Tuesday, 20 October 2015

ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ...





    

ನನ್ನೊಲವೇ..
               ಖಾಲಿತನ ಆವರಿಸಿದೆ, ಬರೆಯಲೆಂದು ಲೇಖನಿ ಹಿಡಿದರೆ ಪದಗಳೇ ಸಿಗುತ್ತಿಲ್ಲ, ಬಿಳಿ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗಳಿಂದಾಯ್ದ ಕೆಲ ನೆನಪುಗಳನ್ನು ಅಕ್ಷರ ರೂಪದಲ್ಲಿ ನಿನ್ನ ಮುಂದೆ ಹರವಿಡುತ್ತಿದ್ದೇನೆ ಒಮ್ಮೆ ಕಣ್ಣಾಯಿಸಿ ಬಿಡು....
               ನೀನೇನು ನನ್ನ ಬಾಲ್ಯದ ಗೆಳತಿಯಲ್ಲ,  ಹೃದಯದೊಳಗೆ ನಿನ್ನ ಪ್ರವೇಶವಾಗಿ ದ್ವಾದಶ ಮಾಸಗಳಾಯಿತಷ್ಟೇ, ಅಂದು ನೀ ನನ್ನ ಕಣ್ಣಿಗೆ ಕಾಣದೇ ಇದ್ದಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನು!! ನನ್ನ ಪಾಲಿಗೆ ಅದು ಮರೆಯಲಾಗದ ದಿನ, ಹೃದಯದೊಳಗೆ ಸಾವಿರ ಕನಸುಗಳು ಗರ್ಭತಳೆದ ದಿನ, ರಾತ್ರಿ ಬೀಳುತ್ತಿದ್ದ ತರಹೇವಾರಿ ಸ್ವಪ್ನಗಳಿಗೆ ಪೂರ್ಣವಿರಾಮವನ್ನಿಟ್ಟ ದಿನ.. ಅಂದಿನಿಂದ ಇಂದಿನವರೆಗೂ ನೀ ನನ್ನ ಕನಸಲ್ಲಿ ಬಾರದ ರಾತ್ರಿಯೇ ಇಲ್ಲ.. ನನ್ನ ಕನಸುಗಳನ್ನೆಲ್ಲ ನೀನೇ ಕೊಂಡುಕೊಂಡಿದ್ದಿಯೇನೋ ಎಂಬ ಅನುಮಾನ ಕಾಡುತ್ತಿದೆ, ಇವೆಲ್ಲಾ ಭಾವಗಳಿಗೀಗ ಭರ್ತಿ ಒಂದು ವರ್ಷ.
               ನಿನ್ನನ್ನು ಮೊದಲ ಬಾರಿಗೆ ನೋಡಿದ ಮಧುರ ಕ್ಷಣ ನನ್ನ ಕಣ್ಣೆದುರಲ್ಲಿ ಇಂದಿಗೂ ಹಚ್ಚಹಸುರಾಗಿಯೇ ಇದೆ, ಬಹುಶಃ ನೀ ಅಂದು ತೊಟ್ಟಿದ್ದ ಹಸುರು ಬಣ್ಣದ ಚೂಡಿದಾರವೇ ಇದಕ್ಕೆ ಕಾರಣವಿರಬೇಕು, ಆ ಕ್ಷಣದಲ್ಲಿ "ವಾಹ್!! ಹುಡ್ಗಿ ಒಂದ್ ರೇಂಜಿಗೆ ಇದ್ದಾಳೆ.." ಅನ್ನಿಸಿದರೂ ಅದು ಪ್ರೀತಿಯೋ? ವಯೋಸಹಜ ಆಕರ್ಷಣೆಯೋ? ಎಂಬ ಗೊಂದಲಕ್ಕೆ ಸಿಲುಕಿ ಸುಮ್ಮನಾಗಿದ್ದೆ. ಆದರೆ ಅದಾಗಿ ಮೂರ್ನಾಲ್ಕು ದಿನಗಳಂತರದಲ್ಲಿದ್ದ ರಕ್ಷಾಬಂಧನದ ದಿನ ನೀನು ನನ್ನ ಮುಖ ನೋಡಿ "ಅಣ್ಣಾ ಹ್ಯಾಪಿ ರಕ್ಷಾಬಂಧನ್" ಅಂದಾಗ ಹೃದಯಕ್ಕೆ ಸೂಜಿ ಚುಚ್ಚಿದಂತಾಗಿ ಅದು ಪ್ರೀತಿ ಅಂತ ಕನ್ಫರ್ಮ್ ಆಯ್ತು, ಆಗ “ಛೇ ಇವಳ ಬಾಯಲ್ಲಿ ಅಣ್ಣ ಎನ್ನಿಸಿಕೊಂಡೆನ್ನಲ್ಲಾ ಎಂತಹಾ ದುರಂತ” ಎಂದು ಯೋಚಿಸುತ್ತಿರಬೇಕಾದರೆ ನಿನಗೆ ಪ್ರಪೋಸ್ ಮಾಡೋಕೆ ಹೋಗಿ ರಾಕಿ ಕಟ್ಟಿಸಿಕೊಂಡ ಬಡಪಾಯಿಯ ಬಾಡಿಹೋಗಿದ್ದ ಮುಖ ನೋಡಿ ಅಬ್ಬಾ ಬಚಾವಾದೆ ಅಂತ ನಿರುಮ್ಮಳನಾಗಿದ್ದೆ. ಆದರೂ ಕೆಲವೊಮ್ಮೆ ಸುಮ್ಮನೆ ಕುಳಿತಾಗ ಅವತ್ತು ನೀ ನಂಗೆ ರಾಕಿ ಕಟ್ಟಿದ್ದರೇ ಒಳ್ಳೇದಿತ್ತೇನು ಎಂದೆನಿಸಿದ್ದಿದೆ ಹಾಗಂತ ಆ ಕಾರಣ ಇಟ್ಕೊಂಡು ಈ ವರ್ಷ ನನ್ನ ಕೈಗೆ ರಾಕಿ ಕಟ್ಬೇಡ ಮಾರಾಯ್ತಿ. ನಿನ್ನ ರೂಪಕ್ಕೆ ಮನಸೋತು ಇಷ್ಟೆಲ್ಲ ಕನಸು ಹುಟ್ಟಿದ್ದರೆ ಅದನ್ನು ಮೋಹ ಅಂದುಕೊಂಡು ನಿನ್ನನ್ನು ಮರೆತು ಬಿಡಬಹುದಿತ್ತು, ಆದರೆ ನನ್ನನ್ನು ಕ್ಲೀನ್ ಬೋಲ್ಡ್ ಮಾಡಿದ್ದು ನಿನ್ನ ಆ ಶುದ್ಧ ಮನಸ್ಸು, ಅದೊಂದು ದಿನ ನಾ ಎನ್ನ ಮನದ ಭಾವನೆಗಳನ್ನೆಲ್ಲ ನಿನ್ನ ಬಳಿ ಹಂಚಿಕೊಂಡಾಗ "ಅದನ್ನೆಲ್ಲ ತಕ್ಷಣಕ್ಕೆ ಹೇಳೋಕಾಗಲ್ಲ ಸ್ವಲ್ಪ ಸಮಯ ಬೇಕು" ಅಂತ ಹೇಳಿ ನನ್ನಾಸೆಗೆ ತುಪ್ಪ ಸುರಿದೆ, ಅದೇಕೋ ಗೊತ್ತಿಲ್ಲ ರೋಗಿ ಬಯಸಿದ್ದು ಬರ್ಗರ್ ವೈದ್ಯ ಹೇಳಿದ್ದೂ ಬರ್ಗರ್ ಅನ್ನೋ ಹಾಗೆ ದಿನೇ ದಿನೇ ನೀ ನನಗೆ ಹತ್ತಿರಾಗುತ್ತಾ ಹೋದೆ, ನೀ ನಿಮಿಷಕ್ಕೆ ನೂರು ಕಿಲೋಮೀಟರ್ ವೇಗದಲ್ಲಿ ಮಾತಾಡ್ತಾ ಪಟಪಟನೆ ಕಣ್ಣ ರೆಪ್ಪೆಯ ಮಿಟುಕಿಸ್ತಾ ಇದ್ರೆ ನನಗೆ ನಿನ್ನ ಹತ್ರ ಮಾತಾಡ್ಬೇಕು ಅಂತ ಅನ್ಕೊಂಡಿರೋ ವಿಷ್ಯಾನೇ ಮರೆತು ಹೋಗ್ತಿತ್ತು, ಅದೇ ಕಾರಣಕ್ಕಾಗಿ ನೀ ಎದುರು ಸಿಕ್ಕಾಗ ಜಾಸ್ತಿ ಮಾತನಾಡದೆ ಫೋನ್ ಮಾಡಿ ಅರ್ಧರ್ಧ ಗಂಟೆ ಕಚ್ಕೊಳ್ತಿದ್ದಿದ್ದು, ಮೆಸೇಜ್ ಮಾಡಿ ನಿದ್ದೆ ಹಾಳು ಮಾಡ್ತಿದ್ದಿದ್ದು. ನಿಜ ಹೇಳ್ಬೇಕು ಅಂದ್ರೆ ನನ್ನ ಮೊಬೈಲ್ ಕೀಪ್ಯಾಡ್ ಸವೆದು ಹೋಗೋಕೆ ನೀನೇ ಕಾರಣ!!! ನಿನ್ನನ್ನು ನಗಿಸ್ಬೇಕು ಅನ್ನೋ ಒಂದೇ ಒಂದು ನೆಪ ಇಟ್ಕೊಂಡು ಸಿಲ್ ಸಿಲ್ಲಿಯಾಗಿ ಮನಸ್ಸಿಗೆ ಬಂದಿದ್ದನ್ನ ಬರೆದು, ಕಿತ್ತೋದ ಕವನಗಳನ್ನ, ಉದ್ದುದ್ದ ಫಿಲಾಸಫಿಗಳನ್ನ ಟೈಪ್ ಮಾಡಿ ನನ್ನ ಮೊಬೈಲಿಗೆ ಘನಘೋರ ಶಿಕ್ಷೆಯನ್ನೇ ಕೊಟ್ಟಿದ್ದೇನೆ. ಅದೇ ಕಾರಣಕ್ಕೋ ಏನೋ?? ನೀನೀಗ ಅದಕ್ಕೆ ರಜೆ ಕಲ್ಪಿಸಿರೋದು!!!
               ಹೌದು.. ನೀನೀಗ ಮೊದಲಿನಂತಿಲ್ಲ, ಮನೇಲಿ ಒಬ್ಳೇ ಇದೀನಿ ಬೇಜಾರಾಗ್ತಿದೆ ಏನಾದ್ರು ಮಾತಾಡು ಎಂದು ವಾರಕ್ಕೊಮ್ಮೆಯಾದರು ನೀನಾಗಿಯೇ ಕಾಲ್ ಮಾಡ್ತಾ ಇದ್ದವಳು, ಈಗ ನಾನಾಗಿಯೇ ಮಾಡಿದರೂ ಜಾಸ್ತಿ ಮಾತನಾಡುತ್ತಿಲ್ಲ, ಯಾವುದೋ ಅಪರಿಚಿತನೊಡನೆ ಮಾತನಾಡುವಂತೆ ವರ್ತಿಸುತ್ತಿದ್ದೀಯ. ಮೆಸೇಜುಗಳಿಗಂತೂ ಮೌನವೇ ಉತ್ತರ, ನಿನ್ನ ಈ ಮೌನಕ್ಕೆ ಕಾರಣವೇನೆಂಬುದು ಸತ್ಯವಾಗ್ಲೂ ನಂಗೊತ್ತಿಲ್ಲ, ನಗುನಗುತ್ತಲೇ ಮನದ ಸನಿಹಕ್ಕೆ ಬಂದು ಕನಸುಗಳನ್ನು ಬಿತ್ತಿದ ನೀನೇ ಹೀಗೆ ವಿನಾಕಾರಣವಾಗಿ ಮೌನಕ್ಕೆ ಶರಣಾದರೆ ನಾನೇನೆಂದುಕೊಳ್ಳಬೇಕು? ನನ್ನ ಮೇಲೇನಾದರು ಕೋಪಾನಾ? ಅಥವಾ ನನ್ನನ್ನು ದೂರ ಮಾಡಲು ನೀನಿಟ್ಟ ಮೊದಲ ಹೆಜ್ಜೆಯಾ ಇದು? ಪರವಾಗಿಲ್ಲ ಬಿಡು ನಿನಗೆ ಅದೆಷ್ಟೇ ಕಾರಣಗಳಿದ್ದರೂ ನಾನು ಮಾತ್ರ ನಿಂಗೆ ಓದೋಕೆ ತುಂಬಾ ಇರಬಹುದು ಅಥವಾ ಮನೇಲಿ ಮೊಬೈಲ್ ನೋಡೋದು ಕಡಿಮೆ ಮಾಡೋಕೆ ಹೇಳಿರಬಹುದು ಅಂತಾನೇ ತಿಳಿದುಕೊಳ್ತೀನಿ. ಒಂದುವೇಳೆ ನನ್ನನ್ನು ದೂರ ಮಾಡ್ಬೇಕು ಅನ್ನೋದೆ ನಿನ್ನ ಉದ್ದೇಶ ಆಗಿದ್ರೆ ಇಂತಹ ವ್ಯರ್ಥ ಪ್ರಯತ್ನವನ್ನು ಬಿಟ್ಟು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಬಿಡು ಯಾಕಂದ್ರೆ ಇಂತಹ ಚಿಕ್ಕಪುಟ್ಟ ಕಾರಣಗಳಿಗೆ ಸಾಯುವುದು ಮೋಹವೇ ಹೊರತು ಪ್ರೀತಿಯಲ್ಲ..
               ನಾ ನಿನ್ನ ಬಳಿ ಬಾಯ್ಬಿಟ್ಟು "ಐ ಲವ್ ಯೂ" ಅಂತ ಹೇಳ್ದೇ ಇರ್ಬೋದು ಆದ್ರೆ ಅಂದು ನಾ ನಿನಗೆ ಕೊಟ್ಟ ಮಾತಿನಂತೆ ಓದು ಮುಗಿಸಿ ನೀ ನಿನ್ನ ಕಾಲ ಮೇಲೆ ನಿಲ್ಲುವ ತನಕ ನಿನಗಾಗಿ ಕಾಯುತ್ತೇನೆ ಆದರೆ ಅಲ್ಲಿಯವರೆಗೆ ನಿನ್ನ ಹೃದಯದ ಕವಾಟ ಖಾಲಿಯಾಗಿಯೇ ಇರುತ್ತದಾ?? ಇದ್ದರೂ ನನಗೆ ಪ್ರವೇಶ ನೀಡುತ್ತೀಯಾ?? ಈ ಪ್ರಶ್ನೆಗಳಿಗೆ ಈಗಲೇ ಉತ್ತರಿಸಿ ಬಿಡು. ಹೂಂ ಅನ್ನೋದಾದ್ರೆ ಇನ್ಮೇಲೆ ತಮಾಷೆಗೂ ಅಣ್ಣ ಎನ್ನಬೇಡ, ನೋ ಅನ್ನೋದಾದ್ರೆ ಆದಷ್ಟು ಬೇಗ ಸ್ಪಷ್ಟಪಡಿಸಿಬಿಡು ಯಾವುದಕ್ಕೂ ಈಗೊಂದು ಮಿಸ್ ಕಾಲ್ ಕೊಡು ಕಾಯ್ತಾ ಇದ್ದೀನಿ..
                ಅಂದಹಾಗೆ ಈ ಪತ್ರ ಬರೆಯಲು ಆರಂಭಿಸುವ ಮುನ್ನ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗೆ ಕಾರಣ ಆ ಶೆಟ್ರಂಗಡಿಯ ಯಮಕಾರದ ಮೆಣಸಿನಕಾಯಿ ಬಜ್ಜಿ ಅದ್ಯಾಕೋ ಗೊತ್ತಿಲ್ಲ ಏನಾದ್ರು ತಿನ್ನೋ ಟೈಮಲ್ಲಿ ನಿನ್ನ ನೆನಪು ಹಸಿವಿಗಿಂತ ಜಾಸ್ತಿ ಕಾಡುತ್ತೆ, ಇವೆಲ್ಲವನ್ನೂ ಒಂದೇ ಪದದಲ್ಲಿ ಹೇಳೋದಾದ್ರೆ "ಐ ಮಿಸ್ ಯೂ ಅರ್ಧೇಶ್ವರಿ!!!!" ಇನ್ಮೇಲಾದ್ರೂ ಆಗಾಗ ಕಾಲ್ ಮಾಡ್ತಾ ಇರು, ಅಟ್ಲೀಸ್ಟ್ ಮಿಸ್ ಕಾಲಾದ್ರೂ ಕೊಡು..... ಓಕೆನಾ??

                       
 ಇಂತಿ ನಿನ್ನ ಆರಾಧಕ 
ಕೆ.ಎನ್. ಸ್ಕಂದ ಆಗುಂಬೆ.

                                 (ಮೂಲಪ್ರತಿ)
      ಈ ಪ್ರೇಮಪತ್ರ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.
                                        
                                                                                                                                                                                                     

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...