಚುರುಕು
ಹಾಲು ಕರೆಯೋದಿಕ್ಕೆ ಬರೋದೂ ಇಲ್ಲ
ಇನ್ನೊಂದೈದು ದಿನ
ಅಭ್ಯಾಸವಾಗುತ್ತೆ ಬಿಡು
ಇನ್ನೂ ಒಂದು ವಾರ ದೇವರಿಗೆ ಉಪವಾಸ
ಅನುಭವಿಸಲಿ ಅವನು
ನನ್ನ ಹೊಟ್ಟೆಗೆ ಕಲ್ಲು ಹಾಕಿದ್ದಾನಲ್ಲ
ಥೋ.. ಇದ್ಯಾಕೋ ನಿಲ್ಲೋದಿಲ್ಲ
ಕರು ಬೊಬ್ಬೆ ಹೊಡೀತಿದೆ
ದೀಪ ಹಚ್ಚಿ ಹೋಗ್ತೀನಿ
ಬತ್ತಿ ಸರಿ ಮಾಡೋಕೋಗಿ ಕೈ ಸುಟ್ಕೋಬೇಡ
ಹೀಗೆ ಹೋಗಿ ಹಾಗೆ ಬರ್ತೀನಿ
ಚೇಷ್ಟೆ ಮಾಡದೆ ಸುಮ್ನೆ ಕೂತ್ಕೊ.. ಜಾಣಮರಿ!!
- ಅನಾಸ್ಕ
