Friday, 18 December 2015

ಬಾರದ ಹುಡುಗಿಗೆ ಹಂಬಲಿಸಿದೆ ಮನ....

                                                                   

ಓ ದೇವರೇ..
                   ನಿನ್ನನ್ನ ಎಲ್ರೂ ತ್ರಿಕಾಲ ಜ್ಞಾನಿ ಅಂತಾರೆ!!  ನೀ ಯಾವ ಸೀಮೆಯ ಜ್ಞಾನಿಯೋ??  ಇಷ್ಟ್ ದಿನ ಕೈ ಮುಗಿದು ಕಾಪಾಡು ತಂದೆ ಅಂತಿದ್ದ ಹುಡುಗ ಈಗ ಹೀಗ್ಯಾಕೆ ಮಾತಾಡ್ತಿದ್ದಾನೆ ಅನ್ನೋದು ನಿಂಗೆ ಗೊತ್ತಿರ್ಲೇಬೇಕು ಬಿಕಾಸ್ ಯೂ ಆರ್ ಎ ತ್ರಿಕಾಲ ಜ್ಞಾನಿ ನೋ? ಹೋಗೋಗು ಇನ್ಮುಂದೆ ನಾ ನಿನ್ ಮೇಲೆ ಯಾವತ್ತೂ ನಂಬ್ಕೆ ಇಡಲ್ಲ.
                    ಆ ಹುಡ್ಗಿ ನನ್ನನ್ನ ಯಾವತ್ತಿಗೂ ಪ್ರೀತ್ಸೋದಿಲ್ಲ ಅನ್ನೋದು ನಿಂಗೆ ಗೊತ್ತಿರ್ಲಿಲ್ವಾ? ಗೊತ್ತಿಲ್ಲ ಅನ್ಬೇಡಪ್ಪಾ, ನೀನು ತ್ರಿಕಾಲ ಜ್ಞಾನಿ! ಮುಂದೇನಾಗುತ್ತೆ ಅನ್ನೋದು ನಿಂಗೆ ಗೊತ್ತಿಲ್ದೇ ಇರುತ್ತಾ?? ಮೋಸ್ಟ್ಲಿ ನಿನಗೆ ಹುಡುಗರ ಮೇಲೆ ದ್ವೇಷ ಇದೆ ಅನ್ಸುತ್ತೆ ಅದ್ಕೆ ಹೆಚ್ಚಿನ ಹುಡುಗ್ರು ಲೈಫಲ್ಲಿ ಒಂದೊಂದು ಇತಿಹಾಸ ಇಡ್ತೀಯ!! ಅಲ್ಲಯ್ಯಾ ಚಿಕ್ಕಂದಿನಿಂದಲೂ ಅಜ್ಜ ಹೇಳ್ಕೊಟ್ಟ ಶ್ಲೋಕಗಳನ್ನ ಒಂದಿನಾನೂ ತಪ್ಪಿಸ್ದೆ ನಿಂಗೆ ಒಪ್ಸಿದ್ದಕ್ಕೆ ಇಂಥಾ ಕಾಣಿಕೆ ಕೊಡೋದಾ??
                      ಓಯ್ ನನ್ ಮಾತು ಕೇಳ್ಸ್ಕೊತ್ತಿದ್ದೀಯಾ? ಈಗ ನಾ ಕೇಳೋದಕ್ಕೆಲ್ಲಾ ಉತ್ರ ಕೊಡು. ಅವ್ಳನ್ನ ನನ್ ಜೀವ್ನಕ್ಕೆ ಯಾಕೆ ಪರಿಚಯ್ಸಿದ್ದು?? ಅದೂ ಸಾಲದು ಅನ್ನೋ ಹಾಗೆ ಅವ್ಳನ್ನ ತೀರಾ ಹತ್ರ ಮಾಡಿದ್ಯಾಕೆ?? ಊಹುಂ.. ಅದ್ಕೂ ಮೊದ್ಲು ಅವ್ಳ ಮೇಲೆ ನಂಗೆ ಪ್ರೀತಿ ಬೆಳೆಯೋ ಹಾಗೆ ಮಾಡಿದ್ಯಾಕೆ ಅಂತ ಹೇಳು. ಓಹ್.. ಮುಂದೆ ಮದ್ವೆ ಆಗೋ ಹುಡ್ಗೀಗೆ ಹೇಳೋಕೆ ಹಳೆ ಕಥೆ ಒಂದಿರ್ಲಿ ಅಂತಾನಾ? ನಿಂಗಿದು ಹೊಸತೇನಲ್ಲ ಬಿಡು ನನ್ ತರಾನೇ ಎಷ್ಟೋ ಹುಡ್ಗುರಿಗೆ ಹೀಗೆ ಮಾಡಿ ಮಜಾ ತಂಗೊಡಿದ್ದಿ ಅಲ್ವಾ? ನೀ ಮಾತ್ರ ಇಷ್ಟ ಪಟ್ಟೋರನ್ನೇ ಪಟಾಯಿಸಿಕೊಳ್ತೀಯಾ! ಒಂದೊಂದು ಸರಿ ಒಂದೊಂದ್ ಹೆಸ್ರು ಇಟ್ಕೊಂಡು ನಾಲ್ಕೈದು ಮದ್ವೆ ಆಗ್ತೀಯ ಬಟ್ ನಾವು ನಿಯತ್ತಾಗಿ ಒಬ್ರನ್ನೇ ಇಷ್ಟ ಪಟ್ರೂ ನಮ್ಗೆ ಮೋಸ ಮಾಡಿಸ್ತೀಯ. ನಮ್ ಮಠದಲ್ಲಿ ಹೇಗೂ ಸ್ವಾಮಿಗಳಿಲ್ಲ ಸೋ ಆ ಜಾಗಕ್ಕೆ ನನ್ನನ್ನ ಕೂರಿಸ್ಬೇಕು ಅಂತ ಸ್ಕೆಚ್ ಏನಾದ್ರೂ ಹಾಕಿದ್ದೀಯಾ?? ಹಂಗೆಲ್ಲಾ ಮಾಡಿದ್ ಗೊತ್ತಾದ್ರೆ ಸರಿ ಇರಲ್ಲ ನೋಡು. ಅದಿರ್ಲಿ ಯಾವಾಗ್ಲೂ ಹುಡುಗರೇ ಹುಡ್ಗೀರ ಭಾವನೆಗಳಿಗೆ ಬೆಲೆ ಕೊಡ್ಬೇಕಾ?? ನಮ್ಗೆ ಬೆಲೇನೇ ಇಲ್ವಾ? ಒಂದ್ ಕಣ್ಣಿಗೆ ಬೆಣ್ಣೆ ಒಂದ್ ಕಣ್ಣಿಗೆ ಸುಣ್ಣ ಇದೆಂಥಾ ನ್ಯಾಯ ಗುರೂ??
                  ಹೋಗ್ಲಿ ಬಿಡು ಫ್ಲೋ ಅಲ್ಲಿ ಏನೇನೋ ಹೇಳ್ಬಿಟ್ಟೆ ಬೇಜಾರ್ ಮಾಡ್ಕೊಬೇಡ, ಊಫಿ. ದೇವ್ರು.. ನಾಯಿ ಬಾಲಕ್ಕೆ ಏನ್ಮಾಡಿದ್ರೂ ಅದು ಡೊಂಕೇ ಕಣೋ ಅದ್ಕೆ ಹೇಳ್ತಿದೀನಿ ಕೇಳು ಅವ್ಳನ್ನ ಏನಾರ್ ಮಾಡಿ ಒಪ್ಸೋ.. ಪ್ಲೀಸ್ ಪ್ಲೀಸ್ ಪ್ಲೀಸ್… ಎಂಥೆಥಾ ಪವಾಡಗಳನ್ನ ಮಾಡ್ದೋನು ನೀನು ಅಂತಹದ್ದರಲ್ಲಿ ಈ ಕೆಲ್ಸ ಆಗಲ್ವ?? ಯೂ ಕ್ಯಾನ್ ಡು ಇಟ್ ದೇವ!! ಆಗಿದ್ದಾಗ್ಲಿ ನಿನ್ ಪವರ್ ತೋರ್ಸೇ ಬಿಡು. ಅಂದ್ಹಾಗೆ ಇದಕ್ಕೆ ಈಗ್ಲೇ ಉತ್ರ ಕೊಡು - ಬಾರದ ಹುಡುಗಿಗೆ ಹಂಬಲಿಸಿದೆ ಮನ.. ಬರುವಳೇನೋ ಒಂದು ದಿನ.. ಹುಡುಗಿಯು ಅರಿವಳೇನೋ ನನ್ನ ಮನ.

                                     
ಇಂತಿ ನಿನ್ ದೋಸ್ತಿ,
ಕೆ.ಎನ್.ಸ್ಕಂದ ಆಗುಂಬೆ.


  (ಮೂಲಪ್ರತಿ)
 ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
                                                        
                              

Tuesday, 1 December 2015

ನಂಬಲೇನಾ ನಿನ್ನಾ ನಗೆಯನ್ನಾ??




ಹುಡುಗೀ..
             ಎಷ್ಟೋ ದಿನಗಳ ನಂತರ ಮತ್ತೆ ಮನದಲ್ಲಿ ಮುಗುಳ್ನಗೆಯೊಂದು ಮೂಡಿದೆ. ಬರಗಾಲದಿಂದ ಕಾದುಹೋಗಿದ್ದ ಹೃದಯದಂಗಳ ನೆನಪುಗಳ ಮಳೆಗೆ ಮೈಯೊಡ್ಡಿ ನೆನೆಯುತಿದೆ. ನಿನ್ನ ಮಾತು, ನಿನ್ನ ನಗು, ನಿನ್ನ ಕೋಪ ಎಲ್ಲವೂ ಮತ್ತೆ ಮನದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇವಕ್ಕೆಲ್ಲಾ ಕಾರಣ ಆ ನಿನ್ನ ಒಂದೇ ಒಂದು ಕಣ್ಣೋಟ. ಅವತ್ತು ನೀನು ಮತ್ತೆ ನಿನ್ ಫ್ರೆಂಡ್ಗಳು ನಾ ಬರೆದ ಲೆಟರ್ ಗಳನ್ನೆಲ್ಲಾ ಓದುತ್ತಿರಬೇಕಾದರೆ ನಿನ್ ಫ್ರೆಂಡೊಬ್ಬಳು ನನ್ನ ಮುಖ ನೋಡಿ ಅಣ್ಣಾ.. ನಿಮ್ ಹುಡ್ಗಿ ಫೋಟೋ ತೋರ್ಸಿ ಅಂದಕೂಡಲೇ ನೀನು ಛಕ್ಕನೆ ನನ್ನ ಕಡೆ ತಿರುಗಿ ನಿನ್ನ ಮಾಮೂಲೀ ಸ್ಟೈಲ್ ನಲ್ಲಿ ಗುರಾಯಿಸಿಕೊಂಡು ನೋಡಿ, ಒಂಥರಾ ಸ್ಮೈಲ್ ಬಿಸಾಕಿದ್ಯಲ್ಲಾ ಅದ್ರ ಜೊತೆಗೆ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಥರದಲ್ಲಿ ಆಮೇಲೆ ನಂಗೆ ಕಾಲ್ ಮಾಡಿ ಮೊದಲಿನ ಥರಾನೇ ಕ್ಯೂಟ್ ಕ್ಯೂಟಾಗಿ ಮಾತಾಡ್ಕೊಂಡು, "ನೀ ಬರೆದ ಲೆಟರ್ ಎಲ್ಲವೂ ಚೆನ್ನಾಗಿದೆ ನಂಗೆ ಇಷ್ಟ ಆಯ್ತು" ಅಂದ್ಯಲ್ಲಾ ಅದೇ ಇಷ್ಟಕ್ಕೆಲ್ಲಾ ಮೂಲ ಕಾರಣ. ಅದ್ಯಾಕೋ ಗೊತ್ತಿಲ್ಲ ನೀ ಹಂಗೆ ನೋಡಿದಾಗಿನಿಂದ ನನ್ನ ಮನಸ್ಸು "ಅವ್ಳು ನಿನ್ನನ್ನ ಲವ್ ಮಾಡ್ತವ್ಳೆ ಕಣೋ" ಅಂತ ಹೇಳೋಕೆ ಶುರು ಮಾಡಿದೆ. ಹೌದೋ? ಇಲ್ವೋ? ಅಂತ ನಿನ್ನನ್ನೇ ಕೇಳೋಣ ಅಂತಂದ್ರೆ ಅದೇ ಮನಸ್ಸು ಅಡ್ಡಗಾಲು ಹಾಕ್ತಾ ಇದೆ. ಸೋ ನಂದೊಂಥರಾ ಒನ್ ಅಂಡ್ ಹಾಫ್ ವೇ ಲವ್ ಆಗೋಗಿದೆ.
             ಅಂದಹಾಗೆ ನಿನಗೆ ತಲೆ ಒಳಗೆ ಹುಳ ಬಿಡೋ ವಿದ್ಯೆ ಹೇಳಿಕೊಟ್ಟವ್ರು ಯಾರು ಮಾರಾಯ್ತಿ? ನಾನೊಬ್ಬನೇ ಇದ್ದಾಗ ಏಯ್..ಹೋಗೋ, ಬಾರೋ ಅಂತ ಕರ್ಕೊಂಡು. ಯಾರಾದ್ರು ಬಂದ ತಕ್ಷಣ ಅಣ್ಣಾ ಅಂತ ರಾಗ ಎಳೀತೀಯಾ, ಸಾಲದ್ದಕ್ಕೆ ಸಂಜೆ ಹೊತ್ತಲ್ಲಿ ಫೋನ್ ಮಾಡಿ ನಿನ್ ಲೆಟರ್ರು ಚೆನ್ನಾಗಿದೆ. ನಾ ನಿಂಗೆ ಏನೋ ಹೇಳ್ಬೇಕು ಅಂತ ಹೇಳಿ, ನಾ ಏನೇನೋ ಯೋಚ್ನೆ ಮಾಡ್ಕೊಂಡು ಖುಷಿ ಪಡುವಷ್ಟರಲ್ಲಿ ಅಯ್ಯೋ ಈಗ ಮರ್ತೋಯ್ತು ಇನ್ನೊಂದಿನ ಹೇಳ್ತೀನಿ ಅಂತ ಫೋನ್ ಇಡ್ತೀಯಾ. ಹಿಂಗೆಲ್ಲಾ ಮಾಡಿದ್ರೆ ನಾನ್ ಏನ್ ಅನ್ಕೋಬೇಕು?? ನಂಗೂ ಒಂದ್ ಮನಸ್ಸು ಅಂತ ಇದೆ ಕಣೇ.. ಸ್ವಲ್ಪ ಅರ್ಥ ಮಾಡ್ಕೋ. ನೀನ್ ಅವತ್ತು ನಕ್ಕಿದ್ದನ್ನೇ ಗ್ರೀನ್ ಸಿಗ್ನಲ್ ಅನ್ಕೊಂಡು ಫ್ಯೂಚರ್ ಬಗ್ಗೆ ಕನಸು ಕಾಣೋಕೆ ಆಲ್ರೆಡಿ ಶುರು ಮಾಡ್ಕೊಂಡಿದೀನಿ. ಒಂದುವೇಳೆ ನಾನಂದುಕೊಂಡಿರೋದು ಸುಳ್ಳು ಅಂತಾದ್ರೆ ತಡಮಾಡದೆ ಈ ಕೂಡಲೇ ತಿಳಿಸಿಬಿಡು. ಯಾಕಂದ್ರೆ ಕನಸಿನ ಕೋಟೆಯನ್ನ ಕಟ್ಟಿದ ಮೇಲೆ ಕೆಡುಗುವುದು ಅಷ್ಟು ಸುಲಭವಲ್ಲ. ನಿನ್ನ ನಗುವನ್ನೇ ನಂಬಿದ್ದೇನೆ. ನಗಿಸುವೆಯೋ? ಅಳಿಸುವೆಯೋ? ನಿನಗೆ ಬಿಟ್ಟಿದ್ದು.

                                                                                     ಇಂತಿ ನಿನ್ನನ್ನೇ ನಂಬಿರುವ.
ಕೆ.ಎನ್.ಸ್ಕಂದ ಆಗುಂಬೆ.
         
 (ಮೂಲಪ್ರತಿ)
 ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
                                                 

Tuesday, 20 October 2015

ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ...





    

ನನ್ನೊಲವೇ..
               ಖಾಲಿತನ ಆವರಿಸಿದೆ, ಬರೆಯಲೆಂದು ಲೇಖನಿ ಹಿಡಿದರೆ ಪದಗಳೇ ಸಿಗುತ್ತಿಲ್ಲ, ಬಿಳಿ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗಳಿಂದಾಯ್ದ ಕೆಲ ನೆನಪುಗಳನ್ನು ಅಕ್ಷರ ರೂಪದಲ್ಲಿ ನಿನ್ನ ಮುಂದೆ ಹರವಿಡುತ್ತಿದ್ದೇನೆ ಒಮ್ಮೆ ಕಣ್ಣಾಯಿಸಿ ಬಿಡು....
               ನೀನೇನು ನನ್ನ ಬಾಲ್ಯದ ಗೆಳತಿಯಲ್ಲ,  ಹೃದಯದೊಳಗೆ ನಿನ್ನ ಪ್ರವೇಶವಾಗಿ ದ್ವಾದಶ ಮಾಸಗಳಾಯಿತಷ್ಟೇ, ಅಂದು ನೀ ನನ್ನ ಕಣ್ಣಿಗೆ ಕಾಣದೇ ಇದ್ದಿದ್ದರೆ ಈ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನು!! ನನ್ನ ಪಾಲಿಗೆ ಅದು ಮರೆಯಲಾಗದ ದಿನ, ಹೃದಯದೊಳಗೆ ಸಾವಿರ ಕನಸುಗಳು ಗರ್ಭತಳೆದ ದಿನ, ರಾತ್ರಿ ಬೀಳುತ್ತಿದ್ದ ತರಹೇವಾರಿ ಸ್ವಪ್ನಗಳಿಗೆ ಪೂರ್ಣವಿರಾಮವನ್ನಿಟ್ಟ ದಿನ.. ಅಂದಿನಿಂದ ಇಂದಿನವರೆಗೂ ನೀ ನನ್ನ ಕನಸಲ್ಲಿ ಬಾರದ ರಾತ್ರಿಯೇ ಇಲ್ಲ.. ನನ್ನ ಕನಸುಗಳನ್ನೆಲ್ಲ ನೀನೇ ಕೊಂಡುಕೊಂಡಿದ್ದಿಯೇನೋ ಎಂಬ ಅನುಮಾನ ಕಾಡುತ್ತಿದೆ, ಇವೆಲ್ಲಾ ಭಾವಗಳಿಗೀಗ ಭರ್ತಿ ಒಂದು ವರ್ಷ.
               ನಿನ್ನನ್ನು ಮೊದಲ ಬಾರಿಗೆ ನೋಡಿದ ಮಧುರ ಕ್ಷಣ ನನ್ನ ಕಣ್ಣೆದುರಲ್ಲಿ ಇಂದಿಗೂ ಹಚ್ಚಹಸುರಾಗಿಯೇ ಇದೆ, ಬಹುಶಃ ನೀ ಅಂದು ತೊಟ್ಟಿದ್ದ ಹಸುರು ಬಣ್ಣದ ಚೂಡಿದಾರವೇ ಇದಕ್ಕೆ ಕಾರಣವಿರಬೇಕು, ಆ ಕ್ಷಣದಲ್ಲಿ "ವಾಹ್!! ಹುಡ್ಗಿ ಒಂದ್ ರೇಂಜಿಗೆ ಇದ್ದಾಳೆ.." ಅನ್ನಿಸಿದರೂ ಅದು ಪ್ರೀತಿಯೋ? ವಯೋಸಹಜ ಆಕರ್ಷಣೆಯೋ? ಎಂಬ ಗೊಂದಲಕ್ಕೆ ಸಿಲುಕಿ ಸುಮ್ಮನಾಗಿದ್ದೆ. ಆದರೆ ಅದಾಗಿ ಮೂರ್ನಾಲ್ಕು ದಿನಗಳಂತರದಲ್ಲಿದ್ದ ರಕ್ಷಾಬಂಧನದ ದಿನ ನೀನು ನನ್ನ ಮುಖ ನೋಡಿ "ಅಣ್ಣಾ ಹ್ಯಾಪಿ ರಕ್ಷಾಬಂಧನ್" ಅಂದಾಗ ಹೃದಯಕ್ಕೆ ಸೂಜಿ ಚುಚ್ಚಿದಂತಾಗಿ ಅದು ಪ್ರೀತಿ ಅಂತ ಕನ್ಫರ್ಮ್ ಆಯ್ತು, ಆಗ “ಛೇ ಇವಳ ಬಾಯಲ್ಲಿ ಅಣ್ಣ ಎನ್ನಿಸಿಕೊಂಡೆನ್ನಲ್ಲಾ ಎಂತಹಾ ದುರಂತ” ಎಂದು ಯೋಚಿಸುತ್ತಿರಬೇಕಾದರೆ ನಿನಗೆ ಪ್ರಪೋಸ್ ಮಾಡೋಕೆ ಹೋಗಿ ರಾಕಿ ಕಟ್ಟಿಸಿಕೊಂಡ ಬಡಪಾಯಿಯ ಬಾಡಿಹೋಗಿದ್ದ ಮುಖ ನೋಡಿ ಅಬ್ಬಾ ಬಚಾವಾದೆ ಅಂತ ನಿರುಮ್ಮಳನಾಗಿದ್ದೆ. ಆದರೂ ಕೆಲವೊಮ್ಮೆ ಸುಮ್ಮನೆ ಕುಳಿತಾಗ ಅವತ್ತು ನೀ ನಂಗೆ ರಾಕಿ ಕಟ್ಟಿದ್ದರೇ ಒಳ್ಳೇದಿತ್ತೇನು ಎಂದೆನಿಸಿದ್ದಿದೆ ಹಾಗಂತ ಆ ಕಾರಣ ಇಟ್ಕೊಂಡು ಈ ವರ್ಷ ನನ್ನ ಕೈಗೆ ರಾಕಿ ಕಟ್ಬೇಡ ಮಾರಾಯ್ತಿ. ನಿನ್ನ ರೂಪಕ್ಕೆ ಮನಸೋತು ಇಷ್ಟೆಲ್ಲ ಕನಸು ಹುಟ್ಟಿದ್ದರೆ ಅದನ್ನು ಮೋಹ ಅಂದುಕೊಂಡು ನಿನ್ನನ್ನು ಮರೆತು ಬಿಡಬಹುದಿತ್ತು, ಆದರೆ ನನ್ನನ್ನು ಕ್ಲೀನ್ ಬೋಲ್ಡ್ ಮಾಡಿದ್ದು ನಿನ್ನ ಆ ಶುದ್ಧ ಮನಸ್ಸು, ಅದೊಂದು ದಿನ ನಾ ಎನ್ನ ಮನದ ಭಾವನೆಗಳನ್ನೆಲ್ಲ ನಿನ್ನ ಬಳಿ ಹಂಚಿಕೊಂಡಾಗ "ಅದನ್ನೆಲ್ಲ ತಕ್ಷಣಕ್ಕೆ ಹೇಳೋಕಾಗಲ್ಲ ಸ್ವಲ್ಪ ಸಮಯ ಬೇಕು" ಅಂತ ಹೇಳಿ ನನ್ನಾಸೆಗೆ ತುಪ್ಪ ಸುರಿದೆ, ಅದೇಕೋ ಗೊತ್ತಿಲ್ಲ ರೋಗಿ ಬಯಸಿದ್ದು ಬರ್ಗರ್ ವೈದ್ಯ ಹೇಳಿದ್ದೂ ಬರ್ಗರ್ ಅನ್ನೋ ಹಾಗೆ ದಿನೇ ದಿನೇ ನೀ ನನಗೆ ಹತ್ತಿರಾಗುತ್ತಾ ಹೋದೆ, ನೀ ನಿಮಿಷಕ್ಕೆ ನೂರು ಕಿಲೋಮೀಟರ್ ವೇಗದಲ್ಲಿ ಮಾತಾಡ್ತಾ ಪಟಪಟನೆ ಕಣ್ಣ ರೆಪ್ಪೆಯ ಮಿಟುಕಿಸ್ತಾ ಇದ್ರೆ ನನಗೆ ನಿನ್ನ ಹತ್ರ ಮಾತಾಡ್ಬೇಕು ಅಂತ ಅನ್ಕೊಂಡಿರೋ ವಿಷ್ಯಾನೇ ಮರೆತು ಹೋಗ್ತಿತ್ತು, ಅದೇ ಕಾರಣಕ್ಕಾಗಿ ನೀ ಎದುರು ಸಿಕ್ಕಾಗ ಜಾಸ್ತಿ ಮಾತನಾಡದೆ ಫೋನ್ ಮಾಡಿ ಅರ್ಧರ್ಧ ಗಂಟೆ ಕಚ್ಕೊಳ್ತಿದ್ದಿದ್ದು, ಮೆಸೇಜ್ ಮಾಡಿ ನಿದ್ದೆ ಹಾಳು ಮಾಡ್ತಿದ್ದಿದ್ದು. ನಿಜ ಹೇಳ್ಬೇಕು ಅಂದ್ರೆ ನನ್ನ ಮೊಬೈಲ್ ಕೀಪ್ಯಾಡ್ ಸವೆದು ಹೋಗೋಕೆ ನೀನೇ ಕಾರಣ!!! ನಿನ್ನನ್ನು ನಗಿಸ್ಬೇಕು ಅನ್ನೋ ಒಂದೇ ಒಂದು ನೆಪ ಇಟ್ಕೊಂಡು ಸಿಲ್ ಸಿಲ್ಲಿಯಾಗಿ ಮನಸ್ಸಿಗೆ ಬಂದಿದ್ದನ್ನ ಬರೆದು, ಕಿತ್ತೋದ ಕವನಗಳನ್ನ, ಉದ್ದುದ್ದ ಫಿಲಾಸಫಿಗಳನ್ನ ಟೈಪ್ ಮಾಡಿ ನನ್ನ ಮೊಬೈಲಿಗೆ ಘನಘೋರ ಶಿಕ್ಷೆಯನ್ನೇ ಕೊಟ್ಟಿದ್ದೇನೆ. ಅದೇ ಕಾರಣಕ್ಕೋ ಏನೋ?? ನೀನೀಗ ಅದಕ್ಕೆ ರಜೆ ಕಲ್ಪಿಸಿರೋದು!!!
               ಹೌದು.. ನೀನೀಗ ಮೊದಲಿನಂತಿಲ್ಲ, ಮನೇಲಿ ಒಬ್ಳೇ ಇದೀನಿ ಬೇಜಾರಾಗ್ತಿದೆ ಏನಾದ್ರು ಮಾತಾಡು ಎಂದು ವಾರಕ್ಕೊಮ್ಮೆಯಾದರು ನೀನಾಗಿಯೇ ಕಾಲ್ ಮಾಡ್ತಾ ಇದ್ದವಳು, ಈಗ ನಾನಾಗಿಯೇ ಮಾಡಿದರೂ ಜಾಸ್ತಿ ಮಾತನಾಡುತ್ತಿಲ್ಲ, ಯಾವುದೋ ಅಪರಿಚಿತನೊಡನೆ ಮಾತನಾಡುವಂತೆ ವರ್ತಿಸುತ್ತಿದ್ದೀಯ. ಮೆಸೇಜುಗಳಿಗಂತೂ ಮೌನವೇ ಉತ್ತರ, ನಿನ್ನ ಈ ಮೌನಕ್ಕೆ ಕಾರಣವೇನೆಂಬುದು ಸತ್ಯವಾಗ್ಲೂ ನಂಗೊತ್ತಿಲ್ಲ, ನಗುನಗುತ್ತಲೇ ಮನದ ಸನಿಹಕ್ಕೆ ಬಂದು ಕನಸುಗಳನ್ನು ಬಿತ್ತಿದ ನೀನೇ ಹೀಗೆ ವಿನಾಕಾರಣವಾಗಿ ಮೌನಕ್ಕೆ ಶರಣಾದರೆ ನಾನೇನೆಂದುಕೊಳ್ಳಬೇಕು? ನನ್ನ ಮೇಲೇನಾದರು ಕೋಪಾನಾ? ಅಥವಾ ನನ್ನನ್ನು ದೂರ ಮಾಡಲು ನೀನಿಟ್ಟ ಮೊದಲ ಹೆಜ್ಜೆಯಾ ಇದು? ಪರವಾಗಿಲ್ಲ ಬಿಡು ನಿನಗೆ ಅದೆಷ್ಟೇ ಕಾರಣಗಳಿದ್ದರೂ ನಾನು ಮಾತ್ರ ನಿಂಗೆ ಓದೋಕೆ ತುಂಬಾ ಇರಬಹುದು ಅಥವಾ ಮನೇಲಿ ಮೊಬೈಲ್ ನೋಡೋದು ಕಡಿಮೆ ಮಾಡೋಕೆ ಹೇಳಿರಬಹುದು ಅಂತಾನೇ ತಿಳಿದುಕೊಳ್ತೀನಿ. ಒಂದುವೇಳೆ ನನ್ನನ್ನು ದೂರ ಮಾಡ್ಬೇಕು ಅನ್ನೋದೆ ನಿನ್ನ ಉದ್ದೇಶ ಆಗಿದ್ರೆ ಇಂತಹ ವ್ಯರ್ಥ ಪ್ರಯತ್ನವನ್ನು ಬಿಟ್ಟು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಬಿಡು ಯಾಕಂದ್ರೆ ಇಂತಹ ಚಿಕ್ಕಪುಟ್ಟ ಕಾರಣಗಳಿಗೆ ಸಾಯುವುದು ಮೋಹವೇ ಹೊರತು ಪ್ರೀತಿಯಲ್ಲ..
               ನಾ ನಿನ್ನ ಬಳಿ ಬಾಯ್ಬಿಟ್ಟು "ಐ ಲವ್ ಯೂ" ಅಂತ ಹೇಳ್ದೇ ಇರ್ಬೋದು ಆದ್ರೆ ಅಂದು ನಾ ನಿನಗೆ ಕೊಟ್ಟ ಮಾತಿನಂತೆ ಓದು ಮುಗಿಸಿ ನೀ ನಿನ್ನ ಕಾಲ ಮೇಲೆ ನಿಲ್ಲುವ ತನಕ ನಿನಗಾಗಿ ಕಾಯುತ್ತೇನೆ ಆದರೆ ಅಲ್ಲಿಯವರೆಗೆ ನಿನ್ನ ಹೃದಯದ ಕವಾಟ ಖಾಲಿಯಾಗಿಯೇ ಇರುತ್ತದಾ?? ಇದ್ದರೂ ನನಗೆ ಪ್ರವೇಶ ನೀಡುತ್ತೀಯಾ?? ಈ ಪ್ರಶ್ನೆಗಳಿಗೆ ಈಗಲೇ ಉತ್ತರಿಸಿ ಬಿಡು. ಹೂಂ ಅನ್ನೋದಾದ್ರೆ ಇನ್ಮೇಲೆ ತಮಾಷೆಗೂ ಅಣ್ಣ ಎನ್ನಬೇಡ, ನೋ ಅನ್ನೋದಾದ್ರೆ ಆದಷ್ಟು ಬೇಗ ಸ್ಪಷ್ಟಪಡಿಸಿಬಿಡು ಯಾವುದಕ್ಕೂ ಈಗೊಂದು ಮಿಸ್ ಕಾಲ್ ಕೊಡು ಕಾಯ್ತಾ ಇದ್ದೀನಿ..
                ಅಂದಹಾಗೆ ಈ ಪತ್ರ ಬರೆಯಲು ಆರಂಭಿಸುವ ಮುನ್ನ ಹಾಳೆಯ ಮೇಲೆ ಬಿದ್ದ ಕಣ್ಣೀರ ಹನಿಗೆ ಕಾರಣ ಆ ಶೆಟ್ರಂಗಡಿಯ ಯಮಕಾರದ ಮೆಣಸಿನಕಾಯಿ ಬಜ್ಜಿ ಅದ್ಯಾಕೋ ಗೊತ್ತಿಲ್ಲ ಏನಾದ್ರು ತಿನ್ನೋ ಟೈಮಲ್ಲಿ ನಿನ್ನ ನೆನಪು ಹಸಿವಿಗಿಂತ ಜಾಸ್ತಿ ಕಾಡುತ್ತೆ, ಇವೆಲ್ಲವನ್ನೂ ಒಂದೇ ಪದದಲ್ಲಿ ಹೇಳೋದಾದ್ರೆ "ಐ ಮಿಸ್ ಯೂ ಅರ್ಧೇಶ್ವರಿ!!!!" ಇನ್ಮೇಲಾದ್ರೂ ಆಗಾಗ ಕಾಲ್ ಮಾಡ್ತಾ ಇರು, ಅಟ್ಲೀಸ್ಟ್ ಮಿಸ್ ಕಾಲಾದ್ರೂ ಕೊಡು..... ಓಕೆನಾ??

                       
 ಇಂತಿ ನಿನ್ನ ಆರಾಧಕ 
ಕೆ.ಎನ್. ಸ್ಕಂದ ಆಗುಂಬೆ.

                                 (ಮೂಲಪ್ರತಿ)
      ಈ ಪ್ರೇಮಪತ್ರ ಉದಯವಾಣಿ ದಿನಪತ್ರಿಕೆಯ ಜೋಶ್ ಪುರವಣಿಯಲ್ಲಿ ಪ್ರಕಟವಾಗಿದೆ.
                                        
                                                                                                                                                                                                     

Sunday, 27 September 2015

ನಿಂಗೂ ಹಿಂಗೆಲ್ಲಾ ಅನ್ಸುತ್ತಾ??

                                 


ಏಯ್ ಕಂದ...!!
                   ನೀನು ಅದ್ಯಾವ ಘಳಿಗೆಯಲ್ಲಿ ಹುಟ್ಟಿದ್ದು ಮಾರಾಯ..!! ನಿನ್ನ ಮುರಿದು ಹೋಗಿರುವ ಅರ್ಧ ಹಲ್ಲಿನ ಮೇಲೆ ಆಣೆ ಮಾಡಿ ಹೇಳ್ತೀನಿ - ನೀನು ಪೆದ್ದ ಕಣೋ.. ಅದ್ಯಾವ ಜನ್ಮದಲ್ಲಿ ಏನು ಘನಂದಾರಿ ಕೆಲಸ ಮಾಡಿದ್ದೆವೋ? ಏನೋ? ಈ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟಿದ್ದೇವೆ, ಆ ಪರಮಾತ್ಮ ನಮ್ಮಿಬ್ಬರಿಗೂ ಮನುಷ್ಯ ರೂಪವನ್ನೇನೋ ನೀಡಿದ ಆದರೆ ಇದ್ರಲ್ಲಿ ನಾನು ಹುಡುಗನಾಗಿ ಹಾಗೂ ನೀನು ಹುಡುಗಿಯಾಗಿ ಹುಟ್ಟಬೇಕಿತ್ತು ಕಣೋ ಆಗ ಅದರ ಮಜಾನೇ ಬೇರೆ ಇರ್ತಿತ್ತು, ಹಾಗೇನಾದ್ರು ಆಗಿದ್ದಿದ್ದರೆ ನಾ ನಿನ್ನನ್ನ ಸಖತ್ತಾಗಿ ಗೋಳು ಹುಯ್ಕೋತಿದ್ದೆ, ನಿನ್ನ ಹಿಂದೆ ಮುಂದೆ ಸುತ್ತಾಡ್ಕೊಂಡು ಯರ್ರಾಬಿರ್ರಿ ಕಾಟ ಕೊಡ್ತಿದ್ದೆ, ಆದ್ರೆ ಈಗ ಎಲ್ಲವೂ ಉಲ್ಟಾ...!!! ಅಲ್ಲಾ ತಂದೆ ನೀನು ಅಷ್ಟೊಂದು ಪುಕ್ಕಲಾನಾ?? ಫಸ್ಟ್ ಟೈಮ್ ನೀನು ನನ್ನ ಜೊತೆ ಮಾತನಾಡುವಾಗಲೇ ಅಂದುಕೊಂಡೆ ನೀನು ತುಂಬಾ ಪಾಪದವನು ಅಂತ..! ನೀ ನನ್ನನ್ನ ಪ್ರೀತಿಸ್ತಾ ಇರೋದು ಇಡೀ ಊರಿಗೇ ಗೊತ್ತಿರೋ ವಿಷಯವಾದ್ರೂ ಅದನ್ನೇ ದೊಡ್ಡ ಸೀಕ್ರೇಟ್ ಅನ್ನೋ ಥರ ಸುತ್ತಿ ಬಳಸಿ ನನ್ನ ಹತ್ರ ಹೇಳೋಕೆ ನೋಡ್ತೀಯಲ್ಲಾ ಅದರ ಬದಲು ಡೈರೆಕ್ಟಾಗಿ ಒಂದೇ ಒಂದು ಸಲ ಐ ಲವ್ ಯೂ ಅಂತ ಹೇಳ್ಬಾರ್ದೇನೋ ಕೋತಿ??.
                     ಲೋ ಪುಣ್ಯಾತ್ಮ, ನನಗೂ ಬೇರೆ ಹುಡುಗಿಯರ ಥರ ಆಸೆ, ಕನಸು ಎಲ್ಲಾ ಇದೆ ಕಣಯ್ಯಾ.. ಆದ್ರೆ ಅದಕ್ಕೆ ರೆಕ್ಕೆ ಕಟ್ಟಬೇಕಾದ ನೀನೇ ಇಷ್ಟೊಂದು ಹೆದರಿದರೆ ನನ್ನ ಕಥೆ ಏನೋ?? ಹೋಗ್ಲಿ ನಿನ್ನ ವಯಸ್ಸಿನ ಬೇರೆ ಹುಡುಗರನ್ನ ನೋಡಿಯಾದ್ರು ಕಲಿಯಬಾರ್ದಾ? ಹುಡುಗಿಯರು ಒಂದು ಸ್ಮೈಲ್ ಕೊಟ್ರೆ ಸಾಕು ಓಡಿ ಹೋಗಿ ಪ್ರಪೋಸ್ ಮಾಡ್ತಾರೆ ಅಂತಹದ್ದರಲ್ಲಿ ನಾ ನಿನ್ನ ಜೊತೆ ಗಂಟೆಗಟ್ಟಲೆ ಮಾತಾಡ್ತೀನಿ, ಐಸ್ ಕ್ರೀಮ್ ಕೊಡಿಸು ಅಂತ ಬಾಯ್ಬಿಟ್ಟು ಕೇಳಿ ನಿನ್ನ ಜೊತೆಗೇ ನಿಂತ್ಕೊಂಡು ತಿಂದಿದ್ದೀನಿ, ಸಾಲದ್ದಕ್ಕೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸ್ಮೈಲ್ ಕೊಡ್ತೀನಿ, ಇಷ್ಟಾದರೂ ನಿನಗೆ ನಾ ನಿನ್ನ ಪ್ರೀತಿಸ್ತೀನಿ ಅನ್ನೋದು ಗೊತ್ತಾಗಲ್ವಾ?? ಅಲ್ಲಾ ಮಾರಾಯಾ! ನಾ ನಿನ್ನ ಜೊತೆ ಇಷ್ಟೊಂದು ಕ್ಲೋಸಾಗಿ ಇದ್ದೀನಿ ಅಂದ ಮೇಲೂ ನನ್ನ ದೋಸ್ತಿಗೆ ಕಾಲ್ ಮಾಡಿ - ”ಅವಳು ನನ್ನ ಇಷ್ಟಪಡ್ತಾಳಾ?”, ”ಅವಳ ಮನಸ್ಸಲ್ಲಿ ನನ್ನ ಬಗ್ಗೆ ಯಾವ ರೀತಿಯ ಭಾವನೆಗಳಿವೆ?” ಅಂತ ಕೇಳ್ತೀಯಂತಲ್ಲಾ? ನಿನಗೆ ಎಂತ ತಗೊಂಡು ಹೊಡಿಬೇಕು ಮಹರಾಯ!!. ಇವೆಲ್ಲವನ್ನೂ ನನ್ನ ಹತ್ರಾನೇ ಕೇಳು ಒಂದೇ ಉಸಿರಿನಲ್ಲಿ ನಿನ್ನೆಲ್ಲಾ  ಪ್ರಶ್ನೆಗಳಿಗೂ ಉತ್ತರ ಕೊಡ್ತೀನಿ.
                          ತಥ್... ನೀನಾಗಿಯೇ ಪ್ರಪೋಸ್ ಮಾಡ್ತೀಯೇನೋ ಅಂತ ಕಾದು ಕಾದು ಬೇಜಾರಾಗಿ ಹೋಯ್ತು, ನೋಡು ಕೊನೆಯದಾಗಿ ಒಂದೇ ಒಂದು ಛಾನ್ಸ್ ಕೊಡ್ತಾ ಇದೀನಿ.. ಈ ಪತ್ರ ಓದಿದ ಇಪ್ಪತ್ನಾಲ್ಕು ಗಂಟೆಯ ಒಳಗಾಗಿ ಫೋನ್ ಮಾಡಿ ”ಐ ಲವ್ ಯೂ” ಅಂತ ಹೇಳಿದ್ರೆ ಸರಿ ಇಲ್ಲಾ ಅಂದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಹುಷಾರ್...!!
                                                                                                     
                                                                                                                                                                  ಇಂತಿ,
ನಿನಗಾಗಿಯೇ ಇರುವ ನಿನ್ನವಳು.

                       
                           ಅಬ್ಬಬ್ಬಾ..!! ನಿನ್ನ ಮನಸ್ಸಿಗೆ ಹೀಗೆಲ್ಲಾ ಅನ್ನಿಸಿರಬಹುದಾ ಎಂದು ಊಹಿಸಿಕೊಂಡು ಬರೆಯುವಾಗಲೇ ಮೈ ರೋಮಾಂಚನವಾಗ್ತಿತ್ತು. ಇನ್ನು ನಿಜವಾಗ್ಲೂ ನಿನಗೆ ಹೀಗೆಲ್ಲಾ ಅನ್ನಿಸಿದ್ರೆ ನಾನೇ ಧನ್ಯ..! ಹೇಳು ಮಾರಾಯ್ತಿ, ನಿನಗೆ ಯಾವತ್ತಾದ್ರು ಈ ರೀತಿ ಲವ್ ಲೆಟರ್ ಬರೀಬೇಕು ಅನ್ಸಿತ್ತಾ?? ಹೂಂ.. ಅನ್ನೋದಾದ್ರೆ ಎಂದಿನಂತೆ ಒಂದು ಮಿಸ್ ಕಾಲ್ ಕೊಡು, ವಾಪಾಸ್ ನಾನೇ ಕಾಲ್ ಮಾಡಿ ನೀ ಹಲೋ ಅನ್ನೋ ಮೊದಲೇ ”ಐ ಲವ್ ಯೂ..” ಅಂದುಬಿಡ್ತೀನಿ ಅಥವಾ ನಿನಗೆ ಹೀಗೆಲ್ಲಾ ಅನ್ನಿಸಿರಲಿಲ್ಲ ಅನ್ನೋದಾದ್ರೆ ಒಂದು ಮೆಸೇಜ್ ಮಾಡು ನೆಕ್ಸ್ಟ್ ಟೈಮ್ ಬೇರೆ ರೀತಿ ಬರೆಯೋಕೆ ಟ್ರೈ ಮಾಡ್ತೀನಿ...
                                                                                                                                                            ಇಂತಿ,
ನೀನಾಗಿ ಬರೆದ ನಾನು..                                                                                                                                    ಸ್ಕಂದ ನಾಗೇಂದ್ರ.        
                           



     ಈ ಪ್ರೇಮಪತ್ರ ಕನ್ನಡಪ್ರಭ ದಿನಪತ್ರಿಕೆಯ ಕ್ಯಾಂಪಸ್ ಪುಟದಲ್ಲಿ ಪ್ರಕಟವಾಗಿದೆ.
                            (ಮೂಲಪ್ರತಿ)

                                                                               

                                                                   

Monday, 7 September 2015

ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ

                          

"ಅಬ್ಬಾ, ಅಂತೂ ಇಂತೂ ಸೆಕೆಂಡ್ ಪಿ.ಯು. ಎಕ್ಸಾಮ್ ಹತ್ತಿರ ಬಂತು. ಅದೊಂದು ಮುಗಿದು ಬಿಟ್ರೆ ದೊಡ್ಡ ಪೀಡೆ ತೊಲಗಿದ ಹಾಗೆ ಆಗುತ್ತೆ." ಹೀಗಂತ ನಾನು ಸೈನ್ಸ್ ಎಂಬ ಪಿಶಾಚಿಗೆ ಬೈತಾ ಇದ್ರೆ ಅತ್ತ ಕಡೆ ಇದೇ ಮಾತು ನಿನ್ನ ಬಾಯಲ್ಲೂ ಬಂದಿರಬಹುದು ಅಲ್ವಾ? ಪರವಾಗಿಲ್ಲ ನೀ ಹಾಗೆ ಹೇಳಿದರೂ ನನಗೆ ಬೇಜಾರಿಲ್ಲ. ನಾ ಕೊಡೋ ಕಾಟಕ್ಕೆ ನೀನು ಆ ರೇಂಜಿನಲ್ಲಿ ಬಯ್ಯೋದು ಆಶ್ಚರ್ಯವೇನಲ್ಲ ಬಿಡು. ಇಷ್ಟು ದಿನ ಕಾಲೇಜಿನಲ್ಲಿ ಬೇಡ ಅಂದ್ರೂ ನಿನಗೆ ಎದುರಾಗುತ್ತಿದ್ದ ನಾನು ಇನ್ಮುಂದೆ ಹಾಗೆಲ್ಲ ನಿನ್ನೆದುರು ಬರೋದಿಲ್ಲ. ಕಾರಿಡಾರ್​ನಲ್ಲಿ ನಿಂತಾಗ ನಿನ್ನ ಕಡೆ ನೋಡ್ತಿದ್ದ ಎರಡು ಕಣ್ಗಳು, ಎದುರು ಸಿಕ್ಕ ಕೂಡಲೇ ದರ್ಶನ ನೀಡುತ್ತಿದ್ದ ಮೂವತ್ತೊಂದೂವರೆ ಹಲ್ಲುಗಳು.. ಎಲ್ಲವಕ್ಕೂ ಸದ್ಯದಲ್ಲೇ ವರ್ಗಾವಣೆ ಆಗಲಿದೆ.

ಉರುಳುವ ಕಾಲಚಕ್ರದ ಜೊತೆಗೆ ಹೆಜ್ಜೆ ಹಾಕಬೇಕಾಗಿರುವುದು ಅನಿವಾರ್ಯ. ಇದು ಗೊತ್ತಿದ್ದರೂ ಇನ್ಮುಂದೆ ನೀನು ದಿನಾಲೂ ಸಿಗುವುದಿಲ್ಲ ಅನ್ನೋದನ್ನ ನೆನೆಸಿಕೊಂಡರೆ ಮನಸ್ಸು ಮೂಕವಾಗಿ ಬಿಡುತ್ತದೆ. ನಮ್ಮಿಬ್ಬರದ್ದು ತೀರಾ ಇತ್ತೀಚಿನ ಪರಿಚಯ. ಆರು ತಿಂಗಳ ಹಿಂದೆ ನೀನ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ನಾನ್ಯಾರು ಅಂತ ನಿನಗೆ ಗೊತ್ತಿತ್ತೋ? ಗೊತ್ತಿರಲಿಲ್ವೋ? ಅಂತ ನನ್ಗೆ ಗೊತ್ತಿಲ್ಲ. ನಿನ್ನನ್ನ ನಾನ್ಯಾಕೆ ಇಷ್ಟಪಟ್ಟೆ ಅನ್ನೋದು ನಂಗೊತ್ತು. ಆದ್ರೆ, ನಮ್ಮಿಬ್ಬರ ಮಧ್ಯೆ ಇಷ್ಟೊಂದು ಗಾಢ ಸ್ನೇಹ ಹೇಗೆ ಬೆಳೆಯಿತೆಂದು ಸತ್ಯವಾಗ್ಲೂ ನಂಗೊತ್ತಿಲ್ಲ. ಈ ಗೊತ್ತು - ಗೊತ್ತಿಲ್ಲಗಳ ನಡುವೆ ಆರು ತಿಂಗಳು ಹೇಗೆ ಉರುಳಿ ಹೋದವು ಅಂತಾನೂ ಗೊತ್ತಾಗ್ಲಿಲ್ಲ.

ಹೌದು ಕಣೇ ಹುಡ್ಗಿ, ಜೀವನವೇ ಹಾಗೆ ನಾವು ಬಯಸದೇ ಇದ್ರೂ ಕೆಲವೊಂದನ್ನು ತಾನಾಗಿಯೇ ಕೊಡುತ್ತದೆ. ನೀನು ಕೂಡ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ ಯೋಜನೆಯಲ್ಲೇ ಸಿಕ್ಕಿದವಳು! ಹುಡುಗಿಯರೆಂದರೆ ಮಾರು ದೂರ ಸರಿಯುತ್ತಿದ್ದ ನಾನು ಅದ್ಯಾವ ರೀತಿಯಲ್ಲಿ ನಿನಗೆ ಹತ್ತಿರವಾದೆ ಎನ್ನೋದು ನನ್ನ ಪಾಲಿಗೆ ಸದಾ ಕಾಡುವ ಪ್ರಶ್ನೆಯಾಗಿಯೇ ಉಳಿದಿದೆ. ನೀ ನನ್ನ ನೋಡಿ ಮುಗುಳ್ನಗೆ ಚೆಲ್ಲಿದಾಗ, ಮುಂಗುರುಳನ್ನು ಸರಿಸುತ್ತ ಕಳ್ಳನೋಟ ಬೀರಿದಾಗ, ಸುಖಾಸುಮ್ಮನೆ ಮಾತನಾಡಿಸಿದಾಗ ಮನಸ್ಸು ಒಳಗೊಳಗೇ ಖುಷಿಪಡ್ತಾ ಇತ್ತು. ನಿನ್ನೆದುರು ಮಂಡಿಯೂರಿ ನನ್ನನ್ನು ಪ್ರೀತಿಸ್ತೀಯಾ?ಎಂದು ಕೇಳ್ಬೇಕು ಅಂತ ಹೃದಯ ಚಡಪಡಿಸುತ್ತಿತ್ತು. ನಿನ್ನ ಕೈಗೊಂದು ಕೆಂಗುಲಾಬಿ ಕೊಟ್ಟು ಐ ಲವ್ ಯೂ "______"..ಅಂತ ಹೇಳ್ಬೇಕು ಅನ್ನಿಸ್ತಿತ್ತು. ಆದ್ರೆ, ಇವನ್ನೆಲ್ಲ ಹೇಳಿದ್ರೆ ನೀನು ಏನೆಂದುಕೊಳ್ತೀಯೋ? ಏನೋ? ಎಂಬ ಭಯದಿಂದ ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಾಗಿಬಿಡ್ತಿದ್ದೆ. ನಿನ್ನ ಜೊತೆ ಕಳೆದ ಪ್ರತಿಕ್ಷಣವೂ ನನ್ನ ಜೀವನದ ಅಮೃತ ಘಳಿಗೆ. ನೀ ಪಟಪಟನೆ ಅರಳು ಹುರಿದಂತೆ ಮಾತನಾಡ್ತ ಇದ್ರೆ ನಗು ನನ್ನ ತುಟಿಯ ಮೇಲೆ ಸದ್ದಿಲ್ಲದೆ ಬಂದು ನಿಂತು ಬಿಡುತ್ತದೆ. "ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ.." ಅಂತ ಸೋನು ನಿಗಮ್ ಕಿವಿಯೊಳಗೇ ಬಂದು ಹಾಡಿದ ಹಾಗೆ ಆಗುತ್ತೆ.

ನಿಂಗೊಂದು ವಿಷ್ಯ ಗೊತ್ತಾ? ನಾನು ಮೂರು ವರ್ಷಗಳ ಕಾಲ ಹಾಸ್ಟೆಲ್ ವಾಸ ಮಾಡಿದ್ದರೂ ಅಪ್ಪಿತಪ್ಪಿಯೂ ಬೇರೆಯವರ ಎಂಜಲು ತಿಂದವನಲ್ಲ. ಮನೆಯಲ್ಲೂ ಕೂಡ ಪುಟ್ಟ ತಂಗಿಯ ಹೊರತಾಗಿ ಬೇರೆಯವರ ಎಂಜಲು ತಿನ್ನೋ ಆಸಾಮಿ ನಾನಲ್ಲ. ಹಾಗಿರುವಾಗ ಅವತ್ತು ನೀನು ಕೈ ಚಾಚಿ ತಿಂಡಿ ಡಬ್ಬಿಯನ್ನು ನನ್ನೆದುರು ಹಿಡಿದಾಗ ಒಂದು ಕ್ಷಣ ಏನು ಮಾಡೋದು ಅಂತಾನೆ ಗೊತ್ತಾಗ್ಲಿಲ್ಲ, ಹೇಗೆ ತಿನ್ನಲಿ? ಎಂದು ಯೋಚಿಸುವಷ್ಟರಲ್ಲಾಗಲೇ ಡಬ್ಬಿಯಲ್ಲಿದ್ದ ತಿಂಡಿ ನನ್ನ ಹೊಟ್ಟೆ ಸೇರಿತ್ತು. ದೇವ್ರಾಣೆಗೂ ಒಂದು ಮಾತು ಹೇಳ್ತೀನಿ- ನಿನ್ನ ಹೊರತಾಗಿ ಬೇರೆ ಯಾರಾದರೂ ಹಾಗೆ ಕೊಟ್ಟಿದ್ದರೆ ನಿಜವಾಗ್ಲೂ ತಿನ್ನುತ್ತಿರಲಿಲ್ಲ, ಹಾಗಂತ ನಾ ಇಷ್ಟಪಡೋ ಹುಡುಗಿಯ ಎಂಜಲು ಅನ್ನೋ ಕಾರಣದಿಂದಲೂ ತಿಂದಿದ್ದಲ್ಲ. ನಿನ್ನ ನಿಷ್ಕಲ್ಮಶ ಮನಸ್ಸನ್ನು ನೋಡಿ ಅದನ್ನು ಎಂಜಲು ಅಂತ ಹೇಳಿದ್ರೆ ನನಗೆ ಪಾಪ ತಟ್ಟುತ್ತೆ ಅಂತ ತಿಂದುಬಿಟ್ಟೆ ಮಾರಾಯ್ತಿ.

ಹೋಗ್ಲಿ ಬಿಡು, ಹಳೆ ಕಥೆ ಎಲ್ಲ ಈಗ್ಯಾಕೆ ಬೇಕು? ಅಂದಹಾಗೆ ನಿನ್ನ ಮುಖ ನೋಡದೆ ಬರೋಬ್ಬರಿ ಒಂದು ತಿಂಗಳಾಯ್ತು. ಈ ದೀರ್ಘಾವಧಿಯಲ್ಲಿ ನಿನ್ನಲ್ಲಿ ಏನೇನು ಬದಲಾವಣೆ ಆಗಿರಬಹುದು ಅಂತ ಮನಸ್ಸು ಯೋಚಿಸ್ತಾ ಇದೆ. ಕೆಲವು ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಅಬ್ಬಬ್ಬಾ ಅಂದ್ರೆ ತಿಂದೂ ತಿಂದು ನೀನು ಒಂದೈವತ್ತು ಗ್ರಾಂ ಜಾಸ್ತಿ ಆಗಿರಬಹುದು ಅಥವಾ ಒಂದು ಮಿಲಿಮೀಟರ್ ಹೆಚ್ಚು ಎತ್ತರ ಆಗಿರಬಹುದು. ಅದನ್ನ ಬಿಟ್ರೆ ನಿನ್ನ ಚೆಂದದ ಬಿಳಿ ಹಲ್ಲುಗಳು ಲೈಟಾಗಿ ಹಳದಿ ಬಣ್ಣಕ್ಕೆ ತಿರುಗಿರಬಹುದು. ಇಲ್ಲಾಂದ್ರೆ ನಿನ್ನ ಉಗುರುಗಳಿಗೆ ಬೇರೆ ಬಣ್ಣ ಪ್ರಾಪ್ತಿಯಾಗಿರಬಹುದು. ಇನ್ನೂ ಜಾಸ್ತಿ ಅಂದ್ರೆ ನಿನ್ನ ಮುಂಗುರುಳು ಒಂದೆರಡು ಸೆಂಟಿಮೀಟರ್ ಉದ್ದ ಆಗಿರಬಹುದು ಅಥವಾ ನಿನ್ನ ಗಲ್ಲದ ಮೇಲೆ ಒಂದು ಪಿಂಪಲ್ ಸೃಷ್ಟಿಯಾಗಿರಬಹುದು. ಇದರ ಹೊರತಾಗಿ ಇನ್ನೇನೂ ಬದಲಾಗಿರಲಿಕ್ಕಿಲ್ಲ ಅಂತ ತಿಳಿದು ಬಂದಿದೆ. ಇದಕ್ಕಿಂತ ಮಹತ್ತರವಾದ ಬದಲಾವಣೆಗಳೇನಾದರೂ ಆಗಿದ್ದರೆ ದಯಮಾಡಿ ಆದಷ್ಟು ಬೇಗ ತಿಳಿಸು. ಕಣ್ಣೊಳಗೆ ಸೇವ್ ಆಗಿರೋ ನಿನ್ನ ಫೋಟೋವನ್ನು ಎಡಿಟ್ ಮಾಡಿ ಮಿದುಳಿಗೆ ಅಪ್ಡೇಟ್ ಮಾಡ್ಬೇಕು.

ಹೂಂ..ಇನ್ನೂ ಜಾಸ್ತಿ ಕೊರೆಯೋದಿಲ್ಲ ಬಿಡು. ಇವೆಲ್ಲವನ್ನೂ ಓದಿ ಈಗಾಗಲೇ ನಿನ್ನ ಪಿತ್ತ ನೆತ್ತಿಗೇರಿ ಮುಖ ಕೆಂಪಾಗಿದ್ದರೆ ಬೈಗುಳಗಳನ್ನೆಲ್ಲ ಲಿಸ್ಟ್ ಮಾಡಿಕೊಂಡು ಜಸ್ಟ್ ಒಂದು ಮಿಸ್ ಕಾಲ್ ಕೊಡು ಅಥವಾ ಇದನ್ನೆಲ್ಲ ಓದಿ ನನ್ನ ಪ್ರೀತಿಯನ್ನು ಒಪ್ಪಿಕೊಳ್ಬೇಕು ಅನ್ನಿಸಿದ್ರೆ... ಆಗಲೂ ಒಂದು ಮಿಸ್ ಕಾಲ್ ಕೊಡು ಮಾರಾಯ್ತಿ ಅಷ್ಟೇ ಸಾಕು! ನಾನೇ ಕಾಲ್ ಮಾಡಿ ಉಳಿದದ್ದನ್ನೆಲ್ಲ ಕೇಳ್ತೀನಿ. ಇಷ್ಟೊಂದೆಲ್ಲ ಓದಿದ ಮೇಲೂ ಸೈಲೆಂಟಾಗಿದ್ರೆ "ಮೌನಂ ಸಮ್ಮತಿ ಲಕ್ಷಣಂ" ಎಂದು ತಿಳಿದು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಎಚ್ಚರಿಕೆ!

                                                                           ಇಂತಿ,
                                                                ನೀ ಕದ್ದಿರುವ ಹೃದಯದ ಒಡೆಯ
                                                                   ಕೆ.ಎನ್.ಸ್ಕಂದ, ಆಗುಂಬೆ.
                                                                    



                          ಈ ಪ್ರೇಮಪತ್ರ ವಿಜಯವಾಣಿ ದಿನಪತ್ರಿಕೆಯ ಮಸ್ತ್ ಪುರವಣಿಯಲ್ಲಿ ಪ್ರಕಟವಾಗಿದೆ..
                                                                      (ಮೂಲಪ್ರತಿ)


Friday, 21 August 2015

ಮೊದಲ ಪ್ರೀತಿ ಎರಡನೇ ಪತ್ರ


ಹಾಯ್ ಮುದ್ದು,
                  ಬರೆಯೋಕೆ ಹೇಗೆ ಶುರು ಮಾಡೋದು ಅಂತಾನೇ ಗೊತ್ತಾಗ್ತಿಲ್ಲ, ಖಾಲಿ ಹಾಳೆಯನ್ನ ನೋಡಿದ್ರೆ ಮನಸ್ಸಿನಲ್ಲಿರೋ ಪ್ರತಿಯೊಂದು ಅಕ್ಷರವನ್ನೂ ಕೆತ್ತಿ ಬಿಡಬೇಕು ಅನ್ಸುತ್ತೆ. ಅಷ್ಟೊಂದೆಲ್ಲ ಬರೆದು ಬಿಟ್ರೆ ಅನ್ಯಾಯವಾಗಿ ಬರಹಗಾರನಾಗಿ ಬಿಡ್ತೀನಿ, ಜೊತೆಗೆ ಉದ್ದುದ್ದ ಕಥೆ ಬರೆದ್ರೆ ನೀ ಓದೋದಿಲ್ಲ ಅಂತಾನೂ ಗೊತ್ತು ಆದ್ರಿಂದ ಸ್ವೀಟ್ ಅಂಡ್ ಶಾರ್ಟ್ ಆಗಿ ಬರೆದು ಬೇಗ ಪೂರ್ಣ ವಿರಾಮ ಇಟ್ಟು ಬಿಡ್ತೀನಿ, ಜಾಸ್ತಿ ಕೊರೆಯದೆ ವಿಷಯಕ್ಕೆ ಬರ್ತೀನಿ ನಿನ್ನೆರಡು ಪುಟ್ಟ ಕಣ್ಗಳನ್ನು ಸರಿಯಾಗಿ ಉಜ್ಜಿಕೊಂಡು ಓದೋಕೆ ಅಣಿಯಾಗು.
                  ಇವತ್ತಿಗೆ ನನ್ನ ನಿನ್ನ ಪರಿಚಯವಾಗಿ ಆರು ತಿಂಗಳು ಕಳೆದವು,ಇಡೀ ದೇಶ ಅರವತ್ತೆಂಟನೇ ಸ್ವಾತಂತ್ರ್ಯೋತ್ಸವ ಆಚರಿಸೋಕೆ ಸಿದ್ಧ ಆಗ್ತಿದ್ರೆ, ನನ್ನ ಮನಸ್ಸು ಮಾತ್ರ ನಿನ್ನ ಮುಂಗುರುಳಿಗೆ ಸಿಲುಕಿ, ನಿನ್ನ ಕುಡಿನೋಟಕ್ಕೆ ಶರಣಾಗಿ, ನಿನ್ನೆದೆಯ ಗುಲಾಮನಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು. ನಮ್ಮಿಬ್ಬರ ಭೇಟಿ ತೀರಾ ಆಕಸ್ಮಿಕ, ಆ ಆಕಸ್ಮಿಕ ಘಟನೆಯೇ ನನ್ನ ಜೀವನಕ್ಕೆ ಒಂದು ಹೊಸ ಜೀವವನ್ನು ಪರಿಚಯಿಸಿಕೊಟ್ಟಿದ್ದು, ಯಾರೊಂದಿಗೂ ಅಷ್ಟು ಬೇಗ ಬೆರೆಯದ ನನ್ನನ್ನು ನೀನು ಅಯಸ್ಕಾಂತದಂತೆ ಸೆಳೆದು ಬಿಟ್ಟಿದ್ದೆ, ಅವಶ್ಯಕತೆಗಿಂತ ಜಾಸ್ತಿ ಹತ್ತಿರ ಆಗಿ ಬಿಟ್ಟಿದ್ದೆ, ಈ ಆರು ತಿಂಗಳಲ್ಲಿ ನಾವಿಬ್ಬರೂ ನಮಗೇ ಗೊತ್ತಿಲ್ಲದಂತೆ ಸ್ನೇಹ, ಕೋಪ, ತಮಾಷೆ, ಹರಟೆ, ತಲೆಹರಟೆ, ಕೋಳಿಜಗಳ ಅನ್ಕೊಂಡು ನಗುವೆಂಬ ಮಂತ್ರ ಪಠಿಸುತ್ತಾ ಆರು ಹೆಜ್ಜೆ ಇಟ್ಟಾಗಿದೆ, ಸಪ್ತಪದಿಗೆ ಬಾಕಿ ಇರೋದು ಇನ್ನು ಒಂದೇ ಒಂದು ಹೆಜ್ಜೆ ಆದ್ರೆ ಆ ಪ್ರೀತಿ ಅನ್ನೋ ಏಳನೇ ಹೆಜ್ಜೆ ಇಡೋಕೆ ಬೇಕಾದ "ಐ ಲವ್ ಯೂ" ಅನ್ನೋ ಮೂರು ಪದದ ಮಂತ್ರ ಮಾತ್ರ ಗಂಟಲಿನಿಂದ ಹೊರಗೆ ಬರ್ತಾನೇ ಇಲ್ಲ, ನೀನು ಏನೆಂದುಕೊಳ್ತೀಯೋ ಏನೋ ಎಂಬ ಭಯದಿಂದ ಕಂಠದಲ್ಲೇ ಸಿಕ್ಕಿ ಹಾಕಿಕೊಂಡು ಬಿಟ್ಟಿದೆ.ಅದು ಒದ್ದಾಡಿ ಸಾಯೋ ಮೊದಲೇ ಮಂತ್ರ ಪಠಿಸೋಕೆ ನಿನ್ನಿಂದ ಅಭ್ಯಂತರ ಇಲ್ಲ ಅಂತ ಒಂದು ಮುನ್ಸೂಚನೆ ಕೊಡು ಮಾರಾಯ್ತಿ.
      ಹೇಗೂ ಫೆಬ್ರವರಿ ೧೪ ಹತ್ತಿರ ಬರ್ತಾ ಇದೆ, ಅವತ್ತು ಒಳ್ಳೇ ದಿನ ಗ್ರಹಗತಿ ಎಲ್ಲ ಚೆನ್ನಾಗಿದೆ ಅಂತ ಭಟ್ರು ಕೂಡ ಮೊನ್ನೆ ಹೇಳ್ತಿದ್ರು... ಅವತ್ತಿಗೇ ಮುಹೂರ್ತ ಫಿಕ್ಸ್ ಮಾಡಿ ಬಿಡೋಣ ಏನಂತೀಯಾ?? ಹೂಂ ಅನ್ನೋದಾದ್ರೆ ಮಿಸ್ ಕಾಲ್ ಕೊಟ್ಟು ಮುನ್ಸೂಚನೆ ನೀಡಿ ಬಿಡು.. ಸಪ್ತಪದಿ ತುಳಿಯೋ ಹೊತ್ತಿಗೆ I LOVE YOU ಅನ್ನೋ ಆಂಗ್ಲ ಅಷ್ಟಾಕ್ಷರಿಯನ್ನು ನನ್ನ ಜಗತ್ತಿಗೆ ಕೇಳೋ ಹಾಗೆ ಅರ್ಥಾತ್  ನಿನಗೆ ಕೇಳುವಂತೆ ಗಟ್ಟಿಯಾಗಿ ಉಸುರಿಬಿಡ್ತೀನಿ..!!
      ಅಂದ ಹಾಗೆ ಇದು ನನ್ನ ಎರಡನೇ ಪ್ರೇಮ ಪತ್ರ, ಮೊದಲ ಪತ್ರಕ್ಕೆ ಗಾಯತ್ರಿ ದೇವಿಯ ಅನುಗ್ರಹ ಸಿಗಲಿ ಅಂತ ಸಂಧ್ಯಾವಂದನೆ ಪುಸ್ತಕದ ಮಧ್ಯೆ ಇಟ್ಟಿದ್ದೀನಿ.. ಅದನ್ನು ನೀನೇ ಮೊದಲು ಓದಬೇಕು ಅನ್ನೋದು ನನ್ನ ಬಯಕೆ ನೀ ಹೂಂ ಅಂದ್ರೆ ನನ್ನೆದೆಗೆ ನಿನ್ನನ್ನು ಆಮಂತ್ರಿಸುವ ಕರೆಯೋಲೆಯನ್ನಾಗಿ ನಿನ್ನ ಕೈಲಿ ಇಡ್ತೀನಿ.. ಅಭ್ಯಂತರವೇನೂ ಇಲ್ಲ ತಾನೇ..!!                                                                                                                                                                                                          
                                                                                                          ಇಂತಿ ಪೂರ್ತಾ ನಿನ್ನವ
                                                                                                               ಸ್ಕಂದ ಕೆ.ಎನ್.

                 ಈ ಪ್ರೇಮಪತ್ರ ಕನ್ನಡಪ್ರಭದ ಬೈಟು ಕಾಫಿ ಪುರವಣಿಯ ಮಕರಂದ ವಿಭಾಗದಲ್ಲಿ ಪ್ರಕಟವಾಗಿದೆ.
                                                                    (ಮೂಲಪ್ರತಿ)

"ಕಂದ" ಪದ್ಯ

ಎಷ್ಟು ಚಂದ ನಮ್ಮ ಕಂದ ಬಾಯಿ ತೆರೆದು ನಕ್ಕರೆ ಪುಟ್ಟ ಹಲ್ಲು, ಹಾಲುಗಲ್ಲ ನಗುವೆ ಸಿಹಿಯ ಸಕ್ಕರೆ ನಮ್ಮ ಕಂದ ಇನ್ನೂ ಚಂದ ಸಿಟ್ಟು ಮಾಡಿಕೊಂಡರೆ ಕೆಂಪು ಮೂಗು,...