ಏಯ್ ಕಂದ...!!
ನೀನು ಅದ್ಯಾವ ಘಳಿಗೆಯಲ್ಲಿ ಹುಟ್ಟಿದ್ದು ಮಾರಾಯ..!! ನಿನ್ನ ಮುರಿದು ಹೋಗಿರುವ ಅರ್ಧ ಹಲ್ಲಿನ ಮೇಲೆ ಆಣೆ ಮಾಡಿ ಹೇಳ್ತೀನಿ - ನೀನು ಪೆದ್ದ ಕಣೋ.. ಅದ್ಯಾವ ಜನ್ಮದಲ್ಲಿ ಏನು ಘನಂದಾರಿ ಕೆಲಸ ಮಾಡಿದ್ದೆವೋ? ಏನೋ? ಈ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ, ಆ ಪರಮಾತ್ಮ ನಮ್ಮಿಬ್ಬರಿಗೂ ಮನುಷ್ಯ ರೂಪವನ್ನೇನೋ ನೀಡಿದ ಆದರೆ ಇದ್ರಲ್ಲಿ ನಾನು ಹುಡುಗನಾಗಿ ಹಾಗೂ ನೀನು ಹುಡುಗಿಯಾಗಿ ಹುಟ್ಟಬೇಕಿತ್ತು ಕಣೋ ಆಗ ಅದರ ಮಜಾನೇ ಬೇರೆ ಇರ್ತಿತ್ತು, ಹಾಗೇನಾದ್ರು ಆಗಿದ್ದಿದ್ದರೆ ನಾ ನಿನ್ನನ್ನ ಸಖತ್ತಾಗಿ ಗೋಳು ಹುಯ್ಕೋತಿದ್ದೆ, ನಿನ್ನ ಹಿಂದೆ ಮುಂದೆ ಸುತ್ತಾಡ್ಕೊಂಡು ಯರ್ರಾಬಿರ್ರಿ ಕಾಟ ಕೊಡ್ತಿದ್ದೆ, ಆದ್ರೆ ಈಗ ಎಲ್ಲವೂ ಉಲ್ಟಾ...!!! ಅಲ್ಲಾ ತಂದೆ ನೀನು ಅಷ್ಟೊಂದು ಪುಕ್ಕಲಾನಾ?? ಫಸ್ಟ್ ಟೈಮ್ ನೀನು ನನ್ನ ಜೊತೆ ಮಾತನಾಡುವಾಗಲೇ ಅಂದುಕೊಂಡೆ ನೀನು ತುಂಬಾ ಪಾಪದವನು ಅಂತ..! ನೀ ನನ್ನನ್ನ ಪ್ರೀತಿಸ್ತಾ ಇರೋದು ಇಡೀ ಊರಿಗೇ ಗೊತ್ತಿರೋ ವಿಷಯವಾದ್ರೂ ಅದನ್ನೇ ದೊಡ್ಡ ಸೀಕ್ರೇಟ್ ಅನ್ನೋ ಥರ ಸುತ್ತಿ ಬಳಸಿ ನನ್ನ ಹತ್ರ ಹೇಳೋಕೆ ನೋಡ್ತೀಯಲ್ಲಾ ಅದರ ಬದಲು ಡೈರೆಕ್ಟಾಗಿ ಒಂದೇ ಒಂದು ಸಲ ಐ ಲವ್ ಯೂ ಅಂತ ಹೇಳ್ಬಾರ್ದೇನೋ ಕೋತಿ??.
ಲೋ ಪುಣ್ಯಾತ್ಮ, ನನಗೂ ಬೇರೆ ಹುಡುಗಿಯರ ಥರ ಆಸೆ, ಕನಸು ಎಲ್ಲಾ ಇದೆ ಕಣಯ್ಯಾ.. ಆದ್ರೆ ಅದಕ್ಕೆ ರೆಕ್ಕೆ ಕಟ್ಟಬೇಕಾದ ನೀನೇ ಇಷ್ಟೊಂದು ಹೆದರಿದರೆ ನನ್ನ ಕಥೆ ಏನೋ?? ಹೋಗ್ಲಿ ನಿನ್ನ ವಯಸ್ಸಿನ ಬೇರೆ ಹುಡುಗರನ್ನ ನೋಡಿಯಾದ್ರು ಕಲಿಯಬಾರ್ದಾ? ಹುಡುಗಿಯರು ಒಂದು ಸ್ಮೈಲ್ ಕೊಟ್ರೆ ಸಾಕು ಓಡಿ ಹೋಗಿ ಪ್ರಪೋಸ್ ಮಾಡ್ತಾರೆ ಅಂತಹದ್ದರಲ್ಲಿ ನಾ ನಿನ್ನ ಜೊತೆ ಗಂಟೆಗಟ್ಟಲೆ ಮಾತಾಡ್ತೀನಿ, ಐಸ್ ಕ್ರೀಮ್ ಕೊಡಿಸು ಅಂತ ಬಾಯ್ಬಿಟ್ಟು ಕೇಳಿ ನಿನ್ನ ಜೊತೆಗೇ ನಿಂತ್ಕೊಂಡು ತಿಂದಿದ್ದೀನಿ, ಸಾಲದ್ದಕ್ಕೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸ್ಮೈಲ್ ಕೊಡ್ತೀನಿ, ಇಷ್ಟಾದರೂ ನಿನಗೆ ನಾ ನಿನ್ನ ಪ್ರೀತಿಸ್ತೀನಿ ಅನ್ನೋದು ಗೊತ್ತಾಗಲ್ವಾ?? ಅಲ್ಲಾ ಮಾರಾಯಾ! ನಾ ನಿನ್ನ ಜೊತೆ ಇಷ್ಟೊಂದು ಕ್ಲೋಸಾಗಿ ಇದ್ದೀನಿ ಅಂದ ಮೇಲೂ ನನ್ನ ದೋಸ್ತಿಗೆ ಕಾಲ್ ಮಾಡಿ - ”ಅವಳು ನನ್ನ ಇಷ್ಟಪಡ್ತಾಳಾ?”, ”ಅವಳ ಮನಸ್ಸಲ್ಲಿ ನನ್ನ ಬಗ್ಗೆ ಯಾವ ರೀತಿಯ ಭಾವನೆಗಳಿವೆ?” ಅಂತ ಕೇಳ್ತೀಯಂತಲ್ಲಾ? ನಿನಗೆ ಎಂತ ತಗೊಂಡು ಹೊಡಿಬೇಕು ಮಹರಾಯ!!. ಇವೆಲ್ಲವನ್ನೂ ನನ್ನ ಹತ್ರಾನೇ ಕೇಳು ಒಂದೇ ಉಸಿರಿನಲ್ಲಿ ನಿನ್ನೆಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀನಿ.
ತಥ್... ನೀನಾಗಿಯೇ ಪ್ರಪೋಸ್ ಮಾಡ್ತೀಯೇನೋ ಅಂತ ಕಾದು ಕಾದು ಬೇಜಾರಾಗಿ ಹೋಯ್ತು, ನೋಡು ಕೊನೆಯದಾಗಿ ಒಂದೇ ಒಂದು ಛಾನ್ಸ್ ಕೊಡ್ತಾ ಇದೀನಿ.. ಈ ಪತ್ರ ಓದಿದ ಇಪ್ಪತ್ನಾಲ್ಕು ಗಂಟೆಯ ಒಳಗಾಗಿ ಫೋನ್ ಮಾಡಿ ”ಐ ಲವ್ ಯೂ” ಅಂತ ಹೇಳಿದ್ರೆ ಸರಿ ಇಲ್ಲಾ ಅಂದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಹುಷಾರ್...!!
ಇಂತಿ,
ನಿನಗಾಗಿಯೇ ಇರುವ ನಿನ್ನವಳು.
ಅಬ್ಬಬ್ಬಾ..!! ನಿನ್ನ ಮನಸ್ಸಿಗೆ ಹೀಗೆಲ್ಲಾ ಅನ್ನಿಸಿರಬಹುದಾ ಎಂದು ಊಹಿಸಿಕೊಂಡು ಬರೆಯುವಾಗಲೇ ಮೈ ರೋಮಾಂಚನವಾಗ್ತಿತ್ತು. ಇನ್ನು ನಿಜವಾಗ್ಲೂ ನಿನಗೆ ಹೀಗೆಲ್ಲಾ ಅನ್ನಿಸಿದ್ರೆ ನಾನೇ ಧನ್ಯ..! ಹೇಳು ಮಾರಾಯ್ತಿ, ನಿನಗೆ ಯಾವತ್ತಾದ್ರು ಈ ರೀತಿ ಲವ್ ಲೆಟರ್ ಬರೀಬೇಕು ಅನ್ಸಿತ್ತಾ?? ಹೂಂ.. ಅನ್ನೋದಾದ್ರೆ ಎಂದಿನಂತೆ ಒಂದು ಮಿಸ್ ಕಾಲ್ ಕೊಡು, ವಾಪಾಸ್ ನಾನೇ ಕಾಲ್ ಮಾಡಿ ನೀ ಹಲೋ ಅನ್ನೋ ಮೊದಲೇ ”ಐ ಲವ್ ಯೂ..” ಅಂದುಬಿಡ್ತೀನಿ ಅಥವಾ ನಿನಗೆ ಹೀಗೆಲ್ಲಾ ಅನ್ನಿಸಿರಲಿಲ್ಲ ಅನ್ನೋದಾದ್ರೆ ಒಂದು ಮೆಸೇಜ್ ಮಾಡು ನೆಕ್ಸ್ಟ್ ಟೈಮ್ ಬೇರೆ ರೀತಿ ಬರೆಯೋಕೆ ಟ್ರೈ ಮಾಡ್ತೀನಿ...
ಇಂತಿ,
ನೀನಾಗಿ ಬರೆದ ನಾನು.. ಸ್ಕಂದ ನಾಗೇಂದ್ರ.
ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
(ಮೂಲಪ್ರತಿ)

