Monday, 29 May 2017

ಮೂರಿಂಚು ಜಾಗದಲ್ಲಿ ನನ್ನ ಹೆಜ್ಜೆ ಗುರುತಿವೆ..



ಮತ್ತದೇ ಹಳೇ ಹುಡುಗಿಗೆ...
                                        ಡಿಯರ್ ಕೂಸೇ, ನಿನ್ ಮುಖ ನೋಡಿ ನೋಡಿ ಬೇಜಾರಾಗಿದೆ, ಅದೇ ನಗು! ಅದೇ ಸಿಟ್ಟು! ಅದೇ ತಲೆಹರಟೆ! ಏನೂ ಚೇಂಜ್ ಇಲ್ಲ ಸೋ ಇದೆಲ್ಲದರ ಸಹವಾಸ ಬಿಟ್ಟುಬಿಡಬೇಕು ಅನ್ನಿಸ್ತಿತ್ತು.. ಆದ್ರೇನ್ಮಾಡೋದು? ನಿನಗಿಂತ ಹಳತಾಗಿರೋ ನನ್ ಮುಖಕ್ಕೆ ಬೇರೆ ಯಾರೂ ಸಿಗದೇ ಇದ್ರೆ? ಎಂಬ ಭಯ.. ಆದ್ದರಿಂದ ಹೆಂಗೂ ನಿಂಗೆ ತಗ್ಲಾಕ್ಕೊಂಡಾಗಿದೆ, ಕಷ್ಟನೋ? ಸುಖನೋ? ಕಣ್ಮುಚ್ಕಂಡ್ ನಿನ್ ಜೊತೆ ಬದುಕಬೇಕು ಅನ್ನೋ ದುಸ್ಸಾಹಸದ ನಿರ್ಧಾರಕ್ಕೆ ಕೈ ಹಾಕಿದೀನಿ.. ಜಾಸ್ತಿ ಕಾಟ ಕೊಡದೆ ಕಾಪಾಡು!!
ಸಿಟ್ ಬಂತಾ? ಕ್ವಾಪನಾ? ಮುಖ ಕೆಂಪಾಯ್ತಾ? ಅಯ್ಯೋ ಆಗ್ಲಿ ಬಿಡೇ, ನಿನ್ ಜೊತೆ ಬದುಕೋ ನಿರ್ಧಾರ ತಗೊಂಡಿದೀನಲ್ಲ ಅದಕ್ಕಿಂತ ದೊಡ್ಡದೇನಲ್ಲ ಇದು. ನಿನ್ನನ್ನು ಮೊದಲ ಬಾರಿಗೆ ನೋಡಿದ ದಿನ ನನ್ನ ಬದುಕಿನ ಅತಿ ದೊಡ್ಡ ದುರಂತಕ್ಕೆ ಮುನ್ನುಡಿ ಹಾಡಿದ ದಿನ, ಆ ನಿನ್ ಮನೆಹಾಳ್ ಮುಂಗುರುಳಿನಿಂದ ನನ್ನ ಬ್ರಹ್ಮಚರ್ಯವನ್ನ ಗಲ್ಲಿಗೇರಿಸಿದ ದಿನ, ಪಂಚಾಂಗದಲ್ಲಿ ಅದೇನೋ ಗಂಡಕಾಲ ಅಂತಾರಲ್ಲ ಮೋಸ್ಟ್ಲಿ ಅದೇ ಘಳಿಗೆಯಲ್ಲಿ ನೀ ನನ್ ಕಣ್ಣಿಗೆ ಬಿದ್ದಿದ್ದಿರಬೇಕು. ಆ ಕ್ಷಣದಲ್ಲಿ ನಮ್ಮನೆ ದೇವ್ರು ನಿದ್ದೆ ಮಾಡ್ತಿದ್ದ ಅನ್ಸುತ್ತೆ ಇಲ್ಲಾಂದ್ರೆ ಖಂಡಿತ ಈ ಘನಘೋರ ಅಪಘಾತದಿಂದ ನನ್ನ ಬಚಾವ್ ಮಾಡ್ತಿದ್ದ ಅಥವಾ ಇನ್ಯಾವುದೋ ಹರಕೆ ತೀರಿಸದೇ ಬಾಕಿ ಉಳಿದಿದ್ದು ಅದೇ ಸಿಟ್ಟಲ್ಲಿ ನನ್ನ ಹರಕೆ ಕುರಿ ಮಾಡಿದ್ನೋ? ಏನೋ? ನಾ ಕಾಣೆ. ಹೋಗ್ಲಿಬಿಡು ನನ್ನ ಹಣೆಬರಹಕ್ಕೆ ನಿನ್ನನ್ಯಾಕೆ ದೂಷಣೆ ಮಾಡ್ಲಿ? ನ್ಯಾಯವಾಗಿ ನೋಡೋದಾದ್ರೆ ಇದ್ರಿಂದ ನಿನಗೆ ಲಾಭವೇ ಆಗಿರೋದು ಯಾಕಂದ್ರೆ ನನ್ನಂತ ಹುಡುಗನನ್ನ ಪಡೆಯೋಕೆ ವಸಿ ಪುಣ್ಯ ಮಾಡಿರ್ಬೇಕಾ? ಎಂಥೆಂಥಾ ಒಳ್ಳೇ ಹುಡುಗಿಯರಿಗೆ ಸಿಗದ ಸುವರ್ಣಾವಕಾಶ ನಿನಗೆ ಸಿಕ್ಕಿದೆ ನೋಡು. ಹಾಗಂತ ನೀ ಕೆಟ್ಟವ್ಳು ಅಂತ ಹೇಳ್ತಿಲ್ಲ ಬಟ್ ನೀ ನನ್ ಹಾಗೆ ತುಂಬಾ ಒಳ್ಳೆಯವಳೇನಲ್ಲ ಆಯ್ತಾ?
            ಥೋ.. ಪ್ರೇಮಪತ್ರ ಬರೆಯೋಣ ಅಂತ ಕೂತ್ರೆ ಏನೇನೋ ಪುರಾಣಗಳೆಲ್ಲಾ ಹೊರಗೆ ಬರ್ತಿದ್ದಾವೆ.. ಇದಕ್ಕೇ ಅನ್ಸುತ್ತೆ ನನ್ ಹಳೇ ಕ್ರಷ್ಷು "ನಿಂಗ್ ಲವ್ ಲೆಟ್ರು ಬರ್ಯೋಕೆ ಬರೋದಿಲ್ಲ ಕಣೋ ಗೂಬೆ" ಅಂತ ಬೈತಾ ಇದ್ದಿದ್ದು, ಅಷ್ಟೆಲ್ಲಾ ಪೋಸ್ ಕೊಡೋದು ನೋಡಿ ಅವ್ಳು ಪ್ರೇಮಪತ್ರ ಬರ್ಯೋದ್ರಲ್ಲಿ ಎಕ್ಸ್ಪರ್ಟ್ ಅಂದ್ಕೊಂಡಿದ್ದೆ ಬಟ್ ಆಮೇಲ್ ಗೊತ್ತಾಯ್ತು, ಅವ್ಳು ವಾರಕ್ಕೆ‌ ಏನಿಲ್ಲಾ ಅಂದ್ರೂ ಒಂದೈವತ್ತು ಲವ್ ಲೆಟರ್ಸ್ ವ್ಯಾಲ್ಯೂಯೇಷನ್ ಮಾಡ್ತಿದ್ಳು ಅಂತ.. ಅಯ್ಯೋ ಬೇಜಾರ್ ಮಾಡ್ಕೋಬೇಡ ಅವ್ಳು ಜಸ್ಟ್ ಕ್ರಷ್ ಮಾರಾಯ್ತಿ, ನೀನೇ ನನ್ ಫಸ್ಟ್ ಅಂಡ್ ಲಾಸ್ಟ್ ಲವ್ವು ಆಯ್ತಾ? ಬೇರೆ ಹುಡ್ಗಿ ವಿಷ್ಯ ಎಲ್ಲಾ ಈಗ್ಯಾಕೆ? ನಮ್ದೇ ಬೇಜಾನ್ ಕಥೆ ಇದೆ ಅದ್ರ ಬಗ್ಗೆನೂ ಒಂಚೂರ್ ತಲೆ ಕೆಡ್ಸ್ಕಳಣ ಬಾ..
                ಇತ್ತೀಚೆಗೆ ನಿನ್ ಮೇಲೆ ಲವ್ ಜಾಸ್ತಿ ಆಗ್ತಿದೆ, ಓಲ್ಡ್ ಈಸ್ ಗೋಲ್ಡ್ ಅಂತಾರಲ್ಲ ಹಾಗೇ ಇರ್ಬೇಕು. ದಿನಾಲು ನಿನ್ ಮುಖ ನೋಡ್ಬೇಕು, ನಿನ್ ಜೊತೆ ಮಾತಾಡ್ಬೇಕು ಅಂತೆಲ್ಲಾ ಅನ್ಸುತ್ತೆ, ಆದ್ರೇನ್ಮಾಡ್ಲಿ ಈ ಬಿಟ್ಟಿ ಜಿಯೋ ನೆಟ್ವರ್ಕ್ ನೆಟ್ಟಗಿರೋದೇ ಇಲ್ಲ.. ಹೋಗ್ಲಿ ವಾಟ್ಸಪ್ಪಲ್ಲಿ ಚಾಟ್ ಮಾಡೋಣ ಅಂದ್ರೆ ನೀನೊಳ್ಳೇ ಪುರುಸೊತ್ತಿಲ್ಲದ ಪದ್ಮಾವತಿ ಥರ ಆಡ್ತೀಯ.. ಎಲ್ಲೋ ಅಪ್ರೂಪಕ್ಕೊಂದ್ಸಾರಿ ಹಾಯ್ ಅನ್ನೋದ್ರೊಳಗೆ ಬೈ ಅಂದು ತಾಚಿ ಮಾಡ್ಬೇಕು‌ ಅನ್ನೋ ನೆಪ ಕೊಟ್ಟು ಮತ್ತೊಂದ್ ಘಂಟೆ ಆನ್ಲೈನಲ್ಲೇ ಜಪ ಮಾಡ್ತಾ ಇರ್ತೀಯ.. ನಂಗಂತೂ ನಿನ್ ಧ್ವನೀನೇ ಮರ್ತೋದಂಗಾಗಿದೆ. ಅವತ್ತು ಕಿರಿಕ್ ಪಾರ್ಟಿ ಸಿನಿಮಾಕ್ಕೆ ಹೋದಾಗ "ನೀನಿರೆ ಸನಿಹ ನೀನಿರೆ...." ಹಾಡು ಬಂದಾಗ್ಲಂತೂ ಅದೆಷ್ಟರ ಮಟ್ಟಿಗೆ ನಿನ್ನ ನೆನಪಾಯ್ತು ಗೊತ್ತಾ? ನಿನ್ ಜೊತೆ ಥಿಯೇಟ್ರಲ್ಲಿ ಕೂತ್ಕೊಂಡು ಆ ಹಾಡು ನೋಡ್ಬೇಕು ಅಂತ ಅನ್ನಿಸಿ ಬಿಡ್ತು.
ಕೆಲವೊಮ್ಮೆ ನೀ ನನ್ನಿಂದ ದೂರ ಆಗ್ತಿದ್ಯೇನೋ? ನನ್ನ ಕಡೆಗಾಣಿಸ್ತಿಯೇನೋ? ಅಂತೆಲ್ಲಾ ಭಯ ಆಗುತ್ತೆ. ಎಷ್ಟೋ ಸಲ ಈ ಪ್ರೀತಿ ಪ್ರೇಮ ಎಲ್ಲಾ ಭ್ರಮೆ.. ನೀ ನಂಗ್ ಸಿಗೋದೇ ಇಲ್ಲ ಅನ್ಸೋಕೆ ಶುರುವಾಗಿ ಮಂಕಾಗಿ ಬಿಡ್ತೀನಿ. ಇವೆಲ್ಲಾ ಅನುಮಾನಗಳನ್ನ ಒಂದೇ ಉಸಿರಿಗೆ ನಿನ್ನ ಬಳಿ ಹೇಳಿಕೊಂಡು ಮನಸ್ಸಿನ ಭಾರವನ್ನೆಲ್ಲಾ ಕರಗಿಸಿಕೊಳ್ಬೇಕು ಅನ್ನಿಸಿದಾಗಲೆಲ್ಲಾ ನಿನಗೆಲ್ಲಿ ನೋವಾಗ್ತದೋ ಅಂತ ಸುಮ್ಮನಾಗಿಬಿಡ್ತೀನಿ. ನಿಜ ಹೇಳ್ತೀನಿ ಕೇಳು.. ಹುಡುಗರು ಪ್ರೀತಿಯ ವಿಷ್ಯದಲ್ಲಿ ನಿಮಗಿಂತ ತುಸು ಹೆಚ್ಚೇ ಸ್ವಾರ್ಥಿಗಳು, ನಾವಿಷ್ಟಪಡೋ ಹುಡುಗಿಗೆ ನಮ್ ಮೇಲೂ ಒಂದ್ ಕಣ್ಣಿದೆ ಅಂತ ಗೊತ್ತಾದ್ರೆ ಮುಗಿದೇ ಹೋಯ್ತು, ಅಂಗೈಯಲ್ಲೇ ಪ್ರಪಂಚ ಸೃಷ್ಟಿಸಿಕೊಂಡು ಬಿಡ್ತೀವಿ, ಆದ್ರೆ ಯಾರೋ ಒಂದ್ನಾಲ್ಕ್ ಜನ ಪ್ರೀತಿ ಹೆಸ್ರಲ್ಲಿ ಮಾಡಬಾರದ ಅನಾಚಾರ ಮಾಡಿ ಎಲ್ರೂ ಹುಡುಗ್ರನ್ನ ಅನುಮಾನದಿಂದ ನೋಡೋ ಹಾಗಾಗಿದೆ ಆದ್ರಿಂದ ಕೆಲವೊಮ್ಮೆ ಮನಸು ಬಿಚ್ಚಿ ಮಾತಾಡೋಕೂ ಯೋಚ್ನೆ ಮಾಡ್ಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
                     ನನ್ನನ್ನ ಸ್ಟೇಜ್ ಮೇಲೆ ನಿಲ್ಸಿ ಗಂಟೆಗಟ್ಲೆ ಮಾತಾಡು ಅಂದ್ರೂ ಮಾತಾಡ್ತಿನೇನು ಬಟ್ ನಿನ್ ಜೊತೆ ಮಾತಾಡ್ಬೇಕಾದ್ರೆ ಒಳ್ಳೇ ಮದ್ವೆ ದಿನ ಹೆಣ್ಣು ನಾಚ್ಕೊಳ್ಳೋ ಲೆವೆಲ್ಲಿಗೆ ನಾಚ್ಕೊತೀನಿ.. ಅದ್ರಲ್ಲೂ ನೀ ಮುಂದೆ ಇದ್ರಂತೂ ಮುಗಿದೇ ಹೋಯ್ತು..‌ ಬಟ್ ಮೊದಲೆಲ್ಲಾ ನಾವ್ ಎಷ್ಟೊಂದ್ ಮಾತಾಡ್ತಿದ್ವಿ ಅಲ್ವಾ? ಮಿನಿಮಮ್ ಇಪತ್ - ಮೂವತ್ ನಿಮ್ಷ ಫೋನಲ್ಲಿ ಅಂಟ್ಕೊತ್ತಿದ್ವಿ, ದಿನಾ ಫೋನು..!! ಆವಾಗಿದ್ದ ಎಕ್ಸೈಟ್ಮೆಂಟ್ ಎಲ್ಲೋಯ್ತು, ಟೈಂ ಪಾಸ್ ಮಾಡೋಕೋಸ್ಕರ ಮಾತಾಡ್ತಿದ್ವಾ? ಅಥ್ವಾ ಒಬ್ರಿಗೊಬ್ರು ಟೈಂ ಕೊಡೋಕಾಗ್ದಿರೋ ಅಷ್ಟು ದೊಡ್ಡೋರಾಗ್ಬಿಟ್ವಾ? ನಾವ್ ಅಷ್ಟೊಂದ್ ಬ್ಯುಸಿನಾ?  ಅಬ್ಬಾ.. ಒಟ್ನಲ್ಲಿ ನಿನ್ ಹತ್ರ ಮಾತಾಡೋದೆ ಕಮ್ಮಿ ಆಗೋಗಿದೆ. ಆ್ಯಕ್ಚುಲಿ ನಿನ್ ಜೊತೆ ಮಾತಾಡಿದ್ರೆ ನಂಗೇನೋ ಒಂಥರಾ ತಲೇಲಿ ರಿಫ್ರೆಶ್ ಬಟನ್ ಒತ್ತಿದಂಗಾಗುತ್ತೆ  ಗೊತ್ತಾ?
         ಅದಿರ್ಲಿ ಆವಾಗೆಲ್ಲ ಡಿಯರ್ರು, ಕಂದ, ಮಣ್ಣು ಮಸಿ ಅಂತೆಲ್ಲಾ ಕರೀತಿದ್ಯಲ್ಲಾ ಅದೆಲ್ಲಾ ಈಗೆಲ್ಲೋಯ್ತು? ನೀ ಹಂಗ್ ಕರೆದ್ರೆ ನಂಗ್ ಬೇಜಾನ್ ಖುಷಿ.. ಯಾಕೋ ಗೊತ್ತಿಲ್ಲ ನಿನ್ ಹತ್ರ ಬೈಸ್ಕೊಳ್ಳೋದ್ರಲ್ಲೂ ಮಜಾ ಇದೆ. ನೀ ಹ್ಞೂಂ, ಓಕೆ,ಅಂತೆಲ್ಲಾ ಕಳಿಸಿದ್ರೆ ಮಾತ್ರ ಅಷ್ಟೇ ಬೇಜಾರ್ ಆಗ್ತದೆ.
          ಇಷ್ಟೆಲ್ಲಾ ಆಗಿ... ನೀ ನಿನ್ ಹೃದಯದಲ್ಲಿ ನನಗೊಂದ್ ಮೂರಿಂಚ್ ಜಾಗ ಆದ್ರೂ ಕೊಟ್ಟಿರ್ತೀಯ ಅನ್ನೋ ನಂಬಿಕೆ ಇದೆ ಸೋ ಪ್ರಾಮಾಣಿಕವಾಗಿ ಹೇಳ್ತೀನಿ ಕೇಳು.. ನಿನ್ನ ಮನಸಲ್ಲಿರೋದನ್ನ ಮುಚ್ಚಿಟ್ಕೊಂಡು ಇನ್ನೊಬ್ರ ಖುಷಿಗಾಗಿ ಮುಖವಾಡ ಹಾಕೋ ನಿರ್ಧಾರನ್ನ ದಯವಿಟ್ಟು ತಗೋಬೇಡ, ನೀ ಎಷ್ಟೇ ಮರೆತಂತೆ ನಟಿಸಿದ್ರೂ ಆ ಮೂರಿಂಚು ಜಾಗದಲ್ಲಿ ನಾ ಓಡಾಡಿ ಸವೆಸಿರೋ ಹಾದಿಯನ್ನ ಮತ್ತೆ ಹೊಸತರಂತೆ ಮಾಡೋಕೆ ಆಗಲ್ಲ, ಯಾರೆಷ್ಟೇ ತೇಪೆ ಹಚ್ಚಿದ್ರೂ ಅದು ತಾತ್ಕಾಲಿಕ‌ ಸೋ ನಿನ್ ಭಾವನೆಗಳನ್ನ ನೀನೇ ನಿರ್ಲಕ್ಷ್ಯ ಮಾಡಿ ಬೇರ್ಯಾವ್ದೋ ಬಣ್ಣ ಹಚ್ಬೇಡ ಆಯ್ತಾ?
           ಬರೋಬ್ಬರಿ ಎರಡು ಮಳೆಗಾಲಗಳ ನಂತರ ಮತ್ತೆ ಲವ್ ಲೆಟರ್ ಬರ್ದಿದೀನಿ. ಬರವಣಿಗೆಯ ಶೈಲಿ ಕೊಂಚ ಬದಲಾಗಿರಬಹುದು, ಪದಗಳು ಬದಲಾಗಿರಬಹುದು ಆದ್ರೆ ಭಾವನೆಗಳು ಮಾತ್ರ ಅವತ್ತಿನಂತೇ ಇವೆ ಮತ್ತು ಅಷ್ಟೇ ಪರಿಶುದ್ಧವಾಗಿವೆ, ಮುಂದೆಯೂ ಹೀಗೆ ಇರುತ್ತವೆ ಅವು ಎಂದಿಗೂ ಅಮರ..  ಪತ್ರದ ಸ್ಟಾರ್ಟಿಂಗಲ್ಲಿ ಏನೇನೋ ತಲೆಹರಟೆ ಮಾಡಿದೀನಿ ಅದ್ರಿಂದ ಬೇಜಾರಾಗಿದ್ರೆ ದಯವಿಟ್ಟು ಹೊಟ್ಟೆಗಾಕ್ಕೋ.. ಹೇಗೂ ಇಷ್ಟುದ್ದ ಲೆಟರ್ ಓದ್ಬೇಕಾದ್ರೆ ನಿನಗೆ ಹಸಿವಾಗಿರುತ್ತೆ ಅಂತ ನಂಗೊತ್ತು..
ಹ್ಞೂಂ.. ಹಂಗೇ ಇನ್ನೊಂದ್ ಮಾತು - ಮನುಷ್ಯ ಎಷ್ಟೇ ತಪ್ ಮಾಡಿದ್ರೂ ಅದನ್ನ ಒಪ್ಕೊಂಡು ತಿದ್ಕೋಬೇಕು ಆದ್ರೆ ಯಾವ್ ಕಾರಣಕ್ಕೂ ಮೋಸ‌ ಮಾಡಕ್ ಹೋಗ್ಬಾರ್ದು ಅವು ನಮ್ ಖುಷೀನೆಲ್ಲಾ ನುಂಗಿಹಾಕ್ ಬಿಡ್ತಾವೆ.. ಈ ಮಾತ್ ಯಾಕ್ ಹೇಳ್ದೆ ಅಂತ ಗೊತ್ತಿಲ್ಲ.. ಬಟ್ ಇದು ನಿಂಗಿಂತ ಜಾಸ್ತಿ ನಂಗೇ ಅಪ್ಲೈ ಆಗ್ತದೆ ಬಿಡು.
ಸಾಕ್ ಬಿಡು.. ತಲೆಗ್ ಬಂದಿದ್ದನ್ನೆಲ್ಲಾ ಹೇಳಿದೀನಿ.. ಇನ್ನೂ ಏನಾರ್ ಉಳ್ದಿದ್ರೆ ಮುಂದಿನ್ ಲೆಟರ್ ಅಲ್ಲಿ ಬರೀತಿನಿ... ಕಾಯ್ತಾ ಇರು... ಆದಷ್ಟ್ ಬೇಗ ಯಾವತ್ತಾದ್ರೂ ಸಿಗಣ.. ನಾನೂ ಕಾಯ್ತಾ ಇರ್ತೀನಿ.. ಬೇಜಾನ್ ಮಾತಾಡ್ಬೇಕು, ಈ ಸರಿ ಪಕ್ಕಾ ನಡಗೋದಿಲ್ಲ... ಯಾವತ್ತು ಅಂತ ಹೇಳು.. ಲವ್ ಯೂ..


ಇಂತಿ.
ಮೂರಿಂಚು ಜಾಗವ ಸವೆಸಿದವ...
ಸ್ಕಂದ ಆಗುಂಬೆ


ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ವಿ+ ಪುರವಣಿಯಲ್ಲಿ ಪ್ರಕಟವಾಗಿದೆ..

                         (ಮೂಲಪ್ರತಿ)

Wednesday, 17 May 2017

ಮೌನ ಮಾತಾದಾಗ...


        ಕರುಳಬಳ್ಳಿಯ ಕಡಿದುಕೊಂಡು ಹೊರಬಂದ ಕಂದನೊಂದು ಮೌನವ ಮುರಿದಂತೆ, ಮುಂಗಾರಿನ ಆರಂಭದಲ್ಲಿ ಸದ್ದು ಮಾಡಿದ ಗುಡುಗಿನಂತೆ, ಹುಣ್ಣಿಮೆಯ ದಿನ ಶರಧಿಯು ಮೌನ ಪರದೆಯ ಸರಿಸಿ ಅಲೆಗಳೊಂದಿಗೆ ಅಬ್ಬರಿಸಿದಂತೆ, ಮಡುಗಟ್ಟಿದ ದುಃಖವು ಮೌನದ ಕಟ್ಟೆ ಒಡೆದು ಅಳುವಾಗಿ ಹೊರಹೊಮ್ಮಿದಂತೆ.. ನನ್ನವಳು ಬಹುದಿನಗಳ ನಂತರ ಮೌನದ ಪರಿಧಿಯ ಭೇದಿಸಿ ಭಾವ ತರಂಗಗಳ ಸೃಷ್ಟಿಸಿ ಎನ್ನ ಮನ ಹೊಕ್ಕಳು.. ಅವಳಿಗಾಗಿ ಕಾಡಿದ್ದೆಷ್ಟೋ? ಬೇಡಿದ್ದೆಷ್ಟೋ? ನಾನರಿಯೆ. ಆದರೆ ಒಂದಂತೂ ಅರಿವಾಗಿತ್ತು - ಅವಳೆಂದರೆ ಅಪ್ಪಟ ಮೌನ, ನಾನೆಂದರೆ ಮೌನವನ್ನರಿಯದ ಮಾತು ಎಂದು. ಮಾತಿಗೂ ಮೌನಕ್ಕೂ ಎತ್ತಣಿಂದೆತ್ತಣ ಸಂಬಂಧ? ನನ್ನ ಪ್ರತಿ ಮಾತಿಗೂ ಅವಳ ಮೌನ ಉತ್ತರಿಸುತ್ತಿತ್ತು ಅಂತೆಯೇ ಅವಳ ಮೌನಕ್ಕೆ ನನ್ನ ಮಾತು ಕೂಡಾ.. ಹೀಗಿರುವಾಗಲೇ ಮೌನಕ್ಕೂ ಮಾತಿಗೂ ಪ್ರೀತಿ ಹುಟ್ಟಿದ್ದು.
        ಎನ್ನ ಹೃದಯದ ಭಾವನೆಗಳನ್ನೆಲ್ಲಾ ಒಟ್ಟುಹಾಕಿ ಮಾತಿನ ಮೂಲಕ ಅವಳಿಗೆ ತಲುಪಿಸಿದೆ, ಇನ್ನಾದರೂ ಮೌನವ ಮುರಿಯಲೆಂದು. ಊಹ್ಞೂಂ.. ಎಲ್ಲವೂ ವ್ಯರ್ಥ. ನನ್ನಷ್ಟೂ ಮಾತುಗಳನ್ನೂ ಅವಳ ಒಂದೇ ಒಂದು ಮೌನ ನುಂಗಿಹಾಕಿತ್ತು. ಅವಳ ಮೌನ ತಪಸ್ಸಿನ ಮುಂದೆ ನಾನು ಸೋತಿದ್ದೆ, ಎನ್ನ ಮಾತುಗಳಿಗೆ ಕಿಂಚಿತ್ತೂ ಕದಡದ ಅವಳ ಮೌನದ ಅಗಾಧತೆಯ ಬಗ್ಗೆ ನನ್ನೊಳಗೆ ಕುತೂಹಲವೆದ್ದಿತ್ತು. ಎಂತಾದರೂ ಸರಿಯೇ ಅವಳ ಮೌನವನ್ನು ಮುರಿಯಲೇ ಬೇಕೆಂಬ ಶಪಥ ತೊಟ್ಟು ಪದೇ ಪದೇ ಎನ್ನ ಮಾತಿನ ಬಾಣಗಳ ಅವಳತ್ತ ಎಸೆದೆ, ಕರೆದೆ, ಕೂಗಿದೆ, ಗೋಗರೆದೆ, ಬಿಕ್ಕಿ ಬಿಕ್ಕಿ ಅತ್ತೆ.. ಊಹ್ಞೂಂ.. ಅವಳ ಮೌನ ಎಳ್ಳಷ್ಟೂ ಕರಗಲಿಲ್ಲ ಬದಲಾಗಿ ಇನ್ನೂ ಗಾಢವಾಗುತ್ತಾ ಹೋಯಿತು.. ಕಾರ್ಮೋಡ ಕವಿದ ಕಗ್ಗತ್ತಲ ಅಮಾವಾಸ್ಯೆಯ ರಾತ್ರಿಯಂತೆ ದಟ್ಟವಾಯಿತು.
        ನಾನೋ ಛಲ ಬಿಡದ ಹಠವಾದಿ, ಅವಳೋ ಬರೀ ಮೌನಿ.
        ಮತ್ತೆ ಶುರುವಾಯಿತು ಯುದ್ಧ ಮಾತಿಗೂ, ಮೌನಕ್ಕೂ. ಈ ಬಾರಿ ನನ್ನದು ಕವಿತೆಗಳ ಬಾಣ.. ಅವಳಂದವನು ವರ್ಣಿಸಿದೆ, ಅವಳ ಮೌನವನ್ನು ಚಿತ್ರಿಸಿದೆ, ಕೊರೆದೆ, ಕೆತ್ತಿದೆ, ಪುಟಗಟ್ಟಲೆ ಬರೆದೆ. ಬರೆದದ್ದನ್ನೆಲ್ಲಾ ಅವಳಿಗೊಪ್ಪಿಸಿದೆ, ಅವಳ ಕಂಗಳು ಕವಿತೆಯ ಮೇಲೆ ಓಡಾಡಲು ನನಗೆ ಒಳಗೊಳಗೇ ಖುಷಿ.. ಪ್ರಾಸಗಳ ಹುಡುಕಿ ನನಗೆ ತ್ರಾಸವಾಯಿತೇ ಹೊರತು ಅವಳ ಮೌನ ಕರಗಲಿಲ್ಲ, ಸಾಸಿವೆಯಷ್ಟೂ ಕಿರಿದಾಗಲಿಲ್ಲ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಲಾವಿದನಾದೆ, ಬಣ್ಣಗಳೊಂದಿಗೆ ಯುದ್ಧಕ್ಕೆ ಹೊರಟೆ, ಅವಳಂದವನು ಚಿತ್ರಿಸಿದೆ, ಅವಳ ರೂಪವನ್ನು ಯಥಾವತ್ತು ಪುಟಕ್ಕಿಳಿಸಿದೆ, ಅವಳ ಮೌನಕ್ಕೊಂದು ಆಕಾರ ಕೊಟ್ಟೆ, ಗೀಚಿದೆ, ಬಣ್ಣಗಳನ್ನೆಲ್ಲಾ ಒಟ್ಟು ಸೇರಿಸಿ ಬಿಳಿ ಹಾಳೆಯ ಮೇಲೆ ಸುರಿದೆ, ವರ್ಣ ಚಿತ್ತಾರವ ಮೂಡಿಸಿದೆ, ಬಣ್ಣಗಳೊಂದಿಗೆ ಗುದ್ದಾಡಿದೆ, ಕೈಗೆಲ್ಲಾ ಬಣ್ಣಗಳ ಮೆತ್ತಿಕೊಂಡೆ, ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಅವಳ ಪಾದಕ್ಕೆ ಅರ್ಪಿಸಿದೆ. ನಿಶ್ಚಲವಾಗಿ ಕುಳಿತವಳು ಈಗಲಾದರೂ ಅಲುಗಾಡಲೆಂದು.. ಊಹ್ಞೂಂ ಮತ್ತೆ ಸೋತಿದ್ದೆ, ಅವಳ ಕಂಗಳು ಚಲಿಸಿದವೇ ಹೊರತು ಮೌನವಲ್ಲ.. ಇನ್ನು ಹೋರಾಡಲು ಶಕ್ತಿ ಉಳಿದಿರಲಿಲ್ಲ, ನಿಂತಲ್ಲೇ ಕುಸಿದು ಕುಳಿತೆ, ಕೊನೆಗೂ ಅವಳ ಮೌನಕ್ಕೆ ಶರಣಾಗಿ ಮಾತಿಗೆ ಪೂರ್ಣವಿರಾಮವನ್ನಿಟ್ಟೆ. ಅವಳ ಕಂಗಳನ್ನೇ ದಿಟ್ಟಿಸಿದೆ, ಆಗಿದ್ದಾಗಲಿ ಎಂದು ಅವಳ ತೊಡೆಯ ಮೇಲೆ ತಲೆಯೂರಿ ಮಲಗಿಬಿಟ್ಟೆ. ಅವಳು ಪ್ರತಿಕ್ರಿಯಿಸಲಿಲ್ಲ.
        ಎಷ್ಟು ಹೊತ್ತು ಕಳೆದಿತ್ತೋ ಗೊತ್ತಿಲ್ಲ, ನಿದ್ರೆಗೆ ಜಾರಿದ್ದೆ. ಹಣೆಯ ಮೇಲೆ ಬೆಚ್ಚಗಿನ ಭಾವವೊಂದು ಹರಿದಂತಾಗಲು ಮಗ್ಗಲು ಬದಲಿಸಿದೆ. ಹನಿಯೊಂದು ಕೆನ್ನೆ ಸವರಿತು, ಕಣ್ಬಿಟ್ಟೆ.. ಮತ್ತೊಂದು ಹನಿ ಬೀಳಲು ಫಕ್ಕನೆ ಎದ್ದು ಕುಳಿತೆ, ಅವಳ ಕಣ್ಣಂಚಿನಲಿ ಹನಿಯೊಂದು ಹೊರಬರಲು ತವಕಿಸುತ್ತಿತ್ತು, ಒರೆಸಲು ಕೈ ಚಾಚಿದೆ ಜಾರಿ ಬಿತ್ತು.  ಧಾರಾಕಾರವಾಗಿ ಅತ್ತಳು, ಏನೂ ತೋಚದೆ ಮೂಕನಾದೆ. ಅಲ್ಲೇ ಬಿದ್ದಿದ್ದ ಬಿಳಿ ಹಾಳೆಯೊಂದನ್ನು ಎತ್ತಿಕೊಂಡು ಏನನ್ನೋ ಗೀಚಿ ಕೈಗಿತ್ತಳು, ಹಾಳೆಯನ್ನೇ ದಿಟ್ಟಿಸಿದೆ.. ಅದರಲ್ಲಿ ಬರೆದಿತ್ತು - "ನಾನೊಬ್ಬಳು ಮಾತು ಬಾರದ ಮೂಗಿ, ನೀ ಎಷ್ಟೇ ಕೂಗಿದರೂ ನಾ ಬರಿಯ ಮೌನಿ.." ತಲೆಯೆತ್ತಿದೆ, ಅವಳ ಕಣ್ಣಂಚು ಮಾತನಾಡುತ್ತಿತ್ತು, ಅವಳ ಅಸಹಾಯಕತೆ ಎಲ್ಲವನ್ನೂ ವಿವರಿಸಿತ್ತು. ನನ್ನ ಮಾತುಗಳು ನಾಲಗೆಯಲ್ಲೇ ಕರಗಿ ಹೋದವು,
        ಈಗ ನಾನು ಮೂಗನಾಗಿದ್ದೆ, ಮಾತು ಬರುವ ಮೂಗನಾಗಿದ್ದೆ..
ಅವಳು ಮಾತಾದಳು.. ನಾನು ಮೌನಿಯಾದೆ. ಮಾತು ಮೌನವಾಯಿತು, ಮೌನ ಮಾತಾಯಿತು.. ಕ್ಷಣಾರ್ಧದಲ್ಲಿ ಎಲ್ಲವೂ ಬದಲಾಗಿತ್ತು, ಭಾವನೆಯ ಹೊರತು..
                                             
- ಸ್ಕಂದ ಆಗುಂಬೆ

ಈ ಲೇಖನ ಕನ್ನಡಪ್ರಭ ದಿನಪತ್ರಿಕೆಯ "ನಾವು" ಪುರವಣಿಯಲ್ಲಿ ಪ್ರಕಟವಾಗಿದೆ..

                        (ಮೂಲಪ್ರತಿ)

Sunday, 14 May 2017

ಅಪ್ಪ, ಅಮ್ಮ ಮತ್ತು ನಾನು



ನೀವ್ ಯಾವ್ದಾರ್ ಹುಡುಗಿಯನ್ನ ಪ್ರೀತ್ಸಿದ್ರೆ ಅದನ್ನ ಅವ್ಳಿಗ್ ತಿಳ್ಸೋಕ್ಕೋಸ್ಕರ ಪ್ರಪೋಸ್ ಮಾಡ್ಬೇಕು.. ಅವ್ಳ್ ಬರ್ತ್ ಡೇಗೆ ಹನ್ನೆರಡ್ ಗಂಟೆಗೆ ಸರಿಯಾಗ್ ವಿಶ್ ಮಾಡಿ ಪ್ರೀತಿಯ ಅಗಾಧತೆಯನ್ನ ತೋರ್ಪಡಿಸಬೇಕು, ವ್ಯಾಲೆಂಟೆನ್ಸ್ ಡೇಗೆ ಲವ್ ಯೂ ಬೇಬಿ.. ನೀನೇ ನನ್ ಸರ್ವಸ್ವ ಅಂತ ಬಾಯ್ಬಿಟ್ಟು ಹೇಳಿ ಅವ್ಳನ್ ಇಂಪ್ರೆಸ್ ಮಾಡ್ಬೇಕು, ಗಿಫ್ಟ್ ಕೊಟ್ಟು ನಂದು ಟ್ರೂ ಲವ್ ಕಣೇ ಅಂತ ತೋರಿಸ್ಕೋಬೇಕು!

ಬಟ್.‌.
ಅಪ್ಪ - ಅಮ್ಮಂದಿರ ವಿಷ್ಯದಲ್ಲಿ?
ನಾನಂತೂ ಇದೂವರೆಗೂ ಅಪ್ಪ - ಅಮ್ಮನಿಗೆ ಬರ್ತ್ ಡೇ ವಿಶ್ ಮಾಡಿಲ್ಲ, ಹ್ಯಾಪಿ ಮದರ್ಸ್ ಡೇ, ಹ್ಯಾಪಿ ಫಾದರ್ಸ್ ಡೇ.. ಲವ್ ಯೂ ಮಾ.. ಲವ್ ಯೂ ಪಾ.. ಅಂತ ಹೋಗಿ ನನ್ನೊಳಗಿರೋ ಪ್ರೀತಿಯನ್ನ ಹೇಳ್ಕೊಂಡಿಲ್ಲ, ಅವ್ರು ಏನಾದ್ರೂ ಸಾಧಿಸಿದಾಗ ಕಂಗ್ರಾಟ್ಸ್ ಅಂತ ಕೈ ಕುಲುಕಿಯೂ ಇಲ್ಲ.. ಆದ್ರೂ ಅವರ್ಯಾವತ್ತೂ ಬೇಜಾರ್ ಮಾಡ್ಕೊಂಡಿಲ್ಲ.. ಬಾಯ್ಬಿಟ್ಟು ಹೇಳದಿದ್ದರೂ ಇರುತ್ತದಲ್ಲ ಆ ಲವ್ವೇ ಟ್ರೂ ಲವ್ವು! 😘

ನಾನ್ ಅಪ್ಪ - ಅಮ್ಮನ ಜೊತೆ ನಡೆದುಕೊಳ್ಳೋ ರೀತಿ ತುಂಬಾ ಜನರಿಗೆ ವಿಚಿತ್ರ ಅನ್ನಿಸ್ಬೋದು..
ಊರಿಗ್ ಹೋದಾಗ ನಾನ್ ಫ್ರೆಂಡ್ಸು, ದೋಸ್ತ್ರು ಅಂತ ಗ್ಯಾಂಗ್ ಕಟ್ಕೊಂಡ್ ತಿರ್ಗೋಕ್ಕಿಂತ ಅಪ್ಪನ ಜೊತೆ ಸುತ್ತಾಡೋದೇ ಜಾಸ್ತಿ.. ಏಯ್.. ಹೋಗಾ.. ಬಾರಾ ಅಂತಾನೇ ಅಪ್ಪ - ನಾನು ಮಾತಾಡದು.. ಇವತ್ತಿಗೂ ನನ್ನಪ್ಪ ನಾ ಮಾಡೋ ಖರ್ಚಿನ ಡಿಟೇಲ್ಸ್ ಕೇಳಿಲ್ಲ.. ಹಾಗಂತ ನಮ್ಮನೆಯಲ್ಲಿ ಕೂತು ತಿಂದರೂ ಕರಗದಷ್ಟು ಸಂಪತ್ತೇನು ಇಲ್ಲ.. ಮೊನ್ನೆ ಮೊನ್ನೆಯಷ್ಟೇ ಮಾಲಿನಿ ಅತ್ತೆ ನನ್ ಜೊತೆ ಮಾತಾಡ್ಬೇಕಾದ್ರೆ "ನಿಮ್ಮಪ್ಪ ನಿನ್ನನ್ನ ಸ್ವತಂತ್ರವಾಗಿ ಬೆಳೆಸಿದ ರೀತಿ ತುಂಬಾ ಡಿಫರೆಂಟ್.. ಅದು ಸಾಮಾನ್ಯ ಅಪ್ಪಂದಿರಿಗೆ ಸಾಧ್ಯ ಆಗೋದಿಲ್ಲ" ಅಂದಾಗ ನನ್ನಪ್ಪನ ಬಗ್ಗೆ ಹೆಮ್ಮೆಯಾಗಿದ್ದು ಸುಳ್ಳಲ್ಲ..

ಇನ್ನು ನನ್ನಮ್ಮ.. ಅವಳೊಂದಿಗೆ ನನ್ನ ತಲೆಹರಟೆ, ಮುನಿಸು, ಅನುಮಾನ, ಫಿಲಾಸಫಿ ಎಲ್ಲವನ್ನೂ ಹಂಚಿಕೊಳ್ತೇನೆ.. ನಾ ಜಾಸ್ತಿ ಲವ್ ಲೆಟರ್ಸ್ ಬರೆದಾಗ ಎಲ್ರೂ "ನಿಮ್ಮನೆಯಲ್ಲಿ ಏನೂ ಹೇಳಲ್ವಾ" ಅಂತ ಆಶ್ಚರ್ಯಪಟ್ಟಿದ್ರು.. ಆದ್ರೆ ನಾ ಬರ್ದಿರೋ ಲವ್ ಲೆಟರ್ಸ್ಗಳನ್ನ ಎಲ್ಲರಿಗಿಂತ ಮೊದಲು ತೋರಿಸೋದೇ ಅಮ್ಮನಿಗೆ.. ಫೋನಲ್ಲೇ ಓದಿ ಹೇಳಿ, ಹೇಗಾಗಿದ್ಯೇ ಅಂದಾಗ.. ಅಮ್ಮ ಅವಳಿಗೆ ತೋಚಿದಷ್ಟು ಸಲಹೆಗಳನ್ನ ಕೊಟ್ಟು.. ಕೊನೆಯಲ್ಲಿ ಲವ್ ಲೆಟರ್ಸ್ ಬಿಟ್ಟು ಬೇರೆ ಏನಾರ್ ಬರ್ಯೋ.. ಚೆನ್ನಾಗಿರುತ್ತೆ ಅಂತ ಸಪೋರ್ಟ್ ಮಾಡಿದ್ದಾಳೆ ಹೊರತು.. ಯಾವತ್ತೂ ಕೂಡ "ಹೇಳು, ಯಾಕ್ ಬರ್ದಿದ್ದು? ಯಾರಿಗ್ ಬರ್ದಿದ್ದು?" ಅಂತ ಜಾಸ್ತಿ ಕೆದುಕೋಕೆ ಹೋಗಿಲ್ಲ.. ನನ್ನ ವಯಸ್ಸಿನ ತುಮುಲಗಳನ್ನ ನಾ ನಿರಾತಂಕವಾಗಿ ವ್ಯಕ್ತಪಡಿಸೋಕೆ ಇಂತಹ ವಾತಾವರಣವೇ ಪ್ರಮುಖ ಕಾರಣ..
ಅಪ್ಪ‌ - ಅಮ್ಮನಿಗೆ ನಾ ದಾರಿ ತಪ್ಪೋದಿಲ್ಲ ಅನ್ನೋ ಓವರ್ ಕಾನ್ಫಿಡೆನ್ಸೋ? ಅಥವಾ ದಾರಿ ತಪ್ಪಿದ್ರೆ ವಾಪಾಸ್ ಬರ್ತಾನೆ ಅನ್ನೋ ನಂಬಿಕೆಯೋ? ಗೊತ್ತಿಲ್ಲ.. ಒಟ್ನಲ್ಲಿ ನನ್ನ ಮಾರ್ಕ್ಸ್ ಕಾರ್ಡಿನಿಂದ ಹಿಡಿದು.. ನನ್ನ ತಲೆಹರಟೆ ಕೆಲಸಗಳನ್ನೆಲ್ಲಾ ಸಹಿಸಿಕೊಂಡಿದ್ದಾರೆ.. ಬಹುಶಃ ಅವರ ಇಂತಹ ಸ್ವಭಾವವೇ ನನಗೆ ನನ್ನ ಇತಿಮಿತಿಗಳನ್ನ ಸ್ವತಃ ಅರಿತುಕೊಳ್ಳಲು ಸಹಕರಿಸಿದ್ದು.. ಸಂಪೂರ್ಣ ಸ್ವಾತಂತ್ರ್ಯ ಇದ್ದಾಗ್ಯೂ ಅದನ್ನು ಸ್ವೇಚ್ಛಾಚಾರವನ್ನಾಗಿಸಿಕೊಳ್ಳದಂತೆ ತಡೆದಿರುವುದು..

ಸೋ ನನ್ನ ಅಪ್ಪ - ಅಮ್ಮ ನನ್ನ ಬೆಸ್ಟ್ ಫ್ರೆಂಡ್ಸು.. ಈ ಥರ ಭಾವನೆ ಮೂಡಿಸಿದ್ದಕ್ಕೆ ಥ್ಯಾಂಕ್ಸ್ ಅನ್ಬೇಕಾ? ಅದಕ್ಕೂ ಮಿಗಿಲಾಗಿದ್ ಯಾವ್ದಾರ್ ಇದ್ಯಾ? ಗೊತ್ತಿಲ್ಲ..
ಬಟ್ ಅವರಿಬ್ಬರ ಮೇಲೆ ಸದಾ ಇಷ್ಟೇ ಪ್ರೀತಿ - ಅಭಿಮಾನ ಉಳಿಸಿಕೊಳ್ಳೋ ಶಕ್ತಿ ನನಗೆ ದಕ್ಕಲಿ ❤

ಏನೋ ಬರ್ಯೋಕ್ ಹೊರ್ಟಿದ್ದು, ಏನೋ ಆಯ್ತು.. ಎಡಿಟ್ ಮಾಡೋ ಮನಸಿಲ್ಲ ಸೋ ಸಹಿಸಿಕೊಳ್ಳಿ 😊

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...